ಭಾನುವಾರ, ಏಪ್ರಿಲ್ 5, 2020
19 °C
ಕೊರೊನಾ ವೈರಸ್: ಚೀನಾ ನಂತರ ಗರಿಷ್ಠ ಸಾವು ಕಂಡ ಇಟಲಿಯ ಕರುಣಾಜನಕ ಸ್ಥಿತಿ ಹೀಗಿದೆ

ಇಟಲಿ: ಕೋವಿಡ್-19 ಸಾವು ಹೆಚ್ಚಳಕ್ಕೆ ಕಾರಣವಾದ ಆದ್ಯತಾ ಚಿಕಿತ್ಸೆ, ಅಸಹಾಯಕತೆ

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

A medical worker brings a patient at ICU of the Brescia Poliambulanza hospital, Lombardy

ಎರಡನೇ ಜಾಗತಿಕ ಯುದ್ಧದ ಬಳಿಕ ಮೊದಲ ಬಾರಿಗೆ ಇಟಲಿಯು ವೈದ್ಯಕೀಯ ಬಿಕ್ಕಟ್ಟು ಎದುರಿಸುತ್ತಿದೆ. ವೈದ್ಯರು, ರೋಗಿಗಳು ಮತ್ತು ಅವರ ಕುಟುಂಬಿಕರು ಕಂಗಾಲಾಗಿದ್ದಾರೆ. ಕರೋನಾ ವೈರಸ್‌ನಿಂದ ಕಾಣಿಸಿಕೊಳ್ಳುವ ಕೋವಿಡ್-19 ಕಾಯಿಲೆಗೆ ಪುಟ್ಟ ರಾಷ್ಟ್ರವಾಗಿರುವ ಇಟಲಿ ಬೆಚ್ಚಿಬಿದ್ದಿದೆ. ಕೋವಿಡ್-19ನಿಂದ ಸಾವನ್ನಪ್ಪಿದವರ ಸಂಖ್ಯೆ ಬುಧವಾರ 2500 ದಾಟಿದೆ. ಕೊರೊನಾ ವೈರಸ್ ಉಗಮಸ್ಥಾನವಾದ ಚೀನಾದ ಬಳಿಕ ಕೋವಿಡ್-19 ಪೀಡಿತರ ಸಾವಿನ ಸಂಖ್ಯೆಯಲ್ಲಿ ಎರಡನೇ ಸ್ಥಾನ ಇಟಲಿಯದ್ದು.

ಈ ಕಾರಣಕ್ಕಾಗಿಯೇ ಜಗತ್ತಿನ ಬಾಯಲ್ಲಿ ಇಟಲಿಯದ್ದೇ ಸುದ್ದಿ. ಕೋವಿಡ್-19ರಿಂದಾಗಿ ಜಾಗತಿಕವಾಗಿ ಸಾವಿನ ಪ್ರಮಾಣವು ಶೇ.12ರಿಂದ 16ರಷ್ಟಿದ್ದರೆ, ಇಟಲಿಯಲ್ಲಿ ಈ ಸಾವಿನ ಪ್ರಮಾಣ ಶೇ.50 ಎಂದಿದ್ದಾರೆ ಇಟಲಿಯ ಮಾಜಿ ಮಿಲಿಟರಿ ವೈದ್ಯರೊಬ್ಬರು. ಬುಧವಾರದವರೆಗೆ ಒಟ್ಟು 2503 ಮಂದಿ ಇಟಲಿಯಲ್ಲಿ ಸಾವನ್ನಪ್ಪಿದ್ದರೆ, 31,506 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ.

ಜಗತ್ತಿನ ಶ್ರೇಷ್ಠ ವೈದ್ಯಕೀಯ ಸೌಕರ್ಯವಿದೆ ಎಂದು ಹೇಳಲಾಗುತ್ತಿದ್ದ ಉತ್ತರ ಇಟಲಿಯಿಂದಲೇ ಕೊರೊನಾ ವೈರಸ್ ದಾಂಗುಡಿಯಿಟ್ಟಿದೆ. ಆ ಪ್ರದೇಶದ ಲೋಂಬಾರ್ಡಿ ಮತ್ತು ವೆನೆಟೋದಲ್ಲಿರುವ ಆಸ್ಪತ್ರೆಗಳು ಯುದ್ಧೋಪಾದಿ ಕಾರ್ಯಾಚರಣೆಯಲ್ಲಿ ತೊಡಗಿವೆ. ಅಲ್ಲಿನ ತುರ್ತು ಚಿಕಿತ್ಸಾ ಕೇಂದ್ರಗಳು (ಐಸಿಯು) ಭರ್ತಿಯಾಗುತ್ತಿವೆ.

ಮೂರು ವಾರಗಳಲ್ಲಿ ಲೋಂಬಾರ್ಡಿಯಲ್ಲಿ 1135 ಮಂದಿಗೆ ಐಸಿಯು ದಾಖಲಾಗುವ ಅಗತ್ಯ ಬಿದ್ದಿತ್ತು. ಆದರೆ ಅಲ್ಲಿ ಲಭ್ಯವಿದ್ದುದು ಕೇವಲ 800 ಐಸಿಯು ಹಾಸಿಗೆಗಳು ಮಾತ್ರ ಎನ್ನುತ್ತಾರೆ ಮಿಲಾನ್‌ನ ಪೋಲಿಕ್ಲಿನಿಕೋ ಆಸ್ಪತ್ರೆಯ ತುರ್ತು ನಿಗಾ ವಿಭಾಗದ ಮುಖ್ಯಸ್ಥ ಜಿಯಾಕೊಮೊ ಗ್ರಾಸೆಲಿ. ಕೋವಿಡ್-19 ಬಾಧೆಯಿಂದ ತೀವ್ರ ಉಸಿರಾಟದ ತೊಂದರೆ ಅನುಭವಿಸುತ್ತಿರುವವರಿಗೆ ಐಸಿಯುವಿನಲ್ಲಿ ಬಾಯಿಗೆ, ಗಂಟಲಿಗೆ ಪೈಪ್ ಅಳವಡಿಸಿ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗುತ್ತದೆ. ಆದರೆ ಯಾರಿಗೆ ಆದ್ಯತೆಯಲ್ಲಿ ಚಿಕಿತ್ಸೆ ನೀಡಬೇಕು, ಯಾರಿಗೆ ಐಸಿಯು ಒದಗಿಸಬೇಕು ಎಂಬುದು ವೈದ್ಯರಿಗೆ ಎದುರಾಗುವ ಇಕ್ಕಟ್ಟು. ಉಸಿರಾಟದ ತೊಂದರೆ ಇರುವ ರೋಗಿಗಳ ಚಿಕಿತ್ಸೆಯ ವೇಳೆ, ಅವರಿಗೆ ಟ್ಯೂಬ್ ಅಳವಡಿಸುವ ಮುನ್ನ, ವೈದ್ಯರು ಈ ರೋಗಿಯ ಚೇತರಿಕೆಯ ಸಾಧ್ಯತೆಗಳನ್ನು ಲೆಕ್ಕಾಚಾರ ಹಾಕುತ್ತಾರೆ. ಅಂಥ ಅನಿವಾರ್ಯತೆ ಸೃಷ್ಟಿಯಾಗಿದೆ ಅಲ್ಲಿ. ಈ ಪ್ರಕ್ರಿಯೆಯು ವೈದ್ಯಕೀಯ ವೃತ್ತಿಯಲ್ಲಿ ಸಾಮಾನ್ಯವೇ ಆಗಿದ್ದರೂ, ಈಗ ಗರಿಷ್ಠ ಸಂಖ್ಯೆಯಲ್ಲಿ ರೋಗಿಗಳು ದಾಖಲಾಗುತ್ತಿರುವುದು ವೈದ್ಯರಿಗೆ ಬಲುದೊಡ್ಡ ಸವಾಲು ಮತ್ತು ಈ ಆದ್ಯತಾ ನಿಯಮವನ್ನು ಹೆಚ್ಚು ಕಟ್ಟುನಿಟ್ಟಾಗಿ ಮತ್ತು ಕ್ಷಿಪ್ರವಾಗಿ ಪಾಲಿಸುವ ನಿರ್ಧಾರ ಕೈಗೊಳ್ಳಬೇಕಾದ ಅನಿವಾರ್ಯತೆಯಿದೆ. ಅಂದರೆ, ಬದುಕುಳಿಯುವ ಸಾಧ್ಯತೆ ಹೆಚ್ಚಿರುವವರಿಗೇ ಮೊದಲು ಆದ್ಯತೆ ನೀಡುವುದು.

ವೃದ್ಧರ ಚೇತರಿಕೆ ಸಾಧ್ಯತೆಯೇ ದೊಡ್ಡ ಸಮಸ್ಯೆ
ಇಟಲಿಯಲ್ಲಿ ಸಾವಿನ ಸಂಖ್ಯೆ ಹೆಚ್ಚಳಕ್ಕೆ ಕಾರಣಗಳಲ್ಲೊಂದು ಎಂದರೆ, ಇಡೀ ಯೂರೋಪ್‌ನಲ್ಲಿ ಗರಿಷ್ಠ ಸಂಖ್ಯೆಯ ವೃದ್ಧರಿರುವುದು ಇಟಲಿಯಲ್ಲಿ. ಇಲ್ಲಿರುವ ನಾಲ್ಕರಲ್ಲಿ ಒಬ್ಬ ವ್ಯಕ್ತಿ 65 ಅಥವಾ ಮೇಲ್ಪಟ್ಟವರು ಎನ್ನುತ್ತದೆ ಅಂಕಿಅಂಶ ಏಜೆನ್ಸಿ ಯೂರೋಸ್ಟಾಟ್. ಈ ಹಿನ್ನೆಲೆಯಲ್ಲಿ, ಇಂಥ ಕ್ರೂರ ನಿರ್ಧಾರ ಕೈಗೊಳ್ಳುವುದು ನಮಗೂ ಕಷ್ಟವೇ ಎನ್ನುತ್ತಾರೆ 48ರ ಹರೆಯದ ಅರಿವಳಿಕೆ ತಜ್ಞ ರೆಸ್ಟಾ ಅವರು.

ಉಸಿರಾಟದ ಸಮಸ್ಯೆಯಿರುವ ಕೋವಿಡ್-19 ಪೀಡಿತ ವೃದ್ಧರು ಸಾಕಷ್ಟು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ, ಹೀಗಿರುವಾಗ ಚೇತರಿಕೆಯ ಸಾಧ್ಯತೆ ತೀರಾ ಕ್ಷೀಣ ಇರುವವರ ಬಗ್ಗೆ ಗಮನ ಹರಿಸುವುದು ಕಷ್ಟ ಎನ್ನುತ್ತಾರೆ ಇಟಲಿಯ ವೈದ್ಯರು. ವೃದ್ಧರು ವಯೋಸಹಜ ಕಾಯಿಲೆಯಿಂದ ಬಳಲುತ್ತಿರುತ್ತಾರೆ ಮತ್ತು ಸಹಜವಾಗಿ ಅವರಲ್ಲಿ ರೋಗನಿರೋಧಕ ಶಕ್ತಿಯೂ ಕಡಿಮೆ ಇರುತ್ತದೆ. ಹೀಗಾಗಿ ಇಂಥವರಿಗೆ ಸೋಂಕು ತಗುಲಿದರೆ ಅವರ ಪಾಡು ತೀರಾ ಕಳವಳಕಾರಿ.

ಇಂಥದ್ದೇ ಸ್ಥಿತಿ ಎದುರಿಸುತ್ತಿರುವವರು ಅಲ್ಫ್ರೆಡೋ ವಿಸಿಯೊಲಿ ಎಂಬ ರೋಗಿ. ಕ್ರೆಮೋನಾ ಮೂಲದ 83 ವರ್ಷದ ಈ ವ್ಯಕ್ತಿಗೆ ಸೋಂಕು ಪತ್ತೆಯಾಗುವ ಮುನ್ನ ಅವರು ಚಟುವಟಿಕೆಯಿಂದಿದ್ದು ಜೀವನ ಸಾಗಿಸುತ್ತಿದ್ದರು. ಅವರ 79ರ ಹರೆಯದ ಪತ್ನಿ ಇಲಿಯಾನಾ ಸ್ಕರ್ಪಂಟಿಗೆ ಎರಡು ವರ್ಷಗಳ ಹಿಂದೆ ಲಕ್ವಾಘಾತ ಆಗಿತ್ತು. ಆರಂಭದಲ್ಲಿ ಅವರಿಗೆ ಆಗಾಗ್ಗೆ ಜ್ವರ ಮಾತ್ರವೇ ಕಾಣಿಸಿಕೊಂಡಿತ್ತು, ಆದರೆ ಎರಡು ವಾರಗಳ ಬಳಿಕ ಕೋವಿಡ್-19 ಇರುವುದು ದೃಢಪಟ್ಟಿತ್ತು. ಆ ಸಂದರ್ಭದಲ್ಲಿ ಅವರಿಗೆ ಪಲ್ಮನರಿ ಫೈಬ್ರೋಸಿಸ್ ಎಂಬ ಶ್ವಾಸಕೋಶದ ಸಮಸ್ಯೆ ಕಾಣಿಸಿಕೊಂಡಿತ್ತು. ಶ್ವಾಸಕೋಶದ ಅಂಗಾಂಶಕ್ಕೆ ಹಾನಿಯಾಗುವುದರಿಂದ ಉಸಿರಾಡಲು ತೊಂದರೆಯಾಗುವ ಸಮಸ್ಯೆ ಇದು.

ಇಂಥ ವಯೋವೃದ್ಧರು ಚೇತರಿಸಿಕೊಳ್ಳುವ ಸಾಧ್ಯತೆ ಕ್ಷೀಣ ಇರುವುದರಿಂದ, ಅವರಿಗೂ ಪೈಪ್ ಅಳವಡಿಸಿ ಉಸಿರಾಟದ ಸಮಸ್ಯೆ ಸರಿಪಡಿಸುವ ಐಸಿಯುಗೆ ದಾಖಲಿಸುವುದೋ ಬೇಡವೋ ಎಂಬುದು ಕ್ರೆಮೋನಾ ಆಸ್ಪತ್ರೆಯಲ್ಲಿರುವ ವೈದ್ಯರಿಗೆ ಇಕ್ಕಟ್ಟು ತಂದಿರುವ ಸಂಗತಿ. ಆದರೆ, ಐಸಿಯುಗೆ ದಾಖಲಿಸುವುದು ಅರ್ಥಹೀನ ಎಂದು ಈ ವೃದ್ಧನ ಮೊಮ್ಮಗಳು ಮಾರ್ತಾ ಮನ್‌ಫ್ರೆಡಿ ಅವರೇ ಹೇಳುತ್ತಾರೆ. "ತಾತನ ಪರಿಸ್ಥಿತಿ ತೀರಾ ಹದಗೆಟ್ಟಿದೆ, ಅಂಥ ಸಂದರ್ಭದಲ್ಲಿ ಮಾರ್ಫಿನ್ ಮೂಲಕ ನಿದ್ರೆ ಬರಿಸಿ, ಅವರು ಇಹಲೋಕ ತ್ಯಾಗ ಮಾಡುವಾಗ ನನ್ನಜ್ಜನ ಕೈಹಿಡಿದುಕೊಂಡಿರಲು ಇಚ್ಛಿಸುತ್ತೇನೆ" ಎಂದು ಕಣ್ಣೀರಿನೊಂದಿಗೇ ಹೇಳುತ್ತಾಳಾಕೆ. ಇದು ಅಲ್ಲಿ ವೈದ್ಯಕೀಯ ಅನಿವಾರ್ಯತೆಯ ಅಸಹಾಯ ಪರಿಸ್ಥಿತಿಯನ್ನು ತೋರಿಸುತ್ತದೆ. ಈಗ ಮನ್‌ಫ್ರೆಡಿಗೆ ಮತ್ತೊಂದು ಸಮಸ್ಯೆ ಎದುರಾಗಿದೆ. ಅಜ್ಜಿ ಇಲಿಯಾನಾಗೂ ಕೋವಿಡ್-19 ಸೋಂಕು ತಗುಲಿದೆ. ಆಕೆಯನ್ನೂ ಐಸಿಯುಗೆ ಕೃತಕ ಉಸಿರಾಟದ ವ್ಯವಸ್ಥೆಯೊಂದಿಗೆ ದಾಖಲಿಸಲಾಗಿದ್ದು, ಅವರಲ್ಲಿ ಉತ್ತಮ ಚೇತರಿಕೆ ಕಂಡುಬಂದಿದೆ. ಆದರೆ ಅವರ ಪತಿ ಈಗಾಗಲೇ ಮೃತಪಟ್ಟಿರುವ ಸುದ್ದಿಯಿನ್ನೂ ಅವರಿಗೆ ತಿಳಿಸಲಾಗಿಲ್ಲ.

ಆದ್ಯತಾ ಚಿಕಿತ್ಸೆ ಎಂಬ ಇಕ್ಕಟ್ಟು
ಲಂಬಾರ್ಡಿ ತುರ್ತು ನಿಗಾ ವಿಭಾಗದ ಸಮನ್ವಯಕಾರ ಗ್ರಾಸೆಲಿ ಅವರ ಪ್ರಕಾರ, ಇದುವರೆಗೆ ಚೇತರಿಕೆ ಸಾಧ್ಯತೆ ಹೆಚ್ಚಿರುವ ಮತ್ತು ಸ್ವೀಕಾರಾರ್ಹ ಗುಣಮಟ್ಟದ ಜೀವನಶೈಲಿ ಅನುಸರಿಸುತ್ತಿರುವವರನ್ನು ಗುರುತಿಸಿ ಆದ್ಯತೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಆದರೆ, ಈ ಬದುಕುವ ಸಾಧ್ಯತೆಯಿರುವವರಿಗೇ ಆದ್ಯತೆ ನೀಡುವ ವ್ಯವಸ್ಥೆ ತೀರಾ ಬೇಸರದ ವಿಚಾರ ಎನ್ನುತ್ತಾರವರು. ಹಿಂದೆಲ್ಲಾ, ಅವರಿಗೊಂದು ಅವಕಾಶ ಕೊಡೋಣ, ಕೆಲವು ದಿನ ಚಿಕಿತ್ಸೆ ನೀಡೋಣ ಎಂದೆಲ್ಲಾ ಹೇಳುತ್ತಿದ್ದೆವು. ಈಗ ನಾವು ಕಾಠಿಣ್ಯ ಪ್ರದರ್ಶಿಸಬೇಕಾಗುತ್ತಿದೆ ಎಂದು ನೋವಿನಿಂದಲೇ ಹೇಳಿಕೊಂಡಿದ್ದಾರವರು.

ಇದೇ ವೈರುಧ್ಯವು ಆಸ್ಪತ್ರೆಯ ಹೊರಗೂ ಕಾಣಿಸಿಕೊಂಡಿದೆ. ಕಳೆದ ಶುಕ್ರವಾರ, ಲಾಂಬರ್ಡಿ ಹೊರಗಿರುವ ನಗರವಾದ ಫಿಡೆಂಝಾ ಪಟ್ಟಣದದ ಮೇಯರ್ ಅವರು ಸ್ಥಳೀಯ ಆಸ್ಪತ್ರೆಯನ್ನೇ 19 ಗಂಟೆಗಳ ಕಾಲ ಬಂದ್ ಮಾಡಿಸಬೇಕಾಯಿತು. ಇದಕ್ಕೆ ಕಾರಣ ಕೋವಿಡ್-19 ಸೋಂಕಿತರ ಪ್ರಮಾಣ ದಿಢೀರ್ ಹೆಚ್ಚಳವಾಗಿದ್ದುದು. ಕಾಲಿಡಲೂ ಜಾಗವಿಲ್ಲದ ಸ್ಥಿತಿ. ಅಲ್ಲಿನ ವೈದ್ಯಕೀಯ ಸಿಬ್ಬಂದಿ ಸತತ 21 ದಿನಗಳ ಕಾಲ ಯಾವುದೇ ವಿರಾಮವಿಲ್ಲದೆ ದುಡಿಯುತ್ತಿದ್ದರು. ಆಸ್ಪತ್ರೆಯು ಸುಲಲಿತವಾಗಿ ನಡೆಯುವಂತಾಗುವ ಉದ್ದೇಶದಿಂದ ಅದನ್ನು ಬಂದ್ ಮಾಡಲಾಗಿದ್ದರೂ, ಕೆಲವು ಮಂದಿ ಸಕಾಲಕ್ಕೆ ಚಿಕಿತ್ಸೆ ದೊರೆಯದೇ ಮನೆಯಲ್ಲೇ ಸಾವನ್ನಪ್ಪಬೇಕಾಯಿತು ಎನ್ನುತ್ತಾರೆ ಮೇಯರ್ ಆಂಡ್ರೀ ಮಸ್ಸಾರಿ.

ಒಂದು ವಾರದಿಂದ ಇಟಲಿ ತನ್ನನ್ನು ಸ್ವಯಂ ಆಗಿ ಪ್ರತ್ಯೇಕಿಸಿಕೊಂಡಿದೆ. ಎಲ್ಲ ಶಾಲೆಗಳು, ಕಚೇರಿಗಳು ಮುಚ್ಚಿವೆ ಮತ್ತು ಎಲ್ಲರೂ ಮನೆಯೊಳಗೇ ಇರಬೇಕೆಂದು ಸೂಚಿಸಿದೆ. ಇತರ ದೇಶಗಳೂ ಅನುಸರಿಸುತ್ತಿರುವ ಈ ವಿಧಾನದ ಮೂಲಕ ವೈರಸ್ ಹರಡದಂತೆ ತಡೆಯುವುದು ಅದರ ಉದ್ದೇಶ. ಆದರೆ ದಕ್ಷಿಣ ಭಾಗದಲ್ಲಿ ಈ ಐಸೋಲೇಷನ್ ಪ್ರಕ್ರಿಯೆ ನಿಧಾನಗತಿಯಲ್ಲಿ ಆಗುತ್ತಿರುವುದು, ವೈರಸ್ ತಡೆಯುವ ಉದ್ದೇಶ ಸಫಲವಾಗುವ ಬಗ್ಗೆ ಇಟಲಿ ಅಧಿಕಾರಿಗಳನ್ನು ಆತಂಕಕ್ಕೆ ದೂಡಿದೆ.

ಖಾಸಗಿ ಆಸ್ಪತ್ರೆಗಳಿಗೆ ಹಣ ನೀಡುವ ರೋಗಿಗಳ ಚಿಕಿತ್ಸೆಗೆ ಆದ್ಯತೆ ನೀಡಲಾಗುತ್ತಿದೆ. ಆದರೆ ಕೋವಿಡ್-19 ಪೀಡಿತರಿಗೆ ಉಚಿತವಾಗಿ ಚಿಕಿತ್ಸೆ ನೀಡಬೇಕೆಂದು ಅಲ್ಲಿನ ಸರ್ಕಾರ ಆದೇಶಿಸಿದೆ. ಸಿಬ್ಬಂದಿ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ, ನಾಲ್ಕು-ಐದನೇ ವರ್ಷದ ವೈದ್ಯಕೀಯ ಪದವಿ ವಿದ್ಯಾರ್ಥಿಗಳನ್ನೂ, ನಿವೃತ್ತ ವೈದ್ಯರನ್ನೂ ಆಸ್ಪತ್ರೆಗಳಿಗೆ ಸಹಾಯಕ್ಕಾಗಿ ಕರೆಸಿಕೊಳ್ಳಲಾಗುತ್ತಿದೆ.

ಕೋವಿಡ್-19 ಕಾಣಿಸಿಕೊಳ್ಳುವ ಮೊದಲೆಲ್ಲ ಯಾವುದೇ ರೋಗಿಗಳಿಗೆ ತುರ್ತು ನಿಗಾ ಘಟಕದಲ್ಲಿ ಟ್ಯೂಬ್ ಅಳವಡಿಸಿ ಚಿಕಿತ್ಸೆ ನೀಡುವ ಪ್ರಯತ್ನವನ್ನು ಸುಲಭವಾಗಿ ಮಾಡಲಾಗುತ್ತಿತ್ತು. ಈಗ ಪರಿಸ್ಥಿತಿ ಹಾಗಿಲ್ಲ. ಇದಕ್ಕಾಗಿ ಸಾಕಷ್ಟು ಸಿಬ್ಬಂದಿಯಿಲ್ಲ, ಸೌಕರ್ಯವೂ ಇಲ್ಲ. ಇಟಲಿಯ ಅನಸ್ತೀಸಿಯಾ, ಅನಲ್ಜೀಸಿಯಾ, ರಿಸಸಿಟೇಶನ್ ಮತ್ತು ತುರ್ತು ಆರೈಕೆ ವಿಭಾಗಗಳ ಒಕ್ಕೂಟವು ಮಾರ್ಚ್ 7ರಂದು ಹೊಸ ನೀತಿ ಸೂತ್ರವನ್ನು ಘೋಷಿಸಿದೆ. ಚಿಕಿತ್ಸೆಯ ಅಗತ್ಯತೆಯಿರುವ ಜನಸಂಖ್ಯೆ ಮತ್ತು ತುರ್ತು ಚಿಕಿತ್ಸಾ ವ್ಯವಸ್ಥೆಗಳ ನಡುವೆ ವಿಪರೀತ ಅಂತರವಿರುವುದರಿಂದಾಗಿ, ಚೇತರಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುವವರಿಗೆ ಮೊದಲು ಆದ್ಯತೆ ನೀಡಿ ಎಂದು ಅದು ಹೇಳಿದೆ.

ಪರಿಸ್ಥಿತಿ ಹೇಗಿದೆಯೆಂದರೆ, ಸೋಂಕು ಪೀಡಿತರೊಂದಿಗೆ ಆ್ಯಂಬುಲೆನ್ಸ್‌ನಲ್ಲಿ ಹೋಗಲು ಕುಟುಂಬಿಕರಿಗಂತೂ ಅವಕಾಶವಿಲ್ಲ. ಕೊರೊನಾ ವೈರಸ್ ಚಿಕಿತ್ಸಾ ಕೇಂದ್ರಗಳಿಗೆ ವೈದ್ಯರಿಗೆ ಮತ್ತು ರೋಗಿಗಳಿಗೆ ಮಾತ್ರವೇ ಪ್ರವೇಶ. ತುರ್ತು ನಿಗಾ ಅಗತ್ಯವಿಲ್ಲದ ರೋಗಿಗಳಂತೂ ಅಲ್ಲಿ ಕೈದಿಗಳಂತೆ ವಾರ್ಡ್‌ಗಳಲ್ಲಿ ತುಂಬಿಬಿಟ್ಟಿದ್ದಾರೆ. "ನನ್ನನ್ನು ಇಲ್ಲಿಂದ ಕರೆದುಕೊಂಡು ಹೋಗಿ, ಬೇಕಿದ್ದರೆ ಮನೆಯಲ್ಲೇ ಸಾಯುತ್ತೇನೆ. ನಿಮ್ಮೆಲ್ಲರನ್ನೂ ಒಂದು ಬಾರಿ ನೋಡಬೇಕು ನನಗೆ" ಎಂದು 55ರ ಹರೆಯದ ಉದ್ಯೋಗಿಯೊಬ್ಬರು ಆಸ್ಪತ್ರೆಯಿಂದ ತಮ್ಮ ಪತ್ನಿಗೆ ಮೊಬೈಲ್ ಸಂದೇಶ ಕಳುಹಿಸುತ್ತಾರೆ. ಅವರಿಗೆ ಕೊರೊನಾ ವೈರಸ್ ಸೋಂಕು ತಗುಲಿದ್ದು, ನ್ಯುಮೋನಿಯಾ ಕೂಡ ಕಾಣಿಸಿಕೊಂಡಿದೆ. ಎರಡು ವಾರಗಳ ಹಿಂದೆ ಪತ್ನಿಯು ಅವರನ್ನು ಸ್ಯಾನ್ ಡೊನಾಟೋದಲ್ಲಿರುವ ಪೊಲಿಕ್ಲಿನಿಕೋಗೆ ದಾಖಲಿಸಿದ ಬಳಿಕ ಅವರಿಬ್ಬರೂ ಎಂದಿಗೂ ಭೇಟಿಯಾಗಿಲ್ಲ. ಇತ್ತೀಚಿನ ದಿನಗಳಲ್ಲಿ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ ಎಂದಷ್ಟೇ ಆಕೆಗೆ ಗೊತ್ತು. ಪತಿಯೊಬ್ಬರು ಪತ್ನಿಗೆ ಈ ರೀತಿ ಸಂದೇಶ ಕಳುಹಿಸುತ್ತಿದ್ದಾರೆಂದರೆ ತಡೆದುಕೊಳ್ಳುವುದಾದರೂ ಹೇಗೆ ಎನ್ನುತ್ತಾರೆ ಪತ್ನಿ ಟಿಜಿಯಾನಾ ಸಲ್ವಿ.

ಇನ್ನು ಕೆಲವು ವೃದ್ಧ ರೋಗಿಗಳು ಆಸ್ಪತ್ರೆಗೆ ಹೋಗಲು ಕೇಳುತ್ತಿಲ್ಲ. ಆಸ್ಪತ್ರೆಯಲ್ಲಿ ತುಂಬಿ ತುಳುಕಾಡುತ್ತಿರುವ ಮಂದಿಯೊಂದಿಗೆ ಆ ಪ್ರದೇಶವಂತೂ ಯುದ್ಧಪೀಡಿತವಾಗಿದೆಯೋ ಎಂಬಂತೆ ಭಾಸವಾಗುತ್ತಿದೆ ಎಂಬುದು ಹೆಚ್ಚಿನ ವಯೋವೃದ್ಧರ ಅಳಲು.

ಇಲ್ಲಿ ಆಸ್ಪತ್ರೆಯಲ್ಲಿ ಸಾಯುತ್ತಿರುವವರು ಕೊನೆ ಘಳಿಗೆಯಲ್ಲಿ ನೋಡುವುದು ಒಂದೋ ವೈದ್ಯರನ್ನು ಅಥವಾ ನರ್ಸ್ ಅನ್ನು. ಕುಟುಂಬಿಕರು ಯಾರೂ ಇರುವುದಿಲ್ಲ ಎಂಬ ಪರಿಸ್ಥಿತಿ ಇಟಲಿಯಾದ್ಯಂತ ಇದೆ. ಪ್ರೀತಿ ಪಾತ್ರರು ಮೃತಪಟ್ಟವರ ಶವಪೆಟ್ಟಿಗೆ ಬಳಿ ಹೋಗುವುದಕ್ಕೂ ಕೋವಿಡ್-19 ಭೀತಿಯಿಂದಾಗಿ ಹಿಂಜರಿಯುತ್ತಿದ್ದಾರೆ. ಆದರೆ ಇಪ್ಪತ್ತನಾಲ್ಕು ಗಂಟೆ ಸಮರೋಪಾದಿಯಲ್ಲಿ ದುಡಿಯುತ್ತಿರುವ ವೈದ್ಯಕೀಯ ಸಿಬ್ಬಂದಿ ವಿರುದ್ಧ ಆಕ್ರೋಶವಿಲ್ಲ, ಅಸಹಾಯಕತೆಯಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು