ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ಆಳ–ಅಗಲ: ಬಿಜೆಪಿಯಲ್ಲಿ 75ಕ್ಕೆ ನಿವೃತ್ತಿ– ಎಲ್ಲರಿಗೂ ಅನ್ವಯಿಸದು
ಆಳ–ಅಗಲ: ಬಿಜೆಪಿಯಲ್ಲಿ 75ಕ್ಕೆ ನಿವೃತ್ತಿ– ಎಲ್ಲರಿಗೂ ಅನ್ವಯಿಸದು
2014ರ ಬಳಿಕ, 75 ವರ್ಷ ತುಂಬಿದ್ದರಿಂದಾಗಿ ಸಕ್ರಿಯ ರಾಜಕಾರಣದಿಂದ ದೂರ ಸರಿದ ಬಿಜೆಪಿಯ ಕೆಲವು ನಾಯಕರ ಉದಾಹರಣೆಗಳು ಇಲ್ಲಿವೆ
Published 14 ಮೇ 2024, 0:22 IST
Last Updated 14 ಮೇ 2024, 2:30 IST
ಅಕ್ಷರ ಗಾತ್ರ

2014ರ ಬಳಿಕ, 75 ವರ್ಷ ತುಂಬಿದ್ದರಿಂದಾಗಿ ಸಕ್ರಿಯ ರಾಜಕಾರಣದಿಂದ ದೂರ ಸರಿದ ಬಿಜೆಪಿಯ ಕೆಲವು ನಾಯಕರ ಉದಾಹರಣೆಗಳು ಇಲ್ಲಿವೆ

75 ವರ್ಷ ದಾಟಿದ ನಾಯಕರನ್ನು ಸಕ್ರಿಯ ರಾಜಕಾರಣದಿಂದ ದೂರ ಇರಿಸುವ ಪರಿಪಾಟವು ಬಿಜೆಪಿಯಲ್ಲಿ ಇದೆ. ಇಂಥವರಲ್ಲಿ ಕೆಲವರನ್ನು ಮಾರ್ಗದರ್ಶಕ ಮಂಡಳಿಯ ಸದಸ್ಯರನ್ನಾಗಿ ಮಾಡಲಾಗಿದೆ. 75 ವರ್ಷ ತುಂಬಿದ ಮೇಲೆ ಸಕ್ರಿಯ ರಾಜಕಾರಣದಿಂದ ನಿವೃತ್ತಿಯಾಗಬೇಕು ಎಂಬಂಥ ನಿಯಮ ಇದೆ ಎಂಬುದನ್ನು ಬಿಜೆಪಿ ನೇರವಾಗಿ ಎಲ್ಲಿಯೂ ಹೇಳಿಲ್ಲ. ಆದರೆ, 2014ರ ಬಳಿಕ ಬಿಜೆಪಿಯು ಇಂಥದ್ದೊಂದು ಮಂಡಳಿಯನ್ನು ಸ್ಥಾಪಿಸಿದೆ.

ಹಿರಿಯರು ತಮ್ಮ ಅಗಾಧ ಅನುಭವದಿಂದ ಸರ್ಕಾರಕ್ಕೆ, ನಾಯಕತ್ವಕ್ಕೆ ಮಾರ್ಗದರ್ಶನ ನೀಡಬೇಕು ಎಂಬ ಕಾರಣಕ್ಕಾಗಿ ಈ ಮಂಡಳಿಯನ್ನು ಸ್ಥಾಪಿಸಲಾಗಿದೆ ಎಂದು ಬಿಜೆಪಿ ಆಗ ಹೇಳಿಕೊಂಡಿತ್ತು. ಕೆಲವೇ ಬಾರಿ ಈ ಮಂಡಳಿಯು ಸರ್ಕಾರ ನಡೆಸುವವರಿಗೆ ಮಾರ್ಗದರ್ಶನ ಮಾಡುವ ಪ್ರಯತ್ನ ಮಾಡಿತ್ತು. 2015ರ ಬಿಹಾರ ಚುನಾವಣೆ ಸೋಲಿನ ಬಳಿಕ, ಪತ್ರಿಕಾ ಪ್ರಕಟಣೆಯನ್ನೂ ಹೊರಡಿಸಿತ್ತು. ಆದರೆ, ಅಧಿಕಾರಸ್ಥರು ಹಿರಿಯರ ಮಾರ್ಗದರ್ಶನವನ್ನು ತಣ್ಣಗೇ ತಳ್ಳಿ ಹಾಕಿದ್ದರು. ಅಲ್ಲಿಂದೀಚೆಗೆ ಯಾವ ಮಾರ್ಗದರ್ಶನವನ್ನೂ ಈ ಮಂಡಳಿ ನೀಡಿಲ್ಲ. ಮಂಡಳಿಯ ಸಭೆ ನಡೆದ ಬಗ್ಗೆ ವರದಿಗಳಿಲ್ಲ.

ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ಆನಂದಿಬೆನ್‌ ಪಟೇಲ್‌ ಅವರು ತಮಗೆ 75 ತುಂಬುವುದಕ್ಕೆ ಮೊದಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. 75 ವರ್ಷ ತುಂಬಿದವರು ನಿವೃತ್ತರಾಗಬೇಕು ಎಂಬ ಪಕ್ಷದ ನಿಯಮದ ಕಾರಣ ನೀಡಿಯೇ ಅವರು ರಾಜೀನಾಮೆ ನೀಡಿದ್ದರು. ಹಿರಿಯ ನಾಯಕ ಯಶವಂತ್‌ ಸಿನ್ಹಾ ಅವರು ಈ ಅಲಿಖಿತ ನಿಯಮವನ್ನು ಬಹಿರಂಗವಾಗಿಯೇ ಟೀಕಿಸಿದ್ದರು. ‘ಅಡ್ವಾಣಿ, ಮುರಳಿ ಮನೋಹರ ಜೋಷಿ ಸೇರಿದಂತೆ 75 ವರ್ಷ ತುಂಬಿದ ಹಿರಿಯರು ಚುನಾವಣೆಯಲ್ಲಿ ಸ್ಪರ್ಧಿಸದಂತೆ, ಅವರನ್ನು ಮೂಲೆಗುಂಪು ಮಾಡಲು ‘ಅವರು’ ಇಂಥ ನಿಯಮವೊಂದನ್ನು ಮಾಡಿದ್ದಾರೆ’ ಎಂದಿದ್ದರು. 2014ರಿಂದ ಈಚೆಗೆ ಇದೇ ನಿಯಮದ ಕಾರಣಕ್ಕಾಗಿ, ಬಿಜೆಪಿ ಸರ್ಕಾರವಿದ್ದ ಹಲವು ರಾಜ್ಯಗಳಲ್ಲಿಯೂ ಕೇಂದ್ರ ಸರ್ಕಾರದಲ್ಲಿಯೂ ಸಚಿವ ಸ್ಥಾನ
ದಲ್ಲಿದ್ದ 75 ವರ್ಷ ತುಂಬಿದ ನಾಯಕರು ಸ್ಥಾನ ತ್ಯಜಿಸಿದ್ದರು.

ನರೇಂದ್ರ ಮೋದಿ ಅವರಿಗೆ ಮುಂದಿನ ವರ್ಷ 75 ವರ್ಷ ತುಂಬಲಿದೆ. ಅಮಿತ್‌ ಶಾ ಅವರು ಮುಂದಿನ ಪ್ರಧಾನಿ ಆಗಲಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಗೊಂಡ ಮರುದಿನ ಹೇಳಿಕೆ ನೀಡಿದರು. ಚುನಾವಣೆ ನಡೆಯುತ್ತಿರುವ ಈ ಹೊತ್ತಿನಲ್ಲಿ ಈ ಹೇಳಿಕೆಯು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಸೇರಿದಂತೆ ಹಲವು ನಾಯಕರು ಮೋದಿ ಅವರೇ ಪ್ರಧಾನಿಯಾಗಲಿದ್ದಾರೆ ಎಂದರು. ‘ಬಿಜೆಪಿಯಲ್ಲಿ ಇಂಥದ್ದೊಂದು ನಿಯಮವಿಲ್ಲ’ ಎಂದು ಪತ್ರಿಕಾ
ಗೋಷ್ಠಿಯೊಂದರಲ್ಲಿ ಗೃಹ ಸಚಿವ ಅಮಿತ್ ಶಾ ಅವರು ಹೇಳಿಕೆ ಕೊಟ್ಟರು. ಆದರೆ, 2019ರಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ
ರಾಗಿದ್ದ ಅಮಿತ್‌ ಶಾ ಅವರು ‘ದಿ ವೀಕ್‌’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ, ‘75 ವರ್ಷ ಮೇಲ್ಪಟ್ಟ ಯಾರಿಗೂ ಈ ಬಾರಿ ಟಿಕೆಟ್‌ ನೀಡಲಾಗಿಲ್ಲ. ಇದು ಪಕ್ಷದ ನಿರ್ಧಾರ’ ಎಂದಿದ್ದರು.

⇒ಆಧಾರ: ಪಿಟಿಐ

ಎಲ್‌.ಕೆ. ಅಡ್ವಾಣಿ

ಎಲ್‌.ಕೆ. ಅಡ್ವಾಣಿ

ಎಲ್‌.ಕೆ. ಅಡ್ವಾಣಿ

ಬಿಜೆಪಿ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದವರು ಅಡ್ವಾಣಿ. ಎರಡೇ ಸ್ಥಾನಗಳಿಂದ ಆರಂಭವಾಗಿ ಬಿಜೆಪಿಯು ಕೇಂದ್ರದಲ್ಲಿ ಅಧಿಕಾರಕ್ಕೇರುವವರೆಗೂ ಪಕ್ಷಕ್ಕೆ ಅಡ್ವಾಣಿಯವರ ಕೊಡುಗೆ ಅಪಾರವಿತ್ತು. ‘ಮಾರ್ಗದರ್ಶಕ ಮಂಡಳಿ’ಗೆ ಸೇರಿಸಲಾದ ಮೊದಲ ನಾಯಕರೂ ಇವರೇ. ಮಂಡಳಿಗೆ ಸೇರಿದ 10 ವರ್ಷಗಳ ಬಳಿಕ, ಅವರಿಗೆ ಕೇಂದ್ರವು ‘ಭಾರತ ರತ್ನ’ವನ್ನೂ ನೀಡಿದೆ. ಈಗಲೂ ಅಡ್ವಾಣಿ ಅವರು ಮಾರ್ಗದರ್ಶಕ ಮಂಡಳಿಯ ಸದಸ್ಯರೇ ಆಗಿದ್ದಾರೆ.

2014ರಲ್ಲಿ ಅಡ್ವಾಣಿ ಅವರೇ ಪ್ರಧಾನಿ ಅಭ್ಯರ್ಥಿ ಎಂಬಂಥ ಮಾತುಗಳು ಆರಂಭವಾಗಿದ್ದವು. ಆದರೆ, ಗುಜರಾತ್‌ನ ಮುಖ್ಯಮಂತ್ರಿ ಯಾಗಿದ್ದ ನರೇಂದ್ರ ಮೋದಿ ಅವರನ್ನು ಕ್ಷಿಪ್ರ ಬೆಳವಣಿಗೆಯಲ್ಲಿ ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಲಾಯಿತು. ಬಿಜೆಪಿಯಲ್ಲಿ ಅದಾಗಲೇ ಅಡ್ವಾಣಿ ಪಾಳಯ ಹಾಗೂ ಮೋದಿ ಪಾಳಯ ಎಂಬ ಎರಡು ಭಾಗಗಳಾಗಿದ್ದವು. ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಲೇ ಬಿಜೆಪಿಯ ಸಂಸದೀಯ ಸಮಿತಿಯ ರಚನೆಯಾಯಿತು. ಈ ಸಮಿತಿಯಿಂದ ಅಡ್ವಾಣಿ ಹಾಗೂ ಅಟಲ್‌ ಬಿಹಾರಿ ವಾಜಪೇಯಿ, ಮುರಳಿ ಮನೋಹರ ಜೋಷಿ ಅವರನ್ನು ಕೈಬಿಡಲಾಯಿತು. 2014ರಲ್ಲಿ ಅಡ್ವಾಣಿ ಅವರು ಗುಜರಾತ್‌ನ ಗಾಂಧಿನಗರ ಲೋಕಸಭಾ ಕ್ಷೇತ್ರದಿಂದ ಚುನಾಯಿತರಾಗಿದ್ದರು. ತಾವೇ ಖುದ್ದು ನಿಂತು ಗೆಲ್ಲಿಸಿ ಕೊಡುವುದಾಗಿ ಮೋದಿ ಅವರು ಪಣವನ್ನೂ ತೊಟ್ಟಿದ್ದರು. ಅಡ್ವಾಣಿಯವರ ‘ನಿವೃತ್ತಿ’ಯ ನಂತರ ಗಾಂಧಿನಗರ ಲೋಕಸಭಾ ಕ್ಷೇತ್ರವು ಅಮಿತ್‌ ಶಾ ಅವರ ಪಾಲಾಯಿತು.

ಮುರಳಿ ಮನೋಹರ ಜೋಷಿ

ಮುರಳಿ ಮನೋಹರ ಜೋಷಿ

ಮುರಳಿ ಮನೋಹರ ಜೋಷಿ

ಬಿಜೆಪಿ ಸ್ಥಾಪಕರಲ್ಲಿ ಜೋಷಿ ಅವರೂ ಒಬ್ಬರು. ಮಾರ್ಗದರ್ಶಕ ಮಂಡಳಿಯ ಸದಸ್ಯ. ವಾರಾಣಸಿಯು ಜೋಷಿ ಅವರ ಕ್ಷೇತ್ರವಾಗಿತ್ತು. 2014ರಲ್ಲಿ ಮೋದಿ ಅವರಿಗಾಗಿ ಜೋಷಿ ಅವರು ಈ ಕ್ಷೇತ್ರವನ್ನು ಬಿಟ್ಟುಕೊಟ್ಟರು. ನಂತರ, ಕಾನ್ಪುರದಿಂದ ಸ್ಪರ್ಧಿಸಿ ಶೇ 57ರಷ್ಟು ಮತಗಳನ್ನು ಗಳಿಸಿ, ಗೆಲುವು ಸಾಧಿಸಿದ್ದರು. ಆದರೆ, 2019ರಲ್ಲಿ ಅವರಿಗೆ ಟಿಕೆಟ್‌ ನಿರಾಕರಿಸಲಾಯಿತು.

‘ನೀವಾಗಿಯೇ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದುಬಿಡಿ. ಪಕ್ಷವೇ ಈ ತೀರ್ಮಾನ ತೆಗೆದುಕೊಂಡರೆ, ಪಕ್ಷಕ್ಕೆ ಮುಜುಗರವಾಗಲಿದೆ’ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿಯೊಬ್ಬರು ಜೋಷಿ ಅವರಲ್ಲಿ ಮನವಿ ಮಾಡಿದ್ದರು ಎಂಬ ವದಂತಿಗಳು ಆಗ ಜೋರಾಗಿಯೇ ಹರಿದಾಡಿದ್ದವು. ಈ ಬಗ್ಗೆ ಜೋಷಿ ಅವರು ಅಸಮಾಧಾನವನ್ನೂ ಹೊರಹಾಕಿದ್ದರು ಎನ್ನಲಾಗಿತ್ತು. ಜೋಷಿ ಅವರು ಅಂದಾಜು ಸಮಿತಿಯ ಮುಖ್ಯಸ್ಥರಾಗಿದ್ದರು. ತಮ್ಮ ವರದಿಗಳ ಮೂಲಕ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಮುಜುಗರಕ್ಕೂ ತಳ್ಳಿದ್ದರು. ರಕ್ಷಣಾ ಸನ್ನದ್ಧತೆ, ಗಂಗಾ ಸ್ವಚ್ಛತೆ ಹಾಗೂ ಬ್ಯಾಂಕುಗಳ ವಸೂಲಾಗದ ಸಾಲಗಳ ಬಗ್ಗೆ ವರದಿ ನೀಡಿದ್ದರು.

ಯಶವಂತ್‌ ಸಿನ್ಹಾ

‘...ಚುನಾವಣಾ ರಾಜಕಾರಣವನ್ನು ಸರಿಯಾದ ಸಮಯಕ್ಕೆ ಪ್ರವೇಶಿಸಬೇಕು, ಅಲ್ಲಿಂದ ಸರಿಯಾದ ಸಮಯಕ್ಕೆ ನಿರ್ಗಮಿಸಬೇಕು’ ಎಂದವರು ಬಿಜೆಪಿಯ ಹಿರಿಯ ನಾಯಕ, ವಾಜಪೇಯಿ ಅವರ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದ ಯಶವಂತ್‌ ಸಿನ್ಹಾ. ತಾವು ಯಾಕೆ
ಸ್ಪರ್ಧಿಸುತ್ತಿಲ್ಲ ಎನ್ನುವ ಕುರಿತು 2014ರಲ್ಲಿ ಸಿನ್ಹಾ ಅವರು ಪತ್ರವೊಂದನ್ನು ಬರೆದಿದ್ದರು. ಮೇಲಿರುವುದು ಈ ಪತ್ರದಲ್ಲಿನ ಸಾಲುಗಳು. ಅವರನ್ನು ಅದಾಗಲೇ ಮಾರ್ಗದರ್ಶಕ ಮಂಡಳಿಗೆ ಸೇರಿಸಲಾಗಿತ್ತು.

ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದ್ದನ್ನು ಸಿನ್ಹಾ ವಿರೋಧಿಸಿದ್ದರು. ಸರ್ಕಾರ ರಚನೆಯಾದ ಬಳಿಕವೂ ಸಿನ್ಹಾ ಅವರು ಸರ್ಕಾರದ, ಪಕ್ಷದ ಕಟು ವಿಮರ್ಶಕರಾಗಿದ್ದರು. ಇದೇ ಕಾರಣಕ್ಕೆ ಪಕ್ಷವು ಅವರನ್ನು ದೂರವೇ ಇಟ್ಟಿತ್ತು. ‘ಪಕ್ಷವನ್ನು ಬಿಟ್ಟು ಹೋಗಿ’ ಎಂದೂ ಹಲವು ನಾಯಕರು ಸಿನ್ಹಾ ಅವರಿಗೆ ಹೇಳಿದ್ದರು. ‘75 ವರ್ಷ ತುಂಬಿದ ಎಲ್ಲರ ಮಿದುಳು 2014ರ ಮೇ 26ರಂದು (ಮೋದಿ ಅವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ದಿನ) ನಿಷ್ಕ್ರಿಯವಾದವು’ ಎಂದಿದ್ದರು ಅವರು. 2018ರಲ್ಲಿ ಅವರು ಬಿಜೆಪಿಯನ್ನು ತೊರೆದರು.

ಶಾಂತ ಕುಮಾರ್‌

ಹಿಮಾಚಲ ಪ್ರದೇಶದ ಪ್ರಭಾವಿ ರಾಜಕಾರಣಿ. ಶಾಂತ ಕುಮಾರ್‌ ಅವರು ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದವರು. 2014ರ ಲೋಕಸಭಾ ಚುನಾವಣೆಯಲ್ಲಿ ಸುಮಾರು 1.70 ಲಕ್ಷ ಮತಗಳಿಂದ ಕಾಂಗ್ರೆಸ್‌ ವಿರುದ್ಧ ಗೆಲುವು ಸಾಧಿಸಿದ್ದರು. ಆದರೂ 2019ರ ಲೋಕಸಭಾ ಚುನಾವಣೆಯಲ್ಲಿ ಅವರಿಗೆ ಟಿಕೆಟ್‌ ನಿರಾಕರಿಸಲಾಯಿತು. ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡಿದಾಗ ಪಟ್ಟಿಯಲ್ಲಿ ಅವರ ಹೆಸರು ಇರಲಿಲ್ಲ. ಬಳಿಕ, ತಾವು ಚುನಾವಣಾ ರಾಜಕಾರಣದಿಂದ ದೂರ ಸರಿಯುವುದಾಗಿ ಅವರು ಹೇಳಿದರು. ‘ಇತ್ತೀಚಿನ ರಾಜಕಾರಣವು ಹದಗೆಟ್ಟಿದೆ. ಇದಕ್ಕೆ ಬಿಜೆಪಿಯೂ ಹೊರತಾಗಿಲ್ಲ. ರಾಮಮಂದಿರವನ್ನು ನಿರ್ಮಿಸಿದರೆ ಸಾಲದು, ಇದು ಸಹಾಯವಾಗದು. ನಾವು ರಾಮನ ಆದರ್ಶಗಳನ್ನು ಪಾಲಿಸಬೇಕು’ ಎಂದು ಇತ್ತೀಚೆಗೆ ಹೇಳಿಕೆ ನೀಡಿದ್ದಾರೆ.

ಸುಮಿತ್ರಾ ಮಹಾಜನ್‌

ಸುಮಿತ್ರಾ ಮಹಾಜನ್‌

ಸುಮಿತ್ರಾ ಮಹಾಜನ್‌

‘ಹಿರಿಯಕ್ಕ’ ಎಂದೇ ಪ್ರಸಿದ್ಧರಾದವರು ಸುಮಿತ್ರಾ ಮಹಾಜನ್‌. ಮಧ್ಯ ಪ್ರದೇಶದ ಇಂದೋರ್‌ನಿಂದ ಎಂಟು ಬಾರಿ ಸಂಸದೆಯಾಗಿ ಆಯ್ಕೆಯಾದವರು. 2014ರಲ್ಲಿ ಅವರನ್ನು ಲೋಕಸಭೆಯ ಸ್ಪೀಕರ್‌ ಆಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು. 2019ರ ಲೋಕಸಭಾ ಚುನಾವಣೆಗೆ ಇಂದೋರ್‌ನ ಅಭ್ಯರ್ಥಿಯ ಪಟ್ಟಿಯನ್ನು ಪಕ್ಷ ಬಿಡುಗಡೆ ಮಾಡಲೇ ಇಲ್ಲ. ಅದಾಗಲೇ 75 ವರ್ಷ ತುಂಬಿದವರಿಗೆ ಟಿಕೆಟ್‌ ಇಲ್ಲ ಎನ್ನುವ ಪಕ್ಷದ ನಿರ್ಧಾರ ಹೊರಬಿದ್ದಿತ್ತು. ಇದನ್ನು ಗಮನಿಸಿದ ಸುಮಿತ್ರಾ ಅವರು ಪತ್ರವೊಂದನ್ನು ಬರೆದು, ತಾವು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದಿದ್ದರು. ‘ಪಕ್ಷವು ಇಲ್ಲಿಯವರೆಗೂ ಅಭ್ಯರ್ಥಿಯನ್ನು ಘೋಷಿಸಿಲ್ಲ. ಯಾಕೆ ಈವರೆಗೂ ನಿರ್ಧಾರ ಮಾಡಲಾಗಿಲ್ಲ? ನಿರ್ಧಾರ ತಿಳಿಸಲು ಪಕ್ಷವು ಹಿಂಜರಿಯುತ್ತಿದೆಯೇ? ನಾನೇ ಘೋಷಿಸಿಸುತ್ತೇನೆ. ನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ. 75 ವರ್ಷ ತುಂಬಿದವರಿಗೆ ಟಿಕೆಟ್‌ ಇಲ್ಲ ಎನ್ನಲಾಗುತ್ತಿದೆ. ಈಗ ಪಕ್ಷವು ತನ್ನ ನಿರ್ಧಾರ ಪ್ರಕಟಿಸಲು ಸ್ವತಂತ್ರವಾಗಿದೆ’ ಎಂದಿದ್ದರು. ಈ ಬಾರಿ, ಇಂದೋರ್‌ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯು ಕೊನೇ ಕ್ಷಣದಲ್ಲಿ ತಮ್ಮ ನಾಮಪತ್ರವನ್ನು ವಾಪಸ್‌ ಪಡೆದು, ನಂತರ ಬಿಜೆಪಿ ಸೇರಿಕೊಂಡರು. ಈ ಬಗ್ಗೆ ಪ್ರತಿಕ್ರಿಯಿಸಿದ ಸುಮಿತ್ರಾ ಅವರು, ‘ಇದು ಅನ್ಯಾಯ. ತಮ್ಮ ಸಂಸದ ಯಾರು ಆಗಬೇಕು ಎನ್ನುವ ನಿರ್ಧಾರ ತೆಗೆದುಕೊಳ್ಳುವ ಹಕ್ಕು ಮತದಾರನಿಗೆ ಇದೆ’ ಎಂದಿದ್ದರು.

ಬಿ.ಎಸ್‌. ಯಡಿಯೂರಪ್ಪ

ಬಿ.ಎಸ್‌. ಯಡಿಯೂರಪ್ಪ

ಬಿ.ಎಸ್‌. ಯಡಿಯೂರಪ್ಪ

2019ರ ಜುಲೈನಲ್ಲಿ ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿದ್ದ ಬಿ.ಎಸ್‌. ಯಡಿಯೂರಪ್ಪ ಅವರನ್ನು ವಯಸ್ಸಿನ ಕಾರಣ ಮುಂದಿಟ್ಟು 2021ರ ಜುಲೈನಲ್ಲಿ ಅಧಿಕಾರದಿಂದ ಕೆಳಕ್ಕಿಳಿಸಲಾಯಿತು. ಬಿಜೆಪಿ ಹೈಕಮಾಂಡ್‌ನ ಆದೇಶದಂತೆ ಅಧಿಕಾರ ತ್ಯಜಿಸಿದ್ದ ಯಡಿಯೂರಪ್ಪ, ‘75 ವರ್ಷವಾದ ನಂತರವೂ ಎರಡು ವರ್ಷ ಮುಖ್ಯಮಂತ್ರಿ ಹುದ್ದೆಯಲ್ಲಿರಲು ಅವಕಾಶ ನೀಡಿದ ಬಿಜೆಪಿ ಹೈಕಮಾಂಡ್‌ಗೆ ಆಭಾರಿ’ ಎಂದಿದ್ದರು.

ಯಡಿಯೂರಪ್ಪ ಅವರನ್ನು 2021ರಲ್ಲಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಕ್ಕಿಳಿಸಿ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡಿದರೂ ಪಕ್ಷಕ್ಕೆ ರಾಜಕೀಯವಾಗಿ ಅನುಕೂಲ ಆಗಲಿಲ್ಲ. ಲಿಂಗಾಯತ ಸಮುದಾಯದ ವರ್ಚಸ್ವಿ ನಾಯಕ ಎಂಬ ಕಾರಣಕ್ಕಾಗಿ ಮತ್ತೆ ಯಡಿಯೂರಪ್ಪ ಅವರನ್ನು ಮುನ್ನೆಲೆಗೆ ತರಲು ಯತ್ನಿಸಿದ ಬಿಜೆಪಿ, ಅವರಿಗೆ ಪಕ್ಷದ ಸಂಸದೀಯ ಮಂಡಳಿ ಸದಸ್ಯ ಸ್ಥಾನ ನೀಡಿತು.

ಕಲ್‌ರಾಜ್‌ ಮಿಶ್ರಾ

75 ವರ್ಷ ತುಂಬಿದ ಬಳಿಕವೂ ಕೇಂದ್ರದಲ್ಲಿ ಸಚಿವರಾಗಿದ್ದ ಕಲ್‌ರಾಜ್‌ ಮಿಶ್ರಾ ಅವರನ್ನು ಮಾತ್ರ ಸಂಪುಟದಲ್ಲಿ ಮುಂದುವರಿಸಲಾಗಿತ್ತು. 2017ರಲ್ಲಿ ಉತ್ತರ ಪ್ರದೇಶದಲ್ಲಿ ವಿಧಾನಸಭೆಗೆ ಚುನಾವಣೆ ನಡೆಯುವುದರಲ್ಲಿತ್ತು. ಇಲ್ಲಿನ ಪ್ರಭಾವಿ ನಾಯಕರಾಗಿದ್ದ ಕಾರಣಕ್ಕಾಗಿಯೇ ಅವರನ್ನು ಉಳಿಸಿಕೊಳ್ಳ
ಲಾಗಿದೆ ಎನ್ನಲಾಗಿತ್ತು. ನಿಮಗೆ 75 ವರ್ಷ ತುಂಬಿದೆ. ಆದರೂ ನೀವೇಕೆ ಇನ್ನು ರಾಜೀನಾಮೆ ನೀಡಿಲ್ಲ ಎಂದು ಪತ್ರಕರ್ತರು ಒಮ್ಮೆ ಮಿಶ್ರಾ ಅವರಿಗೆ ಪ್ರಶ್ನೆ ಕೇಳಿದ್ದರು. ಇದಕ್ಕೆ ಉತ್ತರಿಸಿದ್ದ ಅವರು, ಪಕ್ಷದಲ್ಲಿ ಇಂಥದ್ದೊಂದು ನಿಯಮ ಇರುವ ಬಗ್ಗೆಯೇ ಮಾಹಿತಿ ಇರಲಿಲ್ಲ ಎಂದಿದ್ದರು. ನಂತರ, ಉತ್ತರ ಪ್ರದೇಶದ ಚುನಾವಣೆ ಮುಗಿದ ಬಳಿಕ ರಾಜೀನಾಮೆ ನೀಡಿದ್ದರು. ‘ಚುನಾವಣೆಗೂ ಮೊದಲೇ ರಾಜೀನಾಮೆ ನೀಡಲು ಸಿದ್ಧನಿದ್ದೆ’ ಎಂದು ರಾಜೀನಾಮೆ ನೀಡುವ ಸಂದರ್ಭದಲ್ಲಿ ಹೇಳಿದ್ದರು. ಈಗ ಮಿಶ್ರಾ ಅವರು ರಾಜಸ್ಥಾನದ ರಾಜ್ಯಪಾಲರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT