ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ಉದ್ಯೋಗ ಸೃಷ್ಟಿಯಲ್ಲಿ ಭಾರತ ಕುಂಟುತ್ತಿದೆ

Published 27 ಮಾರ್ಚ್ 2024, 21:21 IST
Last Updated 27 ಮಾರ್ಚ್ 2024, 21:21 IST
ಅಕ್ಷರ ಗಾತ್ರ

‘ಈಚೆಗೆ ಉತ್ತರ ಪ್ರದೇಶ ಪೊಲೀಸ್ ಇಲಾಖೆಯು 62 ಗುಮಾಸ್ತ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿತ್ತು. ಆ ಹುದ್ದೆಗೆ 5ನೇ ತರಗತಿಯನ್ನು ಕನಿಷ್ಠ ವಿದ್ಯಾರ್ಹತೆಯಾಗಿ ನಿಗದಿ ಮಾಡಲಾಗಿತ್ತು. ಇದ್ದ 62 ಹುದ್ದೆಗಳಿಗೆ ಸಲ್ಲಿಕೆಯಾದ ಅರ್ಜಿಗಳ ಸಂಖ್ಯೆ 93,000ಕ್ಕೂ ಹೆಚ್ಚು. ಅದರಲ್ಲಿ 28,000 ಮಂದಿ ಸ್ನಾತಕೋತ್ತರ ಪದವೀಧರರಿದ್ದರು, 5,000 ಮಂದಿ ಪದವೀಧರರಿದ್ದರು. 3,700 ಮಂದಿ ಸ್ನಾತಕೋತ್ತರ ಪದವಿ ಜತೆಗೆ ಪಿಎಚ್‌.ಡಿಯನ್ನೂ ಪಡೆದಿದ್ದರು. ಇದು ಭಾರತದಲ್ಲಿನ ಯುವಜನರಿಗೆ ಉದ್ಯೋಗಾವಕಾಶದ ಕೊರತೆ ಇರುವುದನ್ನು ಸೂಚಿಸುತ್ತದೆ. ಭಾರತದ ಪತ್ರಿಕೆಗಳಲ್ಲಿ ಇಂತಹ ಸುದ್ದಿಗಳು ಆಗಾಗ್ಗೆ ವರದಿಯಾಗುತ್ತಲೇ ಇರುತ್ತವೆ...’

ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆಯು (ಐಎಲ್‌ಒ) ಈಚೆಗೆ ಬಿಡುಗಡೆ ಮಾಡಿದ, ‘ಇಂಡಿಯಾ ಎಂಪ್ಲಾಯ್‌ಮೆಂಟ್‌ ವರದಿ–2024’ರಲ್ಲಿ ಇರುವ ಉಲ್ಲೇಖವಿದು. ಭಾರತದಲ್ಲಿ ಉದ್ಯೋಗಾವಕಾಶ ಕ್ಷೀಣಿಸುತ್ತಿದೆ ಎಂಬುದರತ್ತ ಈ ವರದಿಯು ಬೊಟ್ಟುಮಾಡುತ್ತಾ ಹೋಗಿದೆ. ಭಾರತ ಸರ್ಕಾರವೇ ಬಿಡುಗಡೆ ಮಾಡುವ ವಾರ್ಷಿಕ ಸಾಂಖ್ಯಿಕ ವರದಿ, ಲೇಬರ್‌ ಫೋರ್ಸ್‌ ಪಾರ್ಟಿಸಿಪೇಷನ್‌ ವರದಿಗಳಲ್ಲಿನ ದತ್ತಾಂಶಗಳನ್ನು ಆಧರಿಸಿ ಐಎಲ್‌ಒ ಈ ವರದಿಯನ್ನು ಸಿದ್ಧಪಡಿಸಿದೆ. ಭಾರತದಲ್ಲಿ ಉದ್ಯೋಗಗಳ ಸಂಖ್ಯೆ ಏರಿಕೆಯಾಗುತ್ತಿರುದ್ದರೂ ಜನಸಂಖ್ಯೆ ಏರಿಕೆಗೆ ಅನುಗುಣವಾಗಿ ಉದ್ಯೋಗಗಳು ಸೃಷ್ಟಿಯಾಗುತ್ತಿಲ್ಲ. ಇದರಿಂದಲೇ ನಿರುದ್ಯೋಗದ ಸಮಸ್ಯೆ ತಲೆದೋರಿದೆ ಎನ್ನುತ್ತದೆ ಈ ವರದಿ.

2000ನೇ ಇಸವಿಯಲ್ಲಿ ದೇಶದಾದ್ಯಂತ ದುಡಿಯುವ ವಯಸ್ಸಿನವರ (15 ವರ್ಷದಿಂದ 59 ವರ್ಷ) ಸಂಖ್ಯೆ 39.63 ಕೋಟಿಯಷ್ಟಿತ್ತು. ಆಗ  38.71 ಕೋಟಿಯಷ್ಟು ಔಪಚಾರಿಕ ಮತ್ತು ಅನೌಪಚಾರಿಕ ಉದ್ಯೋಗಗಳು ಲಭ್ಯವಿದ್ದವು. ಆ ಲೆಕ್ಕಾಚಾರದಲ್ಲಿ ನಿರುದ್ಯೋಗಿಗಳ ಸಂಖ್ಯೆ 92 ಲಕ್ಷದಷ್ಟು ಮಾತ್ರ. 2022ರ ವೇಳೆಗೆ ದೇಶದಲ್ಲಿನ ದುಡಿಯುವ ವಯಸ್ಸಿನ ಜನರ ಸಂಖ್ಯೆ 56.74 ಕೋಟಿಯಷ್ಟಾಗಿದೆ ಎಂದು ಅಂದಾಜಿಸಲಾಗಿದೆ. ಆದರೆ ಲಭ್ಯವಿದ್ದ ಉದ್ಯೋಗಗಳ ಸಂಖ್ಯೆ 54.45 ಕೋಟಿಷ್ಟು ಮಾತ್ರ. ಈ 54.45 ಕೋಟಿ ಉದ್ಯೋಗಗಳಲ್ಲಿ ವೇತನವಿಲ್ಲದ ಮನೆಕೆಲಸ, ಕುಟುಂಬದ ಉದ್ಯೋಗಗಳು ಮತ್ತು ಕೃಷಿ ಚಟುವಟಿಕೆಗಳೂ ಸೇರಿವೆ. ಇವು ದೇಶದ ಆರ್ಥಿಕತೆಗೆ ಕೊಡುಗೆಯನ್ನು ನೀಡುತ್ತವೆಯಾದರೂ, ಅವನ್ನು ಪೂರ್ಣ ಪ್ರಮಾಣದ ಉದ್ಯೋಗಗಳೆಂದು ಪರಿಗಣಿಸಲು ಸಾಧ್ಯವಿಲ್ಲ. ಅವುಗಳನ್ನು ಗಣನೆಗೆ ತೆಗೆದುಕೊಂಡರೂ 2.29 ಕೋಟಿ ಜನರಿಗೆ ಅರೆಕಾಲಿಕ ಅಥವಾ ದಿನಗೂಲಿ ಕೆಲಸವೂ ಲಭ್ಯವಿಲ್ಲ. ಜನಸಂಖ್ಯೆ ಏರಿಕೆಯಾದ ಮಟ್ಟದಲ್ಲೇ ಉದ್ಯೋಗಗಳು ಸೃಷ್ಟಿಯಾಗದೇ ಇರುವುದೇ ನಿರುದ್ಯೋಗಿಗಳ ಸಂಖ್ಯೆ ಏರಿಕೆಯಾಗಲು ಕಾರಣ ಎಂದು ವರದಿಯಲ್ಲಿ ವಿಶ್ಲೇಷಿಸಲಾಗಿದೆ.

ಭಾರತದ ಆರ್ಥಿಕತೆ ಉತ್ತಮ ಬೆಳವಣಿಗೆಯ ಹಾದಿಯಲ್ಲಿದೆ. ಆದರೆ ಆ ಬೆಳವಣಿಗೆಗೆ ಹೆಚ್ಚಿನ ಕೊಡುಗೆ ಇರುವುದು ಸೇವಾ ವಲಯದ್ದು. ಭಾರತ ಸರ್ಕಾರದ ಆರ್ಥಿಕ ನೀತಿಗಳು ಸೇವಾ ವಲಯದ ಬೆಳವಣಿಗೆಗೆ ಉತ್ತೇಜನ ನೀಡುತ್ತವೆಯೇ ಹೊರತು, ತಯಾರಿಕಾ ವಲಯಕ್ಕೆ ಅಷ್ಟೇ ಮಟ್ಟದ ಉತ್ತೇಜನ ನೀಡುವುದಿಲ್ಲ. ಸೇವಾ ವಲಯವು ಸೃಷ್ಟಿಸುವ ಉದ್ಯೋಗಗಳ ಪ್ರಮಾಣ ಸೀಮಿತವಾದುದು. ಆದರೆ ತಯಾರಿಕಾ ವಲಯವು ಪೂರಕ ಮತ್ತು ಪರೋಕ್ಷ ಉದ್ಯೋಗಗಳನ್ನೂ ಅಪಾರ ಸಂಖ್ಯೆಯಲ್ಲಿ ಸೃಷ್ಟಿಸುತ್ತದೆ. ಈ ಮಹತ್ವದ ಕ್ಷೇತ್ರವನ್ನು ಭಾರತ ಸರ್ಕಾರವು ತುಸು ಕಡೆಗಣಿಸಿದ ಪರಿಣಾಮ ಅಗತ್ಯ ಮಟ್ಟದಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿಲ್ಲ ಎಂದು ಸರ್ಕಾರದತ್ತ ಬೊಟ್ಟು ಮಾಡುತ್ತದೆ ಐಎಲ್‌ಒ ವರದಿ.

ಆರ್ಥಿಕತೆಯಲ್ಲಿ ಭಾಗಿಯಾಗುವಿಕೆ ಇಳಿಕೆ

ದೇಶದಲ್ಲಿ ಆರ್ಥಿಕ ಚಟುವಟಿಕೆಗಳಲ್ಲಿ ಭಾಗಿಯಾಗುವ ಯುವಜನರ ಪ್ರಮಾಣ ಈ ಎರಡು ದಶಕಗಳ ಅವಧಿಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ.

2000ನೇ ಇಸವಿಯಲ್ಲಿ 15 ವರ್ಷದಿಂದ 29 ವರ್ಷ ವಯಸ್ಸಿನ ಯುವಜನರಲ್ಲಿ ಶೇ 54ರಷ್ಟು ಮಂದಿ ಆರ್ಥಿಕ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದರು. ಅಂದರೆ ದೇಶದಲ್ಲಿದ್ದ ಯುವಜನರಲ್ಲಿ ಅರ್ಧಕ್ಕಿಂತಲೂ ಹೆಚ್ಚು ಜನರು ಔಪಚಾರಿಕ ಮತ್ತು ಅನೌಪಚಾರಿಕ, ಸಂಘಟಿತ–ಅಸಂಘಟಿತ ವಲಯಗಳು ಸೇರಿ ಎಲ್ಲಾ ಸ್ವರೂಪದ ಆರ್ಥಿಕ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದರು. ಆದರೆ ನಂತರದ ವರ್ಷಗಳಲ್ಲಿ ಈ ಪ್ರಮಾಣ ಇಳಿಕೆಯಾಗುತ್ತಲೇ ಬಂದಿದೆ.

2012ರ ವೇಳೆಗೆ ಈ ಪ್ರಮಾಣ ಶೇ 44ಕ್ಕೆ ಇಳಿಕೆಯಾಗಿತ್ತಾದರೂ, 2019ರ ವೇಳೆಗೆ ಶೇ 38ರಷ್ಟಕ್ಕೆ ಇಳಿಕೆಯಾಗಿತ್ತು. ಇದು ಈ wಎರಡು ವರ್ಷಗಳಲ್ಲೇ ಕನಿಷ್ಠ. 2019ಕ್ಕೆ ಹೋಲಿಸಿದರೆ 2022ರ ವೇಳೆಗೆ ಆರ್ಥಿಕ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದ ಯುವಜನರ ಪ್ರಮಾಣ ಸ್ವಲ್ಪ ಏರಿಕೆಯಾಗಿದೆ. ಆದರೆ ಅದು 2000ರಲ್ಲಿ ಇದ್ದ ಮಟ್ಟವನ್ನು ತಲುಪಲು ಸಾಧ್ಯವಾಗಿಲ್ಲ.

ದೇಶದಲ್ಲಿ ಪೂರ್ಣ ಪ್ರಮಾಣದ ಉದ್ಯೋಗದಲ್ಲಿ ತೊಡಗಿಸಿಕೊಂಡ ಯುವಜನರ (15 ವರ್ಷದಿಂದ 29 ವರ್ಷ) ಪ್ರಮಾಣ ಈ ಎರಡು ದಶಕಗಳಲ್ಲಿ ಭಾರಿ ಕುಸಿದಿದೆ.
2000ರಲ್ಲಿ ಪೂರ್ಣ ಮಟ್ಟದ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಯುವಜನರ ಪ್ರಮಾಣ ಶೇ 52ರಷ್ಟು ಇತ್ತು. 2022ರ ವೇಳೆಗೆ ಇದು ಶೇ 37ಕ್ಕೆ ಇಳಿಕೆಯಾಗಿದೆ. ಈ 22 ವರ್ಷಗಳಲ್ಲಿ ಉದ್ಯೋಗಿ ಯುವಕರ ಪ್ರಮಾಣದಲ್ಲಿ 15 ಶೇಕಡಾವಾರು ಅಂಶಗಳಷ್ಟು ಇಳಿಕೆಯಾಗಿದೆ. ಉದ್ಯೋಗಾವಕಾಶವು ಕಡಿಮೆಯಾಗಿರುವುದನ್ನೇ ಇದು ಸೂಚಿಸುತ್ತದೆ.

ಇದೇ ಅವಧಿಯಲ್ಲಿ ವಿದ್ಯಾಭ್ಯಾಸದಲ್ಲಿ ತೊಡಗಿಕೊಂಡ ಯುವಜನರ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. 2000ರಲ್ಲಿ ಶೇ 18ರಷ್ಟಿದ್ದ ಈ ಪ್ರಮಾಣವು, 2022ರ ವೇಳೆಗೆ ಶೇ 35ಕ್ಕೆ ಏರಿಕೆಯಾಗಿದೆ. ಯುವಜನರು ಹೆಚ್ಚಿನ ಶಿಕ್ಷಣ ಪಡೆಯಲು ಮುಂದಾಗಿದ್ದಾರೆ ಮತ್ತು ಉದ್ಯೋಗ ದೊರೆಯದೇ ಇರುವ ಕಾರಣ ಶಿಕ್ಷಣ ಮುಂದುವರಿಸುತ್ತಿದ್ದಾರೆ ಎಂದು ಇದನ್ನು ವಿಶ್ಲೇಷಿಸಲಾಗಿದೆ.

ಎಲ್ಲಕ್ಕಿಂತ ಮುಖ್ಯವಾಗಿ ಗಮನಿಸಬೇಕಾದ ಮತ್ತೊಂದು ಸಂಗತಿ ಎಂದರೆ ಅನೌಪಚಾರಿಕ ಆರ್ಥಿಕ ಚಟುವಟಿಕೆಗಳಲ್ಲಿ ಭಾಗಿಯಾಗುವ ಯುವಜನರ ಪ್ರಮಾಣವೂ ಕುಸಿತವಾಗಿರುವುದು. ಮನೆಕೆಲಸ, ಕುಟುಂಬದ ಕಸುಬಿನಲ್ಲಿ ಭಾಗಿಯಾಗುವುದು, ಕೃಷಿ ಮತ್ತು ಕೃಷಿ ಸಂಬಂಧಿ ಚಟುವಟಿಕೆಗಳಲ್ಲಿ ಭಾಗಿಯಾಗುವುದು ಮತ್ತು ಈ ಎಲ್ಲಾ ಚಟುವಟಿಕೆಗಳಲ್ಲಿ ವೇತನ ಇಲ್ಲದೇ ದುಡಿಯುವುದನ್ನು ಅನೌಪಚಾರಿಕ ಆರ್ಥಿಕ ಚಟುವಟಿಕೆ ಎಂದು ಪರಿಗಣಿಸಲಾಗುತ್ತದೆ. ಅಂತಹ ಆರ್ಥಿಕ ಚಟುವಟಿಕೆಗಳಲ್ಲಿ ಭಾಗಿಯಾಗುವವರ ಪ್ರಮಾಣ 2000ನೇ ಇಸವಿಯ ವೇಳೆಗೆ ಶೇ 25ರಷ್ಟು ಇತ್ತು. ಆದರೆ ಅದು 2022ರ ವೇಳೆಗೆ ಶೇ 22ಕ್ಕೆ ಕುಸಿದಿದೆ.

ಈ ವಯಸ್ಸಿನ ಯುವಜನರು ವಿದ್ಯಾಭ್ಯಾಸಕ್ಕೆ ತೊಡಗಿಕೊಳ್ಳುತ್ತಿರುವ ಪ್ರಮಾಣ ಏರಿಕೆಯಾಗಿರುವುದರಿಂದ ಆರ್ಥಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು ಕಡಿಮೆಯಾಗಿದೆ ಎಂದು ಭಾವಿಸಬಹುದಾದರೂ, ವಾಸ್ತವ ಅಷ್ಟು ಸರಳವಾಗಿಲ್ಲ. ಇದರಲ್ಲಿ ಅನೌಪಚಾರಿಕ ಶಿಕ್ಷಣದಲ್ಲಿ ತೊಡಗಿಕೊಂಡಿರುವವರ ಪ್ರಮಾಣವೂ ಸೇರಿದೆ. ಅನೌಪಚಾರಿಕ ಆರ್ಥಿಕ ಚಟುವಟಿಕೆಗಳಲ್ಲಿ ಭಾಗಿಯಾಗುವವರ ಪ್ರಮಾಣದಲ್ಲಿ ಆಗಿರುವ ಇಳಿಕೆಯು, ಅಂತಹ ಚಟುವಟಿಕೆಗಳಿಗೆ ಪೂರಕವಾದ ವಾತಾವರಣ ಇಲ್ಲ ಎಂಬುದನ್ನೇ ಸೂಚಿಸುತ್ತದೆ ಎಂದು ವರದಿಯಲ್ಲಿ ವಿಶ್ಲೇಷಿಸಲಾಗಿದೆ.

ಇದಲ್ಲದೇ ಈ ಅವಧಿಯಲ್ಲಿ ಯುವಜನರಲ್ಲಿ ನಿರುದ್ಯೋಗದ ಪ್ರಮಾಣವೂ ಭಾರಿ ಏರಿಕೆಯಾಗಿದೆ ಎಂಬುದನ್ನು ಗಮನಿಸಬೇಕು. 2000ರಲ್ಲಿ ಯುವಜನರಲ್ಲಿ ನಿರುದ್ಯೋಗಿಗಳ ಪ್ರಮಾಣ ಶೇ 3ರಷ್ಟು ಇತ್ತು. 2019ರ ವೇಳೆಗೆ ಇದು ಶೇ 7ಕ್ಕೆ ಏರಿಕೆಯಾಗಿತ್ತು. 2022ರಲ್ಲಿ ಶೇ 5ಕ್ಕೆ ಇಳಿಕೆಯಾದರೂ, 2000ರಲ್ಲಿ ಇದ್ದುದಕ್ಕಿಂತ ಹೆಚ್ಚೇ ಇದೆ. ನಿರುದ್ಯೋಗದ ಪ್ರಮಾಣ ಹೆಚ್ಚಾಗಿದೆ ಎಂಬುದನ್ನು ಇದು ಸೂಚಿಸುತ್ತದೆ.

ದೇಶದಲ್ಲಿರುವ ನಿರುದ್ಯೋಗಿಗಳಲ್ಲಿ ಯುವಜನರ ಪ್ರಮಾಣವೇ ಅತ್ಯಧಿಕ. ಆ ಯುವಜನರಲ್ಲಿ ಕಾಲೇಜು ಶಿಕ್ಷಣ ಮತ್ತು ಉನ್ನತ ಶಿಕ್ಷಣ ಪಡೆದಂತಹ ನಿರುದ್ಯೋಗಿಗಳದ್ದೇ ಸಿಂಹಪಾಲು ಎನ್ನುತ್ತದೆ ವರದಿಯ ದತ್ತಾಂಶಗಳು. 

ದೇಶದ ಒಟ್ಟು ನಿರುದ್ಯೋಗಿಗಳಲ್ಲಿ ಯುವಜನರ ಪ್ರಮಾಣ ಶೇ 82.9ರಷ್ಟು ಇದ್ದರೆ, ಅದರಲ್ಲಿ ವಿದ್ಯಾವಂತ ನಿರುದ್ಯೋಗಿಗಳ ಪ್ರಮಾಣ ಶೇ 65.7ರಷ್ಟಿದೆ. ಈ ಹಿಂದಿನ ದಶಕಗಳಲ್ಲಿ ವಿದ್ಯಾವಂತ ನಿರುದ್ಯೋಗಿಗಳ ಪ್ರಮಾಣ ಇಷ್ಟು ಇರಲಿಲ್ಲ. 2000ರಲ್ಲಿ ಇಂತಹ ನಿರುದ್ಯೋಗಿಗಳ ಪ್ರಮಾಣ ಶೇ 54ರಷ್ಟು ಇದ್ದರೆ, ನಂತರದ ವರ್ಷಗಳಲ್ಲಿ ಏರಿಕೆಯಾಗುತ್ತಲೇ ಇದೆ. 2022ರಲ್ಲಿ ಇದು ಈ ಎರಡು ದಶಕಗಳಲ್ಲೇ ಗರಿಷ್ಠಮಟ್ಟಕ್ಕೆ ಏರಿದೆ. 

ವಿದ್ಯಾರ್ಹತೆ ಇದ್ದರೂ ಉದ್ಯೋಗ ಬೇಡುವ ಕೌಶಲ ಇಲ್ಲದಿರುವುದೂ ವಿದ್ಯಾವಂತ ನಿರುದ್ಯೋಗಿಗಳ ಪ್ರಮಾಣ ಹೆಚ್ಚಾಗಲು ಪ್ರಮುಖ ಕಾರಣ. ಭಾರತ ಸರ್ಕಾರದ ಕೌಶಲ ಅಭಿವೃದ್ಧಿ ಯೋಜನೆಯೂ ವಿಫಲವಾಗಿದೆ ಅಥವಾ ನಿರೀಕ್ಷಿತ ಮಟ್ಟದಲ್ಲಿ ಫಲ ನೀಡಿಲ್ಲ ಎಂಬುದನ್ನು ಇದು ಸೂಚಿಸುತ್ತದೆ ಎಂದು ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.

‌* ಅತ್ಯಂತ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿರುವುದು ಯುವಕರ ಭಾಗವಹಿಸುವಿಕೆ. 2000ರಲ್ಲಿ ಶೇ 74ರಷ್ಟಿದ್ದ ಈ ಪ್ರಮಾಣವು 2022ರಲ್ಲಿ ಶೇ 61.2ಕ್ಕೆ ಇಳಿಕೆಯಾಗಿದೆ.

* ಯುವತಿಯರು ಆರ್ಥಿಕತೆಯಲ್ಲಿ ಭಾಗಿಯಾಗುವ ಪ್ರಮಾಣವೂ ಅಪಾಯಕಾರಿ ಮಟ್ಟದಲ್ಲೇ ಇಳಿಕೆಯಾಗಿದೆ. 2000ರಲ್ಲಿ ಶೇ 34ರಷ್ಟು ಯುವತಿಯರು ಆರ್ಥಿಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರೆ, 2022ರಲ್ಲಿ ಅದು ಶೇ 21.7ಕ್ಕೆ ಕುಸಿದಿದೆ. ಅಂದರೆ ದೇಶದಲ್ಲಿರುವ 15–29 ವರ್ಷ ವಯಸ್ಸಿನ ಯುವತಿಯರಲ್ಲಿ ಶೇ 78.3ರಷ್ಟು ಯುವತಿಯರು ಯಾವುದೇ ರೀತಿಯ ಆರ್ಥಿಕ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿಲ್ಲ ಎಂಬುದನ್ನು ಇದು ಸೂಚಿಸುತ್ತದೆ

*ಒಟ್ಟಾರೆಯಾಗಿ ‘ಯುವ ದೇಶ’ ಎನಿಸಿಕೊಂಡಿರುವ ಭಾರತದಲ್ಲಿ, ಯುವಜನರಿಗೆ ಉದ್ಯೋಗಾವಕಾಶಗಳು ಕ್ಷೀಣಿಸುತ್ತಿವೆ ಮತ್ತು ಅವರು ಆರ್ಥಿಕತೆಯಲ್ಲಿ ಸಕ್ರಿಯವಾಗಿ ಭಾಗಿಯಾಗುವ ಅವಕಾಶಗಳು ಕಡಿಮೆಯಾಗುತ್ತಿವೆ ಎಂಬುದನ್ನು ಈ ದತ್ತಾಂಶಗಳು ಸೂಚಿಸುತ್ತವೆ

ಆಧಾರ: ‘ಇಂಡಿಯಾ ಎಂಪ್ಲಾಯ್‌ಮೆಂಟ್‌ ವರದಿ–2024’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT