ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ರಾಜ್ಯದ 2 ಟೋಲ್‌ಗಳಲ್ಲಿ ನಿಯಮ ಉಲ್ಲಂಘನೆ– ₹75 ಕೋಟಿ ಅಕ್ರಮ ಟೋಲ್‌ ಸಂಗ್ರಹ: ಸಿಎಜಿ
ರಾಜ್ಯದ 2 ಟೋಲ್‌ಗಳಲ್ಲಿ ನಿಯಮ ಉಲ್ಲಂಘನೆ– ₹75 ಕೋಟಿ ಅಕ್ರಮ ಟೋಲ್‌ ಸಂಗ್ರಹ: ಸಿಎಜಿ
Published 16 ಆಗಸ್ಟ್ 2023, 23:34 IST
Last Updated 16 ಆಗಸ್ಟ್ 2023, 23:34 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯವನ್ನು ಹಾದು ಹೋಗುವ ಬೆಂಗಳೂರು–ಮುಂಬೈ ರಾಷ್ಟ್ರೀಯ ಹೆದ್ದಾರಿ–48ರಲ್ಲಿ ಇರುವ ಎರಡು ಟೋಲ್‌ ಘಟಕಗಳಲ್ಲಿ ನಿಯಮ ಮೀರಿ ₹75.95 ಕೋಟಿ ಶುಲ್ಕವನ್ನು ಸಂಗ್ರಹಿಸಲಾಗಿದೆ. ಈ ಬಗ್ಗೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹಾಗೂ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ನೀಡಿರುವ ಸ್ಪಷ್ಟನೆಗಳನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಮಹಾಲೇಖಪಾಲರ (ಸಿಎಜಿ) ವರದಿಯು ಹೇಳಿದೆ.

ಸಿಎಜಿ ಸಿದ್ದಪಡಿಸಿರುವ ‘ದಕ್ಷಿಣ ಭಾರತದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್‌ ಘಟಕಗಳ ನಿರ್ವಹಣೆ’ ವರದಿಯಲ್ಲಿ ಇದನ್ನು ಉಲ್ಲೇಖಿಸಲಾಗಿದೆ. ದಕ್ಷಿಣ ಭಾರತದ ರಾಜ್ಯಗಳಲ್ಲಿನ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಒಟ್ಟು 151 ಟೋಲ್‌ ಘಟಕಗಳು ಇದ್ದು, ಅವುಗಳಲ್ಲಿ 41 ಘಟಕಗಳನ್ನು ಪರಿಶೋಧನೆಗೆ ಆಯ್ಕೆ ಮಾಡಿಕೊಳ್ಳಲಾಗಿತ್ತು. 2017–18ನೇ ಸಾಲಿನಿಂದ 2022ರ ಜನವರಿವರೆಗೆ ಪರಿಶೋಧನೆ ನಡೆಸಲಾಗಿದೆ. ಪರಿಶೋಧನೆಗೆ ಆಯ್ಕೆ ಮಾಡಿಕೊಂಡ 41 ಘಟಕಗಳಲ್ಲಿ, ಮೂರರಲ್ಲಿ ನಿಯಮ ಉಲ್ಲಂಘಿಸಿ ಒಟ್ಟು ₹124.18 ಕೋಟಿ ಶುಲ್ಕ ಸಂಗ್ರಹಿಸಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಆ ಮೂರರಲ್ಲಿ ಎರಡು ಘಟಕಗಳು ಕರ್ನಾಟಕದಲ್ಲಿಯೇ ಇವೆ. ಮತ್ತೊಂದು ಆಂಧ್ರಪ್ರದೇಶದಲ್ಲಿ ಇದೆ. ಯಾವುದೇ ರಾಷ್ಟ್ರೀಯ ಹೆದ್ದಾರಿಯನ್ನು ನಾಲ್ಕು ಪಥಗಳಿಂದ ಆರು ಪಥಗಳಿಗೆ ಮೇಲ್ದರ್ಜೆಗೆ ಏರಿಸುವಾಗ ಬಳಕೆದಾರರ ಶುಲ್ಕವನ್ನು ಕಡಿತ ಮಾಡಬೇಕು. ಜತೆಗೆ ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣವಾಗದೇ ಇದ್ದರೆ, ಕಾಮಗಾರಿ ಮುಗಿಯಬೇಕಿದ್ದ ದಿನಾಂಕ ಮತ್ತು ಕಾಮಗಾರಿ ಮುಗಿದ ದಿನಾಂಕದ ನಡುವಣ ಅವಧಿಯಲ್ಲಿ ಬಳಕೆದಾರರ ಶುಲ್ಕವನ್ನು ವಿಧಿಸಬಾರದು ಎಂದು ಹೆದ್ದಾರಿ ಬಳಕೆದಾರರ ಶುಲ್ಕ ನಿಯಮ–2008 ಹೇಳುತ್ತದೆ. ಕರ್ನಾಟಕದ ಹೆಬ್ಬಾಳು ಮತ್ತು ಚಳಗೇರಿ, ಆಂಧ್ರಪ್ರದೇಶದ ನಾಥವಲಸ ಟೋಲ್‌ ಘಟಕಗಳಲ್ಲಿ ಈ ನಿಯಮಗಳನ್ನು ಉಲ್ಲಂಘಿಸಿ ಹೆದ್ದಾರಿ ಶುಲ್ಕ ಸಂಗ್ರಹಿಸಲಾಗಿದೆ. ಇದು ಅಕ್ರಮ ಎಂದು ಸಿಎಜಿ ತನ್ನ ವರದಿಯಲ್ಲಿ ಹೇಳಿದೆ.

ಶುಲ್ಕ ವಿಧಿಸುತ್ತಿದ್ದರೂ ಕೊರತೆಗಳು

ಪರಿಶೋಧನೆಯ ಭಾಗವಾಗಿ ಬಳಕೆದಾರರ ಸಮೀಕ್ಷೆಯನ್ನೂ ಸಿಎಜಿ ನಡೆಸಿದೆ. ದಕ್ಷಿಣ ಭಾರತದ ಆಯ್ದ 41 ಟೋಲ್‌ ಘಟಕಗಳ ವ್ಯಾಪ್ತಿಯಲ್ಲಿ ಬರುವ ಹೆದ್ದಾರಿಗಳ ಸ್ಥಿತಿಗತಿ, ಲಭ್ಯವಿರುವ ಸವಲತ್ತುಗಳ ಬಗ್ಗೆ ಬಳಕೆದಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ

ಈ ಹೆದ್ದಾರಿಗಳಲ್ಲಿ ಅಪಘಾತ ವಲಯಗಳನ್ನು ಸರಿಪಡಿಸಿಲ್ಲ ಎಂದು ಹೇಳಿದವರ ಪ್ರಮಾಣ 42.36%

* ಅಪಘಾತ ವಲಯಗಳನ್ನು ಗುರುತಿಸಿ, ಹೆದ್ದಾರಿ ವಿನ್ಯಾಸದಲ್ಲಿ ಇರುವ ನ್ಯೂನತೆಯನ್ನು ಸರಿಪಡಿಸದೇ ಇರುವ ಕಾರಣಕ್ಕೆ ಅಪಘಾತಗಳು ನಡೆದಿವೆ. ದೋಷಪೂರಿತ ವಿನ್ಯಾಸವನ್ನು ಸರಿಪಡಿಸಬೇಕು ಎಂದು ಸಿಎಜಿ ಶಿಫಾರಸು ಮಾಡಿದೆ

ಈ ಹೆದ್ದಾರಿಗಳಲ್ಲಿ ಚಿಹ್ನೆ ಮತ್ತು ಲೇನ್‌ ಮಾರ್ಕಿಂಗ್‌ಗಳನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ ಎಂದು ಹೇಳಿದವರ ಪ್ರಮಾಣ 26.90%

* ಚಿಹ್ನೆ ಮತ್ತು ಲೇನ್‌ ಮಾರ್ಕಿಂಗ್‌ಗಳು ಇಲ್ಲದೇ ಇರುವ ಕಾರಣ ಚಾಲಕರು ಗೊಂದಲಕ್ಕೀಡಾಗುವ ಸಂಭವವಿದೆ. ಇದರಿಂದ ಅಪಘಾತವಾಗುವ ಅಪಾಯವೂ ಇದೆ. ಗುತ್ತಿಗೆ ಪಡೆದುಕೊಂಡ ಕಂಪನಿ ಹೆದ್ದಾರಿಗಳನ್ನು ಸದಾ ಸುಸ್ಥಿತಿಯಲ್ಲಿ ಇರುವಂತೆ ಪ್ರಾಧಿಕಾರವು ನೋಡಿಕೊಳ್ಳಬೇಕು ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ

ಈ ಹೆದ್ದಾರಿಗಳು ಸುಸ್ಥಿತಿಯಲ್ಲಿ ಇರದೇ ಇರುವ ಕಾರಣ ಶುಲ್ಕ ನೀಡಿದರೂ ಆರಾಮವಾಗಿ ಚಾಲನೆ ಮಾಡುವ ಸ್ಥಿತಿ ಇಲ್ಲ ಎಂದವರ ಪ್ರಮಾಣ 25.21%

* ಹೆದ್ದಾರಿಗಳನ್ನು ಸುಸ್ಥಿತಿಯಲ್ಲಿ ಇರಿಸಿಕೊಳ್ಳಬೇಕು ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT