ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಲನೆಯಾಗದ ಭ್ರೂಣಲಿಂಗ ಪತ್ತೆ ಪರೀಕ್ಷೆ ತಡೆ ಕಾಯ್ದೆ: 27 ವರ್ಷದಲ್ಲಿ 89 ಪ್ರಕರಣ

Published 29 ನವೆಂಬರ್ 2023, 22:26 IST
Last Updated 29 ನವೆಂಬರ್ 2023, 22:26 IST
ಅಕ್ಷರ ಗಾತ್ರ

ಬೆಂಗಳೂರು: ಭ್ರೂಣಲಿಂಗ ಪತ್ತೆ ಪರೀಕ್ಷೆಯನ್ನು ನಿಷೇಧಿಸುವ ಕಾಯ್ದೆಯು ಜಾರಿಗೆ ಬಂದು 29 ವರ್ಷಗಳಾಗಿವೆ. 1994ರಿಂದ 2021ರ ನಡುವಣ 27 ವರ್ಷದಲ್ಲಿ ರಾಜ್ಯದಲ್ಲಿ ಈ ಕಾಯ್ದೆ ಅಡಿ ದಾಖಲಾದ ಪ್ರಕರಣಗಳ ಸಂಖ್ಯೆ 89 ಮಾತ್ರ. ಆದರೆ, ಭ್ರೂಣಲಿಂಗ ಪತ್ತೆ ಪರೀಕ್ಷೆ ಮತ್ತು ಹೆಣ್ಣು ಭ್ರೂಣಗಳ ಹತ್ಯೆ ರಾಜ್ಯದಲ್ಲಿ ಅವ್ಯಾಹತವಾಗಿ ನಡೆಯುತ್ತಲೇ ಇದೆ ಎಂಬುದನ್ನು ಮಂಡ್ಯದ ಆಲೆಮನೆಯಲ್ಲಿನ ಭ್ರೂಣಲಿಂಗ ಪತ್ತೆ ಪರೀಕ್ಷೆ ಪ್ರಕರಣವು ಬಹಿರಂಗಪಡಿಸಿದೆ.

ಭ್ರೂಣಲಿಂಗ ಪತ್ತೆ ಪರೀಕ್ಷೆ ಮಾಡಿಸಲು ಬಯಸುವವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಭ್ರೂಣಲಿಂಗ ಪತ್ತೆ ಕಾಯ್ದೆ ಹೇಳುತ್ತದೆ. ಹಾಗೆಯೇ ಪರೀಕ್ಷೆ ನಡೆಸುವ ವೈದ್ಯರು ಮತ್ತು ತಂತ್ರಜ್ಞರ ವಿರುದ್ಧವೂ ಪ್ರಕರಣ ದಾಖಲಿಸಬೇಕು, ಅಂತಹ ಪರೀಕ್ಷೆ ಮತ್ತು ಭ್ರೂಣ ಹತ್ಯೆ ನಡೆಸುವ ಪ್ರಯೋಗಾಲಯ/ಆಸ್ಪತ್ರೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಕಾಯ್ದೆ ಹೇಳುತ್ತದೆ. ಆದರೆ ರಾಜ್ಯದಲ್ಲಿ ಇಂತಹ ಪ್ರಕರಣಗಳೇ ದಾಖಲಾಗುತ್ತಿಲ್ಲ ಎಂಬುದನ್ನು ಕೇಂದ್ರ ಸರ್ಕಾರದ ವರದಿಗಳು ಹೇಳುತ್ತವೆ.

ದೇಶದಲ್ಲಿ ಲಿಂಗಾನುಪಾತದ ಸ್ಥಿತಿಗತಿ ಮತ್ತು ‘ಬೇಟಿ ಬಚಾವೊ, ಬೇಟಿ ಪಡಾವೊ’ ಅಭಿಯಾನದ ಪರಿಣಾಮದ ಬಗ್ಗೆ ಮಹಿಳಾ ಸಬಲೀಕರಣ ಸಂಸದೀಯ ಸಮಿತಿಯು ಅಧ್ಯಯನ ನಡೆಸಿತ್ತು.

ಈ ಸಂಬಂಧ ಒಟ್ಟು ಆರು ವರದಿಗಳನ್ನು ಸಮಿತಿಯು ಸಂಸತ್ತಿಗೆ ಸಲ್ಲಿಸಿದೆ. 2022ರ ಆಗಸ್ಟ್‌ನಲ್ಲಿ ಸಂಸತ್ತಿಗೆ ಸಲ್ಲಿಸಿದ್ದ ಆರನೇ ವರದಿಯಲ್ಲಿ, ‘27 ವರ್ಷಗಳಲ್ಲಿ ಕರ್ನಾಟಕದಲ್ಲಿ ಈ ಕಾಯ್ದೆ ಅಡಿ ದಾಖಲಾಗಿದ್ದು 89 ಪ್ರಕರಣಗಳು ಮಾತ್ರ’ ಎಂದು ಉಲ್ಲೇಖಿಸಿದೆ.

ಜತೆಗೆ 2017–18ರಲ್ಲಿ ಈ ಕಾಯ್ದೆ ಅಡಿ ಕರ್ನಾಟಕದಲ್ಲಿ ಒಂದೂ ಪ್ರಕರಣ ದಾಖಲಾಗಿಲ್ಲ. 2018–19ರಲ್ಲಿ 1, 2019–20ರಲ್ಲಿ 3 ಮತ್ತು 2020–21ರಲ್ಲಿ 1 ಪ್ರಕರಣವನ್ನಷ್ಟೇ ದಾಖಲಿಸಲಾಗಿದೆ. ಕರ್ನಾಟಕವೂ ಸೇರಿ ದೇಶದ ಹಲವು ರಾಜ್ಯಗಳಲ್ಲಿ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಪಾಲಿಸದೇ ಇರುವ ಕಾರಣ, ಕಾಯ್ದೆಯ ಉದ್ದೇಶವೇ ನನೆಗುದಿಗೆ ಬಿದ್ದಂತಾಗಿದೆ ಎಂದು ಸಮಿತಿಯು ತನ್ನ ವರದಿಯಲ್ಲಿ ಕಳವಳ ವ್ಯಕ್ತಪಡಿಸಿದೆ.

ಕರ್ನಾಟಕದಲ್ಲಿ ಈ ಕಾಯ್ದೆ ಅಡಿ ದಾಖಲಾದ ಪ್ರಕರಣಗಳಲ್ಲಿ ತನಿಖೆ ಮತ್ತು ಶಿಕ್ಷೆ ತ್ವರಿತವಾಗಿ ಆಗುತ್ತಿಲ್ಲ ಎಂಬುದರತ್ತಲೂ ವರದಿಯ ದತ್ತಾಂಶಗಳು ಬೊಟ್ಟು ಮಾಡುತ್ತವೆ. 1994ರಿಂದ 2016ರ ಮಾರ್ಚ್‌ವರೆಗೆ ರಾಜ್ಯದಲ್ಲಿ ಈ ಕಾಯ್ದೆ ಅಡಿ 45 ಪ್ರಕರಣಗಳಷ್ಟೇ ದಾಖಲಾಗಿದ್ದವು ಮತ್ತು ಅವುಗಳಲ್ಲಿ ಒಂದರಲ್ಲೂ ಶಿಕ್ಷೆಯಾಗಿರಲಿಲ್ಲ. ನಂತರದ ವರ್ಷಗಳಲ್ಲಿ ಕೆಲವು ಪ್ರಕರಣಗಳಲ್ಲಷ್ಟೇ ಶಿಕ್ಷೆಯಾಗಿದೆ. 1994ರಿಂದ 2021ರ ಡಿಸೆಂಬರ್ ಅಂತ್ಯದವರೆಗೆ ರಾಜ್ಯದಲ್ಲಿ ಈ ಕಾಯ್ದೆ ಅಡಿ ದಾಖಲಾದ ಒಟ್ಟು ಪ್ರಕರಣಗಳಲ್ಲಿ ಶಿಕ್ಷೆಯಾಗಿದ್ದು 38ರಲ್ಲಿ ಮಾತ್ರ.

ಅನ್ಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ: ಭ್ರೂಣಲಿಂಗ ಪತ್ತೆ ತಡೆ ಕಾಯ್ದೆಯ ಅಡಿ ಪ್ರಕರಣ ದಾಖಲಿಸಿದರೆ, ಅಂತಹ ಪರೀಕ್ಷೆ ನಡೆಸಿದ ಪ್ರಯೋಗಾಲಯ ಅಥವಾ ಆಸ್ಪತ್ರೆ ವಿರುದ್ಧವೂ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್‌ 315 ಮತ್ತು 316ರ ಅಡಿಯಲ್ಲಿ ಪ್ರಕರಣ ದಾಖಲಿಸಿದರೆ ದಂಪತಿ/ಪತಿ/ಗರ್ಭಿಣಿಯ ಪಾಲಕರು, ವೈದ್ಯ ಮತ್ತು ತಂತ್ರಜ್ಞರಿಗಷ್ಟೇ ಶಿಕ್ಷೆಯಾಗುತ್ತದೆ. ಆಸ್ಪತ್ರೆ ಅಥವಾ ಪ್ರಯೋಗಾಲಯದ ವಿರುದ್ಧ ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ. ಆದರೆ, ರಾಜ್ಯದಲ್ಲಿ ಭ್ರೂಣ ಹತ್ಯೆಗೆ ಸಂಬಂಧಿಸಿದಂತೆ ಐಪಿಸಿ 315 ಮತ್ತು 316ನೇ ಸೆಕ್ಷನ್‌ಗಳ ಅಡಿಯಲ್ಲೇ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ.

ಮಂಡ್ಯ ಸಮೀಪದ ಆಲೆಮನೆಯಲ್ಲಿ ಭ್ರೂಣಲಿಂಗ ಪತ್ತೆ ಪರೀಕ್ಷೆ ಮತ್ತು ಹೆಣ್ಣುಭ್ರೂಣ ಹತ್ಯೆ ನಡೆಸುತ್ತಿದ್ದ ತಂಡವೊಂದೇ ಹಿಂದಿನ ಮೂರು ವರ್ಷಗಳಲ್ಲಿ ಇಂತಹ 900ಕ್ಕೂ ಹೆಚ್ಚು ಕೃತ್ಯಗಳನ್ನು ಎಸಗಿದೆ ಎಂಬುದನ್ನು ಪೊಲೀಸರು ದೃಢಪಡಿಸಿದ್ದಾರೆ. ಆದರೆ, ಇಂತಹ ಎಲ್ಲಾ ಕೃತ್ಯಗಳು ಐಪಿಸಿ ಸೆಕ್ಷನ್‌ ಅಡಿಯಲ್ಲೂ ದಾಖಲಾಗುತ್ತಿಲ್ಲ ಎಂಬುದನ್ನು ಸರ್ಕಾರಿ ದಾಖಲೆಗಳು ಹೇಳುತ್ತವೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊವಿನ ವರದಿಯ ಪ್ರಕಾರ 2021ರಲ್ಲಿ ಕರ್ನಾಟಕದಲ್ಲಿ ಐಪಿಸಿ 315 ಮತ್ತು 316ನೇ ಸೆಕ್ಷನ್‌ಗಳ ಅಡಿಯಲ್ಲಿ ದಾಖಲಾಗಿದ್ದು 118 ಪ್ರಕರಣಗಳು ಮಾತ್ರ. ಇವುಗಳಲ್ಲೂ ಎಷ್ಟು ಪ್ರಕರಣಗಳು ಇತ್ಯರ್ಥವಾಗಿವೆ ಮತ್ತು ಎಷ್ಟರಲ್ಲಿ ಶಿಕ್ಷೆಯಾಗಿವೆ ಎಂಬುದರ ಮಾಹಿತಿ ಇಲ್ಲ. 

‘ಸಹಾಯವಾಣಿಯೇ ಇಲ್ಲ’

ಭ್ರೂಣಲಿಂಗ ಪತ್ತೆ ಪರೀಕ್ಷೆ ತಡೆಗೆ ಘಟಕಗಳನ್ನು ತೆರೆಯಬೇಕು. ರಾಜ್ಯಮಟ್ಟದಲ್ಲಿ ಇದಕ್ಕೆ ಒಂದು ಉಚಿತ ಸಹಾಯವಾಣಿಯನ್ನು ರಚಿಸಬೇಕು. ಆದರೆ ಕರ್ನಾಟಕದಲ್ಲಿ ಉಚಿತ ಸಹಾಯವಾಣಿಯೇ ಇಲ್ಲ ಎಂದು ಸಂಸದೀಯ ಸಮಿತಿಯು ತನ್ನ ವರದಿಯಲ್ಲಿ ಹೇಳಿದೆ.

ರಾಜ್ಯದಲ್ಲಿ ಇಂತಹ ಘಟಕವನ್ನು ರಚಿಸಲಾಗಿದೆ. ಭ್ರೂಣಲಿಂಗ ಪತ್ತೆ ಪರೀಕ್ಷೆ ವಿರುದ್ಧ ದೂರು ನೀಡಲು ಆನ್‌ಲೈನ್‌ ಪೋರ್ಟಲ್‌ ರಚಿಸಲಾಗಿದೆ. ಈ ಪೋರ್ಟಲ್‌ನಲ್ಲಿ ದೂರು ದಾಖಲಿಸುವ ಮುನ್ನ ನೋಂದಣಿ ಮಾಡಿಕೊಳ್ಳಬೇಕು. ಇನ್ನು ಪೋರ್ಟಲ್‌ನಲ್ಲಿ ಸಂಪರ್ಕಕ್ಕೆ ಎಂದು ಒಂದು ಸ್ಥಿರ ದೂರವಾಣಿ ಸಂಖ್ಯೆಯನ್ನು ನೀಡಲಾಗಿದೆ. ಅದಕ್ಕೆ ಕರೆ ಮಾಡಿದರೆ, ‘ಈ ಸಂಖ್ಯೆ ಚಾಲ್ತಿಯಲ್ಲಿಲ್ಲ’ ಎಂದು ಬರುತ್ತದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವಾ ನಿರ್ದೇಶನಾಲಯದ ಅಡಿಯಲ್ಲಿ ಭ್ರೂಣಲಿಂಗ ಪತ್ತೆ ತಡೆ ಸೇವೆಗಾಗಿ ಉಪನಿರ್ದೇಶಕರೊಬ್ಬರನ್ನು ನೇಮಕ ಮಾಡಲಾಗಿದ್ದು, ನಿರ್ದೇಶನಾಲಯದ ಜಾಲತಾಣದಲ್ಲಿ ಅಧಿಕಾರಿಯ ಮೊಬೈಲ್‌ ಸಂಖ್ಯೆಯನ್ನೂ ನೀಡಲಾಗಿದೆ. ಸಂಸದೀಯ ಸಮಿತಿಯು ತನ್ನ ವರದಿಯಲ್ಲಿ, ಕರ್ನಾಟಕದಲ್ಲಿ ಭ್ರೂಣಲಿಂಗ ಪತ್ತೆ ಪರೀಕ್ಷೆ ವಿರುದ್ಧ ದೂರು ನೀಡಲು ಸಹಾಯವಾಣಿ ಇಲ್ಲ ಎಂದು ಹೇಳಿರುವ ಬಗ್ಗೆ ಪ್ರತಿಕ್ರಿಯೆ ಪಡೆಯಲು ಉಪ ನಿರ್ದೇಶಕರ ಸಂಖ್ಯೆಗೆ ಕರೆ ಮಾಡಲಾಗಿತ್ತು. ಆ ಸಂಖ್ಯೆಗೆ ಕರೆ ಹೋಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT