ಶನಿವಾರ, ಮಾರ್ಚ್ 25, 2023
22 °C

ಆಳ-ಅಗಲ: ನೋಟು ರದ್ದತಿಗೆ 5 ವರ್ಷ, ನಗದು ಬಳಕೆ ಶೇ 66.7 ಜಿಗಿತ

ಜಯಸಿಂಹ ಆರ್‌., ಅಮೃತ ಕಿರಣ್‌ ಬಿ.ಎಂ. Updated:

ಅಕ್ಷರ ಗಾತ್ರ : | |

Prajavani

ಐದು ವರ್ಷಗಳ ಹಿಂದೆ, 2016ರ ನವೆಂಬರ್ 8ರ ರಾತ್ರಿ 8.15ಕ್ಕೆ ರಾಷ್ಟ್ರೀಯ ಸುದ್ದಿವಾಹಿನಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನುದ್ದೇಶಿಸಿ ಮಾಡಿದ ಭಾಷಣ ಸಂಚಲನ ಸೃಷ್ಟಿಸಿತ್ತು. ಆಗ ಚಲಾವಣೆಯಲ್ಲಿದ್ದ ₹500 ಹಾಗೂ ₹1000 ಮುಖಬೆಲೆಯ ನೋಟುಗಳನ್ನು ರದ್ದುಪಡಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಅವರು ತಮ್ಮ ಭಾಷಣದಲ್ಲಿ ಪ್ರಕಟಿಸಿದ್ದರು. ತಕ್ಷಣದಿಂದಲೇ ನೋಟು ರದ್ದತಿ ಆದೇಶ ಜಾರಿಗೆ ಬಂದಿದ್ದರಿಂದ, ಏನಾಗುತ್ತಿದೆ ಎಂಬುದು ಜನರ ಅರಿವಿಗೆ ಬರಲು ಸಾಕಷ್ಟು ಸಮಯ ಹಿಡಿದಿತ್ತು. 

ನೋಟು ರದ್ದತಿಗೆ ಸರ್ಕಾರ ಹಲವು ಕಾರಣಗಳನ್ನು ನೀಡಿತ್ತು. ಮಾರುಕಟ್ಟೆಯಲ್ಲಿ ಕಪ್ಪು ಹಣದ ಚಲಾವಣೆ ತಡೆಯುವುದು, ಖೋಟಾ ನೋಟುಗಳ ಹಾವಳಿಗೆ ಇತಿಶ್ರೀ ಹಾಡುವುದು, ಮಾರುಕಟ್ಟೆಯಲ್ಲಿ ನಗದು ಚಲಾವಣೆಯನ್ನು ತಗ್ಗಿಸುವುದು, ಡಿಜಿಟಲ್‌ ವಹಿವಾಟು ಉತ್ತೇಜಿಸುವುದು ಮೊದಲಾದ ಕಾರಣಗಳನ್ನು ನೀಡಿತ್ತು. ಲೆಕ್ಕಕ್ಕೆ ಸಿಗದ ನಗದನ್ನು ಬ್ಯಾಂಕ್‌ಗಳಲ್ಲಿ ಠೇವಣಿ ಇಡುವಂತೆ ಮಾಡುವುದಾಗಿ ಸರ್ಕಾರ ಭರವಸೆ ನೀಡಿತ್ತು. ಈ ಕ್ರಮ ಭ್ರಷ್ಟಾಚಾರ ವಿರುದ್ಧದ ದೊಡ್ಡ ಸಮರ ಎಂದು ಸರ್ಕಾರ ಬಣ್ಣಿಸಿದರೂ, ಯಾವ ಸುಳಿವೂ ಇಲ್ಲದೆ ಕೈಗೊಂಡ ನಿರ್ಧಾರದಿಂದ ಜನರು ವಿಚಲಿತರಾಗಿದ್ದು ನಿಜ.

ಐದು ವರ್ಷಗಳ ಬಳಿಕ, ಮಾರುಕಟ್ಟೆಯಲ್ಲಿ ನಗದು ಚಲಾವಣೆ ಕಡಿಮೆಯಾಗುವ ಬದಲು ಶೇ 66.7ರಷ್ಟು ಹೆಚ್ಚಳವಾಗಿದೆ. 2016ರ ನವೆಂಬರ್ 4ರ ದತ್ತಾಂಶಗಳ ಪ್ರಕಾರ, ₹17.97 ಲಕ್ಷ ಕೋಟಿ ನಗದು ಚಲಾವಣೆಯಲ್ಲಿತ್ತು. 2021ರ ಅಕ್ಟೋಬರ್ 29ರ ಆರ್‌ಬಿಐ ಮಾಹಿತಿ ಪ್ರಕಾರ, ₹29.44 ಲಕ್ಷ ಕೋಟಿ ನಗದು ಚಲಾವಣೆಯಲ್ಲಿದೆ. 

ನೋಟು ರದ್ದತಿ ಬಳಿಕ, ₹15.41 ಲಕ್ಷ ಕೋಟಿ ಪೈಕಿ ₹15.31 ಲಕ್ಷ ಕೋಟಿ ನಗದು ಬ್ಯಾಂಕ್‌ಗಳಲ್ಲಿ ಸಂಗ್ರಹವಾಯಿತು. ರದ್ದಾದ ನೋಟುಗಳ ಶೇ 99.3ರಷ್ಟು  ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿದವು. ‘ಸರ್ಕಾರ ಲೆಕ್ಕಾಚಾರ ಹಾಕಿದಂತೆ, ಲೆಕ್ಕಕ್ಕೆ ಸಿಗದ ನಗದು, ಭಾರಿ ಪ್ರಮಾಣದಲ್ಲಿ ‌ಬ್ಯಾಂಕ್‌ಗೆ ಜಮೆಯಾಗಲಿಲ್ಲ’ ಎಂದು 2017ರ ಫೆಬ್ರವರಿಯಲ್ಲಿ ಆಗಿನ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಒಪ್ಪಿಕೊಂಡಿದ್ದರು.

ಪೂರ್ವಸಿದ್ಧತೆ ಇಲ್ಲದೇ ಕೈಗೊಂಡ ನೋಟು ರದ್ದತಿ ನಿರ್ಧಾರವನ್ನು ಪ್ರತಿಪಕ್ಷಗಳು ತರಾಟೆಗೆ ತೆಗೆದುಕೊಂಡಿದ್ದವು. 50 ದಿನಗಳಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಬರದಿದ್ದರೆ, ತನಗೆ ಶಿಕ್ಷೆ ನೀಡಿ ಎಂದು ಪ್ರಧಾನಿ ಹೇಳಿದ್ದರಾದರೂ, ಆ ಬಳಿಕ ಅವರು ಯಾವುದೇ ಜವಾಬ್ದಾರಿ ಹೊರಲಿಲ್ಲ ಎಂದು ದೂರಿದವು. ಕೇಂದ್ರದ ಅರ್ಥಹೀನ ನಿರ್ಧಾರದಿಂದ ದೇಶದ ಅನೇಕ ವ್ಯಾಪಾರ ವಹಿವಾಟುಗಳು ಕುಸಿದವು, ಜನರು ಉದ್ಯೋಗ ಕಳೆದುಕೊಂಡರು, ಕೈಗಾರಿಕೆಗಳು ಹಿನ್ನಡೆ ಅನುಭವಿಸಿದವು, ಹತ್ತಾರು ಜೀವಗಳು ಬಲಿಯಾದವು ಎಂದು ಆರೋಪಿಸಿದವು.

ಜನರ ಬವಣೆ

ನೋಟು ರದ್ದತಿ ನಿರ್ಧಾರವು ತಕ್ಷಣಕ್ಕೆ ಜನರ ಕೈಕಟ್ಟಿಹಾಕಿತು. ‘ರದ್ದುಗೊಂಡ ನೋಟುಗಳು ಕೇವಲ ಕಾಗದದ ಚೂರುಗಳು’ ಎಂದು ಪ್ರಧಾನಿ ಘೋಷಿಸಿದ್ದರಿಂದ, ಜನರ ಬಳಿ ಹಣವಿದ್ದರೂ ಅದು ನಿರುಪಯುಕ್ತವಾಗಿತ್ತು. ತಮ್ಮಲ್ಲಿದ್ದ ₹500 ಹಾಗೂ ₹1000 ಮುಖಬೆಲೆಯ ನೋಟುಗಳನ್ನು ಬದಲಾಯಿಸಲು ಬ್ಯಾಂಕ್‌ಗಳಲ್ಲಿ ತಿಂಗಳುಗಟ್ಟಲೆ ಸಾಲಿನಲ್ಲಿ ನಿಲ್ಲಬೇಕಾಯಿತು. ಎಟಿಎಂನಿಂದ ಹಣ ಹಿಂಪಡೆಯಲು ಸಾಲುಗಟ್ಟಬೇಕಾದ ಅನಿವಾರ್ಯ ಸೃಷ್ಟಿಯಾಯಿತು. ರದ್ದುಗೊಂಡ ಕರೆನ್ಸಿ ಠೇವಣಿ ಇರಿಸಲು ಗಡುವು ನೀಡಲಾಗಿದ್ದ 2016ರ ಡಿಸೆಂಬರ್ 31ರಂದು ಸಹ ಪರಿಸ್ಥಿತಿ ಭಿನ್ನವಾಗಿರಲಿಲ್ಲ. ಬಿಸಿಲು ಚಳಿ ಲೆಕ್ಕಿಸದೆ ಸರದಿ ಸಾಲಿನಲ್ಲಿ ನಿಂತಿದ್ದ ಹಲವು ಜನರು ಮೃತಪಟ್ಟ ಘಟನೆಗಳೂ ದೇಶದಾದ್ಯಂತ ವರದಿಯಾದವು. 

ಸರ್ಕಾರದ ವಾದ

‘ಕೋವಿಡ್–19 ಸಾಂಕ್ರಾಮಿಕವು ಸೃಷ್ಟಿಸಿದ ಅನಿಶ್ಚಿತ ಸ್ಥಿತಿಯು ನಗದು ಬೇಡಿಕೆ ಹೆಚ್ಚಳಕ್ಕೆ ಕಾರಣವಾಯಿತು. ಇದು ಕೇವಲ ಭಾರತದ ಸ್ಥಿತಿಯಲ್ಲ, ಜಾಗತಿಕವಾಗಿ ಇದೇ ಪರಿಸ್ಥಿತಿ ಇದೆ’ ಎಂದು ಕೇಂದ್ರ ಸರ್ಕಾರ ಪ್ರತಿಪಾದಿಸಿದೆ.

ನಗದು ವಹಿವಾಟು ತಗ್ಗಿಸುವ ಉದ್ದೇಶದ ನೋಟು ರದ್ದತಿ ನಿರ್ಧಾರ ವಿಫಲವಾಗಿದೆ ಎಂಬ ಆರೋಪಗಳಿಗೆ ಸರ್ಕಾರ ಈ ಪ್ರತಿಕ್ರಿಯೆ ನೀಡಿದೆ.

‘ಆರ್ಥಿಕ ಅನಿಶ್ಚಿತತೆ ಇದ್ದ ಅವಧಿಯಲ್ಲಿ  ಬೇಡಿಕೆ ಯಾವಾಗಲೂ ಹೆಚ್ಚಾಗುತ್ತದೆ. ಕೋವಿಡ್ ಸಮಯದಲ್ಲಿ ಜನರು ನಗದಿನ ಮೇಲೆ ಹೆಚ್ಚು ಅವಲಂಬಿಸಿದ್ದರು.    ಸಾಂಕ್ರಾಮಿಕ ವರ್ಷದಲ್ಲಿ ಹೆಚ್ಚಿನ ಪ್ರಮಾಣದ ನಗದಿಗೆ ಬೇಡಿಕೆ ಸೃಷ್ಟಿಯಾಗಿ, ಚಲಾವಣೆಯೂ ಅಧಿಕವಾಯಿತು’ ಎಂದು ತಿಳಿಸಿದೆ.  

ನೋಟು ರದ್ದತಿ ನಂತರದ ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ಆಗಿರುವ ಬೆಳವಣಿಗೆಯು ನಗದು ಮೇಲಿನ ಅವಲಂಬನೆಯನ್ನು ತಡೆಯುತ್ತದೆ ಎಂದು ಸರ್ಕಾರವು ಹೇಳುತ್ತಿದೆ. ಇದಕ್ಕೆ ವ್ಯತಿರಿಕ್ತವಾಗಿ ಮೂರು ವರ್ಷಗಳಲ್ಲಿ ಡಿಜಿಟಲ್ ಪಾವತಿ ಮೂಲಕ ವರ್ಗಾಯಿಸಲಾಗುತ್ತಿರುವ ಹಣದ ಮೊತ್ತವು ಕುಸಿಯುತ್ತಿದೆ.

‘ಸರ್ಕಾರಕ್ಕೆ ₹1.28 ಲಕ್ಷ ಕೋಟಿ ವೆಚ್ಚ’

ನೋಟು ರದ್ದತಿ ಪ್ರಕ್ರಿಯೆಗೆ ಸರ್ಕಾರವು ₹1.28 ಲಕ್ಷ ಕೋಟಿ ವೆಚ್ಚ ಮಾಡಿದೆ ಎಂದು ಕೆಲವು ಸಂಸ್ಥೆಗಳು ನಡೆಸಿದ ಅಧ್ಯಯನಗಳು ಅಂದಾಜಿಸಿವೆ. ನೋಟು ರದ್ದತಿ ನಂತರ ನೋಟು ಬದಲಾವಣೆಗೆ ನೀಡಲಾಗಿದ್ದ ಅವಧಿಯಲ್ಲಿ ದೇಶದ ಬ್ಯಾಂಕ್‌ಗಳು ಪ್ರತಿದಿನ ಅಂದಾಜು ₹2,800–₹3,000 ಕೋಟಿ ವೆಚ್ಚ ಮಾಡಿವೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ವರದಿ ಮಾಡಿದೆ.

ಆಧಾರ: ಆರ್‌ಬಿಐನ ಪಾಕ್ಷಿಕ ವರದಿಗಳು, ವಾರ್ಷಿಕ ವರದಿಗಳು, ಪಿಟಿಐ, ಸಿಎಂಐಇ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು