ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
2023 ಮರೆಯುವ ಮುನ್ನ: ಗಲಭೆ, ಗದ್ದಲದ ನಡುವೆ ಬಾಹ್ಯಾಕಾಶದಲ್ಲಿ ವಿಕ್ರಮ
2023 ಮರೆಯುವ ಮುನ್ನ: ಗಲಭೆ, ಗದ್ದಲದ ನಡುವೆ ಬಾಹ್ಯಾಕಾಶದಲ್ಲಿ ವಿಕ್ರಮ
Published 25 ಡಿಸೆಂಬರ್ 2023, 19:32 IST
Last Updated 25 ಡಿಸೆಂಬರ್ 2023, 19:32 IST
ಅಕ್ಷರ ಗಾತ್ರ
ಮಣಿಪುರದಲ್ಲಿ ಅಮಾನವೀಯವಾದ ಗಲಭೆ, ಒಕ್ಕೂಟ ವ್ಯವಸ್ಥೆಗೆ ಸಂಬಂಧಿಸಿ ಕೇಂದ್ರ ಮತ್ತು ಬಿಜೆಪಿಯೇತರ ಸರ್ಕಾರ ಇರುವ ರಾಜ್ಯಗಳ ನಡುವೆ ತಿಕ್ಕಾಟ, ಬಿಜೆಪಿ ವಿರುದ್ಧ ವಿರೋಧ ಪಕ್ಷಗಳ ‘ಇಂಡಿಯಾ’ ಮೈತ್ರಿಕೂಟ ರಚನೆ, ಚಂದ್ರನಲ್ಲಿ ಇಳಿದ ಇಸ್ರೊ ನೌಕೆ, ಸೂರ್ಯನ ಅಧ್ಯಯನಕ್ಕೆ ‘ಆದಿತ್ಯ’ ನೌಕೆ ಉಡಾವಣೆಯಂತಹ ಹತ್ತಾರು ಬೆಳವಣಿಗೆಗಳನ್ನು 2023 ಹಾದು ಹೋಗಿದೆ..

ಸಂಘರ್ಷ

ಮೇ 3ರಲ್ಲಿ ಮಣಿಪುರದಲ್ಲಿ ಆರಂಭವಾದ ಕುಕಿ ಬುಡಕಟ್ಟು ಸಮುದಾಯ ಹಾಗೂ ಮೈತೇಯಿ ಸಮುದಾಯಗಳ ಮಧ್ಯದ ಜನಾಂಗೀಯ ಸಂಘರ್ಷವು 2023ರಲ್ಲಿ ಭಾರತದ ಪ್ರಮುಖ ಘಟನಾವಳಿಗಳಲ್ಲೊಂದು. ಇಲ್ಲಿಯವರೆಗೂ 175ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ನೆಲೆ ಕಳೆದುಕೊಂಡ ಜನರು ಇಂದಿಗೂ ನಿರಾಶ್ರಿತರ ಶಿಬಿರಗಳಲ್ಲಿಯೇ ಇದ್ದಾರೆ. ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ನಡೆಸಿದ ವಿಡಿಯೊವು ದೇಶದಾದ್ಯಂತ ಜುಲೈ ಹೊತ್ತಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತು. ಆದರೆ, ಘಟನೆ ನಡೆದ ಕೆಲವೇ ದಿನಗಳಲ್ಲಿ ಮಹಿಳಾ ಆಯೋಗಕ್ಕೆ ಈ ಬಗ್ಗೆ ದೂರು ನೀಡಿದ್ದರೂ ಆಯೋಗ ಯಾವ ಕ್ರಮವನ್ನು ತೆಗೆದುಕೊಳ್ಳದ ಕುರಿತು ದೊಡ್ಡ ಮಟ್ಟದ ಆಕ್ರೋಶ ವ್ಯಕ್ತವಾಯಿತು. ನಂತರ, ಮೈತೇಯಿ ಸಮುದಾಯಕ್ಕೆ ಸೇರಿದ ಮಹಿಳೆಯೊಬ್ಬರು ತಮ್ಮ ಮೇಲೆ ಕುಕಿ ಸಮುದಾಯದ ಪುರುಷರು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಿದ್ದರು. ಕೇಂದ್ರ ಸರ್ಕಾರದ ಈ ಬಗ್ಗೆ ನಿಷ್ಕ್ರಿಯವಾಗಿದೆ ಎಂಬ ಆಕ್ರೋಶ ದೇಶದಾದ್ಯಂತ ಮೊರೆಯಿತು. ಮಣಿ‍ಪುರದಲ್ಲಿ ಇಂದಿಗೂ ಸಂಘರ್ಷ ನಡೆಯುತ್ತಲೇ ಇದೆ.

ಜುಲೈ 31ರಂದು ಹರಿಯಾಣದ ನೂಹ್‌ ಜಿಲ್ಲೆಯಲ್ಲಿ ಕೋಮು ಸಂಘರ್ಷ ಆರಂಭವಾಯಿತು. 10 ದಿನ ನೂಹ್‌ ಹಾಗೂ ಗುರುಗ್ರಾಮ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಸಂಘರ್ಷದಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ವಿಡಿಯೊಗಳೇ ಸಂಘರ್ಷದ ಮೂಲಬಿಂದು. ವಿಶ್ವ ಹಿಂದೂ ಪರಿಷತ್‌ ಹಾಗೂ ಬಜರಂಗ ದಳವು ಆಯೋಜಿಸಿದ್ದ, ಬ್ರಿಜ್‌ ಮಂಡಲ ಜಲಾಭಿಷೇಕ ಯಾತ್ರೆಗೆ ಮುಸ್ಲಿಂ ಸಮುದಾಯದ ಗುಂಪೊಂದು ಕಲ್ಲು ಎಸೆಯಿತು. ಇದರಿಂದ ಸಂಘರ್ಷ ಆರಂಭಗೊಂಡಿತು. ನೂರಾರು ಮುಸ್ಲಿಂ ಮನೆಗಳನ್ನು ಬುಲ್ಡೋಜರ್‌ನಿಂದ ನೆಲಸಮ ಮಾಡಲಾಯಿತು. ಮಸೀದಿಗಳಿಗೂ ಬೆಂಕಿ ಹಚ್ಚಲಾಯಿತು.

ಮಾರ್ಚ್‌ ಕೊನೇ ವಾರ ಹಾಗೂ ಏಪ್ರಿಲ್‌ ಮೊದಲ ವಾರಗಳಲ್ಲಿ ರಾಮ ನವಮಿ ಮೆರವಣಿಗೆ ವಿಷಯವಾಗಿ ದೇಶದಾದ್ಯಂತ ಕೋಮು ಗಲಭೆ ಏರ್ಪಟ್ಟಿತ್ತು. ಪಶ್ಚಿಮ ಬಂಗಾಳದ ಹೌರಾ ಹಾಗೂ ಉತ್ತರ್‌ ದಿನಾಜ್‌ಪುರ, ಬಿಹಾರದ ನಳಂದಾ ಹಾಗೂ ಸಾಸಾರಾಂ, ತೆಲಂಗಾಣದ ಹೈದರಾಬಾದ್‌, ಮಹಾರಾಷ್ಟ್ರದ ಔರಂಗಾಬಾದ್‌, ಗುಜರಾತ್‌ನ ವಡೋದರ, ಜಾರ್ಖಂಡ್‌ನ ಜಮ್‌ಶಡ್‌ಪುರದಲ್ಲಿ ಗಲಭೆಗಳು ನಡೆದಿವೆ.

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ-ಈಜಿಪ್ಟ್‌ ಪ್ರವಾಸ ಮುಗಿಸಿ ಭಾರತಕ್ಕೆ ಜೂನ್‌ 26ರಂದು ವಾಪಸಾದರು. ವಿಮಾನ ಇಳಿಯುತ್ತಿದ್ದಂತೆಯೇ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಸಂಬೋಧಿಸಿ, ‘ದೇಶದಲ್ಲಿ ಏನು ನಡೆಯುತ್ತಿದೆ?’ ಎಂದು ಕೇಳಿದ್ದರು. ಇದಕ್ಕೆ ಜೆ.ಪಿ. ನಡ್ಡಾ ಅವರು ‘ದೇಶವು ಸಂತೋಷದಲ್ಲಿದೆ’ ಎಂದು ಉತ್ತರಿಸಿದ್ದರು. ಈ ಕುರಿತು ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು.

‘ಇಂಡಿಯಾ’ ಮೈತ್ರಿಕೂಟ

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಅಧಿಕಾರದಿಂದ ಇಳಿಸಲು, ವಿರೋಧ ಪಕ್ಷಗಳನ್ನು ಒಗ್ಗೂಡಿಸಿ ತೃತೀಯ ರಂಗವೊಂದನ್ನು ರೂಪಿಸಲು ಹಲವು ಪ್ರಯತ್ನಗಳು ನಡೆದವು. ಆದರೆ, ಅವು ಫಲ ನೀಡಲಿಲ್ಲ. ಈ ಬಾರಿ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಈ ಪ್ರಯತ್ನವನ್ನು ಮುನ್ನಡೆಸಿದರು. ಹಲವು ಸುತ್ತಿನ ಭೇಟಿ, ಚರ್ಚೆಯ ಬಳಿಕ ಜುಲೈನಲ್ಲಿ ವಿರೋಧ ಪಕ್ಷಗಳ ಒಕ್ಕೂಟವು ವ್ಯವಸ್ಥಿತವಾದ ಸ್ವರೂಪ ಪಡೆಯಿತು. ‘ದಿ ಇಂಡಿಯನ್‌ ನ್ಯಾಷನಲ್‌ ಡೆವಲಪ್‌ಮೆಂಟ್‌ ಇನ್‌ಕ್ಲೂಸಿವ್‌ ಅಲಯನ್ಸ್‌ (ಇಂಡಿಯಾ)’ ಹೆಸರಿನಲ್ಲಿ ಸುಮಾರು 28 ವಿರೋಧ ಪಕ್ಷಗಳು ಕಾಂಗ್ರೆಸ್‌ ನೇತೃತ್ವದಲ್ಲಿ ಒಗ್ಗೂಡಿದವು.

ಮೈತ್ರಿಕೂಟದ ಹೆಸರು ‘ಇಂಡಿಯಾ’ ಎಂದು ಇಟ್ಟಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಆಕ್ರೋಶ ವ್ಯಕ್ತಪಡಿಸಿದರು. ಈ ಬಳಿಕ ದೇಶದ ಹೆಸರು ‘ಭಾರತ’ವೊ ಅಥವಾ ‘ಇಂಡಿಯಾ’ವೊ ಎನ್ನುವ ಚರ್ಚೆವೊಂದು ದೊಡ್ಡ ಮಟ್ಟದಲ್ಲಿ ನಡೆಯಿತು. ದೆಹಲಿಯಲ್ಲಿ ಜಿ–20 ಶೃಂಗಸಭೆ ನಡೆಯಿತು. ಇದರ ಔತಣಕೂಟದ ಆಮಂತ್ರಣ ಪತ್ರಿಕೆಯಲ್ಲಿ ‘ಪ್ರಸಿಡೆಂಡ್‌ ಆಫ್‌ ಇಂಡಿಯಾ’ ಬದಲಾಗಿ ‘ಪ್ರೆಸಿಡೆಂಟ್‌ ಆಫ್‌ ಭಾರತ್‌’ ಎಂದು ಬರೆದಿದ್ದು ಚರ್ಚೆಗೆ ಕಾರಣವಾಯಿತು.

ಅ.2ರಂದು ಬಿಹಾರ ಸರ್ಕಾರವು ಜಾತಿ ಗಣತಿ ವರದಿಯನ್ನು ಬಿಡುಗಡೆಗೊಳಿತು. ಈ ಬಳಿಕ ದೇಶದ ರಾಜಕೀಯವನ್ನು ಜಾತಿಗಣತಿ ವರದಿ ಪ್ರವೇಶಿಸಿತು. ಜಾತಿಗಣತಿಯನ್ನು 2024ರ ಲೋಕಸಭೆ ಚುನಾವಣೆಯ ವಿಷಯವನ್ನಾಗಿಸಲೂ ‘ಇಂಡಿಯಾ’ ಮೈತ್ರಿಕೂಟ ಬಯಸಿದೆ. ಆದರೆ, ಜಾತಿಗಣತಿಗೆ ಬಿಜೆಪಿ ವಿರೋಧ ವ್ಯಕ್ತಪಡಿಸಿದೆ.

ರಾಜ್ಯಪಾಲ–ರಾಜ್ಯ ಸರ್ಕಾರಗಳ ನಡುವೆ ತಿಕ್ಕಾಟ

ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ರಾಜ್ಯಪಾಲರು ಹಾಗೂ ರಾಜ್ಯ ಸರ್ಕಾರಗಳ ಮಧ್ಯೆ ತಿಕ್ಕಾಟ ನಡೆದುಕೊಂಡೇ ಬರುತ್ತಿದೆ. ತಮಿಳುನಾಡಿನಲ್ಲಿ ರಾಜ್ಯಪಾಲ ಎನ್‌.ರವಿ ಹಾಗೂ ಡಿಎಂಕೆ ಮಧ್ಯದ ತಿಕ್ಕಾಟ 2023ರಲ್ಲಿ ತಾರಕಕ್ಕೇರಿತು. ಜೊತೆಗೆ, ಕೇರಳ, ಜಾರ್ಖಂಡ್‌, ಪಶ್ಚಿಮ ಬಂಗಾಳ, ತೆಲಂಗಾಣ, ಪಂಜಾಬ್‌ನಲ್ಲಿಯೂ ಜಗಳ ನಡೆಯುತ್ತಿದೆ. ಈ ಎಲ್ಲ ಕಡೆಗಳಲ್ಲಿಯೂ ವಿಧಾನಸಭೆಗಳಲ್ಲಿ ಅನುಮೋದನೆ ಪಡೆದ ಮಸೂದೆಗಳನ್ನು ರಾಜ್ಯಪಾಲರು ತಡೆಹಿಡಿದಿದ್ದಾರೆ. ಈ ವಿಚಾರ ಸುಪ್ರೀಂ ಕೋರ್ಟ್‌ನ ಮೆಟ್ಟಿಲೂ ಏರಿದೆ.

ಆಧಾರ: ಪಿಟಿಐ, ಇಸ್ರೊ ವೆಬ್‌ಸೈಟ್‌, ಸಂಸದೀಯ ವ್ಯವಹಾರಗಳ ಸಚಿವಾಲಯ ವೆಬ್‌ಸೈಟ್‌

ಅದಾನಿ ಕುರಿತು ಜಂಟಿ ಸಂಸದೀಯ ಸಮಿತಿ ರಚಿಸುವಂತೆ ಕೋರಿ ಕಾಂಗ್ರೆಸ್‌ ಸೇರಿ ಹಲವು ವಿರೋಧ ಪಕ್ಷಗಳು ಮಾರ್ಚ್‌ ನಡೆಸಿದ್ದ ಪ್ರತಿಭಟನಾ ರ್‍ಯಾಲಿ  –ಪಿಟಿಐ ಚಿತ್ರ
ಅದಾನಿ ಕುರಿತು ಜಂಟಿ ಸಂಸದೀಯ ಸಮಿತಿ ರಚಿಸುವಂತೆ ಕೋರಿ ಕಾಂಗ್ರೆಸ್‌ ಸೇರಿ ಹಲವು ವಿರೋಧ ಪಕ್ಷಗಳು ಮಾರ್ಚ್‌ ನಡೆಸಿದ್ದ ಪ್ರತಿಭಟನಾ ರ್‍ಯಾಲಿ  –ಪಿಟಿಐ ಚಿತ್ರ
ನೂತನ ಸಂಸತ್‌ ಭವನ ಕಟ್ಟಡ –ಪಿಟಿಐ ಚಿತ್ರ
ನೂತನ ಸಂಸತ್‌ ಭವನ ಕಟ್ಟಡ –ಪಿಟಿಐ ಚಿತ್ರ
ಮಧ್ಯಪ್ರದೇಶದಲ್ಲಿ ನಡೆದ ವಿಧಾನಸಭಾ ಚುನಾವಣೆಯ ಫಲಿತಾಂಶವು ಡಿಸೆಂಬರ್‌ನಲ್ಲಿ ಹೊರಬಿದ್ದಿತ್ತು. ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದಿತ್ತು. ಫಲಿತಾಂಶದ ದಿನದಂದು ಬಿಜೆಪಿ ಕಾರ್ಯಕರ್ತರೊಬ್ಬರು ಶಂಖ ಊದಿ ಸಂಭ್ರಮಿಸಿದರು –ಪಿಟಿಐ ಚಿತ್ರ
ಮಧ್ಯಪ್ರದೇಶದಲ್ಲಿ ನಡೆದ ವಿಧಾನಸಭಾ ಚುನಾವಣೆಯ ಫಲಿತಾಂಶವು ಡಿಸೆಂಬರ್‌ನಲ್ಲಿ ಹೊರಬಿದ್ದಿತ್ತು. ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದಿತ್ತು. ಫಲಿತಾಂಶದ ದಿನದಂದು ಬಿಜೆಪಿ ಕಾರ್ಯಕರ್ತರೊಬ್ಬರು ಶಂಖ ಊದಿ ಸಂಭ್ರಮಿಸಿದರು –ಪಿಟಿಐ ಚಿತ್ರ
ಮಣಿಪುರ ಇಂಫಾಲದಲ್ಲಿ ಜುಲೈನಲ್ಲಿ ನಡೆದಿದ್ದ ಹಿಂಸಾಚಾರದಲ್ಲಿ ಟೈರ್‌ವೊಂದನ್ನು ಸುಟ್ಟು ಹಾಕಲಾಗಿತ್ತು –ಪಿಟಿಐ ಚಿತ್ರ
ಮಣಿಪುರ ಇಂಫಾಲದಲ್ಲಿ ಜುಲೈನಲ್ಲಿ ನಡೆದಿದ್ದ ಹಿಂಸಾಚಾರದಲ್ಲಿ ಟೈರ್‌ವೊಂದನ್ನು ಸುಟ್ಟು ಹಾಕಲಾಗಿತ್ತು –ಪಿಟಿಐ ಚಿತ್ರ

‘ಭಾರತ್‌ ಜೋಡೊ ಯಾತ್ರೆ’ಯಿಂದ ಜಿ20 ಶೃಂಗ ಸಭೆವರೆಗೆ...

  • 2022ರ ಸೆಪ್ಟೆಂಬರ್‌ನಲ್ಲಿ ಆರಂಭವಾಗಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನೇತೃತ್ವದ ‘ಭಾರತ ಜೋಡೊ ಯಾತ್ರೆ’ಯು 2023ರ ಜನವರಿ 30ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಮುಕ್ತಾಯಗೊಂಡಿತು

  • ದೆಹಲಿ ಅಬಕಾರಿ ನೀತಿ ಸಂಬಂಧ ಫೆ. 26ರಂದು ಆಮ್‌ ಆದ್ಮಿ ಪಕ್ಷದ ನಾಯಕ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಷ್‌ ಸಿಸೋಡಿಯ ಅವರನ್ನು ಜಾರಿ ನಿರ್ದೇಶನಾಲಯವು (ಇ.ಡಿ) ಬಂಧಿಸಿತು. ಇದೇ ಪ್ರಕರಣದಲ್ಲಿ ಇದೇ ಪಕ್ಷದ ಸಂಜಯ್‌ ಸಿಂಗ್‌ ಅವರನ್ನೂ ಅಕ್ಟೋಬರ್‌ನಲ್ಲಿ ಬಂಧಿಸಲಾಗಿದೆ

  • ಫೆಬ್ರುವರಿಯಲ್ಲಿ ಬಿಡುಗಡೆ ಮಾಡಿದ್ದ ಗುಜರಾತ್‌ ಗಲಭೆ ಕುರಿತ ಬಿಬಿಸಿಯ ‘ಇಂಡಿಯಾ: ದಿ ಮೋದಿ ಕ್ವೆಶ್ಚನ್‌’ ಸಾಕ್ಷ್ಯಚಿತ್ರವು ದೇಶದಾದ್ಯಂತ ದೊಡ್ಡ ಮಟ್ಟದ ಚರ್ಚೆ ಆಕ್ರೋಶ ಹುಟ್ಟು ಹಾಕಿತ್ತು. ಈ ಸಾಕ್ಷ್ಯಚಿತ್ರ ವೀಕ್ಷಣೆಯನ್ನು ಭಾರತ ಸರ್ಕಾರವು ನಿಷೇಧಿಸಿತ್ತು. ಜೊತೆಗೆ ಕೆಲವು ದಿನಗಳ ಬಳಿಕ ಭಾರತದಲ್ಲಿರುವ ಬಿಬಿಸಿ ಕಚೇರಿಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನೋಟಿಸ್‌ ಜಾರಿ ಮಾಡಿದ್ದರು. ಈ ಬಗ್ಗೆ ಈಗಲೂ ತನಿಖೆ ನಡೆಯುತ್ತಿದೆ

  • ಮೋದಿ ಉಪನಾಮಕ್ಕೆ ಸಂಬಂಧಿಸಿದ ಹೇಳಿಕೆಯ ಪ್ರಕರಣದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಿಗೆ ಸೂರತ್‌ ನ್ಯಾಯಾಲಯವು ಮಾರ್ಚ್‌ನಲ್ಲಿ 2 ವರ್ಷಗಳ ಗರಿಷ್ಠ ಶಿಕ್ಷೆ ವಿಧಿಸಿತು. ತೀರ್ಪು ಹೊರಬಂದ ಮರುದಿನವೇ ರಾಹುಲ್ ಅವರ ಲೋಕಸಭಾ ಸದಸ್ಯತ್ವವನ್ನು ಸ್ಪೀಕರ್‌ ಓಂ ಬಿರ್ಲಾ ಅವರು ಅಮಾನತುಗೊಳಿಸಿದ್ದರು. ನಂತರ ರಾಹುಲ್‌ ಅವರು ಗುಜರಾತ್‌ ಹೈಕೋರ್ಟ್‌ ಮೆಟ್ಟಿಲೇರಿದರು. ಜುಲೈನಲ್ಲಿ ತೀರ್ಪು ನೀಡಿದ ಕೋರ್ಟ್‌ ಸೂರತ್‌ ನ್ಯಾಯಾಲಯ ನೀಡಿದ ತೀರ್ಪಿಗೆ ತಡೆ ನೀಡಲು ನಿರಾಕರಿಸಿತು. ನಂತರ ಆಗಸ್ಟ್‌ನಲ್ಲಿ ಸುಪ್ರೀಂ ಕೋರ್ಟ್‌ ತೀರ್ಪಿಗೆ ತಡೆ ನೀಡಿತು. ಈ ಬಳಿಕ ರಾಹುಲ್‌ ಅವರ ಲೋಕಸಭಾ ಸದಸ್ಯತ್ವವನ್ನು ಸ್ಪೀಕರ್‌ ಅವರು ಮರುಸ್ಥಾಪಿಸಿದರು

  • ಸೆಪ್ಟೆಂಬರ್‌ 9 ಹಾಗೂ 10ರಂದು ದೆಹಲಿಯಲ್ಲಿ ಭಾರತದ ಅಧ್ಯಕ್ಷತೆಯಲ್ಲಿ ಜಿ.20 ಶೃಂಗಸಭೆ ಯಶಸ್ವಿಯಾಗಿ ನಡೆಯಿತು

  • ಚೀನಾ ಪರ ಪ್ರಚಾರ ನಡೆಸುತ್ತಿದೆ ಹಾಗೂ ಇದಕ್ಕಾಗಿ ಹಣ ಅಕ್ರಮ ವರ್ಗಾವಣೆ ನಡೆದಿದೆ ಎಂದು ಆರೋಪಿಸಿ ಜಾರಿ ನಿರ್ದೇಶನಾಲಯವು ನ್ಯೂಸ್‌ಕ್ಲಿಕ್‌ ಸುದ್ದಿ ಸಂಸ್ಥೆಯ ವಿರುದ್ಧ ಆಗಸ್ಟ್‌ನಲ್ಲಿ ತನಿಖೆ ಆರಂಭಿಸಿದೆ. ಸಂಸ್ಥೆಯ ಸ್ಥಾಪಕ ಪ್ರಬೀರ್‌ ಪುರಕಾಯಸ್ಥ ಅವರನ್ನು ಬಂಧಿಸಲಾಗಿದೆ

  • ಚಂದ್ರಯಾನದ ಯಶಸ್ಸು ಜುಲೈ 14 ಚಂದ್ರಯಾನ–3 ಯೋಜನೆಯ ಮೊದಲ ಹಂತ ಸಂಪನ್ನವಾದ ದಿನ. ಶ್ರೀಹರಿಕೋಟಾದಿಂದ ಚಂದ್ರನಲ್ಲಿಗೆ ರಾಕೆಟ್‌ ಅನ್ನು ಉಡಾವಣೆ ಮಾಡಲಾಯಿತು. ಆಗಸ್ಟ್‌ 23 ಭಾರತದ ಬಾಹ್ಯಾಕಾಶ ತಂತ್ರಜ್ಞಾನದ ಕ್ಷೇತ್ರದಲ್ಲಿನ ಐತಿಹಾಸಿಕ ದಿನ. ಅಂದು ಇಸ್ರೊದ ಸಾಧನೆಯು ಜಗತ್ತಿನಾದ್ಯಂತ ಮಾರ್ದನಿಸಿತು. ಅಂದು ಚಂದ್ರನ ದಕ್ಷಿಣ ಧ್ರುವದಲ್ಲಿ ‘ವಿಕ್ರಮ್‌’ ಲ್ಯಾಂಡರ್‌ ಅಡಿಇಟ್ಟಿತ್ತು. ಹೀಗೆ ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆ ಇಳಿಸಿದ ನಾಲ್ಕನೇ ದೇಶವಾಗಿ ಭಾರತ ಸಾಧನೆಗೈಯಿತು. ಚಂದ್ರನ ತಾಪಮಾನ ಕುರಿತು ಕೆಲವು ಮಾಹಿತಿಗಳನ್ನು ಆಗಸ್ಟ್‌ 27ರಂದು ರೋವರ್‌ ಕಳುಹಿಸಿಕೊಟ್ಟಿತು. ನಂತರ ಸೆಪ್ಟೆಂಬರ್‌ 4ರ ಹೊತ್ತಿಗೆ ರೋವರ್‌ನೊಂದಿಗೆ ಇಸ್ರೊ ಸಂಪರ್ಕ ಕಡಿತಗೊಂಡಿತು. ರೋವರ್‌ನೊಂದಿಗೆ ಸಂಪರ್ಕ ಸಾಧಿಸಲು ಇಸ್ರೊ ಈಗಲೂ ಪ್ರಯತ್ನಿಸುತ್ತಿದೆ. ಸೆಪ್ಟೆಂಬರ್‌ 2ರಂದು ಸೂರ್ಯನ ಅಧ್ಯಯನಕ್ಕಾಗಿ ಆದಿತ್ಯ ಎಲ್‌–1 ಅಂತರಿಕ್ಷ ವೀಕ್ಷಣಾಲಯವನ್ನು ಶ್ರೀಹರಿಕೋಟಾದಿಂದ ಪಿಎಸ್‌ಎಲ್‌ವಿ–ಸಿ 57 ರಾಕೆಟ್‌ ಮೂಲಕ ಉಡಾವಣೆ ಮಾಡಲಾಯಿತು. ‘ಈ ಉಪಗ್ರಹವು ಜ.6ರಂದು ತನ್ನ ಗಮ್ಯ ಸ್ಥಾನವಾದ ಲಗ್ರಾಂಜಿಯನ್‌ ಬಿಂದು (ಎಲ್‌1) ತಲುಪಲಿದೆ’ ಎಂದು ಇಸ್ರೊ ಅಧ್ಯಕ್ಷ ಎಸ್‌.ಸೋಮನಾಥ್‌ ತಿಳಿಸಿದ್ದಾರೆ.

ಕಲಾಪ ಮತ್ತು ಪ್ರತಿಭಟನೆ

ಇಡೀ ವರ್ಷವೂ ಸಂಸತ್ತು ಒಂದಿಲ್ಲೊಂದು ಕಾರಣಗಳಿಗಾಗಿ ವಿವಾದಗಳಿಗಾಗಿ ಸುದ್ದಿಯಲ್ಲಿ ಇದ್ದೇ ಇತ್ತು. ಉದ್ಯಮಿ ಗೌತಮ್‌ ಅದಾನಿ ಅವರು ಅವ್ಯವಹಾರ ಎಸಗಿದ್ದಾರೆ ಎಂದು ಆರೋಪಿಸಿ ಹಿಂಡನ್‌ಬರ್ಗ್‌ ಬಿಡುಗಡೆ ಮಾಡಿದ್ದ ವರದಿ ಸಂಬಂಧ ಜಂಟಿ ಸಂಸದೀಯ ಸಮಿತಿ ಅಥವಾ ಸುಪ್ರೀಂ ಕೋರ್ಟ್‌ ನೇಮಿಸಿದ ಸಮಿತಿಯಿಂದ ಕಾಲಮಿತಿಯೊಳಗೆ ತನಿಖೆ ನಡೆಸಬೇಕು ಎಂದು ಫೆಬ್ರುವರಿಯಲ್ಲಿ ನಡೆದ ಅಧಿವೇಶನದಲ್ಲಿ ವಿರೋಧ ಪಕ್ಷಗಳು ಬೇಡಿಕೆ ಮುಂದಿಟಿದ್ದವು. ಆದರೆ ಕೇಂದ್ರ ಸರ್ಕಾರ ಈ ಬೇಡಿಕೆಯನ್ನು ಒಪ್ಪಿಕೊಳ್ಳಲಿಲ್ಲ. ಮಣಿಪುರದಲ್ಲಿ ಕುಕಿ ಬುಡಕಟ್ಟು ಸಮುದಾಯದ ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ನಡೆಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಬಳಿಕ ಆಗಸ್ಟ್‌ನಲ್ಲಿ ಅಧಿವೇಶನ ನಡೆಯಿತು. ಪ್ರಧಾನಿ ಮೋದಿ ಅವರು ಈ ಬಗ್ಗೆ ಸಂಸತ್ತಿನಲ್ಲಿ ಉತ್ತರಿಸಬೇಕು ಹಾಗೂ ಸಂಘರ್ಷದ ಬಗ್ಗೆ ವಿಸ್ತೃತ ಚರ್ಚೆ ನಡೆಸಬೇಕು ಎಂದು ವಿರೋಧ ಪಕ್ಷಗಳು ಪಟ್ಟು ಹಿಡಿದವು. ಇದಕ್ಕೆ ಕೇಂದ್ರ ಸರ್ಕಾರ ಸ್ಪಂದಿಸದಿದ್ದಾಗ ರಾಜ್ಯಸಭಾ ಪ್ರಕ್ರಿಯಾ ಕೈಪಿಡಿಯ 267ನೇ ನಿಯಮದಡಿ ಚರ್ಚೆಗೆ ವಿರೋಧ ಪಕ್ಷಗಳು ಅವಕಾಶ ಕೋರಿದವು. ಆದರೆ ಸರ್ಕಾರವು 176ನೇ ನಿಯಮದಡಿ ಚರ್ಚೆಗೆ ಬರುವುದಾಗಿ ಹೇಳಿತು. ಲೋಕಸಭೆಯ ‘ಸದಸ್ಯರ ಪೋರ್ಟಲ್’ಗೆ ಬಳಸುವ ಐ.ಡಿ ಹಾಗೂ ಪಾಸ್‌ವರ್ಡ್‌ ಅನ್ನು ಇತರರೊಂದಿಗೆ ಹಂಚಿಕೊಂಡಿದ್ದಾರೆ ಎಂಬ ಕಾರಣಕ್ಕೆ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರನ್ನು ಡಿಸೆಂಬರ್‌ನಲ್ಲಿ ನಡೆದ ಅಧಿವೇಶನದಲ್ಲಿ ಲೋಕಸಭೆ ಸದಸ್ಯತ್ವದಿಂದ ಉಚ್ಚಾಟನೆ ಮಾಡಲಾಯಿತು. ಪ್ರಶ್ನೆ ಕೇಳುವುದಕ್ಕಾಗಿ ಹಣ ಪಡೆದುಕೊಂಡಿದ್ದಾರೆ ಎನ್ನುವ ಆರೋಪವು ಅವರ ವಿರುದ್ಧ ಕೇಳಿಬಂದಿತ್ತು. ಈ ಸಂಬಂಧ ಕೇಂದ್ರ ಸರ್ಕಾರವು ನೀತಿ ಸಮಿತಿಯೊಂದನ್ನು ರಚಿಸಿತ್ತು. ಈ ಸಮಿತಿಯು ಮಹುವಾ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಿಫಾರಸು ಮಾಡಿತ್ತು.

ನೂತನ ಸಂಸತ್‌ ಭವನ ಮತ್ತು ವಿವಾದಗಳು

ಪ್ರಧಾನಿ ಮೋದಿ ಅವರು ನೂತನ ಸಂಸತ್‌ ಭವನವನ್ನು ಮೇ 28ರಂದು ಉದ್ಘಾಟನೆ ಮಾಡಿದರು. ಇದು ದೇಶದಲ್ಲಿ ಸಂತೋಷದ ವಾತಾವರಣದ ಜೊತೆ ಜೊತೆಗೆ ದೊಡ್ಡ ಮಟ್ಟದ ವಿವಾದಗಳ ಸುರಿಮಳೆಯನ್ನೇ ಸುರಿಸಿತ್ತು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಈ ಸಮಾರಂಭಕ್ಕೆ ಆಮಂತ್ರಣ ನೀಡಲಿಲ್ಲ. ರಾಷ್ಟ್ರಪತಿ ಅವರೇ ನೂತನ ಭವನವನ್ನು ಉದ್ಘಾಟಿಸಬೇಕು ಎಂದು ವಿರೋಧ ಪಕ್ಷಗಳು ಪಟ್ಟು ಹಿಡಿದವು. ಇದಕ್ಕೆ ಕೇಂದ್ರವು ಸಹಮತ ವ್ಯಕ್ತಪಡಿಸಲಿಲ್ಲ. ಪ್ರತಿಭಟನಾತ್ಮಕವಾಗಿ 22 ವಿರೋಧ ಪಕ್ಷಗಳು ಸಮಾರಂಭವನ್ನು ಬಹಿಷ್ಕರಿಸಿದ್ದವು. ನೂತನ ಸಂಸತ್‌ ಉದ್ಘಾಟನೆ ಬಳಿಕ ಎಲ್ಲ ಸಂಸ‌ದರಿಗೂ ನೀಡಲಾದ ಸಂವಿಧಾನದ ಪ್ರಸ್ತಾವನೆ ಪ್ರತಿಯಲ್ಲಿ ‘ಜಾತ್ಯತೀತ’ ಹಾಗೂ ‘ಸಮಾಜವಾದ’ ಪದಗಳನ್ನು ಕೈಬಿಡಲಾಗಿತ್ತು. ‘ಸೆಂಗೋಲ್‌’ ಅನ್ನು (ರಾಜದಂಡ) ತಮಿಳುನಾಡಿನ ಆಧೀನಂ ಪೀಠದ ಯತಿಗಳ ಸಮೂಹದೊಂದಿಗೆ ಪ್ರಧಾನಿ ಮೋದಿ ಅವರು ನೂತನ ಸಂಸತ್‌ ಭವನದ ಒಳಗೆ ಮೆರವಣಿಗೆ ಮೂಲಕ ಕೊಂಡೊಯ್ದರು. ‘ಸೆಂಗೋಲ್‌’ ಪ್ರತಿಷ್ಠಾಪನೆ ಕೂಡ ದೊಡ್ಡ ವಿವಾದವನ್ನೇ ಸೃಷ್ಟಿಸಿತ್ತು. ಭದ್ರತಾ ಲೋಪ ಮತ್ತು 146 ಸಂಸದರ ಅಮಾನತು: ಡಿ.13ರಂದು ಲೋಕಸಭೆಯಲ್ಲಿ ಕಲಾಪ ನಡೆಯುತ್ತಿದ್ದಾಗ ಸಾರ್ವಜನಿಕ ಗ್ಯಾಲರಿಯಲ್ಲಿದ್ದ ಇಬ್ಬರು ಯುವಕರು ಹಠಾತ್‌ ಸದನಕ್ಕೆ ಹಾರಿ ಸ್ಮೋಕ್‌ ಕ್ಯಾನ್‌ ಅನ್ನು ಸಿಡಿಸಿದ್ದು ಈ ವರ್ಷದ ಬಹುದೊಡ್ಡ ಸುದ್ದಿಗಳಲ್ಲಿ ಒಂದು. ಈ ಇಬ್ಬರಿಗೆ ‍ಪಾಸ್‌ ನೀಡುವಂತೆ ಮೈಸೂರು–ಕೊಡಗು ಸಂಸದ ಬಿಜೆಪಿಯ ಪ್ರತಾಪ್‌ ಸಿಂಹ ಶಿಫಾರಸು ಮಾಡಿದ್ದರು. ಸದನದ ಒಳಗೆ ನುಗ್ಗಿದ ಯುವಕರಲ್ಲಿ ಮೈಸೂರಿನ ಮನೋರಂಜನ್‌ ಕೂಡ ಒಬ್ಬರು. ಭದ್ರತಾ ಲೋಪದ ಕುರಿತು ಗೃಹಮಂತ್ರಿ ಅಮಿತ್‌ ಶಾ ಹಾಗೂ ಪ್ರಧಾನಿ ಮೋದಿ ಅವರು ಸಂಸತ್ತಿನಲ್ಲಿ ಪ್ರತಿಕ್ರಿಯೆ ನೀಡಬೇಕು ಎಂದು ವಿರೋಧ ಪಕ್ಷಗಳು ಪಟ್ಟು ಹಿಡಿದವು. ಕಲಾಪಕ್ಕೆ ಅಡ್ಡಿ ಪಡಿಸಿದ್ದಕ್ಕಾಗಿ ಪ್ರತಿದಿನ ಹಲವು ಸಂಸದರನ್ನು ರಾಜ್ಯಸಭೆ ಹಾಗೂ ಲೋಕಸಭೆಯಿಂದ ಅಮಾನತು ಮಾಡಲಾಯಿತು. ಒಟ್ಟು 146 ಸಂಸದರನ್ನು ಅಮಾನತು ಮಾಡಲಾಗಿದೆ.

ಅನುಮೋದನೆಗೊಂಡ ಪ್ರಮುಖ ಮಸೂದೆಗಳು

  • ಮಹಿಳಾ ಮೀಸಲಾತಿ ಮಸೂದೆ 2023

  • ಭಾರತೀಯ ನ್ಯಾಯ ಸಂಹಿತಾ ಮಸೂದೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಮಸೂದೆ ಮತ್ತು ಭಾರತೀಯ ಸಾಕ್ಷ್ಯ ಮಸೂದೆ

  • ದೂರಸಂಪರ್ಕ ಮಸೂದೆ 2023

  • ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರು (ನೇಮಕ ಸೇವಾ ಷರತ್ತುಗಳು ಮತ್ತು ಕಾರ್ಯನಿರ್ವಹಣೆ) ಮಸೂದೆ–2023

  • ಪತ್ರಿಕೆ ಮತ್ತು ನಿಯತಕಾಲಿಕಾಗಳ ನೋಂದಣಿ ಮಸೂದೆ 2023

  • ವೈಯಕ್ತಿಕ ಡಿಜಿಟಲ್‌ ದತ್ತಾಂಶ ರಕ್ಷಣಾ ಮಸೂದೆ 2023

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT