ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿದೇಶ ವಿದ್ಯಮಾನ: ಸಂವಹನ ಸಾಧನವೇ ಅಸ್ತ್ರವಾದಾಗ...

Published : 18 ಸೆಪ್ಟೆಂಬರ್ 2024, 22:47 IST
Last Updated : 18 ಸೆಪ್ಟೆಂಬರ್ 2024, 22:47 IST
ಫಾಲೋ ಮಾಡಿ
Comments
ಲೆಬನಾನ್‌ನಲ್ಲಿ ನಡೆದಿರುವ ಪೇಜರ್‌ ಸ್ಫೋಟವು ಜಗತ್ತೇ ಹುಬ್ಬೇರಿಸುವಂತೆ ಮಾಡಿದೆ. ಸ್ಫೋಟಗಳ ಹೊಣೆಯನ್ನು ಯಾರೂ ಹೊತ್ತುಕೊಂಡಿಲ್ಲವಾದರೂ ಹಿಜ್ಬುಲ್ಲಾ ಮತ್ತು ಇಸ್ರೇಲ್ ವೈರತ್ವದ ಕಾರಣ ಬಹುತೇಕರು ಇಸ್ರೇಲ್‌ನತ್ತ ಬೊಟ್ಟು ಮಾಡುತ್ತಿದ್ದಾರೆ. ಜನ ಮರೆತೇ ಹೋಗಿರುವ ಪೇಜರ್‌ಗಳನ್ನು ದಾಳಿಯ ಸಾಧನಗಳನ್ನಾಗಿ ಬಳಸಿರುವುದು ಅಚ್ಚರಿಯ ಅಂಶವಾದರೆ, ದೇಶ ದೇಶಗಳ ನಡುವಿನ ಸಂಘರ್ಷವು ಎಂತಹ ಊಹಾತೀತ ತಿರುವುಗಳನ್ನು ಪಡೆಯುತ್ತಿದೆ ಎನ್ನುವುದು ಆತಂಕಕ್ಕೆ ಕಾರಣವಾಗಿದೆ 

ಲೆಬನಾನ್‌ನ ಬೈರೂತ್ ನಗರ, ಬೆಕ್ಕಾ ಕಣಿವೆ ಮತ್ತು ಸಿರಿಯಾ ದೇಶದ ಡಮಾಸ್ಕಸ್ ಸೇರಿದಂತೆ ಹಲವೆಡೆ ಮಂಗಳವಾರ ವಿಚಿತ್ರ ವಿದ್ಯಮಾನವೊಂದು ಘಟಿಸಿದೆ. ನೂರಾರು ಪೇಜರ್‌ಗಳು ಸ್ಫೋಟಗೊಂಡು ಹತ್ತಕ್ಕೂ ಹೆಚ್ಚು ಜನ ಸಾವಿಗೀಡಾಗಿರುವುದಲ್ಲದೇ, ಸಾವಿರಾರು ಮಂದಿ ಆಸ್ಪತ್ರೆ ಪಾಲಾಗಿದ್ದಾರೆ. ಇದೊಂದು ಆಕಸ್ಮಿಕ ಘಟನೆ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ಬಹುತೇಕರು, ಇದು ಹಿಜ್ಬುಲ್ಲಾ ಸಂಘಟನೆಯನ್ನು ಗುರಿಯಾಗಿಸಿಕೊಂಡು ಇಸ್ರೇಲ್‌ ನಡೆಸಿರುವ ಯೋಜಿತ ದಾಳಿ ಎಂದು ಆರೋ‍ಪಿಸುತ್ತಿದ್ದಾರೆ. ಒಂದು ಕಾಲದ ಸಂವಹನ ಸಾಧನವಾಗಿದ್ದ ಪೇಜರ್ ಈಗ ಯುದ್ಧದ ಅಸ್ತ್ರವಾಗಿ ಮಾರ್ಪಟ್ಟಿದೆಯೇ ಎನ್ನುವ ಅನುಮಾನ ದಟ್ಟವಾಗಿದೆ.

ಲೆಬನಾನ್‌ನಲ್ಲಿ ಮಂಗಳವಾರ, ಸ್ಥಳೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 3.45ರ ಸುಮಾರಿಗೆ ಹಲವೆಡೆ ಸರಣಿಯಾಗಿ ಪೇಜರ್‌ಗಳು ಸ್ಫೋಟಗೊಳ್ಳತೊಡಗಿದವು. ಕೆಲವರು ಸೂಪರ್ ಮಾರ್ಕೆಟ್‌ನಲ್ಲಿ ಹಣ್ಣು ಖರೀದಿಸುತ್ತಿರುವಾಗ, ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಅವರ ಜೇಬಿನಲ್ಲಿದ್ದ ಪೇಜರ್‌ಗಳು ಸ್ಫೋಟಗೊಂಡಿವೆ. ಒಂದು ಗಂಟೆಯಲ್ಲಿ ಸರಣಿಯಾಗಿ ಸ್ಫೋಟಗಳು ಸಂಭವಿಸಿದ್ದು, ಅಲ್ಲಿನ ಜನ ಬೆರಗು ಮತ್ತು ಭಯದಿಂದ ಇದಕ್ಕೆ ಸಾಕ್ಷಿಯಾಗಿದ್ದಾರೆ.

ಮೊಬೈಲ್‌ ಯುಗ ಆರಂಭವಾಗುವುದಕ್ಕೂ ಮುಂಚೆ ಬಳಕೆಯಲ್ಲಿದ್ದ ಪೇಜರ್‌ಗಳು ಈಗ ಜನರ ನೆನಪಿನಿಂದ ಬಹುತೇಕ ಅಳಿಸಿಯೇ ಹೋಗಿವೆ. ಹೀಗಿರುವಾಗ, ಲೆಬನಾನ್ ಮತ್ತು ಸಿರಿಯಾದಲ್ಲಿ ಪೇಜರ್‌ಗಳು ಸ್ಫೋಟಗೊಂಡಿರುವುದರಿಂದ ಕನಿಷ್ಠ 12 ಮಂದಿ ಸಾವಿಗೀಡಾಗಿರುವುದಲ್ಲದೇ, ಸುಮಾರು 2,800 ಮಂದಿ ಗಾಯಗೊಂಡಿದ್ದಾರೆ. ದಾಳಿಯ ತೀವ್ರತೆ ಯಾವ ಪರಿ ಇತ್ತೆಂದರೆ, ಲೆಬನಾನ್‌ನ ಆಸ್ಪತ್ರೆಗಳಿಗೆ ಅರ್ಧ ಗಂಟೆಯಲ್ಲಿ 2,800 ಮಂದಿ ಗಾಯಾಳುಗಳು ದಾಖಲಾಗಿದ್ದಾರೆ.

ಸತ್ತವರ ಪೈಕಿ ಇಬ್ಬರು ಮಕ್ಕಳಿದ್ದಾರೆ. ಗಾಯಾಳುಗಳಲ್ಲಿ ಸುಮಾರು 300 ಮಂದಿಯ ಪರಿಸ್ಥಿತಿ ಚಿಂತಾಜನಕವಾಗಿದೆ. ಕೆಲವರ ಮುಖ ಸುಟ್ಟು ಹೋಗಿದ್ದರೆ, ಮತ್ತೆ ಕೆಲವರ ಮಿದುಳಿಗೆ ಹಾನಿಯಾಗಿದೆ ಎಂದು ಲೆಬನಾನ್ ಆರೋಗ್ಯ ಸಚಿವ ಫಿರಾಸ್ ಅಬಿಯದ್ ಹೇಳಿದ್ದಾರೆ.

ಘಟನೆ ನಡೆದ ತಕ್ಷಣವೇ ಲೆಬನಾನ್‌ ಮತ್ತು ಸಿರಿಯಾ ಬೊಟ್ಟು ಮಾಡಿರುವುದು ಇಸ್ರೇಲ್‌ನತ್ತ. ಇರಾನ್‌ ಬೆಂಬಲಿತ ಹಿಜ್ಬುಲ್ಲಾ ಸಂಘಟನೆಯನ್ನು ಗುರಿಯಾಗಿಸಿಕೊಂಡು ಇಸ್ರೇಲ್‌ನ ಸೇನೆ ಹಾಗೂ ಗುಪ್ತಚರ ಮತ್ತು ವಿಶೇಷ ಕಾರ್ಯಾಚರಣಾ ಸಂಸ್ಥೆ ಮೊಸಾದ್‌ ಈ ಸ್ಫೋಟಗಳನ್ನು ನಡೆಸಿವೆ ಎನ್ನುವುದು ಲೆಬನಾನ್‌ ಆರೋಪ. ಹಿಜ್ಬುಲ್ಲಾ ಸಂಘಟನೆಯ ಮುಖಂಡರಾದ ಅಲಿ ಅಮ್ಮಾರ್ ಮತ್ತು ಹಸನ್ ಫಲ್‌ಲಲ್ಲಾ ಅವರ ಪುತ್ರರೂ ಮೃತಪಟ್ಟವರಲ್ಲಿ ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅದೇ ರೀತಿ, ಸಂಘಟನೆಯ ಸದಸ್ಯರೊಬ್ಬರ ಪುತ್ರಿಯೂ ಸಾವಿಗೀಡಾಗಿದ್ದಾರೆ ಎನ್ನಲಾಗುತ್ತಿದೆ.

ಹಿಜ್ಬುಲ್ಲಾ, ಲೆಬನಾನ್‌ನಲ್ಲಿ ಪ್ರಾಬಲ್ಯ ಮತ್ತು ಪ್ರಭಾವ ಹೊಂದಿರುವ ಶಿಯಾ ಮುಸ್ಲಿಮರ ಸಂಘಟನೆಯಾಗಿದೆ. ಇಸ್ರೇಲ್‌ ವಿರೋಧಿ ಇರಾನ್‌ನೊಂದಿಗೆ ಹಿಜ್ಬುಲ್ಲಾ ಸಂಘಟನೆಯು ಉತ್ತಮ ಸಂಬಂಧ ಹೊಂದಿದೆ. ಇದು ಸಹಜವಾಗಿಯೇ ಇಸ್ರೇಲ್‌ ಸಿಟ್ಟಿಗೆ ಕಾರಣವಾಗಿದೆ. ಹಮಾಸ್, ಕಳೆದ ವರ್ಷದ ಅಕ್ಟೋಬರ್‌ 7ರಂದು ಗಾಜಾ ಪಟ್ಟಿಯ ಮೂಲಕ ಇಸ್ರೇಲ್‌ ಮೇಲೆ ದಾಳಿ ಮಾಡಿದ ನಂತರ ಹಿಜ್ಬುಲ್ಲಾ ಮತ್ತು ಇಸ್ರೇಲ್‌ ನಡುವಿನ ವೈರತ್ವ ಹೆಚ್ಚಾಗಿದೆ. ಗಡಿಗಳಲ್ಲಿ ಉದ್ವಿಗ್ನ ಪರಿಸ್ಥಿತಿ ತಲೆದೋರಿದೆ.

ಹಿಜ್ಬುಲ್ಲಾ ಸದಸ್ಯರು ಇಸ್ರೇಲ್ ಮೇಲೆ ದಾಳಿ ಮಾಡುವುದು, ಅದಕ್ಕೆ ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ಪ್ರತಿದಾಳಿ ಮಾಡುವುದು ನಡೆಯುತ್ತಲೇ ಇದೆ. ಲೆಬನಾನ್‌ನಲ್ಲಿರುವ ಹಿಜ್ಬುಲ್ಲಾ ನೆಲೆಗಳ ಮೇಲೆ ಇಸ್ರೇಲ್‌ ಸೇನೆಯು ಹಲವು ಬಾರಿ ವಾಯು ದಾಳಿ, ಟ್ಯಾಂಕ್ ಮತ್ತು ಫಿರಂಗಿಗಳ ಮೂಲಕ ದಾಳಿ ನಡೆಸಿದೆ. ಅದರಿಂದಾಗಿ ಕನಿಷ್ಠ 589 ಮಂದಿ ಸಾವಿಗೀಡಾಗಿದ್ದು, ಅವರಲ್ಲಿ ಹೆಚ್ಚಿನವರು ಹಿಜ್ಬುಲ್ಲಾ ಸದಸ್ಯರು, 137 ಮಂದಿ ನಾಗರಿಕರು ಎಂದು ಲೆಬನಾನ್‌ನ ಆರೋಗ್ಯ ಸಚಿವಾಲಯ ಇತ್ತೀಚೆಗೆ ಹೇಳಿತ್ತು.

ಇನ್ನೊಂದೆಡೆ, ಗಡಿ ಸಂಘರ್ಷದಿಂದ ದೇಶದಲ್ಲಿ 25 ನಾಗರಿಕರು ಮತ್ತು 21 ಸೇನಾ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಇಸ್ರೇಲ್‌ ಹೇಳಿದೆ. ಇಷ್ಟೆಲ್ಲ ಇದ್ದರೂ ಎರಡೂ ಕಡೆಯವರು ಗಡಿ ದಾಟಿ ದಾಳಿಗೆ ಮುಂದಾಗದೇ ಎಚ್ಚರಿಕೆಯಿಂದ ಇದ್ದು, ಪೂರ್ಣ ಪ್ರಮಾಣದ ಯುದ್ಧದ ಸ್ಥಿತಿ ಉದ್ಭವಿಸದಂತೆ ನೋಡಿಕೊಂಡಿದ್ದಾರೆ.

ಜುಲೈ 27ರಂದು ಇಸ್ರೇಲ್‌ ಆಕ್ರಮಿತ ಗೋಲನ್ ಹೈಟ್ಸ್‌ನಲ್ಲಿ ನಡೆದಿದ್ದ ರಾಕೆಟ್‌ ದಾಳಿಯಲ್ಲಿ 12 ಮಂದಿ ಮಕ್ಕಳು ಮೃತಪಟ್ಟಿದ್ದರು. ಘಟನೆಗೆ ಹಿಜ್ಬುಲ್ಲಾ ಸಂಘಟನೆಯೇ ಕಾರಣ ಎಂದು ಇಸ್ರೇಲ್ ಆರೋಪಿಸಿತ್ತು. ಆದರೆ, ಹಿಜ್ಬುಲ್ಲಾ ಸಂಘಟನೆ ಇದನ್ನು ನಿರಾಕರಿಸಿತ್ತು. ಜುಲೈ 30ರಂದು ಬೈರೂತ್‌ ನಗರದ ಹೊರವಲಯದಲ್ಲಿ ವಾಯುದಾಳಿ ಮಾಡುವ ಮೂಲಕ ಹಿಜ್ಬುಲ್ಲಾ ಸೇನಾ ಕಮಾಂಡರ್ ಫೌದ್ ಶುಕ್ರ್ ಅವರನ್ನು ಹತ್ಯೆ ಮಾಡಿರುವುದಾಗಿ ಐಡಿಎಫ್ ಘೋಷಣೆ ಮಾಡಿತ್ತು. ಇಂತಹ ಘಟನೆಗಳು ಆಗಿಂದಾಗ್ಗೆ ನಡೆಯುತ್ತಲೇ ಇವೆ.

ತನ್ನ ವಿರೋಧಿಗಳ ಜತೆಗಿನ ಯುದ್ಧವನ್ನು ಇನ್ನಷ್ಟು ವಿಸ್ತರಿಸುವುದಾಗಿ ಪೇಜರ್ ಸ್ಫೋಟಗಳು ಸಂಭವಿಸುವ ಕೆಲವೇ ಗಂಟೆಗಳ ಮುಂಚೆ‌ ಇಸ್ರೇಲ್ ಹೇಳಿತ್ತು. ಹೀಗಾಗಿ, ಲೆಬನಾನ್ ಮತ್ತು ಸಿರಿಯಾದಲ್ಲಿ ಪೇಜರ್‌ ಸ್ಫೋಟಕ್ಕೆ ಇಸ್ರೇಲ್‌ನವರೇ ಕಾರಣ ಎಂದು ಅಲ್ಲಿನವರು ಖಚಿತವಾಗಿ ನಂಬಿದ್ದು, ತಾನು ಪ್ರತೀಕಾರ ತೀರಿಸಿಕೊಳ್ಳುವುದಾಗಿ ಹಿಜ್ಬುಲ್ಲಾ ಶಪಥ ಮಾಡಿದೆ. ಆದರೆ, ಪೇಜರ್ ದಾಳಿಯ ಹೊಣೆಯನ್ನು ಇಸ್ರೇಲ್ ಹೊತ್ತುಕೊಂಡಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಲೂ ನಿರಾಕರಿಸಿದೆ.

ಈ ಮಧ್ಯೆ, ಪೇಜರ್‌ ಸ್ಫೋಟದ ಆಘಾತದಿಂದ ಹೊರಬರುವ ಮುನ್ನವೇ ಬುಧವಾರ ಲೆಬನಾನಿನಲ್ಲಿ ವಾಕಿ ಟಾಕಿಗಳು ಸ್ಫೋಟಗೊಂಡು ಸಾವು ನೋವು ಸಂಭವಿಸಿದೆ.

ಪೇಜರ್‌ ಸ್ಫೋಟ ಆಗಿದ್ದಾದರೂ ಹೇಗೆ?

ಈ ‍ಪ್ರಶ್ನೆ ಹಿಜ್ಬುಲ್ಲಾ ಬಂಡುಕೋರರು ಸೇರಿದಂತೆ ಜಗತ್ತಿನ ಎಲ್ಲ ತಂತ್ರಜ್ಞರನ್ನು ಕಾಡುತ್ತಿದೆ. ಇದೊಂದು ಅತ್ಯಂತ ಪೂರ್ವಯೋಜಿತವಾಗಿ ನಡೆಸಿರುವ, ನಂಬಲು ಸಾಧ್ಯವಿಲ್ಲದಂತಹ ಕಾರ್ಯಾಚರಣೆ ಎಂದು ಬಹುತೇಕ ತಂತ್ರಜ್ಞರು ವಿಶ್ಲೇಷಿಸುತ್ತಿದ್ದಾರೆ.

ಪೇಜರ್‌ಗಳು ಲಿಥಿಯಂ ಬ್ಯಾಟರಿ ಹೊಂದಿದ್ದವು. ತಜ್ಞರ ಪ್ರಕಾರ, ಲಿಥಿಯಂ ಬ್ಯಾಟರಿಗಳು ಸ್ಫೋಟಗೊಳ್ಳುವುದು ವಿರಳ. ಬ್ಯಾಟರಿ ಹೆಚ್ಚು ಬಿಸಿಯಾದರೆ, ಹೊಗೆ ಕಾಣಿಸಿಕೊಂಡು ಬೆಂಕಿ ಹತ್ತಿಕೊಳ್ಳುತ್ತದೆ. ಮಂಗಳವಾರ ಲೆಬನಾನ್‌ನಲ್ಲಿ ಜನರ ಬಳಿ ಇದ್ದ ಪೇಜರ್‌ಗಳು ಏಕಾಏಕಿ ಸ್ಫೋಟಗೊಂಡಿರುವುದು ವಿಡಿಯೊ ದೃಶ್ಯಾವಳಿಗಳಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ಸಾಧನದಲ್ಲಿ ಸ್ಫೋಟಕಗಳನ್ನು ಅಳವಡಿಸಿದ್ದರೆ ಮಾತ್ರ ಸ್ಫೋಟವಾಗವಾಗಬಹುದು, ಇಲ್ಲದಿದ್ದರೆ ಸಾಧ್ಯವೇ ಇಲ್ಲ ಎಂಬುದು ತಜ್ಞರ ವಾದ.

ಪೇಜರ್‌ಗಳಿಗೆ ಸಂದೇಶ ಬಂದ ನಂತರ ಅವು ಏಕಾಏಕಿ ಸ್ಫೋಟಗೊಂಡಿವೆ. ಪೂರೈಕೆ ಆಗುವುದಕ್ಕೆ ಮೊದಲೇ (supply chain attack) ಪೇಜರ್‌ಗಳಲ್ಲಿ ಸ್ಫೋಟಕ ಅಳವಡಿಸಿರುವ ಅನುಮಾನ ವ್ಯಕ್ತವಾಗಿದೆ. ಅಂದರೆ, ಸಂಘಟನೆಗೆ ಪೇಜರ್‌ಗಳು ಪೂರೈಕೆಯಾಗುವುದಕ್ಕೂ ಮೊದಲೇ, ತಯಾರಿಕಾ ಅಥವಾ ಸಾಗಣೆಯ ಹಂತದಲ್ಲಿ ಮೂರನೇ ವ್ಯಕ್ತಿ/ದೇಶ/ಕಂಪನಿಯು ಅವುಗಳಲ್ಲಿ ಸ್ಫೋಟಕ ವಸ್ತು ಅಳವಡಿಸಿರಬಹುದು. ಸ್ಫೋಟಕವು ಮೂರರಿಂದ ಐದು ಗ್ರಾಂಗಳಷ್ಟೇ ತೂಕ ಇದ್ದಿರಬಹುದು. ರಿಮೋಟ್‌ ತಂತ್ರಜ್ಞಾನದ ಮೂಲಕ ರೇಡಿಯೊ ಸಂಕೇತಗಳನ್ನು ಬಳಸಿಕೊಂಡು ಪೇಜರ್‌ಗಳನ್ನು ಸ್ಫೋಟಿಸಿರಬಹುದು ಎಂಬ ವಿಶ್ಲೇಷಣೆಯನ್ನು ತಂತ್ರಜ್ಞರು ಮಾಡುತ್ತಿದ್ದಾರೆ.

ಈ ವರ್ಷದ ಫೆಬ್ರುವರಿಯ ನಂತರ ಹಿಜ್ಬುಲ್ಲಾ ಸದಸ್ಯರು ಪೇಜರ್‌ಗಳನ್ನು ಬಳಸಲು ಆರಂಭಿಸಿದ್ದರು ಎನ್ನಲಾಗುತ್ತಿದೆ. ಆರು ತಿಂಗಳ ಹಿಂದೆ ಸಂಘಟನೆಯು 1,000 ಪೇಜರ್‌ಗಳನ್ನು ಖರೀದಿಸಿತ್ತು. ಮಂಗಳವಾರ ಸ್ಫೋಟಗೊಂಡ ಪೇಜರ್‌ಗಳೆಲ್ಲ ಹೊಸದಾಗಿ ಖರೀದಿಸಿದಂಥವು. ಈವರೆಗೂ ಅವು ಚೆನ್ನಾಗಿ ಕೆಲಸ ಮಾಡಿದ್ದವು. ಸ್ವಿಚ್‌ಆಫ್‌ ಆಗಿದ್ದ ಪೇಜರ್‌ಗಳು ಸ್ಫೋಟಗೊಂಡಿಲ್ಲ.‌ ಸ್ಫೋಟಗೊಳ್ಳದ ಪೇಜರ್‌ಗಳನ್ನು ಹಿಜ್ಬುಲ್ಲಾ ಸಂಘಟನೆಯು ಪರಿಶೀಲನೆಗೆ ಒಳಪಡಿಸುತ್ತಿದೆ ಎಂದು ವರದಿಯಾಗಿದೆ.

ಸ್ಫೋಟಗೊಂಡಿರುವುದು ತೈವಾನಿನ ಅಪೋಲೋ ಗೋಲ್ಡ್‌ ಕಂಪನಿಯ ಪೇಜರ್‌. ಆದರೆ, ಈ ಪೇಜರ್‌ಗಳನ್ನು ತಾನು ತಯಾರಿಸಿಲ್ಲ ಎಂದು ಕಂಪನಿ ಹೇಳಿಕೊಂಡಿದೆ. ಹಂಗೆರಿಯ ಬಿಎಸಿ ಕನ್ಸಲ್ಟಿಂಗ್‌ ಕೆಎಫ್‌ಟಿ ಕಂಪನಿ ಇದನ್ನು ತಯಾರಿಸಿದ್ದು, ತನ್ನ ಬ್ರ್ಯಾಂಡ್‌ ಹೆಸರನ್ನು ಬಳಸಲು ಅನುಮತಿ ನೀಡಿದ್ದಾಗಿ ಹೇಳಿದೆ. ಹಂಗೆರಿಯು ತನ್ನ ನೆಲದಲ್ಲಿ ಪೇಜರ್‌ ತಯಾರಿಸಿಲ್ಲ ಎಂದಿದೆ.

ನಿಗಾ ತಪ್ಪಿಸಲು ಪೇಜರ್‌ಗೆ ಮೊರೆ

ಸಂಘಟನೆ, ಅದರ ಕಾರ್ಯಾಚರಣೆ, ಯೋಜನೆ, ಕಾರ್ಯತಂತ್ರಗಳ ಬಗ್ಗೆ ಸದಾ ಗೋಪ್ಯತೆ ಕಾಪಾಡಿಕೊಳ್ಳುತ್ತಾ ಬಂದಿರುವ ಹಿಜ್ಬುಲ್ಲಾ, ಇಸ್ರೇಲ್‌ ತನ್ನ ಚಲನವಲನದ ಮೇಲೆ ನಿಗಾ ಇಡುವುದನ್ನು ತಪ್ಪಿಸುವುದಕ್ಕಾಗಿ ಪೇಜರ್‌ಗಳ ಬಳಕೆ ಆರಂಭಿಸಿತ್ತು ಎನ್ನಲಾಗಿದೆ. ಸ್ಮಾರ್ಟ್‌ಫೋನ್‌ಗಳನ್ನು ಬಳಸಿದರೆ ಸಂಘಟನೆಯ ಚಲನವಲನಗಳು, ಯೋಜನೆಗಳು ಶತ್ರುರಾಷ್ಟ್ರಕ್ಕೆ ತಿಳಿಯಬಹುದು ಎಂಬ ಕಾರಣಕ್ಕೆ, ಯಾರೊಬ್ಬರೂ ಸ್ಮಾರ್ಟ್‌ಫೋನ್‌ಗಳನ್ನು ಬಳಸದಂತೆ ಸಂಘಟನೆಯ ಮುಖಂಡರು, ಸದಸ್ಯರು ಮತ್ತು ಅವರ ಕುಟುಂಬದ ಸದಸ್ಯರಿಗೆ ಹಿಜ್ಬುಲ್ಲಾ ಮುಖ್ಯಸ್ಥ ಹಸನ್‌ ನಸರಲ್ಲಾಹ್‌ ಈ ವರ್ಷದ ಆರಂಭದಲ್ಲಿ ಕರೆ ನೀಡಿದ್ದ. ‌

ಮೊಬೈಲ್‌ ಕ್ರಾಂತಿ ಆರಂಭಕ್ಕೂ ಮುನ್ನ ಸಂದೇಶಗಳ ರವಾನೆಗೆ ಬಳಸುತ್ತಿದ್ದ ಪೇಜರ್‌ ತಂತ್ರಜ್ಞಾನ ಈಗಿನ ಆಧುನಿಕ ಕಾಲದ ಸಂವಹನಕ್ಕೆ ಹೊಂದುವಂತಹದ್ದಲ್ಲ. ನಿರ್ದಿಷ್ಟ ವ್ಯಾಪ್ತಿಯಲ್ಲಿ ಮಾತ್ರ ಈ ವ್ಯವಸ್ಥೆ ಕಾರ್ಯಾಚರಿಸುತ್ತದೆ. ಪೇಜರ್‌ನಲ್ಲಿ ಜಿಪಿಎಸ್‌ ಸೌಲಭ್ಯವಿಲ್ಲ. ಮೈಕ್ರೊಫೋನ್‌, ಕ್ಯಾಮೆರಾ ಇಲ್ಲ. ರೇಡಿಯೊ ತರಂಗಗಳನ್ನು ಬಳಸಿಕೊಂಡು ಇದು ಕಾರ್ಯನಿರ್ವಹಿಸುತ್ತದೆ. 2000 ಇಸವಿಗೂ ಮುನ್ನ ಮತ್ತು ತುರ್ತು ಸೇವಾ ಕ್ಷೇತ್ರದಲ್ಲಿ ಇದರ ಬಳಕೆ ಹೆಚ್ಚಿತ್ತು. ತನ್ನ ಸೀಮಿತ ಕಾರ್ಯಾಚರಣೆ ಸಾಮರ್ಥ್ಯದ ಕಾರಣಕ್ಕೆ ಪೇಜರ್‌ ಬಹುಬೇಗ ಬಳಕೆಯಿಂದ ದೂರವಾಯಿತು.

ಪೇಜರ್‌ನಲ್ಲಿ ನಡೆಸುವ ಸಂವಹನದ ಮೇಲೆ ಮೂರನೇ ವ್ಯಕ್ತಿ ಅಥವಾ ದೇಶಕ್ಕೆ ನಿಗಾ ಇಡಲು ಸಾಧ್ಯವಿಲ್ಲ. ಹಾಗಾಗಿ ಇದು ಹೆಚ್ಚು ಸುರಕ್ಷಿತ ಎಂಬ ಕಾರಣಕ್ಕೆ ಹಿಜ್ಬುಲ್ಲಾ ಸಂಘಟನೆ ಇವುಗಳನ್ನು ಬಳಸಲು ಆರಂಭಿಸಿತ್ತು. ಅದರಲ್ಲಿ ಮಾಡುವ ಸಂವಹನವನ್ನು ಇಸ್ರೇಲ್‌ಗೆ ಆಗಲಿ ಅಥವಾ ಬೇರೆ ಯಾರಿಗೇ ಆಗಲಿ ಭೇದಿಸಲು ಸಾಧ್ಯವಿಲ್ಲ ಎಂಬುದು ಸಂಘಟನೆಯ ನಂಬಿಕೆವಾಗಿತ್ತು. ಸ್ಫೋಟವು ಅದನ್ನು ಹುಸಿಗೊಳಿಸಿದೆ. ಮಂಗಳವಾರ ಮಧ್ಯಾಹ್ನ ಸಂಘಟನೆಯ ಮುಖಂಡನಿಂದ ಪೇಜರ್‌ಗೆ ಬಂದ ಸಂದೇಶ ತೆರೆದುಕೊಳ್ಳುವುದರ ಬದಲಾಗಿ ಸಾಧನವೇ ಸ್ಪೋಟಗೊಂಡಿದೆ ಎಂದು ಹೇಳಲಾಗುತ್ತಿದೆ.

ಆಧಾರ: ಎಎಫ್‌ಪಿ, ಬಿಬಿಸಿ, ಸಿಎನ್‌ಎನ್‌, ದಿ ನ್ಯೂಯಾರ್ಕ್ ಟೈಮ್ಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT