ಎರಡು ತಿಂಗಳುಗಳ ಹಿಂದೆ ‘ಚಾಕಲೇಟ್ ಬಾಯ್’ ಶುಭಮನ್ ಗಿಲ್ ನಾಯಕತ್ವದ ತಂಡವು ಇಂಗ್ಲೆಂಡ್ಗೆ ಹೊರಟು ನಿಂತಾಗ ವ್ಯಂಗ್ಯ ಮಾಡಿದ್ದವರು ಹಲವರು. ‘ಎಳೆಯರೇ ಹೆಚ್ಚಿನ ಸಂಖ್ಯೆಯಲ್ಲಿರುವ ಈ ತಂಡ ಸರಣಿಯಲ್ಲಿ ಒಂದು ಪಂದ್ಯ ಗೆದ್ದರೂ ಹೆಚ್ಚು’ ಎಂದು ಮೂಗು ಮುರಿದವರೆಲ್ಲರೂ ಸೋಮವಾರ ಸಂಜೆ ನಿಬ್ಬೆರಗಾದರು. ಎಳೆಯ ಹುಡುಗರ ಬಳಗದ ಸಾಧನೆಗೆ ಚಪ್ಪಾಳೆ ತಟ್ಟಿದರು.

ಹೌದು; ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಆರ್.ಅಶ್ವಿನ್ ಅವರಂತಹ ಖ್ಯಾತನಾಮ ಆಟಗಾರರಿಲ್ಲದೇ ತಂಡವು ಐದು ಪಂದ್ಯಗಳ ಮಹತ್ವದ ಸರಣಿಗೆ ಹೋಗುವುದೆಂದರೆ ಅದೊಂದು ಕಠಿಣ ಪಯಣವೇ ಸೈ. ಏಕೆಂದರೆ ಇಂಗ್ಲೆಂಡ್ನಲ್ಲಿ ಟೆಸ್ಟ್ ಸರಣಿ ಆಡುವುದೆಂದರೆ 11 ಆಟಗಾರರಷ್ಟೇ ಎದುರಾಳಿಗಳಾಗಿರುವುದಿಲ್ಲ. ಆಗಾಗ ಬಣ್ಣ ಬದಲಾಯಿಸುವ ಅಲ್ಲಿಯ ಹವಾಗುಣ, ನಿಂದನೆಗಳ ಬಾಣಬಿಡುವ ಇಂಗ್ಲೆಂಡ್ ಅಭಿಮಾನಿಗಳು, ಭಾರತದ ಆಟಗಾರರ ಆತ್ಮವಿಶ್ವಾಸ ಕಲಕುವ ಮಾಧ್ಯಮಗಳನ್ನು ಕೂಡ ಎದುರಿಸಬೇಕು. ಹಲವು ದಶಕಗಳಿಂದ ಈ ರೀತಿಯೇ ನಡೆಯುತ್ತಿದೆ. ಅದಕ್ಕಾಗಿ ಕಪಿಲ್ ದೇವ್, ಮಹೇಂದ್ರಸಿಂಗ್ ಧೋನಿ, ವಿರಾಟ್ ಕೊಹ್ಲಿ, ಸೌರವ್ ಗಂಗೂಲಿಯಂತಹ ದಿಟ್ಟೆದೆಯ ನಾಯಕರೇ ಬೇಕು. ಗಿಲ್ ಅವರಿಗೆ ಇದು ಸಾಧ್ಯವೇ ಎಂಬ ಅನುಮಾನಗಳಿದ್ದವು. ಆದರೆ ಈಗ ಎಲ್ಲ ಸಂಶಯಗಳಿಗೆ ಉತ್ತರ ಸಿಕ್ಕಿದೆ. ಗಿಲ್ ಬಳಗ 2–2ರಿಂದ ಸರಣಿ ಸಮ ಮಾಡಿಕೊಂಡಿದೆ. ಇದೇನೂ ಸಣ್ಣ ಸಾಧನೆಯಲ್ಲ. ಏಕೆಂದರೆ ಭಾರತ ತಂಡವು ಇಂಗ್ಲೆಂಡ್ ನೆಲದಲ್ಲಿ ಇದುವರೆಗೆ ಸರಣಿ ಜಯಿಸಿರುವುದು ಮೂರು ಬಾರಿ ಮಾತ್ರ. ಡ್ರಾ ಮಾಡಿಕೊಂಡಿರುವುದು ಇದು ಮೂರನೇ ಸಲ.

ಈ ಸರಣಿಯನ್ನು ಸೋಲು ಮತ್ತು ಗೆಲುವಿನ ದೃಷ್ಟಿಕೋನದಲ್ಲಿ ಮಾತ್ರ ನೋಡಲಾಗದು. ಏಕೆಂದರೆ, ಇದು ಟೆಸ್ಟ್ ಕ್ರಿಕೆಟ್ ಪುನರುತ್ಥಾನಕ್ಕೆ ಹೊಸ ಚೈತನ್ಯ ತುಂಬಿದ ಸರಣಿಯೂ ಹೌದು.

ಐದು ದಿನಗಳ ಆಟ: ಜೂನ್ 20ರಂದು ಹೆಡಿಂಗ್ಲೆಯಲ್ಲಿ ಆ್ಯಂಡರ್ಸನ್–ತೆಂಡೂಲ್ಕರ್ ಟೆಸ್ಟ್ ಸರಣಿ ಆರಂಭವಾಗುವ ಮೂರು ದಿನಗಳ ಮುನ್ನ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಒಂದು ಮಹತ್ವದ ಪ್ರಕಟಣೆಯೊಂದನ್ನು ನೀಡಿತ್ತು. ಟಿ20 ಕ್ರಿಕೆಟ್ ಯುಗದಲ್ಲಿ ಟೆಸ್ಟ್ ಕ್ರಿಕೆಟ್ ನೋಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. 2027ರಿಂದ ಆರಂಭವಾಗುವ ಐದನೇ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನಲ್ಲಿ ಪಂದ್ಯಗಳನ್ನು ನಾಲ್ಕು ದಿನಗಳಿಗೆ ನಿಗದಿ ಮಾಡುವುದು ಸೂಕ್ತ ಎಂದು ಪ್ರಕಟಿಸಿತ್ತು. ಇದಕ್ಕೆ ಹಲವು ಖ್ಯಾತನಾಮರೂ ದನಿಗೂಡಿಸಿದ್ದರು. ಆದರೆ, ಸೋಮವಾರ ಟೆಸ್ಟ್ ಸರಣಿ ಮುಕ್ತಾಯವಾದ ನಂತರ ಐಸಿಸಿಯು ತನ್ನ ಯೋಜನೆಯನ್ನು ಬದಲಾಯಿಸುವ ಬಗ್ಗೆ ಯೋಚಿಸಬಹುದೇನೋ?

ಈ ಸರಣಿಯ ಎಲ್ಲ ಪಂದ್ಯಗಳ ಫಲಿತಾಂಶಗಳೂ ಐದನೇ ದಿನವೇ ಹೊರಹೊಮ್ಮಿರುವುದು ವಿಶೇಷ. ಲಂಡನ್ನ ಓವಲ್ ಕ್ರೀಡಾಂಗಣದಲ್ಲಿ ನಡೆದ ಕೊನೆಯ ಪಂದ್ಯವು ಬಹುಶಃ ನಾಲ್ಕೇ ದಿನಗಳಲ್ಲಿ ಮುಗಿಯುತ್ತಿತ್ತು. ಆದರೆ ಮಳೆಯಿಂದಾಗಿ ಕೊನೆಯ ದಿನಕ್ಕೆ ಹೋಯಿತು. ಮೊದಲ ನಾಲ್ಕು ಪಂದ್ಯಗಳು ಪೂರ್ಣ ಅವಧಿಯಲ್ಲಿ ನಡೆದವು. ಅಷ್ಟೇ ಅಲ್ಲ. ಎಲ್ಲ ಮೈದಾನಗಳಲ್ಲಿಯೂ ಪ್ರೇಕ್ಷಕರು ಕಿಕ್ಕಿರಿದು ಸೇರಿದ್ದರು. ಇಂಗ್ಲಿಷ್ ನಾಡಿನ ಬಿರುಬೇಸಿಗೆಯಲ್ಲಿ ಬಿಯರ್ ಹೀರುತ್ತ ಟೆಸ್ಟ್ ಕ್ರಿಕೆಟ್ ಆಸ್ವಾದಿಸಿದರು. ಆಗಾಗ ಮಳೆ ಬಂದರೂ ತಮ್ಮ ಸ್ಥಾನಗಳಿಂದ ಕಾಲು ಕೀಳಲಿಲ್ಲ. ಇನ್ನು ಸರಣಿಯ ಅಧಿಕೃತ ಪ್ರಸಾರಕ ವಾಹಿನಿ ಮತ್ತು ಆ್ಯಪ್ಗಳಲ್ಲಿ ವೀಕ್ಷಕರ ಸಂಖ್ಯೆ ಬಹುಕೋಟಿಯಾಗಿತ್ತು.

ಏಳೆಂಟು ವರ್ಷಗಳ ಹಿಂದೆ ಟೆಸ್ಟ್ ಕ್ರಿಕೆಟ್ ಉಳಿಯುವುದೇ ಕಷ್ಟ ಎಂಬ ಸ್ಥಿತಿ ನಿರ್ಮಾಣವಾಗಿತ್ತು. ಆದರೆ ಈ ಪಾರಂಪರಿಕ ಮಾದರಿಯನ್ನು ಉಳಿಸಿಕೊಳ್ಳಲು ಐಸಿಸಿಯು ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ (ಡಬ್ಲ್ಯುಟಿಸಿ) ಆರಂಭಿಸಿತು. ಅದರ ಫಲವಾಗಿ ಪಂದ್ಯಗಳಲ್ಲಿ ಫಲಿತಾಂಶಗಳನ್ನು ಪಡೆಯಲೇಬೇಕು ಎಂಬ ಮಹತ್ವಾಕಾಂಕ್ಷೆ ತಂಡಗಳಲ್ಲಿ ಮೂಡಿದ್ದು ಸ್ಪರ್ಧಾತ್ಮಕತೆ ಹೆಚ್ಚಾಯಿತು. ಕಳೆದ ಮೂರು ಡಬ್ಲ್ಯುಟಿಸಿಗಳಲ್ಲಿ ಕ್ರಮವಾಗಿ ನ್ಯೂಜಿಲೆಂಡ್, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಚಾಂಪಿಯನ್ ಆದವು. ಭಾರತ ಎರಡು ಬಾರಿ ರನ್ನರ್ಸ್ ಅಪ್ ಆಯಿತು. ಇದೀಗ ನಾಲ್ಕನೇ ಡಬ್ಲ್ಯುಟಿಸಿ ಟೂರ್ನಿಯ ಮೊದಲ ಸರಣಿಯು ಟೆಸ್ಟ್ ಕ್ರಿಕೆಟ್ನ ಭವ್ಯ ಭವಿಷ್ಯಕ್ಕೆ ದಿಕ್ಸೂಚಿಯಾಗಿದೆ.

‘ಟೆಸ್ಟ್ ಕ್ರಿಕೆಟ್ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿದೆ ಎಂಬ ಭಾವನೆ ನನಗೆ ಬಹಳ ದಿನಗಳಿಂದಲೂ ಇತ್ತು. ಆದರೆ ಈಚೆಗೆ ಬಾರ್ಡರ್–ಗಾವಸ್ಕರ್ ಟ್ರೋಫಿ ಮತ್ತು ಈಗ ಭಾರತ–ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿಗಳನ್ನು ನೋಡಿದ ನಂತರ ಭಾವನೆ ಬದಲಾಗಿದೆ. ಟೆಸ್ಟ್ ಕ್ರಿಕೆಟ್ ಜೀವಂತವಾಗಿಯೂ ಇದೆ ಮತ್ತು ಚೆನ್ನಾಗಿಯೂ ಇದೆ. ಅದರಲ್ಲೂ ಈ ಮೂರು ದೇಶಗಳಲ್ಲಿ (ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್) ಉತ್ತಮವಾಗಿದೆ’ ಎಂದು ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟಿಗ ಗ್ಲೆನ್ ಮೆಕ್ಗ್ರಾ ಹೇಳಿದ್ದಾರೆ.

ಇಂಗ್ಲೆಂಡ್ ತಂಡದ ಮಾಜಿ ನಾಯಕ ನಾಸೀರ್ ಹುಸೇನ್ ಕೂಡ ‘ಪ್ರಸ್ತುತ ಕ್ರಿಕೆಟ್ಗೆ ಇಂತಹದೊಂದು ಸರಣಿ ಅತ್ಯಗತ್ಯವಾಗಿತ್ತು’ ಎಂದಿದ್ದಾರೆ.

ಕ್ರಿಕೆಟ್ ಅಭಿಮಾನಿಗಳಲ್ಲಿ ಈ ಭರವಸೆ ಮೂಡಲು ಈ ಸರಣಿಯಲ್ಲಿ ಉಭಯ ತಂಡಗಳು ಆಡಿದ ರೀತಿಯು ಕೂಡ ಕಾರಣವಾಗಿದೆ.

ಈ ಸರಣಿಯು ಉಭಯ ತಂಡಗಳ ಆಟಗಾರರಿಗೆ ಫಿಟ್ನೆಸ್ ಮಹತ್ವವನ್ನೂ ಕಲಿಸಿಕೊಟ್ಟಿದೆ. ದೀರ್ಘ ಮಾದರಿಯ ಕ್ರಿಕೆಟ್ನಲ್ಲಿ ಬಹುಕಾಲ ಯಶಸ್ವಿಯಾಗಬೇಕಾದರೆ ದೈಹಿಕ ಹಾಗೂ ಮಾನಸಿಕ ಕ್ಷಮತೆ ಮಜಬೂತಾಗಿರಬೇಕು. ಈ ಸರಣಿಯಲ್ಲಿ ಉಭಯ ತಂಡಗಳ ಆಟಗಾರರು ಅನುಭವಿಸಿದ ಗಾಯದ ಸಮಸ್ಯೆಗಳೇ ಇದಕ್ಕೆ ಉತ್ತಮ ಉದಾಹರಣೆಗಳು. ಆದರೂ ಕೊನೆಯ ಪಂದ್ಯದಲ್ಲಿ ಕ್ರಿಸ್ ವೋಕ್ಸ್ ಒಂದು ಕೈಗೆ ಬ್ಯಾಂಡೇಜ್ ಕಟ್ಟಿಕೊಂಡೇ ಬ್ಯಾಟ್ ಹಿಡಿದು ಕೊನೆಯ ಬ್ಯಾಟರ್ ಆಗಿ ಕ್ರೀಸ್ಗೆ ಬಂದಿದ್ದು ಇಂದಿನ ಪೀಳಿಗೆಯ ಛಲ ಮತ್ತು ಗಟ್ಟಿ ಆತ್ಮಬಲದ ಪ್ರತಿರೂಪದಂತಿತ್ತು. ಇಂತಹ ಛಲ ಮತ್ತು ಬದ್ಧತೆಯ ಆಟಗಳಿಂದಾಗಿಯೇ ಕ್ರಿಕೆಟ್ ಸೊಬಗು ಹೆಚ್ಚುತ್ತದೆ. ಅದಕ್ಕಾಗಿಯೇ ಟೆಸ್ಟ್ ಎಂದರೆ ನಿಜವಾದ ಕ್ರಿಕೆಟ್ ಅಲ್ಲವೇ?

ಅನುಭವಿ–ಯುವ ಆಟಗಾರರ ಛಲ

ಭಾರತ ತಂಡಕ್ಕೆ ಈ ಸರಣಿಯು ನಿಜಕ್ಕೂ ಅಗ್ನಿಪರೀಕ್ಷೆಯೇ ಆಗಿತ್ತು. ಗೌತಮ್ ಗಂಭೀರ್ ಅವರು ಮುಖ್ಯ ಕೋಚ್ ಆಗಿ ನೇಮಕವಾದ ನಂತರ ಒಂದೂ ಟೆಸ್ಟ್ ಸರಣಿಯನ್ನು ಭಾರತ ತಂಡವು ಗೆದ್ದಿಲ್ಲ. ತವರಿನಲ್ಲಿ ನ್ಯೂಜಿಲೆಂಡ್ ಎದುರು ಮತ್ತು ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿಗಳನ್ನು ಹೀನಾಯವಾಗಿ ಸೋತಿತ್ತು. ಅದರಿಂದಾಗಿ ರೋಹಿತ್ ಶರ್ಮಾ ಅವರ ನಾಯಕತ್ವಕ್ಕೆ ಕುತ್ತು ಬಂದೊದಗಿತ್ತು. ಅಶ್ವಿನ್ ಮತ್ತು ಕೊಹ್ಲಿ ಅವರ ದಿಢೀರ್ ನಿವೃತ್ತಿ, ವೇಗಿ ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ ಅವರನ್ನು ಕಾಡಿದ ಗಾಯ ತಂಡವನ್ನು ಅಧೀರಗೊಳಿಸಿದ್ದು ಸುಳ್ಳಲ್ಲ.

ಅನುಭವಿ ಆಟಗಾರ ಕೆ.ಎಲ್.ರಾಹುಲ್ ಅವರನ್ನು ನಾಯಕತ್ವಕ್ಕೆ ಪರಿಗಣಿಸದೇ ಯುವ ಅಟಗಾರ ಗಿಲ್ ಅವರಿಗೆ ಹೊಣೆ ನೀಡಿದ್ದು ಕೂಡ ಬಹಳಷ್ಟು ಚರ್ಚೆಗಳಿಗೆ ಕಾರಣವಾಗಿತ್ತು. ಆದರೆ ಸರಣಿ ಆರಂಭವಾದ ನಂತರ ಯುವ ಮತ್ತು ಅನುಭವಿ ಆಟಗಾರರ ಅನನ್ಯ ಹೊಂದಾಣಿಕೆಯ ಆಟ ಮೈದಾನದಲ್ಲಿ ಗರಿಗೆದರಿತು. ರಾಹುಲ್ ಮತ್ತು ಯುವಪ್ರತಿಭೆ ಯಶಸ್ವಿ ಜೈಸ್ವಾಲ್ ಅವರು ಪ್ರತಿಯೊಂದು ಇನಿಂಗ್ಸ್ನಲ್ಲಿಯೂ ಉತ್ತಮ ಆರಂಭ ನೀಡಿದರು. ಇಬ್ಬರ ಬ್ಯಾಟ್ಗಳಿಂದಲೂ ಚೆಂದದ ಶತಕಗಳು ದಾಖಲಾದವು. ಅದರಲ್ಲೂ ರಾಹುಲ್ ಅವರ ಪ್ರಬುದ್ಧ ಮತ್ತು ಪರಿಪಕ್ವ ಆಟವು ಗಮನ ಸೆಳೆಯಿತು. ಅಷ್ಟೇ ಅಲ್ಲ. ಕಠಿಣ ಸಂದರ್ಭದಲ್ಲಿ ತಮಗಿಂತ ಕಿರಿಯ ಮತ್ತು ಕೆಳಕ್ರಮಾಂಕದ ಆಟಗಾರರಿಗೆ ಮಾರ್ಗದರ್ಶನ ಮಾಡುತ್ತ ಜೊತೆಯಾಟಗಳನ್ನು ಕಟ್ಟಿದರು.

ಮಧ್ಯಮ ಕ್ರಮಾಂಕದಲ್ಲಿ ಸಾಯಿ ಸುದರ್ಶನ್, ಕರುಣ್ ನಾಯರ್, ನಿತೀಶ್ ಕುಮಾರ್ ರೆಡ್ಡಿ ಅವರು ಸಿಹಿ–ಕಹಿ ಫಲ ಅನುಭವಿಸಿದರು. ಆದರೆ ನಾಯಕತ್ವದ ಹೊಣೆಯ ಜೊತೆಗೆ ಬ್ಯಾಟಿಂಗ್ನಲ್ಲಿಯೂ ಮಿಂಚಿದವರು ಗಿಲ್. ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಆದರು. ತಂಡಕ್ಕೂ ಆಸರೆಯಾದರು. ನಾಯಕತ್ವದಲ್ಲಿ ಅವರಿನ್ನೂ ಪಳಗಬೇಕು ಎನ್ನುವುದೇನೋ ನಿಜ. ಉಪನಾಯಕ ರಿಷಭ್ ಪಂತ್ ಅವರು ತಮ್ಮ ಕಾಲಿನ ಮೂಳೆ ಮುರಿದುಕೊಂಡರೂ ಜಗ್ಗಲಿಲ್ಲ. ತಂಡಕ್ಕೆ ಬಲ ತುಂಬುವಲ್ಲಿ ಹಿಂದೆ ಬೀಳಲಿಲ್ಲ. ರವೀಂದ್ರ ಜಡೇಜ ಮತ್ತು ವಾಷಿಂಗ್ಟನ್ ಸುಂದರ್ ಅವರು ಆಲ್ರೌಂಡರ್ಗಳ ಮಹತ್ವವನ್ನು ಮತ್ತೊಮ್ಮೆ ಸಾರಿದರು. ಮ್ಯಾಂಚೆಸ್ಟರ್ ಪಂದ್ಯದಲ್ಲಿ ತಂಡದ ಸೋಲು ತಪ್ಪಿಸಿದರು. ಇವರಿಬ್ಬರೂ ಶತಕ ಬಾರಿಸಿದ್ದೂ ಅಲ್ಲದೇ ಬೌಲಿಂಗ್ನಲ್ಲಿಯೂ ಉಪಯುಕ್ತ ಕಾಣಿಕೆ ನೀಡಿದರು.

ಇನ್ನು ಮೊಹಮ್ಮದ್ ಸಿರಾಜ್ ಎಂಬ ‘ಸಿಂಹದ ಮರಿ’ ತೋರಿದ ಆಟ ಅವಿಸ್ಮರಣೀಯ. ಬೂಮ್ರಾ ಅವರಿಲ್ಲದ ಪಂದ್ಯಗಳಲ್ಲಿ ತಮ್ಮ ಹೊಣೆಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು. ಮೂರನೇ ಟೆಸ್ಟ್ನಲ್ಲಿ ಜಡೇಜ ಅವರೊಂದಿಗೆ ಬ್ಯಾಟಿಂಗ್ನಲ್ಲಿ ತೋರಿದ ದಿಟ್ಟತನ ಮೆಚ್ಚುವಂಥದ್ದು. ಕೊನೆಯ ಟೆಸ್ಟ್ನಲ್ಲಿ ಹ್ಯಾರಿ ಬ್ರೂಕ್ ಅವರ ಕ್ಯಾಚ್ ಪಡೆದಿದ್ದ ಸಿರಾಜ್ ಬೌಂಡರಿಗೆರೆಯನ್ನೂ ದಾಟಿ ಪ್ರಮಾದ ಎಸಗಿದ್ದರು. ಆದರೆ, ಅದರಿಂದ ಅವರ ಆತ್ಮವಿಶ್ವಾಸ ಕುಂದಲಿಲ್ಲ. ಬೌಲಿಂಗ್ನಲ್ಲಿ ಪರಾಕ್ರಮ ಮೆರೆದ ಅವರು ಇನಿಂಗ್ಸ್ನ ಕೊನೆಯ ವಿಕೆಟ್ ಗಳಿಸಿ ಗೆಲುವಿನ ರೂವಾರಿಯಾದರು. ಆಕಾಶ್ ದೀಪ್, ಕನ್ನಡಿಗ ಪ್ರಸಿದ್ಧ ಕೃಷ್ಣ ಅವರು ಬೌಲಿಂಗ್ನಲ್ಲಿ ನೀಡಿದ ಕಾಣಿಕೆಯೂ ಮಹತ್ವದ್ದು. ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ಅವರಿಗೆ ಒಂದೂ ಅವಕಾಶ ಸಿಗಲಿಲ್ಲವೆಂಬ ಕೊರಗು ಕೂಡ ಉಳಿಯಿತು.

ಇಂಗ್ಲೆಂಡ್ ಯೋಗದಾನವೂ ಅಮೋಘವಾದದ್ದು. ಅನುಭವಿ ಆಲ್ರೌಂಡರ್ ಬೆನ್ ಸ್ಟೋಕ್ಸ್ ನಾಯಕತ್ವ, ಬ್ಯಾಟಿಂಗ್ ಮತ್ತು ಬೌಲಿಂಗ್ಗಳು ರಂಗೇರಿದವು. ಜಿಮ್ಮಿ ಆ್ಯಂಡರ್ಸನ್, ಸ್ಟುವರ್ಟ್ ಬ್ರಾಡ್, ಜಾನಿ ಬೆಸ್ಟೊ, ಜಾಸ್ ಬಟ್ಲರ್ ಅವರಂತಹ ಖ್ಯಾತನಾಮರಿಲ್ಲದೇ ಕಣಕ್ಕಿಳಿದ ತಂಡ ಇದು. ಆದರೆ, ಸ್ಥಿತಪ್ರಜ್ಞ ಆಟಗಾರ ಜೋ ರೂಟ್, ಹೊಸ ಚಿಗುರು ಜೆಮಿ ಸ್ಮಿತ್, ಭವಿಷ್ಯದ ನಾಯಕ ಓಲಿ ಪೋಪ್, ಬೆನ್ ಡಕೆಟ್, ಜ್ಯಾಕ್ ಕ್ರಾಲಿ, ಹ್ಯಾರಿ ಬ್ರೂಕ್, ವೇಗಿ ಜೋಶ್ ಟಂಗ್, ಅಟ್ಕಿನ್ಸನ್ ಅವರು ಕೂಡ ಈ ಸರಣಿಯ ಸೊಬಗು ಹೆಚ್ಚಿಸಿದವರು. ಮುಂಬರುವ ಆ್ಯಷಸ್ ಸರಣಿಗೂ ಮುನ್ನ ಇಂಗ್ಲೆಂಡ್ ಆಟಗಾರರು ಭಾರತದ ಕಠಿಣ ಸವಾಲನ್ನು ಎದುರಿಸಿದ್ದಾರೆ. ಇದರಿಂದಾಗಿ ಉತ್ತಮ ಅನುಭವ ಅವರಿಗೆ ಲಭಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.