ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ನವೋದ್ಯಮಗಳ ಸ್ಥಿತಿಗತಿ ಏನು, ಎತ್ತ...

Published 17 ಜನವರಿ 2024, 21:48 IST
Last Updated 17 ಜನವರಿ 2024, 21:48 IST
ಅಕ್ಷರ ಗಾತ್ರ

ನವೋದ್ಯಮಗಳ ಉತ್ತೇಜನಕ್ಕಾಗಿ ಕೇಂದ್ರ ಸರ್ಕಾರವು 2016ರಲ್ಲಿ ‘ನವೋದ್ಯಮ ಭಾರತ’ ಎಂಬ ಕಾರ್ಯಕ್ರಮವನ್ನು ಆರಂಭಿಸಿತ್ತು. ನವೋದ್ಯಮಗಳ ನೋಂದಣಿ ಮತ್ತು ಬಂಡವಾಳ ಹೂಡಿಕೆಯಲ್ಲಿ ನೆರವು ನೀಡುವ ಈ ಕಾರ್ಯಕ್ರಮವು ಸಾಂಖ್ಯಿಕ ದೃಷ್ಟಿಯಿಂದ ಭಾರಿ ಯಶಸ್ಸು ಗಳಿಸಿದೆ. ಈ ಕಾರ್ಯಕ್ರಮ ಆರಂಭವಾದ ಏಳು ವರ್ಷಗಳ ಅವಧಿಯಲ್ಲಿ ದೇಶದಾದ್ಯಂತ ಒಟ್ಟು 1.17 ಲಕ್ಷ ನವೋದ್ಯಮಗಳು ನೋಂದಣಿಯಾಗಿವೆ. ಇವುಗಳಲ್ಲಿ ಕೆಲವು ನವೋದ್ಯಮಗಳಿಗೆ ಕೇಂದ್ರ ಸರ್ಕಾರವು ಹೂಡಿಕೆ ನೆರವನ್ನೂ ನೀಡಿದೆ. ನವೋದ್ಯಮ ಆರಂಭಕ್ಕೆ ಪೂರಕವಾದ ಔದ್ಯಮಿಕ ವಾತಾವರಣ ರೂಪಿಸಿದ ಪರಿಣಾಮವಾಗಿ ಅವುಗಳ ಸಂಖ್ಯೆ ಹೆಚ್ಚಾಯಿತು. ಆದರೆ, ಅವುಗಳ ಕಾರ್ಯಾಚರಣೆಗೆ ಪೂರಕವಾದ ಸ್ಥಿತಿ ಇಲ್ಲದೇ ಇರುವುದು ನವೋದ್ಯಮಗಳಿಗೆ ತೊಡಕಾಯಿತು. ಹಿಂದಿನ ಎರಡು ವರ್ಷಗಳಲ್ಲಿ ನವೋದ್ಯಮಗಳು ಮಾಡಿದ ಉದ್ಯೋಗ ಕಡಿತದ ಪ್ರಮಾಣವೂ ಇದನ್ನೇ ಹೇಳುತ್ತವೆ.

ಕೇಂದ್ರ ಸರ್ಕಾರವು ಈಚೆಗಷ್ಟೇ ಬಿಡುಗಡೆ ಮಾಡಿದ ರಾಜ್ಯಗಳ ನವೋದ್ಯಮ ರ‍್ಯಾಂಕಿಂಗ್‌ ವರದಿಯು, ನವೋದ್ಯಮಗಳ ಸ್ಥಿತಿಗತಿಯ ಬಗ್ಗೆ ಬೆಳಕು ಚೆಲ್ಲುತ್ತದೆ. ನವೋದ್ಯಮಗಳ ಉತ್ತೇಜನಕ್ಕೆ ಪೂರಕವಾದ ವಾತಾವರಣ ಇರುವ ರಾಜ್ಯಗಳ ಪಟ್ಟಿಯಲ್ಲಿ ಗುಜರಾತ್ ಮೊದಲ ಸ್ಥಾನದಲ್ಲಿದೆ. ಆದರೆ ಅತಿಹೆಚ್ಚು ನವೋದ್ಯಮಗಳು ಇರುವ ಮಹಾರಾಷ್ಟ್ರಕ್ಕೆ ಅಂತಹ ಸ್ಥಾನ ದೊರೆತಿಲ್ಲ. ಮಹಾರಾಷ್ಟ್ರಕ್ಕಿಂತಲೂ ಗುಜರಾತ್‌ನಲ್ಲಿ ನವೋದ್ಯಮ ಪೂರಕವಾದ ವಾತಾವರಣ ಹೆಚ್ಚು ಎಂಬುದು ಈ ವರದಿಯ ವಿಶ್ಲೇಷಣೆ. ಈ ವರದಿಯಲ್ಲಿ ಸರ್ಕಾರವು ನವೋದ್ಯಮಗಳ ಸ್ಥಾಪನೆಗೆ ಸಂಬಂಧಿಸಿದ ವಿವರಗಳಿಗೆ ಒತ್ತು ನೀಡಿದೆಯೇ ಹೊರತು, ಅವುಗಳು ಸ್ಥಗಿತವಾದುದರ ಬಗ್ಗೆ ಮಾಹಿತಿ ಇಲ್ಲ. ಈಚೆಗಷ್ಟೇ ಬಿಡುಗಡೆ ಮಾಡಿದ ‘ನವೋದ್ಯಮ ಭಾರತದ ಏಳು ವರ್ಷಗಳು:2016–2023’ ಎಂಬ ವರದಿಯಲ್ಲೂ ಅಂತಹ ಮಾಹಿತಿ ಇಲ್ಲ. ಆದರೆ, ನವೋದ್ಯಮಗಳು ಸ್ಥಿತಿಗತಿಯ ಬಗ್ಗೆ ಮಾಧ್ಯಮಗಳು, ವಾಣಿಜ್ಯ ಪತ್ರಿಕೆಗಳು ಆಗ್ಗಿದಾಗ್ಗೆ ವರದಿ ಪ್ರಕಟಿಸುತ್ತಲೇ ಇವೆ.

‘2016ರಿಂದ 2023ರ ನವೆಂಬರ್‌ವರೆಗೆ ದೇಶದಾದ್ಯಂತ ನೋಂದಣಿಯಾದ ನವೋದ್ಯಮಗಳು ಒಟ್ಟು 12.56 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಿವೆ. ಪ್ರತಿ ನವೋದ್ಯಮವೂ ಸರಾಸರಿ 11 ಮಂದಿಗೆ ಉದ್ಯೋಗ ನೀಡಿದೆ ಎನ್ನುತ್ತದೆ’ ಕೇಂದ್ರ ಸರ್ಕಾರದ ದಾಖಲೆ. ಆದರೆ ಈ ಅವಧಿಯಲ್ಲಿ ಎಷ್ಟು ನವೋದ್ಯಮಗಳು ಸ್ಥಗಿತವಾಗಿವೆ, ನವೋದ್ಯಮಗಳಲ್ಲಿ ಆದ ಉದ್ಯೋಗ ನಷ್ಟವೆಷ್ಟು ಎಂಬ ಮಾಹಿತಿಯನ್ನು ಸರ್ಕಾರ ನಿರ್ವಹಣೆ ಮಾಡುತ್ತಿಲ್ಲ. ಆದರೆ ಜಾಗತಿಕ ಮಟ್ಟದ ಕೆಲವು ಅಧ್ಯಯನ ಸಂಸ್ಥೆಗಳು ಭಾರತದಲ್ಲಿನ ನವೋದ್ಯಮಗಳ ಬೆಳವಣಿಗೆ ಮೇಲೆ ನಿಗಾ ಇರಿಸಿವೆ. ಅಂತಹ ಹಲವು ಅಧ್ಯಯನ ವರದಿಗಳ ಪ್ರಕಾರ 2021ರಲ್ಲಿ 1,000ಕ್ಕೂ ಹೆಚ್ಚು ನವೋದ್ಯಮಗಳು ಬಾಗಿಲು ಮುಚ್ಚಿವೆ. 2022ರಲ್ಲಿ ಈ ಸಂಖ್ಯೆ 2,100ರ ಗಡಿ ದಾಟಿತ್ತು. 2023ರಲ್ಲಿ ಎಷ್ಟು ನವೋದ್ಯಮಗಳು ಸ್ಥಗಿತವಾಗಿವೆ ಎಂಬುದರ ಮಾಹಿತಿ ಲಭ್ಯವಿಲ್ಲ. ಆದರೆ 2023ರಲ್ಲಿ ಅತಿದೊಡ್ಡ 15 ನವೋದ್ಯಮಗಳು ಕಾರ್ಯಾಚರಣೆ ನಿಲ್ಲಿಸಿದ್ದವು.

2022ರಲ್ಲಿ ಭಾರತದ ನವೋದ್ಯಮ ಮಾರುಕಟ್ಟೆಗೆ ಅಂದಾಜು ₹1.66 ಲಕ್ಷ ಕೋಟಿ ಬಂಡವಾಳ ಹೂಡಿಕೆಯಾಗಿತ್ತು. ಆದರೆ ಮರುವರ್ಷ, 2023ರಲ್ಲಿ ಅದು ಅಂದಾಜು ₹58 ಸಾವಿರ ಕೋಟಿಗೆ ಇಳಿಕೆಯಾಗಿತ್ತು. ಒಂದೇ ವರ್ಷದಲ್ಲಿ ಬಂಡವಾಳ ಹೂಡಿಕೆಯು ಶೇ 65ರಷ್ಟು ಕುಸಿತ ಕಂಡಿತ್ತು. ನವೋದ್ಯಮಗಳು ನಿರೀಕ್ಷಿತಮಟ್ಟದಲ್ಲಿ ಕಾರ್ಯನಿರ್ವಹಿಸದೇ ಇರುವುದು ಮತ್ತು ಜಾಗತಿಕ ಆರ್ಥಿಕ ಬಿಕ್ಕಟ್ಟು ಇದಕ್ಕೆ ಕಾರಣ ಎಂದು ವಿಶ್ಲೇಷಿಸಲಾಗಿದೆ. 

ಭಾರತದ ಕೆಲವು ದೊಡ್ಡ ಮತ್ತು ಜನಪ್ರಿಯ ನವೋದ್ಯಮಗಳು 2023ರಲ್ಲಿ ದೊಡ್ಡಮಟ್ಟದ ಉದ್ಯೋಗ ಕಡಿತದಿಂದ ಸುದ್ದಿಯಲ್ಲಿದ್ದವು. ನವೋದ್ಯಮಗಳ ಆಗುಹೋಗುಗಳ ಬಗ್ಗೆ ಅಧ್ಯಯನ ನಡೆಸುವ ಸಂಸ್ಥೆ, ‘ಗ್ಲೋಬಲ್‌ಡಾಟಾ’ ವರದಿಯ ಪ್ರಕಾರ 2023ರ ಮೊದಲ 11 ತಿಂಗಳಲ್ಲಿ ಭಾರತದ ಪ್ರಮುಖ ನವೋದ್ಯಮಗಳು 15,000 ಜನರನ್ನು ಕೆಲಸದಿಂದ ತೆಗೆದುಹಾಕಿವೆ. 2022ರಲ್ಲಿ ಈ ಸಂಖ್ಯೆ 24,000ಕ್ಕಿಂತ ಹೆಚ್ಚು ಇತ್ತು. ವ್ಯವಹಾರ ನಷ್ಟ, ಕೃತಕಬುದ್ಧಿಮತೆ ಅಳವಡಿಕೆ, ಕಾರ್ಯಾಚರಣೆ ಸ್ಥಗಿತಗೊಳಿಸಿದ್ದೇ ಇದಕ್ಕೆ ಕಾರಣ. ಅತಿಹೆಚ್ಚು ಜನರನ್ನು (2,500) ಕೆಲಸದಿಂದ ತೆಗೆದುಹಾಕಿದ್ದು ಬೈಜೂ’ಸ್‌. ಆ ಹನ್ನೊಂದು ತಿಂಗಳಲ್ಲಿ 100ಕ್ಕೂ ಹೆಚ್ಚು ಜನರನ್ನು ಕೆಲಸದಿಂದ ತೆಗೆದುಹಾಕಿದ ನವೋದ್ಯಮಗಳ ಸಂಖ್ಯೆ 36. ಇವು ದೊಡ್ಡ ನವೋದ್ಯಮಗಳ ಲೆಕ್ಕ ಮಾತ್ರ. ಆದರೆ 100ಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ಉದ್ಯೋಗ ಕಡಿತ ಮಾಡಿದ ಸಂಸ್ಥೆಗಳ ಮಾಹಿತಿ ಇಲ್ಲ. ನವೋದ್ಯಮಗಳು ನಿರೀಕ್ಷಿತಮಟ್ಟದಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂಬುದನ್ನೇ ಇವು ಸೂಚಿಸುತ್ತವೆ.

ಅನ್ವೇಷಣೆಗೆ ಒತ್ತು ನೀಡುವ ನವೋದ್ಯಮಗಳ ಉತ್ತೇಜನಕ್ಕೆ ಕೇಂದ್ರ ಸರ್ಕಾರವು ನೀಡುವ ‘ಸೀಡ್‌ಫಂಡ್‌’ಗೆ ಸಂಬಂಧಿಸಿದ ದತ್ತಾಂಶ ಸಹ ಇದನ್ನೇ ಹೇಳುತ್ತದೆ. ಸೀಡ್‌ ಫಂಡ್‌ ಕಾರ್ಯಕ್ರಮದ ಅಡಿಯಲ್ಲಿ ಕೇಂದ್ರ ಸರ್ಕಾರವು ಆಯ್ದ ಪ್ರಮಾಣದ ನವೋದ್ಯಮಗಳಿಗೆ ಆರ್ಥಿಕ ನೆರವು ಒದಗಿಸುತ್ತದೆ. ಇದಕ್ಕಾಗಿ ನವೋದ್ಯಮಗಳು ಕೆಲವು ಷರತ್ತುಗಳನ್ನು ಪೂರೈಸಬೇಕಾಗುತ್ತದೆ. ಆದರೆ 2013ರಿಂದ 2023ರ ಮಧ್ಯೆ ಅಂತಹ ಷರತ್ತುಗಳನ್ನು ಪೂರೈಸಿ ಕೇಂದ್ರ ಸರ್ಕಾರದ ಹೂಡಿಕೆ ನೆರವನ್ನು ಪಡೆದುಕೊಂಡಿದ್ದು 790 ನವೋದ್ಯಮಗಳು ಮಾತ್ರ. ಈ ಅವಧಿಯಲ್ಲಿ ದೇಶದಾದ್ಯಂತ 1.17 ಲಕ್ಷ ನವೋದ್ಯಮಗಳು ನೋಂದಣಿಯಾಗಿದ್ದರೂ, ಕೇಂದ್ರ ಸರ್ಕಾರದ ಆರ್ಥಿಕ ನೆರವು ದೊರೆತದ್ದು ಶೇ 0.7ರಷ್ಟು ನವೋದ್ಯಮಗಳಿಗೆ ಮಾತ್ರ. ಇದಕ್ಕಾಗಿ ವಿಧಿಸಲಾಗಿರುವ ಷರತ್ತುಗಳು ಸರಳವಾಗಿಲ್ಲ ಮತ್ತು ನೋಂದಣಿಯಾದ ನವೋದ್ಯಮಗಳೆಲ್ಲವೂ ನಿರೀಕ್ಷಿತ ಮಟ್ಟದ ಗುರಿಯನ್ನು ಹಾಕಿಕೊಂಡಿಲ್ಲ ಎಂಬುದನ್ನು ಇದು ಸೂಚಿಸುತ್ತದೆ. ಒಟ್ಟಾರೆ ನವೋದ್ಯಮಗಳ ನೋಂದಣಿಗೆ ಒತ್ತು ದೊರೆಯುತ್ತಿದೆಯೇ ಹೊರತು, ಅವುಗಳ ಮುಂದುವರಿಕೆಯು ಹಿನ್ನೆಲೆಗೆ ಸರಿದಿದೆ ಎಂಬುದು ಗ್ಲೋಬಲ್‌ಡಾಟಾದ ವಿಶ್ಲೇಷಣೆ.

ಆಧಾರ: ನವೋದ್ಯಮ ಭಾರತ ಪೋರ್ಟಲ್‌, ನವೋದ್ಯಮ ಭಾರತ ರ‍್ಯಾಂಕಿಂಗ್‌ ವರದಿ, ಪಿಟಿಐ, ಗ್ಲೋಬಲ್‌ಡಾಟಾ

ಕರ್ನಾಟಕದಲ್ಲಿ ನವೋದ್ಯಮ ಪ್ರಗತಿಗೆ ನೀತಿ ನಿರೂಪಣೆಯೇ ಕಾರಣ

ನವೋದ್ಯಮಗಳ ಬೆಳವಣಿಗೆಗೆ ಪೂರಕವಾದ ವಾತಾವರಣವನ್ನು ಒದಗಿಸುವಲ್ಲಿ ಕರ್ನಾಟಕವು ಉತ್ತಮ ಪ್ರಗತಿ ಸಾಧಿಸಿದೆ. ನವೋದ್ಯಮಗಳು ಸೃಷ್ಟಿಸುತ್ತಿರುವ ಉದ್ಯೋಗಗಳ ಸಂಖ್ಯೆಯಲ್ಲಿ ರಾಜ್ಯವು ವಾರ್ಷಿಕ ಶೇ 560ರಷ್ಟು ಪ್ರಗತಿ ಕಂಡಿದೆ. ಇಲ್ಲಿನ ಸರ್ಕಾರದ ನೀತಿಗಳೇ ಇದಕ್ಕೆ ಕಾರಣ ಎಂದು ‘ನವೋದ್ಯಮ ರ‍್ಯಾಂಕಿಂಗ್‌’ ವರದಿಯಲ್ಲಿ ವಿವರಿಸಲಾಗಿದೆ. 2016ರಲ್ಲಿ ನವೋದ್ಯಮ ಭಾರತ ಕಾರ್ಯಕ್ರಮ ಆರಂಭವಾದಾಗಿನಿಂದ ಕರ್ನಾಟಕದಲ್ಲಿ ಹಲವು ಸರ್ಕಾರಗಳು ಬದಲಾಗಿವೆ. ಆದರೆ ಈ ಅವಧಿಯಲ್ಲಿನ ಎಲ್ಲಾ ಸರ್ಕಾರಗಳು ನವೋದ್ಯಮಗಳ ಬೆಳವಣಿಗೆಗೆ ಸಹಕರಿಸಿವೆ. ಅಂತಹ ಸಹಕಾರದ ಕೆಲವು ಅಂಶಗಳು ಇಂತಿವೆ

1.  ಪ್ರತ್ಯೇಕ ನಿಧಿ: ಆರಂಭಿಕ ಹಂತದ ನವೋದ್ಯಮಗಳಿಗೆ ಆರ್ಥಿಕ ನೆರವು ನೀಡಲು ಪ್ರತ್ಯೇಕ ನಿಧಿಯನ್ನು ಸ್ಥಾಪಿಸಲಾಗಿದೆ. ಜತೆಗೆ ತೆರಿಗೆ ವಿನಾಯಿತಿಯಂತಹ ಕೊಡುಗೆಗಳು ಇವೆ

2. ಸರಳ ನಿಯಮಗಳು: ನವೋದ್ಯಮಗಳ ನೋಂದಣಿ ಮತ್ತು ಪರವಾನಗಿ ನೀಡಲು ಪ್ರತ್ಯೇಕ ಘಟಕವನ್ನು ಸ್ಥಾಪಿಸಲಾಗಿದೆ. ಹೀಗಾಗಿ ಈ ಪ್ರಕ್ರಿಯೆಗಳು ಅತ್ಯಂತ ತ್ವರಿತವಾಗಿ ಆಗುತ್ತವೆ

3. ಕೌಶಲ ಅಭಿವೃದ್ಧಿ: ನವೋದ್ಯಮಗಳಿಗೆ ಅಗತ್ಯವಾದಂತಹ ಕೌಶಲ ಹೊಂದಿರುವ ಅಭ್ಯರ್ಥಿಗಳನ್ನು ರೂಪಿಸುವ ನಿಟ್ಟಿನಲ್ಲಿ ನವೋದ್ಯಮ ಪಠ್ಯಕ್ರಮ, ಕೋರ್ಸ್‌ಗಳು ಲಭ್ಯವಿವೆ. ನವೋದ್ಯಮಗಳ ಕಾರ್ಯನಿರ್ವಹಣೆಗೆ ಅಗತ್ಯವಾದಂತಹ ಕೌಶಲಭರಿತ ಮಾನವ ಸಂಪನ್ಮೂಲ ಲಭ್ಯವಿದೆ

4. ಕ್ಷೇತ್ರವಾರು ನಾವೀನ್ಯತಾ ಕೇಂದ್ರಗಳು: ಕ್ಷೇತ್ರವಾರು ನವೋದ್ಯಮಗಳ ಸ್ಥಾಪನೆ ಮತ್ತು ಕಾರ್ಯನಿರ್ವಹಣೆಗೆ ನೆರವಾಗುವಂತೆ ಕ್ಷೇತ್ರವಾರು ನಾವೀನ್ಯತಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ

5. ಮಾರುಕಟ್ಟೆ: ನವೋದ್ಯಮಗಳು ಸೇವೆ ಅಥವಾ ಸರಕು ಒದಗಿಸಲು ಉತ್ತಮ ಮಾರುಕಟ್ಟೆಯಿದೆ. ಸರ್ಕಾರವೂ ನವೋದ್ಯಮಗಳ ಸೇವೆ ಪಡೆದುಕೊಳ್ಳಲು ಅವಕಾಶವಿರುವ ಕಾರಣ, ಅವುಗಳ ಕಾರ್ಯನಿರ್ವಹಣೆಗೆ ನೆರವಾಗಿದೆ

6. ಜಾಗತಿಕ ವೇದಿಕೆ: ಜಾಗತಿಕ ಮಟ್ಟದ ಹೂಡಿಕೆದಾರರು, ಮಾರುಕಟ್ಟೆ ತಜ್ಞರು, ಸ್ಥಳೀಯ ನವೋದ್ಯಮಗಳು ಒಂದೇ ವೇದಿಕೆಯಲ್ಲಿ ಬರುವಂತಹ ಸಮ್ಮೇಳನಗಳು ಮತ್ತು ಹೂಡಿಕೆ ಸಮಾವೇಶಗಳನ್ನು
ಕರ್ನಾಟಕ ಸರ್ಕಾರ ಅಗ್ಗಿಂದಾಗ್ಗೆ
ಆಯೋಜಿಸಿದೆ. ಇದು ಹೂಡಿಕೆ
ಏರಿಕೆಗೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT