ಭಾನುವಾರ, ಜೂನ್ 13, 2021
25 °C

ಆಳ–ಅಗಲ | ರಾಜಮನೆತನದ ಸುಪರ್ದಿಗೆ ಸಿರಿವಂತ ದೇಗುಲ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ತಿರುವನಂತಪುರ ಪದ್ಮನಾಭಸ್ವಾಮಿ ದೇವಾಲಯದ ಆಡಳಿ ತದ ಹಕ್ಕು ತಿರುವಾಂಕೂರು ರಾಜ ಮನೆತನಕ್ಕೆ ಸೇರಿದ್ದು ಎಂದು ಸುಪ್ರೀಂ ಕೋರ್ಟ್‌ ಸೋಮವಾರ ತೀರ್ಪು ನೀಡಿದೆ. ‘ದೇವಾಲಯದ ಆಡಳಿತವನ್ನು ರಾಜ್ಯ ಸರ್ಕಾರ ನಿಯಂತ್ರಣಕ್ಕೆ ತೆಗೆದು ಕೊಳ್ಳಬೇಕು’ ಎಂದು 2011ರಲ್ಲಿ ಕೇರಳ ಹೈಕೋರ್ಟ್‌ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದೆ.

ಕೇರಳ ಹೈಕೋರ್ಟ್‌ನ ಆದೇಶದ ವಿರುದ್ಧ ರಾಜಮನೆತನದವರು ಸಲ್ಲಿಸಿದ್ದ ಅರ್ಜಿ ಮತ್ತು ಇನ್ನೂ ಹಲವು ಅರ್ಜಿಗಳ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಯು.ಯು. ಲಲಿತ್ ನೇತೃತ್ವದ ಪೀಠವು ಈ ತೀರ್ಪು ನೀಡಿದೆ.

ದೇವಾಲಯದ ಖಜಾನೆ ಕೋಣೆ/ತಿಜೋರಿಯನ್ನು ತೆರೆಯಬೇಕೇ ಬೇಡವೇ ಎಂದು ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ರಾಜಮನೆತನದ ನೇತೃತ್ವದ ಆಡಳಿತ ಸಮಿತಿಗೆ ಸೇರಿದ್ದು ಎಂದು ಪೀಠವು ಹೇಳಿದೆ.

ದೇವಾಲಯದ ಆಡಳಿತವನ್ನು ನೋಡಿಕೊಳ್ಳಲು ತಿರುವಾಂಕೂರು ರಾಜಮನೆತನದ ನೇತೃತ್ವದಲ್ಲಿ ಆಡ ಳಿತ ಸಮಿತಿಯನ್ನು ರಚಿಸಬೇಕಿದೆ. ಅಲ್ಲಿಯವರೆಗೆ ತಿರುವನಂತಪುರ ಜಿಲ್ಲಾ ನ್ಯಾಯಾಧೀಶರ ನೇತೃತ್ವದ ಆಡಳಿತ ಮಂಡಳಿಯು, ದೇವಾಲಯದ ಆಡಳಿತವನ್ನು ನೋಡಿಕೊಳ್ಳಲಿದೆ ಎಂದು ಪೀಠವು ತಿಳಿಸಿದೆ. 

‘ರಾಜಮನೆತನದ ಕೊನೆಯ ರಾಜ ಮೃತನಾದ ಒಂದೇ ಕಾರಣಕ್ಕೆ, ದೇವಾಲಯವನ್ನು ನಿರ್ವಹಣೆ ಮಾಡುವ ಹಕ್ಕನ್ನು ಮನೆತನವು ಕಳೆದುಕೊಳ್ಳುವುದಿಲ್ಲ. ಅದು ಆತನ ವಾರಸುದಾರರಿಗೆ ಸಲ್ಲುತ್ತದೆ’ ಎಂದು ಅಭಿಪ್ರಾಯಪಟ್ಟಿದೆ.

ರಾಜ್ಯ ಸರ್ಕಾರ ದೇವಸ್ಥಾನಕ್ಕೆ ಸದ್ಯ ಮಾಡಿರುವ ಭದ್ರತಾ ವ್ಯವಸ್ಥೆಯನ್ನು ಮುಂದುವರಿಸಬಹುದು. ಆದರೆ, ಇನ್ನುಮುಂದೆ ಅದರ ವೆಚ್ಚವನ್ನು ದೇವಸ್ಥಾನದ ಆಡಳಿತ ಮಂಡಳಿಯೇ ಭರಿಸಬೇಕು ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ. ದೇವಸ್ಥಾನದ ಆಡಳಿತವನ್ನು ನೋಡಿಕೊಳ್ಳಲು ಆಡಳಿತ ಸಮಿತಿ ಹಾಗೂ ಸಲಹಾ ಸಮಿತಿಗಳ ರಚನೆ ಮಾಡಬೇಕು. ದೇವಸ್ಥಾನಕ್ಕೆ ಸಂಬಂಧಿಸಿದ ಎಲ್ಲ ಧಾರ್ಮಿಕ ವಿಧಿಗಳ ಕುರಿತು ಈ ಸಮಿತಿಗಳೇ ನಿರ್ಣಯ ಕೈಗೊಳ್ಳಬೇಕು ಎಂದೂ ನಿರ್ದೇಶನ ನೀಡಲಾಗಿದೆ

ದೇವಾಲಯದ ಆಡಳಿತವನ್ನು ರಾಜ್ಯ ಸರ್ಕಾರ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕು ಎಂದು 2011ರಲ್ಲಿ ಕೇರಳ ಹೈಕೋರ್ಟ್‌ ಆದೇಶ ನೀಡಿತ್ತು. ಈ ಆದೇಶದ ವಿರುದ್ಧ ಸುಪ್ರಿಂ ಕೋರ್ಟ್‌ನಲ್ಲಿ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದವು.

ಎಷ್ಟು ಪುರಾಣ ಪ್ರಸಿದ್ಧವೋ ಅಷ್ಟೇ ನಿಗೂಢ!
ಕೇರಳದ ತಿರುವನಂತಪುರದಲ್ಲಿರುವ ಅನಂತಪದ್ಮನಾಭಸ್ವಾಮಿ ದೇವಸ್ಥಾನವು ಭಾರತದ ಅತ್ಯಂತ ಶ್ರೀಮಂತ ದೇಗುಲ ಎನಿಸಿದೆ. ಇಲ್ಲಿನ ನೆಲಮಾಳಿಗೆಯಲ್ಲಿ ಇರುವ ಆರು ಖಜಾನೆ ಕೋಣೆಗಳ ಪೈಕಿ ಐದರಲ್ಲಿ ಅಪಾರ ಪ್ರಮಾಣದ ಚಿನ್ನಾಭರಣ ಪತ್ತೆಯಾದ ಬಳಿಕ ಈ ದೇವಸ್ಥಾನವು ಇಡೀ ದೇಶದ ಗಮನ ಸೆಳೆದಿದೆ. ‘ಬಿ’ ಕೋಣೆಯನ್ನು ಇನ್ನೂ ತೆರೆಯಲಾಗಿಲ್ಲ. ಇಲ್ಲಿ ಅಪಾರ ಚಿನ್ನಾಭರಣ ಇದೆ ಎಂದು ಊಹಿಸಲಾಗಿದೆ.  

ತಿರುವನಂತಪುರಕ್ಕೆ ಆ ಹೆಸರು ಬರಲು ಅನಂತ ಪದ್ಮನಾಭಸ್ವಾಮಿಯೇ ಕಾರಣವಂತೆ. ವಿಷ್ಣುವಿನ ಸ್ವರೂಪವಾದ ಅನಂತ ಪದ್ಮನಾಭಸ್ವಾಮಿಯ ಬೃಹತ್ ಆಕಾರವನ್ನು ಇಲ್ಲಿ ಕಾಣಬಹುದು. ಪ್ರತಿಮೆಯು ಶಯನಾವಸ್ಥೆಯಲ್ಲಿ ಇರುವುದರಿಂದ ಅನಂತ ಶಯನ ಎಂದೂ ಕರೆಲಾಗಿದೆ. ತಲೆಯ ಮೇಲೆ ಐದು ಹೆಡೆಗಳ ಸರ್ಪವನ್ನು ಕಾಣಬಹುದು. ಗರ್ಭಗುಡಿಗೆ ಮೂರು ದ್ವಾರಗಳಿವೆ. ಆ ಮೂರೂ ದ್ವಾರಗಳ ಮೂಲಕವಷ್ಟೇ ದೇವರ ಪೂರ್ಣ ದರ್ಶನ ಪಡೆಯಲು ಸಾಧ್ಯ. 

ಪದ್ಮನಾಭನ ಜೊತೆಗೆ ಲಕ್ಷ್ಮಿ (ಶ್ರೀದೇವಿ), ಭೂದೇವಿ ಇದ್ದಾರೆ. ಅನಂತ ಪದ್ಮನಾಭ ವಿಗ್ರಹದ ಬಲಗೈ ಶಿವಲಿಂಗದ ಮೇಲೆ ಚಾಚಿಕೊಂಡಿರುವುದು ಇಲ್ಲಿನ ವಿಶೇಷತೆಗಳಲ್ಲೊಂದು. ಮಾರ್ಕಂಡೇಯ ಮುನಿ, ಗರುಡ, ನಾರದ, ಸೂರ್ಯ, ಚಂದ್ರ, ಸಪ್ತರ್ಷಿ ಮೊದಲಾದ ವಿಗ್ರಹಗಳು ಇಲ್ಲಿವೆ. ಮುಖ್ಯವಿಗ್ರಹವನ್ನು ನೇಪಾಳದ ಗಂಡಕಿ ನದಿಯಲ್ಲಿ ಸಿಕ್ಕ 1,20,008 ಸಾಲಿಗ್ರಾಮಗಳನ್ನು ಬಳಸಿ ನಿರ್ಮಿಸಲಾಗಿದ್ದು, ವಿಗ್ರಹದ ಮೇಲೆ ಕಟುಸರ್ಕರ ಯೋಗಂ ಎಂಬ ಆಯುರ್ವೇದದ ಲೇಪನವನ್ನು ಮಾಡಲಾಗಿದೆ ಎಂಬ ಪ್ರತೀತಿ ಇದೆ. 

ಬ್ರಹ್ಮ ಪುರಾಣ, ಮತ್ಸ್ಯ ಪುರಾಣ, ವರಾಹ ಪುರಾಣ, ಸ್ಕಂದ ಪುರಾಣ, ಪದ್ಮ ಪುರಾಣ, ವಾಯು ಪುರಾಣ, ಭಗವತಿ ಪುರಾಣ ಮತ್ತು ಮಹಾಭಾರತದಲ್ಲೂ ದೇವಸ್ಥಾನದ ಉಲ್ಲೇಖವಿದೆ ಎಂದು ಹೇಳಲಾಗುತ್ತದೆ.

ನಾಗಮಂತ್ರದಿಂದ ಗರುಡ ಮಂತ್ರದವರೆಗೆ...
ದೇವಸ್ಥಾನದ ಸುತ್ತ ಹಲವು ದಂತಕಥೆಗಳು ಮಡುವುಗಟ್ಟಿವೆ. ನೆಲಮಾಳಿಗೆಯ ‘ಬಿ’ ಕೋಣೆಯನ್ನು ತೆರೆಯುವುದರಿಂದ ತೊಂದರೆ ಎದುರಾಗುತ್ತದೆ. ಕೋಣೆಯನ್ನು ಸರ್ಪಗಳು ಕಾವಲು ಕಾಯುತ್ತಿವೆ. ಕಂಜಿರೊಟ್ಟು ಯಕ್ಷಿ ಸೇರಿದಂತೆ ಅನೇಕ ದೈವಗಳು ಕೋಣೆಯ ಕಾವಲಿಗೆ ಇವೆ ಎಂಬುದು ಅಂತಹ ಕಥೆಗಳಲ್ಲೊಂದು. 

ಶತಮಾನಗಳ ಹಿಂದೆ ಕೋಣೆಯ ಬಾಗಿಲು ತೆರೆಯಲು ದೇವಸ್ಥಾನದ ನಿರ್ವಹಣಾ ಸಮಿತಿಯವರು ಮುಂದಾಗಿದ್ದರು. ಆದರೆ ಅವರಿಗೆ ಜೋರಾಗಿ ಗಾಳಿ ಬೀಸಿದ ಶಬ್ದ ಕೇಳಿಸಿತು. ಹೀಗಾಗಿ ಕೋಣೆ ತೆರೆಯುವ ನಿರ್ಧಾರದಿಂದ ಹಿಂದೆ ಸರಿದರು ಎನ್ನುವುದು ಇನ್ನೊಂದು ದಂತಕಥೆ. 1930ರ ಸುಮಾರಿನಲ್ಲಿ ದರೋಡೆಕೋರರ ಗುಂಪೊಂದು ಕನ್ನ ಹಾಕಲು ಮುಂದಾಗಿತ್ತು. ಆದರೆ ಸರ್ಪಗಳು ಅವರ ಮೇಲೆರಗಿದ್ದವು ಎಂಬ ಕಥೆಯೂ ಕೇಳಿಬರುತ್ತದೆ. 

ಹಿಂದಿನ ಕಾಲದಲ್ಲಿ ಸಂತರು ಪ್ರಭಾವಶಾಲಿಯಾದ ‘ನಾಗಮಂತ್ರ’ವನ್ನು ಪಠಿಸಿ ಕೋಣೆಯನ್ನು ಬಂದ್ ಮಾಡಿದ್ದಾರೆ. ಅತ್ಯಂತ ಶಾಸ್ತ್ರನಿಪುಣ ಸಂತರೊಬ್ಬರು ಗರುಡಮಂತ್ರವನ್ನು ಪಠಿಸಿ, ಈ ಕೋಣೆಯ ಬಾಗಿಲನ್ನು ತೆರೆಯಬಹುದು ಎಂಬ ಪ್ರತೀತಿ ಇದೆ. ಇನ್ನೂ ತೆರೆಯದ ಆ ಖಜಾನೆಯಷ್ಟೇ ಅದರ ಸುತ್ತ ಹರಡಿರುವ ಕಥೆಗಳು ರೋಚಕವಾಗಿವೆ.

ಹಲವು ವರ್ಷಗಳ ಕಾನೂನು ಹೋರಾಟ
ಕೇರಳದ ತಿರುವಾಂಕೂರು ರಾಜವಂಶಸ್ಥರ ನೇತೃತ್ವದ ಟ್ರಸ್ಟ್ ದಶಕಗಳಿಂದ ಈ ದೇಗುಲವನ್ನು ನಿರ್ವಹಿಸುತ್ತಾ ಬಂದಿದೆ. 2011ರಲ್ಲಿ ಹಣಕಾಸು ಅವ್ಯವಹಾರ ಆರೋಪದಡಿ ಕೇರಳ ಸರ್ಕಾರಕ್ಕೆ ದೇವಸ್ಥಾನದ ಆಡಳಿತ ನಿರ್ವಹಣೆಯ ಹೊಣೆಯನ್ನು ವಹಿಸಿ ಹೈಕೋರ್ಟ್ ಆದೇಶಿಸಿತ್ತು. ಸ್ಥಳೀಯರೊಬ್ಬರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪರಿಗಣಿಸಿದ್ದ ಸುಪ್ರೀಂಕೋರ್ಟ್, ರಹಸ್ಯ ಖಜಾನೆ ಕೋಣೆಗಳ ದ್ವಾರಗಳನ್ನು ತೆರೆಯಲು ಅನುಮತಿಯನ್ನೂ ನೀಡಿತ್ತು. ಸುಮಾರು ₹1 ಲಕ್ಷ ಕೋಟಿ ಮೌಲ್ಯದ ಚಿನ್ನ, ವಜ್ರದ ಆಭರಣಗಳು, ಪ್ರತಿಮೆಗಳು ಖಜಾನೆ ಕೋಣೆಗಳಲ್ಲಿ ಇದ್ದುದು ಪತ್ತೆಯಾಗಿತ್ತು. ಒಂಬತ್ತು ವರ್ಷಗಳ ಕಾನೂನು ಹೋರಾಟದ ಬಳಿಕ ರಾಜಮನೆತನಕ್ಕೆ ದೇವಸ್ಥಾನದ ಮೇಲಿನ ಹಕ್ಕು ಮರಳಿ ಸಿಕ್ಕಿದೆ.

 

ತೀರ್ಪು ಸ್ವಾಗತಿಸುತ್ತೇವೆ‘
ಸುಪ್ರೀಂ ಕೋರ್ಟ್ ಆದೇಶವನ್ನು ರಾಜ್ಯ ಸರ್ಕಾರ ಸ್ವಾಗತಿಸುತ್ತದೆ ಹಾಗೂ ಗೌರವಿಸುತ್ತದೆ. ಕೋರ್ಟ್ ಆದೇಶದ ಪ್ರತಿಯನ್ನು ಅವಲೋಕಿಸಬೇಕಿದೆ. ಆದೇಶದ ಪೂರ್ಣಪಾಠ ಇನ್ನಷ್ಟೇ ಸಿಗಬೇಕಿದೆ. ಸುಪ್ರೀಂ ಕೋರ್ಟ್ ತೀರ್ಪನ್ನು ಜಾರಿಗೊಳಿಸುತ್ತೇವೆ.
-ಕಡಕಂಪಳ್ಳಿ ಸುರೇಂದ್ರನ್, ದೇವಸ್ವಂ ಸಚಿವ

**

‘ಸ್ವಾಮಿಯ ಆಶೀರ್ವಾದ’
ಸುಪ್ರೀಂ ಕೋರ್ಟ್‌ನ ಇಂದಿನ ಆದೇಶವನ್ನು ಪದ್ಮನಾಭ ಸ್ವಾಮಿಯ ಆಶೀರ್ವಾದವೆಂದು ನಮ್ಮ ಕುಟುಂಬ ಮಾತ್ರವಲ್ಲ, ಇಡೀ ಭಕ್ತಗಣ ಪರಿಗಣಿಸುತ್ತದೆ. ಸಂಕಷ್ಟದ ಸಮಯದಲ್ಲಿ ನಮ್ಮ ಜತೆಗೆ ಬೆಂಬಲವಾಗಿ ನಿಂತ ಎಲ್ಲರಿಗೂ ಧನ್ಯವಾದ.
-ತಿರುವಾಂಕೂರು ರಾಜಮನೆತನ

**

ಇಷ್ಟೊಂದು ಸಂಪತ್ತು ಬಂದಿದ್ದು ಎಲ್ಲಿಂದ?
ವಿಷ್ಣುವಿನ ಭಕ್ತರಾದ ತಿರುವಾಂಕೂರು ರಾಜವಂಶಸ್ಥರು, ವಿಷ್ಣುವಿನ ಪ್ರತಿನಿಧಿಯಾಗಿಯೇ ರಾಜ್ಯದ ಆಡಳಿತ ನಡೆಸುವುದಾಗಿ ನಂಬಿ ನಡೆದವರು. ತೆರಿಗೆ ರೂಪದಲ್ಲಿ ಅವರು ಸಂಗ್ರಹಿಸಿದ ಐಶ್ವರ್ಯವನ್ನು ಅವರು ದೇವಸ್ಥಾನದ ನೆಲಮಾಳಿಗೆಯಲ್ಲಿ ಕೂಡಿಡುತ್ತಾ ಬಂದರು. ಆದ್ದರಿಂದಲೇ ಈ ದೇವಸ್ಥಾನದಲ್ಲಿ ಅಷ್ಟೊಂದು ಸಂಪತ್ತಿನ ಕ್ರೋಡೀಕರಣ ವಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ. ಸಂಪತ್ತಿನ ಮೂಲದ ಕುರಿತು ಸಂಶೋಧನೆಗಳು ನಡೆಯುತ್ತಲೇ ಇವೆ.

**

ಆಡಳಿತ ಯಾರದ್ದು?: ವ್ಯಾಜ್ಯದ ಆಗುಹೋಗುಗಳು
* 1949: ಪದ್ಮನಾಭಸ್ವಾಮಿ ದೇವಾಲಯವು ದೇಶಕ್ಕೆ ಸ್ವಾತಂತ್ರ್ಯ ಸಿಗುವ ಪೂರ್ವದಿಂದಲೂ ತಿರುವಾಂಕೂರು ರಾಜಮನೆತನದ ನಿಯಂತ್ರಣದಲ್ಲಿತ್ತು. 1949ರಲ್ಲಿ ಭಾರತ ಸರ್ಕಾರ ಹಾಗೂ ರಾಜಮನೆತನದ ನಡುವಿನ ಒಪ್ಪಂದ ಪ್ರಕಾರ, ತಿರುವಾಂಕೂರು ರಾಜಮನೆತನದ ನೇತೃತ್ವದ ಟ್ರಸ್ಟ್‌ನ ಸುಪರ್ದಿಗೆ ದೇವಸ್ಥಾನವನ್ನು ನೀಡಲಾಯಿತು

* 1956: ಕೇರಳ ರಾಜ್ಯ ಉದಯವಾದರೂ ಪದ್ಮನಾಭಸ್ವಾಮಿ ದೇವಸ್ಥಾನದ ಮೇಲೆ ರಾಜಮನೆತನದ ಹಿಡಿತ ಮುಂದುವರಿಯಿತು

* 1971: ರಾಜಮನೆತನಗಳಿಗೆ ಲಾಗಾಯ್ತಿನಿಂದ ಬಂದ ಹಲವು ವಿಧದ ಸ್ವಾಮಿತ್ವ ಹಾಗೂ ಸವಲತ್ತುಗಳನ್ನು 1971ರಲ್ಲಿ ಸಾಂವಿಧಾನಿಕ ತಿದ್ದುಪಡಿ ತಂದು ರದ್ದುಪಡಿಸಲಾಯಿತು. ಈ ನಡೆಯ ವಿರುದ್ಧ ರಾಜಮನೆತನಗಳು ಕೋರ್ಟ್‌ನಲ್ಲಿ ದಾವೆ ಹೂಡಿದ್ದವು

* 1991: ದೇವಸ್ಥಾನದ ಮೇಲೆ ಹಿಡಿತ ಹೊಂದಿದ್ದ ಚಿತ್ತಿರ ತಿರುನಾಳ್ ಬಾಲರಾಮ ವರ್ಮ 1991ರಲ್ಲಿ ನಿಧನರಾದರು (ಸ್ವಾಮಿತ್ವ ಹಾಗೂ ಸವಲತ್ತುಗಳನ್ನು ರದ್ದುಪಡಿಸುವ ಸರ್ಕಾರದ ತೀರ್ಮಾನವನ್ನು ಕೋರ್ಟ್‌ 1993ರಲ್ಲಿ ಎತ್ತಿ ಹಿಡಿಯಿತು). ಬಳಿಕ ಅವರ ಸಹೋದರ ಚಿತ್ತಿರ ತಿರುನಾಳ್ ಮಾರ್ತಾಂಡ ವರ್ಮ, ತಾವು ರಾಜಮನೆತನದ ಪ್ರತಿನಿಧಿ ಎಂದು ವಾದಿಸಿ, ದೇವಸ್ಥಾನದ ಮೇಲೆ ಕಾನೂನುಬದ್ಧ ಹಿಡಿತವನ್ನು ಬಯಸಿದರು. ಅವರ ಸ್ವಾಮಿತ್ವವನ್ನು ಪ್ರಶ್ನಿಸಿ ಕೋರ್ಟ್‌ನಲ್ಲಿ ಪ್ರಕರಣಗಳು ದಾಖಲಾಗಿದ್ದವು.

* 2009: ದೇವಾಲಯದ ನಿಯಂತ್ರಣವನ್ನು ರಾಜಮನೆತನದಿಂದ ಹಿಂಪಡೆದು ಸರ್ಕಾರಕ್ಕೆ ವಹಿಸಬೇಕು ಎಂದು ನಿವೃತ್ತ ಐಪಿಎಸ್ ಅಧಿಕಾರಿ ಟಿ.ಪಿ.ಸುಂದರರಾಜನ್ ಅವರು ಕೇರಳ ಹೈಕೋರ್ಟ್‌ನಲ್ಲಿ ಪಿಐಎಲ್‌ ಸಲ್ಲಿಸಿದರು

* 2011, ಜನವರಿ 31: ದೇವಾಲಯದ ನಿಯಂತ್ರಣವನ್ನು ತೆಗೆದುಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿದ ಕೇರಳ ಹೈಕೋರ್ಟ್‌. ಆದರೆ, ಸರ್ಕಾರಿ ಅಧಿಕಾರಿಗಳಾಗಲೀ ರಾಜಮನೆತನದವರಾಗಲೀ ಖಜಾನೆಗಳ ಬಾಗಿಲು ತೆಗೆಯದಂತೆ ನಿರ್ಬಂಧ ಹೇರಿತು

* ಮೇ 3: ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ರಾಜಮನೆತನದ ಸದಸ್ಯರು. ಹೈಕೋರ್ಟ್‌ ಆದೇಶಕ್ಕೆ ಸುಪ್ರಿಂ ಕೋರ್ಟ್‌ ತಡೆ ನೀಡಿತು. ದೇವಾಲಯದಲ್ಲಿ ಇರುವ ಎಲ್ಲಾ ವಸ್ತುಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳುವಂತೆ ಸುಪ್ರೀಂ ಕೋರ್ಟ್‌ ಆದೇಶಿಸಿತು. ಇದಕ್ಕಾಗಿ ವೀಕ್ಷಕರ ತಂಡವನ್ನೂ ರಚಿಸಿತು

* ಜುಲೈ 8: ಖಜಾನೆ ‘ಎ’ ಮತ್ತು ‘ಬಿ’ಯನ್ನು ತೆರೆಯದಂತೆ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿತು

* ಜುಲೈ 21: ‘ಬಿ’ ಖಜಾನೆಯ ಬಾಗಿಲನ್ನು ತೆರೆಯಬೇಕೇ ಬೇಡವೇ ಎಂಬುದರ ಬಗ್ಗೆ ಪರಿಶೀಲನೆ ನಡೆಸಿ, ವರದಿ ಸಲ್ಲಿಸಲು ತಜ್ಞರ ಸಮಿತಿಯನ್ನು ಸುಪ್ರೀಂ ಕೋರ್ಟ್‌ ರಚಿಸಿತು

* ಸೆಪ್ಟೆಂಬರ್ 22: ವರದಿ ಸಲ್ಲಿಸಿದ ತಜ್ಞರ ಸಮಿತಿ. ಬೇರೆ ಎಲ್ಲಾ ಖಜಾನೆ ಕೋಣೆಗಳಲ್ಲಿ ಇರುವ ವಸ್ತು ಮತ್ತು ಸಂಪತ್ತನ್ನು ಲೆಕ್ಕಕ್ಕೆ ತೆಗೆದುಕೊಂಡ ನಂತರ ‘ಬಿ’ ಖಜಾನೆಯ ಬಾಗಿಲನ್ನು ತೆಗೆಯುವ ಪ್ರಕ್ರಿಯೆ ಆರಂಭಿಸಬಹುದು ಎಂದು ಸುಪ್ರೀಂ ಕೋರ್ಟ್‌ ಹೇಳಿತು

* 2012ರ ಆಗಸ್ಟ್‌ 23: ಪ್ರಕರಣದಲ್ಲಿ ನ್ಯಾಯಾಲಯದ ಸಹಾಯಕರನ್ನಾಗಿ ಹಿರಿಯ ವಕೀಲ ಗೋಪಾಲ್ ಸುಬ್ರಮಣಿಯನ್ ಅವರನ್ನು ಸುಪ್ರೀಂ ಕೋರ್ಟ್‌ ನೇಮಕ ಮಾಡಿತು

* 2014ರ ಏಪ್ರಿಲ್ 15: ನ್ಯಾಯಾಲಯದ ಸಹಾಯಕರಿಂದ ವರದಿ ಸಲ್ಲಿಕೆಯಾಯಿತು

* ಏಪ್ರಿಲ್ 15: ದೇವಾಲಯದ ನಿರ್ವಹಣೆಗಾಗಿ ಆಡಳಿತ ಸಮಿತಿಯನ್ನು ಸುಪ್ರೀಂ ಕೋರ್ಟ್ ರಚಿಸಿತು

* 2017ರ ಜುಲೈ: ದೇವಾಲಯದ ಒಂದು ಖಜಾನೆ ಕೋಣೆಯಲ್ಲಿ ನಿಗೂಢ ಶಕ್ತಿ ಇದೆ ಎಂಬ ಪ್ರತಿಪಾದನೆಯನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್‌ ಒಪ್ಪಿಗೆ. ದೇವಾಲಯದ ಕೆಲವು ರಿಪೇರಿ ಕೆಲಸಗಳು, ಖಜಾನೆಗಳ ರಕ್ಷಣಾ ವ್ಯವಸ್ಥೆ ಬಲಪಡಿಸಲು ನಿರ್ದೇಶನವನ್ನೂ ನೀಡಿತು

* 2019ರ ಜನವರಿ–ಏಪ್ರಿಲ್: ಪ್ರಕರಣದ ಅಂತಿಮ ವಿಚಾರಣೆ ಅಂತ್ಯಗೊಂಡಿತು

* 2020ರ ಜುಲೈ 13: ತಿರುವಾಂಕೂರು ರಾಜಮನೆತನಕ್ಕೆ ದೇವಾಲಯದ ಆಡಳಿತದ ಅಧಿಕಾರ ಸೇರುತ್ತದೆ ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿತು

ಆಧಾರ: ಪಿಟಿಐ ಹಾಗೂ ಇತರ ಮೂಲಗಳು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು