ಶುಕ್ರವಾರ, ಮೇ 20, 2022
27 °C

ಆಳ–ಅಗಲ | ಭಾರತ–ಜಪಾನ್‌ ನಂಟು: ಏಳು ದಶಕಗಳ ಬಾಂಧವ್ಯ

ಅಕಿಕೊ ಸುಗಿತಾ Updated:

ಅಕ್ಷರ ಗಾತ್ರ : | |

ಭಾರತ ಮತ್ತು ಜಪಾನ್‌ ನಡುವಣ ರಾಜತಾಂತ್ರಿಕ ಸಂಬಂಧ ಸ್ಥಾಪನೆಯಾಗಿ 70 ವರ್ಷ ತುಂಬಿವೆ. ಈ ಸಂಭ್ರಮವನ್ನು ವಿಶೇಷ ಕಾರ್ಯಕ್ರಮಗಳ ಮೂಲಕ ಸ್ಮರಣೀಯವಾಗಿಸಲು ಯೋಜಿಸಲಾಗಿದೆ. ಹಳೆಯದನ್ನು ಮೆಲುಕು ಹಾಕಲು, ವರ್ತಮಾನದ ಬಗ್ಗೆ ಜಾಗೃತವಾಗಿರಲು ಮತ್ತು ಭವಿಷ್ಯದ ದೃಷ್ಟಿಕೋನ ರೂಪಿಸಲು ಇದೊಂದು ಸುಸಂದರ್ಭ. ಜಪಾನ್‌–ಭಾರತ ದ್ವಿಪಕ್ಷೀಯ ಸಂಬಂಧದ 70ನೇ ವರ್ಷ ಮತ್ತು ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವವು ಜತೆಯಾಗಿ ಬಂದಿರುವುದು ಸಂಭ್ರಮವು ದುಪ್ಪಟ್ಟಾಗಲು ಕಾರಣವಾಗಿದೆ. 

ಭಾರತ–ಜಪಾನ್‌ನ ದ್ವಿಪಕ್ಷೀಯ ಸಂಬಂಧ 1952ರಲ್ಲಿ ಔಪಚಾರಿಕವಾಗಿ ಆರಂಭವಾಯಿತು. ಎರಡನೇ ಜಾಗತಿಕ ಯುದ್ಧದ ನಂತರ, ಬಹುಪಕ್ಷೀಯವಾದ ಸ್ಯಾನ್‌ ಫ್ರಾನ್ಸಿಸ್ಕೊ ಶಾಂತಿ ಒಪ್ಪಂದಕ್ಕೆ ಸಹಿ ಹಾಕುವ ಬದಲು ಭಾರತವು ಜಪಾನ್‌ ಜತೆಗೆ ದ್ವಿಪಕ್ಷೀಯ ಒಪ್ಪಂದ ಮಾಡಲು ನಿರ್ಧರಿಸಿತು. ಜಪಾನ್, ಅಂತರರಾಷ್ಟ್ರೀಯ ಸಮುದಾಯವನ್ನು ಗೌರವ ಮತ್ತು ಸಮಾನತೆಯ ನೆಲೆಯಲ್ಲಿ ಸೇರಲು ಸಾಧ್ಯವಾಗುವಂತೆ ಮಾಡಲು ಭಾರತವು ಈ ಕ್ರಮ ಕೈಗೊಂಡಿತ್ತು. ಎರಡೂ ದೇಶಗಳ ಸುದೀರ್ಘ ಸ್ನೇಹಕ್ಕೆ ಇದುವೇ ನೆಲೆಗಟ್ಟು. ರಾಜತಾಂತ್ರಿಕ ಸಂಬಂಧ ಸ್ಥಾಪನೆಗೆ ಬಹಳ ಹಿಂದಿನಿಂದಲೂ ವ್ಯಾಪಾರ, ಶಿಕ್ಷಣ ಮತ್ತು ಸಾಂಸ್ಕೃತಿಕ ವಿನಿಮಯಗಳ ಮೂಲಕ ಎರಡೂ ದೇಶಗಳ ಜನರ ನಡುವೆ ಸದಭಿಪ್ರಾಯವು ಆಳವಾಗಿ ಬೇರೂರಿತ್ತು. 

1951ರಲ್ಲಿ ಭಾರತವು ಮೊದಲ ಏಷ್ಯನ್‌ ಗೇಮ್ಸ್‌ ಕ್ರೀಡಾಕೂಟವನ್ನು ದೆಹಲಿಯಲ್ಲಿ ಆಯೋಜಿಸಿತ್ತು. ಈ ಕೂಟಕ್ಕೆ ಜಪಾನ್‌ನ ಕ್ರೀಡಾಪಟುಗಳನ್ನು ಆಹ್ವಾನಿಸಿತ್ತು. ಎರಡನೇ ಜಾಗತಿಕ ಮಹಾಯುದ್ಧದ ನಂತರ ಜಪಾನ್‌ನ ಧ್ವಜವು ಹಾರಾಡಿದ ಮೊದಲ ಸಂದರ್ಭ ಅದಾಗಿತ್ತು. ತಮ್ಮ ದೇಶವನ್ನು ಕಟ್ಟಲು ಹೋರಾಡುತ್ತಿದ್ದ ಜಪಾನ್‌ನ ಜನರ ಮನಸ್ಸಿಗೆ ಸಾಂತ್ವನ ಹೇಳಿದ ಸನ್ನಿವೇಶ ಅದು. 70 ವರ್ಷಗಳ ಬಹು ಆಯಾಮಗಳ ಕೊಡು–ಕೊಳುವಿಕೆಯ ನಂತರ ಈಗ ಎರಡೂ ದೇಶಗಳ ನಡುವಣ ಸಂಬಂಧವು ರಕ್ಷಣೆ ಮತ್ತು ಜಾಗತಿಕ ಪಾಲುದಾರಿಕೆಯ ವಿಶೇಷ ಘಟ್ಟಕ್ಕೆ ತಲುಪಿದೆ. ಏಷ್ಯಾ ಮತ್ತು ಅದರಾಚೆಗೆ, ಶಾಂತಿ, ಸ್ಥಿರತೆ ಮತ್ತು ಅಭಿವೃದ್ಧಿಗೆ ಒತ್ತು ನೀಡುವಿಕೆಯಲ್ಲಿ ನೀಡಿದ ಕೊಡುಗೆಗಳ ಬಗ್ಗೆ ಎರಡೂ ದೇಶಗಳಿಗೆ ಪರಸ್ಪರ ಗೌರವವಿದೆ. ಅದರ ಆಧಾರದಲ್ಲಿ ನಮ್ಮ ಪಾಲುದಾರಿಕೆಯು ನಿಂತಿದೆ. ಹಿಂದೂ ಮಹಾಸಾಗರ–ಪೆಸಿಫಿಕ್‌ ಪ್ರದೇಶವನ್ನು ಮುಕ್ತವಾಗಿ ಇರಿಸುವಲ್ಲಿ ಮತ್ತು ವಿವಿಧ ಜಾಗತಿಕ ವಿಚಾರಗಳಲ್ಲಿ ನಾವು ಸಹಜ ಪಾಲುದಾರರು ಎಂದು ಪರಿಗಣಿಸುತ್ತೇವೆ.  ಉಭಯ ದೇಶಗಳ ಪ್ರಧಾನಿಗಳ ನೇತೃತ್ವದಲ್ಲಿ ಇದು ಸಾಧ್ಯವಾಗಿದ್ದಕ್ಕೆ ಹೆಮ್ಮೆ ಇದೆ. 

ಜನರ ನಡುವಣ ಸಂಪರ್ಕಕ್ಕೆ ಬಹು ದೀರ್ಘ ಕಾಲದ ಇತಿಹಾಸವಿದ್ದು, ಆರನೇ ಶತಮಾನದಿಂದಲೇ ಅದನ್ನು ಗುರುತಿಸಬಹುದು. ಬೌದ್ಧ ಧರ್ಮವು ಭಾರತದಿಂದ ಜಪಾನ್‌ಗೆ ಬಂತು. 752ರಲ್ಲಿ ಭಾರತದ ಬೌದ್ಧ ಸನ್ಯಾಸಿ ಬೋಧಿಸೇನ ಅವರು ತೊಡೈ–ಜಿಯಲ್ಲಿನ ಬುದ್ಧನ ಮಹಾ ಪ್ರತಿಮೆಗೆ ಪೂಜೆ ಸಲ್ಲಿಸಿದ್ದರು. ಇದು ಜಪಾನ್‌ನ ಅತ್ಯಂತ ಮಹತ್ವದ ದೇಗುಲಗಳಲ್ಲಿ ಒಂದು. 19ನೇ ಶತಮಾನದಲ್ಲಿ ಮೈಜಿ ದೊರೆಯ ಯುಗದಲ್ಲಿ ಜಪಾನ್‌ನ ಪುನರುತ್ಥಾನ ಸಂದರ್ಭದಲ್ಲಿ ದೇಶವನ್ನು ಆಧುನಿಕಗೊಳಿಸಲು ನೈಸರ್ಗಿಕ ಸಂಪನ್ಮೂಲಗಳ ಅಗತ್ಯ ಇತ್ತು. ಜಪಾನ್‌ನ ಹಲವರು ಭಾರತಕ್ಕೆ ಬಂದು ಹತ್ತಿ, ಕಬ್ಬಿಣದ ಅದಿರು ಇತ್ಯಾದಿ ಒಯ್ದಿದ್ದರು. ಕಲಾವಿದರ ನಡುವಣ ಸಂಬಂಧವನ್ನು ಉಲ್ಲೇಖಿಸಲೇಬೇಕು. ಸಾಹಿತ್ಯದ ನೊಬೆಲ್‌ ಪ್ರಶಸ್ತಿ ಪುರಸ್ಕೃತ ರವೀಂದ್ರನಾಥ ಟ್ಯಾಗೋರ್‌ ಮತ್ತು ಒಕಕುರ ತೆನ್‌ಶಿನ್‌ ನಡುವಣ ಸಂವಹನವು ಇಲ್ಲಿ ಗಮನಾರ್ಹ. ತೆನ್‌ಶಿನ್‌ ಅವರು ಜಪಾನ್‌ನ ತತ್ವಜ್ಞಾನಿ. ಟ್ಯಾಗೋರ್ ಮತ್ತು ತೆನ್‌ಶಿನ್‌ ಇಬ್ಬರೂ ಸ್ವಾಮಿ ವಿವೇಕಾನಂದರಿಂದ ಸ್ಫೂರ್ತಿ ಪಡೆದವರು. 

‘ನಮ್ಮ ಶತಮಾನೋತ್ಸವಕ್ಕೆ ಭವಿಷ್ಯ ನಿರ್ಮಾಣ’ ಎಂಬುದು ಭಾರತ–ಜಪಾನ್‌ ನಡುವಣ ದ್ವಿಪಕ್ಷೀಯ ಸಂಬಂಧದ 70ನೇ ವಾರ್ಷಿಕೋತ್ಸವದ ತಿರುಳು. ಈ ಮಂತ್ರವು ಈ ವರ್ಷ ನಮ್ಮನ್ನು ಮುನ್ನಡೆಸಲಿದೆ. ನಾವು ಒಟ್ಟಾಗಿ ನಮ್ಮ ಭವಿಷ್ಯವನ್ನು ಕಟ್ಟಿಕೊಳ್ಳಲಿದ್ದೇವೆ ಮತ್ತು 100ನೇ ವಾರ್ಷಿಕೋತ್ಸವ ಹಾಗೂ ಅದರಾಚೆಗೂ ಮುನ್ನುಗ್ಗಲಿದ್ದೇವೆ ಎಂಬುದು ಇಲ್ಲಿನ ಸಂದೇಶವಾಗಿದೆ. ನಮ್ಮ ಸಹಭಾಗಿತ್ವಕ್ಕೆ ಭವಿಷ್ಯವು ಅಪಾರ ಸಾಧ್ಯತೆಗಳನ್ನು ತೆರೆದಿರಿಸಿದೆ ಎಂಬುದನ್ನು ನಾನು ಬಲವಾಗಿ ನಂಬಿದ್ದೇನೆ. 

ಮೊದಲನೆಯದಾಗಿ, ಏಷ್ಯಾದ ಪ್ರಜಾಸತ್ತಾತ್ಮಕ ರಾಷ್ಟ್ರಗಳಾಗಿ ಜಾಗತಿಕ ಶಾಂತಿ ಮತ್ತು ಸಮೃದ್ಧಿಗೆ ನಾವು ಪರಸ್ಪರ ಸಹಕರಿಸಲಿದ್ದೇವೆ. ಸಮಾನ ಮೌಲ್ಯಗಳು ಮತ್ತು ಪರಂಪರೆಗಳ ದೃಢ ನೆಲೆಗಟ್ಟಿನಲ್ಲಿ ನಾವು ರಾಜಕೀಯ ಆರ್ಥಿಕ ಮತ್ತು ರಕ್ಷಣಾ ಹಿತಾಸಕ್ತಿಗಳನ್ನು ಹಂಚಿಕೊಂಡಿದ್ದೇವೆ. ವಿಶೇಷವಾಗಿ, ನಿಯಮ ಆಧಾರಿತವಾದ ಮತ್ತು ಮುಕ್ತವಾದ ಅಂತರರಾಷ್ಟ್ರೀಯ ವ್ಯವಸ್ಥೆ ನಿರ್ಮಾಣಕ್ಕಾಗಿ ನಮ್ಮ ಶ್ರಮವನ್ನು ಮುಂದುವರಿಸಿದ್ದೇವೆ.  

ಎರಡನೆಯದಾಗಿ, ಆರ್ಥಿಕ ಸಂಬಂಧವನ್ನು ಇನ್ನಷ್ಟು ಗಾಢಗೊಳಿಸಬಹುದಾಗಿದೆ. ಜಪಾನ್‌ ಬಹು ದೀರ್ಘ ಕಾಲ ಭಾರತಕ್ಕೆ ಅಧಿಕೃತ ಅಭಿವೃದ್ಧಿ ನೆರವಿನ ದಾನಿ ಆಗಿತ್ತು. ನಮ್ಮ ಸಹಭಾಗಿತ್ವದ ಒಂದು ಉದಾಹರಣೆ ಬೆಂಗಳೂರು ಮೆಟ್ರೊ ಮಾರ್ಗ. ಪೂರ್ವ–ಪಶ್ಚಿಮ ಮಾರ್ಗವು 2016ರಲ್ಲಿ ಮತ್ತು ದಕ್ಷಿಣ–ಉತ್ತರ ಮಾರ್ಗವು 2017ರಲ್ಲಿ ಕಾರ್ಯಾರಂಭ ಮಾಡಿದವು. ಭಾರತದಲ್ಲಿ ಅತಿ ಹೆಚ್ಚು ಹೂಡಿಕೆ ಮಾಡಿದ ದೇಶಗಳಲ್ಲಿ ಜಪಾನ್‌ ಕೂಡ ಒಂದು. ಸಾಮಾಜಿಕ ಮೂಲಸೌಕರ್ಯ ಮತ್ತು ಸಂಪರ್ಕವನ್ನು ವೃದ್ಧಿಸಲು ಮೂರನೇ ದೇಶಗಳಿಗೆ ಆರ್ಥಿಕ ಸಹಕಾರಕ್ಕೆ ಎರಡೂ ದೇಶಗಳು ಪ್ರೋತ್ಸಾಹ ನೀಡಿವೆ. 

ಮೂರನೆಯದಾಗಿ, ಸಾಂಸ್ಕೃತಿಕ ವಿನಿಮಯದಲ್ಲಿ ಸಾಹಿತ್ಯ, ಸಿನಿಮಾ, ಸಂಗೀತ, ಅನಿಮಿ (ಜಪಾನ್‌ನ ವಿಶಿಷ್ಟವಾದ ಆ್ಯನಿಮೇಷನ್‌), ಕ್ರೀಡೆ ಮತ್ತು ಶಿಕ್ಷಣ ನಮ್ಮ ಸಂಬಂಧಕ್ಕೆ ಅಗತ್ಯ ಮತ್ತು ಇವು ಪರಸ್ಪರ ಗ್ರಹಿಕೆಯನ್ನು ಗಟ್ಟಿಗೊಳಿಸುತ್ತವೆ. ಜಪಾನ್‌ನ ವಿದ್ಯಾರ್ಥಿಗಳ ಸಂಖ್ಯೆ ಬೆಂಗಳೂರಿನಲ್ಲಿ ಹೆಚ್ಚುತ್ತಿರುವುದು ಸಂತಸದ ವಿಚಾರ. ಈ ಯುವ ಮತ್ತು ಚಿಂತನಶೀಲ ಮನಸ್ಸುಗಳು ನಮ್ಮ ದೇಶಗಳ ನಡುವಣ ಸಂಬಂಧವು ಭವಿಷ್ಯದಲ್ಲಿ ಇನ್ನಷ್ಟು ಸದೃಢಗೊಳ್ಳಲು ನೆಲೆಗಟ್ಟಾಗಲಿವೆ ಎಂಬ ಗಟ್ಟಿ ನಂಬಿಕೆ ನನ್ನಲ್ಲಿದೆ. ಫೆಬ್ರುವರಿ 28ರಿಂದ ಮಾರ್ಚ್‌ 6ರವರೆಗೆ ಜಪಾನ್‌ ಆಹಾರೋತ್ಸವವು ವರ್ಚುವಲ್‌ ಆಗಿ ನಡೆಯಲಿದೆ ಎಂಬುದು ಕೂಡ ಸಂಭ್ರಮದ ವಿಷಯವೇ. ಬೆಂಗಳೂರಿನಲ್ಲಿರುವ ಜಪಾನೀಸ್‌ ರೆಸ್ಟೊರೆಂಟ್‌ಗಳು, ಜಪಾನ್‌ನ ಆಹಾರ ಕಂಪನಿಗಳು ಇದರಲ್ಲಿ ಭಾಗಿ ಆಗಲಿವೆ. 

ಕೋವಿಡ್‌ ಸಾಂಕ್ರಾಮಿಕ ಇದ್ದರೂ ನಮ್ಮ ಸಂಬಂಧವು ಬೆಳೆಯುತ್ತಲೇ ಹೋಗಲಿದೆ. ಮುಖಾಮುಖಿ ಸಂವಹನಗಳ ಮೇಲೆ ಸಾಂಕ್ರಾಮಿಕವು ಪರಿಣಾಮ ಬೀರಿದೆ. ಆದರೆ, ಅದು ನಮ್ಮ ಸಂಬಂಧವನ್ನು ದುರ್ಬಲಗೊಳಿಸಿಲ್ಲ ಎಂಬುದು ನಿಜ. ನಮ್ಮ ಸಂಬಂಧ ಎಷ್ಟು ದೃಢವಾಗಿದೆ ಎಂಬುದಕ್ಕೆ ಅದರ ಸುದೀರ್ಘ ಇತಿಹಾಸವೇ ಪುರಾವೆ. ಭವಿಷ್ಯದ ಬಗೆಗಿನ ನಮ್ಮ ಸಮಾನ ದೃಷ್ಟಿಕೋನವನ್ನು ಎಂದೂ ಯಾವುದೂ ಬಾಧಿಸದು. ಡಿಜಿಟಲ್‌ ತಂತ್ರಜ್ಞಾನವನ್ನು ಬಳಸಿಕೊಂಡು ಹೊಸ ಮತ್ತು ಆವಿಷ್ಕಾರಕ ವಿಧಾನಗಳ ಮೂಲಕ ಸಾಂಕ್ರಾಮಿಕದ ಸಂದರ್ಭದಲ್ಲಿಯೂ ಪರಸ್ಪರರ ಜತೆ ಸಂಪರ್ಕದಲ್ಲಿ ಇರಲು ಸಾಧ್ಯ.

ವಿಶೇಷವಾದ 2022ನೇ ವರ್ಷದ ಶುಭಾಶಯಗಳನ್ನು ಹೇಳುತ್ತಾ ಲೇಖನವನ್ನು ಮುಗಿಸುತ್ತೇನೆ. ನಮ್ಮೆರಡೂ ದೇಶಗಳ ಜನರಿಗೆ ಈ ವರ್ಷವು ಸ್ಮರಣೀಯವಾಗಲಿ ಎಂದು ಹಾರೈಸುತ್ತೇನೆ. 

ಎಂದೂ ಬತ್ತದ ಬಂಧ

ಭಾರತ ಹಾಗೂ ಜಪಾನ್ ನಡುವಿನ ಸಂಬಂಧ ಧರ್ಮ ಹಾಗೂ ಸಂಸ್ಕೃತಿಯ ನೆಲೆಯಲ್ಲಿ ಕ್ರಿಸ್ತಶಕ 752ರಲ್ಲೇ ಶುರುವಾಗಿತ್ತು. ಬೌದ್ಧಧರ್ಮವು ಜಪಾನ್‌ ಜನರ ಸಾಂಸ್ಕೃತಿಕ ಜೀವನದ ಮೇಲೆ ಬಹುದೊಡ್ಡ ಪರಿಣಾಮ ಉಂಟು ಮಾಡಿದೆ. ಚೀನಾದ ಪ್ರಾದೇಶಿಕ ಬೆದರಿಕೆಯ ನಡುವೆಯೂ, ಏಷ್ಯಾದ ಈ ಪ್ರಮುಖ ದೇಶಗಳ ಸಂಬಂಧವು ಇನ್ನಷ್ಟು ಬಿಗಿಯಾಗಿದೆ

ಎರಡೂ ದೇಶಗಳ ನಡುವೆ ಮೊದಲ ಅಧಿಕೃತ ರಾಜತಾಂತ್ರಿಕ ಸಂಬಂಧ ಏರ್ಪಟ್ಟಿದ್ದು 1952ರಲ್ಲಿ. ಎರಡನೇ ಮಹಾಯುದ್ಧದ ಬಳಿಕ ಜರ್ಜರಿತವಾಗಿದ್ದ ಜಪಾನ್‌ಗೆ ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಆನೆಯೊಂದನ್ನು ಉಡುಗೊರೆಯಾಗಿ ನೀಡಿದ್ದರು

ಯುದ್ಧದ ಬಳಿಕ ಸೊರಗಿದ್ದ ಜಪಾನ್‌ಗೆ ಭಾರತದಿಂದ ರಫ್ತು ಮಾಡಲಾದ ಕಬ್ಬಿಣದ ಅದಿರು, ಅಲ್ಲಿನ ಕೈಗಾರಿಕೆಗಳ ಅಭಿವೃದ್ಧಿಗೆ ಬಲ ತುಂಬಿತು. 1958ರಲ್ಲಿ ಭಾರತಕ್ಕೆ ಜಪಾನ್ ಮೊದಲ ಬಾರಿ ಸಾಲ ನೀಡಿತು. 1983ರಲ್ಲಿ ಭಾರತದಲ್ಲಿ ಜಂಟಿಯಾಗಿ ಮಾರುತಿ ಸುಜುಕಿ ಕಾರು ತಯಾರಿಕಾ ಘಟಕ ಆರಂಭವಾಯಿತು

ಪಾವತಿ ಸಮತೋಲನ ಬಿಕ್ಕಟ್ಟಿನಿಂದ ಭಾರತವನ್ನು ಪಾರು ಮಾಡಿದ ಕೆಲವೇ ದೇಶಗಳಲ್ಲಿ ಜಪಾನ್ ಸೇರಿದೆ. ಆದರೆ, 1998ರಲ್ಲಿ ಅಣ್ವಸ್ತ್ರ ಪರೀಕ್ಷೆಯ ಕಾರಣವಾಗಿ, ಭಾರತದ ಮೇಲೆ ಜಪಾನ್ ಕಠಿಣ ನಿರ್ಬಂಧಗಳನ್ನು ಹೇರಿತು 

ಪ್ರಧಾನಿ ಶಿಂಜೊ ಅಬೆ ಅವರ ಭಾರತ ಭೇಟಿ ವೇಳೆ, ಉಭಯ ದೇಶಗಳು ತಮ್ಮ ಮೈತ್ರಿಯನ್ನು ‘ಜಾಗತಿಕ ಮತ್ತು ರಕ್ಷಣಾ ಪಾಲುದಾರಿಕೆ’ಯ ಮಟ್ಟಕ್ಕೆ ಏರಿಸಿದವು. ಪ್ರತೀ ವರ್ಷ ಪ್ರಧಾನಮಂತ್ರಿಗಳ ಶೃಂಗಸಭೆ ನಡೆಸಲು ಎರಡೂ ದೇಶಗಳು ಸಮ್ಮತಿಸಿದವು

ವ್ಯಾಪಾರ ಹಾಗೂ ಹೂಡಿಕೆಯನ್ನು ಹೆಚ್ಚಿಸುವ ದಿಸೆಯಲ್ಲಿ ಎರಡೂ ದೇಶಗಳು ‘ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ’ಕ್ಕೆ (ಸಿಇಪಿಎ) ಬಂದವು. ಬೆಂಗಳೂರು–ಚೆನ್ನೈ ಕೈಗಾರಿಕಾ ಕಾರಿಡಾರ್‌ನ ಕಾರ್ಯಸಾಧ್ಯತಾ ಅಧ್ಯಯನ ಕೈಗೊಳ್ಳಲು ಒಪ್ಪಿಗೆ ಸಿಕ್ಕಿತು  

ಪ್ರಧಾನಿ ನರೇಂದ್ರ ಮೋದಿ ಅವರ ಜಪಾನ್‌ ಭೇಟಿ ವೇಳೆ ಉಭಯ ದೇಶಗಳ ಮೈತ್ರಿಯು ‘ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆ’ಯಾಗಿ ಮತ್ತೆ ಮೇಲ್ದರ್ಜೆಗೇರಿತು. ‘ಭಾರತ–ಜಪಾನ್ ಹೂಡಿಕೆ ಉತ್ತೇಜನ ಪಾಲುದಾರಿಕೆ’ ಜಾರಿಗೆ ಬಂದಿತು. ಜಪಾನ್‌ ಪ‍್ರಧಾನಿ ಅಬೆ ಅವರು ₹2.50 ಲಕ್ಷ ಕೋಟಿ ಮೊತ್ತದ ಸರ್ಕಾರಿ ಮತ್ತು ಖಾಸಗಿ ಹೂಡಿಕೆಯ ಭರವಸೆ ನೀಡಿದರು 

ಹಲವು ವರ್ಷಗಳ ಸಮಾಲೋಚನೆಯ ಬಳಿಕ, ಪ್ರಧಾನಿ ಮೋದಿ ಅವರ ಜಪಾನ್ ಭೇಟಿಯ ವೇಳೆ ಉಭಯ ದೇಶಗಳು ‘ನಾಗರಿಕ ಪರಮಾಣು ಸಹಕಾರ ಒಪ್ಪಂದ’ಕ್ಕೆ ಸಹಿ ಹಾಕಿದವು. 

ಭಾರತದ ‘ಆ್ಯಕ್ಟ್ ಈಸ್ಟ್ ಪಾಲಿಸಿ’ ಮತ್ತು ಜಪಾನ್‌ನ ‘ಮುಕ್ತ ಹಿಂದೂ ಮಹಾಸಾಗರ-ಪೆಸಿಫಿಕ್ ವಿಷನ್‌’ ಅಡಿಯಲ್ಲಿ ಭಾರತ-ಜಪಾನ್ ಸಹಯೋಗಕ್ಕೆ ವೇದಿಕೆಯನ್ನು ಒದಗಿಸುವ ಗುರಿಯೊಂದಿಗೆ ಆ್ಯಕ್ಟ್ ಈಸ್ಟ್ ವೇದಿಕೆ ಜನ್ಮತಳೆಯಿತು. 2019–20ರ ಅವಧಿಯಲ್ಲಿ ಉಭಯ ದೇಶಗಳ ದ್ವಿಪಕ್ಷೀಯ ವ್ಯಾಪಾರವು ₹89 ಸಾವಿರ ಕೊಟಿಗೆ ತಲುಪಿತ್ತು. 

ಎರಡೂ ದೇಶಗಳು ಬಂಗಾಳ ಕೊಲ್ಲಿಯಲ್ಲಿ ನಡೆದ ಮಲಬಾರ್ ಸೇನಾ ಕಸರತ್ತಿನಲ್ಲಿ ಭಾಗವಹಿಸಿದ್ದವು. ಎರಡೂ ರಕ್ಷಣಾ ಪಡೆಗಳು ಜಿಮೆಕ್ಸ್, ಶಿನ್ಯು ಮೈತ್ರಿ ಮತ್ತು ಧರ್ಮ ಗಾರ್ಡಿಯನ್ ಎಂಬ ದ್ವಿಪಕ್ಷೀಯ ಸೇನಾ ಕಸರತ್ತು ಆಯೋಜಿಸುತ್ತವೆ. 2+2 ಸಭೆ, ವಾರ್ಷಿಕ ರಕ್ಷಣಾ ಸಚಿವರ ಸಂವಾದ ಮತ್ತು ಕೋಸ್ಟ್ ಗಾರ್ಡ್-ಟು-ಕೋಸ್ಟ್ ಗಾರ್ಡ್ ಸಂವಾದ ಸೇರಿದಂತೆ ಜಪಾನ್ ಮತ್ತು ಭಾರತದ ನಡುವೆ ಭದ್ರತೆ ಮತ್ತು ರಕ್ಷಣಾ ಮಾತುಕತೆಗಳು ನಿರಂತರವಾಗಿವೆ. ಚೀನಾದ ಪ್ರಾದೇಶಿಕ ಬೆದರಿಕೆ ಎದುರಿಸುವ ಉದ್ದೇಶದಿಂದ ಮುಕ್ತ ಮತ್ತು ಸಮೃದ್ಧ ಹಿಂದೂ ಮಹಾಸಾಗರ-ಪೆಸಿಫಿಕ್ ಪ್ರದೇಶ ನಿರ್ಮಾಣ ಉದ್ದೇಶಕ್ಕಾಗಿ ಕ್ವಾಡ್‌ ಕೂಟ ರಚಿಸಲಾಗಿದ್ದು, ಭಾರತ–ಜಪಾನ್ ಸಕ್ರಿಯ ಪಾಲುದಾರರಾಗಿವೆ.

-ಲೇಖಕಿ: ಬೆಂಗಳೂರಿನಲ್ಲಿ ಜಪಾನ್‌ನ ಕಾನ್ಸುಲ್‌ ಜನರಲ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು