ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
EXPLAINER | ವಿಕಿಲೀಕ್ಸ್‌ನ ಜೂಲಿಯನ್ ಅಸಾಂಜ್‌ ಅವರಿಗೆ ಇಷ್ಟೊಂದು ಸಂಕಷ್ಟವೇಕೆ? 
EXPLAINER | ವಿಕಿಲೀಕ್ಸ್‌ನ ಜೂಲಿಯನ್ ಅಸಾಂಜ್‌ ಅವರಿಗೆ ಇಷ್ಟೊಂದು ಸಂಕಷ್ಟವೇಕೆ? 
Published 26 ಜೂನ್ 2024, 14:32 IST
Last Updated 26 ಜೂನ್ 2024, 14:32 IST
ಅಕ್ಷರ ಗಾತ್ರ

ಜಗತ್ತಿನಾದ್ಯಂತ ಹಲವು ಸರ್ಕಾರಗಳ ಸ್ಫೋಟಕ ಮಾಹಿತಿಗಳನ್ನು ಬಹಿರಂಗ ಪಡಿಸುವ ಮೂಲಕ ಪ್ರಮುಖ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದ ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್‌ ಅಸಾಂಜ್ ಅವರು ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಸುಮಾರು 14 ವರ್ಷಗಳ ಸುದೀರ್ಘ ಕಾನೂನು ಸಂಘರ್ಷ ಎದುರಿಸಿ, ಕಡೆಗೂ ಜೈಲಿನಿಂದ ಬಿಡುಗಡೆಗೊಂಡಿರುವ ಅವರು ತಮ್ಮ ಸ್ವದೇಶ ಆಸ್ಟ್ರೇಲಿಯಾಗೆ ಬುಧವಾರ ಮರಳಿದ್ದಾರೆ.

ಏನಿದು ವಿಕಿಲೀಕ್ಸ್‌...?

ವಿಕಿಲೀಕ್ಸ್ ಹೇಳಿಕೊಂಡಿರುವಂತೆ ಯುದ್ಧ, ಬೇಹುಗಾರಿಕೆ ಹಾಗೂ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ನಿರ್ಬಂಧಿತ ಮಾಹಿತಿಯನ್ನು ವಿಶ್ಲೇಷಿಸಿ, ಪ್ರಕಟಿಸುವ ಬಹುರಾಷ್ಟ್ರೀಯ ಮಾಧ್ಯಮ ಸಂಸ್ಥೆ.

2006ರಲ್ಲಿ ಅಸಾಂಜೆ ಅವರು ಇದನ್ನು ಸ್ಥಾಪಿಸಿದರು. ವಿಕಿಲೀಕ್ಸ್‌ನ ಸಹ ಪ್ರಕಾಶಕರ, ಶೋಧಕರ ಹಾಗೂ ಹೂಡಿಕೆದಾರರ ಪಟ್ಟಿಯಲ್ಲಿ ಜಗತ್ತಿನ ಹಲವು ಮಾಧ್ಯಮ ಸಂಸ್ಥೆಗಳ ಹೆಸರುಗಳಿವೆ. ಸ್ವಯಂಸೇವಾ ಸಂಸ್ಥೆಯಾಗಿರುವ ವಿಕಿಲೀಕ್ಸ್‌, ಸಾರ್ಜನಿಕರ ದೇಣಿಗೆಯಿಂದ ನಡೆಸಲಾಗುತ್ತಿದೆ ಎಂದು ಹೇಳಿದೆ.

‘ಜಗತ್ತಿನ್ನೆಲ್ಲೆಡೆ ಆಡಳಿತ ನಡೆಸುತ್ತಿರುವವರ ವಿರುದ್ಧದ ದಾಖಲೆಗಳ ದೊಡ್ಡ ಭಂಡಾರವೇ ವಿಕಿಲೀಕ್ಸ್ ಬಳಿ ಇದೆ. ಇಂಥ ದಾಖಲೆಗಳ ಸ್ವೀಕಾರ, ವಿಶ್ಲೇಷಣೆ ಹಾಗೂ ಅವುಗಳಿಗೆ ಹೆಚ್ಚು ಪ್ರಚಾರ ಕೊಡುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ’ ಎಂದು ಅಸಾಂಜ್ ಅವರು ಜರ್ಮನಿಯ ಪತ್ರಿಕೆಗೆ 2015ರಲ್ಲಿ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. 

ಇರಾಕ್ ಮತ್ತು ಆಫ್ಗಾನಿಸ್ತಾನದಲ್ಲಿ ಅಮೆರಿಕ ನಡೆಸಿದ ಸೇನಾ ಕಾರ್ಯಾಚರಣೆಯ ವಿವಾದಿತ ದಾಖಲೆ ಮತ್ತು ವಿಡಿಯೊವನ್ನು ವಿಕಿಲೀಕ್ಸ್ ಬಹಿರಂಗಪಡಿಸಿತ್ತು. ಇದರಲ್ಲಿ ಅಮೆರಿಕ ವಶದಲ್ಲಿದ್ದ ಕೈದಿಗಳನ್ನು ಹಿಂಸಿಸಿದ ವರದಿ ಇತ್ತು. ಮಾನವ ಹಕ್ಕುಗಳ ಉಲ್ಲಂಘನೆ ಹಾಗೂ ನಾಗರಿಕರ ಸಾವಿನ ಕುರಿತೂ ಮಾಹಿತಿ ಹೊಂದಿತ್ತು.

ಈ ವರದಿಯನ್ನು ನಿರಾಕರಿಸಿದ್ದ ಅಮೆರಿಕದ ಅಧಿಕಾರಿಗಳು, ವಿಕಿಲೀಕ್ಸ್ ಸಂಸ್ಥೆಯು ದೇಶದ ಭದ್ರತೆಗೆ ಹಾನಿ ಮಾಡಿದೆ ಹಾಗೂ ಏಜೆಂಟರ ಬದುಕನ್ನೇ ಗಂಡಾಂತರಕ್ಕೆ ಸಿಲುಕಿಸಿದೆ ಎಂದು ಆರೋಪಿಸಿದ್ದರು. ಅಸಾಂಜ್ ಅವರು ವಾಕ್ ಸ್ವಾತಂತ್ರ್ಯವನ್ನು ಎತ್ತಿ ಹಿಡಿದಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳುವುದೆಂದರೆ ಪತ್ರಿಕೋದ್ಯಮದ ಮೇಲೆ ಹಲ್ಲೆ ನಡೆಸಿದಂತೆ ಎಂದು ಬೆಂಬಲಿಗರು ಹೇಳಿದ್ದರು.

ವಿಕಿಲೀಕ್ಸ್ ಪ್ರಕಟಿಸಿದ ಮಾಹಿತಿ ಯಾವುದು..?

2007ರಲ್ಲಿ ಇರಾಕ್‌ನ ರಾಜಧಾನಿ ಬಾಗ್ದಾದ್‌ ಮೇಲೆ ಅಮೆರಿಕದ ಹೆಲಿಕಾಪ್ಟರ್‌ಗಳು ನಡೆಸಿದ ದಾಳಿಯಲ್ಲಿ ಹತ್ತಾರು ಜನರು ಮೃತಪಟ್ಟ ದೃಶ್ಯವುಳ್ಳ ವಿಡಿಯೊವನ್ನು ವಿಕಿಲೀಕ್ಸ್ 2010ರ ಏಪ್ರಿಲ್‌ನಲ್ಲಿ ಬಿಡುಗಡೆ ಮಾಡಿತ್ತು. ಹೀಗೆ ಮೃತಪಟ್ಟವರಲ್ಲಿ ರಾಯಿಟರ್ಸ್ ಸುದ್ದಿ ಸಂಸ್ಥೆಯ ಇಬ್ಬರು ಉದ್ಯೋಗಿಗಳೂ ಸೇರಿದ್ದರು. ಇಂಥ ಸೂಕ್ಷ್ಮ ವಿಷಯವುಳ್ಳ ವಿಡಿಯೊವನ್ನು ಬಿಡುಗಡೆ ಮಾಡಿದ ಅಮೆರಿಕದ ಗುಪ್ತಚರ ವಿಭಾಗದ ವಿಶ್ಲೇಷಕ ಚೆಲ್ಸೀ ಮ್ಯಾನ್ನಿಂಗ್‌ ಅವರನ್ನು ಬಂಧಿಸಲಾಗಿತ್ತು. ನಂತರ 2018ರಲ್ಲಿ ಇವರಿಗೆ ಅಂದಿನ ಅಧ್ಯಕ್ಷ ಬರಾಕ್ ಒಬಾಮ ಅವರು ಕ್ಷಮಾದಾನ ನೀಡಿದರು. ಆದರೆ ಅಲ್ಲಿಯವರೆಗೂ ಚೆಲ್ಸೀ ಏಳು ವರ್ಷಗಳ ಕಾಲ ಸೇನಾ ಸೆರೆಮನೆಯಲ್ಲಿ ಬಂಧಿಯಾಗಿದ್ದರು.

ಇದಾಗಿ ಮೂರು ತಿಂಗಳ ನಂತರ, ಆಫ್ಗಾನಿಸ್ತಾನ ಯುದ್ಧ ಹಾಗೂ ಅಮೆರಿಕ ಸೇನೆಗೆ ಸಂಬಂಧಿಸಿದ 91 ಸಾವಿರಕ್ಕೂ ಅಧಿಕ ದಾಖಲೆಗಳನ್ನು ವಿಕಿಲೀಕ್ಸ್ ಬಿಡುಗಡೆ ಮಾಡಿತು. 2004ರಿಂದ 2009ರವರೆಗೆ ಇರಾಕ್‌ನಲ್ಲಿ ಅಮೆರಿಕ ನಡೆಸಿದ ಸೇನಾ ಕಾರ್ಯಾಚರಣೆಗೆ ಸಂಬಂಧಿಸಿದ 4 ಲಕ್ಷದಷ್ಟು ದಾಖಲೆಗಳನ್ನು ವಿಕಿಲೀಕ್ಸ್ ಬಿಡುಗಡೆ ಮಾಡಿತು. ಅಮೆರಿಕದ ಸೇನಾ ಇತಿಹಾಸದಲ್ಲೇ ಇಷ್ಟು ದೊಡ್ಡ ಮಟ್ಟದ ಮಾಹಿತಿ ಸೋರಿಕೆಯಾಗಿದ್ದು ವಿಕಿಲೀಕ್ಸ್ ಮೂಲಕವೇ.

ಇದಾದ ನಂತರ ಅಮೆರಿಕದ ರಾಜತಾಂತ್ರಿಕ ವ್ಯವಹಾರಗಳಿಗೆ ಸಂಬಂಧಿಸಿದ ನೂರಾರು ದಾಖಲೆಗಳನ್ನು ವಿಕಿಲೀಕ್ಸ್ ಬಹಿರಂಗಗೊಳಿಸಿತು. ಇದರಲ್ಲಿ ಭದ್ರತೆಗೆ ಅಪಾಯ ತಂದೊಡ್ಡಬಹುದಾದ ವಿದೇಶಗಳ ಹಲವು ನಾಯಕರ ಅಭಿಪ್ರಾಯಗಳು ಇದ್ದವು. ಪ್ರಮುಖವಾಗಿ ಸೌದಿ ಅರೇಬಿಯಾದ ಮಾಜಿ ದೊರೆ ಅಬ್ದುಲ್ಲಾ ಅವರು ಇರಾನ್‌ನ ಪರಮಾಣು ಕಾರ್ಯಕ್ರಮದ ಮೇಲೆ ದಾಳಿ ನಡೆಸುವಂತೆ ಹಾಗೂ ಅಮೆರಿಕದ ಮೇಲೆ ಸೈಬರ್ ದಾಳಿ ನಡೆಸುವ ಕುರಿತು ಚೀನಾಕ್ಕೆ ನಿರ್ದೇಶನ ನೀಡಿದ ಮಾಹಿತಿಯನ್ನೂ ವಿಕಿಲೀಕ್ಸ್ ಬಹಿರಂಗಗೊಳಿಸಿತ್ತು.

ಈ ದಾಖಲೆಗಳು ಬಹಿರಂಗಗೊಳ್ಳುವ ಹೊತ್ತಿಗೆ ಅಸಾಂಜ್ ವಿರುದ್ಧ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಹಾಗೂ ಕಾನೂನುಬಾಹಿರ ಬಲವಂತ ಆರೋಪಗಳಡಿ ವಶಕ್ಕೆ ಪಡೆಯಲು ಸ್ವೀಡನ್‌ನ ನ್ಯಾಯಾಲಯ ಆದೇಶಿಸಿತ್ತು. ಯುರೋಪ್‌ ಹೊರಡಿಸಿದ ವಾರೆಂಟ್‌ನಂತೆ 2010ರ ಡಿಸೆಂಬರ್‌ನಲ್ಲಿ ಅವರ ಬಂಧನವಾಯಿತು. ತನ್ನ ವಿರುದ್ಧ ಕೇಳಿಬಂದಿರುವ ಆರೋಪಗಳನ್ನು ಅಸಾಂಜ್ ನಿರಾಕರಿಸಿದ್ದರು. ಇವೆಲ್ಲವೂ ವಿಕಿಲೀಕ್ಸ್ ಬಹಿರಂಗಪಡಿಸಿದ ಮಾಹಿತಿಗಳಿಗಾಗಿ ತನ್ನನ್ನು ಅಮೆರಿಕಕ್ಕೆ ಹಸ್ತಾಂತರಿಸಲು ನಡೆಯುತ್ತಿರುವ ಸಂಚು ಎಂದು ಆರೋಪಿಸಿದ್ದರು.

2011ರಲ್ಲಿ ಅಮೆರಿಕದ ರಾಜತಾಂತ್ರಿಕ ವ್ಯವಹಾರಗಳ ಕುರಿತು ತನ್ನಲ್ಲಿದ್ದ ಸುಮಾರು 2.5 ಲಕ್ಷ ದಾಖಲೆಗಳನ್ನು ವಿಕಿಲೀಕ್ಸ್ ಪ್ರಕಟಿಸಿತು.

ವಿಕಿಲೀಕ್ಸ್‌ಗೆ ಬಿಟ್‌ಕಾಯಿನ್ ದೇಣಿಗೆ!

ವಿಕಿಲೀಕ್ಸ್ ಒಂದೇ ಅಲ್ಲ... ಅದನ್ನು ಬೆಂಬಲಿಸುವ ಸೈಬರ್ ಕಾರ್ಯಕರ್ತರ ಪಡೆಯು ಅಸಾಂಜೆ ಬಂಧನದ ನಂತರದಲ್ಲಿ ಸೋರಿಕೆಯಾದ ದಾಖಲೆಗಳನ್ನು ಆನ್‌ಲೈನ್ ಮೂಲಕ ಹಂಚಿಕೊಂಡವು.

ವಿಕಿಲೀಕ್ಸ್‌ಗೆ ಹರಿದುಬರುತ್ತಿದ್ದ ದೇಣಿಗೆಯನ್ನು ತಡೆದ ಮಾಸ್ಟರ್‌ಕಾರ್ಡ್ ಹಾಗೂ ವಿಸಾ ಸಂಸ್ಥೆಗಳ ಅಂತರ್ಜಾಲ ತಾಣವನ್ನೇ ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಲ್ಲಿ ಆನ್‌ಲೈನ್ ಕಾರ್ಯಕರ್ತರು ಸಿದ್ಧಪಡಿಸಿದ ‘ಅನಾನಿಮಸ್‌’ ಎಂಬ ತಾಣ ಯಶಸ್ವಿಯಾಗಿತ್ತು. ಆದರೆ ಈಗ ಕ್ರಿಪ್ಟೊಕರೆನ್ಸಿಯ ಭಾಗವಾದ ಬಿಟ್‌ಕಾಯಿನ್ ಅನ್ನು ದೇಣಿಗೆಯಾಗಿ ಸ್ವೀಕರಿಸುವುದಾಗಿ ವಿಕಿಲೀಕ್ಸ್ ಈಗ ಹೇಳಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT