ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂತು ಬಂತು ವಿಂಡೋಸ್ 11...

Last Updated 29 ಜೂನ್ 2021, 19:30 IST
ಅಕ್ಷರ ಗಾತ್ರ

ಮೊನ್ನೆ ಮೊನ್ನೆಯವರೆಗೂ ಮತ್ತೊಂದು ವಿಂಡೋಸ್ ಆವೃತ್ತಿಯನ್ನು ಬಿಡುಗಡೆ ಮಾಡುವುದಿಲ್ಲ; ಬದಲಿಗೆ, ವಿಂಡೋಸ್ 10 ಆವೃತ್ತಿಯೇ ಕೊನೆ ಎಂದು ಹೇಳಿದ್ದ ಮೈಕ್ರೋಸಾಫ್ಟ್‌, ಕೆಲವೇ ದಿನಗಳ ಹಿಂದೆ ವಿಂಡೋಸ್‌ 11 ಎಂಬ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಜೂನ್ 24 ರಂದು ನಡೆಸಿದ ವರ್ಚುವಲ್‌ ಸಭೆಯಲ್ಲಿ ಹೊಸ ಆವೃತ್ತಿ ವಿಂಡೋಸ್ 11ರ ಗುಣವಿಶೇಷಣಗಳನ್ನು ಮೈಕ್ರೋಸಾಫ್ಟ್‌ ತೆರೆದಿಟ್ಟಿದೆ.

ಹೊಸ ವಿನ್ಯಾಸ, ಹೊಸ ವೈಶಿಷ್ಟ್ಯಗಳನ್ನೊಳಗೊಂಡ ವಿಂಡೋಸ್ ಮುಂದಿನ ಕೆಲವು ವಾರಗಳಲ್ಲಿ ಡೆವಲಪರ್‌ಗಳಿಗೆ ಲಭ್ಯವಾಗಲಿದ್ದು, ವರ್ಷಾಂತ್ಯದಲ್ಲಿ ಎಲ್ಲರಿಗೂ ಬಳಕೆಗೆ ಸಿಗಲಿದೆ. ಈಗಾಗಲೇ ವಿಂಡೋಸ್ 10 ಹಾಗೂ ಹಳೆಯ ಆವೃತ್ತಿ ಹೊಂದಿರುವವರು ಉಚಿತವಾಗಿ ಈ ಹೊಸ ಆವೃತ್ತಿಯನ್ನು ಅಪ್‌ಡೇಟ್ ಮಾಡಿಕೊಳ್ಳಬಹುದು.

ಏನಿದೆ ಹೊಸತು?

ಹೊಸ ವಿನ್ಯಾಸ: ಮ್ಯಾಕ್‌ ಕಂಪ್ಯೂಟರ್‌ಗಳನ್ನೇ ಹೋಲುವ ಇಂಟರ್‌ಫೇಸ್ ಅನ್ನು ವಿಂಡೋಸ್ 11 ಹೊಂದಿದೆ. ಸುಂದರವಾದ ಅರೆ ಪಾರದರ್ಶಕ ಟೈಲ್‌ಗಳು, ಹರಿತ ಅಂಚುಗಳ ಬದಲಿಗೆ, ವೃತ್ತಗೊಳಿಸಿದ ಅಂಚುಗಳು, ಸುಂದರ ಶೇಡ್‌ಗಳಿವೆ. ವಿಂಡೋಸ್‌ಗೇ ಅತ್ಯಂತ ವಿಶಿಷ್ಟವಾದ ಸ್ಟಾರ್ಟ್‌ ಮೆನು ಈ ಹಿಂದಿನ ಎಲ್ಲ ಆವೃತ್ತಿಗಳಲ್ಲಿ ಎಡ ಭಾಗದಲ್ಲಿತ್ತು. ಆದರೆ, ಈ ವಿಂಡೋಸ್ 11 ರಲ್ಲಿ ಇದು ಮಧ್ಯದಲ್ಲಿದೆ. ಇದು ಆಪಲ್‌ನ ಮ್ಯಾಕ್‌ ಶೈಲಿಯನ್ನೇ ಹೋಲುತ್ತದೆ. ಇದರ ಜೊತೆಗೆ, ಫೋಲ್ಡರ್‌ಗಳ ಐಕಾನ್‌ಗಳು ಬದಲಾಗಿ, ಸುಂದರವಾಗಿವೆ.

ಆಂಡ್ರಾಯ್ಡ್‌ ಆ್ಯಪ್‌ಗಳೂ ಲಭ್ಯ: ಈವರೆಗೆ ಆಂಡ್ರಾಯ್ಡ್‌ ಆ್ಯಪ್‌ಗಳು ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳನ್ನು ಹೊರತುಪಡಿಸಿ ಬೇರೆ ಯಾವುದೇ ಸಿಸ್ಟಮ್‌ಗಳಲ್ಲಿ ತೆರೆದುಕೊಳ್ಳುತ್ತಿರಲಿಲ್ಲ. ಆದರೆ, ಈಗ ಮೈಕ್ರೋಸಾಫ್ಟ್‌ ಹೊಸ ಮೈಲಿಗಲ್ಲಿನತ್ತ ಹೆಜ್ಜೆ ಇಟ್ಟಿದೆ. ಮೈಕ್ರೋಸಾಫ್ಟ್‌ ಸ್ಟೋರ್‌ನಲ್ಲಿ ಅಮೆಜಾನ್ ಆ್ಯಪ್‌ಸ್ಟೋರ್ ಮೂಲಕ ಆಂಡ್ರಾಯ್ಡ್ ಆಪ್‌ಗಳನ್ನು ಇನ್‌ಸ್ಟಾಲ್‌ ಮಾಡುವ ಸೌಲಭ್ಯವನ್ನು ಒದಗಿಸಿದೆ. ಇದಕ್ಕಾಗಿ ಇಂಟೆಲ್‌ ಬ್ರಿಡ್ಜ್ ಟೆಕ್ನಾಲಜಿಯನ್ನು ಬಳಸಲಾಗುತ್ತಿದೆ ಎಂದು ಮೈಕ್ರೋಸಾಫ್ಟ್‌ ಹೇಳಿದೆ. ಆದರೆ, ಆಂಡ್ರಾಯ್ಡ್ ಆ್ಯಪ್‌ ಇನ್‌ಸ್ಟಾಲ್‌ ಮಾಡುವಿಕೆ ಮತ್ತು ಬಳಕೆಯ ಕುರಿತ ಹೆಚ್ಚಿನ ಮಾಹಿತಿಯನ್ನು ಮೈಕ್ರೋಸಾಫ್ಟ್ ಒದಗಿಸಿಲ್ಲ. ಆದರೆ, ಗೂಗಲ್‌ ಪ್ಲೇ ಆ್ಯಪ್‌ಸ್ಟೋರ್ ವಿಂಡೋಸ್ 11ನಲ್ಲಿ ಲಭ್ಯವಾಗುವುದಿಲ್ಲ ಎಂದು ಹೇಳಲಾಗಿದೆ.

ವಿಜೆಟ್‌ಗಳ ಪರಿಚಯ: ವಿಂಡೋಸ್ ವಿಸ್ಟಾ ಎಂಬ ಹಳೆಯ ಮೈಕ್ರೋಸಾಪ್ಟ್‌ ಒಎಸ್ ಬಳಸಿದವರಿಗೆ ಡೆಸ್ಕ್‌ಟಾಪ್‌ ಗ್ಯಾಜೆಟ್‌ಗಳನ್ನು ಬಳಸಿದ ನೆನಪಿರುತ್ತದೆ. ಅತ್ಯಂತ ಆಪ್ತವಾಗಿದ್ದ ಮತ್ತು ಮೆಚ್ಚುಗೆ ವ್ಯಕ್ತವಾಗಿದ್ದ ವಿಂಡೋಸ್ ಫೀಚರ್ ಅದಾಗಿತ್ತು. ಆದರೆ, ಅದೇಕೋ ಮೈಕ್ರೋಸಾಫ್ಟ್‌ ವಿಸ್ಟಾ ನಂತರ ಯಾವ ಒಎಸ್‌ನಲ್ಲೂ ಅದನ್ನು ಬಳಸಿರಲಿಲ್ಲ. ಆದರೆ, ಈಗ ವಿಂಡೋಸ್ 11ನಲ್ಲಿ ಇದೇ ರೀತಿಯ ಸೌಲಭ್ಯವನ್ನು ಪುನಃ ಒದಗಿಸಿದೆ. ಆದರೆ, ಅದಕ್ಕೆ ಸ್ವಲ್ಪ ಆಧುನಿಕ ಸ್ಪರ್ಶ ನೀಡಿದೆ. ಇದಕ್ಕೆ ಗ್ಯಾಜೆಟ್ ಬದಲಿಗೆ ವಿಜೆಟ್ ಎಂಬ ಹೆಸರು ನೀಡಲಾಗಿದೆ.

ಸ್ಟಾರ್ಟ್‌ಮೆನು ಪಕ್ಕದಲ್ಲೇ ಈ ವಿಜೆಟ್‌ ಬಟನ್ ಇರಲಿದೆ. ಇದನ್ನು ಒತ್ತಿದರೆ, ಸುದ್ದಿ, ದಿನಾಂಕ, ಹವಾಮಾನ ಸೇರಿದಂತೆ ಹಲವು ಮಾಹಿತಿ ಲಭ್ಯವಾಗುತ್ತದೆ. ಇದನ್ನು ನಾವು ನಮಗೆ ಬೇಕಾದ ಹಾಗೆ ಕಸ್ಟಮೈಸ್ ಕೂಡ ಮಾಡಿಕೊಳ್ಳಬಹುದು.

ಟೀಮ್ಸ್ ಇನ್ನಷ್ಟು ಸುಲಭ: ವರ್ಕ್‌ ಫ್ರಮ್ ಹೋಮ್‌ ಕಲ್ಪನೆ ಹೆಚ್ಚು ಚಾಲ್ತಿಗೆ ಬರುತ್ತಿದ್ದಂತೆಯೇ, ಅದಕ್ಕೆ ವಿಂಡೋಸ್ ಅನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಮೈಕ್ರೋಸಾಪ್ಟ್ ಟೀಮ್ಸ್ ಅನ್ನು ವಿಂಡೋಸ್ 11 ಟಾಸ್ಕ್‌ಬಾರ್‌ನಲ್ಲೇ ಅಳವಡಿಸಲಾಗಿದೆ. ಅಷ್ಟೇ ಅಲ್ಲ, ಟೀಮ್ಸ್‌ನಲ್ಲೇ ಎಲ್ಲ ಸೌಲಭ್ಯಗಳನ್ನೂ ಬಳಸುವ ಸೌಲಭ್ಯವನ್ನು ಕಲ್ಪಿಸಲಾಗಿದೆ. ಇದು ಆ್ಯಪಲ್‌ನ ಫೇಸ್‌ಟೈಮ್‌ ರೀತಿಯಲ್ಲೂ ಕೆಲಸ ಮಾಡುತ್ತದೆ.

ಗೇಮಿಂಗ್ ಪ್ರಿಯರಿಗೆ ಅನುಕೂಲ: ಗೇಮ್‌ ಪ್ರಿಯರಿಗೆ ವಿಂಡೋಸ್ 11 ಮೆಚ್ಚುಗೆಯಾಗಲಿದೆ. ಎಕ್ಸ್‌ಬಾಕ್ಸ್‌ ಕನ್ಸೋಲ್‌ಗಳಲ್ಲಿ ಲಭ್ಯವಿದ್ದ ಕೆಲವು ಫೀಚರ್‌ಗಳನ್ನು ವಿಂಡೋಸ್ 11ನಲ್ಲಿ ಸೇರಿಸಲಾಗಿದೆ. ಆಟೊ ಎಚ್‌ಡಿಆರ್‌ ಹಾಗೂ ಡೈರೆಕ್ಟ್‌ ಸ್ಟೋರೇಜ್‌ನಂತಹ ಸೌಲಭ್ಯಗಳು ಗೇಮಿಂಗ್‌ ಅನುಭವವನ್ನು ಇನ್ನಷ್ಟು ಸುಧಾರಿಸಲಿದೆ.

ವರ್ಚುವಲ್‌ ಡೆಸ್ಕ್‌ಟಾಪ್‌: ಹಲವು ಡೆಸ್ಕ್‌ಟಾಪ್‌ ಅನ್ನು ವರ್ಚುವಲ್‌ ಆಗಿ ಬಳಸುವ ಸೌಲಭ್ಯ ಈ ಹಿಂದಿನ ಒಎಸ್‌ ಆವೃತ್ತಿಗಳಲ್ಲೇ ಇದ್ದವಾದರೂ, ವಿಂಡೋಸ್ 11ನಲ್ಲಿ ಇದನ್ನು ಇನ್ನಷ್ಟು ಸುಲಭವಾಗಿಸಲಾಗಿದೆ. ವೈಯಕ್ತಿಕ ಕೆಲಸಕ್ಕೂ, ಕಚೇರಿ ಕೆಲಸಕ್ಕೂ ಒಂದೊಂದು ವರ್ಚುವಲ್‌ ಡೆಸ್ಕ್‌ಟಾಪ್ ಅನ್ನು ಬಳಸುವ ಅನುಕೂಲ ಇದರಲ್ಲಿ ಸಿಗಲಿದೆ. ಅದರಲ್ಲೂ ಮಲ್ಟಿಟಾಸ್ಕ್ ಮಾಡುವವರಿಗೆ ಇದು ಹೇಳಿ ಮಾಡಿಸಿದ ಫೀಚರ್.

ಇದರ ಜೊತೆಗೆ, ಸ್ನ್ಯಾಪ್‌ ಗ್ರೂಪ್‌ಗಳು ಹಾಗೂ ಸ್ನ್ಯಾಪ್‌ ಲೇಔಟ್ ಅನ್ನೂ ಕೂಡ ಮಲ್ಟಿಟಾಸ್ಕಿಂಗ್‌ಗೆ ಪೂರಕವಾಗಿ ಅಭಿವೃದ್ಧಿಪಡಿಸಲಾಗಿದೆ. ಮಿನಿಮೈಸ್ ಬಟನ್‌ ಮೇಲೆ ಒಂದು ಸೆಕೆಂಡ್ ಕರ್ಸರ್ ಇಟ್ಟುಕೊಂಡರೆ ಆ್ಯಪ್‌ಗಳ ನಾಲ್ಕು ಲೇಔಟ್ ಆಯ್ಕೆಯನ್ನು ತೋರಿಸುತ್ತದೆ.

 ಬಾಕ್ಸ್

ಹಾರ್ಡ್‌ವೇರ್‌ ಅಗತ್ಯ: ವಿಂಡೋಸ್ 10ಕ್ಕಿಂತ ಹೆಚ್ಚು ಸುಧಾರಿತ ಒಎಸ್‌ ಇದಾಗಿದ್ದು, ಹಾರ್ಡ್‌ವೇರ್ ಅಗತ್ಯ ಕೂಡ ಹೆಚ್ಚಾಗಿದೆ. 4 ಜಿಬಿ ರ್‍ಯಾಮ್‌, ಹಾಗೂ 1 ಗಿಗಾಹರ್ಟ್ಸ್ ಪ್ರೊಸೆಸರ್ ಅಗತ್ಯವಿದೆ. 64 ಬಿಟ್‌ನಲ್ಲಿ ಮಾತ್ರ ಇದು ರನ್ ಆಗಲಿದೆ. ಅಲ್ಲದೆ, 2015 ರ ನಂತರ ಮಾರುಕಟ್ಟೆಗೆ ಬಿಡುಗಡೆಯಾದ ಸಿಸ್ಟಮ್‌ಗಳಲ್ಲಿ ಮಾತ್ರ ಇದು ಕೆಲಸ ಮಾಡಲಿದೆ. ಯಾಕೆಂದರೆ, ಟ್ರಸ್ಟ್‌ ಪ್ಲಾಟ್‌ಫಾರಂ ಮಾಡ್ಯೂಲ್‌ ಅಗತ್ಯ ಇದಕ್ಕಿದ್ದು, ಈ ಟಿಪಿಎಂ ಅನ್ನು 2015ರಲ್ಲಿ ಪರಿಚಯಿಸಲಾಗಿತ್ತು. ಇದರಲ್ಲಿ ಬಿಟ್‌ಲಾಕರ್ ಡ್ರೈವ್‌ ಎನ್‌ಕ್ರಿಪ್ಷನ್‌, ವಿಂಡೋಸ್ ಹಲೋ ಪಿನ್‌ ಹಾಗೂ ಬಯೋಮೆಟ್ರಿಕ್ಸ್‌ಗೂ ಇದು ಅನುವು ಮಾಡುತ್ತದೆ. ಹೆಚ್ಚು ಸುರಕ್ಷತೆ ಫೀಚರ್‌ಗಾಗಿ ಟಿಪಿಎಂ ಬಳಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT