ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ಆಳ–ಅಗಲ |  ಚುನಾವಣಾ ಬಾಂಡ್‌: ಉತ್ತರಕ್ಕಿಂತ ಪ್ರಶ್ನೆಗಳೇ ಹೆಚ್ಚು
ಆಳ–ಅಗಲ | ಚುನಾವಣಾ ಬಾಂಡ್‌: ಉತ್ತರಕ್ಕಿಂತ ಪ್ರಶ್ನೆಗಳೇ ಹೆಚ್ಚು
Published 17 ಮಾರ್ಚ್ 2024, 23:30 IST
Last Updated 17 ಮಾರ್ಚ್ 2024, 23:30 IST
ಅಕ್ಷರ ಗಾತ್ರ

ಸಿಕ್ಕಿಂ ಮತ್ತು ನಾಗಾಲ್ಯಾಂಡ್ ಸರ್ಕಾರಗಳ ಲಾಟರಿಗಳನ್ನು ಖರೀದಿಸಿ ಅದನ್ನು ಜನರಿಗೆ ಮಾರಾಟ ಮಾಡುವ ಕೆಲಸ ‘ಫ್ಯೂಚರ್‌ ಗೇಮಿಂಗ್‌ ಆ್ಯಂಡ್‌ ಹೋಟೆಲ್‌ ಸರ್ವಿಸಸ್‌ ಲಿಮಿಟೆಡ್‌’ನದ್ದು. ತಮಿಳುನಾಡಿನ ಸ್ಯಾಂಟಿಯಾಗೊ ಮಾರ್ಟಿನ್‌ ಈ ಕಂಪನಿಯ ನಿರ್ದೇಶಕ. ಈ ಲಾಟರಿಗಳನ್ನು ದೇಶದ ಬೇರೆ–ಬೇರೆ ರಾಜ್ಯಗಳಲ್ಲಿ ಮಾರಾಟ ಮಾಡಿ ಬಂದ ಹಣವನ್ನು ಕಂಪನಿ ಸಿಕ್ಕಿಂ ಮತ್ತು ನಾಗಾಲ್ಯಾಂಡ್‌ ಸರ್ಕಾರಗಳಿಗೆ ಪೂರ್ಣ ಪ್ರಮಾಣದಲ್ಲಿ ಪಾವತಿಸಿಯೇ ಇರಲಿಲ್ಲ. ಜತೆಗೆ ಲಾಟರಿ ಟಿಕೆಟ್‌ಗಳನ್ನು ಮಾರಾಟ ಮಾಡದೆ, ಅವುಗಳಿಗೆ ಬಂದ ಹಣವನ್ನು ಕಂಪನಿಯೇ ಪಡೆದುಕೊಂಡಿತ್ತು ಎಂಬ ಆರೋಪದಲ್ಲಿ ಅದರ ವಿರುದ್ಧ 2011ರಲ್ಲಿ ಸಿಬಿಐ ಪ್ರಕರಣ ದಾಖಲಿಸಿತ್ತು. 2014ರ ಅಂತ್ಯದ ವೇಳೆಗೆ ಆರೋಪ ಪಟ್ಟಿ ಸಲ್ಲಿಸಿದ್ದ ಸಿಬಿಐ ಒಟ್ಟು ₹4,800 ಕೋಟಿ ಮೊತ್ತದಷ್ಟು ಹಗರಣ ನಡೆದಿದೆ ಎಂದು ಆರೋಪಿಸಿತ್ತು. ಆದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಬಂಧನ ನಡೆದಿರಲಿಲ್ಲ.

ಆದರೆ ಆರೋಪ ಪಟ್ಟಿ ಸಲ್ಲಿಕೆಯಾದ ಕೆಲವೇ ತಿಂಗಳಲ್ಲಿ, ಅಂದರೆ 2015ರಲ್ಲಿ ಮಾರ್ಟಿನ್‌ ಅವರ ಮಗ ದೆಹಲಿಯಲ್ಲಿ ನಡೆದ ಬಿಜೆಪಿ ಯುವ ಮೋರ್ಚಾ ಕಾರ್ಯಕ್ರಮದಲ್ಲಿ ಬಿಜೆಪಿ ಸೇರಿದ್ದರು. ಅಷ್ಟರಲ್ಲೇ ಲಾಟರಿ ವಂಚನೆಗೆ ಸಂಬಂಧಿಸಿದಂತೆ ಕೋಲ್ಕತ್ತಾ ಪೊಲೀಸರು ಕಂಪನಿಯ ವಿರುದ್ಧ ಪ್ರಕರಣ ದಾಖಲಿಸಿದ್ದರು. ಆನಂತರ ಎಲೆಕ್ಟೋರಲ್‌ ಟ್ರಸ್ಟ್‌ಗಳ ಮೂಲಕ ಈ ಕಂಪನಿಯು ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುತ್ತಾ ಬಂದಿದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ. ಆದರೆ ಕಂಪನಿಯ ಜಾಲತಾಣವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿರುವ ಕಾರಣ ಮತ್ತು ಅದರ ಅಧೀನ ಕಂಪನಿಗಳ ಜಾಲತಾಣಗಳನ್ನೂ ಬ್ಲಾಕ್‌ ಮಾಡಿರುವ ಕಾರಣ ಅವುಗಳ ವಾರ್ಷಿಕ ವರದಿಯನ್ನು ಪರಿಶೀಲಿಸಲು ಸಾಧ್ಯವಾಗಿಲ್ಲ.

ಕಂಪನಿಯ ವಾರ್ಷಿಕ ಲಾಭಕ್ಕಿಂತ ನೂರಾರು ಪಟ್ಟು ಹೆಚ್ಚು ಮೊತ್ತದ ದೇಣಿಗೆಯನ್ನು ಅದು ಚುನಾವಣಾ ಬಾಂಡ್ ಮೂಲಕ ನೀಡಿದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿದೆ. ಆದರೆ, ಕಂಪನಿಯ ವಾರ್ಷಿಕ ವರದಿ ಲಭ್ಯವಿಲ್ಲದೇ ಇರುವ ಕಾರಣ ಆ ಮಾಹಿತಿ ಪರಿಶೀಲಿಸಲು ಸಾಧ್ಯವಾಗಿಲ್ಲ.

ಆದರೆ ಮೇಲೆ ಹೇಳಲಾದ ಎರಡೂ ಪ್ರಕರಣಗಳಲ್ಲಿ ಜಾರಿ ನಿರ್ದೇಶನಾಲಯವು 2019ರಲ್ಲಿ ತನಿಖೆ ಆರಂಭಿಸಿದ ನಂತರ ಕಂಪನಿಯು ರಾಜಕೀಯ ಪಕ್ಷಗಳಿಗೆ ನೂರಾರು ಕೋಟಿ ರೂಪಾಯಿ ದೇಣಿಗೆ ನೀಡಿದೆ. 2019ರಲ್ಲಿ ಜಾರಿ ನಿರ್ದೇಶನಾಲಯವು ಕಂಪನಿ ಮತ್ತು ಅದರ ಪ್ರವರ್ತಕರ ಮನೆಗಳಲ್ಲಿ ಶೋಧಕಾರ್ಯ ನಡೆಸಿತ್ತು. ಅದೇ ವರ್ಷ ಕಂಪನಿಯು ಫ್ರುಡೆಂಟ್ ಎಲೆಕ್ಟೋರಲ್‌ ಟ್ರಸ್ಟ್‌ ಮೂಲಕ ರಾಜಕೀಯ ಪಕ್ಷಗಳಿಗೆ ₹210 ಕೋಟಿ ದೇಣಿಗೆ ನೀಡಿತ್ತು. 2019–2021ರ ಏಪ್ರಿಲ್‌ ನಡುವೆ ಜಾರಿ ನಿರ್ದೇಶನಾಲಯವು ಕಂಪನಿಗೆ ಸೇರಿದ ಸ್ವತ್ತುಗಳನ್ನು ಮೂರು ಬಾರಿ ಮುಟ್ಟುಗೋಲು ಹಾಕಿಕೊಂಡಿತ್ತು. ಈ ಅವಧಿಯಲ್ಲಿ ಚುನಾವಣಾ ಬಾಂಡ್‌ ಮೂಲಕವೇ ಕಂಪನಿಯು ₹110 ಕೋಟಿ ಮೊತ್ತದ ದೇಣಿಗೆಯನ್ನು ಪಕ್ಷಗಳಿಗೆ ನೀಡಿತ್ತು.

ನಂತರದ ವರ್ಷಗಳಲ್ಲಿ ಕಂಪನಿಯ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡ ಒಂದೆರಡು ದಿನಗಳಲ್ಲೇ ಕಂಪನಿ ಹತ್ತಾರು ಕೋಟಿ ಮೊತ್ತದ ಚುನಾವಣಾ ಬಾಂಡ್‌ಗಳನ್ನು ಖರೀದಿಸಿದೆ. ಚುನಾವಣಾ ಬಾಂಡ್‌ಗಳ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಎಸ್‌ಬಿಐ ಬಹಿರಂಗಪಡಿಸದೇ ಇರುವ ಕಾರಣ, ಈ ಕಂಪನಿಯು ಯಾರಿಗೆ ದೇಣಿಗೆ ನೀಡಿದೆ ಎಂಬುದು ಖಚಿತವಾಗಿಲ್ಲ. ಆ ಮಾಹಿತಿಯನ್ನೂ ಒದಗಿಸುವಂತೆ ಸುಪ್ರೀಂ ಕೋರ್ಟ್‌ ಎಸ್‌ಬಿಐಗೆ ತಾಕೀತು ಮಾಡಿದೆ. ಆ ಮಾಹಿತಿ ಬಹಿರಂಗವಾದ ನಂತರ ಈ ಕಂಪನಿ ಯಾವೆಲ್ಲಾ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿದೆ ಎಂಬುದು ಮತ್ತು ತನಿಖಾ ಸಂಸ್ಥೆಗಳ ಶೋಧ ಕಾರ್ಯ–ಚುನಾವಣಾ ಬಾಂಡ್‌ ಖರೀದಿ ನಡುವೆ ಸಂಬಂಧವಿದೆಯೇ ಎಂಬುದು ಪತ್ತೆಯಾಗಲಿದೆ.

ಕೇಂದ್ರ ಸರ್ಕಾರದ ವಿರುದ್ಧ ಹೈಕೋರ್ಟ್‌ನಲ್ಲಿ ಗೆದ್ದಿದ್ದ ಕಂಪನಿ

ಫ್ಯೂಚರ್ ಗೇಮಿಂಗ್‌ ಕಂಪನಿಯು ಕೇಂದ್ರ ಸರ್ಕಾರದ ವಿರುದ್ಧ 2015ರಲ್ಲಿ ಸಿಕ್ಕಿಂ ಹೈಕೋರ್ಟ್‌ನಲ್ಲಿ ಮೊಕದ್ದಮೆ ದಾಖಲಿಸಿ, ಗೆದ್ದಿತ್ತು. ಆ ಪ್ರಕರಣದ ನಂತರವೇ ಕಂಪನಿಯ ವಿರುದ್ಧ ಕೇಂದ್ರದ ತನಿಖಾ ಸಂಸ್ಥೆಗಳ ಕ್ರಮ ಹೆಚ್ಚಾಯಿತು ಎಂಬುದರತ್ತ ದಾಖಲೆಗಳು ಬೊಟ್ಟು ಮಾಡುತ್ತವೆ.

2015ರಲ್ಲಿ ಕೇಂದ್ರ ಸರ್ಕಾರವು ಫೈನಾನ್ಸ್‌ ಕಾಯ್ದೆಗೆ ತಿದ್ದುಪಡಿ ತಂದಿತ್ತು. ರಾಜ್ಯ ಸರ್ಕಾರಗಳ ಲಾಟರಿ ಯೋಜನೆಗಳಿಗೆ ಸೇವೆ ಒದಗಿಸುವ ಕಂಪನಿಗಳು ಸೇವಾ ತೆರಿಗೆ ಪಾವತಿಸಬೇಕು ಎಂದು ಆದೇಶ ಹೊರಡಿಸಿತ್ತು. ಸಿಕ್ಕಿಂ ಮತ್ತು ನಾಗಾಲ್ಯಾಂಡ್‌ ರಾಜ್ಯ ಸರ್ಕಾರಗಳಿಂದ ಲಾಟರಿ ಟಿಕೆಟ್‌ಗಳನ್ನು ಸಗಟು ಖರೀದಿ ಮಾಡಿ ದೇಶದಾದ್ಯಂತ (ಲಾಟರಿ ನಿಷೇಧವಿರುವ ರಾಜ್ಯಗಳನ್ನು ಹೊರತುಪಡಿಸಿ) ಎಲ್ಲಾ ರಾಜ್ಯಗಳಲ್ಲಿ ಫ್ಯೂಚರ್‌ ಗೇಮಿಂಗ್‌ ಮಾರಾಟ ಮಾಡುತ್ತಿತ್ತು. ಹೀಗಾಗಿ ಸೇವಾ ತೆರಿಗೆ ಪಾವತಿಸಬೇಕು ಎಂದು ಕೇಂದ್ರ ಹಣಕಾಸು ಸಚಿವಾಲಯವು ಈ ಕಂಪನಿಗೆ ನೋಟಿಸ್‌ ನೀಡಿತ್ತು.

ಆಗ ಕೇಂದ್ರ ಸರ್ಕಾರದ ವಿರುದ್ಧ ಕಂಪನಿಯು ಸಿಕ್ಕಿಂ ಹೈಕೋರ್ಟ್‌ ಮೊರೆ ಹೋಗಿತ್ತು. ‘ಲಾಟರಿ/ಜೂಜು ರಾಜ್ಯಪಟ್ಟಿಯಲ್ಲಿ ಬರುವ ವಿಚಾರ. ಹೀಗಾಗಿ ಲಾಟರಿಯ ಮೇಲೆ ತೆರಿಗೆ ವಿಧಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇಲ್ಲ. ಜತೆಗೆ ಲಾಟರಿ ಸೇವೆ ಎಂದು ಕೇಂದ್ರ ಸರ್ಕಾರ ವ್ಯಾಖ್ಯಾನಿಸಿರುವಂತಹ ಯಾವುದೇ ಸೇವೆಯನ್ನು ಕಂಪನಿ ಒದಗಿಸುತ್ತಿಲ್ಲ. ಈ ಕಾರಣದಿಂದ ಕೇಂದ್ರ ಸರ್ಕಾರದ ನೋಟಿಸ್‌ಗಳನ್ನು ರದ್ದು ಮಾಡುತ್ತಿದ್ದೇವೆ’ ಎಂದು 2015ರ ಅಕ್ಟೋಬರ್ 15ರಂದು ಹೈಕೋರ್ಟ್‌ ತೀರ್ಪು ನೀಡಿತ್ತು.

ಆನಂತರವೇ ಕಂಪನಿಯ ವಿರುದ್ಧ ಜಾರಿ ನಿರ್ದೇಶನಾಲಯವು ಪ್ರಕರಣಗಳನ್ನು ದಾಖಲಿಸಿದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT