ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ | ಮಾಲಿನ್ಯಕ್ಕೆ ಅಂಕುಶ; ದೇಶಗಳಿಗೆ ಅಪಥ್ಯ

ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ ಕುರಿತ ‘ಎಮಿಷನ್ ಗ್ಯಾಪ್ ರಿಪೋರ್ಟ್’ ಉಲ್ಲೇಖ
Last Updated 20 ನವೆಂಬರ್ 2022, 19:30 IST
ಅಕ್ಷರ ಗಾತ್ರ

ಇತ್ತೀಚಿನ ವರ್ಷಗಳಲ್ಲಿ ಎಲ್ಲಿ ನೋಡಿದರೂ ಪ್ರವಾಹ, ಅತಿ ಬಿಸಿಲು, ವಿಪರೀತ ಚಳಿ ಹಾಗೂ ಮಳೆಯ ವಿನ್ಯಾಸದಲ್ಲಿ ಅಗಾಧ ಏರುಪೇರು ಕಂಡುಬರುತ್ತಿದೆ. ಇದು ಜಾಗತಿಕ ವಿದ್ಯಮಾನವಾಗಿದ್ದು, ಭಾರತದಲ್ಲೂ ಜನರು ಇಂತಹ ಘಟನೆಗಳಿಗೆ ನಿತ್ಯವೂ ಮುಖಾಮುಖಿಯಾಗುತ್ತಿದ್ದಾರೆ. ಇದಕ್ಕೆಲ್ಲ ಕಾರಣ, ಹವಾಮಾನ ಬದಲಾವಣೆ ಎಂಬ ರಕ್ಕಸ ಸಮಸ್ಯೆ.

ಈ ಜಾಗತಿಕ ಹವಾಮಾನ ಬದಲಾವಣೆಗೆ ಕಾರಣವಾಗಿರುವುದು ಹಸಿರುಮನೆ ಅನಿಲಗಳು (ಗ್ರೀನ್‌ಹೌಸ್ ಗ್ಯಾಸ್). ಈ ಅನಿಲಗಳ ಹೊರಸೂಸುವಿಕೆಯ ಬಹುಪಾಲು ವಿಶ್ವದ ಶ್ರೀಮಂತ ದೇಶಗಳ ಕೊಡುಗೆ. ಆದರೆ, ಮಾಲಿನ್ಯ ಕಡಿಮೆ ಮಾಡುತ್ತೇವೆ ಎಂದು ತಾವೇ ಹೇಳಿದ್ದ ಮಾತುಗಳಿಂದ ಈ ದೇಶಗಳು ಬಹು ದೂರ ಉಳಿದಿವೆ ಎಂದು ವಿಶ್ವಸಂಸ್ಥೆ ಹೇಳಿದೆ. ಇಂಗಾಲ ಸೇರಿದಂತೆ ಹಸಿರುಮನೆ ಅನಿಲಗಳ ಹೊರಸೂಸುವಿಕೆಯನ್ನು ತಡೆಯುವ ವಿಚಾರದಲ್ಲಿ ಭಾರಿ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂಬುದನ್ನು ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ ಕುರಿತ ‘ಎಮಿಷನ್ ಗ್ಯಾಪ್ ರಿಪೋರ್ಟ್’ನಲ್ಲಿ ಉಲ್ಲೇಖಿಸಲಾಗಿದೆ.

ಕೈಗಾರಿಕಾ ಕ್ರಾಂತಿಗಿಂತ ಮೊದಲು ಇದ್ದ ಇಂಗಾಲ ಹೊರಸೂಸುವಿಕೆ ಮಟ್ಟವನ್ನು ಕಾಯ್ದುಕೊಳ್ಳುವುದಾಗಿ 2015ರಲ್ಲಿ ಆಗಿದ್ದ ಪ್ಯಾರಿಸ್ ಒಪ್ಪಂದದಲ್ಲಿ ಬಹುತೇಕ ದೇಶಗಳು ಒಮ್ಮತಕ್ಕೆ ಬಂದಿದ್ದವು. ತಾಪಮಾನ ಏರಿಕೆಯನ್ನು 1.5 ಡಿಗ್ರಿ ಸೆಲ್ಸಿಯಸ್‌ಗೆ ಕಟ್ಟಿಹಾಕುವುದು ಒಪ್ಪಂದದ ಬಹುಮುಖ್ಯ ಭಾಗವಾಗಿತ್ತು. ಆದರೆ ಅಂದು ಬದ್ಧತೆ ಪ್ರದರ್ಶಿಸಿದ್ದ ಯಾವ ದೇಶವೂ ಅಗತ್ಯ ಕ್ರಮ ತೆಗೆದುಕೊಳ್ಳುತ್ತಿಲ್ಲ. ಇದೇ ಧೋರಣೆ ಮುಂದುವರಿದಲ್ಲಿ 2100ರ ಹೊತ್ತಿಗೆ ಜಾಗತಿಕ ತಾಪಮಾನವು 2.8 ಡಿಗ್ರಿ ಸೆಲ್ಸಿಯಸ್‌ನಷ್ಟು ಏರಿಕೆ ಆಗಲಿದೆ ಎಂದು ವರದಿ ಗಂಭೀರ ಎಚ್ಚರಿಕೆ ನೀಡಿದೆ.

ಮಾಲಿನ್ಯ ನಿಯಂತ್ರಣಕ್ಕೆ ಈಗ ತೆಗೆದುಕೊಂಡಿರುವ ಪರಿಣಾಮಕಾರಿಯಲ್ಲದ ಕ್ರಮಗಳನ್ನೇ ಮುಂದುವರಿಸಿಕೊಂಡು ಹೋದಲ್ಲಿ, 2030ರಲ್ಲಿ ವಾತಾವರಣಕ್ಕೆ ಬಿಡುಗಡೆಯಾಗುವ ಇಂಗಾಲ ಹಾಗೂ ಇತರೆ ಅನಿಲಗಳ ಪ್ರಮಾಣ 5,800 ಕೋಟಿ ಟನ್‌ಗೆ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ.

ಹಿಂದಿನ ವರ್ಷ ಗ್ಲಾಸ್ಗೋದಲ್ಲಿ ನಡೆದಿದ್ದ 26ನೇವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಮಾವೇಶದಲ್ಲಿ (ಸಿಒಪಿ–ಕಾನ್ಫರೆನ್ಸ್ ಆಫ್ ಪಾರ್ಟೀಸ್) ತಾಪಮಾನ ಏರಿಕೆಯನ್ನು ತಗ್ಗಿಸುವ ಬಗ್ಗೆ ಸಮಾಲೋಚನೆ ನಡೆದಿತ್ತು. ಸಾಕಷ್ಟು ಮಾತುಕತೆಯ ಬಳಿಕ, 2030ರ ವೇಳೆಗೆ ವಾತಾವರಣಕ್ಕೆ ಬಿಡುಗಡೆಯಾಗುವ ಇಂಗಾಲ ಹಾಗೂ ಇತರೆ ಅನಿಲಗಳ ಪ್ರಮಾಣವನ್ನು 50 ಕೋಟಿ ಟನ್‌ನಷ್ಟು ಕಡಿತ ಮಾಡಲಾಗುವುದು ಎಂದು ಈ ದೇಶಗಳು ಭರವಸೆ ನೀಡಿದ್ದವು. ಆದರೆ ಈ ಗುರಿ ತಲುಪಲು 8 ವರ್ಷಗಳಷ್ಟೇ ಬಾಕಿಯಿದ್ದು, ಗುರಿಯನ್ನು ಈ ಅವಧಿಯಲ್ಲಿ ಮುಟ್ಟುವುದು ತೀರಾ ಕಷ್ಟ ಎಂದು ವರದಿ ಅಭಿಪ್ರಾಯಪಟ್ಟಿದೆ. ಈಗ ವಾತಾವರಣಕ್ಕೆ ಬಿಡುಗಡೆ ಮಾಡುತ್ತಿರುವ ಹಸಿರುಮನೆ ಅನಿಲಗಳ ಪ್ರಮಾಣವನ್ನು ಶೇ 45ರಷ್ಟು ತಗ್ಗಿಸಿದರೆ ಮಾತ್ರ, ಅಂದುಕೊಂಡ ಗುರಿಯನ್ನು ತಲುಪಲು ಸಾಧ್ಯವಿದೆ ಎಂದು ವರದಿ ತಿಳಿಸಿದೆ.

ಈ ವರದಿ ಬಿಡುಗಡೆಯಾಗಿ ಎರಡು ವಾರ ಕಳೆಯುವಷ್ಟರಲ್ಲಿ ಮತ್ತೊಂದು ಸಮಾವೇಶ ನಡೆದಿದೆ. ಈಜಿಪ್ಟ್‌ನಲ್ಲಿ ನಡೆದ 27ನೇ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಮಾವೇಶದಲ್ಲಿ, ಅಗತ್ಯ ಕ್ರಮಗಳನ್ನು ತುರ್ತಾಗಿ ತೆಗೆದುಕೊಳ್ಳಬೇಕು, ಬದ್ಧತೆಯನ್ನು ಮುಂದುವರಿಸಬೇಕು ಎಂದು ಶ್ರೀಮಂತ ರಾಷ್ಟ್ರಗಳಿಗೆ ಮತ್ತೊಮ್ಮೆ ತಾಕೀತು ಮಾಡಲಾಗಿದೆ. ಜಾಗತಿಕ ಬದ್ಧತೆಯ ಕೊರತೆಯಿಂದ ನಾವು ಜಾಗತಿಕ ದುರಂತದತ್ತ ಸಾಗುತ್ತಿದ್ದೇವೆ ಎಂದು ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್ ವ್ಯಕ್ತಪಡಿಸಿರುವ ಬೇಸರಕ್ಕೆ ಅರ್ಥವಿದೆ.

*ಇಂಗಾಲ ಸೇರಿದಂತೆ ಹಸಿರುಮನೆ ಅನಿಲಗಳನ್ನು ಹೊರಸೂಸುವ ವಿಚಾರದಲ್ಲಿ ಚೀನಾ ಅಗ್ರ ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿ ಭಾರತವಿದೆ

*ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿರುವ ಐದು ದೇಶಗಳು ಸೇರಿ ಸುಮಾರು 2 ಸಾವಿರ ಟನ್ ಹಸಿರುಮನೆ ಅನಿಲಗಳ ಬಿಡುಗಡೆಗೆ ಕಾರಣವಾಗಿವೆ

*ಜರ್ಮನಿ, ಇರಾನ್, ಇಂಡೊನೇಷ್ಯಾ, ದಕ್ಷಿಣ ಕೊರಿಯಾ, ಸೌದಿ ಅರೇಬಿಯಾ, ಐರೋಪ್ಯ ಒಕ್ಕೂಟದ 27 ದೇಶಗಳು, ಅಂತರರಾಷ್ಟ್ರೀಯ ಸಾರಿಗೆ ಸಹ ಇಂಗಾಲ ಹೊರಸೂಸುವಿಕೆಗೆ ಪ್ರಮುಖ ಕಾರಣ ಆಗಿವೆ

ಭಾರತ: ಜಾಗತಿಕ ಸರಾಸರಿಗಿಂತ ಕಡಿಮೆ

ಹಸಿರುಮನೆ ಅನಿಲ ಹೊರಸೂಸುವಿಕೆ ಪ್ರಮಾಣವನ್ನು ಜಗತ್ತಿನ ಜನಸಂಖ್ಯೆಯೊಂದಿಗೆ ವಿಭಾಗಿಸಿದಾಗ, ಪ್ರತಿ ವ್ಯಕ್ತಿಗೆ ಸರಾಸರಿ 6.3 ಟನ್‌ ಪಾಲು ಸಿಗುತ್ತದೆ. 2020ರ ಪ್ರಕಾರ, ವ್ಯಕ್ತಿಗತ ಸರಾಸರಿಯಲ್ಲಿ ಅಮೆರಿಕ ಎಲ್ಲ ದೇಶಗಳಿಗಿಂತ ಮುಂದಿರುವುದು ಕಂಡುಬಂದಿದೆ. ಜಾಗತಿಕ ಮಾಲಿನ್ಯಕ್ಕೆ ಅಮೆರಿಕದ ಪ್ರತಿ ವ್ಯಕ್ತಿ ತಲಾ 14 ಟನ್ ಕೊಡುಗೆ ನೀಡುತ್ತಿದ್ದಾನೆ. ನಂತರದ
ಸ್ಥಾನದಲ್ಲಿರುವ ರಷ್ಯಾದಲ್ಲಿ ಅಮೆರಿಕಕ್ಕಿಂತ ಒಂದು ಟನ್ (13 ಟನ್) ಕಡಿಮೆಯಿದೆ. ಚೀನಾದ ಜನರು ತಲಾ 9.7 ಟನ್ ಪಾಲು ಹೊಂದಿದ್ದಾರೆ.

ಅತಿಹೆಚ್ಚು ಮಾಲಿನ್ಯ ಹೊರಸೂಸುವ ಜಗತ್ತಿನ ಅಗ್ರ ದೇಶಗಳಲ್ಲಿ ಮೂರನೇ ಸ್ಥಾನದಲ್ಲಿರುವ ಭಾರತ, ಹೊರಸೂಸುವಿಕೆಯಲ್ಲಿ ವ್ಯಕ್ತಿಗತ ಪಾಲು ಜಾಗತಿಕ ಸರಾಸರಿಗಿಂತ ಬಹಳ ಕಡಿಮೆ ಪ್ರಮಾಣವನ್ನು ದಾಖಲಿಸಿದೆ. ಭಾರತದಲ್ಲಿ ಇಂಗಾಲ ಹೊರಸೂಸುವಿಕೆಯಲ್ಲಿ ಪ್ರತಿ ವ್ಯಕ್ತಿಯ ಪಾಲು 2.4 ಟನ್ ಇದೆ.

ಮತ್ತೆ ಏರಿಕೆಯತ್ತ ಇಂಗಾಲದ ಮಟ್ಟ

ಕೋವಿಡ್ ಆವರಿಸಿದ್ದ 2020ರ ಅವಧಿಯಲ್ಲಿ ಜಾಗತಿಕವಾಗಿ ಆರ್ಥಿಕ ಚಟುವಟಿಕೆಗಳಿಗೆ ಹಿನ್ನಡೆಯಾಗಿತ್ತು. ಕೈಗಾರಿಕೆಗಳು ಮತ್ತು ಸಾರಿಗೆ ಕ್ಷೇತ್ರದಲ್ಲಿ ಪಳೆಯುಳಿಕೆ ಇಂಧನಗಳ ಬಳಕೆ ಅಷ್ಟಾಗಿ ಇರಲಿಲ್ಲ. ವಾತಾವರಣಕ್ಕೆ ಬಿಡುಗಡೆಯಾಗುವ ಹಸಿರುಮನೆ ಅನಿಲಗಳ ಬಿಡುಗಡೆ ಪ್ರಮಾಣ ಶೇ 4.7ರಷ್ಟು ಕುಸಿದಿತ್ತು. ಇದೇ ಅವಧಿಯಲ್ಲಿ ಕೈಗಾರಿಕಾ ಚಟುವಟಿಕೆಗಳು ಕಡಿಮೆ ಇದ್ದುದರಿಂದ, ಇಂಗಾಲ (ಸಿಒ2) ಹೊರಸೂಸುವಿಕೆ ಪ್ರಮಾಣವೂಶೇ 5.7ರಷ್ಟು ಕಡಿಮೆಯಾಗಿತ್ತು. ಆದರೆ ಮೀಥೇನ್ ಮತ್ತು ನೈಟ್ರಸ್ ಆಕ್ಸೈಡ್ ಹೊರಸೂಸುವಿಕೆಯು 2019ರ ಮಟ್ಟದಲ್ಲೇ ಮುಂದುವರಿದಿದೆ.

ಜಿ–20 ದೇಶಗಳ ಪಾಲೇ ಅಧಿಕ

ಅತಿಹೆಚ್ಚು ಇಂಗಾಲ ಹೊರಸೂಸುವಿಕೆಯಲ್ಲಿ ವಿಶ್ವದ ಜಿ–20 ದೇಶಗಳ ಪಾಲೇ ಶೇ 75ರಷ್ಟಿದೆ. ಚೀನಾ, ಅಮೆರಿಕ, 27 ದೇಶಗಳ ಐರೋಪ್ಯ ಒಕ್ಕೂಟ, ಭಾರತ, ಇಂಡೊನೇಷ್ಯಾ, ಬ್ರೆಜಿಲ್, ರಷ್ಯಾ ಮೊದಲಾದ ದೇಶಗಳು ಈ ಪಟ್ಟಿಯಲ್ಲಿ ಅಧಿಕ ಪಾಲು ಹೊಂದಿವೆ. ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಎಂಟು ದೇಶಗಳ ಒಟ್ಟಾರೆ ಹೊರಸೂಸುವಿಕೆ ಮಟ್ಟವು 2019ರಲ್ಲಿ 3,280 ಕೋಟಿ ಟನ್‌ ಇತ್ತು. ಕೋವಿಡ್ ಪರಿಣಾಮವಾಗಿ ಈ ಮಟ್ಟವು 2020ರಲ್ಲಿ 3,150 ಕೋಟಿ ಟನ್‌ಗೆ ಇಳಿಕೆಯಾಗಿತ್ತು. 2021ರಲ್ಲಿ ಆರ್ಥಿಕ ಚಟುವಟಿಕೆಗಳು ಗರಿಗೆದರಿದ್ದು, 2019ರ ಮಟ್ಟಕ್ಕೆ ಮಾಲಿನ್ಯ ಪ್ರಮಾಣ ಏರಿಕೆಯಾಗುವ ಪ್ರವೃತ್ತಿ ಕಂಡುಬರುತ್ತಿದೆ ಎಂದು ವರದಿ ಹೇಳಿದೆ.

ಹಸಿರುಮನೆ ಅನಿಲಗಳ ಹೊರಸೂಸುವಿಕೆ ಪ್ರಮಾಣ

1990; 3,800 ಕೋಟಿ ಟನ್

2000; 4,200 ಕೋಟಿ ಟನ್

2010; 5,100 ಕೋಟಿ ಟನ್

2019; 5,260 ಕೋಟಿ ಟನ್

2020; 5,400 ಕೋಟಿ ಟನ್

2021; 5,280 ಕೋಟಿ ಟನ್

2030; 5,800 ಕೋಟಿ ಟನ್ (ಅಂದಾಜು)

ಮಾಲಿನ್ಯ ಮಾಡುವ ದೇಶಗಳು...

ಚೀನಾ; 1,006 ಕೋಟಿ ಟನ್

ಅಮೆರಿಕ; 541 ಕೋಟಿ ಟನ್

ಭಾರತ; 265 ಕೋಟಿ ಟನ್

ರಷ್ಯಾ; 171 ಕೋಟಿ ಟನ್

ಜಪಾನ್; 116 ಕೋಟಿ ಟನ್

ಆಧಾರ:‘ಎಮಿಷನ್ ಗ್ಯಾಪ್ ರಿಪೋರ್ಟ್’, ಕ್ಲೈಮೆಟ್ ಟ್ರೇಡ್, ಪಿಟಿಐ, ರಾಯಿಟರ್ಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT