ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ರಣಜಿ ದೇಶಿ ಕ್ರಿಕೆಟ್ ‘ರಾಜ’ನಿಗೆ ಐದು ಸಾವಿರದ ಗರಿ

Last Updated 2 ಮಾರ್ಚ್ 2022, 23:30 IST
ಅಕ್ಷರ ಗಾತ್ರ

1934–35.. ಭಾರತದ ಕ್ರಿಕೆಟ್‌ ಕ್ಷೇತ್ರಕ್ಕೆ ಬಹಳ ಮಹತ್ವದ ವರ್ಷ. ಅದಕ್ಕೆ ಕಾರಣ ಆ ಸಾಲಿನಲ್ಲಿ ಶುರುವಾದ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿ. ಬ್ರಿಟಿಷ್ ಪ್ರಭಾವದಿಂದ ಭಾರತಕ್ಕೆ ಕಾಲಿಟ್ಟ ಕ್ರಿಕೆಟ್ ಇಲ್ಲಿಯ ‘ಧರ್ಮ’ವಾಗಿ ಹಾಸುಹೊಕ್ಕಾಗುವಷ್ಟು ಬೆಳೆಯಲು ಈ ಟೂರ್ನಿಯೇ ಪ್ರಮುಖ ಕಾರಣ. ಭಾರತದ ವಿವಿಧ ಪ್ರಾಂತಗಳ ತಂಡಗಳ ನಡುವಣ ಶುರುವಾದ ಈ ಟೂರ್ನಿ ಇವತ್ತು ಬೃಹದಾಕಾರವಾಗಿ ಬೆಳೆದಿದೆ. ಲಾಗಾಯ್ತಿನಿಂದಲೂ ರಾಷ್ಟ್ರೀಯ ತಂಡದ ಆಯ್ಕೆಗಾರರನ್ನು ಗಮನ ಸೆಳೆಯಲು ಪ್ರಮುಖ ವೇದಿಕೆಯಾಗಿದೆ.

ಏಕದಿನ ಮತ್ತು ಟಿ20 ಕ್ರಿಕೆಟ್‌ ಜನಪ್ರಿಯವಾದ ಮೇಲೂ ರಣಜಿ ಟ್ರೋಫಿ ತನ್ನ ಅಸ್ಮಿತೆಯನ್ನು ಉಳಿಸಿಕೊಂಡಿದೆ. ಇದೀಗ ಐದು ಸಾವಿರಕ್ಕೂ ಹೆಚ್ಚು ಪಂದ್ಯಗಳನ್ನು ಆಯೋಜಿಸಿದ ಕೀರ್ತಿಗೆ ಈ ಟೂರ್ನಿ ಪಾತ್ರವಾಗಲಿದೆ.

‘ಬಿಸಿಸಿಐ ಪ್ರಕಟಿಸಿರುವ ವೇಳಾಪಟ್ಟಿಯ ಪ್ರಕಾರ ಗುರುವಾರ ಆರಂಭವಾಗಲಿರುವ ಮೂರನೇ ಸುತ್ತಿನಲ್ಲಿ ನಡೆಯಲಿರುವ ಜಮ್ಮು–ಕಾಶ್ಮೀರ ಮತ್ತು ರೈಲ್ವೆ ನಡುವಣ ಹಣಾಹಣಿಯು ಐದು ಸಾವಿರದ ಪಂದ್ಯವಾಗಲಿದೆ. ಕರ್ನಾಟಕ ಮತ್ತು ಪುದುಚೇರಿ ನಡುವಣ ಪಂದ್ಯವು 4999ನೇಯ ದ್ದಾಗಲಿದೆ. ಆದರೆ ಬಿಸಿಸಿಐ ಈ ಮೈಲುಗಲ್ಲನ್ನು ಆಚರಿಸುವುದೋ ಇಲ್ಲವೋ ಗೊತ್ತಿಲ್ಲ’ ಎಂದು ಬೆಂಗಳೂರಿನ ದೇಶಿ ಕ್ರಿಕೆಟ್ ಅಂಕಿ ಅಂಶ ಲೇಖಕ ಚನ್ನಗಿರಿ ಕೇಶವಮೂರ್ತಿ ‘ಪ್ರಜಾವಾಣಿ‘ಗೆ ತಿಳಿಸಿದ್ದಾರೆ.

ಕಳೆದ 86 ವರ್ಷಗಳಲ್ಲಿ ಕ್ರಿಕೆಟ್‌ ಹಲವು ಮಗ್ಗಲುಗಳನ್ನು ಬದಲಾಯಿಸಿದೆ. ಟ್ವೆಂಟಿ–20 ಕ್ರಿಕೆಟ್, ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗಳ ಅಬ್ಬರ ಮೇರೆ ಮೀರಿದೆ. ಅಂತಹದರಲ್ಲಿಯೂ ರಣಜಿ ಪಂದ್ಯಗಳನ್ನು ಪ್ರೀತಿಸುವವರು ಇನ್ನೂ ಇದ್ದಾರೆ. ಅದಕ್ಕಾಗಿಯೇ ಬಿಸಿಸಿಐಗೂ ಕೂಡ ರಣಜಿ ಟೂರ್ನಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲು ಸಾಧ್ಯವಾಗಿಲ್ಲ. ರಣಜಿ ಟೂರ್ನಿಯ ಪಂದ್ಯಗಳಲ್ಲಿಯೇ ಆಟಗಾರರ ನಿಜವಾದ ಪ್ರತಿಭೆ ಹೊರಹೊಮ್ಮುತ್ತದೆ ಎಂಬುದರಲ್ಲಿ ಅನುಮಾನವೇ ಇಲ್ಲ.

ಇವತ್ತು ಭಾರತ ತಂಡದ ಬೆಂಚ್‌ ಶಕ್ತಿ ಅಸಾಧಾರಣವಾಗಿ ಬೆಳೆಯಲು ರಣಜಿ ಟೂರ್ನಿ ಯಂತಹ ದೇಶಿ ಕ್ರಿಕೆಟ್‌ ಕಾರಣ. ಇಂಗ್ಲೆಂಡ್‌ನಲ್ಲಿ 1890ರಲ್ಲಿ ಇಂಗ್ಲಿಷ್‌ ಕ್ರಿಕೆಟ್ ಕೌಂಟಿ ಮತ್ತು 1892ರಲ್ಲಿ ಆಸ್ಟ್ರೇಲಿಯಾದಲ್ಲಿ ಆರಂಭವಾದ ಶೆಫಿಲ್ಡ್‌ ಶೀಲ್ಡ್‌ ಟ್ರೋಫಿ ಟೂರ್ನಿಗಳು ಅತ್ಯುನ್ನತ ದೇಶಿ ಟೂರ್ನಿಗಳ ಗೌರವ ಹೊಂದಿವೆ. ರಣಜಿ ಟ್ರೋಫಿ ಕೂಡ ಈ ಸಾಲಿನಲ್ಲಿ ತನ್ನ ಗೌರವ ಸಂಪಾದಿಸಿದೆ. ಅಷ್ಟೇ ಅಲ್ಲ. ವಿಶ್ವದ ಬೇರೆಲ್ಲ ದೇಶಿ ಕ್ರಿಕೆಟ್‌ ಟೂರ್ನಿಗಳಿಗಿಂತಲೂ ಹೆಚ್ಚು ಪ್ರಭಾವಶಾಲಿಯೆಂಬ ಕೀರ್ತಿಯೂ ಇದಕ್ಕಿದೆ.

ಏಕೆಂದರೆ, ಭಾರತವನ್ನು ಕ್ರಿಕೆಟ್‌ ಲೋಕದ ಸಾಮ್ರಾಟನನ್ನಾಗಿ ರೂಪಿಸಿದ ದಿಗ್ಗಜ ಕ್ರಿಕೆಟಿಗರೆಲ್ಲ ರಣಜಿ ಟೂರ್ನಿಯೆಂಬ ತೊಟ್ಟಿಲಿನಲ್ಲಿ ಬೆಳೆದು ಬಂದವರು. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಟೂರ್ನಿಗಳಲ್ಲಿ ಆಡುವ ತಂಡಗಳು ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿಲ್ಲ. ಕೌಂಟಿಯಲ್ಲಿ 18 ಮತ್ತು ಶೆಫಿಲ್ಡ್‌ನಲ್ಲಿ 6 ತಂಡಗಳಿವೆ. ಆದರೆ, ರಣಜಿ ಟೂರ್ನಿಯ ಆರಂಭದಲ್ಲಿ 15 ತಂಡಗಳಿದ್ದವು. ಇದೀಗ ಸಂಖ್ಯೆಯೂ 38ಕ್ಕೇರಿದೆ. ಈ ಮೊದಲು ಈಶಾನ್ಯ ಭಾರತದ ತಂಡಗಳು ಹೆಚ್ಚಾಗಿ ಭಾಗವಹಿಸುತ್ತಿರಲಿಲ್ಲ. ಆದರೆ, ಬಿಸಿಸಿಐ ಆಡಳಿತಕ್ಕೆ ಸುಧಾರಣೆ ಮತ್ತು ಹೊಸ ನಿಯಮಾವಳಿ ತಂದ ನಿವೃತ್ತ ನ್ಯಾಯಮೂರ್ತಿ ಆರ್‌.ಎಂ. ಲೋಧಾ ಸಮಿತಿಯ ಶಿಫಾರಸ್ಸಿನಂತೆ ಈಶಾನ್ಯ ರಾಜ್ಯಗಳೂ ಈಗ ಕ್ರಿಕೆಟ್ ಅಂಗಳದಲ್ಲಿ ಕಾಣಿಸಿಕೊಳ್ಳುತ್ತಿವೆ. ಅದರಿಂದಾಗಿ ತಂಡಗಳ ಸಂಖ್ಯೆ ಹೆಚ್ಚಿದೆ. ಇದು ಸ್ಪರ್ಧೆಯನ್ನು ಮತ್ತಷ್ಟು ತೀವ್ರಗೊಳಿಸುತ್ತಿದೆ. ಹೊಸ ಪ್ರತಿಭೆಗಳಿಗೆ ಅವಕಾಶ ದೊರೆಯುತ್ತಿದೆ.

ಮೈಲುಗಲ್ಲು ಆಚರಣೆ ಏಕಿಲ್ಲ?

ಇಲ್ಲಿಯವರೆಗೆ ಒಟ್ಟು ಎಷ್ಟು ಟೆಸ್ಟ್ ಪಂದ್ಯಗಳು ನಡೆದಿವೆ ಎಂದು ಕೇಳಿ. ಕ್ರಿಕೆಟ್ ಆಸಕ್ತರು ಇದಕ್ಕೆ ಛಕ್ಕನೆ ಉತ್ತರಿಸುತ್ತಾರೆ. ಎಷ್ಟು ಅಂತರ ರಾಷ್ಟ್ರೀಯ ಪಂದ್ಯಗಳು ಜರುಗಿವೆ ಎಂದು ಪ್ರಶ್ನೆ ಹಾಕಿ. ಇದಕ್ಕೂ ಅವರು ತಡಬಡಿಸದೆ ಕರಾರುವಾಕ್ ಸಂಖ್ಯೆ ಉಲ್ಲೇಖಿಸುತ್ತಾರೆ. ಎಷ್ಟು ಚುಟುಕು (ಟ್ವೆಂಟಿ-20) ಪಂದ್ಯಗಳು ಆಗಿವೆ ಎಂದಾಗ ಅದಕ್ಕೂ ಸರಿ ಉತ್ತರ ಬಂದರೆ ಆಶ್ಚರ್ಯ ಪಡಬೇಕಾಗಿಲ್ಲ. ಏಕೆಂದರೆ ಕ್ರಿಕೆಟ್ ಆಟದ ಜನಪ್ರಿಯತೆಯಿಂದಾಗಿ, ಈ ಎಲ್ಲ ಮಾಹಿತಿಗಳು ಅಂತರ್ಜಾಲದ ಕ್ರಿಕೆಟ್ ವೆಬ್ ಸೈಟ್ ಗಳಲ್ಲಿ ಲಭ್ಯವಿರುತ್ತವೆ. ಆದರೆ ಎಷ್ಟು ರಣಜಿ ಪಂದ್ಯಗಳು ನಡೆದಿವೆ ಎಂಬ ಪ್ರಶ್ನೆ ಎತ್ತಿದಾಗ, ಕ್ರಿಕೆಟ್ ಅಂಕಿ ಅಂಶ ತಜ್ಞರನ್ನು ಹೊರತುಪಡಿಸಿದರೆ, ಬಹುತೇಕ ಯಾರೂ ಈ ಪ್ರಶ್ನೆಗೆ ಉತ್ತರಿಸಲು ಮುಂಬರುವುದಿಲ್ಲವೆಂದೇ ಹೇಳಬಹುದು.

ಏಕೆಂದರೆ ಐತಿಹಾಸಿಕ ರಣಜಿ ಟೂರ್ನಿಯಲ್ಲಿ ಪಂದ್ಯಗಳ ಸಂಖ್ಯೆ 1,000 (1970–71ರಲ್ಲಿ), 2,000 (1987–88ರಲ್ಲಿ), 3,000 (2000–01ರಲ್ಲಿ) ಮತ್ತು 4,000ದ (2012–13ರಲ್ಲಿ) ಮೈಲುಗಲ್ಲು ಮುಟ್ಟಿದಾಗ ಯಾವ ಸಂಭ್ರಮಾಚರಣೆಯೂ ನಡೆದಂತಿಲ್ಲ. ಪ್ರತಿ ವರ್ಷ ರಣಜಿ ಪಂದ್ಯಗಳನ್ನು ಆಯೋಜಿಸುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯೇ ಆಸಕ್ತಿ ತೋರದೆ ಇದ್ದಾಗ ಅದರ ಅಧೀನದಲ್ಲಿರುವ ಹಲವಾರು ರಾಜ್ಯ ಕ್ರಿಕೆಟ್ ಸಂಸ್ಥೆಗಳು ಇದರ ಬಗ್ಗೆ ಯಾವುದೇ ಕಾಳಜಿ ವ್ಯಕ್ತಪಡಿಸದಿರುವುದು ಸಹಜ. ಕ್ರಿಕೆಟ್ ಆಟಗಾರರೂ ಕೂಡ ತಮ್ಮ ವಿಶಿಷ್ಟ ದಾಖಲೆಗಳಿಗೆ ಕಾರಣವಾಗುವ ಇಂತಹ ಐತಿಹಾಸಿಕ ಪಂದ್ಯಗಳ ಸಂಭ್ರಮಾಚರಣೆ ಬಗ್ಗೆ ನಿರಾಸಕ್ತಿ ಹೊಂದಿದ್ದಾರೆ.

ಪ್ರಸಕ್ತ ಋತುವಿನಲ್ಲಿ ರಣಜಿ ಪಂದ್ಯಗಳ ಸಂಖ್ಯೆ 5000 ದಾಟಲಿದೆ. ರಣಜಿ ಟ್ರೋಫಿಯಿಂದಾಗಿ ಈ ದೇಶದ ಕ್ರಿಕೆಟ್‌ ಅಪಾರವಾಗಿ ಬೆಳೆದಿದೆ. ಇಂತಹ ಮೈಲುಗಲ್ಲುಗಳು ವಿಶೇಷವಾಗಿ ದಾಖಲಾಗಬೇಕು.

ಚನ್ನಗಿರಿ ಕೇಶವಮೂರ್ತಿ,ಕ್ರಿಕೆಟ್ ಅಂಕಿ ಅಂಶ ತಜ್ಞರು

ಟೂರ್ನಿ ಆರಂಭ: 1934–35

ತಂಡಗಳು: 15

ವಲಯಗಳು: 4 (ಪೂವರ್, ಪಶ್ವಿಮ, ಉತ್ತರ ಮತ್ತು ದಕ್ಷಿಣ)

ಮೊದಲ ಚಾಂಪಿಯನ್: ಮುಂಬೈ

ಅತಿ ಹೆಚ್ಚು ಪಂದ್ಯಗಳನ್ನಾಡಿರುವ ತಂಡಗಳು

ತಂಡ; ಪಂದ್ಯ

ಮುಂಬೈ; 521

ದೆಹಲಿ; 459

ಕರ್ನಾಟಕ; 451

ತಮಿಳುನಾಡು; 450

ಬಂಗಾಳ; 437

ಹೈದರಾಬಾದ್; 424

ಕರ್ನಾಟಕದ ಸಾಧನೆ

ಪಂದ್ಯ; 451

ಜಯ; 202

ಸೋಲು; 67

ಡ್ರಾ; 182

ಜಯದ ಸಾಧನೆ (ಅಗ್ರ 5 ತಂಡಗಳು)

ತಂಡ; ವಿಜಯ

ಮುಂಬೈ; 41

ಕರ್ನಾಟಕ;8

ದೆಹಲಿ; 7

ಬರೋಡ; 5

ಹೋಳ್ಕರ್ ; 4

ಪ್ರಮುಖ ಅಂಶಗಳು

6ಕ್ಕೆ 944 ಡಿಕ್ಲೆರ್ಡ್: ಹೈದರಾಬಾದ್ ತಂಡವು ಆಂಧ್ರದ ಎದುರು 1993–94ರಲ್ಲಿ ಗಳಿಸಿದ್ದ ಮೊತ್ತ. ಇದೇ ಅತ್ಯಧಿಕ ದಾಖಲೆ. 1990–91ರಲ್ಲಿ ಕರ್ನಾಟಕ ತಂಡವು ಬಂಗಾಳ ವಿರುದ್ಧ 6ಕ್ಕೆ 791 ಗಳಿಸಿತ್ತು.

21; ರಣಜಿಯಲ್ಲಿ ದಾಖಲಾದ ಕನಿಷ್ಠ ಮೊತ್ತ. 2010–11ರಲ್ಲಿ ಹೈದರಾಬಾದ್ ತಂಡವು ರಾಜಸ್ಥಾನ ಎದುರು ಗಳಿಸಿದ್ದು. 1951–52ರಲ್ಲಿ ಬೆಂಗಳೂರಿನಲ್ಲಿ ಕರ್ನಾಟಕವು ಮುಂಬೈ ಎದುರು 28 ರನ್‌ ಗಳಿಸಿತ್ತು.

443*: ಮಹಾರಾಷ್ಟ್ರದ ಬಿ.ಬಿ. ನಿಂಬಾಳ್ಕರ್ 1948–49ರಲ್ಲಿ ಗಳಿಸಿದ ವೈಯಕ್ತಿಕ ಶ್ರೇಷ್ಠ ಸ್ಕೋರ್ ಈಗಲೂ ದಾಖಲೆಯಾಗಿ ಉಳಿದಿದೆ.

156; ಅತ್ಯಧಿಕ ರಣಜಿ ಪಂದ್ಯಗಳನ್ನು ಆಡಿದ ಆಟಗಾರ ವಾಸೀಂ ಜಾಫರ್, ಮುಂಬೈ–ವಿದರ್ಭ ತಂಡಗಳನ್ನು ಪ್ರತಿನಿಧಿಸಿದ್ದರು ಕರ್ನಾಟಕದ ಸುನೀಲ್ ಜೋಶಿ (117) ನಂತರದ ಸ್ಥಾನದಲ್ಲಿದ್ದಾರೆ.

636 ; ಅತಿ ಹೆಚ್ಚು ವಿಕೆಟ್ ಪಡೆದ ಸಾಧಕ ರಾಜೇಂದ್ರ ಗೋಯಲ್. ಎರಡನೇ ಸ್ಥಾನದಲ್ಲಿ ಸುನೀಲ್ ಜೋಶಿ (479) ಇದ್ದಾರೆ.

12,038; ಅತಿ ಹೆಚ್ಚು ರನ್‌ ಗಳಿಸಿದ್ದು ವಾಸೀಂ ಜಾಫರ್. ಎರಡನೇ ಸ್ಥಾನದಲ್ಲಿ ಕರ್ನಾಟಕದ ಬ್ರಿಜೇಶ್ ಪಟೇಲ್ (7126) ಇದ್ದಾರೆ.

337 ರನ್; ಕರ್ನಾಟಕದ ಪರ ವೈಯಕ್ತಿಕ ಗರಿಷ್ಠ ಸ್ಕೋರ ಗಳಿಸಿದ್ದು ಕೆ.ಎಲ್. ರಾಹುಲ್

20ಕ್ಕೆ10; ಬಂಗಾಳದ ಸಿ.ಎಂ. ಚಟರ್ಜಿ ಇನಿಂಗ್ಸ್‌ವೊಂದರಲ್ಲಿ ಮಾಡಿದ ಶ್ರೇಷ್ಠ ಬೌಲಿಂಗ್ ಸಾಧನೆ. ಕನ್ನಡಿಗ ಬಿ.ಎಸ್‌. ಚಂದ್ರಶೇಖರ್ (72ಕ್ಕೆ9) ನಂತರದ ಸ್ಥಾನದಲ್ಲಿದ್ದಾರೆ.

99ಕ್ಕೆ16; ಪಂದ್ಯಶ್ರೇಷ್ಠ ಬೌಲಿಂಗ್ ಸಾಧನೆ ಮಾಡಿದ್ದು ಕರ್ನಾಟಕದ ಅನಿಲ್ ಕುಂಬ್ಳೆ.

ಏಕೈಕ ಟೈ ಪಂದ್ಯ

ರಣಜಿ ಟ್ರೋಫಿಯಲ್ಲಿ ಒಂದು ಪಂದ್ಯ ಟೈ ಆಗಿದೆ. 1945–46ರಲ್ಲಿ ಪಟಿಯಾಲದಲ್ಲಿ ನಡೆದಿದ್ದ ಸದರನ್ ಪಂಜಾಬ್ ಮತ್ತು ಬರೋಡಾ ನಡುವಣ ಪಂದ್ಯ ಅದಾಗಿತ್ತು. ಟೈ ಆದಾಗ, ಟಾಸ್ ಹಾಕಿ, ಸದರನ್ ಪಂಜಾಬ್ ವಿಜಯೀ ಎಂದು ಘೋಷಿಸಲಾಯಿತು.

ಕರ್ನಾಟಕಕ್ಕೆ ರಣಜಿ ಟ್ರೋಫಿ ಜಯಿಸಿದ ನಾಯಕರು

ವರ್ಷ; ನಾಯಕ

1973–74; ಯರಪಳ್ಳಿ ಪ್ರಸನ್ನ

1977–78; ಯರಪಳ್ಳಿ ಪ್ರಸನ್ನ

1982–83; ಬ್ರಿಜೇಶ್ ಪಟೇಲ್

1995–96; ಅನಿಲ್ ಕುಂಬ್ಳೆ

1997–98; ರಾಹುಲ್ ದ್ರಾವಿಡ್

1998–99; ಸುನೀಲ್ ಜೋಶಿ

2013–14; ವಿನಯಕುಮಾರ್

2014–15; ವಿನಯಕುಮಾರ್

ಕರ್ನಾಟಕಕ್ಕೆ ಪುದುಚೇರಿ ಸವಾಲು

ಚೆನ್ನೈ: ಈ ಬಾರಿಯ ರಣಜಿ ಟೂರ್ನಿಯ ಸಿ ಗುಂಪಿನಲ್ಲಿ ಅಗ್ರಸ್ಥಾನದಲ್ಲಿರುವ ಕರ್ನಾಟಕ ತಂಡವು ಲೀಗ್ ಹಂತದ ಮೂರನೇ ಸುತ್ತಿನಲ್ಲಿ ಪುದುಚೇರಿಯ ಸವಾಲು ಎದುರಿಸಲಿದೆ.

ಗುರುವಾರ ಇಲ್ಲಿ ಆರಂಭವಾಗಲಿರುವ ಪಂದ್ಯದಲ್ಲಿ ಮನೀಷ್ ಪಾಂಡೆ ಬಳಗವೇ ಗೆಲುವಿನ ನೆಚ್ಚಿನ ತಂಡವಾಗಿದೆ. ಟೂರ್ನಿಯ ಮೊದಲ ಪಂದ್ಯದಲ್ಲಿ ಕರ್ನಾಟಕವು ರೈಲ್ವೆಸ್ ವಿರುದ್ಧ ಡ್ರಾ ಮಾಡಿಕೊಂಡಿತ್ತು. ಎರಡನೇ ಪಂದ್ಯದಲ್ಲಿ ಜಮ್ಮು–ಕಾಶ್ಮೀರದ ಸವಾಲನ್ನು ಸಮರ್ಥವಾಗಿ ಮೆಟ್ಟಿನಿಂತಿತ್ತು. ಒಟ್ಟು 9 ಪಾಯಿಂಟ್‌ಗಳು ರಾಜ್ಯ ತಂಡದ ಖಾತೆಯಲ್ಲಿವೆ.

ಪ್ರಸಿದ್ಧ ಕೃಷ್ಣ, ಕೃಷ್ಣಪ್ಪ ಗೌತಮ್, ಶ್ರೇಯಸ್ ಗೋಪಾಲ್ ಮತ್ತು ಯುವ ಬೌಲರ್ ವಿದ್ಯಾಧರ್ ಪಾಟೀಲ ಅವರ ಬೌಲಿಂಗ್ ಪಡೆಯೂ ಕಳೆದೆರಡು ಪಂದ್ಯಗಳಲ್ಲಿ ಪರಿಣಾಮಕಾರಿಯಾಗಿ ಆಡಿದ್ದಾರೆ. ಅದರಲ್ಲಿಯೂ ಕಾಶ್ಮೀರ ಎದುರಿನ ಪಂದ್ಯದಲ್ಲಿ ಪ್ರಸಿದ್ಧ ಕೃಷ್ಣ ಒಟ್ಟು ಹತ್ತು ವಿಕೆಟ್ ಗಳಿಸಿದ್ದರು. ದಾಮೋದರನ್ ರೋಹಿತ್ ನಾಯಕತ್ವದ ಪುದುಚೇರಿ ತಂಡವು ಒಂದು ಪಂದ್ಯ ಸೋತು ಮತ್ತೊಂದರಲ್ಲಿ ಡ್ರಾ ಮಾಡಿಕೊಂಡಿದೆ. ಕಳೆದ ಪಂದ್ಯದಲ್ಲಿ ಪಾರಸ್ ಡೋಗ್ರಾ ಆಕರ್ಷಕ ಶತಕ ದಾಖಲಿಸಿದ್ದರು. ತಂಡದಲ್ಲಿರುವ ಕನ್ನಡಿಗ ಪವನ್ ದೇಶಪಾಂಡೆ ಕೂಡ ಅರ್ಧಶತಕ ದಾಖಲಿಸಿದ್ದರು. ಬೌಲರ್ ಸಾಗರ್ ಉದೇಶಿ ಕರ್ನಾಟಕದ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕುವ ಛಲದಲ್ಲಿದ್ದಾರೆ. ಈ ಪಂದ್ಯದಲ್ಲಿ ಗೆದ್ದರೆ ಕರ್ನಾಟಕ ತಂಡಕ್ಕೆ ಕ್ವಾರ್ಟರ್‌ಫೈನಲ್ ಹಾದಿ ಸುಗಮವಾಗಲಿದೆ.

ಪಂದ್ಯ ಆರಂಭ: ಬೆಳಿಗ್ಗೆ 9

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT