ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ಆಳ–ಅಗಲ ‌| ಆರೋಪಿಗಳಿಗೆ ಎಲ್ಲ ಪಕ್ಷಗಳಲ್ಲೂ ಮಣೆ
ಆಳ–ಅಗಲ ‌| ಆರೋಪಿಗಳಿಗೆ ಎಲ್ಲ ಪಕ್ಷಗಳಲ್ಲೂ ಮಣೆ
Published 30 ಮೇ 2024, 0:02 IST
Last Updated 30 ಮೇ 2024, 0:02 IST
ಅಕ್ಷರ ಗಾತ್ರ
ಈ ಬಾರಿಯ ಲೋಕಸಭಾ ಚುನಾವಣೆಯ ಕಣದಲ್ಲಿ ಇರುವವರಲ್ಲಿ 180 ಮಂದಿಯ ವಿರುದ್ಧ ಲೈಂಗಿಕ ದೌರ್ಜನ್ಯ, ಮಹಿಳೆಯರ ಗೌರವಕ್ಕೆ ಧಕ್ಕೆ ತಂದ ಆರೋಪಗಳಿವೆ. 14 ಮಂದಿಯ ವಿರುದ್ಧ ಅತ್ಯಾಚಾರದ ಆರೋಪಗಳಿವೆ. ಅಭ್ಯರ್ಥಿಗಳೇ ತಮ್ಮ ನಾಮಪತ್ರದಲ್ಲಿ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಇಂತಹ ಪ್ರಕರಣಗಳಿಗೆ ಸಂಬಂಧಿಸಿದ ವಿವರಗಳನ್ನು ನಮೂದಿಸಿದ್ದಾರೆ. ಇಂತಹ ಆರೋಪ ಎದುರಿಸುತ್ತಿರುವವರಲ್ಲಿ ಮಹಿಳಾ ಅಭ್ಯರ್ಥಿಗಳೂ ಇದ್ದಾರೆ.

ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ವಿಚಾರಗಳು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ದೊಡ್ಡಮಟ್ಟದಲ್ಲಿ ಚರ್ಚೆಯಾಗುತ್ತಿರುವ ವಿಷಯಗಳು. ಬಿಜೆಪಿ ಸಂಸದ ಬ್ರಿಜ್‌ಭೂಷಣ್ ಶರಣ್‌ ಸಿಂಗ್‌ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಇದ್ದ ಕಾರಣಕ್ಕೇ ಅವರಿಗೆ ಟಿಕೆಟ್‌ ನಿರಾಕರಿಸಿ, ಅವರ ಮಗನಿಗೆ ಟಿಕೆಟ್‌ ನೀಡಲಾಯಿತು. ಇನ್ನು ಕರ್ನಾಟಕದಲ್ಲಿ ಜೆಡಿಎಸ್‌ನ ಅಭ್ಯರ್ಥಿ (ಬಿಜೆಪಿ ಬೆಂಬಲಿತ) ಪ್ರಜ್ವಲ್‌ ರೇವಣ್ಣ ಅವರದ್ದು ಎಂದು ಹೇಳಲಾದ ಆಕ್ಷೇಪಾರ್ಹ ಲೈಂಗಿಕ ವಿಡಿಯೊಗಳು ಮತದಾನಕ್ಕೆ ಒಂದೆರಡು ದಿನಗಳು ಇರುವ ಹೊತ್ತಿನಲ್ಲಿ ಬಹಿರಂಗವಾದವು. ದೇಶದಾದ್ಯಂತ ಚುನಾವಣಾ ಪ್ರಚಾರದಲ್ಲಿ ಈ ಪ್ರಕರಣವನ್ನು ಬಳಸಿಕೊಳ್ಳಲಾಯಿತು.

ಹೀಗೆ ದೊಡ್ಡಮಟ್ಟದಲ್ಲಿ ಸುದ್ದಿಯಾದ ಪ್ರಕರಣಗಳಲ್ಲಿ ಮಾತ್ರ ಪಕ್ಷಗಳು ಅಂತಹ ಅಭ್ಯರ್ಥಿ ಅಥವಾ ಟಿಕೆಟ್‌ ಆಕಾಂಕ್ಷಿಗಳ ಜತೆಗೆ ಅಂತರ ಕಾಯ್ದುಕೊಂಡವು. ಆದರೆ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಮತ್ತು ಮಹಿಳೆಯ ಗೌರವಕ್ಕೆ ಧಕ್ಕೆ ತಂದಂತಹ ಗಂಭೀರ ಅಪರಾಧ ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿದ್ದೂ, ಸುದ್ದಿಯಾಗದೇ ಇರುವ ನೂರಾರು ಜನರಿಗೆ ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳು ಟಿಕೆಟ್‌ ನೀಡಿವೆ. ಅಂತಹ ಅಭ್ಯರ್ಥಿಗಳು ಕಣಕ್ಕೆ ಇಳಿದಿರುವ ಕ್ಷೇತ್ರಗಳ ಪೈಕಿ, ಹಲವು ಕ್ಷೇತ್ರಗಳಲ್ಲಿ ಈಗಾಗಲೇ ಮತದಾನ ನಡೆದಾಗಿದೆ. ಏಳನೇ ಸುತ್ತಿನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿರುವ ಅಭ್ಯರ್ಥಿಗಳ ಪೈಕಿ, ಹಲವರ ವಿರುದ್ಧವೂ ಇಂತಹ ಪ್ರಕರಣಗಳು ಇವೆ. 

ಆದರೆ ಈ ಬಾರಿ ಕಣದಲ್ಲಿ ಇರುವವರಲ್ಲಿ ಇಂತಹ ಆರೋಪ ಎದುರಿಸುತ್ತಿರುವವರಲ್ಲಿ ಬಹುತೇಕ ಮಂದಿ ಪ್ರಾದೇಶಿಕ ಪಕ್ಷಗಳ ಅಭ್ಯರ್ಥಿಗಳಾಗಿದ್ದಾರೆ. ನಂತರದ ಸ್ಥಾನ ಪಕ್ಷೇತರ ಅಭ್ಯರ್ಥಿಗಳದ್ದು. ಇನ್ನು ಎರಡು ಪ್ರಮುಖ ರಾಷ್ಟ್ರೀಯ ಪಕ್ಷಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ವಿರುದ್ಧವೇ ಇಂತಹ ಹೆಚ್ಚಿನ ಆರೋಪಗಳಿವೆ. ನಂತರದ ಸ್ಥಾನದಲ್ಲಿ ಕಾಂಗ್ರೆಸ್‌ನ ಅಭ್ಯರ್ಥಿಗಳಿದ್ದಾರೆ. ಅಂದರೆ ಎಲ್ಲಾ ರಾಜಕೀಯ ಪಕ್ಷಗಳು ಇಂತಹ ಗಂಭೀರ ಅಪರಾಧಗಳ ಆರೋಪ ಎದುರಿಸುತ್ತಿರುವ ವ್ಯಕ್ತಿಗಳಿಗೆ ಚುನಾವಣೆಯಲ್ಲಿ ಮಣೆಹಾಕಿವೆ.

9 ಮಹಿಳಾ ಅಭ್ಯರ್ಥಿಗಳ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ

ಈ ಬಾರಿ ಕಣದಲ್ಲಿ ಇರುವ ಅಭ್ಯರ್ಥಿಗಳಲ್ಲಿ 9 ಮಹಿಳೆಯರ ವಿರುದ್ಧವೂ ಲೈಂಗಿಕ ದೌರ್ಜನ್ಯ ಮತ್ತು ಮಹಿಳೆಯ ಗೌರವಕ್ಕೆ ಧಕ್ಕೆ ತಂದ ಆರೋಪಗಳು ಇವೆ. ಈ ಸಂಬಂಧ ಅವರ ವಿರುದ್ಧ ಎಫ್‌ಐಆರ್ ಸಹ ದಾಖಲಾಗಿವೆ. ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ನಡೆಸಲು ಕುಮ್ಮಕ್ಕು ನೀಡಿದ ಆರೋಪವೂ ಮಹಿಳಾ ಅಭ್ಯರ್ಥಿಯೊಬ್ಬರ ಮೇಲೆ ಇದೆ. ಕರ್ನಾಟಕದಿಂದ ಕಣಕ್ಕೆ ಇಳಿದಿರುವವರಲ್ಲಿ ಇಬ್ಬರು ಮಹಿಳಾ ಅಭ್ಯರ್ಥಿಗಳ ವಿರುದ್ಧವೂ ಲೈಂಗಿಕ ದೌರ್ಜನ್ಯ ಮತ್ತು ಮಹಿಳೆಯ ಗೌರವಕ್ಕೆ ಧಕ್ಕೆ ತಂದ ಆರೋಪಗಳ ಅಡಿ ಪ್ರಕರಣಗಳು ದಾಖಲಾಗಿವೆ.

ಸಂತ್ರಸ್ತೆಯ ವಿರುದ್ಧವೂ ಆರೋಪ

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಹೆಚ್ಚು ಸದ್ದು ಮಾಡಿದ್ದು ಸಂದೇಶ್‌ಖಾಲಿ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳು. ಟಿಎಂಸಿ ಮುಖಂಡ ಮತ್ತು ಆತನ ಸಹಚರರ ವಿರುದ್ಧ ಮಾಡಲಾದ ಆರೋಪಗಳು ಮತ್ತು ದಾಖಲಾದ ದೂರುಗಳನ್ನು ಮೊದಲಿಗೆ ರಾಜ್ಯದ ಪೊಲೀಸರೇ ನಿರ್ವಹಣೆ ಮಾಡುತ್ತಿದ್ದರು. ಬಿಜೆಪಿಯ ಪ್ರತಿಭಟನೆಯ ಕಾರಣಕ್ಕೆ ಈ ಪ್ರಕರಣಗಳು ದೇಶದಾದ್ಯಂತ ದೊಡ್ಡಮಟ್ಟದಲ್ಲಿ ಸದ್ದು ಮಾಡಿದವು. ನಂತರದಲ್ಲಿ ಪ್ರಕರಣಗಳ ತನಿಖೆಯನ್ನು ಸಿಬಿಐಗೆ ವಹಿಸಲಾಯಿತು. ರಾಜ್ಯದಲ್ಲಿ ಇದು ಟಿಎಂಸಿಗೆ ತುಸು ಹಿನ್ನಡೆಗೆ ಕಾರಣವಾಯಿತು ಮತ್ತು ಬಿಜೆಪಿಗೆ ಅನುಕೂಲ ಮಾಡಿಕೊಟ್ಟಿತು ಎಂದು ವಿಶ್ಲೇಷಿಸಲಾಗಿತ್ತು.

ಆದರೆ ಸಂದೇಶ್‌ಖಾಲಿ ಈಗ ಮತ್ತೆ ಬೇರೆಯದ್ದೇ ಕಾರಣಕ್ಕೆ ಸುದ್ದಿಯಲ್ಲಿದೆ. ಸಂದೇಶ್‌ಖಾಲಿ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳ ಸಂತ್ರಸ್ತೆಯರಲ್ಲಿ ಒಬ್ಬರಾದ ರೇಖಾ ಪಾತ್ರಾ ಅವರನ್ನು ಬಿಜೆಪಿ ತನ್ನ ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸಿತ್ತು. ರೇಖಾ ಪಾತ್ರಾ ಅವರು, ‘ಇಲ್ಲಿನ ದೌರ್ಜನ್ಯದ ವಿರುದ್ಧ ನಾನು ಹೋರಾಡುತ್ತಿದ್ದೇನೆ. ಅದಕ್ಕೆ ಈಗ ರಾಜಕೀಯ ಬೆಂಬಲವೂ ದೊರೆತಿದೆ. ಈ ಹೋರಾಟವನ್ನು ದಡಮುಟ್ಟಿಸುತ್ತೇನೆ. ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ನಮ್ಮ ಪಕ್ಷ ಕೆಲಸ ಮಾಡಲಿದೆ’ ಎಂದು ಚುನಾವಣಾ ಪ್ರಚಾರದ ವೇಳೆ ಹೇಳುತ್ತಿದ್ದರು. ಆದರೆ ಅವರು ನಾಮಪತ್ರ ಸಲ್ಲಿಸಿದ ನಂತರ ಪರಿಸ್ಥಿತಿ ಬದಲಾಯಿತು. 

ಏಕೆಂದರೆ ರೇಖಾ ಪಾತ್ರಾ ವಿರುದ್ಧವೇ ಮಹಿಳೆಯ ಗೌರವಕ್ಕೆ ಧಕ್ಕೆ ತಂದ, ಮಹಿಳೆಯ ಗೌರವಕ್ಕೆ ಧಕ್ಕೆ ತರುವ ಉದ್ದೇಶದಿಂದ ಹಲ್ಲೆ ನಡೆಸಿದ ಆರೋಪಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ತನ್ನ ವಿರುದ್ಧ ಈ ಪ್ರಕರಣಗಳು ದಾಖಲಾಗಿವೆ ಎಂದು ರೇಖಾ ಅವರೇ ಚುನಾವಣಾ ಆಯೋಗಕ್ಕೆ ಪ್ರಮಾಣಪತ್ರ ಸಲ್ಲಿಸಿದ್ದಾರೆ. ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿದಕ್ಕೆ ಸಂಬಂಧಿಸಿದ ಎರಡು ಆರೋಪಗಳೂ ಸೇರಿ ಒಟ್ಟು 30 ಸೆಕ್ಷನ್‌ಗಳ ಅಡಿಯಲ್ಲಿ ಅವರ ವಿರುದ್ಧ ನಾಲ್ಕು ಪ್ರಕರಣಗಳು ದಾಖಲಾಗಿವೆ.

ಮಹಿಳೆಯರ ಗೌರವಕ್ಕೆ ಧಕ್ಕೆ ತಂದ ಹಾಗೂ ಅತ್ಯಾಚಾರ ಪ್ರಕರಣಗಳಿರುವ 16 ಅಭ್ಯರ್ಥಿಗಳನ್ನು ಬಿಜೆಪಿ ರಾಜ್ಯದಲ್ಲಿ ಕಣಕ್ಕಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT