ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ಆಳ–ಅಗಲ| ಲೈಂಗಿಕ ಕಿರುಕುಳ ಆರೋಪ: ನ್ಯಾಯಕ್ಕಾಗಿ ಕುಸ್ತಿಪಟುಗಳ ಆಗ್ರಹ
ಆಳ–ಅಗಲ| ಲೈಂಗಿಕ ಕಿರುಕುಳ ಆರೋಪ: ನ್ಯಾಯಕ್ಕಾಗಿ ಕುಸ್ತಿಪಟುಗಳ ಆಗ್ರಹ
Published 24 ಏಪ್ರಿಲ್ 2023, 23:34 IST
Last Updated 24 ಏಪ್ರಿಲ್ 2023, 23:34 IST
ಅಕ್ಷರ ಗಾತ್ರ

ಕೋಚ್‌ಗಳು ಮತ್ತು ಭಾರತ ಕುಸ್ತಿ ಫೆಡರೇಷನ್‌ನ ಅಧ್ಯಕ್ಷರು ಕುಸ್ತಿಪಟುಗಳಿಗೆ ಕಿರುಕುಳ ನೀಡಿದ್ದಾರೆ, ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಮೂರು ತಿಂಗಳ ಹಿಂದೆ ಅಂತರರಾಷ್ಟ್ರೀಯ ಮಟ್ಟದ ಕುಸ್ತಿಪಟುಗಳು ದೆಹಲಿಯಲ್ಲಿ ಧರಣಿ ನಡೆಸಿದ್ದರು. ಆ ಆರೋಪಗಳ ತನಿಖೆಗೆ ಎರಡೆರಡು ಸಮಿತಿಗಳನ್ನು ರಚಿಸಲಾಗಿತ್ತು. ಒಂದು ಸಮಿತಿ ವರದಿ ಸಲ್ಲಿಸಿದ್ದರೂ, ಅದು ಬಹಿರಂಗವಾಗಿಲ್ಲ. ತನಿಖೆಯಲ್ಲಿ ನಮಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ಕುಸ್ತಿಪಟುಗಳು ಮತ್ತೆ ಬೀದಿಗೆ ಇಳಿದಿದ್ದಾರೆ. ಪೊಲೀಸರಿಗೆ ದೂರನ್ನೂ ನೀಡಿದ್ದಾರೆ, ನ್ಯಾಯ ಒದಗಿಸಿ ಎಂದು ಸುಪ್ರೀಂ ಕೋರ್ಟ್‌ಗೂ ಅರ್ಜಿ ಸಲ್ಲಿಸಿದ್ದಾರೆ

ಭಾರತದಲ್ಲಿ ನಡೆಯುವ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರಗಳಲ್ಲಿ, ಶೇ 30ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಪರಿಚಿತರಿಂದಲೇ ಅಂತಹ ಕೃತ್ಯ ನಡೆದಿರುತ್ತದೆ. ಕೆಲಸದ ಸ್ಥಳದಲ್ಲಿ ಹಿರಿಯ ಅಧಿಕಾರಿಗಳಿಂದ, ಸಹೋದ್ಯೋಗಿಗಳಿಂದಲೂ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ನಡೆದ ಪ್ರಕರಣಗಳೂ ಇವೆ. ದೇಶದಲ್ಲಿ ಪ್ರತಿ ವರ್ಷ ದಾಖಲಾಗುವ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಕೆಲಸದ ಸ್ಥಳದಲ್ಲಿ ನಡೆಯುವ ಕೃತ್ಯಗಳ ಪ್ರಮಾಣ ಶೇ 3ಕ್ಕಿಂತಲೂ ಹೆಚ್ಚು. ಕ್ರೀಡಾಕ್ಷೇತ್ರವೂ ಇದಕ್ಕೆ ಹೊರತಲ್ಲ. ಭಾರತ ಕುಸ್ತಿ ಫೆಡರೇಷನ್‌ ಅಧ್ಯಕ್ಷ ಬ್ರಿಜ್‌ ಭೂಷಣ್ ಶರಣ್ ಸಿಂಗ್‌ ವಿರುದ್ಧವೂ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಲ್ಲಿ ದೂರುಗಳು ದಾಖಲಾಗಿವೆ.

ಭಾರತೀಯ ಕ್ರೀಡಾ ಪ್ರಾಧಿಕಾರವು (ಎಸ್‌ಎಐ) ದೇಶದ ಅತ್ಯುನ್ನತ ಕ್ರೀಡಾಸಂಸ್ಥೆಯಾಗಿದೆ. ದೇಶದ ಬೇರೆಲ್ಲಾ ಕ್ರೀಡಾ ಸಂಸ್ಥೆಗಳು ಈ ಪ್ರಾಧಿಕಾರದ ಅಡಿಯಲ್ಲಿ ಬರುತ್ತವೆ. ಕ್ರೀಡಾಸಂಸ್ಥೆಗಳಲ್ಲಿ ತಲೆದೋರುವ ಯಾವುದೇ ಕುಂದು–ಕೊರತೆಗಳು ಮತ್ತು ದೂರುಗಳನ್ನು ನಿರ್ವಹಿಸುವ ಹೊಣೆಯೂ ಈ ಸಂಸ್ಥೆಯದ್ದೇ ಆಗಿದೆ. 2010ರಿಂದ 2020ರ ಮಧ್ಯೆ ಈ ಪ್ರಾಧಿಕಾರಕ್ಕೆ ಲೈಂಗಿಕ ದೌರ್ಜನ್ಯ ಕುರಿತ ಒಟ್ಟು 45 ದೂರುಗಳು ಬಂದಿವೆ. ಇವುಗಳಲ್ಲಿ 29 ದೂರುಗಳನ್ನು ಕ್ರೀಡಾಪಟುಗಳು ತಮ್ಮ ಕೋಚ್‌ಗಳ ವಿರುದ್ಧವೇ ನೀಡಿದ್ದಾರೆ. ಆರ್‌ಟಿಐ ಕಾರ್ಯಕರ್ತರೊಬ್ಬರು ಕೇಳಿದ್ದ ಪ್ರಶ್ನೆಗಳಿಗೆ ಕ್ರೀಡಾ ಪ್ರಾಧಿಕಾರವು ನೀಡಿದ್ದ ಮಾಹಿತಿ ಇದು. ಆದರೆ, ಇವುಗಳಲ್ಲಿ ಎಷ್ಟು ಪ್ರಕರಣಗಳು ಇತ್ಯರ್ಥವಾಗಿವೆ ಎಂಬುದರ ಮಾಹಿತಿಯನ್ನು ಪ್ರಾಧಿಕಾರ ನೀಡಿರಲಿಲ್ಲ. ಕೆಲವು ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ. ಕೆಲವರನ್ನು ವರ್ಗಾವಣೆ ಮಾಡಲಾಗಿದೆ, ಕೆಲವರ ವೇತನವನ್ನು ಕಡಿತ ಮಾಡಲಾಗಿದೆ ಎಂಬ ವಿವರಗಳನ್ನಷ್ಟೇ ಪ್ರಾಧಿಕಾರ ನೀಡಿತ್ತು. 2020ರಿಂದ ಈವರೆಗೆ ಲೈಂಗಿಕ ದೌರ್ಜನ್ಯದ ಎಷ್ಟು ಪ್ರಕರಣಗಳು ದಾಖಲಾಗಿವೆ ಎಂಬ ಮಾಹಿತಿ ಸಾರ್ವಜನಿಕವಾಗಿ ಲಭ್ಯವಿಲ್ಲ. ಆದರೆ, ಈ ಅವಧಿಯಲ್ಲಿ ಕೆಲವಾರು ಪ್ರಕರಣಗಳು ಭಾರಿ ಸದ್ದು ಮಾಡಿವೆ. 

ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿ ನೀತಿ –2011ರ ಪ್ರಕಾರ, ಯಾವುದೇ ಕ್ರೀಡಾ ಸಂಸ್ಥೆಯಲ್ಲಿ ಲೈಂಗಿಕ ದೌರ್ಜನ್ಯದ ದೂರುಗಳು ಬಂದರೆ, ಆಯಾ ಸಂಸ್ಥೆಯು ಅದನ್ನು ಪರಿಶೀಲಿಸಬೇಕು. ಇಂತಹ ದೂರುಗಳ ನಿರ್ವಹಣೆಗಾಗಿಯೇ ಪ್ರತ್ಯೇಕ ನಿಯಮಾವಳಿಗಳನ್ನು ಸಾಮಾನ್ಯ ಕಾರ್ಯನಿರ್ವಹಣಾ ಪ್ರಕ್ರಿಯೆಗಳನ್ನು ರೂಪಿಸಿಕೊಳ್ಳಬೇಕು. ದೂರುಗಳಲ್ಲಿ ಮಾಡಿರುವ ಆರೋಪವು ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದ್ದರೆ, ಸಂಬಂಧಿತ ಕಾನೂನು ಪ್ರಾಧಿಕಾರಕ್ಕೆ ದೂರು ನೀಡಬೇಕು ಎಂದು ಈ ನೀತಿ ಹೇಳುತ್ತದೆ.

ಕುಸ್ತಿ ಫೆಡರೇಷನ್‌ನ ಅಧ್ಯಕ್ಷ ಮತ್ತು ಕೆಲವು ಕೋಚ್‌ಗಳ ವಿರುದ್ಧ ಕುಸ್ತಿಪಟುಗಳು ಜನವರಿಯಲ್ಲಿಯೇ ದೂರು ನೀಡಿದ್ದರು. ಕ್ರೀಡಾ ಸಚಿವಾಲಯವೇ ಆ ದೂರುಗಳನ್ನು ನಿರ್ವಹಣೆ ಮಾಡಿತ್ತು. ಭಾರತೀಯ ಒಲಿಂಪಿಕ್‌ ಸಂಸ್ಥೆಯು ಇದಕ್ಕಾಗಿ ಒಂದು ಸಮಿತಿಯನ್ನು ರಚಿಸಿತ್ತು. ಕ್ರೀಡಾ ಸಚಿವಾಲಯವು ಮತ್ತೊಂದು ಮೇಲ್ವಿಚಾರಣಾ ಸಮಿತಿಯನ್ನು ರಚಿಸಿತ್ತು. ಮೇಲ್ವಿಚಾರಣಾ ಸಮಿತಿಯು ಏಪ್ರಿಲ್‌ ಮೊದಲ ವಾರದಲ್ಲಿ ತನ್ನ ವರದಿ ಸಲ್ಲಿಸಿದೆ. ವರದಿ ಬಹಿರಂಗವಾಗಿಲ್ಲ. ‘ಸಮಿತಿಯು ವಿಚಾರಣೆ ನಡೆಸುವ ವೇಳೆ ನಿಯಮಗಳನ್ನು ಪಾಲಿಸಿಲ್ಲ. ಬ್ರಿಜ್‌ ಭೂಷಣ್ ಅವರ ಹೇಳಿಕೆ ದಾಖಲಿಸುವ ವೇಳೆ ವಕೀಲರು ಹಾಜರಿರಲಿಲ್ಲ. ಜತೆಗೆ, ವರದಿಯಲ್ಲಿನ ವಿವರಗಳಿಗೆ ನನ್ನ ಸಹಮತವಿರಲಿಲ್ಲ. ಅದನ್ನು ನಮೂದಿಸಿಯೇ ವರದಿಗೆ ಸಹಿ ಹಾಕಿದ್ದೇನೆ’ ಎಂದು ಸಮಿತಿಯ ಸದಸ್ಯರೊಬ್ಬರು ಹೇಳಿದ್ದಾರೆ ಎಂದು ದಿ ಹಿಂದೂ ವರದಿ ಮಾಡಿತ್ತು. ಆದರೆ, ಹೀಗೆ ಹೇಳಿದ ಸದಸ್ಯ ಯಾರು ಎಂಬ ಮಾಹಿತಿ ಬಹಿರಂಗವಾಗಿಲ್ಲ. ಸಚಿವಾಲಯವೂ ಈ ವರದಿಯನ್ನು ಬಹಿರಂಗಪಡಿಸಿಲ್ಲ.

ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್
ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್

ನಿಯಮಗಳ ಪ್ರಕಾರ ಸಚಿವಾಲಯವು ಅಥವಾ ಭಾರತೀಯ ಕ್ರೀಡಾ ಪ್ರಾಧಿಕಾರವು ವರದಿಯನ್ನು ಪರಿಶೀಲಿಸಿದ ನಂತರ ಕ್ರಮ ತೆಗೆದುಕೊಳ್ಳಬೇಕು. ಅಗತ್ಯವಿದ್ದರೆ, ಪೊಲೀಸರಿಗೆ ದೂರು ನೀಡಬೇಕು. ವರದಿ ಸಲ್ಲಿಕೆಯಾಗಿ ಎರಡು ವಾರ ಕಳೆದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂಬುದು ಕುಸ್ತಿಪಟುಗಳ ಆಕ್ಷೇ‍ಪ. ಹೀಗಾಗಿಯೇ ನಾವು ಪೊಲೀಸರಿಗೆ ನೇರವಾಗಿ ದೂರು ನೀಡಿದ್ದೇವೆ ಎಂದು ಕುಸ್ತಿಪಟುಗಳು ಹೇಳಿಕೊಂಡಿದ್ದಾರೆ. ದೆಹಲಿ ಪೊಲೀಸರಿಗೆ ದೂರು ನೀಡಿ ಮೂರು ದಿನ ಕಳೆದಿದ್ದರೂ ಎಫ್‌ಐಆರ್ ದಾಖಲಾಗಿಲ್ಲ. ಕುಸ್ತಿ ಫೆಡರೇಷನ್‌ನಲ್ಲಿ ಬಾಲಕಿಯರ ಮೇಲೂ ಲೈಂಗಿಕ ದೌರ್ಜನ್ಯ ನಡೆದಿದೆ ಎಂದೂ ದೂರು ನೀಡಲಾಗಿದೆ. ಇದು ಲೈಂಗಿಕ ದೌರ್ಜನ್ಯದಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೊ) ಅಡಿಯಲ್ಲಿ ಬರುವ ಪ್ರಕರಣ. ಹೀಗಿದ್ದೂ ಎಫ್‌ಐಆರ್ ದಾಖಲಿಸುತ್ತಿಲ್ಲ ಎಂದು ಕುಸ್ತಿಪಟುಗಳು ಆರೋಪಿಸಿದ್ದಾರೆ. ತಮ್ಮ ಹೋರಾಟಕ್ಕೆ ಬೆಂಬಲ ನೀಡುವಂತೆ ಕೋರಿದ್ದಾರೆ. ಕುಸ್ತಿಪಟುಗಳು ಭಾನುವಾರ ರಾತ್ರಿ ಪಾದಚಾರಿ ಮಾರ್ಗದಲ್ಲಿ ಮಲಗಿ, ಧರಣಿ ಮುಂದುವರಿಸಿದ್ದು ಹೆಚ್ಚು ಸುದ್ದಿಯಾಗಿದೆ. ತಡರಾತ್ರಿ ಧರಣಿಯ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ನಂತರ, ಕುಸ್ತಿಪಟುಗಳಿಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. 

ಇದರ ಬೆನ್ನಲ್ಲೇ, ವರದಿಯನ್ನು ಸಲ್ಲಿಸಿ ಎಂದು ಕ್ರೀಡಾ ಪ್ರಾಧಿಕಾರಕ್ಕೆ ದೆಹಲಿ ಪೊಲೀಸರು ಸೂಚಿಸಿದ್ದಾರೆ.

ಕುಸ್ತಿಪಟುಗಳಿಗೆ ಬೆಂಬಲ ಸೂಚಿಸಿ ಸಾರ್ವಜನಿಕರು ಇದೇ ಜನವರಿಯಲ್ಲಿ ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ್ದರು
ಕುಸ್ತಿಪಟುಗಳಿಗೆ ಬೆಂಬಲ ಸೂಚಿಸಿ ಸಾರ್ವಜನಿಕರು ಇದೇ ಜನವರಿಯಲ್ಲಿ ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ್ದರು

ಕೆಲವು ಪ್ರಮುಖ ಪ್ರಕರಣಗಳು

  • 2022ರಲ್ಲಿ ಭಾರತದ 17 ವರ್ಷದೊಳಗಿನವರ ಮಹಿಳಾ ಫುಟ್‌ಬಾಲ್‌ ತಂಡದ ಕೋಚ್‌ ಅಲೆಕ್ಸ್‌ ಆ್ಯಂಬ್ರೋಸ್‌ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬಂದಿತ್ತು. ಯೂರೋಪ್‌ ಪ್ರವಾಸದ ವೇಳೆ ಅವರು ಆಟಗಾರ್ತಿಯರ ಜತೆಗೆ ಅಸಭ್ಯವಾಗಿ ನಡೆದುಕೊಂಡಿದ್ದಾರೆ ಎಂದು ದೂರಲಾಗಿತ್ತು. ಅವರನ್ನು ಆ ಹುದ್ದೆಯಿಂದ ತೆಗೆದುಹಾಕಲಾಗಿತ್ತು

  • 2022ರಲ್ಲಿ ಸ್ಲೊವೇನಿಯಾ ಪ್ರವಾಸದ ವೇಳೆ ರಾಷ್ಟ್ರೀಯ ಸೈಕ್ಲಿಂಗ್‌ ಕೋಚ್‌ ಆರ್.ಕೆ.ಶರ್ಮಾ ಅವರು ಅಸಭ್ಯವಾಗಿ ನಡೆದುಕೊಂಡಿದ್ದರು ಎಂದು ಮಹಿಳಾ ಸೈಕ್ಲಿಸ್ಟ್‌ ಒಬ್ಬರು ದೂರು ನೀಡಿದ್ದರು

  • 2021ರಲ್ಲಿ ತಮಿಳುನಾಡು ಅಥ್ಲೀಟ್‌ ಕೋಚ್‌ ಪಿ.ನಾಗರಾಜನ್‌ ಅವರು ತಮ್ಮ ಮೇಲೆ ಹಲವು ವರ್ಷಗಳಿಂದ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು 19 ವರ್ಷದ ಅಥ್ಲೀಟ್‌ ಒಬ್ಬರು ಆರೋಪಿಸಿದ್ದರು. ಅದರ ಬೆನ್ನಲ್ಲೇ ಇನ್ನೂ ಏಳು ಮಂದಿ ಅಥ್ಲೀಟ್‌ಗಳು ಪಿ.ನಾಗರಾಜನ್ ವಿರುದ್ಧ ದೂರು ದಾಖಲಿಸಿದ್ದರು

  • ಹರಿಯಾಣದ ಕ್ರೀಡಾ ಸಚಿವ ಸಂದೀಪ್ ಸಿಂಗ್ (ಮಾಜಿ ಹಾಕಿಪಟುವೂ ಹೌದು) ವಿರುದ್ಧ ಮಹಿಳಾ ಅಥ್ಲೆಟಿಕ್ ತರಬೇತುದಾರರೊಬ್ಬರು ಹೋದ ತಿಂಗಳು ಎಫ್‌ಐಆರ್ ದಾಖಲಿಸಿದ್ದರು. ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಂದೀಪ್ ಸಿಂಗ್ ಅವರನ್ನು ಇನ್ನೊಂದು ಖಾತೆಯ ಸಚಿವರನ್ನಾಗಿ ನೇಮಕ ಮಾಡಲಾಯಿತು.

ಬೆಂಬಲಕ್ಕಾಗಿ ಮನವಿ

ಬ್ರಿಜ್‌ ಭೂಷಣ್ ಶರಣ್ ಸಿಂಗ್ ವಿರುದ್ದ ತನಿಖೆ ನಡೆಸುವಂತೆ ಇದೇ ಜನವರಿಯಲ್ಲಿ ಕುಸ್ತಿಪಟುಗಳು ಧರಣಿ ನಡೆಸಿದ್ದರು. ಆ ಧರಣಿಗೆ ಬೆಂಬಲ ಸೂಚಿಸಿ ಸಿಪಿಐನ ಬೃಂದಾ ಕಾರಟ್ ಅವರು ಧರಣಿಯ ಸ್ಥಳಕ್ಕೆ ತೆರಳಿದ್ದರು. ಆಗ ಕುಸ್ತಿಪಟುಗಳು ತಮ್ಮ ಹೋರಾಟಕ್ಕೆ ರಾಜಕಾರಣಿಗಳು ಬರುವುದು ಬೇಡ ಎಂದು ಹೇಳಿದ್ದರು. ‘ಇದು ಕುಸ್ತಿಪಟುಗಳ ಹೋರಾಟ. ಇದರಲ್ಲಿ ರಾಜಕಾರಣಿಗಳ ಪ್ರವೇಶದ ಅಗತ್ಯವಿಲ್ಲ’ ಎಂದು ಹೇಳಿದ್ದರು.

ಆದರೆ ಈಗ ‘ನಮ್ಮ ಹೋರಾಟಕ್ಕೆ ಬೆಂಬಲ ಸೂಚಿಸಿ ಯಾವುದೇ ರಾಜಕೀಯ ಪಕ್ಷ ಬಂದರೂ ನಾವು ಸ್ವಾಗತಿಸುತ್ತೇವೆ’ ಎಂದು ಕುಸ್ತಿಪಟುಗಳು ಹೇಳಿದ್ದಾರೆ. ‘ಕಳೆದ ಧರಣಿ ವೇಳೆ ನಮ್ಮನ್ನು ಹಾದಿ ತಪ್ಪಿಸಲಾಯಿತು. ನಾವು ಯಾವುದೇ ಪಕ್ಷದ ಜತೆಗೆ ಇಲ್ಲ. ನಮ್ಮ ಹೋರಾಟಕ್ಕೆ ಯಾವ ಪಕ್ಷ ಬೆಂಬಲ ಸೂಚಿಸಿದರೂ ನಾವು ಸ್ವಾಗತಿಸುತ್ತೇವೆ. ಅದು ಬಿಜೆಪಿಯೇ ಇರಬಹುದು ಕಾಂಗ್ರೆಸ್‌ ಇರಬಹುದು ಅಥವಾ ಎಎಪಿಯೇ ಇರಬಹುದು’ ಎಂದು ಕುಸ್ತಿಪಟುಗಳು ಹೇಳಿದ್ದಾರೆ.

ಆಧಾರ: ಪಿಟಿಐ, ರಾಯಿಟರ್ಸ್‌, ದಿ ಹಿಂದೂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT