ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ಆಳ–ಅಗಲ | ಕೇಂದ್ರ ಸರ್ಕಾರದಲ್ಲಿ 9 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ
ಆಳ–ಅಗಲ | ಕೇಂದ್ರ ಸರ್ಕಾರದಲ್ಲಿ 9 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ
Published 19 ಮಾರ್ಚ್ 2024, 23:30 IST
Last Updated 19 ಮಾರ್ಚ್ 2024, 23:30 IST
ಅಕ್ಷರ ಗಾತ್ರ

ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು, ಇಲಾಖೆಗಳು ಮತ್ತು ಸಂಸ್ಥೆಗಳಲ್ಲಿ 9.83 ಲಕ್ಷಕ್ಕೂ ಹೆಚ್ಚು ಹುದ್ದೆಗಳು ತೆರವಾಗಿವೆ. ಕೇಂದ್ರ ಸರ್ಕಾರದ ಒಟ್ಟು ನೌಕರರ ಸಂಖ್ಯೆಯಲ್ಲಿ ಖಾಲಿ ಇರುವ ಹುದ್ದೆಗಳ ಪ್ರಮಾಣ ಶೇ 24ಕ್ಕಿಂತಲೂ ಹೆಚ್ಚು. ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಯ ಘೋಷಣೆ ಮಾಡಿದ್ದ ಕೇಂದ್ರ ಸರ್ಕಾರವು, ಈಗಾಗಲೇ ಇರುವ ಸರ್ಕಾರಿ ಉದ್ಯೋಗಗಳಿಗೂ ನೇಮಕಾತಿಯನ್ನು ನಡೆಸುತ್ತಿಲ್ಲ. ಹೀಗೆ ನೇಮಕಾತಿ ನಡೆಸದೇ ಖಾಲಿ ಬಿಟ್ಟಿರುವ ಹುದ್ದೆಗಳ ಸಂಖ್ಯೆ ಪ್ರತಿ ವರ್ಷ ಏರಿಕೆಯಾಗುತ್ತಲೇ ಇದೆ ಎನ್ನುತ್ತದೆ ಕೇಂದ್ರ ಸರ್ಕಾರದ ‘ವೇತನ ಪಾವತಿ ಸಂಶೋಧನಾ ಘಟಕ’ದ ವರದಿ.

ಈ ಘಟಕದ ಹತ್ತು ವರ್ಷಗಳ ವರದಿಗಳನ್ನು ಪರಿಶೀಲಿಸಿದರೆ ಖಾಲಿ ಹುದ್ದೆಗಳ ಸಂಖ್ಯೆ ಮತ್ತು ಪ್ರಮಾಣ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರದ ಅವಧಿಯಲ್ಲೇ ಏರಿಕೆಯಾಗಿದೆ ಎಂಬುದನ್ನು ತೋರಿಸುತ್ತವೆ. 2014–15ರಲ್ಲಿ ಯುಪಿಎ ಸರ್ಕಾರ ಅಧಿಕಾರ ಕಳೆದುಕೊಂಡಾಗ ಖಾಲಿ ಇದ್ದ ಹುದ್ದೆಗಳ ಸಂಖ್ಯೆ 4 ಲಕ್ಷದ ಆಸುಪಾಸಿನಲ್ಲಿ ಇತ್ತು. ಅದು ಅಂದು ಕೇಂದ್ರ ಸರ್ಕಾರಕ್ಕೆ ಮಂಜೂರಾಗಿದ್ದ ಒಟ್ಟು ಹುದ್ದೆಗಳಲ್ಲಿ ಶೇ 11.5ರಷ್ಟು ಮಾತ್ರ. ಆದರೆ ನಂತರದ ಪ್ರತಿ ವರ್ಷಗಳಲ್ಲೂ ಮಂಜೂರಾದ ಹುದ್ದೆಗಳು, ನೇಮಕವಾಗದೆ ಖಾಲಿ ಉಳಿದ ಹುದ್ದೆಗಳು ಮತ್ತು ಖಾಲಿ ಹುದ್ದೆಗಳ ಪ್ರಮಾಣ ಏರಿಕೆಯಾಗುತ್ತಿದೆ.  

ಹೀಗೆ ಖಾಲಿ ಇದ್ದ ಹುದ್ದೆಗಳ ಸಂಖ್ಯೆ 2020–21ರಲ್ಲಿ ಗರಿಷ್ಠಮಟ್ಟಕ್ಕೆ ಏರಿಕೆಯಾಗಿತ್ತು. ಆ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಕೇಂದ್ರ ಸರ್ಕಾರದಲ್ಲಿ ಒಟ್ಟು 9.95 ಲಕ್ಷ ಹುದ್ದೆಗಳು ಖಾಲಿ ಇದ್ದವು. 2021–22ಕ್ಕೆ ಆ ಸಂಖ್ಯೆ 9.83 ಲಕ್ಷಕ್ಕೆ ಇಳಿಕೆಯಾಗಿತ್ತು. ಆದರೆ 2021–22ನೇ ಆರ್ಥಿಕ ವರ್ಷದಲ್ಲಿ ಮಂಜೂರಾದ ಒಟ್ಟು ಹುದ್ದೆಗಳಿಗೆ ಹೋಲಿಸಿದರೆ, ಖಾಲಿ ಇದ್ದ ಹುದ್ದೆಗಳ ಪ್ರಮಾಣ ಶೇ 24.29ಕ್ಕೆ ಏರಿಕೆಯಾಗಿದೆ. ಇದು ಆ ಹಿಂದಿನ ಹತ್ತು ವರ್ಷಗಳಲ್ಲೇ ಗರಿಷ್ಠ ಸಂಖ್ಯೆಯಾಗಿದೆ. ಆ ಅವಧಿಯಲ್ಲಿ ಸೇನೆ ಮತ್ತು ಅರೆಸೇನಾ ಪಡೆಗಳಲ್ಲೇ ಒಟ್ಟು 2.32 ಲಕ್ಷ ಹುದ್ದೆಗಳು ಖಾಲಿ ಇದ್ದವು. ರೈಲ್ವೆಯಲ್ಲಿ ಖಾಲಿ ಇದ್ದ ಹುದ್ದೆಗಳ ಸಂಖ್ಯೆ 3 ಲಕ್ಷಕ್ಕೂ ಹೆಚ್ಚು.

ಇನ್ನೊಂದೆಡೆ ಕೇಂದ್ರ ಸರ್ಕಾರವು ಮಂಜೂರಾಗಿದ್ದ ಹುದ್ದೆಗಳ ಸಂಖ್ಯೆಯನ್ನೂ ಕಡಿತ ಮಾಡುತ್ತಾ ಬಂದಿದೆ. 2021–22ನೇ ಆರ್ಥಿಕ ವರ್ಷದಲ್ಲಿ ಕೇಂದ್ರ ಸರ್ಕಾರವು 64 ಸಾವಿರಕ್ಕೂ ಹೆಚ್ಚು ಹುದ್ದೆಗಳನ್ನು ಕಡಿತ ಮಾಡಿದೆ. ಆ ವರ್ಷ ಇದ್ದ ಕೇಂದ್ರ ಸರ್ಕಾರದ ಹುದ್ದೆಗಳ ಸಂಖ್ಯೆ 40.44 ಲಕ್ಷ ಮಾತ್ರ. ಅದು 2018–19ನೇ ಸಾಲಿನಲ್ಲಿ ಇದ್ದ ಹುದ್ದೆಗಳಿಗಿಂತ (40.65 ಲಕ್ಷ) ಕಡಿಮೆ. ಹೀಗೆ ಕೇಂದ್ರ ಸರ್ಕಾರವು ಉದ್ಯೋಗಗಳ ಸಂಖ್ಯೆಯನ್ನೂ ಕಡಿಮೆ ಮಾಡುತ್ತಿದೆ ಮತ್ತು ಖಾಲಿ ಹುದ್ದೆಗಳನ್ನು ಭರ್ತಿ ಮಾಡುತ್ತಲೂ ಇಲ್ಲ. ಹೀಗಾಗಿ ಸೇವೆಯಲ್ಲಿರುವ ಸರ್ಕಾರಿ ನೌಕರರ ಸಂಖ್ಯೆ ಕಡಿಮೆಯೇ ಇದೆ.

ಮಂಜೂರಾದ ಒಟ್ಟು ಹುದ್ದೆಗಳಲ್ಲಿ ಖಾಲಿ ಇರುವ ಹುದ್ದೆಗಳ ಪ್ರಮಾಣ

4 ಲಕ್ಷದಿಂದ 9.95 ಲಕ್ಷಕ್ಕೆ ಏರಿಕೆ

ಯುಪಿಎ–2 ಸರ್ಕಾರದ ಅವಧಿ ಮುಗಿದಾಗ ಕೇಂದ್ರ ಸರ್ಕಾರದ ಮಂಜೂರಾದ ಹುದ್ದೆಗಳಲ್ಲಿ ಖಾಲಿ ಇದ್ದವುಗಳ ಸಂಖ್ಯೆ 4.20 ಲಕ್ಷದಷ್ಟಿತ್ತು. ಆನಂತರ ಖಾಲಿ ಹುದ್ದೆಗಳ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ಅಧಿಕಾರಕ್ಕೆ ಬಂದ ಮೂರನೇ ಆರ್ಥಿಕ ವರ್ಷಗಳಲ್ಲಿ ಖಾಲಿ ಹುದ್ದೆಗಳ ಸಂಖ್ಯೆ 6.83 ಲಕ್ಷಕ್ಕೆ ಏರಿಕೆಯಾಗಿತ್ತು. ಖಾಲಿ ಹುದ್ದೆಗಳಲ್ಲಿ ಆದ ಏರಿಕೆಯ ಪ್ರಮಾಣ ಶೇ 50ಕ್ಕಿಂತಲೂ ಹೆಚ್ಚು. 

ಎನ್‌ಡಿಎಯ ಎರಡನೇ ಅವಧಿಯಲ್ಲೂ ಖಾಲಿ ಹುದ್ದೆಗಳ ಸಂಖ್ಯೆ ಪ್ರತಿ ವರ್ಷ ಏರಿಕೆಯಾಗುತ್ತಲೇ ಇತ್ತು. 2018–19ರಲ್ಲಿ ಅಂತಹ ಹುದ್ದೆಗಳ ಸಂಖ್ಯೆ 9 ಲಕ್ಷ ದಾಟಿತ್ತು. ಅದು ಆವರೆಗಿನ ಅತ್ಯಂತ ಗರಿಷ್ಠ ಸಂಖ್ಯೆಯಾಗಿತ್ತು. 19–20ನೇ ಸಾಲಿನ ಆರ್ಥಿಕ ವರ್ಷದಲ್ಲಿ ಖಾಲಿ ಹುದ್ದೆಗಳ ಸಂಖ್ಯೆ ಸ್ವಲ್ಪ ಇಳಿಕೆ ಆಯಿತಾದರೂ, ಅದು ಯುಪಿಎ ಅವಧಿಯಲ್ಲಿ ಇದ್ದುದ್ದಕ್ಕಿಂತ ದುಪ್ಪಟ್ಟೇ ಇತ್ತು. ಆನಂತರದ ಎಲ್ಲಾ ವರ್ಷಗಳಲ್ಲಿ ಖಾಲಿ ಹುದ್ದೆಗಳ ಸಂಖ್ಯೆ ಏರಿಕೆಯಾಗುತ್ತಲೇ ಇದೆ. 2022–23 ಮತ್ತು 2023–24ನೇ ಸಾಲಿನ ವರದಿಗಳು ಬಿಡುಗಡೆಯಾಗಿಲ್ಲದೇ ಇರುವ ಕಾರಣಕ್ಕೆ ಈಗ ಎಷ್ಟು ಹುದ್ದೆಗಳು ಖಾಲಿ ಇವೆ ಎಂಬ ಮಾಹಿತಿ ಲಭ್ಯವಿಲ್ಲ. 

ಉದ್ಯೋಗಗಳ ಕಡಿತಕ್ಕೆ ಮುಂದಾದ ಕೇಂದ್ರ

ಮೋದಿ ಅವರ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಮೊದಲ ಕೆಲವು ವರ್ಷಗಳಲ್ಲಿ ಕೇಂದ್ರ ಸರ್ಕಾರಿ ನೌಕರರ ಸಂಖ್ಯೆ ಸ್ವಲ್ಪ ಏರಿಕೆಯಾಗಿತ್ತು. ಆದರೆ 2018–19ರ ನಂತರ ಕೇಂದ್ರ ಸರ್ಕಾರಿ ನೌಕರರ ಸಂಖ್ಯೆ ಇಳಿಕೆಯಾಗುತ್ತಲೇ ಇದೆ. 2014ರಲ್ಲಿ ಬಿಜೆಪಿ ಅಧಿಕಾರ ವಹಿಸಿಕೊಂಡಾಗ ಕೇಂದ್ರ ಸರ್ಕಾರದ ಎಲ್ಲಾ ಸಚಿವಾಲಯಗಳು ಮತ್ತು ಇಲಾಖೆಗಳ ಅಡಿಯಲ್ಲಿ ಒಟ್ಟು 36.49 ಲಕ್ಷ ಹುದ್ದೆಗಳಿಗೆ ಮಂಜೂರಾತಿ ಇತ್ತು. ಅಂದರೆ ಅಷ್ಟು ಮಂದಿಗೆ ಕೇಂದ್ರ ಸರ್ಕಾರವು ಉದ್ಯೋಗ ನೀಡಬಹುದಿತ್ತು. ಆದರೆ ಮರು ವರ್ಷವೇ ಮಂಜೂರಾದ ಹುದ್ದೆಗಳ ಸಂಖ್ಯೆ 36.33 ಲಕ್ಷಕ್ಕೆ ಇಳಿಕೆಯಾಗಿತ್ತು.

ಆನಂತರದ ಆರ್ಥಿಕ ವರ್ಷದಲ್ಲಿ ಎಷ್ಟು ಹುದ್ದೆಗಳು ಮಂಜೂರಾಗಿದ್ದವು ಎಂಬುದರ ಮಾಹಿತಿ ಲಭ್ಯವಿಲ್ಲ. ಆದರೆ, ನಂತರದ ವರ್ಷಗಳಲ್ಲಿ ಮಂಜೂರಾದ ಹುದ್ದೆಗಳ ಸಂಖ್ಯೆ ಏರಿಕೆಯ ಹಾದಿಯಲ್ಲಿತ್ತು. 2020–21ನೇ ಆರ್ಥಿಕ ವರ್ಷದಲ್ಲಿ ಕೇಂದ್ರ ಸರ್ಕಾರಿ ನೌಕರರ ಮಂಜೂರಾದ ಹುದ್ದೆಗಳ ಸಂಖ್ಯೆ ಈವರೆಗಿನ ಗರಿಷ್ಠಮಟ್ಟಕ್ಕೆ ತಲುಪಿತ್ತು. ಆದರೆ ಮರುವರ್ಷವೇ ಅದು ಇಳಿಕೆಯಾಯಿತು. ಒಂದೇ ವರ್ಷದಲ್ಲಿ ಕೇಂದ್ರ ಸರ್ಕಾರವು ಒಟ್ಟು 64,225 ಹುದ್ದೆಗಳನ್ನು ಕಡಿತ ಮಾಡಿತು. 2021–22ರಲ್ಲಿ ಇದ್ದ ಹುದ್ದೆಗಳ ಸಂಖ್ಯೆಯು, ಅದಕ್ಕಿಂತ ಹಿಂದಿನ ನಾಲ್ಕು ವರ್ಷಗಳಲ್ಲಿ ಇದ್ದ ಹುದ್ದೆಗಳಿಗಿಂತ ಕಡಿಮೆ. ಅಂದರೆ ಕೇಂದ್ರ ಸರ್ಕಾರವು, ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಬದಲಿಗೆ ಇರುವ ಹುದ್ದೆಗಳನ್ನೇ ಕಡಿತ ಮಾಡಿದೆ ಎಂಬುದನ್ನು ಈ ದತ್ತಾಂಶಗಳು ಹೇಳುತ್ತವೆ.

ಎಲ್ಲಿ, ಎಷ್ಟು ಖಾಲಿ ಹುದ್ದೆಗಳು

3.09 ಲಕ್ಷ – ರೈಲ್ವೆ

1.20 ಲಕ್ಷ –  ಗೃಹ ಸಚಿವಾಲಯ

2.32 ಲಕ್ಷ – ರಕ್ಷಣೆ

1.03 ಲಕ್ಷ – ಅಂಚೆ 

74,286 – ರೆವೆನ್ಯು

1.44 ಲಕ್ಷ – ಇತರೆ ಇಲಾಖೆಗಳು

10.15 ಲಕ್ಷ – ಕೇಂದ್ರ ಸರ್ಕಾರ ಅಧೀನದ ಅರೆಸೇನಾ ಪಡೆಗಳಿಗೆ ಮಂಜೂರಾದ ಹುದ್ದೆಗಳ ಒಟ್ಟು ಸಂಖ್ಯೆ

9.19 ಲಕ್ಷ – ಕೇಂದ್ರ ಸರ್ಕಾರ ಅಧೀನದ ಅರೆಸೇನಾ ಪಡೆಗಳಲ್ಲಿ ಭರ್ತಿಯಾಗಿರುವ ಹುದ್ದೆಗಳ ಸಂಖ್ಯೆ

95,481 – ತೆರವಾಗಿರುವ ಹುದ್ದೆಗಳು

ಆಧಾರ: ಕೇಂದ್ರ ಹಣಕಾಸು ಸಚಿವಾಲಯದ ‘ವೇತನ ಪಾವತಿ ಸಂಶೋಧನಾ ಘಟಕ’ದ ವರದಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT