ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ಕೋವಿಶೀಲ್ಡ್‌ನ ಗಂಭೀರ ಅಡ್ಡಪರಿಣಾಮ: ಕೇಂದ್ರ ಸರ್ಕಾರಕ್ಕೆ ಮಾಹಿತಿ ಇರಲಿಲ್ಲವೇ...
ಕೋವಿಶೀಲ್ಡ್‌ನ ಗಂಭೀರ ಅಡ್ಡಪರಿಣಾಮ: ಕೇಂದ್ರ ಸರ್ಕಾರಕ್ಕೆ ಮಾಹಿತಿ ಇರಲಿಲ್ಲವೇ...
Published 1 ಮೇ 2024, 21:47 IST
Last Updated 1 ಮೇ 2024, 21:47 IST
ಅಕ್ಷರ ಗಾತ್ರ
ಯಾವುದೇ ರೋಗವನ್ನು ನಿಯಂತ್ರಿಸುವ ಸಲುವಾಗಿ ಲಸಿಕೆಗಳನ್ನು ಅಭಿವೃದ್ಧಿ‍ಪಡಿಸಿದಾಗ ಅಡ್ಡಪರಿಣಾಮಗಳು ಇದ್ದೇ ಇರುತ್ತವೆ. ಸರ್ಕಾರಗಳು ಲಸಿಕೆಯಿಂದಾಗುವ ಲಾಭ ಮತ್ತು ಅಪಾಯ ಎರಡನ್ನೂ ಪರಿಶೀಲಿಸಿದ ನಂತರ ಲಸಿಕೆ ನೀಡಬೇಕು. ಆದರೆ ಅದಕ್ಕೂ ಮುನ್ನ ಲಸಿಕೆಯಲ್ಲಿನ ಅಪಾಯಗಳ ಬಗ್ಗೆ ಜನರಿಗೆ ಮಾಹಿತಿ ನೀಡಲೇಬೇಕು ಎಂದು ಕೋವಿಶೀಲ್ಡ್‌ಗೆ ಸಂಬಂಧಿಸಿದ ಶಿಫಾರಸಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಸೂಚಿಸಿತ್ತು. ಆದರೆ ಭಾರತದಲ್ಲಿ ಕೋವಿಶೀಲ್ಡ್‌ ಬಳಕೆ ವೇಳೆ ಜನರಿಗೆ ಈ ಬಗ್ಗೆ ಮಾಹಿತಿ ನೀಡಿರಲಿಲ್ಲ...

ಕೋವಿಶೀಲ್ಡ್‌ನಿಂದ ಟಿಟಿಎಸ್ (ರಕ್ತಹೆಪ್ಪುಗಟ್ಟುವ ಮತ್ತು ಪ್ಲೇಟ್‌ಲೆಟ್‌ಗಳ ಇಳಿಕೆ ಒಟ್ಟಿಗೇ ಸಂಭವಿಸುವ ಗಂಭೀರ ಆರೋಗ್ಯದ ಸಮಸ್ಯೆ) ತಲೆದೋರುತ್ತದೆ ಎಂಬ ಮಾಹಿತಿ 2021ರ ಆರಂಭದಲ್ಲೇ ಬಹುತೇಕ ದೇಶಗಳಿಗೆ ಲಭ್ಯವಾಗಿತ್ತು. ಲಸಿಕೆ ಹಾಕಿಸಿಕೊಂಡ ಸರಾಸರಿ ಪ್ರತಿ 50,000 ಜನರಲ್ಲಿ ಒಬ್ಬರಿಗೆ ಮಾತ್ರ ಟಿಟಿಎಸ್‌ ತಲೆದೋರುವ ಸಂಭವವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಸಹ ಆಗಲೇ ಹೇಳಿತ್ತು. ಈ ಲಸಿಕೆ ಹಾಕಿಸಿಕೊಳ್ಳುವುದರಿಂದ ಇಂತಹ ಗಂಭೀರ ಮತ್ತು ಮಾರಣಾಂತಿಕ ಸಮಸ್ಯೆ ತಲೆದೋರುತ್ತದೆ ಎಂಬುದರ ಮಾಹಿತಿಯನ್ನು ಸರ್ಕಾರಗಳು ಲಸಿಕೆ ಹಾಕಿಸಿಕೊಳ್ಳುವ ಜನರಿಗೆ ನೀಡಬೇಕು ಎಂದೂ ವಿಶ್ವ ಆರೋಗ್ಯ ಸಂಸ್ಥೆ ಹೇಳಿತ್ತು. ಆದರೆ ಕೋವಿಶೀಲ್ಡ್‌ ಲಸಿಕೆ ಹಾಕಿಸಿಕೊಳ್ಳುವುದರಿಂದ ಇಂತಹ ಗಂಭೀರ ಆರೋಗ್ಯದ ಸಮಸ್ಯೆ ಉಂಟಾಗುತ್ತದೆ ಎಂಬ ಮಾಹಿತಿಯನ್ನು ಕೇಂದ್ರ ಸರ್ಕಾರವು ಬಹಿರಂಗಪಡಿಸಿಯೇ ಇರಲಿಲ್ಲ. ಬದಲಿಗೆ ಅಂತಹ ಸಮಸ್ಯೆ ಇಲ್ಲವೇ ಇಲ್ಲ ಎಂದೇ ಪ್ರತಿಪಾದಿಸಿತ್ತು.

ವಿಶ್ವ ಆರೋಗ್ಯ ಸಂಸ್ಥೆಯು, ‘ಸರ್ಕಾರಗಳು ಟಿಟಿಎಸ್‌ ಬಗ್ಗೆ ತಮ್ಮ ವೈದ್ಯಕೀಯ ಸಿಬ್ಬಂದಿಗೂ ಮಾಹಿತಿ ನೀಡಬೇಕು. ಟಿಟಿಎಸ್‌ನಂತಹ ಅಡ್ಡಪರಿಣಾಮ ತಲೆದೋರಿದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತರಬೇತಿ ನೀಡಿರಬೇಕು’ ಎಂದು ಶಿಫಾರಸು ಮಾಡಿತ್ತು.

ಆಸ್ಟ್ರಾಜೆನೆಕಾ ಅಭಿವೃದ್ಧಿಪಡಿಸಿರುವ ಈ ಲಸಿಕೆಯನ್ನು ಭಾರತದ ಸೀರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ (ಎಸ್‌ಐಐ) ಕಂಪನಿ ತಯಾರಿಸುತ್ತದೆ. 2021ರ ಫೆಬ್ರುವರಿಯಲ್ಲಿ ತಯಾರಿಸಲಾದ ಕೋವಿಶೀಲ್ಡ್‌ ಲಸಿಕೆಗಳ ಕಾರ್ಟನ್‌ಗಳ ಜತೆಗೆ ಒಂದು ಸೂಚನಾ ಪತ್ರವನ್ನೂ ನೀಡಲಾಗಿತ್ತು. ಅದರಲ್ಲಿ, ‘ಅತಿ ಅಪರೂಪದ ಸಂದರ್ಭದಲ್ಲಿ ಟಿಟಿಎಸ್‌ ತಲೆದೋರುವ ಸಾಧ್ಯತೆ ಇರುತ್ತದೆ. ರಕ್ತಸ್ರಾವದ ಅಪಾಯವೂ ಇದೆ. ಮಿದುಳು, ಅನ್ನಾಂಗ ಮತ್ತು ರಕ್ತನಾಳಗಳಲ್ಲಿ ರಕ್ತಹೆಪ್ಪುಗಟ್ಟುವ ಅಪಾಯವಿರುತ್ತದೆ. ಇವುಗಳ ಜತೆಯಲ್ಲಿ ಪ್ಲೇಟ್‌ಲೆಟ್‌ಗಳು ಅಪಾಯಕಾರಿ ಮಟ್ಟಕ್ಕೆ ಇಳಿಕೆ ಯಾಗುತ್ತವೆ. ಹಲವು ಪ್ರಕರಣಗಳಲ್ಲಿ ಸಾವೂ ಸಂಭವಿಸುತ್ತದೆ’ ಎಂದು ಉಲ್ಲೇಖಿಸಲಾಗಿತ್ತು.

ಇದಕ್ಕೆ ಸಂಬಂಧಿಸಿದ ದಾಖಲಾತಿಯನ್ನು ವಿಶ್ವ ಆರೋಗ್ಯ ಸಂಸ್ಥೆಗೆ ನೀಡಲಾಗಿತ್ತು. ಭಾರತದಲ್ಲಿ ಕೇಂದ್ರ ಸರ್ಕಾರಕ್ಕೆ ಈ ಮಾಹಿತಿ ಸಲ್ಲಿಸಲಾಗಿತ್ತೇ? ಭಾರತದಲ್ಲಿ ಪೂರೈಕೆಯಾದ ಕೋವಿಶೀಲ್ಡ್‌ ಲಸಿಕೆಗಳ ಕಾರ್ಟನ್‌ಗಳಲ್ಲಿ ಈ ಸೂಚನಾಪತ್ರವನ್ನೂ ನೀಡಲಾಗಿತ್ತೇ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಲಸಿಕೆ ಅಭಿವೃದ್ಧಿಪಡಿಸಿದ ಆಸ್ಟ್ರಾಜೆನೆಕಾ ಕಂಪನಿಯು ಕೋವಿಶೀಲ್ಡ್‌ನಿಂದ ಮಾರಣಾಂತಿಕ ಅಡ್ಡಪರಿಣಾಮ ಉಂಟಾಗುತ್ತದೆ ಎಂದು ನ್ಯಾಯಾಲಯದಲ್ಲಿ ಒಪ್ಪಿಕೊಂಡ ಬಗ್ಗೆ ಕೇಂದ್ರ ಸರ್ಕಾರವಾಗಲೀ, ಎಸ್‌ಐಐ ಆಗಲೀ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಈ ಬಗ್ಗೆ ಸರ್ಕಾರ ಮತ್ತು ಕಂಪನಿ ಪ್ರತಿಕ್ರಿಯೆ ನೀಡಬೇಕು ಎಂದು ವಿರೋಧ ಪಕ್ಷಗಳು ಮತ್ತು ಕೆಲವು ಸಾಮಾಜಿಕ ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ. ಸರ್ಕಾರಕ್ಕೆ ಈ ಬಗ್ಗೆ ಮಾಹಿತಿಯೇ ಇರಲಿಲ್ಲವೇ ಅಥವಾ ಮಾಹಿತಿ ಇದ್ದರೂ ಸರ್ಕಾರ ಅದನ್ನು ಮುಚ್ಚಿಟ್ಟಿತೇ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಕೇಂದ್ರ ಸರ್ಕಾರವು, ಕೋವಿಶೀಲ್ಡ್‌ನಿಂದ ಯಾವುದೇ ಮಾರಣಾಂತಿಕ ಅಡ್ಡಪರಿಣಾಮ ಇಲ್ಲ ಎಂದೇ ಪ್ರತಿಪಾದಿಸಿತ್ತು. ಬೇರೆ ಬೇರೆ ದೇಶಗಳಲ್ಲಿ ಕೋವಿಶೀಲ್ಡ್‌ ಪಡೆದುಕೊಂಡ ನಂತರ ಜನರು ಮೃತಪಟ್ಟ ಪ್ರಕರಣಗಳು ವರದಿಯಾದಾಗ, ಅಲ್ಲಿನ ಸರ್ಕಾರಗಳು ಲಸಿಕೆಯ ಬಳಕೆಯನ್ನು ನಿಲ್ಲಿಸಿದ್ದವು. ಆದರೆ ಭಾರತದಲ್ಲಿ ಕೇಂದ್ರ ಸರ್ಕಾರವು, ಲಸಿಕಾ ಕಾರ್ಯಕ್ರಮವನ್ನು ಮುಂದುವರಿಸಿತು ಮತ್ತು ಮಾರಣಾಂತಿಕ ಅಡ್ಡಪರಿಣಾಮಗಳು ಇಲ್ಲ ಎಂದು ಪದೇ–ಪದೇ ಪ್ರತಿಪಾದಿಸಿತು. ಕೇಂದ್ರ ಆರೋಗ್ಯ ಸಚಿವಾಲಯವು 2021ರ ಜನವರಿ 15ರಂದು ಹೊರಡಿಸಿದ್ದ ಪ್ರಕಟಣೆಯಲ್ಲಿ, ‘ಕೋವಿಶೀಲ್ಡ್ ಲಸಿಕೆಯಿಂದ ಯಾವುದೇ ಗಂಭೀರ ಅಡ್ಡಪರಿಣಾಮಗಳು ಇಲ್ಲ’ ಎಂದು ಹೇಳಿತ್ತು. ಗಂಭೀರ ಮತ್ತು ಮಾರಣಾಂತಿಕ ಅಡ್ಡಪರಿಣಾಮಗಳ ಬಗ್ಗೆ ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಪ್ರಶ್ನೆ ಕೇಳಿದಾಗಲೂ, ಸರ್ಕಾರ ಇದೇ ರೀತಿಯ ಉತ್ತರ ನೀಡಿತ್ತು.

2021ರ ಜುಲೈ 30ರಂದು ಲೋಕಸಭೆಗೆ ಈ ಬಗ್ಗೆ ಉತ್ತರ ನೀಡಿದ್ದ ಆರೋಗ್ಯ ಸಚಿವಾಲಯವು, ‘ಎಲ್ಲಾ ಲಸಿಕೆಗಳಲ್ಲೂ ಅಡ್ಡಪರಿಣಾಮಗಳಿರುತ್ತವೆ. ಆದರೆ ಇವೆಲ್ಲಾ ಸಣ್ಣ ಅಡ್ಡಪರಿಣಾಮಗಳು. ಎಲ್ಲೋ ಕೆಲವೊಮ್ಮೆ ಮಾತ್ರ ಚಿಕಿತ್ಸೆ ಬೇಕಾಗುತ್ತದೆ. ಗಂಭೀರ ಅಡ್ಡಪರಿಣಾಮಗಳು ಇರುವ ಲಸಿಕಾ ಮಾದರಿಗಳನ್ನು ಪರೀಕ್ಷೆಯ ಹಂತದಲ್ಲೇ ಕೈಬಿಡಲಾಗಿದೆ’ ಎಂದೇ ಹೇಳಿತ್ತು.

ಲಸಿಕಾ ಕಾರ್ಯಕ್ರಮದ ನಂತರ ದೇಶದಲ್ಲಿ ಯುವಜನರು ಹಠಾತ್‌ ಕುಸಿದುಬಿದ್ದು ಮೃತಪಡುವ ಘಟನೆಗಳು ಹೆಚ್ಚಾದವು. ಈ ಬಗ್ಗೆ ಹಲವು ವೈದ್ಯರು, ತಜ್ಞರು ಸಂದೇಹ ವ್ಯಕ್ತಪಡಿಸಿದ್ದರು. ಕೋವಿಡ್‌ ಲಸಿಕೆಗೂ ಇಂತಹ ಸಾವುಗಳಿಗೂ ಸಂಬಂಧವಿದೆಯೇ ಎಂಬುದನ್ನು ಪರಿಶೀಲಿಸಬೇಕು ಎಂದು ಒತ್ತಾಯಿಸಿದ್ದರು. ಈ ಬಗ್ಗೆ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತಿನ ನೇತೃತ್ವದಲ್ಲಿ ಸಂಶೋಧನೆ ನಡೆಸಲು ಕೇಂದ್ರ ಸರ್ಕಾರವು ಆದೇಶಿಸಿತು. ‘ಕೋವಿಡ್‌ ಲಸಿಕೆಗೂ ಹಠಾತ್ ಕುಸಿದುಬಿದ್ದು ಸಾವು ಸಂಭವಿಸುವ ಘಟನೆಗಳಿಗೂ ಸಂಬಂಧವಿಲ್ಲ. ಅನುವಂಶಿಕವಾಗಿ ಇಂತಹ ಸಮಸ್ಯೆ ಇದ್ದ ಕುಟುಂಬದವರಲ್ಲಿ ಇಂತಹ ಸಾವು ಸಂಭವಿಸಬಹುದು’ ಎಂದು ಪರಿಷತ್ತು ವರದಿ ನೀಡಿತು. ಈ ಫೆಬ್ರುವರಿ 2ರಂದು ಕೇಂದ್ರ ಸರ್ಕಾರವು ಲೋಕಸಭೆಯಲ್ಲಿ ಇದೇ ಹೇಳಿಕೆಯನ್ನು ನೀಡಿತು. ಆದರೆ ಈಗ ಕೋವಿಶೀಲ್ಡ್‌ನಿಂದ ಮಾರಣಾಂತಿಕ ಅಡ್ಡಪರಿಣಾಮ ಉಂಟಾಗುತ್ತದೆ ಎಂದು ಕಂಪನಿಯೇ ಹೇಳಿಕೊಂಡಿದೆ. ಈ ಬಗ್ಗೆ ಕೇಂದ್ರ ಸರ್ಕಾರವು ಮತ್ತೆ ವೈಜ್ಞಾನಿಕ ಪರಿಶೀಲನೆ ನಡೆಸುತ್ತದೆಯೇ ಎಂದು ಸಾಮಾಜಿಕ ಜಾಲತಾಣಗಳಲ್ಲಿ, ಸಾರ್ವಜನಿಕ ವೇದಿಕೆಗಳಲ್ಲಿ ಹಲವರು ಪ್ರಶ್ನಿಸುತ್ತಿದ್ದಾರೆ.

ಎಲ್ಲರೂ ಹೆದರಬೇಕಿಲ್ಲ...

ಕೋವಿಶೀಲ್ಡ್‌ ಲಸಿಕೆಯನ್ನು ಪಡೆದುಕೊಂಡವರಲ್ಲಿ ಟಿಟಿಎಸ್‌ (ರಕ್ತಹೆಪ್ಪುಗಟ್ಟುವಿಕೆ ಮತ್ತು ಪ್ಲೇಟ್‌ಲೆಟ್‌ಗಳ ಇಳಿಕೆ) ಅಡ್ಡಪರಿಣಾಮದ ಸಾಧ್ಯತೆ ತೀರಾ ಕಡಿಮೆ. ಜತೆಗೆ ಟಿಟಿಎಸ್‌ ಬಂದ
ಪ್ರಕರಣಗಳೆಲ್ಲಾ ಸಾವು ಸಂಭವಿಸುವುದಿಲ್ಲ. ಹೀಗಾಗಿ ಕೋವಿಶೀಲ್ಡ್‌ ಲಸಿಕೆ ಹಾಕಿಸಿಕೊಂಡವರು ತಮಗೆ ಏನಾಗುತ್ತದೋ ಎಂದು ಹೆದರುವ ಅವಶ್ಯಕತೆ ಇಲ್ಲ ಎಂದು ವೈದ್ಯರು ಹೇಳಿದ್ದಾರೆ.

ಟಿಟಿಎಸ್‌ ಮಾರಣಾಂತಿಕ ಅಡ್ಡಪರಿಣಾಮದ ಬಗ್ಗೆ ಅಸ್ಟ್ರಾಜೆನೆಕಾ ಕಂಪನಿಯು ನ್ಯಾಯಾಲಯಕ್ಕೆ ಮಾಹಿತಿ ನೀಡಿದ ನಂತರ, ಜನರಲ್ಲಿ ಈ ಬಗ್ಗೆ ಕಳವಳ ಉಂಟಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲೂ ಈ ಬಗ್ಗೆ ಚರ್ಚೆಯಾಗುತ್ತಿತ್ತು. ಇದೇ ಸಂದರ್ಭದಲ್ಲಿ ಹಲವು ವೈದ್ಯರು ತಮ್ಮ ಬ್ಲಾಗ್‌ಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಬರೆದು, ಜನರು ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.

ಲಸಿಕೆ ಪಡೆದುಕೊಂಡವರೆಲ್ಲಾ ಟಿಟಿಎಸ್‌ ಬರುತ್ತದೆ ಎಂದು ಹೆದರಬೇಕಿಲ್ಲ. ಜತೆಗೆ ಈ ಅಡ್ಡಪರಿಣಾಮ ತಲೆದೋರುವುದು ಲಸಿಕೆ ಪಡೆದುಕೊಂಡ 3 ದಿನದಿಂದ 45 ದಿನಗಳ ಅವಧಿಯಲ್ಲಿ. ಕೋವಿಶೀಲ್ಡ್‌ನಿಂದ ತಲೆದೋರಿದ ಎಲ್ಲ ಟಿಟಿಎಸ್ ಪ್ರಕರಣಗಳು ಸಾವಿನಲ್ಲೇ ಅಂತ್ಯವಾಗಬೇಕಿಲ್ಲ. ಆದರೆ ಅಲ್ಪಾವಧಿಯ ಅನಾರೋಗ್ಯದಿಂದ ಶಾಶ್ವತ ಅನಾರೋಗ್ಯಕ್ಕೆ ಟಿಟಿಎಸ್ ಕಾರಣವಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆಯು 2021ರಲ್ಲಿ, 2022ರ ಡಿಸೆಂಬರ್‌ನಲ್ಲಿ ಮತ್ತು 2023ರ ಏಪ್ರಿಲ್‌ನಲ್ಲಿ ಹೊರಡಿಸಿದ್ದ ಪ್ರಕಟಣೆಯಲ್ಲಿ ತಿಳಿಸಿತ್ತು.

ಟಿಟಿಎಸ್‌, ಸಾವು ಸಂಭವಿಸುವಷ್ಟು ತೀವ್ರವಾಗಿ ಇದ್ದರೆ ತಕ್ಷಣವೇ ಸಾವು ಸಂಭವಿಸುತ್ತದೆ. ಹೀಗಾಗಿ ವರ್ಷಗಳ ಹಿಂದೆ ಲಸಿಕೆ ಪಡೆದುಕೊಂಡವರು ಈಗ ಹೆದರಬೇಕಿಲ್ಲ. ಆದರೆ ಟಿಟಿಎಸ್‌ ಪರಿಣಾಮಗಳು ಹಲವು ವರ್ಷಗಳವರೆಗೆ ಇರಬಹುದು. ಕೆಲವು ಸಮಸ್ಯೆಗಳು ಶಾಶ್ವತ ಸ್ವರೂಪದ್ದಾಗಿ ಇರಬಹುದು. ಇಂತಹ ಅಡ್ಡಪರಿಣಾಮಕ್ಕೆ ತುತ್ತಾದವರೇ ಪರಿಹಾರ ಕೇಳಿ ಆಸ್ಟ್ರಾಜೆನೆಕಾ ವಿರುದ್ಧ ಲಂಡನ್‌ ನ್ಯಾಯಾಲಯದಲ್ಲಿ ದಾವೆ ಹೂಡಿರುವುದು.

ಅಡ್ಡಪರಿಣಾಮಕ್ಕೆ ಪರಿಹಾರ ನೀಡಲು ನಿರ್ದೇಶಿಸಿ: ‘ಸುಪ್ರೀಂ’ಗೆ ಅರ್ಜಿ

‘ಕೋವಿಡ್‌ ಲಸಿಕೆಯ ಅಡ್ಡಪರಿಣಾಮದಿಂದಾಗಿ ಅಂಗವಿಕಲತೆಗೆ ಒಳಗಾದವರಿಗಾಗಿ ಬ್ರಿಟನ್‌ ಸೇರಿದಂತೆ ಹಲವು ದೇಶಗಳಲ್ಲಿ ಪರಿಹಾರ ಒದಗಿಸುವ ವ್ಯವಸ್ಥೆಯೊಂದನ್ನು ರೂಪಿಸಲಾಗಿದೆ. ಇದೇ ರೀತಿಯ ವ್ಯವಸ್ಥೆಯನ್ನು ಭಾರತದಲ್ಲಿಯೂ ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು’ ಎಂದು ಕೋರಿ ವಕೀಲ ವಿಶಾಲ್‌ ತಿವಾರಿ ಎಂಬುವವರು ಸುಪ್ರೀಂ ಕೋರ್ಟ್‌ಗೆ ಬುಧವಾರ ಅರ್ಜಿ ಸಲ್ಲಿಸಿದ್ದಾರೆ.

ಜೊತೆಗೆ, ‘ಕೋವಿಶೀಲ್ಡ್‌ ಲಸಿಕೆಯ ಅಡ್ಡಪರಿಣಾಮಗಳು ಹಾಗೂ ಅಪಾಯದ ಕುರಿತು ಪರಿಶೀಲನೆ ನಡೆಯಬೇಕು. ಇದಕ್ಕಾಗಿ ದೆಹಲಿ ಏಮ್ಸ್‌ನ ಮುಖ್ಯಸ್ಥರನ್ನು ಒಳಗೊಂಡ ತಜ್ಞರ ತಂಡವೊಂದನ್ನು ರಚಿಸಬೇಕು. ಇದರ ನೇತೃತ್ವವನ್ನು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯೊಬ್ಬರು ವಹಿಸಬೇಕು’ ಎಂದೂ ಕೋರಿದ್ದಾರೆ. ‘ಕೇಂದ್ರ ಸರ್ಕಾರವು ಈ ಲಸಿಕೆಯು ಸುರಕ್ಷಿತ ಎಂದು ಜನರಿಗೆ ವಾಗ್ದಾನ ನೀಡಿತ್ತು. ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ಈ ಲಸಿಕೆಯನ್ನೇ ಜನರಿಗೆ ನೀಡಲಾಗಿದೆ. ಇತ್ತೀಚಿನ ದಿನಗಳಲ್ಲಿ, ಹೃದಯಾಘಾತದಿಂದ ಹಾಗೂ ಕುಸಿತು ಬಿದ್ದು ತಕ್ಷಣ ದಲ್ಲಿಯೇ ಮೃತಪಡುತ್ತಿರುವವರ ಸಂಖ್ಯೆ ಅಧಿಕಗೊಂಡಿದೆ. ಈಗ ನೋಡಿದರೆ, ‘ಟಿಟಿಎಸ್‌ ಎನ್ನುವ ವಿರಳವಾಗಿರುವ ಅಡ್ಡಪರಿಣಾಮಗಳು ಲಸಿಕೆಯಿಂದ ಉಂಟಾಗುತ್ತದೆ’ ಎಂದು ಈ ಲಸಿಕೆಯನ್ನು ಅಭಿವೃದ್ಧಿಪಡಿಸಿದ ಕಂಪನಿಯೇ ಲಂಡನ್‌ ನ್ಯಾಯಾಲಯದಲ್ಲಿ ಒಪ್ಪಿಕೊಂಡಿದೆ’ ಎಂದು ತಿವಾರಿಯವರ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಕೋವಿಶೀಲ್ಡ್‌ನಿಂದಾಗುವ ಅಡ್ಡಪರಿಣಾಮಗಳ ಲಕ್ಷಣಗಳನ್ನು ಹೇಗೆ ಗುರುತಿಸಬೇಕು ಎನ್ನುವ ಮಾಹಿತಿಯನ್ನು ಜನರಿಗೆ ನೀಡುವ ಸಲುವಾಗಿ ಲಸಿಕೆ ತಯಾರಿಕಾ ಕಂಪನಿ, ವೈದ್ಯರು ಹಾಗೂ ವಿಜ್ಞಾನಿಗಳ ಜೊತೆಗೆ ಕೇಂದ್ರ ಸರ್ಕಾರವು ಮಾತುಕತೆಯನ್ನು ಕೂಡಲೇ ನಡೆಸಬೇಕಿತ್ತು. ಆದರೆ, ಕೇಂದ್ರವು ನಿದ್ರಿಸುತ್ತಿದೆ. 2021ರಲ್ಲಿಯೇ ಯುರೋಪಿನ ಹಲವು ದೇಶಗಳು ಈ ಲಸಿಕೆಯ ಬಳಕೆಯನ್ನು ರದ್ದು ಮಾಡಿದ್ದವು. ಆದರೆ, ಕೇಂದ್ರ ಸರ್ಕಾರ ಮಾತ್ರ ಈ ಲಸಿಕೆಯನ್ನು ಪ್ರಚಾರ ಮಾಡುತ್ತಿತ್ತು
ಸೌರವ್‌ ಭಾರಧ್ವಾಜ್‌, ದೆಹಲಿಯ ಆರೋಗ್ಯ ಸಚಿವ
ಲಸಿಕೆ ತಯಾರಕ ಕಂಪನಿಯಿಂದ ಚುನಾವಣಾ ದೇಣಿಗೆಯನ್ನು ಸುಲಿಗೆ ಮಾಡುವ ಭರದಲ್ಲಿ ದೇಶದ ಜನರ ಜೀವವನ್ನು ಒತ್ತೆ ಇಟ್ಟಿರಿ. ಮಾರಕ ಔಷಧಗಳಿಗೆ ಒಪ್ಪಿಗೆ ನೀಡುವುದು ಎನ್ನುವುದು ವ್ಯಕ್ತಿಯೊಬ್ಬರನ್ನು ಕೊಲೆ ಮಾಡುವುದಕ್ಕೆ ಸಮ. ಆದ್ದರಿಂದ, ಯಾರು ಈ ಎಲ್ಲದಕ್ಕೂ ಹೊಣೆಗಾರರೊ ಅವರನ್ನು ಶಿಕ್ಷಿಸಬೇಕು ಮತ್ತು ಈ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು. ಜನರ ಜೀವದ ಜೊತೆ ಆಟವಾಡಿದವರನ್ನು ಈ ನೆಲದ ಕಾನೂನು ಮತ್ತು ಜನರು ಯಾವ ಕಾರಣಕ್ಕೂ ಕ್ಷಮಿಸುವುದಿಲ್ಲ
ಅಖಿಲೇಶ್‌ ಯಾದವ್‌, ಸಮಾಜವಾದಿ ಪಕ್ಷದ ಮುಖ್ಯಸ್ಥ
ಮಿಸ್ಟರ್‌ ಪ್ರೈಮ್‌ ಮಿನಿಸ್ಟರ್‌, ಹೃದಯಾಘಾತದಿಂದ ಲಕ್ಷಾಂತರ ಸಾವು ಸಂಭವಿಸಿದೆ. ಮುಂದೆಯೂ ಲಸಿಕೆಯ ಅಡ್ಡಪರಿಣಾಮದಿಂದಾಗಿ ಸಾವು ಸಂಭವಿಸಬಹುದು. ಈ ಎಲ್ಲ ಸಾವಿಗೆ ಯಾರು ಹೊಣೆ? ಚುನಾವಣಾ ಬಾಂಡ್‌ ಮೂಲಕ ದೇಣಿಗೆ ಪಡೆದುಕೊಳ್ಳಲು, ಅಪಾಯಕಾರಿ ಲಸಿಕೆಯನ್ನು ಬಿಜೆಪಿಯು ದೇಶದ ಕೋಟ್ಯಂತರ ಜನರಿಗೆ ನೀಡಿದೆ
ಆರ್‌ಜೆಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT