ಮಂಗಳವಾರ, 5 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಖ್ಯೆ–ಸುದ್ದಿ | ಮುಂಗಾರು ಹಂಗಾಮು: ಆಹಾರ ಧಾನ್ಯ ಬಿತ್ತನೆಗೆ ನಿರಾಸಕ್ತಿ

Last Updated 13 ಜುಲೈ 2022, 19:30 IST
ಅಕ್ಷರ ಗಾತ್ರ

ಕರ್ನಾಟಕದಲ್ಲಿ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗಿದೆ ಎಂದು ಹವಾಮಾನ ಇಲಾಖೆಯ ದತ್ತಾಂಶಗಳು ತಿಳಿಸಿವೆ. ಅಣೆಕಟ್ಟೆಗಳು, ಕೆರೆಗಳಿಗೆ ಯಥೇಚ್ಛ ನೀರು ಹರಿದು ಬಂದಿದೆ.

ಹಲವು ಜಲಾಶಯಗಳು ತುಂಬುವ ಹಂತಕ್ಕೆ ಬಂದಿವೆ. ಆದರೆ, ಈ ಸಾಲಿನಲ್ಲಿ ಆಹಾರ ಧಾನ್ಯಗಳ ಬಿತ್ತನೆಯಲ್ಲಿ ವಿಳಂಬವಾಗಿದೆ. 2021ರ ಮುಂಗಾರು ಹಂಗಾಮಿಗೆ ಹೋಲಿಸಿದರೆ, ಈ ಸಾಲಿನ ಮುಂಗಾರು ಹಂಗಾಮಿನಲ್ಲಿ ಆಹಾರ ಧಾನ್ಯಗಳ ಬಿತ್ತನೆ ಪ್ರದೇಶದ ಗುರಿಯನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಲಾಗಿತ್ತು. ಕೃಷಿ ಇಲಾಖೆಯು ತನ್ನ ಗುರಿಯನ್ನು ಹೆಚ್ಚಿಸಿಕೊಂಡಿದ್ದರೂ, ರೈತ ಸಮುದಾಯವು ಆಹಾರ ಧಾನ್ಯಗಳ ಬಿತ್ತನೆಗೆ ಹೆಚ್ಚಿನ ಆಸಕ್ತಿಯನ್ನು ತೋರಿಸಿಲ್ಲ.

[object Object]

ಎಣ್ಣೆಕಾಳುಗಳು ಮತ್ತು ವಾಣಿಜ್ಯ ಬೆಳೆಗಳಾದ ಹತ್ತಿ, ಕಬ್ಬು ಬಿತ್ತನೆ ಪ್ರದೇಶದ ವ್ಯಾಪ್ತಿಯನ್ನು ಈ ಸಾಲಿನಲ್ಲಿ ಕಡಿಮೆ ಮಾಡಲಾಗಿತ್ತು.ಆದರೆ, ವಾಣಿಜ್ಯ ಬೆಳೆಗಳು ಮತ್ತು ಎಣ್ಣೆಕಾಳುಗಳ ಬಿತ್ತನೆಯಲ್ಲಿ ಗಣನೀಯ ಪ್ರಗತಿ ಸಾಧಿಸಲಾಗಿದೆ.

ಈ ಸ್ವರೂಪದ ವಾಣಿಜ್ಯ ಬೆಳೆಗಳ ಬಿತ್ತನೆ ಕಾರ್ಯಕ್ಕೆ ರೈತ ಸಮುದಾಯವು ತೀವ್ರ ಆಸಕ್ತಿ ತೋರಿಸಿದೆ. ಹಿಂದಿನ ಸಾಲಿನ ಮುಂಗಾರು ಹಂಗಾಮಿಗೆ ಹೋಲಿಸಿದರೆ, ಈ ಸಾಲಿನ ಮುಂಗಾರು ಹಂಗಾಮಿನಲ್ಲಿ ಈ ಬೆಳೆಗಳ ಬಿತ್ತನೆ ಕಾರ್ಯ ಚುರುಕಾಗಿದೆ.

ಏಕದಳ ಧಾನ್ಯ: ತುಸು ಕಡಿಮೆ

[object Object]

ಈ ಬಾರಿಯ ಮುಂಗಾರು ಹಂಗಾಮಿನಲ್ಲಿ 35.98 ಲಕ್ಷ ಹೆಕ್ಟೇರ್‌ಗಳಲ್ಲಿ ಏಕದಳ ಧಾನ್ಯಗಳ ಬಿತ್ತನೆ ಆಗಬಹುದು ಎಂದು ರಾಜ್ಯ ಕೃಷಿ ಇಲಾಖೆಯು ಅಂದಾಜಿಸಿದೆ. 2021ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 31.37 ಲಕ್ಷ ಹೆಕ್ಟೇರ್‌ಗಳಲ್ಲಿ ಬಿತ್ತನೆ ಗುರಿ ಹಾಕಿಕೊಳ್ಳಲಾಗಿತ್ತು. 2021ರ ಜುಲೈ ಮೊದಲ ವಾರದ ವೇಳೆಗೆ, ಒಟ್ಟು ಗುರಿಯ ಶೇ 38.23ರಷ್ಟು ಬಿತ್ತನೆ ಕಾರ್ಯ ಪೂರ್ಣಗೊಂಡಿತ್ತು. ಆದರೆ, ಈ ಸಾಲಿನ ಜುಲೈ ಮೊದಲ ವಾರದ ವೇಳೆಗೆ, ಒಟ್ಟು ಗುರಿಯ ಶೇ 31ರಷ್ಟನ್ನು ಮಾತ್ರ ಬಿತ್ತನೆ ಮಾಡಲಾಗಿದೆ.

ದ್ವಿದಳ ಧಾನ್ಯ: ಭಾರಿ ಕಡಿಮೆ

[object Object]

2021ರ ಮುಂಗಾರು ಹಂಗಾಮಿಗೆ ಹೋಲಿಸಿಕೊಂಡರೆ, 2022ರ ಮುಂಗಾರು ಹಂಗಾಮಿನಲ್ಲಿ ದ್ವಿದಳ ಧಾನ್ಯಗಳ ಬಿತ್ತನೆಯ ಗುರಿಯನ್ನು ಹೆಚ್ಚಿಸಿಕೊಳ್ಳಲಾಗಿದೆ. ಆದರೆ 2021ರ ಜುಲೈ ಮೊದಲ ವಾರದ ವೇಳೆಗೆ, ಮುಂಗಾರು ಹಂಗಾಮಿನ ಒಟ್ಟು ಬಿತ್ತನೆ ಗುರಿಯಲ್ಲಿ ಶೇ 57.62ರಷ್ಟು ಬಿತ್ತನೆ ಕಾರ್ಯ ಪೂರ್ಣಗೊಂಡಿತ್ತು. ಆದರೆ, 2022ರ ಜುಲೈ ಮೊದಲನೇ ವಾರದ ವೇಳೆಗೆ ಒಟ್ಟು ಗುರಿಯ ಶೇ 43ರಷ್ಟು ಬಿತ್ತನೆ ಕಾರ್ಯ ಮಾತ್ರ ಪೂರ್ಣಗೊಂಡಿದೆ.

ಎಣ್ಣೆಕಾಳು: ಭಾರಿ ಪ್ರಗತಿ

2021ರ ಮುಂಗಾರು ಹಂಗಾಮಿಗೆ ಹೋಲಿಸಿದರೆ, 2022ರ ಮುಂಗಾರು ಹಂಗಾಮಿನಲ್ಲಿ ಎಣ್ಣೆಕಾಳುಗಳ ಬಿತ್ತನೆ ಪ್ರದೇಶದ ವ್ಯಾಪ್ತಿಯ ಗುರಿಯನ್ನು ಕಡಿಮೆ ಮಾಡಲಾಗಿದೆ. 2021ರ ಜುಲೈ ಮೊದಲ ವಾರದ ವೇಳೆಗೆ, ಒಟ್ಟು ಬಿತ್ತನೆ ಗುರಿಯ ಶೇ 53.41ರಷ್ಟು ಗುರಿಯನ್ನಷ್ಟೇ ಮುಟ್ಟಲಾಗಿತ್ತು. ಆದರೆ, 2022ರ ಜುಲೈ ಮೊದಲ ವಾರದ ವೇಳೆಗೆ, ಒಟ್ಟು ಗುರಿಯ ಶೇ 67ರಷ್ಟು ಬಿತ್ತನೆ ಕಾರ್ಯ ಪೂರ್ಣಗೊಂಡಿದೆ.

ಹತ್ತಿ ಬಿತ್ತನೆ: ಭಾರಿ ಪ್ರಗತಿ

2022ನೇ ಸಾಲಿನ ಮುಂಗಾರಿನಲ್ಲಿ ರಾಜ್ಯದಲ್ಲಿ ಹತ್ತಿ ಬೆಳೆಯುವ ಪ್ರದೇಶದ ಗುರಿಯನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳಲಾಗಿದೆ. 2021ರ ಜುಲೈ ಮೊದಲ ವಾರದ ವೇಳೆಗೆ, ಒಟ್ಟು ಗುರಿಯ ಶೇ 37ರಷ್ಟು ಬಿತ್ತನೆ ಕಾರ್ಯ ಮಾತ್ರ ಪೂರ್ಣಗೊಂಡಿತ್ತು. ಆದರೆ, 2022ರ ಜುಲೈ ಮೊದಲ ವಾರದ ವೇಳೆಗೆ, ಒಟ್ಟು ಗುರಿಯ ಶೇ 47ರಷ್ಟು ಬಿತ್ತನೆ ಕಾರ್ಯವನ್ನು ಪೂರ್ಣಗೊಳಿಸಲಾಗಿದೆ.

ಕಬ್ಬು ಬಿತ್ತನೆ ಶೇ 86ರಷ್ಟು

2022ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರಾಜ್ಯದಲ್ಲಿ ಕಬ್ಬು ಬೆಳೆಯುವ ಪ್ರದೇಶದ ಗುರಿಯನ್ನು ಸ್ವಲ್ಪ ಹೆಚ್ಚಿಸಿಕೊಳ್ಳಲಾಗಿದೆ. 2021ರ ಜುಲೈ ಮೊದಲ ವಾರದ ವೇಳೆಗೆ, ಒಟ್ಟು ಗುರಿಯ ಶೇ 79.28ರಷ್ಟು ಬಿತ್ತನೆ ಕಾರ್ಯ ಮಾತ್ರ ಪೂರ್ಣಗೊಂಡಿತ್ತು. ಆದರೆ, 2022ರ ಜುಲೈ ಮೊದಲ ವಾರದ ವೇಳೆಗೆ, ಒಟ್ಟು ಗುರಿಯ ಶೇ 86ರಷ್ಟು ಬಿತ್ತನೆ ಕಾರ್ಯವನ್ನು ಪೂರ್ಣಗೊಳಿಸಲಾಗಿದೆ. ಮುಂದಿನ ವಾರಗಳಲ್ಲಿ ಮತ್ತಷ್ಟು ಪ್ರದೇಶದಲ್ಲಿ ಬಿತ್ತನೆ ಕಾರ್ಯ ನಡೆಯುವುದರಿಂದ, ಈ ಸಾಲಿನ ಮುಂಗಾರು ಹಂಗಾಮಿನ ಕಬ್ಬು ಇಳುವರಿ ಹೆಚ್ಚಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.

ಬಿತ್ತನೆ ಬೀಜ

[object Object]

ಈ ಸಾಲಿನ ಮುಂಗಾರು ಹಂಗಾಮಿಗೆ ರಾಜ್ಯದಾದ್ಯಂತ ಒಟ್ಟು 5.38 ಲಕ್ಷ ಕ್ವಿಂಟಲ್‌ಗಳಷ್ಟು ಬಿತ್ತನೆ ಬೀಜದ ಅವಶ್ಯಕತೆ ಇದೆ ಎಂದು ಅಂದಾಜಿಸಲಾಗಿದೆ. ಇದರಲ್ಲಿ 2.37 ಲಕ್ಷ ಕ್ವಿಂಟಲ್‌ಗಳಷ್ಟು ಬಿತ್ತನೆ ಬೀಜವನ್ನು ಈಗಾಗಲೇ ರೈತ ಸಂಪರ್ಕ ಕೇಂದ್ರಗಳ ಮೂಲಕ ವಿತರಣೆ ಮಾಡಲಾಗಿದೆ. ರೈತ ಸಂಪರ್ಕ ಕೇಂದ್ರಗಳಲ್ಲಿ ಇನ್ನೂ 1.53 ಲಕ್ಷ ಕ್ವಿಂಟಲ್‌ನಷ್ಟು ಬಿತ್ತನೆ ಬೀಜದ ದಾಸ್ತಾನು ಇದೆ ಎಂದು ಸರ್ಕಾರವು ತನ್ನ ವರದಿಯಲ್ಲಿ ಹೇಳಿದೆ. ಈ ಸಾಲಿನ ಮುಂಗಾರು ಹಂಗಾಮಿಗೆ ಅಗತ್ಯವಿರುವ ಬಿತ್ತನೆ ಬೀಜದಲ್ಲಿ ಇನ್ನೂ 1.48 ಲಕ್ಷ ಕ್ವಿಂಟಲ್‌ನಷ್ಟು, ರೈತ ಸಂಪರ್ಕ ಕೇಂದ್ರಗಳಿಗೆ ಪೂರೈಕೆಯಾಗಬೇಕಿದೆ.

l2021ರ ಮುಂಗಾರು ಹಂಗಾಮಿನಲ್ಲಿ ಒಟ್ಟು 77 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ನಿರೀಕ್ಷಿಸಲಾಗಿತ್ತು. ಅದಕ್ಕಾಗಿ 6 ಲಕ್ಷ ಕ್ವಿಂಟಲ್‌ನಷ್ಟು ಬಿತ್ತನೆ ಬೀಜದ ಅವಶ್ಯಕತೆ ಇದೆ ಎಂದು ಅಂದಾಜಿಸಲಾಗಿತ್ತು

l2022ರ ಮುಂಗಾರು ಹಂಗಾಮಿನಲ್ಲಿ ಒಟ್ಟು 82.67 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ನಿರೀಕ್ಷಿಸಲಾಗಿದೆ. ಅದಕ್ಕಾಗಿ 5.38 ಲಕ್ಷ ಕ್ವಿಂಟಲ್‌ನಷ್ಟು ಬಿತ್ತನೆ ಬೀಜದ ಅವಶ್ಯಕತೆ ಇದೆ ಎಂದು ಅಂದಾಜಿಸಲಾಗಿದೆ

lಈ ಸಾಲಿನಲ್ಲಿ ಬಿತ್ತನೆ ಪ್ರದೇಶದ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡಿದ್ದರೂ, ಅಗತ್ಯವಿರುವ ಬಿತ್ತನೆ ಬೀಜದ ಪ್ರಮಾಣದ ಅಂದಾಜನ್ನು ಕಡಿಮೆ ಮಾಡಲಾಗಿದೆ. ರೈತರಿಗೆ ಪೂರೈಕೆಯಾಗಿರುವ ಬಿತ್ತನೆ ಬೀಜದ ಪ್ರಮಾಣವೂ ಕಡಿಮೆ ಇದೆ

ಆಧಾರ: ರಾಜ್ಯ ಕೃಷಿ ಇಲಾಖೆಯ ಮುಂಗಾರು ಹಂಗಾಮು ಸ್ಥಿತಿಗತಿ ವರದಿಗಳು, ಹವಾಮಾನ ಇಲಾಖೆಯ ಸಾಪ್ತಾಹಿಕ ಮಳೆ ವರದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT