ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬ್ಬಿನಗದ್ದೆ ನಡುವೆ ಇರುವ ಆಲೆಮನೆಯಲ್ಲಿ ಭ್ರೂಣಲಿಂಗ ಪತ್ತೆ

ವಾರಾಂತ್ಯದಲ್ಲಿ ಸ್ಕ್ಯಾನಿಂಗ್‌
Published 27 ನವೆಂಬರ್ 2023, 20:14 IST
Last Updated 27 ನವೆಂಬರ್ 2023, 20:14 IST
ಅಕ್ಷರ ಗಾತ್ರ

ಮಂಡ್ಯ: ತಾಲ್ಲೂಕಿನ ಹಾಡ್ಯ ಗ್ರಾಮದ ಸಮೀಪ ಕಬ್ಬಿನಗದ್ದೆಯ ನಡುವಿನ ಆಲೆಮನೆಯಲ್ಲಿ ಭ್ರೂಣಲಿಂಗ ಪತ್ತೆ ಕಾರ್ಯ ನಡೆಯುತ್ತಿತ್ತು ಎಂಬ ಸಂಗತಿ ಗ್ರಾಮಸ್ಥರಲ್ಲಿ ತೀವ್ರ ಆಘಾತವನ್ನು ಉಂಟು ಮಾಡಿದೆ.

ಹಾಡ್ಯ ಹಾಗೂ ಹುಳ್ಳೇನಹಳ್ಳಿ ನಡುವೆ ಇರುವ ಆಲೆಮನೆಯಲ್ಲಿ ಶನಿವಾರ–ಭಾನುವಾರ ಭ್ರೂಣಲಿಂಗ ಪತ್ತೆ ಪರೀಕ್ಷೆ ನಡೆಯುತ್ತಿತ್ತು‌. ಹೆಣ್ಣುಭ್ರೂಣ ಪತ್ತೆಯಾದರೆ ವಾರದ ಇತರ ದಿನಗಳಲ್ಲಿ ಮೈಸೂರು‌ ಅಥವಾ ಬೆಂಗಳೂರಿನ ಆಸ್ಪತ್ರೆಗಳಲ್ಲಿ ಭ್ರೂಣಹತ್ಯೆ ಮಾಡಲಾಗುತ್ತಿತ್ತು ಎಂಬ ವಿಚಾರ ಪೊಲೀಸ್ ತನಿಖೆಯಿಂದ ಗೊತ್ತಾಗಿದೆ.

ಬೆಂಗಳೂರಿನ ಬೈಯ‍ಪ್ಪನಹಳ್ಳಿ ಠಾಣೆ ಪೊಲೀಸರು ಸ್ಥಳೀಯ ಪೊಲೀಸರ ಸಹಾಯದೊಂದಿಗೆ ತನಿಖೆ ನಡೆಸುತ್ತಿದ್ದು, ಈವರೆಗೆ 9 ಮಂದಿಯನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಬಂಧಿತನಾಗಿರುವ ಪ್ರಮುಖ‌ ಆರೋಪಿ, ಆಲೆಮನೆ ಮಾಲೀಕನ ಸಂಬಂಧಿ ನವೀನ್ ಕುಮಾರ್ ಆಲೆಮನೆಯಲ್ಲಿ ನಡೆಯುತ್ತಿದ್ದ ಪರೀಕ್ಷೆ ವಿಚಾರ ಬಾಯಿ ಬಿಟ್ಟಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಸ್ಕ್ಯಾನಿಂಗ್‌ ಯಂತ್ರ ಜಪ್ತಿ ಮಾಡಿದ್ದಾರೆ.

ಮಂಡ್ಯ ತಾಲ್ಲೂಕು ವ್ಯಾಪ್ತಿಯ ಈ ಹಳ್ಳಿಗಳು ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿದ್ದು, ಸ್ಥಳೀಯರು ಪ್ರಕರಣದ ಬಗ್ಗೆ ಮಾತನಾಡಲು ಹಿಂಜರಿಯುತ್ತಾರೆ.

‘ಪ್ರಜಾವಾಣಿ’ ಸೋಮವಾರ ಗ್ರಾಮಕ್ಕೆ ಭೇಟಿ ನೀಡಿದಾಗ ಗ್ರಾಮಸ್ಥರು ಪ್ರಕರಣ ಕುರಿತು ಮಾತನಾಡಲು ನಿರಾಕರಿಸಿದರು. ಆಲೆಮನೆಯಲ್ಲಿದ್ದ ನಾಲ್ವರು ಯುವಕರು ಮಾತಿಗೂ ಸಿಗದೆ ತೆರಳಿದರು. 

‘ಪ್ರಕರಣವು ಮಂಡ್ಯ ಹಾಗೂ ಐತಿಹಾಸಿಕ ಮೇಲುಕೋಟೆ ಕ್ಷೇತ್ರಕ್ಕೂ ಕೆಟ್ಟ ಹೆಸರು ತಂದಿದೆ. ನಮ್ಮ ಹಳ್ಳಿಗಳಲ್ಲಿ ವಿದ್ಯಾವಂತರಿದ್ದಾರೆ, ಕಲಾವಿದರಿದ್ದಾರೆ. ಕೆಲವರು ಮಾಡಿದ ಅನಿಷ್ಠ ಕೆಲಸಕ್ಕೆ ನಾವೆಲ್ಲಾ ತಲೆತಗ್ಗಿಸುವಂತಾಗಿದೆ. ಆಲೆಮನೆಯಲ್ಲಿ ನಡೆಯುತ್ತಿರುವ ಪರೀಕ್ಷೆ ಗ್ರಾಮಸ್ಥರಿಗೆ ಗೊತ್ತಿರಲಿಲ್ಲ, ಪೊಲೀಸರು ಬಂದಾಗಲೇ ತಿಳಿಯಿತು’ ಎಂದು ಮಂಡ್ಯದಲ್ಲಿ ನೆಲೆಸಿರುವ, ಹಾಡ್ಯ ಗ್ರಾಮದ ಉಪನ್ಯಾಸಕರೊಬ್ಬರು ಬೇಸರ ವ್ಯಕ್ತಪಡಿಸಿದರು.

ಮುಖ್ಯರಸ್ತೆಯಿಂದ ದೂರದಲ್ಲಿರುವ ಆಲೆಮನೆಯು ಸಾಕಷ್ಟು ಅನುಮಾನ ಹುಟ್ಟಿಸುತ್ತದೆ. ಎತ್ತಿನಗಾಡಿ, ಕಾರು ಚಲಿಸಬಹುದಾದ ಕಚ್ಚಾ ರಸ್ತೆಯಲ್ಲಿ ಜನ ಓಡಾಡುವುದು ಕಡಿಮೆ. ಅದೇ ರಸ್ತೆಯ ಅಂತ್ಯ. ಆಲೆಮನೆಯಲ್ಲಿ ನಾಲ್ಕು ಪ್ರತ್ಯೇಕ ಕೊಠಡಿ ಇರುವುದೇ ದೊಡ್ಡ ಅನುಮಾನ. ಇಡೀ ಆವರಣದ ನೆಲ ಮಣ್ಣಿನಿಂದ ಕೂಡಿದೆ. ಆದರೆ ಆ ಕೊಠಡಿಗೆ ಮಾತ್ರ ಸಿಮೆಂಟ್‌ ಹಾಕಲಾಗಿದೆ. ಕಚೇರಿಯಂತಿರುವ ಅಲ್ಲಿ ಯುಪಿಎಸ್, ಕೇರಂ‌ ಬೋರ್ಡ್, ಟಿ.ವಿ ಕಂಡುಬಂದವು.

ಭ್ರೂಣ ಲಿಂಗ ಪತ್ತೆ ಪರೀಕ್ಷೆ ಮತ್ತು ಹೆಣ್ಣುಭ್ರೂಣ ಹತ್ಯೆ ಬಗ್ಗೆ ಹಿಂದೆಯೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದೆವು. ಆದರೆ ಪ್ರಕರಣ ಪತ್ತೆ ಹಚ್ಚಲು ವಿಫಲರಾಗಿದ್ದರು.
–ಡಿ.ಪೂರ್ಣಿಮಾ, ಜಿಲ್ಲಾ ಘಟಕದ ಸಂಚಾಲಕಿ, ಅತ್ಯಾಚಾರ ವಿರೋಧಿ ಆಂದೋಲನ ಸಮಿತಿ

ಮಂಡ್ಯದಲ್ಲೇ ಹೆಚ್ಚು ಪರೀಕ್ಷೆ: ‘ರಾಜ್ಯದ ಹಲವು ನಗರಗಳಲ್ಲಿ ಹೆಣ್ಣುಭ್ರೂಣ ಹತ್ಯೆ ಪ್ರಕರಣಗಳು ಕಂಡುಬಂದಿದ್ದರೂ ಮಂಡ್ಯ ಜಿಲ್ಲೆಯಲ್ಲಿ ಹೆಚ್ಚು ಗರ್ಭಿಣಿಯರು ಭ್ರೂಣಲಿಂಗ ಪತ್ತೆ ಪರೀಕ್ಷೆಗೆ ಒಳಗಾಗುತ್ತಿದ್ದರು. ಆ ಕಾರಣಕ್ಕಾಗಿಯೇ ಆರೋಪಿಗಳು ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿ ಪ್ರತ್ಯೇಕ ಪರೀಕ್ಷೆ ಕೇಂದ್ರ ಸ್ಥಾಪಿಸಿದ್ದರು’ ಎಂದು ಪೊಲೀಸರು ಹೇಳುತ್ತಾರೆ.

‘‌ಇಡೀ ರಾಜ್ಯದಲ್ಲೇ ಹೆಚ್ಚು ಭ್ರೂಣ ಲಿಂಗ ಪತ್ತೆ ಪರೀಕ್ಷೆ ಮತ್ತು ಹೆಣ್ಣುಭ್ರೂಣ ಹತ್ಯೆ ಪ್ರಕರಣಗಳು ಜಿಲ್ಲೆಯಲ್ಲಿ ನಡೆಯುತ್ತಿವೆ. ಬೆಂಗಳೂರು ಪೊಲೀಸರ ಪ್ರಯತ್ನದಿಂದ ಪ್ರಕರಣ ಬಹಿರಂಗಗೊಂಡಿದೆ. ಈಗಲಾದರೂ ಆರೋಪಿಗಳನ್ನು ಪತ್ತೆ ಹಚ್ಚಿ, ಕಠಿಣ ಶಿಕ್ಷೆ ವಿಧಿಸಬೇಕು, ಜಿಲ್ಲೆಗೆ ಅಂಟಿರುವ ಕೊಳೆಯನ್ನು ತೊಳೆಯಬೇಕು’ ಎಂದು ಅತ್ಯಾಚಾರ ವಿರೋಧಿ ಆಂದೋಲನ ಸಮಿತಿಯ ಜಿಲ್ಲಾ ಘಟಕದ ಸಂಚಾಲಕಿ ಡಿ.ಪೂರ್ಣಿಮಾ ಆಗ್ರಹಿಸಿದರು.

ತಾಲ್ಲೂಕು ಮಟ್ಟದಲ್ಲಿ ಸಮಿತಿ: ಡಿ.ಸಿ

‘ಮಂಡ್ಯ ಜಿಲ್ಲೆಯಲ್ಲಿ ಈಚೆಗೆ ಮೂರು ಹೆಣ್ಣುಭ್ರೂಣ ಹತ್ಯೆ ಪ್ರಕರಣಗಳು ಪತ್ತೆಯಾಗಿದ್ದು ಆರೋಪಿಗಳ ಮೇಲೆ ಎಫ್‌ಐಆರ್‌ ದಾಖಲಿಸಲಾಗಿದೆ. ಪ್ರಕರಣಗಳ ಪತ್ತೆಗೆ ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರ್‌, ತಾಲ್ಲೂಕು ಆರೋಗ್ಯಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಕುಮಾರ ಹೇಳಿದರು.

‘ಗ್ರಾಮೀಣ ಮಟ್ಟದಲ್ಲಿ ಭ್ರೂಣ ಲಿಂಗ ಪತ್ತೆ ಪರೀಕ್ಷೆ ನಡೆಯುತ್ತಿದ್ದರೆ, ಅದನ್ನು ಪತ್ತೆ ಹಚ್ಚಲು ಗ್ರಾಮ ಲೆಕ್ಕಾಧಿಕಾರಿ, ಪಿಡಿಒ, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಸ್ಥಳೀಯ ಶಿಕ್ಷಕರು ನಿಗಾ ವಹಿಸುವಂತೆ ಸೂಚಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT