ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಖ್ಯೆ-ಸುದ್ದಿ: ಸರ್ಕಾರದ ಬೊಕ್ಕಸ ತುಂಬಿಸುತ್ತಿರುವ ಇಂಧನ ಅಬಕಾರಿ ಸುಂಕ

Last Updated 13 ಅಕ್ಟೋಬರ್ 2021, 19:32 IST
ಅಕ್ಷರ ಗಾತ್ರ

ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಕೇಂದ್ರ ಸರ್ಕಾರವು ಸಂಗ್ರಹಿಸುತ್ತಿರುವ ಅಬಕಾರಿ ಸುಂಕವು ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇದೆ. ಸುಂಕದ ಪ್ರಮಾಣವನ್ನು ಸರ್ಕಾರ ಏರಿಕೆ ಮಾಡಿದ್ದರಿಂದಲೇ ಸರ್ಕಾರದ ಆದಾಯ ಏರಿಕೆಯಾಗಿದೆ. ತತ್ಪರಿಣಾಮವಾಗಿ ಪೆಟ್ರೋಲ್ ಮತ್ತು ಡೀಸೆಲ್‌ನ ಪ್ರತಿ ಲೀಟರ್ ಚಿಲ್ಲರೆ ಮಾರಾಟ ಬೆಲೆ ₹100 ಗಡಿ ದಾಟಿದೆ.

* 2018-2019ನೇ ಸಾಲಿನ ಆರ್ಥಿಕ ವರ್ಷದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಕೇಂದ್ರ ಸರ್ಕಾರವು ಸಂಗ್ರಹಿಸಿದ ಒಟ್ಟು ತೆರಿಗೆ ಮೊತ್ತ ₹1.83 ಲಕ್ಷದಷ್ಟಾಗಿತ್ತು

* 2018-19ಕ್ಕೇ ಹೋಲಿಸಿದರೆ, 2019-20ನೇ ಸಾಲಿನ ಆರ್ಥಿಕ ವರ್ಷದಲ್ಲಿ ಎರಡೂ ಇಂಧನಗಳ ಮೇಲೆ ಸರ್ಕಾರವು ಸಂಗ್ರಹಿಸಿದ ತೆರಿಗೆ ಮೊತ್ತದಲ್ಲಿ ಸ್ವಲ್ಪ ಇಳಿಕೆಯಾಗಿತ್ತು

* 2019-20ನೇ ಸಾಲಿಗೆ ಹೋಲಿಸಿದರೆ, 2020-21ನೇ ಸಾಲಿನಲ್ಲಿ ಸರ್ಕಾರವು ಸಂಗ್ರಹಿಸಿದ ತೆರಿಗೆ ಮೊತ್ತದಲ್ಲಿ ಭಾರಿ ಏರಿಕೆಯಾಗಿದೆ. ಒಂದೇ ವರ್ಷದಲ್ಲಿ ತೆರಿಗೆ ಮೊತ್ತವು ₹1.56 ಲಕ್ಷ ಕೋಟಿಯಷ್ಟು ಏರಿಕೆಯಾಗಿದೆ. ಇದು ಹಿಂದಿನ ಸಾಲಿಗೆ ಹೋಲಿಸಿದರೆ ಶೇ 80ರಷ್ಟು ಏರಿಕೆ. ಅಂದರೆ ಸರ್ಕಾರದ ಆದಾಯವು ಸರಿಸುಮಾರು ಒಂದು ಪಟ್ಟು ಏರಿಕೆಯಾಗಿದೆ

* 2020-21ನೇ ಸಾಲಿನಲ್ಲಿ ಕೇಂದ್ರ ಸರ್ಕಾರವು ಪೆಟ್ರೋಲ್‌ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಒಂದು ಪಟ್ಟು ಏರಿಕೆ ಮಾಡಿತ್ತು. ಸರ್ಕಾರದ ಆದಾಯದಲ್ಲಿ ಭಾರಿ ಏರಿಕೆ ಆಗಲು ಇದು ಕಾರಣ

* 2021-22ನೇ ಸಾಲಿನ ಮೊದಲ ತ್ರೈಮಾಸಿಕದಲ್ಲಿ (ಏಪ್ರಿಲ್‌ನಿಂದ ಜುಲೈ ಅಂತ್ಯದವರೆಗೆ) ₹1.01 ಲಕ್ಷ ಕೋಟಿಯಷ್ಟು ತೆರಿಗೆಯನ್ನು ಕೇಂದ್ರ ಸರ್ಕಾರವು ಸಂಗ್ರಹಿಸಿದೆ. 2020-21ನೇ ಸಾಲಿನಲ್ಲಿ ಇದೇ ಅವಧಿಯಲ್ಲಿ ₹66,570 ಕೋಟಿ ತೆರಿಗೆಯನ್ನಷ್ಟೇ ಸರ್ಕಾರ ಸಂಗ್ರಹಿಸಿತ್ತು. ಈಗ ಕಚ್ಚಾತೈಲದ ಬೆಲೆ ಏರಿಕೆಯಾಗಿದೆ. ಆದರೆ ಸರ್ಕಾರವು ತೆರಿಗೆ ಇಳಿಸದೇ ಇರುವ ಕಾರಣಕ್ಕೆ, ಸರ್ಕಾರಕ್ಕೆ ಸಂಗ್ರಹವಾಗುತ್ತಿರುವ ತೆರಿಗೆ ಮೊತ್ತವು ಹೆಚ್ಚುತ್ತಲೇ ಇದೆ

* 2021-22ನೇ ಸಾಲಿನ ಮೊದಲ ತ್ರೈಮಾಸಿಕದಲ್ಲಿ ₹1 ಲಕ್ಷ ಕೋಟಿ ತೆರಿಗೆ ಸಂಗ್ರಹವಾಗಿದೆ. ಈ ಆರ್ಥಿಕ ವರ್ಷದ ಅಂತ್ಯಕ್ಕೆ ₹4.10 ಲಕ್ಷ ಕೋಟಿ ತೆರಿಗೆ ಸಂಗ್ರಹವಾಗಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ

ಕಚ್ಚಾ ತೈಲ ದರ ಏರಿಳಿತ

ಕೋವಿಡ್‌ ಸಾಂಕ್ರಾಮಿಕದಿಂದ ಚೇತರಿಕೆ ಕಂಡು ಬಂದ ನಂತರ, ಜಾಗತಿಕ ಆರ್ಥಿಕತೆಯೂ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಅದರ ಪರಿಣಾಮವಾಗಿ ಕಚ್ಚಾತೈಲದ ಬೇಡಿಕೆ ಹೆಚ್ಚಿದ್ದು, ದರದಲ್ಲೂ ಹೆಚ್ಚಳ ಕಂಡುಬಂದಿದೆ. 2021ರ ಆಗಸ್ಟ್‌ ತಿಂಗಳ ಕೊನೆಯಿಂದ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲದ ದರದಲ್ಲಿ ನಿರಂತರ ಏರಿಕೆ ಕಂಡುಬಂದಿದೆ.

2018ರ ವರ್ಷಾಂತ್ಯಕ್ಕೆ ಪ್ರತಿ ಬ್ಯಾರಲ್‌ಗೆ 64.04 ಡಾಲರ್‌ ಇದ್ದ ಕಚ್ಚಾತೈಲದ ದರವು, 2019ರ ವರ್ಷಾಂತ್ಯಕ್ಕೆ 41.47 ಡಾಲರ್‌ಗೆ ಕುಸಿದಿತ್ತು. 2020ರ ವರ್ಷಾಂತ್ಯಕ್ಕೆ 67.36 ಡಾಲರ್‌ ಇದ್ದರೆ, ಅ.13, 2021ಕ್ಕೆ 82.37 ಡಾಲರ್‌ಗೆ ಏರಿಕೆ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT