ಮಂಗಳವಾರ, ಜನವರಿ 18, 2022
15 °C

ಆಳ–ಅಗಲ: ಪ್ರಧಾನಿ ರಕ್ಷಣೆ ಎಸ್‌ಪಿಜಿ ಹೊಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೇಶದ ಪ್ರಧಾನಿ, ಮಾಜಿ ಪ್ರಧಾನಿ ಮತ್ತು ಅವರ ಜತೆ ವಾಸಿಸುವ ಕುಟುಂಬದ ಸದಸ್ಯರ ರಕ್ಷಣೆಗಾಗಿ 1985ರಲ್ಲಿ ವಿಶೇಷ ರಕ್ಷಣಾ ದಳ ಅಥವಾ ಎಸ್‌ಪಿಜಿಯನ್ನು ಸ್ಥಾಪಿಸಲಾಯಿತು. ಕೇಂದ್ರ ಗೃಹ ಸಚಿವಾಲಯದ ಅಡಿ ಕಾರ್ಯನಿರ್ವಹಿಸುವ ಈ ದಳವು, ದೇಶದ ಅತ್ಯುನ್ನತ ಭದ್ರತಾ ತಂಡ ಎನಿಸಿದೆ.

ಗೃಹ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ಗಡಿ ಭದ್ರತಾ ಪಡೆ, ಕೇಂದ್ರೀಯ ಮೀಸಲು ಪೊಲೀಸ್ ಪಡೆ, ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ, ಇಂಡೊ–ಟಿಬೆಟಿಯನ್ ಗಡಿ ಪೊಲೀಸ್ ಪಡೆಗಳಲ್ಲಿರುವ ಉತ್ಕೃಷ್ಟ ಸಾಮರ್ಥ್ಯದ ಯೋಧರನ್ನು ಆಯ್ಕೆಮಾಡಲಾಗುತ್ತದೆ. ಕಠಿಣ ತರಬೇತಿಯ ನಂತರ ಅವರನ್ನು ಎಸ್‌ಪಿಜಿ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗುತ್ತದೆ. 

ಎಸ್‌ಪಿಜಿ ಯೋಧರು ತಾವು ರಕ್ಷಣೆಯ ಜವಾಬ್ದಾರಿ ಹೊತ್ತ ವ್ಯಕ್ತಿಯ ರಕ್ಷಣೆಗಾಗಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸಲು ಸಿದ್ಧರಿರಬೇಕು. ಈ ಕರ್ತವ್ಯಕ್ಕೆ ನಿಯೋಜಿತರಾದ ಯೋಧರು, ತಾವಾಗೇ ಕರ್ತವ್ಯದಿಂದ ಬಿಡುಗಡೆ ಪಡೆಯಲು ಅವಕಾಶವಿಲ್ಲ. ಎಸ್‌ಪಿಜಿ ಮಾತ್ರವೇ ಅವರನ್ನು ನಿಯೋಜನೆಯಿಂದ ಬಿಡುಗಡೆ ಮಾಡುವ ಅಧಿಕಾರ ಹೊಂದಿದೆ.

ಮಾಜಿ ಪ್ರಧಾನಿಗಳಿಗೂ ರಕ್ಷಣೆ ನೀಡುವ ಸಲುವಾಗಿ ಈ ಪಡೆಯನ್ನು ಸ್ಥಾಪಿಸಲಾಗಿತ್ತು. ಆದರೆ, 2019ರಲ್ಲಿ ಎಸ್‌ಪಿಜಿ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಅದರ ಪ್ರಕಾರ, ಪ್ರಧಾನಿಯು ಅಧಿಕಾರದಿಂದ ಕೆಳಗಿಳಿದ ಬಳಿಕ ಒಂದು ವರ್ಷ ಮಾತ್ರವೇ ಅವರಿಗೆ ಎಸ್‌ಪಿಜಿ ರಕ್ಷಣೆ ದೊರೆಯಲಿದೆ. ಪ್ರಧಾನಿಯ ದೈನಂದಿನ ಚಟುವಟಿಕೆಗಳು, ಅಧಿಕೃತ ಪ್ರವಾಸ ಮತ್ತು ಖಾಸಗಿ ಪ್ರವಾಸ, ವಿದೇಶಿ ಪ್ರವಾಸಗಳಲ್ಲಿ ರಕ್ಷಣೆ ನೀಡುವ ಹೊಣೆ ಈ ದಳದ್ದೇ ಆಗಿದೆ.

ಪ್ರಧಾನಿಯ ಪ್ರವಾಸದ ಯೋಜನೆಯನ್ನು ಸಿದ್ಧಪಡಿಸುವ ಜವಾಬ್ದಾರಿ ಈ ಪಡೆಯದ್ದೇ ಆಗಿದೆ. ಆದರೆ ಅದು ಗುಪ್ತಚರ ಇಲಾಖೆಯ ಜತೆಗೆ ಚರ್ಚಿಸಿ ಈ ಯೋಜನೆಗಳನ್ನು ಅಂತಿಮಗೊಳಿಸಬೇಕಾಗುತ್ತದೆ. ಈ ಯೋಜನೆಯ ಅನ್ವಯ ರಾಜ್ಯ ಪೊಲೀಸ್ ಇಲಾಖೆಯು ಕಾರ್ಯನಿರ್ವಹಿಸುತ್ತದೆ.

ಭದ್ರತೆಗೆ ಅಚ್ಚುಕಟ್ಟಿನ ವ್ಯವಸ್ಥೆ

ಪ್ರಧಾನಿಗೆ ಭದ್ರತೆ ಒದಗಿಸಲು ಅಚ್ಚುಕಟ್ಟಾದ, ಸಮಗ್ರ ಹಾಗೂ ಬಹುಸ್ತರದ ವ್ಯವಸ್ಥೆಯನ್ನೂ ರೂಪಿಸಲಾಗಿರುತ್ತದೆ. ವಿಶೇಷ ರಕ್ಷಣಾ ದಳವು ಪ್ರಧಾನಿಯ ಭದ್ರತೆಯ ಜವಾಬ್ದಾರಿ ಹೊತ್ತಿರುತ್ತದೆ. ಎಸ್‌ಪಿಜಿ ನೇತೃತ್ವದ ಭದ್ರತಾ ವ್ಯವಸ್ಥೆಯ ಅಡಿಯಲ್ಲಿ ಕೇಂದ್ರೀಯ ಭದ್ರತಾ ಪಡೆಗಳು ಹಾಗೂ ಆಯಾ ರಾಜ್ಯಗಳ ಪೊಲೀಸ್ ಪಡೆಗಳನ್ನು ಪ್ರಧಾನಿ ಭದ್ರತೆಗೆ ನಿಯೋಜಿಸಲಾಗುತ್ತದೆ. ಭದ್ರತೆ ಕುರಿತ ವಿಸ್ತೃತ ಮಾರ್ಗಸೂಚಿಗಳನ್ನು ಎಸ್‌ಪಿಜಿಯ ‘ಬ್ಲೂ ಬುಕ್’ ಒಳಗೊಂಡಿರುತ್ತದೆ.

ಪ್ರಧಾನಿಯವರ ಅಧಿಕೃತ ಭೇಟಿಗೆ ಮೂರು ದಿನ ಮುನ್ನ, ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸ್ಥಳದಲ್ಲಿ ಭದ್ರತೆಯನ್ನು ಕಲ್ಪಿಸಲು ನಿಯೋಜಿಸಲಾಗುವ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿ ಜೊತೆಗೆ ಎಸ್‌ಪಿಜಿ ‘ಮುಂಗಡ ಭದ್ರತಾ ಸಂಪರ್ಕ’ (ಎಎಸ್‌ಎಲ್) ಸಾಧಿಸುತ್ತದೆ. ಇದರಲ್ಲಿ ಎಸ್‌ಪಿಜಿ ಅಧಿಕಾರಿಗಳು, ರಾಜ್ಯದ ಗುಪ್ತಚರ ಸಂಸ್ಥೆಯ ಅಧಿಕಾರಿಗಳು, ರಾಜ್ಯದ ಪೊಲೀಸ್ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ಇರುತ್ತಾರೆ. 

ಪ್ರಧಾನಿ ಭೇಟಿ ಕುರಿತ ಪ್ರತಿಯೊಂದು ವಿಚಾರವೂ ಈ ಅಧಿಕಾರಿಗಳ ನಡುವೆ ಚರ್ಚೆಗೊಳಪಡುತ್ತದೆ. ಅಧಿಕಾರಿಗಳ ಈ ಸಭೆ ಮುಗಿದ ಬಳಿಕ, ಭಾಗಿಯಾಗಿದ್ದ ಎಲ್ಲರೂ ಸಹಿ ಮಾಡಿರುವ ಎಎಸ್‌ಎಲ್ ವರದಿ ಸಿದ್ಧವಾಗುತ್ತದೆ. ಈ ವರದಿಯ ಆಧಾರದ ಮೇಲೆ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗುತ್ತದೆ.

ಪ್ರಧಾನಿಯವರು ಹೇಗೆ (ವಾಯುಮಾರ್ಗ, ರಸ್ತೆ ಮಾರ್ಗ, ರೈಲ್ವೆ ಮಾರ್ಗ) ಆಗಮಿಸುತ್ತಾರೆ, ಅವರು ಆಗಮಿಸಿದ ಬಳಿಕ ಕಾರ್ಯಕ್ರಮ ಸ್ಥಳಕ್ಕೆ ಹೇಗೆ (ಹೆಲಿಕಾಪ್ಟರ್ ಅಥವಾ ರಸ್ತೆ ಮಾರ್ಗ) ತೆರಳುತ್ತಾರೆ ಎಂಬ ವಿಚಾರಗಳು ಸಭೆಯಲ್ಲಿ ಚರ್ಚೆಯಾಗುತ್ತವೆ. ಕೇಂದ್ರೀಯ ಗು‌ಪ್ತಚರ ಇಲಾಖೆ ಹಾಗೂ ರಾಜ್ಯಗಳ ಹಾಗೂ ಸ್ಥಳೀಯ ಗುಪ್ತಚರ ಮಾಹಿತಿಗಳನ್ನು ಸಭೆಯಲ್ಲಿ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. 

ಕಾರ್ಯಕ್ರಮ ಸ್ಥಳದ ಪ್ರವೇಶ ದ್ವಾರ, ನಿರ್ಗಮನ ದ್ವಾರ, ಕಾರ್ಯಕ್ರಮಕ್ಕೆ ಬರುವವರು, ಸ್ಥಳದಲ್ಲಿ ಮೆಟಲ್ ಡಿಟೆಕ್ಟರ್ ಅಳವಡಿಕೆ ಹಾಗೂ ವೇದಿಕೆಯ ಗಟ್ಟಿತನದ ಬಗ್ಗೆ ಸಮಗ್ರ ಚರ್ಚೆಯಾಗುತ್ತದೆ. ಕಾರ್ಯಕ್ರಮಗಳಲ್ಲಿ ವೇದಿಕೆಗಳು ಕುಸಿದ ಪ್ರಸಂಗಗಳು ನಡೆದಿವೆ. ಕಾರ್ಯಕ್ರಮ ಸ್ಥಳದ ಅಗ್ನಿ ಸುರಕ್ಷತೆ ಹಾಗೂ ಕಾರ್ಯಕ್ರಮ ನಡೆಯುವ ದಿನದ ಹವಾಮಾನ ವರದಿಯನ್ನೂ ಪರಿಶೀಲಿಸಲಾಗುತ್ತದೆ.

ಒಂದು ವೇಳೆ ಪ್ರಧಾನಿಯವರು ದೋಣಿಯಲ್ಲಿ ಪ್ರಯಾಣಿಸಬೇಕು ಎಂದಿದ್ದರೆ, ದೋಣಿಯ ಸುರಕ್ಷತೆ ಹಾಗೂ ಕಾರ್ಯಕ್ಷಮತೆಯನ್ನು ಪರೀಕ್ಷಿಸಲಾಗುತ್ತದೆ. ಪ್ರಧಾನಿ ಸಂಚರಿಸುವ ಜಾಗದಲ್ಲಿ ಪೊದೆಗಳು ಬೆಳೆದಿದ್ದಲ್ಲಿ, ಅದನ್ನು ಸವರಲು ಕ್ರಮ ತೆಗೆದುಕೊಳ್ಳಲಾಗುತ್ತದೆ. ರಸ್ತೆಗಳು ಕಿರಿದಾಗಿದ್ದರೆ, ಮಾರ್ಗದರ್ಶನ ನೀಡಲು ಅಲ್ಲಿ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ.

ದಿಢೀರ್ ಬದಲಾದರೆ...?

ಕಾರ್ಯಕ್ರಮದಲ್ಲಿ ದಿಢೀರ್ ಬದಲಾವಣೆ ಉಂಟಾದರೆ, ಮುಂಚಿತವಾಗಿ ಅದಕ್ಕೂ ತಯಾರಿ ಮಾಡಲಾಗಿರುತ್ತದೆ. ಪ್ರಧಾನಿಯವರು ವಿಮಾನ ಅಥವಾ ಹೆಲಿಕಾಪ್ಟರ್ ಮೂಲಕ ಕಾರ್ಯಕ್ರಮ ಸ್ಥಳ ತಲುಪಲು ಹವಾಮಾನ ಅಡ್ಡಿಯಾದರೆ, ರಸ್ತೆ ಮಾರ್ಗವನ್ನು ಮೊದಲೇ ಆಯ್ಕೆ ಮಾಡಿಟ್ಟಿರಲಾಗುತ್ತದೆ. ರಸ್ತೆ ಮಾರ್ಗವು ಸುರಕ್ಷಿತವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲಾಗುತ್ತದೆ. ಒಂದು ವೇಳೆ ಪ್ರಧಾನಿಯವರು ವಾಯುಮಾರ್ಗದಲ್ಲಿ ಸಂಚರಿಸಿದರೂ, ಪರ್ಯಾಯ ಎಂದು ಗುರುತಿಸಲಾಗಿರುವ ರಸ್ತೆ ಮಾರ್ಗದಲ್ಲಿ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ಅಂದರೆ, ಕಾರ್ಯಕ್ರಮ ದಿಢೀರ್ ಬದಲಾದರೆ, ಕೊನೆಯ ಕ್ಷಣದಲ್ಲಿ ಎಲ್ಲ ಭದ್ರತಾ ಏರ್ಪಾಡು ಮಾಡಿಕೊಳ್ಳಲು ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಮೊದಲೇ ಸಿದ್ಧತೆ ಮಾಡಿಕೊಳ್ಳಲಾಗಿರುತ್ತದೆ. 

ಹೆಲಿಕಾಪ್ಟರ್ ಹಾರಾಡಬೇಕಾದರೆ, 1,000 ಮೀಟರ್ ದೂರದ ದಾರಿಯು ಪೈಲಟ್‌ಗೆ ಕಾಣುವಂತಿರಬೇಕು. ಕೆಲವೊಮ್ಮೆ ಇದು ಸಾಧ್ಯವಾಗದಿದ್ದಾಗ, ಪರ್ಯಾಯವಾಗಿ ರಸ್ತೆ ಮಾರ್ಗದಲ್ಲಿ ಪ್ರಧಾನಿ ಸಂಚರಿಸಿದ ಉದಾಹರಣೆಗಳಿವೆ. ಚಳಿಗಾಲದ ಸಮಯದಲ್ಲಿ ಮಂಜು ಮುಸುಕುವುದರಿಂದ ಈ ರೀತಿಯ ವಿದ್ಯಮಾನಗಳು ಸಹಜವಾಗಿ ನಡೆಯುತ್ತವೆ. ಗೊತ್ತುಪಡಿಸಿದ ಮಾರ್ಗದಲ್ಲಿ ತೊಂದರೆಗಳಿವೆ ಎಂದು ಗೊತ್ತಾದರೆ, ಪ್ರವಾಸವನ್ನು ರದ್ದುಪಡಿಸಲಾಗುತ್ತದೆ.

ಭದ್ರತೆಗೆ ಇರುವ ಬೆದರಿಕೆಗಳ ಬಗ್ಗೆ ಮಾಹಿತಿ ನೀಡುವುದು ಕೇಂದ್ರೀಯ ಗುಪ್ತಚರ ಸಂಸ್ಥೆಗಳ ಜವಾಬ್ದಾರಿ. ರಾಜ್ಯ ಪೊಲೀಸರು ಸ್ಥಳೀಯವಾಗಿ ಭದ್ರತಾ ವ್ಯವಸ್ಥೆ ಕಲ್ಪಿಸಬೇಕು. ಎಸ್‌ಪಿಜಿ, ಅಂತಿಮವಾಗಿ ಪ್ರಧಾನಿ ಭದ್ರತೆ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತದೆ. ಸ್ಥಳೀಯ ಪೊಲೀಸರು ಒಪ್ಪಿಗೆ ನೀಡುವವರೆಗೂ ಪ್ರಧಾನಿ ಸಂಚಾರಕ್ಕೆ ಎಸ್‌ಪಿಜಿ ಅನುಮತಿ ನೀಡುವುದಿಲ್ಲ. ಮೂಲಗಳ ಪ್ರಕಾರ, ರಾಜ್ಯ ಪೊಲೀಸರು ಸಂಭಾವ್ಯ ವಿಧ್ವಂಸಕ ಕೃತ್ಯ ತಡೆಯಲು ಬಿಗಿ ತಪಾಸಣೆಗಳನ್ನು ನಡೆಸಬೇಕು.

ಪ್ರಧಾನಿ ಅವರ ವಾಹನ ಹಾಗೂ ಬೆಂಗಾವಲು ಪಡೆಯನ್ನು ರಾಜ್ಯ ಪೊಲೀಸರ ವಾಹನವು ಮುನ್ನಡೆಸಬೇಕು. ಆಯಾ ಜಿಲ್ಲೆಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದರ್ಜೆಯ ಅಧಿಕಾರಿಯು ಜತೆಗಿರಬೇಕು. ರ‍್ಯಾಲಿ, ಸಮಾವೇಶ ಅಥವಾ ರೋಡ್‌ ಶೋ ವೇಳೆ ಜನರು ಪ್ರಧಾನಿಯನ್ನು ಸುತ್ತುವರಿಯುವ ಸಾಧ್ಯತೆಯಿರುತ್ತದೆ. ಈ ವೇಳೆ ಭದ್ರತಾ ಲೋಪ ಆಗದಂತೆ ಎಚ್ಚರಿಕೆ ವಹಿಸಲಾಗುತ್ತದೆ. ಎಸ್‌ಪಿ ದರ್ಜೆಯ, ಸಮವಸ್ತ್ರದಲ್ಲಿ ಇಲ್ಲದ ಸಿಬ್ಬಂದಿಯನ್ನು ಈ ವೇಳೆ ನಿಯೋಜಿಸಲಾಗುತ್ತದೆ. ಒಂದು ವೇಳೆ ಪ್ರಧಾನಿಯು ಶಿಷ್ಟಾಚಾರವನ್ನು ಬದಿಗೊತ್ತಿ ಜನರ ಹತ್ತಿರಕ್ಕೆ ಹೋಗಲು ಇಚ್ಛಿಸಬಹುದು. ಆದರೆ, ಅವರ ಭದ್ರತೆಗೆ ಅಪಾಯವಿದೆ ಎಂದು ಎಸ್‌ಪಿಜಿ ಪರಿಗಣಿಸಿದರೆ, ಪ್ರಧಾನಿ ಅವರನ್ನು ತಡೆಯಬಹುದು.

ಏನಿದು ‘ಬ್ಲೂ ಬುಕ್’

ಬ್ಲೂ ಬುಕ್ ಎಂಬುದು ಗಣ್ಯರ (ವಿವಿಐಪಿ) ಭದ್ರತೆ ಕುರಿತ ಮಾರ್ಗಸೂಚಿಗಳ ಸಂಗ್ರಹ. ಪ್ರಧಾನಿ ಅವರ ಭದ್ರತೆಯನ್ನು ಹೇಗೆ ಕೈಗೊಳ್ಳಬೇಕು ಎಂಬ ನಿಯಮಗಳನ್ನು ಬ್ಲೂ ಬುಕ್‌ನಲ್ಲಿ ನಮೂದಿಸಲಾಗಿರುತ್ತದೆ. ಈ ನಿಯಮಗಳನ್ನು ಜಾರಿಗೊಳಿಸುವ ಹೊಣೆಯು, ಪ್ರಧಾನಿ ರಕ್ಷಣೆಯ ಜವಾಬ್ದಾರಿ ಹೊತ್ತಿರುವ ವಿಶೇಷ ಭದ್ರತಾ ದಳದ್ದಾಗಿರುತ್ತದೆ. ಯಾವ ಶಿಷ್ಟಾಚಾರಗಳನ್ನು ಪಾಲಿಸಬೇಕು, ಯಾವ ಭದ್ರತಾ ನಿಯಮಗಳನ್ನು ಪಾಲಿಸಬೇಕು ಎಂಬ ಸಮಗ್ರ ಮಾಹಿತಿ ಇದರಲ್ಲಿ ಅಡಕವಾಗಿರುತ್ತದೆ.

ಪ್ರಧಾನಿಯು ಸಭೆಯಲ್ಲಿ ಭಾಗವಹಿಸಿದರೆ, ರಸ್ತೆಯಲ್ಲಿ ಪ್ರಯಾಣಿಸಿದರೆ, ವಿಮಾನದಲ್ಲಿ ಪ್ರಯಾಣಿಸಿದರೆ, ಏನೇನು ಭದ್ರತೆ ಕೈಗೊಳ್ಳಬೇಕು, ಎಷ್ಟು ಸಿಬ್ಬಂದಿ ನಿಯೋಜಿಸಬೇಕು, ಯಾವ ವಾಹನಗಳನ್ನು ಬಳಸಬೇಕು ಎಂದು ಪ್ರತ್ಯೇಕ ಮಾರ್ಗಸೂಚಿಗಳನ್ನು ರಚಿಸಲಾಗಿರುತ್ತದೆ. ಈ ಮಾಹಿತಿಯ ಅನ್ವಯ ಎಸ್‌ಪಿಜಿ ಮಾತ್ರವಲ್ಲ, ರಾಜ್ಯ ಪೊಲೀಸರು ನಿಯಮಗಳನ್ನು ಪಾಲನೆ ಮಾಡಬೇಕು. 

ಪ್ರಧಾನಿ ಓಡಾಟಕ್ಕೆ ಅತ್ಯಂತ ವ್ಯವಸ್ಥಿತ ‘ಕಾರ್‌ಕೇಡ್‌’

ದೇಶದ ಪ್ರಧಾನಿಯ ಬೇರೆ ರಾಜ್ಯಗಳಿಗೆ ಅಧಿಕೃತ ಮತ್ತು ಖಾಸಗಿ ಭೇಟಿ ನೀಡಿದಾಗ ಅವರ ವಾಹನದ ಬಳಗ (ಕಾರ್‌ಕೇಡ್‌) ಹೇಗಿರಬೇಕು ಎಂಬುದನ್ನು ಕೇಂದ್ರ ಗೃಹ ಸಚಿವಾಲಯವು ನಿಗದಿ ಮಾಡಿದೆ. ಇದಕ್ಕಾಗಿ ಗೃಹ ಸಚಿವಾಲಯವು, ‘ಪ್ರವಾಸದ ವೇಳೆ ಪ್ರಧಾನಿಯ ರಕ್ಷಣೆಗಾಗಿ ನಿಯಮಗಳು ಮತ್ತು ನಿರ್ದೇಶನಗಳು’ ಎಂಬ ನಿಯಮಾವಳಿಗಳನ್ನು ರಚಿಸಿದೆ. ಇದು ದೇಶದ ಎಲ್ಲಾ ರಾಜ್ಯಗಳಿಗೂ ಅನ್ವಯವಾಗುತ್ತದೆ. ಪ್ರಧಾನಿ ಒಬ್ಬರೇ ಭೇಟಿ ನೀಡಿದಾಗ ಅವರ ಕಾರ್‌ಕೇಡ್‌ನ ಒಟ್ಟು ವಾಹನಗಳ ಸಂಖ್ಯೆ 8ನ್ನು ಮೀರಬಾರದು ಎಂದು ಈ ನಿಯಮಗಳು ಹೇಳುತ್ತವೆ. ಆದರೆ ಪ್ರಧಾನಿಯ ಸಂಗಾತಿ, ವಿದೇಶಿ ಗಣ್ಯರು ಜತೆಗಿದ್ದಾಗ ವಾಹನಗಳ ಸಂಖ್ಯೆ ಹೆಚ್ಚಿಸಬಹುದು ಎಂದು ಈ ನಿಯಮಗಳಲ್ಲಿ ವಿವರಿಸಲಾಗಿದೆ

ವಾರ್ನಿಂಗ್‌/ಪೈಲಟ್‌ ಕಾರ್‌: ಇದು ಕಾರ್‌ಕೇಡ್‌ನ ಮುಂಭಾಗದಲ್ಲಿ ಇರುತ್ತದೆ. ಕಾರ್‌ಕೇಡ್‌ ಆಗಮಿಸುತ್ತಿರುವುದರ ಮುನ್ಸೂಚನೆಯಾಗಿ ಈ ಕಾರು ಸೈರನ್ ಮೊಳಗಿಸುತ್ತಾ ಹೋಗುತ್ತದೆ

ಟೆಕ್ನಿಕಲ್ ಕಾರ್: ಇದು ನೆಟ್‌ವರ್ಕ್ ಜಾಮರ್‌, ಮತ್ತಿತರ ತಾಂತ್ರಿಕ ಉಪಕರಣಗಳನ್ನು ಹೊಂದಿರುತ್ತದೆ

ರೈಡರ್ಸ್‌: ಇದು ಪ್ರಧಾನಿ ಸಾಗುವ ಕಾರಿನ ಮುಂಬದಿ, ಎಡಬದಿ, ಬಲಬದಿ ಮತ್ತು ಹಿಂಬದಿಯಲ್ಲಿ ಇರುತ್ತವೆ. ಪ್ರಧಾನಿ ಸಾಗುತ್ತಿರುವ ಫ್ಲ್ಯಾಗ್‌ ಕಾರ್‌ಗೆ ಎಲ್ಲಾ ಬದಿಯಿಂದಲೂ ಇವು ಬೆಂಗಾವಲು ನೀಡುತ್ತವೆ. ಇವುಗಳ ಸಂಖ್ಯೆ 2ರಿಂದ 6ರವರೆಗೂ ಇರುತ್ತವೆ

ಫ್ಲ್ಯಾಗ್‌ ಕಾರ್‌: ಇದು ಪ್ರಧಾನಿ ಸಾಗುವ ಕಾರು. ಇದನ್ನು ಸ್ಟೇಟ್‌ ಕಾರ್, ಫ್ಲ್ಯಾಗ್‌ ಕಾರ್‌ ಎಂದು ಕರೆಯಲಾಗುತ್ತದೆ. ವಿದೇಶಿ ಗಣ್ಯರ ಭೇಟಿಯ ಸಂದರ್ಭದಲ್ಲಿ, ಅವರೂ ಪ್ರಧಾನಿಯ ಜತೆಗೆ ಈ ಕಾರಿನಲ್ಲೇ ಸಾಗುವ ಸಾಧ್ಯತೆ ಇರುತ್ತದೆ

ಅಂಬುಲೆನ್ಸ್: ಇದು ತುರ್ತು ಸಂದರ್ಭದಲ್ಲಿ ಪ್ರಧಾನಿಗೆ ಅಗತ್ಯ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಇದು ಅತ್ಯಾಧುನಿಕ ವೈದ್ಯಕೀಯ ಸಲಕರಣೆಗಳನ್ನು ಹೊಂದಿರುತ್ತದೆ

ಟೇಲ್‌ ಕಾರ್: ಇದು ಕಾರ್‌ಕೇಡ್‌ನ ಅತ್ಯಂತ ಕೊನೆಯ ಕಾರ್‌ ಆಗಿರುತ್ತದೆ. ಕಾರ್‌ಕೇಡ್‌ನ ಎಲ್ಲಾ ವಾಹನಗಳು ಮುಂದೆ ಸಾಗಿವೆ ಎಂಬುದನ್ನು ಖಚಿತಪಡಿಸಿಕೊಂಡ ನಂತರವಷ್ಟೇ ಈ ಕಾರು ಮುಂದುವರಿಯಬೇಕು

* ರಾಜ್ಯಗಳ ಪ್ರವಾಸದ ವೇಳೆ ಈ ಎಲ್ಲಾ ಕಾರುಗಳನ್ನು ರಾಜ್ಯ ಸರ್ಕಾರವೇ ಒದಗಿಸಬೇಕು

* ಈ ಎಲ್ಲಾ ವಾಹನಗಳ ಚಾಲಕರು ಕರ್ತವ್ಯ ಮುಗಿಯುವವರೆಗೆ ಕಾರಿನಿಂದ ಇಳಿಯಬಾರದು

* ಕಾರ್‌ಕೇಡ್‌ ಸಾಗಲಿರುವ ಮಾರ್ಗದಲ್ಲಿ ಸಾರ್ವಜನಿಕ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಿದ ನಂತರವಷ್ಟೇ ಕಾರ್‌ಕೇಡ್‌ ಪ್ರಯಾಣ ಆರಂಭಿಸಬೇಕು

* ಟೇಲ್‌ಕಾರ್‌ನಿಂದ ಸಂದೇಶ ಬಂದ ನಂತರವಷ್ಟೇ ಸಾರ್ವಜನಿಕ ಸಂಚಾರಕ್ಕೆ ಅನುವು ಮಾಡಿಕೊಡಬಹುದು

* ಈ ಕಾರ್‌ಕೇಡ್‌ನಲ್ಲಿ ಹೆಚ್ಚುವರಿ ಫ್ಲ್ಯಾಗ್‌ಕಾರ್‌ ಇರಬೇಕು. ಮುಖ್ಯ ಫ್ಲ್ಯಾಗ್‌ಕಾರ್‌ ಕೆಟ್ಟು ನಿಂತಾಗ, ಅಫಘಾತವಾದಾಗ ಹೆಚ್ಚುವರಿ ಫ್ಲ್ಯಾಗ್‌ಕಾರ್‌ ಅನ್ನು ಬಳಸಲಾಗುತ್ತದೆ

* ಕಾರ್‌ಕೇಡ್‌ನಲ್ಲಿ ಎಷ್ಟು ಕಾರುಗಳು ಇರಬೇಕು, ಅವು ಯಾವ ಮಾರ್ಗದಲ್ಲಿ ಸಂಚರಿಸುತ್ತವೆ ಎಂಬುದನ್ನು ಎಸ್‌ಪಿಜಿ ಮತ್ತು ಗುಪ್ತಚರ ಇಲಾಖೆ ನಿರ್ಧರಿಸುತ್ತದೆ. ಈ ಎರಡೂ ಏಜೆನ್ಸಿಗಳು ನೀಡುವ ನಿರ್ದೇಶನವನ್ನು ರಾಜ್ಯ ಪೊಲೀಸ್ ಇಲಾಖೆ ಅನುಷ್ಠಾನಕ್ಕೆ ತರುತ್ತದೆ

ಆಧಾರ: ಎಸ್‌ಪಿಜಿ ಕಾಯ್ದೆ 1988, ಎಸ್‌ಪಿಜಿ (ತಿದ್ದುಪಡಿ) ಕಾಯ್ದೆ– 1991, 1994, 1999, 2019

– ಜಯಸಿಂಹ ಆರ್., ಅಮೃತ್‌ ಕಿರಣ್‌ ಬಿ.ಎಂ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು