ಗ್ರಾಹಕರ ಗುರುತನ್ನು ಖಾತರಿ ಪಡಿಸಿಕೊಳ್ಳಲು ಖಾಸಗಿ ಕಂಪನಿಗಳು ಆಧಾರ್ ಸಂಖ್ಯೆ ಕೇಳುವುದನ್ನು 2018ರಲ್ಲಿ ಸುಪ್ರೀಂ ಕೋರ್ಟ್ ನಿರ್ಬಂಧಿಸಿತ್ತು. ಕೇಂದ್ರ ಸರ್ಕಾರವು ಆಧಾರ್ ನಿಯಮಾವಳಿಗೆ ಈಗ ತಿದ್ದುಪಡಿ ತರುವ ಮೂಲಕ ವಿವಿಧ ವಲಯಗಳಲ್ಲಿ ತೊಡಗಿಸಿಕೊಂಡಿರುವ ಖಾಸಗಿ ಸಂಸ್ಥೆಗಳಿಗೂ ಆಧಾರ್ ದೃಢೀಕರಣ ಮಾಡಲು ಅವಕಾಶ ಕಲ್ಪಿಸಿದೆ. ಸಾರ್ವಜನಿಕರ ಹಿತಾಸಕ್ತಿಯಿಂದ, ಜನರಿಗೆ ಉತ್ತಮ ಸೇವೆ ನೀಡುವ ಸಲುವಾಗಿ ಈ ತಿದ್ದುಪಡಿ ತರಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಆದರೆ, ಇದರಿಂದಾಗಿ ಖಾಸಗಿಯವರ ಬಳಿ ಸಂಗ್ರಹವಾಗಲಿರುವ ಜನರ ಬಯೊಮೆಟ್ರಿಕ್ ಮತ್ತು ಇತರ ವೈಯಕ್ತಿಕ ದತ್ತಾಂಶದ ಸುರಕ್ಷತೆಗೆ ಸ್ಪಷ್ಟ ಮಾರ್ಗಸೂಚಿಯನ್ನು ರೂಪಿಸಿಲ್ಲ ಎನ್ನುವ ಆಕ್ಷೇಪ ವ್ಯಕ್ತವಾಗಿದೆ