ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ಹೆಣ್ಣು ಭ್ರೂಣ ಹತ್ಯೆ: ಹಲವರ ಕೈವಾಡ ಶಂಕೆ

Published 26 ನವೆಂಬರ್ 2023, 23:30 IST
Last Updated 26 ನವೆಂಬರ್ 2023, 23:30 IST
ಅಕ್ಷರ ಗಾತ್ರ

ಬೆಂಗಳೂರು: ಭ್ರೂಣ ಲಿಂಗಪತ್ತೆ ಹಾಗೂ ಗರ್ಭಪಾತ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಬೈಯಪ್ಪನಹಳ್ಳಿ ಠಾಣೆ ಪೊಲೀಸರು, ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ಮುಂದುವರಿಸಿದ್ದಾರೆ.

ಪ್ರಕರಣದಲ್ಲಿ ಬಂಧಿತರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. ಬಂಧಿತರು ವಿಚಾರಣೆ ವೇಳೆ ನೀಡಿದ ಮಾಹಿತಿ ಆಧರಿಸಿ ತಲೆಮರೆಸಿಕೊಂಡಿರುವ ಚೆನ್ನೈ, ಮೈಸೂರು, ಮಂಡ್ಯ ಮೂಲದ ಆರೋಪಿಗಳ ಬಂಧನಕ್ಕೆ ಪೊಲೀಸರು ಮುಂದಾಗಿದ್ದಾರೆ.

ಚೆನ್ನೈನ ಡಾ.ತುಳಸಿರಾಮ್, ಮೈಸೂರಿನ‌ ಮಾತಾ ಆಸ್ಪತ್ರೆ ಹಾಗೂ ಅಲ್ಲಿನ ರಾಜ್‌ಕುಮಾರ್ ರಸ್ತೆಯಲ್ಲಿರುವ ಆಯುರ್ವೇದಿಕ್ ಡೇ ಕೇರ್ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಡಾ. ಚಂದನ್ ಬಲ್ಲಾಳ್‌, ಆತನ ಪತ್ನಿ ಮೀನಾ, ಸ್ವಾಗತಗಾರ್ತಿ ರಿಜ್ಮಾ, ಲ್ಯಾಬ್ ಟೆಕ್ನಿಷಿಯನ್‌ ನಿಸ್ಸಾರ್, ಶಿವನಂಜೇಗೌಡ, ವೀರೇಶ್, ನವೀನ್‌ಕುಮಾರ್, ನಯನ್‌ಕುಮಾರ್ ಅವರನ್ನು ಇದುವರೆಗೆ ಬಂಧಿಸಲಾಗಿದೆ. ಈ ಆರೋಪಿಗಳ ಜತೆಗೆ ಇನ್ನೂ ಹಲವರು ಕೈಜೋಡಿಸಿರುವ ಶಂಕೆ ವ್ಯಕ್ತವಾಗಿದೆ ಎಂದು ಮೂಲಗಳು ಹೇಳಿವೆ.

‘ಆರೋಪಿಗಳು ಭ್ರೂಣ ಲಿಂಗ ಪತ್ತೆ ಹಾಗೂ ಗರ್ಭಪಾತಕ್ಕೆ ವ್ಯವಸ್ಥಿತ ಜಾಲ ರೂಪಿಸಿಕೊಂಡಿದ್ದರು. ಪ್ರಯೋಗಾಲಯ ಮಾಡಿಕೊಂಡಿದ್ದ ಆಲೆಮನೆಗೂ ಭೇಟಿ ನೀಡಿ ಪರಿಶೀಲಿಸಲಾಗಿದೆ. ಅಲ್ಲಿ ಸ್ಕ್ಯಾನಿಂಗ್‌ ಯಂತ್ರ ಪತ್ತೆಯಾಗಿದೆ. ಆರೋಪಿಗಳು ₹4ರಿಂದ ₹5 ಕೋಟಿಯಷ್ಟು ವ್ಯವಹಾರ ನಡೆಸಿದ್ದಾರೆ. ಎಲ್ಲ ಆರೋಪಿಗಳ ಬ್ಯಾಂಕ್‌ ಖಾತೆ, ಆನ್‌ಲೈನ್‌ ವಹಿವಾಟು ಪರಿಶೀಲನೆ ನಡೆಸಲಾಗಿದೆ.

‘ಮಂಡ್ಯ ಜಿಲ್ಲೆಯ ಮೇಲುಕೋಟೆ ರಸ್ತೆಯಲ್ಲಿರುವ ಆಲೆಮನೆಯನ್ನೇ ಈ ತಂಡ ಭ್ರೂಣಲಿಂಗ ಪರೀಕ್ಷೆಯ ಪ್ರಯೋಗಾಲಯವನ್ನಾಗಿ ಮಾಡಿಕೊಂಡಿತ್ತು. ಅಲ್ಲಿಗೆ ಮಧ್ಯವರ್ತಿಗಳು, ಭ್ರೂಣ ಲಿಂಗ ಪತ್ತೆ ಪರೀಕ್ಷೆಗೆ ಗರ್ಭಿಣಿಯರನ್ನು ಕರೆ ತರುತ್ತಿದ್ದರು. ನಕಲಿ ವೈದ್ಯ ವೀರೇಶ್, ಸ್ಕ್ಯಾನಿಂಗ್‌ ಯಂತ್ರದ ಮೂಲಕ ಭ್ರೂಣ ಪತ್ತೆ ಮಾಡುತ್ತಿದ್ದ. ಹೆಣ್ಣು ಭ್ರೂಣ ಎಂಬುದು ತಿಳಿದಾಗ ಅಲ್ಲಿಂದ ಮೈಸೂರಿನ ಡೇ ಕೇರ್ ಸೆಂಟರ್‌ಗೆ ಆರೋಪಿಗಳೇ ಕರೆದೊಯ್ಯುತ್ತಿದ್ದರು. ಯಾರಿಗೂ ಅನುಮಾನ ಬಾರದಂತೆ ತಂತ್ರ ರೂಪಿಸಿಕೊಂಡಿದ್ದರು. ಆ ಸೆಂಟರ್‌ನಲ್ಲಿ ಗರ್ಭಿಣಿಯನ್ನು ಎರಡರಿಂದ ಮೂರು ದಿನ ಇರಿಸಿಕೊಂಡು ಗರ್ಭಪಾತ ಮಾತ್ರೆ ನೀಡುತ್ತಿದ್ದರು. ಗರ್ಭಪಾತವಾದ ಮೇಲೆ ಕಳುಹಿಸುತ್ತಿದ್ದರು’ ಎಂದು ಪೊಲೀಸರು ಹೇಳಿದರು.

‘ತುಳಸಿರಾಮ್‌ ಸಹ ಪ್ರಮುಖ ಆರೋಪಿ’: ಈ ಪ್ರಕರಣದಲ್ಲಿ ಮೈಸೂರಿನ ಚಂದನ್ ಬಲ್ಲಾಳ್‌ ಹಾಗೂ ಚೆನ್ನೈನ ಮಕ್ಕಳ ತಜ್ಞ ತುಳಸಿರಾಮ್ ಪ್ರಮಮುಖ ಆರೋ‍ಪಿಗಳು ಎಂಬುದು ಪೊಲೀಸ್ ತನಿಖೆಯಿಂದ ಬಯಲಾಗಿದೆ.

ತುಳಸಿರಾಮ್ ಅವರ ತಾಯಿ ಸ್ತ್ರೀರೋಗ ತಜ್ಞೆಯಾಗಿದ್ದರು. ಅವರು ಮೈಸೂರಿನ ಉದಯಗಿರಿಯಲ್ಲಿ ‘ಲತಾ ಆಸ್ಪತ್ರೆ’ ನಡೆಸುತ್ತಿದ್ದರು. ಈತ ಕೂಡ ಮಕ್ಕಳ ತಜ್ಞನಾಗಿ ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ. ತಾಯಿ ಮೃತಪಟ್ಟ ಬಳಿಕ ಅಕ್ರಮ ದಂಧೆಗೆ ಕೈಹಾಕಿದ್ದ ತುಳಸಿರಾಮ್, ಹೆಣ್ಣು ಭ್ರೂಣ ಪತ್ತೆ ಹಚ್ಚಿ ಗರ್ಭಪಾತ ಮಾಡಿಸುತ್ತಿದ್ದ ಎಂದು ಪೊಲೀಸರು ಹೇಳಿದರು.

‘ವೈಯಕ್ತಿಕ ಕಾರಣಕ್ಕೆ ಕುಟುಂಬ ಸಮೇತ ಚೆನ್ನೈಗೆ ಸ್ಥಳಾಂತರಗೊಂಡಿದ್ದ ತುಳಸಿರಾಮ್‌, ತನ್ನ ‘ಲತಾ ಆಸ್ಪತ್ರೆ’ಯನ್ನು ಚಂದನ್ ಬಲ್ಲಾಳ್‌ಗೆ ಮಾರಾಟ ಮಾಡಿದ್ದ. ಅದನ್ನು ಚಂದನ್, ಮಾತಾ ಎಂದು ಹೆಸರು ಬದಲಿಸಿಕೊಂಡಿದ್ದ. ಅದಕ್ಕೆ ಪತ್ನಿ ಮೀನಾಳನ್ನು ವ್ಯವಸ್ಥಾಪಕ ನಿರ್ದೇಶಕಿಯಾಗಿ ನೇಮಿಸಿಕೊಂಡಿದ್ದ.

‘ಚಂದನ್ ಬಲ್ಲಾಳ್ ಮಾತಾ ಆಸ್ಪತ್ರೆಯ ಮೇಲ್ಭಾಗದಲ್ಲಿ ಪ್ರತ್ಯೇಕ ಕೊಠಡಿ ಹಾಗೂ ರೋಗಿಗಳ ಕೋಣೆ ನಿರ್ಮಿಸಿಕೊಂಡಿದ್ದ. ತುಳಿಸಿರಾಮ್ ಚೆನ್ನೈನಲ್ಲಿದ್ದುಕೊಂಡೇ ಮಧ್ಯವರ್ತಿಗಳಾದ ವೀರೇಶ್, ಶಿವಲಿಂಗೇಗೌಡ ಎಂಬುವರ ಮೂಲಕ ಗರ್ಭಪಾತ ಮಾಡಿಸಿಕೊಳ್ಳುವವರ ಪತ್ತೆ ಮಾಡಿ ಚಂದನ್ ಬಲ್ಲಾಳ್ ಆಸ್ಪತ್ರೆಗೆ ಕಳುಹಿಸುತ್ತಿದ್ದ’ ಎಂದು ತನಿಖಾಧಿಕಾರಿಗಳು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT