ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ಆಳ–ಅಗಲ: ಜಮ್ಮು ಮತ್ತು ಕಾಶ್ಮೀರ– BJP ನೆಲೆ ವಿಸ್ತರಿಸಬಲ್ಲ ಕ್ಷೇತ್ರ ಮರುವಿಂಗಡಣೆ
ಆಳ–ಅಗಲ: ಜಮ್ಮು ಮತ್ತು ಕಾಶ್ಮೀರ– BJP ನೆಲೆ ವಿಸ್ತರಿಸಬಲ್ಲ ಕ್ಷೇತ್ರ ಮರುವಿಂಗಡಣೆ
ಜಮ್ಮು ಮತ್ತು ಕಾಶ್ಮೀರಕ್ಕೆ ಚುನಾವಣೆ ನಡೆಸಿ ಎಂದು ಸುಪ್ರೀಂ ಕೋರ್ಟ್‌ ಈಚೆಗೆ ಕೇಂದ್ರ ಸರ್ಕಾರಕ್ಕೆ ಗಡುವು ನೀಡಿದೆ.
Published 15 ಡಿಸೆಂಬರ್ 2023, 20:23 IST
Last Updated 15 ಡಿಸೆಂಬರ್ 2023, 20:23 IST
ಅಕ್ಷರ ಗಾತ್ರ

ಜಮ್ಮು ಮತ್ತು ಕಾಶ್ಮೀರಕ್ಕೆ ಚುನಾವಣೆ ನಡೆಸಿ ಎಂದು ಸುಪ್ರೀಂ ಕೋರ್ಟ್‌ ಈಚೆಗೆ ಕೇಂದ್ರ ಸರ್ಕಾರಕ್ಕೆ ಗಡುವು ನೀಡಿದೆ. ಚುನಾಯಿತ ವಿಧಾನಸಭೆಯನ್ನು 2018ರಲ್ಲಿ ವಿಸರ್ಜನೆ ಮಾಡಿದ ನಂತರ ಅಲ್ಲಿ ಚುನಾವಣೆಯೇ ನಡೆದಿಲ್ಲ. ಆದರೆ ಜಮ್ಮು ಮತ್ತು ಕಾಶ್ಮೀರದ ರಾಜ್ಯದ ಸ್ಥಾನವನ್ನು ತೆಗೆದುಹಾಕಲಾಗಿದೆ. ಅದನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿಸಲಾಗಿದೆ. ಚುನಾವಣೆ ನಡೆಸಿ ಎಂಬ ಅಲ್ಲಿನ ಜನರ ಆಗ್ರಹಕ್ಕೆ ಕೇಂದ್ರದ ಬಿಜೆಪಿ ಸರ್ಕಾರವು, ‘ಕ್ಷೇತ್ರ ಮರುವಿಂಗಡಣೆ’ಯ ನಂತರ ಚುನಾವಣೆ ನಡೆಸುತ್ತೇವೆ ಎಂದು ಹೇಳುತ್ತಲೇ ಬಂದಿತ್ತು. ಕ್ಷೇತ್ರ ಮರುವಿಂಗಡಣೆಯ ಕಾರ್ಯವೂ ಮುಗಿದಿದೆ. ಸಂಬಂಧಿತ ಮಸೂದೆಯನ್ನು ಸಂಸತ್ತು ಅಂಗೀಕರಿಸಬೇಕು ಮತ್ತು ರಾಷ್ಟ್ರಪತಿಯ ಅಂಕಿತವಷ್ಟೇ ಬೀಳಬೇಕು. ಆದರೆ ಈಗಿನ ಕ್ಷೇತ್ರ ಮರುವಿಂಗಡಣೆಯಿಂದ ಚುನಾವಣೆಯಲ್ಲಿ ಬಿಜೆಪಿಗೇ ಹೆಚ್ಚು ಅನುಕೂಲವಾಗಲಿದೆ ಎಂದು ಬಿಜೆ‍ಪಿವಿರೋಧಿ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ.

-----

ಕ್ಷೇತ್ರ ಮರುವಿಂಗಡಣೆ ಆಯೋಗದ ಶಿಫಾರಸು ಮತ್ತು ವರದಿಗಳನ್ನು ದೇಶದ ಯಾವುದೇ ನ್ಯಾಯಾಲಯದಲ್ಲಿ ಪ್ರಶ್ನಿಸಲು ಅವಕಾಶವಿಲ್ಲ. ಅದರ ಶಿಫಾರಸುಗಳನ್ನು ಸಂಸತ್ತು ಅಂಗೀಕರಿಸಬೇಕು ಅಷ್ಟೆ. ಅದನ್ನು ಸಂಸತ್ತಿನ ಉಭಯ ಸದನಗಳು ಮತ್ತು ರಾಜ್ಯ ವಿಧಾನಸಭೆಯ ಮುಂದೆ ಇರಿಸಬಹುದಷ್ಟೆ. ಆ ಶಿಫಾರಸುಗಳನ್ನು ಪಾಲಿಸಲೇಬೇಕು. ಕ್ಷೇತ್ರ ಮರುವಿಂಗಡಣೆಯಿಂದ ರಾಜ್ಯಗಳ (ವಿಧಾನಸಭೆ ಹೊಂದಿರುವ ಕೇಂದ್ರಾಡಳಿತ ಪ್ರದೇಶಗಳನ್ನೂ ಒಳಗೊಂಡಂತೆ) ರಾಜಕೀಯ ಸಮೀಕರಣವೇ ಬದಲಾಗಿಬಿಡುತ್ತದೆ. ಅದರಿಂದ ಒಂದು ಪಕ್ಷಕ್ಕೆ ಮೇಲುಗೈ ಆಗಬಹುದು, ಬೇರೆ ಪಕ್ಷಗಳ ನೆಲೆಗಳೇ ಛಿದ್ರವಾಗಬಹುದು. ಜಮ್ಮು ಮತ್ತು ಕಾಶ್ಮೀರದ ಕ್ಷೇತ್ರ ಮರುವಿಂಗಡಣಾ ಆಯೋಗದ ಶಿಫಾರಸುಗಳೂ ಇಂಥದ್ದೇ ಪರಿಣಾಮವನ್ನುಂಟು ಮಾಡುತ್ತದೆ ಎಂದು ಅಲ್ಲಿನ ಪ್ರಾದೇಶಿಕ ಪಕ್ಷಗಳು ಕರಡು ವರದಿಯನ್ನು ವಿರೋಧಿಸಿದ್ದವು. 

‘ಕ್ಷೇತ್ರ ಮರುವಿಂಗಡಣಾ ಆಯೋಗದ ಶಿಫಾರಸುಗಳನ್ನು ನ್ಯಾಯಾಲಯಗಳಲ್ಲಿ ಪ್ರಶ್ನಿಸುವಂತಿಲ್ಲ ಎಂಬುದನ್ನೇ ಬಳಸಿಕೊಂಡು ಬಿಜೆಪಿ ತನಗೆ ಅನುಕೂಲ ಆಗುವಂತೆ ಕ್ಷೇತ್ರಗಳನ್ನು ವಿಂಗಡಿಸಿಕೊಂಡಿದೆ’ ಎಂದು ಪಿಡಿಪಿ, ನ್ಯಾಷನಲ್‌ ಕಾನ್ಫರೆನ್ಸ್‌ (ಎನ್‌ಸಿ) ಮತ್ತು ಜಮ್ಮು–ಕಾಶ್ಮೀರ ಪ್ರದೇಶ ಕಾಂಗ್ರೆಸ್‌ ಆರೋಪಿಸಿದ್ದವು. ಮರುವಿಂಗಡಣಾ ಕರಡು ವರದಿಯನ್ನು ತಿರಸ್ಕರಿಸಿದ್ದವು. ಕರಡು ವರದಿಗೆ ಬಂದಿದ್ದ ಆಕ್ಷೇಪ ಮತ್ತು ಅಭಿಪ್ರಾಯಗಳ ಬಗ್ಗೆ ಚರ್ಚಿಸಲು ಆಯೋಗವು 2022ರ ಏಪ್ರಿಲ್‌ 4 ಮತ್ತು 5ರಂದು ಸಾರ್ವಜನಿಕ ಸಭೆಗಳನ್ನು ಆಯೋಜಿಸಿತ್ತು. ಈ ಸಭೆಯನ್ನು ಪಿಡಿಪಿ, ನ್ಯಾಷನಲ್‌ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್‌ ಬಹಿಷ್ಕರಿಸಿದ್ದವು. ಎರಡು ಸಭೆಗಳಲ್ಲಿ ಬಿಜೆಪಿಯ ನಾಯಕರು ಮತ್ತು ಕಾರ್ಯಕರ್ತರು ಸೇರಿ ಒಟ್ಟು 1,600 ಜನರು ಭಾಗಿಯಾಗಿದ್ದರು. ಕರಡು ವರದಿಗೆ ವ್ಯಕ್ತವಾಗಿದ್ದ ಆಕ್ಷೇಪಗಳನ್ನು ಆಯೋಗವು ಈ ಸಭೆಗಳ ನಂತರವೂ ಪರಿಗಣಿಸಲಿಲ್ಲ. ರಾಜಕೀಯ ಪಕ್ಷಗಳು ಮತ್ತು ಜನರಿಂದ ವ್ಯಕ್ತವಾಗಿದ್ದ ಆಕ್ಷೇಪಗಳನ್ನು ಬದಿಗೊತ್ತಿ ಕ್ಷೇತ್ರಗಳನ್ನು ಮರುವಿಂಗಡಣೆ ಮಾಡಿತು.

ಕ್ಷೇತ್ರ ಮರುವಿಂಗಡಣೆಯ ಸ್ವರೂಪವನ್ನು ಮತ್ತು ಯಾವ ಕ್ಷೇತ್ರಗಳನ್ನು ವಿಭಜಿಸಲಾಗಿದೆ ಎಂಬುದುನ್ನು ಗಮನಿಸಿದರೆ ವಿರೋಧ ಪಕ್ಷಗಳ ಈ ಆರೋಪ ನಿಜ ಎನಿಸದೇ ಇರದು. ಕ್ಷೇತ್ರ ಮರುವಿಂಗಡಣೆ ಮೂಲಕ ಏಳು ಕ್ಷೇತ್ರಗಳನ್ನು ಹೊಸದಾಗಿ ರಚಿಸಲಾಗಿದ್ದರೂ ಅದರಲ್ಲಿ ಆರು ಕ್ಷೇತ್ರಗಳು ಬಿಜೆಪಿ ಪ್ರಾಬಲ್ಯದ ಜಿಲ್ಲೆಗಳಿಗೇ ಹೋಗಿವೆ. ಬಿಜೆಪಿ ಗೆದ್ದಿದ್ದ ಕ್ಷೇತ್ರಗಳನ್ನೇ ವಿಭಜಿಸಿ ಹೊಸ ಕ್ಷೇತ್ರಗಳನ್ನು ರಚಿಸಲಾಗಿದೆ. ಇನ್ನೊಂದೆಡೆ ವಿರೋಧ ಪಕ್ಷಗಳ ಪ್ರಾಬಲ್ಯವಿರುವ ಕ್ಷೇತ್ರಗಳನ್ನು ರದ್ದು ಮಾಡಲಾಗಿದೆ ಇಲ್ಲವೇ ಬೇರೆ ಕ್ಷೇತ್ರಗಳ ಜತೆಗೆ ವಿಲೀನ ಮಾಡಲಾಗಿದೆ. ಈ ರೀತಿ ಮಾಡಿರುವುದರಿಂದ ಪಿಡಿಪಿ, ಎನ್‌ಸಿ ಮತ್ತು ಕಾಂಗ್ರೆಸ್‌ನ ಮತಗಳು ಹಂಚಿಹೋಗಬಹುದು. ಅಂತಹ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಎರಡನೇ ಸ್ಥಾನದಲ್ಲಿದ್ದು, ಮರುವಿಂಗಡಣೆಯ ಕಾರಣಕ್ಕೆ ಆ ಕ್ಷೇತ್ರಗಳಲ್ಲಿ ಬಿಜೆಪಿಯೇ ಪ್ರಬಲ ಪಕ್ಷವಾಗುವ ಸಾಧ್ಯತೆ ಇದೆ.

ಹೆಚ್ಚಿನ ಕ್ಷೇತ್ರಗಳನ್ನು ಸೃಷ್ಟಿಸುವ ಸಲುವಾಗಿ ಕ್ಷೇತ್ರಗಳನ್ನು ಅವುಗಳ ಭೌಗೋಳಿಕ ಲಕ್ಷಣದ ಆಧಾರದಲ್ಲಿ ಮೂರು ವರ್ಗೀಕರಣ ಮಾಡಿಕೊಳ್ಳಲಾಗಿದೆ. ಸಾಮಾನ್ಯ ಪ್ರದೇಶದಲ್ಲಿರುವ ಕ್ಷೇತ್ರಗಳ ಸರಾಸರಿ ಜನಸಂಖ್ಯೆ 1.36 ಲಕ್ಷ. ಗುಡ್ಡಗಾಡು ಜಿಲ್ಲೆಗಳ ಕ್ಷೇತ್ರಗಳ ಸರಾಸರಿ ಜನಸಂಖ್ಯೆ 1.22 ಲಕ್ಷ (ಶೇ10ರಷ್ಟು ಕಡಿಮೆ) ಮತ್ತು ಬಯಲು ಜಿಲ್ಲೆಗಳ ಕ್ಷೇತ್ರಗಳ ಸರಾಸರಿ ಜನಸಂಖ್ಯೆ 1.49 ಲಕ್ಷ (ಶೇ10ರಷ್ಟು ಹೆಚ್ಚು) ಎಂದು ವರ್ಗೀಕರಣ ಮಾಡಲಾಗಿದೆ. ಜಮ್ಮು ವಿಭಾಗದ ಆರು ಜಿಲ್ಲೆಗಳು ಗುಡ್ಡಗಾಡು ಜಿಲ್ಲೆಗಳು ಎನಿಸಿಕೊಂಡಿವೆ. ಆ ಜಿಲ್ಲೆಗಳಲ್ಲಿ ಜನಸಂಖ್ಯೆ ಕಡಿಮೆ ಇದೆ. ಆದರೆ, ಗುಡ್ಡಗಾಡು ಜಿಲ್ಲೆಯ ಕ್ಷೇತ್ರಗಳ ಸರಾಸರಿ ಜನಸಂಖ್ಯೆಯನ್ನು ಕಡಿಮೆ ಮಾಡಿದ ಕಾರಣಕ್ಕೆ, ಈ ಜಿಲ್ಲೆಗಳ ಕ್ಷೇತ್ರಗಳ ಸಂಖ್ಯೆ ಏರಿಕೆಯಾಗಿದೆ. ಅಂತಹ ಜಿಲ್ಲೆಗಳೆಲ್ಲವೂ ಬಿಜೆಪಿ ಪ್ರಾಬಲ್ಯವಿರುವ ಜಮ್ಮು ವಿಭಾಗದಲ್ಲೇ ಇವೆ.

1995ರಲ್ಲಿ ನಡೆಸಿದ್ದ ಕ್ಷೇತ್ರ ಮರುವಿಂಗಡಣೆಯಲ್ಲಿ ಜಿಲ್ಲೆಗಳನ್ನು ಹೀಗೆಯೇ ವರ್ಗೀಕರಣ ಮಾಡಲಾಗಿತ್ತೇ ಎಂಬ ಆಕ್ಷೇಪವೂ ವ್ಯಕ್ತವಾಗಿತ್ತು. ಆದರೆ ಆ ಕ್ಷೇತ್ರ ವಿಂಗಡಣೆಯ ಅಂತಿಮ ವರದಿಯೇ ಕಳೆದುಹೋಗಿದೆ ಎಂದು ಲೆಫ್ಟಿನೆಂಟ್ ಗವರ್ನರ್‌ ಕಚೇರಿ ಆಯೋಗಕ್ಕೆ ಉತ್ತರ ಬರೆದಿತ್ತು. ಸರ್ಕಾರದ ಸುಪರ್ದಿಯಲ್ಲಿ ಇದ್ದ ವರದಿ ಹೇಗೆ ಕಳೆದುಹೋಯಿತು ಎಂದು ವಿರೋಧ ಪಕ್ಷಗಳು ಅನುಮಾನ ವ್ಯಕ್ತಪಡಿಸಿದ್ದವು. ಆದರೆ ಆಯೋಗವು, ‘ಭೌಗೋಳಿಕ ಲಕ್ಷಣಗಳ ಆಧಾರದಲ್ಲಿ ಕ್ಷೇತ್ರಗಳ ಸರಾಸರಿ ಜನಸಂಖ್ಯೆಯನ್ನು ಶೇ 20ರಷ್ಟು ಹೆಚ್ಚು ಅಥವಾ ಶೇ 20ರಷ್ಟು ಕಡಿಮೆ ಮಾಡಲು ಕ್ಷೇತ್ರ ಮರುವಿಂಗಡಣಾ ಕಾಯ್ದೆ ಅವಕಾಶ ಮಾಡಿಕೊಡುತ್ತದೆ. ಇದರ ಆಧಾರದಲ್ಲಿ ಈ ವರ್ಗೀಕರಣ ಮಾಡಿಕೊಳ್ಳಲಾಗಿದೆ’ ಎಂದು ತನ್ನ ನಿರ್ಧಾರವನ್ನು ಅಂತಿಮ ವರದಿಯಲ್ಲಿ ಸಮರ್ಥಿಸಿಕೊಂಡಿತ್ತು.

ಇಷ್ಟೆಲ್ಲಾ ವಿರೋಧ ಮತ್ತು ಆಕ್ಷೇಪಗಳ ಹೊರತಾಗಿಯೂ ಆಯೋಗದ ಅಂತಿಮ ವರದಿಯು ಅಂಗೀಕಾರವಾಗಿದೆ. ಅದರ ಆಧಾರದಲ್ಲಿ ರಚಿಸಲಾದ ‘ಜಮ್ಮು ಮತ್ತು ಕಾಶ್ಮೀರ ಮರುರಚನೆ (ತಿದ್ದುಪಡಿ) ಮಸೂದೆ–2023’ ಸಂಸತ್ತಿನ ಅಂಗಳಕ್ಕೂ ಬಂದಿದೆ. ಲೋಕಸಭೆಯಲ್ಲಿ ಅಂಗೀಕಾರವೂ ಆಗಿದೆ. ಇವೆಲ್ಲವುಗಳ ಮಧ್ಯೆ 2024ರ ಸೆಪ್ಟೆಂಬರ್ 30ರ ಒಳಗೆ ಜಮ್ಮು ಮತ್ತು ಕಾಶ್ಮೀರಕ್ಕೆ ಚುನಾವಣೆ ನಡೆಸಬೇಕಿದೆ.

ನಾಮನಿರ್ದೇಶಿತರ ಸಂಖ್ಯೆ ಐದಕ್ಕೆ

ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ 83(ಈಗ 90) ಸ್ಥಾನಗಳನ್ನು ಚುನಾವಣೆಯ ಮೂಲಕವೇ ತುಂಬಬೇಕು ಎಂದು ಜಮ್ಮು ಮತ್ತು ಕಾಶ್ಮೀರ ಮರುರಚನೆ ಕಾಯ್ದೆಯ 14ನೇ ಸೆಕ್ಷನ್‌ನಲ್ಲಿ ವಿವರಿಸಲಾಗಿದೆ. ಇದಲ್ಲದೆ, ಇಬ್ಬರು ಮಹಿಳೆಯರನ್ನು ವಿಧಾನಸಭೆಗೆ ನಾಮನಿರ್ದೇಶನ ಮಾಡುವ ಅವಕಾಶವನ್ನೂ ಈ ಕಾಯ್ದೆಯಲ್ಲಿ ಮಾಡಿಕೊಳ್ಳಲಾಗಿತ್ತು.

ಈ ಕಾಯ್ದೆಯ 15ನೇ ಸೆಕ್ಷನ್‌ ಅಂತಹ ಅಧಿಕಾರವನ್ನು ಲೆಫ್ಟಿನೆಂಟ್‌ ಗವರ್ನರ್‌ಗೆ ನೀಡಿದೆ. ಅದೂ, ‘ಚುನಾಯಿತ ವಿಧಾನಸಭೆಯಲ್ಲಿ ಮಹಿಳಾ ಪ್ರಾತಿನಿಧ್ಯ ತಕ್ಕಮಟ್ಟದಲ್ಲಿ ಇಲ್ಲ ಎಂದು ಲೆಫ್ಟಿನೆಂಟ್‌ ಗವರ್ನರ್‌ಗೆ ಭಾಸವಾದರೆ, ಅವರು ಇಬ್ಬರು ಮಹಿಳಾ ಪ್ರತಿನಿಧಿಗಳನ್ನು ನಾಮನಿರ್ದೇಶನ ಮಾಡಬಹುದು’ ಎಂದು 15ನೇ ಸೆಕ್ಷನ್‌ನಲ್ಲಿ ವಿವರಿಸಲಾಗಿತ್ತು. ಆದರೆ, ಮಹಿಳಾ ಪ್ರಾತಿನಿಧ್ಯ ಎಷ್ಟಿರಬೇಕು? ಮಹಿಳೆಯರ ಸಂಖ್ಯೆ ಎಷ್ಟು ಇರದಿದ್ದರೆ ಅದು ಕಡಿಮೆ ಎನಿಸಿಕೊಳ್ಳುತ್ತದೆ ಎಂಬುದನ್ನು ಕಾಯ್ದೆಯಲ್ಲಿ ವಿವರಿಸಿಲ್ಲ. (ಇದರ ಮಧ್ಯೆ ಕೇಂದ್ರ ಸರ್ಕಾರವು ಜಮ್ಮು ಮತ್ತು ಕಾಶ್ಮೀರ ಹಾಗೂ ಪುದುಚೇರಿ ವಿಧಾಸಭೆಯ ಒಟ್ಟು ಸ್ಥಾನಗಳಲ್ಲಿ ಶೇ 33ರಷ್ಟನ್ನು ಮಹಿಳೆಯರಿಗೆ ಮೀಸಲಿರಿಸುವ ಮಸೂದೆಯನ್ನೂ ಈಗ ನಡೆಯುತ್ತಿರುವ ಅಧಿವೇಶನದಲ್ಲೇ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಂಡಿಸಿದೆ. ಎರಡೂ ಸದನಗಳಲ್ಲಿ ಈ ಮಸೂದೆ ಅಂಗೀಕಾರವಾಗಿದೆ).

ಈಗ ಈ ಕಾಯ್ದೆಗೆ ತಿದ್ದುಪಡಿ ತರಲು ಮಂಡಿಸಿರುವ ಮಸೂದೆಯಲ್ಲಿ ನಾಮ ನಿರ್ದೇಶಿತರ ಸಂಖ್ಯೆಯನ್ನು ಐದಕ್ಕೆ ಏರಿಸಲು ಅವಕಾಶ ಮಾಡಿಕೊಡಲಾಗಿದೆ. ಮಸೂದೆಯಲ್ಲಿ 15ಎ ಎಂಬ ಹೊಸ ಸೆಕ್ಷನ್‌ ಅನ್ನು ಸೇರಿಸಲಾಗಿದೆ. ಕಾಶ್ಮೀರದಿಂದ ವಲಸೆ ಹೋದವರ ಪ್ರತಿನಿಧಿಯಾಗಿ ಇಬ್ಬರು ಸದಸ್ಯರನ್ನು ವಿಧಾನಸಭೆಗೆ ಲೆಫ್ಟಿನೆಂಟ್‌ ಗವರ್ನರ್ ಅವರು ನಾಮನಿರ್ದೇಶನ ಮಾಡಲು ಈ ಸೆಕ್ಷನ್‌ ಅವಕಾಶ ಮಾಡಿಕೊಡುತ್ತದೆ. ಹೊಸದಾಗಿ ಸೇರಿಸಲಾಗಿರುವ 15ಬಿ ಸೆಕ್ಷನ್‌, ಪಾಕ್‌ ಆಕ್ರಮಿತ ಕಾಶ್ಮೀರದಿಂದ ವಲಸೆ ಬಂದವರ ಸಮುದಾಯದಿಂದ ಒಬ್ಬರನ್ನು ವಿಧಾನಸಭೆಗೆ ನಾಮನಿರ್ದೇಶನ ಮಾಡುವ ಅಧಿಕಾರವನ್ನು ಲೆಫ್ಟಿನೆಂಟ್‌ ಗವರ್ನರ್‌ಗೆ ನೀಡುತ್ತದೆ.

ಈ ಮೂರು ಸೆಕ್ಷನ್‌ಗಳು ನೀಡುವ ಅಧಿಕಾರದ ಮೂಲಕ ಲೆಫ್ಟಿನೆಂಟ್‌ ಗವರ್ನರ್ ಅವರು ಒಟ್ಟು ಐವರು ಸದಸ್ಯರನ್ನು ವಿಧಾನಸಭೆಗೆ ನಾಮನಿರ್ದೇಶನ ಮಾಡಬಹುದಾಗಿದೆ. ಚುನಾಯಿತ ಪ್ರತಿನಿಧಿಗಳಿಗೆ ಇರುವ ಮತದಾನದ ಹಕ್ಕು ಈ ಐವರು ಸದಸ್ಯರಿಗೂ ಇದೆ. ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿರುವ ಲೆಫ್ಟಿನೆಂಟ್ ಗವರ್ನರ್ ಅವರು, ಕೇಂದ್ರದಲ್ಲಿರುವ ಸರ್ಕಾರದ ಅನುಕೂಲಕ್ಕೆ ತಕ್ಕಂತೆ ನಾಮನಿರ್ದೇಶನ ಮಾಡಬಹುದು. ಇವರಿಗೆ ಮತದಾನದ ಹಕ್ಕೂ ಇರುವ ಕಾರಣದಿಂದ, ಕರಡು ಮಸೂದೆಯಲ್ಲಿದ್ದ ಈ ಅಂಶಕ್ಕೆ ಆಕ್ಷೇಪ ವ್ಯಕ್ತವಾಗಿತ್ತು. ಆದರೆ ಆ ಆಕ್ಷೇಪವನ್ನು ಕಡೆಗಣಿಸಿ, ಮಸೂದೆಯನ್ನು ಹಾಗೇ ಉಳಿಸಿಕೊಳ್ಳಲಾಗಿದೆ.

ಆಧಾರ: ಜಮ್ಮು–ಕಾಶ್ಮೀರ ಮರುರಚನೆ ಕಾಯ್ದೆ–2019, ಜಮ್ಮು–ಕಾಶ್ಮೀರ ಮರುರಚನೆ (ತಿದ್ದುಪಡಿ) ಮಸೂದೆ–2023, ಜಮ್ಮು ಮತ್ತು ಕಾಶ್ಮೀರ ಕ್ಷೇತ್ರ ಮರುವಿಂಗಡಣೆ ಆದೇಶ–1995, ಜಮ್ಮು ಮತ್ತು ಕಾಶ್ಮೀರ ಕ್ಷೇತ್ರ ಮರುವಿಂಗಡಣೆ ಅಂತಿಮ ವರದಿ–2022, ಪಿಟಿಐ.

*****

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT