ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ಮಾಧ್ಯಮ ಸ್ವಾತಂತ್ರ್ಯ ಮೇಲಿನ ಕರಿ ಚುಕ್ಕೆಗಳು

Last Updated 2 ಫೆಬ್ರುವರಿ 2023, 19:31 IST
ಅಕ್ಷರ ಗಾತ್ರ

ರಿಪೋರ್ಟರ್ಸ್‌ ವಿದೌಟ್‌ ಬಾರ್ಡರ್ಸ್‌ ಸಂಸ್ಥೆಯು ಪ್ರತಿ ವರ್ಷ ಮಾಧ್ಯಮ ಸ್ವಾತಂತ್ರ್ಯದ ಸ್ಥಿತಿ ಹೇಗಿದೆ ಎಂಬ ಶ್ರೇಯಾಂಕ ಪಟ್ಟಿಯೊಂದನ್ನು ತಯಾರಿಸುತ್ತದೆ. ಭಾರತವು 2022ರಲ್ಲಿ 150ನೇ ರ‍್ಯಾಂಕ್‌ ಪಡೆದುಕೊಂಡಿದೆ. 2002ರಲ್ಲಿ 80ನೇ ಸ್ಥಾನದಲ್ಲಿದ್ದ ಭಾರತವು ಈಗ 150ನೇ ಸ್ಥಾನಕ್ಕೆ ಇಳಿದು ಪಾತಾಳಕ್ಕೆ ಕುಸಿದಿದೆ. ಕಮಿಟಿ ಟು ಪ್ರೊಟೆಕ್ಟ್‌ ಜರ್ನಲಿಸ್ಟ್ಸ್‌ (ಸಿಪಿಜೆ) ಸಂಸ್ಥೆಯು ಕಳೆದ ವರ್ಷ ಡಿಸೆಂಬರ್‌ನಲ್ಲಿ ಪ್ರಕಟಿಸಿದ ವರದಿಯ ಪ್ರಕಾರ, ತಮ್ಮ ಕರ್ತವ್ಯ ನಿರ್ವಹಣೆಯ ನಡುವೆಯೇ ಬಂಧನಕ್ಕೆ ಒಳಗಾದ ಏಳು ಪತ್ರಕರ್ತರು ಜೈಲಿನಲ್ಲಿದ್ದಾರೆ. ಅವರ ಪೈಕಿ ಸಿದ್ದಿಕ್‌ ಕಪ್ಪನ್ ಅವರೊಬ್ಬರು ಮಾತ್ರ ಗುರುವಾರ ಬಿಡುಗಡೆ ಆಗಿದ್ದಾರೆ.

ಪತ್ರಕರ್ತರು ಹತ್ಯೆ ಆಗಿರುವ ಉದಾಹಣೆಗಳು ಇವೆ. ಕಳೆದ ವರ್ಷ ಭಾರತದಲ್ಲಿ ಒಬ್ಬ ಪತ್ರಕರ್ತನ ಹತ್ಯೆ ಆಗಿದೆ. ವಿವಿಧ ರೀತಿಯ ಪ್ರಕರಣಗಳನ್ನು ದಾಖಲಿಸಿ ಪತ್ರಕರ್ತರನ್ನು ವಿಚಾರಣೆಗೆ ಒಳಪಡಿಸುವುದು, ವಿದೇಶಕ್ಕೆ ಹೋಗುವುದನ್ನು ತಡೆಯುವುದು, ಮನೆ, ಕಚೇರಿಗಳಲ್ಲಿ ಶೋಧ ನಡೆಸಿದ ಹಲವು ಪ್ರಕರಣಗಳು ಇವೆ.

ಕಳೆದ ವರ್ಷದ ಆರಂಭದಲ್ಲಿಯೇ ಅಂದರೆ, ಜನವರಿ 31ರಂದು ಮೀಡಿಯಾಒನ್‌ ಎಂಬ ಸುದ್ದಿವಾಹಿನಿಯು ತನ್ನ ಪ್ರಸಾರವನ್ನು ನಿಲ್ಲಿಸಿತು. ಪ್ರಸಾರವನ್ನು ಅಮಾನತಿನಲ್ಲಿ ಇರಿಸುವಂತೆ ವಾರ್ತಾ ಮತ್ತು ಪ್ರಸಾರ ಸಚಿವಾಲಯದಿಂದ ಇ–ಮೇಲ್‌ ಮೂಲಕ ಸೂಚನೆ ಬಂದಿತ್ತು ಎಂದು ಸಂಪಾದಕ ಪ್ರಮೋದ್‌ ರಾಮನ್‌ ಹೇಳಿದ್ದಾರೆ ಎಂದು ಸಿಪಿಜೆ ವರದಿ ಮಾಡಿದೆ.

2013ರಲ್ಲಿ ಪ್ರಸಾರ ಆರಂಭಿಸಿದ್ದ ಈ ಸುದ್ದಿವಾಹಿನಿಯ ಪರವಾನಗಿಯನ್ನು ನವೀಕರಿಸಲು ಕೇಂದ್ರ ಗೃಹ ಸಚಿವಾಲಯವು ನಿರಾಕರಿಸಿತ್ತು. ‘ಭದ್ರತಾ ಕಾರಣ’ಗಳಿಂದಾಗಿ ‍ಪರವಾನಗಿ ನವೀಕರಣೆ ಸಾಧ್ಯವಿಲ್ಲ ಎಂದಿತ್ತು ಎನ್ನಲಾಗಿದೆ. ಬಳಿಕ, ಸುಪ್ರೀಂ ಕೋರ್ಟ್‌, ಸರ್ಕಾರದ ಆದೇಶಕ್ಕೆ ತಡೆ ನೀಡಿತ್ತು.

ಜಮ್ಮು ಮತ್ತು ಕಾಶ್ಮೀರದ ಪತ್ರಕರ್ತ ಫಹಾದ್‌ ಶಾ ಅವರನ್ನು 2022ರ ಫೆಬ್ರುವರಿ 4ರಂದು ಪೊಲೀಸರು ಬಂಧಿಸಿದ್ದರು. ಅವರು ಕಾಶ್ಮೀರಿವಾಲಾ ಎಂಬ ಸುದ್ದಿ ಪೋರ್ಟಲ್‌ ನಡೆಸುತ್ತಿದ್ದಾರೆ. ವಿಚಾರಣೆಗೆಂದು ಕರೆಸಿಕೊಂಡು ಬಳಿಕ ಅವರನ್ನು ಬಂಧಿಸಲಾಗಿದೆ ಎಂದು ಅವರ ಆಪ್ತರು ಹೇಳಿದ್ದರು. ಫೇಸ್‌ಬುಕ್‌ನ ಕೆಲವು ಬಳಕೆದಾರರು ಮತ್ತು ಕೆಲವು ಪೋರ್ಟಲ್‌ಗಳು ‘ದೇಶ ವಿರೋಧಿ ವಿಚಾರ’ಗಳನ್ನು ಪ್ರಕಟಿಸಿವೆ. ಆ ಕಾರಣಕ್ಕಾಗಿ ಫಹಾದ್‌ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದರು. ಆದರೆ, ಪ್ರಕಟಿಸಿದ ವಿಚಾರಗಳು ಯಾವುವು ಎಂಬುದನ್ನು ಅವರು ಸ್ಪಷ್ಟಪಡಿಸಿಲ್ಲ.

ಮಧ್ಯಂತರ ಜಾಮೀನು ದೊರೆತು ಹೊರಬಂದ ಫಹಾದ್‌ ಅವರನ್ನು ಕಳೆದ ಫೆಬ್ರುವರಿ 26ರಂದು ಮತ್ತೆ ಬಂಧಿಸಲಾಯಿತು. ಫಹಾದ್‌ 2022ರ ಮಾರ್ಚ್‌ 5ರಂದು ಮತ್ತೆ ಜಾಮೀನು ಪಡೆದುಕೊಂಡರು. ಆದರೆ, ಕೆಲವೇ ತಾಸುಗಳಲ್ಲಿ ಅವರನ್ನು ಮತ್ತೆ ಬಂಧಿಸಲಾಯಿತು.

ಛತ್ತೀಸಗಢದ ಪತ್ರಕರ್ತ ನಿಲೇಶ್‌ ಶರ್ಮಾ ಅವರನ್ನು ರಾಯಪುರ ಪೊಲೀಸರು ಕಳೆದ ಮಾರ್ಚ್‌ 2ರಂದು ಬಂಧಿಸಿದ್ದಾರೆ. ಅವರು ಇಂಡಿಯಾರೈಟರ್ಸ್‌ ಡಾಟ್‌ ಕೊ ಡಾಟ್‌ ಇನ್‌ ಎಂಬ ವೆಬ್‌ಸೈಟ್‌ನ ಸಂಪಾದಕ.

ಕಾಂಗ್ರೆಸ್‌ ಪಕ್ಷದ ಖೈಲಾವನ್‌ ನಿಶಾದ್‌ ಎಂಬವರು ಕೊಟ್ಟ ದೂರಿನ ಆಧಾರದಲ್ಲಿ ಶರ್ಮಾ ಅವರನ್ನು ಬಂಧಿಸಲಾಗಿದೆ. ಶರ್ಮಾ ಅವರ ವಿಡಂಬನಾ ವೆಬ್‌ಸೈಟ್‌ನಲ್ಲಿ ಪ್ರಕಟವಾಗುವ ಅಂಕಣಗಳಲ್ಲಿ ತಮ್ಮ ಪಕ್ಷದ ಸಚಿವರು ಮತ್ತು ಶಾಸಕರನ್ನು ಹೋಲುವ ವ್ಯಕ್ತಿಗಳನ್ನು ಗೇಲಿ ಮಾಡಲಾಗುತ್ತಿದೆ ಎಂದು ದೂರಿನಲ್ಲಿ ಹೇಳಲಾಗಿತ್ತು.

ಪರ್ತಕರ್ತೆ ರಾಣಾ ಅಯ್ಯೂಬ್‌ ಅವರು ಲಂಡನ್‌ಗೆ ಹೋಗುವುದನ್ನು ಕಳೆದ ಮಾರ್ಚ್‌ 29ರಂದು ತಡೆಯಲಾಗಿತ್ತು. ಕೋವಿಡ್‌ ಸಂತ್ರಸ್ತರಿಗಾಗಿ ಸಂಗ್ರಹಿಸಿದ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಅವರ ಮೇಲಿದೆ. ತೆರಿಗೆ ವಂಚನೆ ಮತ್ತು ಹಣ ಅಕ್ರಮ ವರ್ಗಾವಣೆ ಆರೋಪದ ಕುರಿತು ತನಿಖೆ ನಡೆಯುತ್ತಿದೆ ಎಂಬ ಕಾರಣಕ್ಕೆ ಅವರು ಲಂಡನ್‌ಗೆ ಹೋಗುವುದನ್ನು ತಡೆಯಲಾಗಿತ್ತು.

ರಾಣಾ ಅವರು ಸರ್ಕಾರ ಮತ್ತು ಬಲಪಂಥೀಯ ಸಂಘಟನೆಗಳ ಕುರಿತಂತೆ ವಿಮರ್ಶಾತ್ಮಕವಾಗಿ ಬರೆದಿದ್ದಾರೆ ಮತ್ತು ಹಲವು ಟ್ವೀಟ್‌ಗಳನ್ನು ಮಾಡಿದ್ದಾರೆ. ಅವರಿಗೆ ಆನ್‌ಲೈನ್‌ ಬೆದರಿಕೆಗಳು ಹಲವು ಬಾರಿ ಬಂದಿವೆ. ಅವರು ಟ್ರೋಲ್‌ ಆಗಿರುವುದು ಕಡಿಮೆ ಏನಲ್ಲ. ಎರಡು ಮುಸ್ಲಿಂ ವಿರೋಧಿ ಆ್ಯಪ್‌ಗಳಲ್ಲಿ ಅವರ ಚಿತ್ರ ಹಾಕಿ ‘ಅವರು ಹರಾಜಿಗಿದ್ದಾರೆ’ ಎಂದು ಹೇಳಲಾಗಿತ್ತು. ನೀಲಿ ವಿಡಿಯೊವನ್ನು ತಿರುಚಿ ರಾಣಾ ಅವರ ಮುಖವನ್ನು ಸೇರಿಸಿ, ಆ ವಿಡಿಯೊವನ್ನು ವಾಟ್ಸ್‌ಆ್ಯಪ್‌ ಮೂಲಕ ಹಂಚಲಾಗಿತ್ತು.

ಮಧ್ಯ ಪ್ರದೇಶದ ಪತ್ರಕರ್ತರಾದ ಕನಿಷ್ಕ ತಿವಾರಿ ಮತ್ತು ಆದಿತ್ಯ ಸಿಂಗ್‌ ಭದೌರಿಯಾ ಅವರಿಗೆ ಪೊಲೀಸರು ಕಳೆದ ಏಪ್ರಿಲ್‌ 2ರಂದು ಥಳಿಸಿದ್ದಾರೆ ಎಂಬ ಆರೋಪ ಇದೆ. ಠಾಣಾಧಿಕಾರಿಯು ಇವರ ಬಟ್ಟೆ ಬಿಚ್ಚಿ ಚಡ್ಡಿಯಲ್ಲಿ ನಿಲ್ಲಿಸಿ ಫೋಟೊ ತೆಗೆಸಿದ್ದಾರೆ. ಪ್ರತಿಭಟನೆಯ ಕುರಿತು ವರದಿ ಮಾಡುವುದನ್ನು ಮುಂದುವರಿಸಿದರೆ ಪತ್ರಕರ್ತರನ್ನು ಬೆತ್ತಲೆಯಾಗಿ ಪಟ್ಟಣದಲ್ಲಿ ಮೆರವಣಿಗೆ ಮಾಡಿಸುವುದಾಗಿಯೂ ಠಾಣಾಧಿಕಾರಿ ಬೆದರಿಕೆ ಒಡ್ಡಿದ್ದರು ಎಂದು ಆರೋಪಿಸಲಾಗಿದೆ.

ಅಮರ್ ಉಜಾಲಾ ಹಿಂದಿ ಪತ್ರಿಕೆಯ ವರದಿಗಾರರಾದ ಅಜಿತ್ ಓಜಾ ಮತ್ತು ದಿಗ್ವಿಜಯ್‌ ಸಿಂಗ್ ಅವರನ್ನು ಉತ್ತರ ಪ್ರದೇಶದ ಬಲಿಯಾ ಜಿಲ್ಲೆಯಲ್ಲಿ ಕಳೆದ ಮಾರ್ಚ್‌ 30ರಂದು ಬಂಧಿಸಲಾಗಿತ್ತು. ಶಾಲಾ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ಅವರು ಸರಣಿ ವರದಿಗಳನ್ನು ಬರೆದಿದ್ದರು.

ಆಲ್ಟ್‌ನ್ಯೂಸ್‌ ವೆಬ್‌ಸೈಟ್‌ನ ಸಹಸಂಸ್ಥಾಪಕ ಮೊಹಮ್ಮದ್‌ ಜುಬೇರ್‌ ಅವರನ್ನು ಕಳೆದ ಜೂನ್‌ 27ರಂದು ಬಂಧಿಸಿದ್ದು ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. 2020ರಲ್ಲಿ ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದ ಒಂದು ಪೋಸ್ಟ್‌ಗೆ ಸಂಬಂದಿಸಿದ ಪ್ರಕರಣದಲ್ಲಿ ತನಿಖೆಗಾಗಿ ಕರೆಸಿಕೊಂಡು ಬಳಿಕ ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಜುಬೇರ್‌ ಅವರಿಗೆ ದೆಹಲಿ ಹೈಕೋರ್ಟ್‌ ಬಂಧನದಿಂದ ರಕ್ಷಣೆ ನೀಡಿದ್ದರೂ ಅವರನ್ನು ಬಂಧಿಸಲಾಯಿತು.

ಕಾಶ್ಮೀರದ ಪತ್ರಕರ್ತ ಆಕಾಶ್‌ ಹಸನ್‌ ಅವರನ್ನು ಜುಲೈ 26ರಂದು ದೆಹಲಿ ವಿಮಾನ ನಿಲ್ದಾಣದಲ್ಲಿ ತಡೆಯಲಾಗಿತ್ತು. ಅವರನ್ನು ಹಲವು ತಾಸು ಕುಳ್ಳಿರಿಸಿ, ಅವರ ಕುಟುಂಬ, ವೃತ್ತಿ, ಹಿನ್ನೆಲೆ ಮತ್ತಿತರ ವಿಚಾರಗಳ ಕುರಿತು ಪ್ರಶ್ನಿಸಲಾಗಿತ್ತು. ಶ್ರೀಲಂಕಾಕ್ಕೆ ಹೋಗುತ್ತಿದ್ದ ವಿಮಾನವೇರಲು ಅವರಿಗೆ ಅವಕಾಶ ನಿರಾಕರಿಸಲಾಯಿತು. ತಮ್ಮ ಮೇಲೆ ಯಾವುದೇ ಪ್ರಕರಣಗಳು ಇಲ್ಲ ಎಂದು ಹಸನ್‌ ಅವರು ಆಗ ಹೇಳಿಕೆ ನೀಡಿದ್ದರು.

‘ದಿ ವೈರ್‌’ನ ಕಚೇರಿ, ಅದರ ಪತ್ರಕರ್ತರಾದ ಸಿದ್ಧಾರ್ಥ ವರದರಾಜನ್‌, ಎಂ.ಕೆ.ವೇಣು, ಸಿದ್ಧಾರ್ಥ ಭಾಟಿಯಾ ಮತ್ತು ಜಾಹ್ನವಿ ಸೆನ್‌ ಅವರ ಮನೆಗಳಲ್ಲಿ ದೆಹಲಿ ಪೊಲೀಸರು ಕಳೆದ ಅಕ್ಟೋಬರ್‌ 31ರಂದು ಶೋಧ ನಡೆಸಿ, ಎಲೆಕ್ಟ್ರಾನಿಕ್‌ ಸಾಧನಗಳನ್ನು ವಶಕ್ಕೆ ಪಡೆದಿದ್ದರು. ಬಿಜೆಪಿಯ ಅಮಿತ್ ಮಾಳವೀಯ ಅವರು ನೀಡಿದ ದೂರಿನಂತೆ ಪೊಲೀಸರು ಶೋಧ ನಡೆಸಿದ್ದಾರೆ ಎಂದು ವರದರಾಜನ್‌ ಹೇಳಿದ್ದಾರೆ. ಈ ಪತ್ರಕರ್ತರ ಮೇಲೆ ಮಾಳವೀಯ ಅವರು ವಂಚನೆ ಮತ್ತು ಮಾನನಷ್ಟಕ್ಕೆ ದೂರು ನೀಡಿದ್ದರು.

ಒಂದು ಹತ್ಯೆ...

ಬಿಹಾರದ ಪತ್ರಕರ್ತ ಸುಭಾಷ್‌ ಕುಮಾರ್‌ ಮಹತೊ ಅವರ ಮೇಲೆ ಬೇಗುಸರಾಯ್‌ ಜಿಲ್ಲೆಯ ಸಖೊ ಎಂಬ ಗ್ರಾಮದಲ್ಲಿ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ರಾತ್ರಿ 8.45ರ ಹೊತ್ತಿಗೆ ಕುಟುಂಬದ ಸದಸ್ಯರೊಂದಿಗೆ ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಅವರು ಹಿಂದಿರುಗುತ್ತಿದ್ದರು. ನಾಲ್ವರು ಇದ್ದ ಗುಂಪು ಅವರ ಮೇಲೆ ಗುಂಡು ಹಾರಿಸಿ ಪರಾರಿಯಾಗಿತ್ತು. ಸ್ಥಳೀಯ ಕೇಬಲ್‌ ಟಿ.ವಿ. ವಾಹಿನಿಯೊಂದರಲ್ಲಿ ಮಹತೊ ವರದಿಗಾರರಾಗಿದ್ದರು. ಮಹತೊ ಅವರು ತಮ್ಮ ಪ್ರದೇಶದಲ್ಲಿ ನಡೆಯುತ್ತಿದ್ದ ಅಕ್ರಮ ಮದ್ಯ ವ್ಯಾಪಾರದ ಕುರಿತು ನಿರಂತರವಾಗಿ ವರದಿಗಳನ್ನು ಮಾಡಿದ್ದರು.

ಪುಲಿಟ್ಜರ್‌ ಪಡೆಯಲೂ ಬಿಡಲಿಲ್ಲ

ಕಾಶ್ಮೀರದ ಪತ್ರಿಕಾ ಛಾಯಾಗ್ರಾಹಕಿ ಸನಾ ಇರ್ಷಾದ್‌ ಮಟ್ಟೂ ಅವರನ್ನು ಕಳೆದ ಅಕ್ಟೋಬರ್‌ 18ರಂದು ದೆಹಲಿ ವಿಮಾನ ನಿಲ್ದಾಣದಲ್ಲಿ ತಡೆಯಲಾಗಿತ್ತು. ಅವರು ಪುಲಿಟ್ಜರ್‌ ಪ್ರಶಸ್ತಿ ಪಡೆಯಲು ನ್ಯೂಯಾರ್ಕ್‌ಗೆ ಹೋಗಬೇಕಿತ್ತು. ಕೋವಿಡ್‌ ಸಾಂಕ್ರಾಮಿಕದ ಸಂದರ್ಭದಲ್ಲಿ ಭಾರತದಲ್ಲಿ ಅದನ್ನು ಹೇಗೆ ನಿಭಾಯಿಸಲಾಯಿತು ಎಂಬುದರ ಕುರಿತು ಅವರು ವ್ಯಾಪಕವಾಗಿ ಫೋಟೊಗಳನ್ನು ತೆಗೆದಿದ್ದರು. ಅದಕ್ಕೆ ಪುಲಿಟ್ಜರ್‌ ಪ್ರಶಸ್ತಿಯೂ ಬಂದಿತ್ತು. ಸನಾ ಅವರನ್ನು ತಡೆಯುವುದಕ್ಕೆ ಅಧಿಕಾರಿಗಳು ಯಾವುದೇ ಕಾರಣ ಕೊಟ್ಟಿಲ್ಲ ಎಂದು ವರದಿಯಾಗಿತ್ತು. ಸನಾ ಅವರ ಬಳಿ ಪಾಸ್‌ಪೋರ್ಟ್‌, ವೀಸಾ ಮತ್ತು ಪ್ರಯಾಣಕ್ಕೆ ಬೇಕಾದ ಇತರ ಎಲ್ಲ ದಾಖಲೆಗಳೂ ಇದ್ದವು.

ಕಂಬಿಯ ಹಿಂದೆ ಪತ್ರಕರ್ತರು...

ಸಜ್ಜದ್‌ ಗುಲ್‌: ಕಾಶ್ಮೀರ್‌ ವಲ್ಲಾ ವರದಿಗಾರ ಸಜ್ಜದ್‌ ಗುಲ್ ಅವರನ್ನು 2022ರ ಜನವರಿ 6ರಂದು ಬಂಧಿಸಲಾಗಿತ್ತು. ಎಲ್‌ಇಟಿ ಉಗ್ರನ ಹತ್ಯೆ ವಿರುದ್ಧ ಆತನ ಕುಟುಂಬದವರು ನಡೆಸಿದ ಪ್ರತಿಭಟನೆಯ ವಿಡಿಯೊವನ್ನು ಟ್ವೀಟ್‌ ಮಾಡಿದ ಆರೋಪದಲ್ಲಿ ಸಜ್ಜದ್‌ ಅವರನ್ನು ಬಂಧಿಸಲಾಗಿತ್ತು. 9 ದಿನಗಳ ನಂತರ ಅವರಿಗೆ ಜಾಮೀನು ದೊರೆಯಿತು. ಆದರೆ, ಅವರನ್ನು ಹಳೆಯ ಪ್ರಕರಣವೊಂದರಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಮತ್ತೆ ಬಂಧಿಸಲಾಯಿತು. ಈ ಪ್ರಕರಣದಲ್ಲಿ ಅವರಿಗೆ ಇನ್ನೂ ಜಾಮೀನು ದೊರೆತಿಲ್ಲ.

ಮೊಹಮ್ಮದ್ ಮನನ್ ದರ್: ಜಮ್ಮು–ಕಾಶ್ಮೀರದ ಛಾಯಾಗ್ರಾಹಕ ಪತ್ರಕರ್ತ ಮನನ್ ದರ್ ಅವರನ್ನು, ಭಯೋತ್ಪಾದನಾ ಕೃತ್ಯಕ್ಕೆ ಸಂಚು ರೂಪಿಸಿದ ಆರೋಪದಲ್ಲಿ 2021ರ ಅಕ್ಟೋಬರ್‌ನಲ್ಲಿ ಬಂಧಿಸಲಾಗಿತ್ತು. ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್‌ಐಎ) ದರ್ ವಿರುದ್ಧ ಯುಎಪಿಎ ಅಡಿ ಪ್ರಕರಣ ದಾಖಲಿಸಿತ್ತು. ಅವರ ವಿರುದ್ಧ ಎನ್‌ಐಎ ಸಲ್ಲಿಸಿದ ಸಾಕ್ಷ್ಯಗಳಲ್ಲಿ ಹುರುಳಿಲ್ಲ ಎಂದು 2023ರ ಜನವರಿ ನಾಲ್ಕರಂದು ದೆಹಲಿ ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು ಮತ್ತು ದರ್ ಅವರಿಗೆ ಜಾಮೀನು ನೀಡಿತ್ತು.

ಗೌತಮ್ ನವಲಖಾ: 2018ರಲ್ಲಿ ಭೀಮಾ ಕೋರೆಗಾಂವ್ ಹಿಂಸಾಚಾರಕ್ಕೆ ಸಂಚು ರೂಪಿಸಿದ ಆರೋಪದಲ್ಲಿ ಅಂಕಣಕಾರ ಮತ್ತು ಸಾಮಾಜಿಕ ಕಾರ್ಯಕರ್ತ ಗೌತಮ್ ನವಲಖಾ ಅವರನ್ನು ಬಂಧಿಸಲಾಗಿತ್ತು. 2020ರ ಏಪ್ರಿಲ್‌ನಿಂದ ಅವರನ್ನು ಜೈಲಿನಲ್ಲಿ ಇರಿಸಲಾಗಿದೆ. ಅವರ ವಿರುದ್ಧ ಯುಎಪಿಎ ಅಡಿ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ಅವರ ವಿರುದ್ಧ ಇನ್ನೂ ಆರೋಪಪಟ್ಟಿ ಸಲ್ಲಿಕೆಯಾಗಿಲ್ಲ. ಜೈಲಿನಲ್ಲಿ ಅವರಿಗೆ ಕೆಲವು ಮೂಲ ಸೌಕರ್ಯಗಳನ್ನೂ ನಿರಾಕರಿಸಲಾಗಿತ್ತು. ಅನಾರೋಗ್ಯದ ಕಾರಣ, ನ್ಯಾಯಾಲಯದ ಆದೇಶದ ನಂತರ 2022ರ ನವೆಂಬರ್‌ನಿಂದ ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ.

ರೂಪೇಶ್ ಕುಮಾರ್ ಸಿಂಗ್‌: ನಕ್ಸಲರಿಗೆ ನೆರವು ನೀಡಿದ ಮತ್ತು ಹಣ ಸಂಗ್ರಹಕ್ಕೆ ನೆರವಾದ ಆರೋಪದಲ್ಲಿ ಜಾರ್ಖಂಡ್‌ನ ಫ್ರೀಲಾನ್ಸ್‌ ಪತ್ರಕರ್ತ ರೂಪೇಶ್ ಕುಮಾರ್ ಸಿಂಗ್‌ ಅವರನ್ನು ಜಾರ್ಖಂಡ್‌ ಪೊಲೀಸರು 2022ರ ಜುಲೈನಲ್ಲಿ ಬಂಧಿಸಿದ್ದರು. ರಾಜ್ಯದಲ್ಲಿ ಬುಡಕಟ್ಟು ಸಮುದಾಯದ ಜನರ ಮೇಲೆ ನಡೆಯುತ್ತಿದ್ದ ದೌರ್ಜನ್ಯಗಳ ಬಗ್ಗೆ ಅವರು ಬರೆದಿದ್ದ ವರದಿಗಳನ್ನು ರಾಜ್ಯದ ಹಲವು ಪತ್ರಿಕೆಗಳು ಮತ್ತು ಸುದ್ದಿಜಾಲತಾಣಗಳು ಪ್ರಕಟಿಸಿದ್ದವು. ಪೆಗಾಸಸ್‌ ಕುತಂತ್ರಾಂಶದ ಮೂಲಕ ಗೂಢಚರ್ಯೆಗೆ ಗುರಿಯಾಗಿದ್ದಾರೆ ಎನ್ನಲಾದ ದೇಶದ 40 ಪತ್ರಕರ್ತರ ಪಟ್ಟಿಯಲ್ಲಿ ರೂಪೇಶ್ ಅವರ ಹೆಸರೂ ಸಹ ಇದೆ. ಅವರ ವಿರುದ್ಧದ ಪ್ರಕರಣವು ಇನ್ನೂ ತನಿಖೆಯ ಹಂತದಲ್ಲೇ ಇದೆ.

ಆಧಾರ: ರಿಪೋರ್ಟರ್ಸ್‌ ವಿದೌಟ್‌ ಬಾರ್ಡರ್ಸ್‌, ಕಮಿಟಿ ಟು ಪ್ರೊಟೆಕ್ಟ್‌ ಜರ್ನಲಿಸ್ಟ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT