ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ-ಅಗಲ | ರಾಜ್ಯದಲ್ಲಿ ಈ ಬಾರಿ ತಲೆದೋರಿದ್ದು ಭೀಕರ ಬರ: ವರದಿ

ಬರ ಪರಿಹಾರ ಯಾರ ಹೊಣೆ ?
Published 12 ಫೆಬ್ರುವರಿ 2024, 0:30 IST
Last Updated 12 ಫೆಬ್ರುವರಿ 2024, 0:30 IST
ಅಕ್ಷರ ಗಾತ್ರ

ರಾಜ್ಯದಲ್ಲಿ ಈ ಬಾರಿ ತಲೆದೋರಿದ ಬರವು 122 ವರ್ಷಗಳಲ್ಲೇ ಮೂರನೇ ಅತ್ಯಂತ ಭೀಕರ ಬರ ಎನಿಸಿಕೊಂಡಿದೆ. ಈ ಬರದಿಂದ ರಾಜ್ಯದಲ್ಲಿ ಆದ ಬೆಳೆ ನಷ್ಟವೂ ದೊಡ್ಡ ಮೌಲ್ಯದ್ದೇ ಆಗಿದೆ. ಬರ ಪರಿಹಾರ ಕಾರ್ಯಗಳಿಗೆ ಅಗತ್ಯವಿರುವ ಹಣದ ಮೊತ್ತವೂ ದೊಡ್ಡದೇ ಆಗಿದೆ. ಪರಿಹಾರ ಕಾರ್ಯಗಳಿಗಾಗಿ ನಿಯಮಗಳ ಪ್ರಕಾರವೇ ಕೇಂದ್ರದಿಂದ ನೆರವು ಕೋರಲಾಗಿದೆ. ಆದರೆ ಕೇಂದ್ರ ಸರ್ಕಾರ ಮಾತ್ರ ಕರ್ನಾಟಕಕ್ಕೆ ನೆರವು ಒದಗಿಸುತ್ತಿಲ್ಲ ಎನ್ನುತ್ತಿದೆ ರಾಜ್ಯ ಸರ್ಕಾರ

ರಾಜ್ಯದಲ್ಲಿ ಮುಂಗಾರು ಮಳೆ  ಭಾರಿ ಪ್ರಮಾಣದಲ್ಲಿ ಕಡಿಮೆಯಾದ ಕಾರಣ ಹತ್ತಾರು ಸಾವಿರ ಕೋಟಿ ಮೌಲ್ಯದಷ್ಟು ಬೆಳೆ ನಷ್ಟವಾಗಿದೆ. ಇದರ ಜತೆಯಲ್ಲೇ ಮೇವಿನ ಕೊರತೆ ಮತ್ತು ಕುಡಿಯುವ ನೀರಿನ ಕೊರತೆ ಎದುರಾಗಿದೆ. ಬರ ನಿರ್ವಹಣೆ ಸಂದರ್ಭದಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಮತ್ತು ಜನರಿಗೆ ಕುಡಿಯುವ ನೀರಿನ ಕೊರತೆ ಎದುರಾಗದಂತೆ ಎಚ್ಚರವಹಿಸುವುದು ರಾಜ್ಯ ಸರ್ಕಾರದ ಆದ್ಯ ಕರ್ತವ್ಯಗಳಲ್ಲಿ ಒಂದು. ಇದಕ್ಕಾಗಿ ರಾಜ್ಯ ಸರ್ಕಾರವು ತನ್ನ ಬಳಿ ಇರುವ ರಾಜ್ಯ ವಿಪತ್ತು ನಿರ್ವಹಣಾ ನಿಧಿಯಲ್ಲಿನ (ಎಸ್‌ಡಿಆರ್‌ಎಫ್‌) ಮೊತ್ತವನ್ನು ಬಳಸಬೇಕು. ಆ ಮೊತ್ತವು ಈ ಪರಿಹಾರ ಕಾರ್ಯಗಳಿಗೆ ಸಾಲದೇ ಇದ್ದರೆ, ಕೇಂದ್ರದ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ (ಎನ್‌ಡಿಆರ್‌ಎಫ್‌) ನೆರವು ಕೇಳಬಹುದು. ಹೀಗೆ ಬರದ ಪರಿಣಾಮವನ್ನು ಎದುರಿಸಲು ವಿವಿಧ ಪರಿಹಾರ ಕಾರ್ಯಗಳಿಗಾಗಿ ರಾಜ್ಯ ಸರ್ಕಾರವು ಕೇಂದ್ರದಿಂದ ಒಟ್ಟು ₹18,171 ಕೋಟಿಯಷ್ಟು ನೆರವನ್ನು ಕೋರಿದೆ. ‘ನೆರವು ಕೋರಿ ಹಲವು ತಿಂಗಳುಗಳೇ ಕಳೆದಿವೆ. ಆದರೆ ನೆರವು ಮಾತ್ರ ದೊರೆತಿಲ್ಲ’ ಎಂದು ರಾಜ್ಯ ಸರ್ಕಾರ ಹೇಳುತ್ತಿದೆ.

ರಾಜ್ಯದಲ್ಲಿ ಈ ಮುಂಗಾರು ಮತ್ತು ಹಿಂಗಾರಿನಲ್ಲಿ ತಲೆದೋರಿದ ಬರವು ಅತ್ಯಂತ ತೀವ್ರವಾದುದು ಎಂದು ರಾಜ್ಯ ಸರ್ಕಾರವು ಹವಾಮಾನ ಇಲಾಖೆಯ ದತ್ತಾಂಶಗಳನ್ನು ಮುಂದಿಡುತ್ತದೆ. ಹವಾಮಾನ ಇಲಾಖೆಯು ಮಳೆ ಸಂಬಂಧಿ ದತ್ತಾಂಶಗಳನ್ನು ಕಲೆಹಾಕಲು ಆರಂಭಿಸಿ 122 ವರ್ಷಗಳಾಗಿವೆ. ಈ ಮುಂಗಾರಿನಲ್ಲಿ ತಲೆದೋರಿದ ಬರವು ಆ 122 ವರ್ಷಗಳಲ್ಲೇ ಅತ್ಯಂತ ಕಡುಬರಗಳಲ್ಲಿ ಮೂರನೇ ಸಾಲಿನಲ್ಲಿ ನಿಲ್ಲುತ್ತದೆ ಎನ್ನುತ್ತದೆ ರಾಜ್ಯ ಸರ್ಕಾರದ ವರದಿ. ಬರದ ತೀವ್ರತೆಯನ್ನು ಇದು ತೋರಿಸುತ್ತದೆ. ಈ ಅವಧಿಯಲ್ಲಿ ಕೆಲವು ತಿಂಗಳಲ್ಲಿ ಉತ್ತಮ ಮಳೆಯಾಗಿದ್ದರೂ ಬಿತ್ತನೆ ಮತ್ತು ತೆನೆಕಟ್ಟುವ ಅವಧಿಯಲ್ಲಿ ಮಳೆ ತೀವ್ರ ಕೊರತೆಯಾದ ಕಾರಣ, ಬೆಳೆ ನಷ್ಟವಾಗಿದೆ ಎನ್ನುತ್ತದೆ ರಾಜ್ಯ ಸರ್ಕಾರದ ವರದಿ.

ರಾಜ್ಯದಲ್ಲಿ ಈ ಬಾರಿ ಬಿತ್ತನೆಯಾದ ಒಟ್ಟು ಜಮೀನಿನಲ್ಲಿ ಶೇ 50ಕ್ಕಿಂತಲೂ ಹೆಚ್ಚು ಬಿತ್ತನೆ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ. ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ ನಿರೀಕ್ಷಿತ ಇಳುವರಿಯಲ್ಲಿ ಶೇ 33ರಷ್ಟು ಮತ್ತು ಅದಕ್ಕಿಂತಲೂ ಹೆಚ್ಚು ನಷ್ಟವಾದರೆ ಅದನ್ನು ಬೆಳೆ ನಷ್ಟ ಎಂದೇ ಪರಿಗಣಿಸಬೇಕು. ಈ ಪ್ರಕಾರ ರಾಜ್ಯದಲ್ಲಿ 48.15 ಲಕ್ಷ ಹೆಕ್ಟೇರ್‌ನಲ್ಲಿನ ಬೆಳೆ ನಷ್ಟವಾಗಿದೆ. ಇಷ್ಟೂ ಪ್ರದೇಶದಲ್ಲಿನ ಬೆಳೆಯು ಶೇ 33 ಮತ್ತು ಅದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಕೆಲವು ಪ್ರದೇಶದಲ್ಲಿ ಬೆಳೆಯು ಶೇ 100ರಷ್ಟೂ ನಷ್ಟವಾಗಿದೆ. ಕೇಂದ್ರ ಸರ್ಕಾರದ ಲೆಕ್ಕಾಚಾರ ದಂತೆಯೇ ಇದಕ್ಕೆಲ್ಲಾ ಬೇಸಾಯ ವೆಚ್ಚ ಸಹಾಯಧನ ಒದಗಿಸಬೇಕು. ಅದೇ ಲೆಕ್ಕಾ ಚಾರದಲ್ಲಿ ರೈತರಿಗೆ ಪರಿಹಾರ ಒದಗಿಸಲು ರಾಜ್ಯ ಸರ್ಕಾರಕ್ಕೆ ಒಟ್ಟು ₹4,663.12 ಕೋಟಿ ಬೇಕಿದೆ ಎಂದು ರಾಜ್ಯ ಸರ್ಕಾರ ಹೇಳಿಕೊಂಡಿದೆ.

ರಾಜ್ಯದಲ್ಲಿರುವ ಎಸ್‌ಡಿಆರ್‌ಎಫ್‌ ಮೊತ್ತ ಸಾಲದೇ ಇದ್ದರಷ್ಟೇ ಕೇಂದ್ರ ಸರ್ಕಾರದ ಬಳಿ ರಾಜ್ಯ ಸರ್ಕಾರವು ಆರ್ಥಿಕ ನೆರವು ಕೋರಬೇಕು ಎಂದು ಕೇಂದ್ರ ಸರ್ಕಾರದ ನಿಯಮಗಳು ಹೇಳುತ್ತವೆ. 2023–24ನೇ ಆರ್ಥಿಕ ವರ್ಷಕ್ಕೆ ರಾಜ್ಯದ ಪಾಲೂ ಸೇರಿ ಕೇಂದ್ರ ಸರ್ಕಾರವು ಒದಗಿಸಿದ ಎಸ್‌ಡಿಆರ್‌ಎಫ್ ಮೊತ್ತ ₹929 ಕೋಟಿ. ಈ ಮೊತ್ತ ಯಾವ ಪರಿಹಾರ ಕಾರ್ಯಕ್ಕೂ ಸಾಲುವುದಿಲ್ಲ ಎಂದು ಕೇಂದ್ರದ ಬಳಿ ಆರ್ಥಿಕ ನೆರವು ಕೋರಲಾಗಿದೆ ಎಂದು ರಾಜ್ಯ ಸರ್ಕಾರ ಹೇಳಿದೆ. ಯಾವ ಕಾರ್ಯಗಳಿಗೆಲ್ಲಾ ಹಣವನ್ನು ವೆಚ್ಚ ಮಾಡಬೇಕಿದೆ ಎಂಬುದನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ವಿವರಿಸಿದೆ. ರಾಜ್ಯದಲ್ಲಿ ತೀವ್ರ ಬರದ ಕಾರಣದಿಂದ ಬೆಳೆಯೊಂದರಲ್ಲೇ ₹35,000 ಕೋಟಿಗೂ ಅಧಿಕ ನಷ್ಟವಾಗಿದೆ. ಇದರಲ್ಲಿ ಸರಿಸುಮಾರು ಅರ್ಧದಷ್ಟು ಮೊತ್ತವನ್ನು ಮಾತ್ರ ಆರ್ಥಿಕ ನೆರವಿನ ರೂಪದಲ್ಲಿ ಕೇಳಲಾಗಿದೆ. ಕೇಂದ್ರ ಸರ್ಕಾರದ್ದೇ ನಿಯಮಗಳ ಪ್ರಕಾರ, ಕೇಂದ್ರದ ತಜ್ಞರ ತಂಡ ವರದಿ ಸಲ್ಲಿಸಿದ ಒಂದು ತಿಂಗಳ ಒಳಗೆ ಕೇಂದ್ರ ಸರ್ಕಾರವು ನೆರವನ್ನು ಒದಗಿಸಬೇಕು. ಆದರೆ ಕೇಂದ್ರ ತಂಡವು ರಾಜ್ಯಕ್ಕೆ ಭೇಟಿ ನೀಡಿ ಹಲವು ತಿಂಗಳು ಕಳೆದರೂ, ಕೇಂದ್ರದಿಂದ ನೆರವು ದೊರೆತಿಲ್ಲ. ಪರಿಹಾರ ದೊರೆಯುತ್ತದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆಯೂ ಮಾಹಿತಿ ಇಲ್ಲ.

ಹಸಿರು ಬರ

ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರವು ಸಲ್ಲಿಸಿದ ಮನವಿಯಲ್ಲಿ ‘ಹಸಿರು ಬರ’ ಎಂಬ ಪರಿಕಲ್ಪನೆಯನ್ನು ವಿವರಿಸಿದೆ. ಅಂದರೆ ಬೆಳೆ ಹಸಿರಾಗಿ ಕಂಡರೂ, ಕುಂಠಿತ ಬೆಳವಣಿಗೆ ಮತ್ತು ಇಳುವರಿ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿರುವ ಸ್ಥಿತಿಯನ್ನು ‘ಹಸಿರು ಬರ’ ಎಂದು ಕರೆಯಲಾಗಿದೆ. ರಾಜ್ಯದಲ್ಲಿ ಈ ಬಾರಿ ‘ಹಸಿರು ಬರ’ ಏಕೆ ತಲೆದೋರಿದೆ ಎಂಬುದನ್ನೂ ವರದಿಯಲ್ಲಿ ವಿವರಿಸಲಾಗಿದೆ. ಈ ಬಾರಿ ಮುಂಗಾರು ವಿಳಂಬವಾದರೂ, ಜುಲೈ ಕೊನೆಯ ವಾರ ಮತ್ತು ಆಗಸ್ಟ್‌ ಮೊದಲ ವಾರದಲ್ಲಿ ವಾಡಿಕೆಯಷ್ಟು ಮಳೆಯಾಗಿತ್ತು. ಹೀಗಾಗಿ ಬಿತ್ತನೆ ಕಾರ್ಯ ಚುರುಕಿನಿಂದ ನಡೆದಿತ್ತು. ಆದರೆ ನಂತರದ ದಿನಗಳಲ್ಲಿ ಮಳೆ ತೀವ್ರ ಕೊರತೆಯಾಗಿದ್ದು ಕುಂಠಿತ ಬೆಳವಣಿಗೆಗೆ ಕಾರಣವಾಯಿತು. ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ಆಗ್ಗಾಗ್ಗೆ ಚದುರಿದಂತೆ ಮಳೆಯಾದ ಕಾರಣ, ಪೈರುಗಳು ಹಸಿರಾದವು. ಆದರೆ ನಿರೀಕ್ಷಿತ ಮಟ್ಟದಲ್ಲಿ ಬೆಳೆವಣಿಗೆ ಸಾಧ್ಯವಾಗಲಿಲ್ಲ. ಇಳುವರಿಯೂ ಕುಸಿಯಿತು. ಈ ಪರಿಸ್ಥಿತಿಯೇ ಹಸಿರು ಬರ.

ಕೇಂದ್ರ ಸರ್ಕಾರದ ನೂತನ ನಿಯಮಗಳ ಪ್ರಕಾರ ಉಪಗ್ರಹ ಚಿತ್ರಗಳ ಮೂಲಕ ಬರ ಪೀಡಿತ ಪ್ರದೇಶದಲ್ಲಿನ ಹಸಿರಿನ ಪ್ರಮಾಣವನ್ನು ಪರಿಶೀಲಿಸಲಾಗುತ್ತದೆ. ಆದರೆ ಈಗ ಕುಂಠಿತ ಬೆಳೆವಣಿಗೆಯಿದ್ದರೂ ಹೊಲ–ತೋಟಗಳು ಹಸಿರಾಗಿ ಕಾಣುವುದರಿಂದ ಉಪಗ್ರಹ ಚಿತ್ರಗಳಲ್ಲಿ ಬರದ ತೀವ್ರತೆ ಕಾಣುವುದಿಲ್ಲ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT