ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ಆಳ–ಅಗಲ | ಬಗೆ ಬಗೆ ಕತೆ ಹೇಳುವ ರಾಮಾಯಣಗಳು
ಆಳ–ಅಗಲ | ಬಗೆ ಬಗೆ ಕತೆ ಹೇಳುವ ರಾಮಾಯಣಗಳು
Published 22 ಜನವರಿ 2024, 22:04 IST
Last Updated 22 ಜನವರಿ 2024, 22:04 IST
ಅಕ್ಷರ ಗಾತ್ರ

ರಾಮಾಯಣ ಮತ್ತು ಮಹಾಭಾರತ ಮಹಾಕಾವ್ಯಗಳು ಭಾರತದ ಸಾಹಿತ್ಯವನ್ನು ಪ್ರಭಾವಿಸಿದಷ್ಟು ಬೇರಾವ ಕಾವ್ಯಗಳೂ ಪ್ರಭಾವಿಸದೇ ಇರಬಹುದು. ಸಂಸ್ಕೃತದಲ್ಲಿರುವ ರಾಮಾಯಣಗಳು ಒಂದೆಡೆಯಾದರೆ ಬಂಗಾಳ, ಕನ್ನಡ, ಅವಧ್‌, ಮಲಯಾಳ, ತಮಿಳು, ತೆಲುಗು ಭಾಷೆಗಳಲ್ಲಿ ರಚನೆಯಾದ ರಾಮಾಯಣಗಳು ಹಲವಿವೆ. ರಾಮಾಯಣದ ಕತೆಯನ್ನೇ ಹೇಳಿದರೂ ಪಾತ್ರ ಪೋಷಣೆಯಲ್ಲಿ ಇವು ಭಿನ್ನವಾಗಿ ನಿಲ್ಲುತ್ತವೆ. ಅಂತಹ ನೂರಾರು ರಾಮಾಯಣಗಳು ಭಾರತದಲ್ಲಿವೆ. ಇವುಗಳಲ್ಲಿ ಮೂಲ ರಾಮಾಯಣ ಯಾವುದು ಎಂಬುದರ ಬಗ್ಗೆ ಈ ಹಿಂದೆಯೇ ಹಲವು ಚರ್ಚೆಗಳು ನಡೆದು ಹೋಗಿವೆ.

ಸಾಮಾನ್ಯವಾಗಿ ವಾಲ್ಮೀಕಿ ರಾಮಾಯಣವನ್ನೇ ಮೂಲ ರಾಮಾಯಣ ಎಂದು ಪರಿಗಣಿಸಲಾಗುತ್ತದೆ. ಆದರೆ ಮೂಲ ರಾಮಾಯಣ ಎಂಬುದೇ ಇಲ್ಲ ಎಂಬ ವಾದವೂ ವಿದ್ವಾಂಸರ ವಲಯದಲ್ಲಿದೆ. ಎ.ಕೆ.ರಾಮಾನುಜನ್‌ ಅವರ ‘ಥ್ರೀ ಹಂಡ್ರೆಡ್‌ ರಾಮಾಯಣಾಸ್‌’ ಪ್ರಬಂಧದಲ್ಲಿ ಇದನ್ನೇ ಪ್ರತಿಪಾದಿಸುತ್ತಾರೆ. ಆ ಪ್ರಬಂಧದಲ್ಲಿ ಅವರು ಬೇರೆ–ಬೇರೆ ರಾಮಾಯಣಗಳನ್ನು ‘ವರ್ಷನ್‌–ಆವೃತ್ತಿ’ ಎಂದು ಕರೆಯುವುದಿಲ್ಲ. ಬದಲಿಗೆ ‘ಟೆಲ್ಲಿಂಗ್ಸ್‌’ ಎಂದು ಕರೆದಿದ್ದಾರೆ. ಅವರು ಹಾಗೆ ಕರೆಯುವುದಕ್ಕೆ ಆ ಪ್ರಬಂಧದಲ್ಲೇ ವಿವರಣೆಯನ್ನೂ ನೀಡಿದ್ದಾರೆ. ‘ಆವೃತ್ತಿ ಎಂದು ಕರೆದ ತಕ್ಷಣ, ಅದಕ್ಕೆ ಮೂಲಕೃತಿಯೊಂದು ಇರಬೇಕಾಗುತ್ತದೆ. ಸಾಮಾನ್ಯವಾಗಿ ಸಂಸ್ಕೃತದ ವಾಲ್ಮೀಕಿ ರಾಮಾಯಣವನ್ನೇ ಮೂಲ ಎಂದು ಪರಿಗಣಿಸಲಾಗುತ್ತದೆ. ಆದರೆ, ಬೇರೆ–ಬೇರೆ ಭಾಷೆಗಳಲ್ಲಿ ಇರುವ ರಾಮಾಯಣಗಳು ವಾಲ್ಮೀಕಿ ರಾಮಾಯಣವನ್ನು ಆಧರಿಸಿಲ್ಲ. ಹೀಗಾಗಿ ಈ ರಾಮಾಯಣಗಳನ್ನು ಆವೃತ್ತಿ ಎಂದು ಕರೆಯುವ ಬದಲಿಗೆ ‘ಟೆಲ್ಲಿಂಗ್ಸ್‌’ ಎಂದೇ ಕರೆಯುತ್ತೇನೆ’ ಎಂದು ಅವರು ಪ್ರತಿಪಾದಿಸಿದ್ದಾರೆ.

ವಾಲ್ಮೀಕಿ ರಾಮಾಯಣಕ್ಕೂ, ಸಂಸ್ಕೃತದ ಇತರ ರಾಮಾಯಣ ಗಳಿಗೂ ವ್ಯತ್ಯಾಸವಿರುವುದನ್ನು ಅವರು ಗುರುತಿಸುತ್ತಾರೆ. ಸಂಸ್ಕೃತದ ಇತರ ಹಲವು ಕೃತಿಗಳಲ್ಲಿ ರಾಮಾಯಣವು, ರಾಮ ಮತ್ತು ಸೀತೆ ಅಯೋಧ್ಯೆಗೆ ಹಿಂದಿರುಗಿದಾಗ ಹಾಗೂ ರಾಮನ ಪಟ್ಟಾಭಿಷೇಕದ ನಂತರ ಕೊನೆಯಾಗುತ್ತವೆ. ಆದರೆ ವಾಲ್ಮೀಕಿ ರಾಮಾಯಣವು ಮತ್ತೂ ಮುಂದುವರಿಯುತ್ತದೆ. ಸೀತೆಯ ಅಗ್ನಿಪರೀಕ್ಷೆ, ಆಕೆಯನ್ನು ಲಕ್ಷ್ಮಣ ಕಾಡಿನಲ್ಲಿ ಬಿಟ್ಟುಬರುವುದು, ವಾಲ್ಮೀಕಿ ಆಶ್ರಮದಲ್ಲಿ ಆಕೆ ಲವ–ಕುಶರನ್ನು ಹೆರುವುದು, ರಾಮಾಶ್ವಮೇಧ ಯಾಗ... ಈ ಪ್ರಸಂಗಗಳೆಲ್ಲವೂ ಸಂಸ್ಕೃತದ ಇತರ ರಾಮಾಯಣಗಳಲ್ಲಿ ಇಲ್ಲ ಎಂಬುದನ್ನು ರಾಮಾನುಜನ್‌ ಅವರು ತಮ್ಮ ಪ್ರಬಂಧದಲ್ಲಿ ಉಲ್ಲೇಖಿಸುತ್ತಾರೆ.

ದೇಶದ ಬೇರೆ–ಬೇರೆ ರಾಮಾಯಣ ಕೃತಿಗಳಲ್ಲಿ ಮಹತ್ವದ ಸ್ಥಾನ ಪಡೆದುದರಲ್ಲಿ ‘ಕಂಬ ರಾಮಾಯಣ’ವೂ ಒಂದು. ತಮಿಳಿನ ಕಂಬ ಕವಿಯ ‘ರಾಮಾವತಾರಮ್‌’, ವಾಲ್ಮೀಕಿ ರಾಮಾಯಣದ ಕಥಾಹಂದರದಲ್ಲೇ ಸಾಗಿದರೂ ಪಾತ್ರಗಳನ್ನು ಬಹಳ ಭಿನ್ನವಾಗಿ ಪೋಷಿಸುತ್ತದೆ. ‘ಎರಡೂ ಕೃತಿಗಳಲ್ಲಿ ಅಹಿಲ್ಯಾ ಪಾತ್ರವನ್ನು ಭಿನ್ನವಾಗಿ ಚಿತ್ರಿಸಲಾಗಿದೆ’ ಎಂಬುದನ್ನು ರಾಮಾನುಜನ್‌ ಉದಾಹರಿಸುತ್ತಾರೆ. ಕನ್ನಡದ ಹಲವು ಜನಪದ ರಾಮಾಯಣಗಳಲ್ಲಿನ ಪ್ರತಿಮೆಗಳಿಗೂ, ಕಂಬ ರಾಮಾಯಣದಲ್ಲಿನ ಪ್ರತಿಮೆಗಳಿಗೂ ಹೋಲಿಕೆ ಇರುವುದನ್ನು ಅವರು ಉದಾಹರಿಸುತ್ತಾರೆ.

ಥಾಯ್ಲೆಂಡ್‌ನ ರಾಮಾಯಣ 'ರಾಮಾಕೀನ್‌'ನಲ್ಲಿ ರಾವಣ

ಥಾಯ್ಲೆಂಡ್‌ನ ರಾಮಾಯಣ 'ರಾಮಾಕೀನ್‌'ನಲ್ಲಿ ರಾವಣ

ಸಂಸ್ಕೃತದ ರಾಮಾಯಣಗಳಲ್ಲಿ ಸೀತೆಯನ್ನು ಜನಕನ ಮಗಳು, ಜನಕನಿಗೆ ಭೂಮಿಯಲ್ಲಿ ದೊರೆತವಳು ಎಂದು ಚಿತ್ರಿಸಲಾಗಿದೆ. ಆದರೆ ಕನ್ನಡದ ಜನಪದ ರಾಮಾಯಣಗಳು ಸೀತೆಯು ರಾವಣನ ಮಗಳು ಎಂದೇ ಪ್ರತಿಪಾದಿಸುತ್ತವೆ. ಸಂಸ್ಕೃತದ ರಾಮಾಯಣಗಳಲ್ಲಿ ಕತೆಯು ರಾಮನಿಂದ ಆರಂಭವಾಗಿ, ರಾಮನಿಂದಲೇ ಅಂತ್ಯವಾಗುತ್ತದೆ. ಆದರೆ ಕನ್ನಡದ ಜನಪದ ರಾಮಾಯಣಗಳು ಸೀತೆಯನ್ನೇ ಕತೆಯ ಕೇಂದ್ರವನ್ನಾಗಿ ರೂಪಿಸುತ್ತವೆ. ಸೀತೆಯ ಜನನ ಪ್ರಸಂಗದಿಂದ ಆರಂಭವಾಗುವ ರಾಮಾಯಣವು, ಆಕೆಯು ಭೂಮಿಯ ಒಡಲೊಳಗೆ ಹೋಗುವಲ್ಲಿಗೆ ಅಂತ್ಯವಾಗುತ್ತವೆ. ಈ ಮಧ್ಯೆ ನಡೆಯುವ ಎಲ್ಲಾ ಪ್ರಸಂಗಗಳಲ್ಲೂ ಸೀತೆಯದ್ದೇ ಪ್ರಧಾನ ಪಾತ್ರ. ಈ ಜನಪದ ರಾಮಾಯಣಗಳಲ್ಲಿ ಸೀತೆಯ ಜನನದ ನಂತರವೇ ರಾಮ–ಲಕ್ಷ್ಮಣರ ಹುಟ್ಟಿನ ಪ್ರಸಂಗ ಬರುವುದು. ಇವು ರಾಮಾಯಣವನ್ನು ಸೀತೆಯ ಜನನ, ಸೀತೆಯ ಬಾಲ್ಯ, ಸೀತೆಯ ಮದುವೆ, ಸೀತೆಯ ಅಪಹರಣ, ಸೀತೆಯ ಅಗ್ನಿಪರೀಕ್ಷೆ, ಸೀತೆಯನ್ನು ಕಾಡಿಗಟ್ಟಿದ್ದು, ಸೀತೆ ಲವ–ಕುಶರನ್ನು ಹೆತ್ತು ಸಲಹಿದ್ದು, ರಾಮನ ಮೇಲೆ ಸಿಟ್ಟಾಗಿ ಸೀತೆ ಭೂತಾಯಿಯ ಒಡಲು ಸೇರಿದ್ದನ್ನೇ ಪ್ರಮುಖ ಘಟ್ಟಗಳಾಗಿ ವಿವರಿಸುತ್ತಾ ಹೋಗುತ್ತವೆ. ಕನ್ನಡದ ಜನಪದ ರಾಮಾಯಣಗಳ ಕುರಿತ ಅಧ್ಯಯನಗಳೂ ಈ ಅಂಶಗಳನ್ನೇ ಗುರುತಿಸುತ್ತವೆ. 

ಜನಪದ ರಾಮಾಯಣಗಳಿಗೆ ಹೆಣ್ಣೇ ಪ್ರಮುಖ ಪಾತ್ರ ಎಂಬುದಕ್ಕೆ ಚಿತ್ರಪಟ ರಾಮಾಯಣವೂ ಒಂದು ಸ್ಪಷ್ಟ ನಿದರ್ಶನ. ಈ ಪ್ರಸಂಗವನ್ನೂ ಬೇರೆ–ಬೇರೆ ಭಾಷೆ–ಪ್ರದೇಶದ ಜನಪದರು ಭಿನ್ನವಾಗೇ ಚಿತ್ರಿಸಿದ್ದಾರೆ. ತಮಿಳಿನ ಕೆಲವು ರಾಮಾಯಣಗಳಲ್ಲಿ ರಾವಣನ ಚಿತ್ರ ಬರೆಯುವುದು ಸೀತೆಯಲ್ಲ. ಬದಲಿಗೆ ಶೂರ್ಪನಖಿಯ ಮಗಳು. ತನ್ನ ತಾಯಿಗಾದ ಅವಮಾನಕ್ಕೆ ಸೇಡು ತೀರಿಸಿಕೊಳ್ಳುವ ಸಲುವಾಗಿ ಶೂರ್ಪನಖಿಯ ಮಗಳು, ಸೀತೆಯ ಅಂತಃಪುರದಲ್ಲಿ ರಾವಣನ ಚಿತ್ರ ಬರೆಯುತ್ತಾಳೆ. ಆ ಮೂಲಕ ಸೀತೆಯನ್ನು ಕಾಡಿಗಟ್ಟುವಲ್ಲಿ ಯಶಸ್ವಿಯಾಗುತ್ತಾಳೆ. ಇಂಥದ್ದೇ ಕಥಾಬಿತ್ತಿ ಬಂಗಾಳಿ ಜನಪದ ರಾಮಾಯಣಗಳಲ್ಲೂ ಇದೆ.

ಜನಪದ ಮಾತ್ರವಲ್ಲ, ಶಿಷ್ಟ ಸಾಹಿತ್ಯವೂ ರಾಮಾಯಣಕ್ಕೆ ಭಿನ್ನ ನೆಲೆಯಲ್ಲೇ ಸ್ಪಂದಿಸುತ್ತಾ ಬಂದಿವೆ. ವಿಮಲಸೂರಿಯ ‘ಪವುಮಚರಿಯ’ದಲ್ಲಿ ರಾಮ, ರಾವಣನನ್ನು ಕೊಲ್ಲುವುದೇ ಇಲ್ಲ. ಕನ್ನಡದ ಶಿಷ್ಟ ಸಾಹಿತ್ಯದ ಒಂದು ಸಹಸ್ರಮಾನಕ್ಕೂ ಮಿಗಿಲಾದ ಅವಧಿಯಲ್ಲಿ ಹಲವು ರಾಮಾಯಣಗಳು ರಚನೆಯಾಗಿವೆ. ಕವಿರಾಜಮಾರ್ಗಕ್ಕೆ ಮೊದಲು ಕನ್ನಡದ ಕೃತಿಗಳು ಲಭ್ಯವಿಲ್ಲವಾದರೂ, ಅದರಲ್ಲಿನ ಕೆಲವು ಲಕ್ಷಣ ಪದ್ಯಗಳು ಹನುಮಂತನ ಪ್ರಸಂಗವನ್ನು ಉಲ್ಲೇಖಿಸುತ್ತವೆ. ಅಲ್ಲಿಂದ ಆರಂಭವಾಗಿ ನಾಗಚಂದ್ರನ ರಾಮಚಂದ್ರ ಚರಿತ ಪುರಾಣ, ಲಕ್ಷ್ಮೀಶನ ಜೈಮಿನಿ ಭಾರತ, ನರಹರಿಯ ತೊರವೆ ರಾಮಾಯಣ, ಮುದ್ದಣನ ಅಭ್ಧುತ ರಾಮಾಯಣ, ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ತೀರಾ ಇತ್ತೀಚಿನ ಎನ್ನಬಹುದಾದ ಕುವೆಂಪು ಅವರ ‘ಶ್ರೀ ರಾಮಾಯಣ ದರ್ಶನಂ’ ರಾಮಾಯಣದ ಕತೆ–ಪಾತ್ರಗಳನ್ನು ಪರಸ್ಪರ ಭಿನ್ನವಾಗಿಯೇ ಪೋಷಿಸುತ್ತಾ ಬಂದಿವೆ. ವೀರಪ್ಪ ಮೊಯಿಲಿ ಅವರ ‘ರಾಮಾಯಣ ಮಹಾನ್ವೇಷಣಂ’ ಅಂಥದ್ದೇ ಒಂದು ಯತ್ನ. 

ಮತ್ತೆ ಮೊದಲಿನ ಮಾತಿಗೆ ಬರುವುದಾದರೆ, ಭಾರತ ಮಾತ್ರವಲ್ಲ ಭಾರತದ ನೆರೆಯ ದೇಶಗಳಲ್ಲೂ ರಾಮಾಯಣವು ಅವುಗಳದ್ದೇ ವಿಶಿಷ್ಟ ರೂಪದಲ್ಲಿ ಚಾಲ್ತಿಯಲ್ಲಿವೆ. ಅವು ಕೂಡ ರಾಮಾಯಣದ ಕತೆ ಮತ್ತು ಪಾತ್ರಗಳನ್ನು ಬೇರೆಯದ್ದೇ ರೀತಿಯಲ್ಲಿ ಕಟ್ಟಿಕೊಡುತ್ತವೆ.

ಭಾರತದ ಇತರ ಕೆಲವು ರಾಮಾಯಣಗಳು

  • ತುಳಸಿ ರಾಮಾಯಣ: ತುಳಸೀದಾಸ ಅವರು ಅವಧ್ ಭಾಷೆಯಲ್ಲಿ ರಚಿಸಿದ ಈ ರಾಮಾಯಣವು, ದೇಶದ ಪ್ರಮುಖ ರಾಮಾಯಣಗಳಲ್ಲಿ ಒಂದು. ವಾಲ್ಮೀಕಿ ರಾಮಾಯಣದ ಕಥಾಹಂದರದಲ್ಲೇ ಸಾಗಿದರೂ ಜನಪದದ ರೀತಿಯಲ್ಲೇ ಪಾತ್ರಪೋಷಣೆ ಇರುವ ಇದನ್ನು ಜನರ ರಾಮಾಯಣ ಎಂದೇ ಕರೆಯಲಾಗುತ್ತದೆ.

  • ರಂಗನಾಥ ರಾಮಾಯಣ: ತೆಲುಗು ಕವಿ ರಂಗನಾಥ ಅವರು 14ನೇ ಶತಮಾನದ ವೇಳೆಗೆ ರಚಿಸಿದ್ದು ಎನ್ನಲಾದ ಈ ರಾಮಾಯಣವು, ಹಲವು ಕಾರಣಗಳಿಂದ ಮಹತ್ವ ಪಡೆದುಕೊಂಡಿವೆ. ಲಂಕೆಗೆ ಸೇತುವೆ ಕಟ್ಟುವಲ್ಲಿ ಅಳಿಲು ನೆರವಾಯಿತು. ಅದನ್ನು ಮೆಚ್ಚಿ, ರಾಮ ಅದರ ಬೆನ್ನ ಮೇಲೆ ಮೂರು ಗೆರೆ ಎಳೆದ ಎಂಬ ಪ್ರಸಂಗದ ಮೊದಲ ಲಿಖಿತ ಉಲ್ಲೇಖ ಸಿಗುವುದೇ ಈ ರಾಮಾಯಣದಲ್ಲಿ. ದಕ್ಷಿಣ ಭಾರತದ ಹಲವು ಜನಪದ ರಾಮಾಯಣಗಳಲ್ಲೂ ಇಂತಹ ಉಲ್ಲೇಖವಿದೆ.

ಆಗ್ನೇಯ ಏಷ್ಯಾ ದೇಶಗಳ ರಾಮಾಯಣಗಳಲ್ಲಿ ಹನುಮಂತನು ವಾನರರನ್ನು ಸಮುದ್ರ ದಾಟಿಸಿದ ಪರಿ

ಆಗ್ನೇಯ ಏಷ್ಯಾ ದೇಶಗಳ ರಾಮಾಯಣಗಳಲ್ಲಿ ಹನುಮಂತನು ವಾನರರನ್ನು ಸಮುದ್ರ ದಾಟಿಸಿದ ಪರಿ

ವಿಶ್ವದ ಇತರ ಕೆಲವು ರಾಮಾಯಣಗಳು

  • ಕಾಂಬೋಡಿಯಾದ ರೀಮ್ಕರ್‌: ಬೌದ್ಧ ಧರ್ಮ ಪ್ರಭಾವಿತವಾದ ರಾಮಾಯಣದ ಕತೆ ಇದರಲ್ಲಿದೆ. ಭಾರತದ ರಾಮಾಯಣಗಳಲ್ಲಿ ಇಲ್ಲದ ಹಲವು ಪ್ರಸಂಗಗಳೂ ರೀಮ್ಕರ್‌ನಲ್ಲಿ ಇವೆ. ಸಮುದ್ರೋಲ್ಲಂಘನದ ಸಂದರ್ಭದಲ್ಲಿ ಹನುಮಂತ ಮತ್ತು ಮತ್ಸಕನ್ಯೆ ನಡುವಣ ಜಟಾಪಟಿಯ ಪ್ರಸಂಗ ರೀಮ್ಕರ್‌ಗೆ ವಿಶಿಷ್ಟವಾದುದು. ರೀಮ್ಕರ್‌ನಲ್ಲಿ ಹನುಮಂತನೇ ವಾನರರ ರಾಜ, ವಾಲಿ–ಸುಗ್ರೀವರಲ್ಲ.

  • ರಾಮಾಯಣ ಜಾವಾ: ಜಾವಾದಲ್ಲೂ ರಾಮಾಯಣ ಪ್ರಚಲಿತದಲ್ಲಿದೆ. ಸಂಸ್ಕೃತ ರಾಮಾಯಣಕ್ಕೆ ಹತ್ತಿರವೇ ಇದ್ದರೂ, ಶಿಷ್ಟ ಸಾಹಿತ್ಯದ ರೂಪದಲ್ಲಿಲ್ಲ. ಬದಲಿಗೆ ಬೊಂಬೆಯಾಟ, ತೊಗಲು ಬೊಂಬೆಯಾಟ, ಚಿತ್ರಕಲೆಗಳ ರೂಪದಲ್ಲಿ ಪ್ರಚಲಿತದಲ್ಲಿದೆ. ಇಲ್ಲಿ ಅಯೋಧ್ಯೆಯನ್ನು ಯೋಗ್ಯಕರ್ತ ಎಂದು ಕರೆಯಲಾಗುತ್ತದೆ. ರಾಮಾಯಣದೊಟ್ಟಿಗೆ ಜಾವಾ ಸಂಸ್ಕೃತಿಯ ಕೆಲವು ದೇವತೆಗಳೂ ಸೇರಿಕೊಂಡಿರುವುದು ‘ರಾಮಾಯಣ ಜಾವಾ’ದ ವೈಶಿಷ್ಟ್ಯ.

  • ಹಿಕಾಯತ್ ಸೆರಿ ರಾಮ: ಮಲಯಾದಲ್ಲಿನ ರಾಮಾಯಣದ ಹೆಸರಿದು. ಸೆರಿ ರಾಮಾ ಎಂಬುದು ಸೀತಾ ರಾಮ ಎಂಬುದಾದರೆ, ಹಿಕಾಯತ್ (ಕತೆಗಳು) ಎಂಬುದು ಅರೇಬಿಕ್‌ ಪದ. ಸೆರಿ ರಾಮ ಕತೆಯಲ್ಲಿ ರಾವಣನ ನಿಷ್ಠೆಯೇ ಶ್ರೇಷ್ಠ ಎಂಬ ಚಿತ್ರಣವಿದೆ. ಮ್ಯಾನ್ಮಾರ್‌ ರಾಮಾಯಣಗಳಲ್ಲೂ ಇಂಥದ್ದೇ ಚಿತ್ರಣವಿದೆ. ಆದರೆ ಅಲ್ಲಿ ಬೌದ್ಧ ಧರ್ಮದ ಪ್ರಭಾವವಿದೆ. ಬುದ್ಧನನ್ನು ರಾಮನಿಗೆ ಸಮೀಕರಿಸುವ ಕಾವ್ಯಗಳು, ಜನಪದ ಕಾವ್ಯಗಳು, ಬೊಂಬೆಯಾಟಗಳು ಪ್ರಚಲಿತದಲ್ಲಿವೆ. 

  • ರಾಮಾಕೀನ್‌: ಥಾಯ್ಲೆಂಡ್‌ನ ರಾಮಾಯಣವೇ ರಾಮಾಕೀನ್‌. ಇಲ್ಲಿ ಅಯೋಧ್ಯೆಯನ್ನು ಅಯುದ್ಧಯ ಎಂದು ಕರೆಯಲಾಗಿದೆ. ರಾಮಾಕೀನ್‌ ಅನ್ನು ಥಾಯ್ಲೆಂಡ್‌ನ ರಾಷ್ಟ್ರೀಯ ಕಾವ್ಯ ಎಂದೂ ಪರಿಗಣಿಸಲಾಗಿದೆ. ರಾಮಾಯಣವನ್ನು ಆಧರಿಸಿದ ಹಲವು ಪ್ರದರ್ಶನ ಕಲೆಗಳೂ ಇಲ್ಲಿ ಪ್ರಚಲಿತದಲ್ಲಿವೆ.

ಆಧಾರ: ಎ.ಕೆ.ರಾಮಾನುಜನ್ ಅವರ ‘ಥ್ರೀ ಹಂಡ್ರೆಡ್‌ ರಾಮಾಯಣಾಸ್‌’ ಪ್ರಬಂಧ, ವಾಷಿಂಗ್ಟನ್ ವಿಶ್ವವಿದ್ಯಾಲಯದ ಸೆಂಟರ್ ಫಾರ್ ಸೌತ್‌ಈಸ್ಟ್‌ ಏಷ್ಯಾ ಸಂಸ್ಥೆಯ ‘ದಿ ರಾಮಾಯಣಾಸ್‌ ಆಫ್‌ ಸೌತ್‌ಈಸ್ಟ್‌ ಏಷ್ಯಾ’ ಪ್ರಬಂಧ, ‘ಕನ್ನಡ ಸಾಹಿತ್ಯ ಚರಿತ್ರೆ’ ಗ್ರಂಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT