ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ಆಳ–ಅಗಲ | ಸಂಗಾತಿ ಹಂತಕರ ಮನಃಸ್ಥಿತಿ: ಆಕ್ರಮಣಕಾರಿ ವರ್ತನೆಗೆ ಕೀಳರಿಮೆಯೇ ಕಾರಣ
ಆಳ–ಅಗಲ | ಸಂಗಾತಿ ಹಂತಕರ ಮನಃಸ್ಥಿತಿ: ಆಕ್ರಮಣಕಾರಿ ವರ್ತನೆಗೆ ಕೀಳರಿಮೆಯೇ ಕಾರಣ
Published 12 ಜೂನ್ 2023, 19:00 IST
Last Updated 12 ಜೂನ್ 2023, 19:00 IST
ಅಕ್ಷರ ಗಾತ್ರ

ವ್ಯಕ್ತಿಗಳು ತಮ್ಮ ಸಂಗಾತಿಯನ್ನು ಕೊಂದು, ದೇಹವನ್ನು ಕತ್ತರಿಸಿ ಇಟ್ಟ ಹಲವು ಪ್ರಕರಣಗಳು ದೇಶದಲ್ಲಿ ಈಚೆಗೆ ವರದಿಯಾಗಿವೆ. ದೆಹಲಿಯಲ್ಲಿ ಆಫ್ತಾಬ್‌ ಪೂನಾವಾಲಾ ತನ್ನ ಸಹಜೀವನ ಸಂಗಾತಿ ಶ್ರದ್ಧಾ ವಾಲ್ಕರ್ ಅವರನ್ನು ಹತ್ಯೆ ಮಾಡಿದ್ದ ಕೃತ್ಯವು ದೇಶದಾದ್ಯಂತ ಹೆಚ್ಚು ಸುದ್ದಿಯಾಗಿತ್ತು. ಈ ಇಬ್ಬರೂ ಭಿನ್ನ ಧರ್ಮಕ್ಕೆ ಸೇರಿದವರು ಎಂಬ ಕಾರಣದಿಂದಲೇ, ಈ ಸುದ್ದಿ ಹೆಚ್ಚು ಸದ್ದು ಮಾಡಿತ್ತು. ಆದರೆ ಆನಂತರ ನಡೆದ ಇಂತಹ ಹಲವು ಪ್ರಕರಣಗಳಲ್ಲಿ ಸಂಗಾತಿಗಳಿಬ್ಬರೂ ಒಂದೇ ಧರ್ಮದವರಾಗಿದ್ದರು. ಈಚೆಗೆ ಮುಂಬೈನಲ್ಲಿ ಪತ್ತೆಯಾದ ಇಂಥದ್ದೇ ಪ್ರಕರಣದಲ್ಲಿ ಸಂತ್ರಸ್ತೆ ಮತ್ತು ಆರೋಪಿ ಇಬ್ಬರೂ ಒಂದೇ ಧರ್ಮದವರಾಗಿದ್ದರು. ಇಂತಹ ಕೃತ್ಯಗಳಿಗೂ ಧರ್ಮಕ್ಕೂ ಸಂಬಂಧವಿಲ್ಲ, ಬದಲಿಗೆ ವ್ಯಕ್ತಿಯ ಸಾಮಾಜೀಕರಣ ಮತ್ತು ಮಾನಸಿಕ ಆರೋಗ್ಯದ ಸ್ಥಿತಿ ಇಂತಹ ಕೃತ್ಯಗಳಿಗೆ ಕಾರಣವಾಗುತ್ತವೆ ಎಂಬುದರತ್ತ ಹಲವು ಅಧ್ಯಯನ ವರದಿಗಳು ಬೆಳಕು ಚೆಲ್ಲಿವೆ.

ಅಮೆರಿಕ, ಬ್ರಿಟನ್‌, ಜರ್ಮನಿ, ಪೋಲೆಂಡ್‌ನಲ್ಲಿ ಇಂತಹ ಪ್ರಕರಣಗಳ ಬಗ್ಗೆ ಕೂಲಂಕಷವಾದ ಅಧ್ಯಯನಗಳು ನಡೆದಿವೆ. ಭಾರತದಲ್ಲಿ ಸಮಗ್ರವಾದ ಅಧ್ಯಯನಗಳು ನಡೆದಿಲ್ಲವಾದರೂ, ಭಾರತೀಯ ಮನೋವಿಜ್ಞಾನಿಗಳು ಇಂತಹ ಅಧ್ಯಯನಗಳಲ್ಲಿ ಭಾಗಿಯಾಗಿದ್ದಾರೆ.

ಭಾರತದಲ್ಲಿ ಎಲ್ಲಾ ಸ್ವರೂಪದ ಅಪರಾಧ ಕೃತ್ಯಗಳನ್ನು ‘ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ–ಎನ್‌ಸಿಆರ್‌ಬಿ’ ದಾಖಲಿಸುತ್ತದೆ. ಎನ್‌ಸಿಆರ್‌ಬಿ ಈವರೆಗೆ ದಾಖಲಿಸಿದ ಹತ್ಯೆಗಳಲ್ಲಿ, ಅವುಗಳನ್ನು ವರ್ಗೀಕರಿಸಿಲ್ಲ. ವ್ಯಾಜ್ಯ–ಸಂಘರ್ಷ, ಹಣಕಾಸು–ಸ್ವತ್ತಿನ ಲಾಭಕ್ಕಾಗಿ ನಡೆದವು ಎಂದಷ್ಟೇ ಎನ್‌ಸಿಆರ್‌ಬಿ ಈ ಹತ್ಯೆಗಳನ್ನು ವರ್ಗೀಕರಿಸುತ್ತದೆ. ಹತ್ಯೆ ಮತ್ತು ದೇಹವನ್ನು ಕತ್ತರಿಸುವ ಕೃತ್ಯಗಳು ದೇಶದಲ್ಲಿ ಈ ಹಿಂದೆಯೂ ನಡೆದಿವೆ. ಆದರೆ, ಅವುಗಳನ್ನು ಎನ್‌ಸಿಆರ್‌ಬಿ ಪ್ರತ್ಯೇಕವಾಗಿ ವರ್ಗೀಕರಿಸಿಲ್ಲ. ಹೀಗಾಗಿ ದೇಶದಲ್ಲಿ ನಡೆದ ಇಂತಹ ಕೃತ್ಯಗಳ ಸಂಖ್ಯೆಯ ಮಾಹಿತಿ ಲಭ್ಯವಿಲ್ಲ.

ಪೋಲೆಂಡ್‌ ಮತ್ತು ಜರ್ಮನಿಯಲ್ಲಿ ನಡೆದ ಇಂತಹ ಕೃತ್ಯಗಳನ್ನು ಮನೋವಿಜ್ಞಾನಿಗಳು ಕೂಲಂಕಷವಾಗಿ ಅಧ್ಯಯನ ಮಾಡಿದ್ದಾರೆ. ಈ ರೀತಿಯ ಕೃತ್ಯಗಳಲ್ಲಿ ಶೇ 76ರಷ್ಟು ಪ್ರಕರಣಗಳಲ್ಲಿ ಸಂತ್ರಸ್ತರು ಮಹಿಳೆಯರೇ ಆಗಿರುತ್ತಾರೆ. ಭಾರತದ ಸಂದರ್ಭದಲ್ಲಿ ನಡೆದ ಕೃತ್ಯಗಳಲ್ಲೂ ಪರಿಸ್ಥಿತಿ ಸರಿಸುಮಾರು ಇದೇ ರೀತಿ ಇದೆ ಎಂಬುದು ಐಇಎಸ್‌ಆರ್‌ಎಫ್‌ ನಡೆಸಿದ ಅಧ್ಯಯನ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಪುರುಷರು ಇಂತಹ ಕೃತ್ಯಗಳನ್ನು ಎಸಗಿದ ಬಹುತೇಕ ಪ್ರಕರಣಗಳಲ್ಲಿ, ಸಂಗಾತಿಯ ಮೇಲೆ ಪಾರಮ್ಯ ಸಾಧಿಸುವ ಉದ್ದೇಶ ಹೊಂದಿದ್ದರು. ಪುರುಷನು ಇಂತಹ ಕೃತ್ಯಗಳನ್ನು ಎಸಗಿದ ಪ್ರಕರಣಗಳನ್ನು ಈ ಅಧ್ಯಯನಗಳಲ್ಲಿ ವಿಶೇಷವಾಗಿ ಗಮನಿಸಲಾಗಿದೆ. ಇಂತಹ ಕೃತ್ಯ ಎಸಗಿದವರಲ್ಲಿ ಯಾರೊಂದಿಗೂ ಹೆಚ್ಚು ಬೆರೆಯದ, ಕೀಳರಿಮೆ ಹೊಂದಿರುವ ಪುರುಷರ ಪ್ರಮಾಣವೇ ಹೆಚ್ಚು. ಬಹುತೇಕ ಸಂದರ್ಭದಗಳಲ್ಲಿ ಈ ಕೃತ್ಯ ಎಸಗಿದ ಪುರುಷ ನಿರುದ್ಯೋಗಿ ಆಗಿರುತ್ತಾನೆ ಮತ್ತು ಜೀವನಕ್ಕಾಗಿ ತನ್ನ ಸಂಗಾತಿಯ ದುಡಿಮೆಯನ್ನೇ ಅವಲಂಬಿಸಿರುತ್ತಾನೆ. ಇದು ಆತನ ಕೀಳರಿಮೆಯನ್ನು ಇನ್ನಷ್ಟು ಹೆಚ್ಚಿಸಿರುತ್ತದೆ. ತನ್ನ ಹೆಂಡತಿ ಅಥವಾ ಸಹಜೀವನ ಸಂಗಾತಿಯ ಮೇಲೆ ಹಿಡಿತ ಸಾಧಿಸುವ ಮೂಲಕ ಆತ ಆ ಕೀಳರಿಮೆಯಿಂದ ಹೊರಗೆ ಬರಲು ಯತ್ನಿಸುತ್ತಾನೆ ಎಂಬುದನ್ನು ಈ ಅಧ್ಯಯನಗಳಲ್ಲಿ ಕಂಡುಕೊಳ್ಳಲಾಗಿದೆ.

ಸಂಗಾತಿಯ ಮೇಲೆ ಪಾರಮ್ಯ ಸಾಧಿಸುವ ಕಾರಣದಿಂದಲೇ ಅಂತಹ ಸಂಬಂಧಗಳಲ್ಲಿ ಬಿರುಕು ಉಂಟಾಗಿರುತ್ತದೆ. ಯಾವುದೋ ಒಂದು ಜಗಳ ಅಥವಾ ಸಂಘರ್ಷದ ಹಂತದಲ್ಲಿ ಹತ್ಯೆ ನಡೆದುಹೋಗುತ್ತದೆ. ಕೃತ್ಯ ಅಲ್ಲಿಗೇ ನಿಂತು ಹೋದರೆ, ಅದು ಸಾಮಾನ್ಯ ಹತ್ಯೆ ಪ್ರಕರಣವಷ್ಟೇ ಆಗುತ್ತದೆ. ಆದರೆ, ಕೊಲೆಯಾದ ವ್ಯಕ್ತಿಯ ದೇಹವನ್ನು ವಿಲೇವಾರಿ ಮಾಡುವ ರೀತಿಯೇ ಇಂತಹ ಪ್ರಕರಣಗಳನ್ನು ಭೀಕರವಾಗಿಸುತ್ತವೆ ಎಂಬುದನ್ನು ಈ ಅಧ್ಯಯನ ವರದಿಗಳು ವಿವರಿಸುತ್ತವೆ.

ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ವ್ಯಕ್ತಿಯೊಬ್ಬ ತಾನೇ ಕೊಲೆ ಮಾಡಿದ ಸಂತ್ರಸ್ತ/ಸಂತ್ರಸ್ತೆಯ ದೇಹವನ್ನು ತುಂಡರಿಸುವ ಕೃತ್ಯವನ್ನು ‘ಡಿಸ್‌ಮೆಂಬರಿಂಗ್‌ ಕಿಲ್ಲಿಂಗ್‌’ ಎಂದು ಕರೆಯಲಾಗುತ್ತದೆ. ಡಿಸ್‌ಮೆಂಬರಿಂಗ್‌ ಎಂದರೆ ದೇಹದ ಭಾಗಗಳನ್ನು ತುಂಡರಿಸುವುದು ಎಂದರ್ಥ. ಆದರೆ ಆರೋಪಿಯು ಅಥವಾ ಅಪರಾಧಿಯು ಸತ್ತವರ ದೇಹವನ್ನು ಏಕೆ ತುಂಡರಿಸಿದ ಎಂಬುದನ್ನು ವಿವರಿಸಲು ಅಪರಾಧಶಾಸ್ತ್ರದಲ್ಲಿ ಒತ್ತು ನೀಡಲಾಗುತ್ತದೆ. ಈ ಹಂತದಲ್ಲಿ ಆರೋಪಿ ಅಥವಾ ಅಪರಾಧಿಯ ಮನಃಸ್ಥಿತಿ ಏನಾಗಿತ್ತು ಎಂಬುದರತ್ತ ಈ ಪರಿಶೀಲನೆ ಗಮನ ಕೇಂದ್ರೀಕರಿಸುತ್ತದೆ. ಹೀಗೆ ತಾನೇ ಕೊಂದ ವ್ಯಕ್ತಿಯ ದೇಹವನ್ನು ತುಂಡರಿಸುವ ಕೃತ್ಯಗಳನ್ನು ಮುಖ್ಯವಾಗಿ ‘ರಕ್ಷಣಾತ್ಮಕ ಮತ್ತು ಆಕ್ರಮಣಕಾರಿ’ ಎಂದು ವರ್ಗೀಕರಿಸಲಾಗಿದೆ. ಇದಲ್ಲದೆ, ವಾಮಾಚಾರ ಮತ್ತು ಅತೀಂದ್ರಿಯ ಶಕ್ತಿಸಾಧನೆಗಾಗಿ ನಡೆಸುವ ಇಂತಹ ಕೃತ್ಯಗಳನ್ನು ‘ನೆಕ್‌ರೊಮ್ಯಾಂಟಿಕ್‌’ ಎಂದು ಕರೆಯಲಾಗಿದೆ.

ವ್ಯಕ್ತಿ ತಾನು ಕೊಂದ ಸಂತ್ರಸ್ತ/ಸಂತ್ರಸ್ತೆಯ ದೇಹವನ್ನು ಬಚ್ಚಿಡುವ ಅಥವಾ ಸಾಕ್ಷ್ಯ ನಾಶ ಮಾಡುವ ಉದ್ದೇಶದಿಂದ ಕತ್ತರಿಸುವುದನ್ನು ರಕ್ಷಣಾತ್ಮಕ ಕೃತ್ಯ ಎಂದು ವರ್ಗೀಕರಿಸಲಾಗುತ್ತದೆ. ಸಂತ್ರಸ್ತ ಅಥವಾ ಸಂತ್ರಸ್ತೆಯ ಮೇಲಿನ ಆಕ್ರೋಶ ಕಡಿಮೆ ಮಾಡಿಕೊಳ್ಳುವ ಉದ್ದೇಶದಿಂದ ದೇಹವನ್ನು ಕತ್ತರಿಸಿದರೆ, ಅದನ್ನು ಆಕ್ರಮಣಕಾರಿ ಕೃತ್ಯ ಎಂದು ಪರಿಗಣಿಸಲಾಗುತ್ತದೆ. ಭಾರತದಲ್ಲಿ ಎರಡೂ ರೀತಿಯ ಕೃತ್ಯಗಳು ವರದಿಯಾಗಿವೆ. ವಾಮಾಚಾರಕ್ಕಾಗಿ ನಡೆಸಿದ ಇಂತಹ ಕೃತ್ಯಗಳೂ ವರದಿಯಾಗಿವೆ. ಆದರೆ, ಕೃತ್ಯದ ಭೀಕರತೆಯ ಕಾರಣಕ್ಕಾಗಿ ಇಂತಹ ಪ್ರಕರಣಗಳು ಹೆಚ್ಚು ಸುದ್ದಿಯಾಗುತ್ತವೆ ಎಂದು ಈ ಅಧ್ಯಯನ ವರದಿಗಳಲ್ಲಿ ವಿಶ್ಲೇಷಿಸಲಾಗಿದೆ.

ಮಾಧ್ಯಮ ವರದಿಗಳು ಕಾರಣವೇ?

ಇಂತಹ ಒಂದು ಕೃತ್ಯ ವರದಿಯಾದರೆ, ಅದರ ಬೆನ್ನಲ್ಲೇ ಅಂತಹ ಹಲವು ಕೃತ್ಯಗಳು ವರದಿಯಾಗುತ್ತವೆ. ಶ್ರದ್ಧಾ ವಾಲ್ಕರ್ ಹತ್ಯೆ ಪ್ರಕರಣವನ್ನು ಮಾಧ್ಯಮಗಳು ದೀರ್ಘಕಾಲದವರೆಗೆ ವರದಿ ಮಾಡಿದ್ದವು. ಆ ಕಾರಣದಿಂದಲೇ ಇಂತಹ ಹಲವು ಕೃತ್ಯಗಳು ದೇಶದಾದ್ಯಂತ ಮರುಕಳಿಸಿದವು ಎಂಬ ಪ್ರತಿಪಾದನೆ ಇದೆ. ಆದರೆ, ಈ ಅಧ್ಯಯನಗಳಲ್ಲಿ ಬೇರೆಯದ್ದೇ ಅಂಶವು ಪತ್ತೆಯಾಗಿದೆ.

ಮಾಧ್ಯಮಗಳಲ್ಲಿ ಈ ರೀತಿಯ ಕೃತ್ಯಗಳನ್ನು ಹೆಚ್ಚು ಪ್ರಸಾರ ಮಾಡುವುದರಿಂದ ಅಥವಾ ವರದಿ ಮಾಡುವುದರಿಂದ ಅಂತಹ ಕೃತ್ಯ ಎಸಗುವ ಪ್ರಚೋದನೆ ಉಂಟಾಗುವ ಪ್ರಮಾಣ ತೀರಾ ಕಡಿಮೆ ಎಂದು ಈ ವರದಿಗಳಲ್ಲಿ ಉಲ್ಲೇಖಿಸಲಾಗಿದೆ. ಬದಲಿಗೆ ಸಿನಿಮಾ ಮತ್ತು ಪುಸ್ತಕಗಳಲ್ಲಿ ಇಂತಹ ಕೃತ್ಯಗಳ ವಿವರವಿದ್ದರೆ, ಅದು ಹೆಚ್ಚು ಪ್ರಭಾವಿಸುತ್ತದೆ. ಅಧ್ಯಯನದಲ್ಲಿ ಭಾಗಿಯಾಗಿದ್ದ ಅಪರಾಧಿಗಳು ಮತ್ತು ಆರೋಪಿಗಳು ಇದನ್ನೇ ಹೇಳಿದ್ದಾರೆ ಎಂದು ಅಧ್ಯಯನ ವರದಿಗಳಲ್ಲಿ ಉಲ್ಲೇಖಿಸಲಾಗಿದೆ.

ಆದರೆ, ಇಂತಹ ಪ್ರಕರಣಗಳ ಕುರಿತು ವರದಿ ಮಾಡುವಾಗ ಮಾಧ್ಯಮಗಳು ಹೆಚ್ಚು ಸೂಕ್ಷ್ಮವಾಗಿರಬೇಕು ಎಂದೂ ಅಧ್ಯಯನ ವರದಿಗಳಲ್ಲಿ ಶಿಫಾರಸು ಮಾಡಲಾಗಿದೆ.

ಏರಿಕೆಯಾಗುತ್ತಿದೆಯೇ?

ಇಂತಹ ಪ್ರಕರಣಗಳು ಹೊಸತೇನೂ ಅಲ್ಲ. ಬಹಳ ಹಿಂದಿನಿಂದಲೂ ಮನುಷ್ಯ ಇಂತಹ ಕೃತ್ಯಗಳನ್ನು ಎಸಗುತ್ತಿದ್ದಾನೆ ಎಂಬುದು ದಾಖಲಾಗಿದೆ. ಗ್ರೀಕ್‌ ಪುರಾಣಗಳಲ್ಲಿ ಇಂತಹ ದಾಖಲೆಗಳಿವೆ. ಜತೆಗೆ ಐತಿಹಾಸಿಕ ದಾಖಲೆಗಳಲ್ಲೂ ಇಂತಹ ಕೃತ್ಯಗಳ ಉಲ್ಲೇಖ ಇದೆ. ಆಧುನಿಕೋತ್ತರ ಜಗತ್ತಿನಲ್ಲೂ ಇಂತಹ ಕೃತ್ಯಗಳು ಸರ್ವೇಸಾಮಾನ್ಯ ಎಂಬಂತಾಗಿವೆ. ಆದರೆ, ಯಾವುದೋ ಒಂದು ಭೀಕರ ಕೃತ್ಯ ವರದಿಯಾದಾಗ, ಅಂಥದ್ದೇ ಹಲವು ಕೃತ್ಯಗಳತ್ತ ಹೆಚ್ಚು ಗಮನ ಹೋಗುತ್ತದೆ. ಹೀಗಾಗಿಯೇ ಆಗಾಗ್ಗೆ ಇಂತಹ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ ಎಂದು ಭಾಸವಾಗುತ್ತದೆ ಎಂದು ಅಧ್ಯಯನ ವರದಿಗಳಲ್ಲಿ ವಿವರಿಸಲಾಗಿದೆ.

ಭಾರತದಲ್ಲಿ ಈ ಹಿಂದೆ ಇಂತಹ ಕೃತ್ಯಗಳು ನಡೆದಾಗ, ದೇಹದ ಭಾಗಗಳ‌ನ್ನು ನಿರ್ಜನ ಪ್ರದೇಶದಲ್ಲಿ ಅಥವಾ ಹೆದ್ದಾರಿ ಬದಿಯಲ್ಲಿ ಅಥವಾ ಕಾಡುಗಳಲ್ಲಿ ಅಥವಾ ಕೆರೆ–ನದಿಗಳಲ್ಲಿ ಬಿಸಾಡುವ ಪರಿಪಾಟ ಇತ್ತು. ಆದರೆ, ಅತಿಯಾದ ನಗರೀಕರಣದಿಂದಾಗಿ ಹೀಗೆ ಬಿಸಾಡುವ ಸಾಧ್ಯತೆಗಳು ಕ್ಷೀಣಿಸಿವೆ. ಗ್ರಾಮೀಣ ಪ್ರದೇಶದಲ್ಲಿ ಇಂತಹ ಕೃತ್ಯಗಳು ನಡೆದರೂ ದೇಹವನ್ನು ಬಿಸಾಡುವ ಅವಕಾಶ ಹೆಚ್ಚು ಇರುತ್ತದೆ. ಹೀಗಾಗಿ ಗ್ರಾಮೀಣ ಪ್ರದೇಶದಲ್ಲಿ ಅಂತಹ ಕೃತ್ಯ ನಡೆದರೂ ಅದು ಹೆಚ್ಚು ಸುದ್ದಿಯಾಗುವುದಿಲ್ಲ ಎಂದು ವರದಿಗಳಲ್ಲಿ ವಿವರಿಸಲಾಗಿದೆ.

ನಗರ ಪ್ರದೇಶಗಳಲ್ಲಿ ಇಂತಹ ಕೃತ್ಯ ನಡೆದಾಗ, ದೇಹವನ್ನು ಬಿಸಾಡುವ ಸಾಧ್ಯತೆ ತೀರಾ ಕಡಿಮೆ ಇರುತ್ತದೆ. ಹೀಗಾಗಿಯೇ ಹಲವು ಪ್ರಕರಣಗಳಲ್ಲಿ ದೇಹದ ತುಂಡುಗಳನ್ನು ಫ್ರಿಡ್ಜ್‌ನಲ್ಲಿ ಇಡುವ, ಕುಕ್ಕರ್‌ನಲ್ಲಿ ಬೇಯಿಸಿ ನಾಯಿಗಳಿಗೆ ತಿನ್ನಿಸುವ ಸ್ವರೂಪದ ಕೃತ್ಯಗಳ ಮೊರೆ ಹೋಗಿರುವುದನ್ನು ಆರೋಪಿಗಳು ಅಥವಾ ಅಪರಾಧಿಗಳು ಒಪ್ಪಿಕೊಂಡಿದ್ದಾರೆ. ಕೊಲೆ ಮಾಡಿ ದೇಹವನ್ನು ತುಂಡರಿಸುವುದು ಹೊಸತಲ್ಲವಾದರೂ, ಕತ್ತರಿಸಿದ ದೇಹದ ಭಾಗಗಳನ್ನು ಫ್ರಿಡ್ಜ್‌ನಲ್ಲಿ ಇಡುವುದು ಭಾರತಕ್ಕೆ ಹೊಸತು. ಈ ಕಾರಣದಿಂದಲೇ ಇಂತಹ ಕೃತ್ಯಗಳು ಹೆಚ್ಚು ಗಮನ ಸೆಳೆಯುತ್ತವೆ ಎಂದು ಈ ವರದಿಗಳಲ್ಲಿ ವಿವರಿಸಲಾಗಿದೆ.

ಭಾರತದಲ್ಲಿ ಈಚೆಗೆ ಇಂತಹ ಕೃತ್ಯಗಳು ಹೆಚ್ಚು ವರದಿಯಾಗುತ್ತಿವೆ. ಆದರೆ, ಇಂತಹ ಕೃತ್ಯಗಳನ್ನು ಪ್ರತ್ಯೇಕವಾಗಿ ವರ್ಗೀಕರಿಸಿ ದಾಖಲಿಸುವ ಪರಿಪಾಟ ಇಲ್ಲ. ಹೀಗಾಗಿ ಈ ಹಿಂದೆ ಇಂತಹ ಎಷ್ಟು ಕೃತ್ಯಗಳು ನಡೆದಿದ್ದವು ಮತ್ತು ಈಗ ಅವುಗಳ ಸಂಖ್ಯೆ ಏರಿಕೆಯಾಗಿದೆಯೇ ಎಂಬುದನ್ನು ವಿವರಿಸುವ ನಿಖರ ದತ್ತಾಂಶ ಲಭ್ಯವಿಲ್ಲ.

ಆಧಾರ: ಐಇಎಸ್‌ಆರ್‌ಎಫ್‌ನ ಹೋಮಿಸೈಡ್‌ ಅಂಡ್ ಕಾರ್ಪಸ್‌ ಡಿಸ್‌ಮೆಂಬರ್‌ಮೆಂಟ್‌ ಅಧ್ಯಯನ ವರದಿ, ವಿಶ್ವಸಂಸ್ಥೆಯ ‘ಗ್ಲೋಬಲ್‌ ಸ್ಟಡಿ ಆನ್‌ ಹೋಮಿಸೈಡ್‌’ ವರದಿ, ಅಮೆರಿಕದ ಜೈವಿಕ ತಂತ್ರಜ್ಞಾನ ಸಚಿವಾಲಯದ ‘ದಿ ಸೈಕಾಲಜಿ ಆಫ್ ಮರ್ಡರ್ ಕನ್ಸೀಲ್‌ಮೆಂಟ್ ಆ್ಯಕ್ಟ್ಸ್‌’, ಬಿಬಿಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT