ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ಭಾರತಕ್ಕೆ ಮರಳಿ ಸಿಕ್ಕೀತೇ ಕೊಹಿನೂರ್ ವಜ್ರ?

Last Updated 22 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಬ್ರಿಟನ್ ರಾಣಿಯ ಕಿರೀಟದಲ್ಲಿರುವ ಕೊಹಿನೂರ್ ವಜ್ರವು ಈವರೆಗೆ ಹತ್ತಾರು ಕೈಬದಲಾಗಿದ್ದು ಇತಿಹಾಸದಲ್ಲಿ ದಾಖಲಾಗಿದೆ. ಭಾರತದ್ದೇ ಆಗಿದ್ದ ಈ ವಜ್ರವನ್ನು ಮರಳಿ ಭಾರತಕ್ಕೆ ತರಬೇಕು ಎಂಬ ಕೂಗು ಈಗ ಬಲವಾಗಿದೆ. ಜಗತ್ತಿನ ಅತ್ಯಮೂಲ್ಯ ವಜ್ರಗಳಲ್ಲಿ ಒಂದಾದ ಕೊಹಿನೂರ್‌ನ ಹಿಂದೆ ಹತ್ತಾರು ಕರಾಳ ಕಥೆಗಳಿವೆ. ಈ ವಜ್ರಕ್ಕೆ ‘‌ಕತ್ತಲೆಯ ಪರ್ವತ’ ಎಂಬ ಅಡ್ಡ ಹೆಸರೂ ಇದೆ. ಈ ವಜ್ರವನ್ನು ಧರಿಸಿದ ಪುರುಷರಿಗೆ ಇದು ದುರದೃಷ್ಟವನ್ನು ತರುತ್ತದೆ ಮತ್ತು ಮಹಿಳೆಯರು ಧರಿಸಿದರಷ್ಟೇ ಏಳಿಗೆ ಸಾಧ್ಯ ಎಂಬ ಪ್ರತೀತಿಯೂ ಇದೆ.

ಈ ವಜ್ರವು ಕ್ರಿಸ್ತ ಶಕ 1100ರಿಂದ ಐತಿಹಾಸಿಕ ಉಲ್ಲೇಖವನ್ನು ಹೊಂದಿದೆ. ಕೊಹಿನೂರ್‌ಗೆ ಸಂಬಂಧಿಸಿದ ಇತಿಹಾಸವನ್ನು ಗಮನಿಸಿದರೆ, ಅದನ್ನು ಹೊಂದಿದ್ದ ಪ್ರತಿಯೊಬ್ಬ ರಾಜನೂ ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿ ವಜ್ರವನ್ನು ಕಳೆದುಕೊಂಡಿರುವುದು ತಿಳಿಯುತ್ತದೆ. ಇದನ್ನು ಹೊಂದಿದ್ದ ರಾಜಮನೆತನಗಳೆಲ್ಲವೂ ಪತನವಾಗಿದ್ದು ಗೊತ್ತಾಗುತ್ತದೆ. ಬ್ರಿಟನ್‌ ರಾಜಮನೆತನ ಮಾತ್ರ ಇದಕ್ಕೆ ಅಪವಾದ. ಯುದ್ಧದಲ್ಲಿನ ಸೋಲಿನ ಕಾರಣಕ್ಕೆ ಈ ವಜ್ರ ಕೈಬದಲಾಗಿದ್ದೇ, ಇದಕ್ಕೆ ದುರದೃಷ್ಟದ ವಜ್ರ ಎಂಬ ಕುಖ್ಯಾತಿ ಅದಕ್ಕೆ ಬರಲು ಕಾರಣ ಎಂದು ವಿಶ್ಲೇಷಿಸಲಾಗಿದೆ.

ಕ್ರಿ.ಶ.1100–1300ರ ಮಧ್ಯೆ ದಕ್ಷಿಣ ಭಾರತದ ಗೋಲ್ಕೊಂಡ ಪ್ರದೇಶದ ಗಣಿಯಲ್ಲಿ ಈ ವಜ್ರ ದೊರೆಯಿತು ಎಂದು ಹಲವು ಐತಿಹಾಸಿಕ ದಾಖಲೆಗಳು ಮತ್ತು ಪ್ರವಾಸ ಕಥನಗಳಲ್ಲಿ ಉಲ್ಲೇಖಿಸಲಾಗಿದೆ. ಈ ವಜ್ರಕ್ಕೆ ಆಗ ಯಾವುದೇ ಹೆಸರಿರಲಿಲ್ಲವಾದ್ದರಿಂದ, ಗೋಲ್ಕೊಂಡ ಗಣಿಯಲ್ಲಿ ದೊರೆತ ವಜ್ರ ಎಂದೇ ಅದನ್ನು ಉಲ್ಲೇಖಿಸಲಾಗಿದೆ ಎಂದು ಇತಿಹಾಸ ತಜ್ಞರು ವಿಶ್ಲೇಷಿಸಿದ್ದಾರೆ. ಮೊಘಲ್‌ ಸಾಮ್ರಾಜ್ಯದ ಸ್ಥಾಪಕ ಬಾಬರ್‌ನ ಬಳಿ ಈ ವಜ್ರ ಇತ್ತು ಎಂದು ಆತನಿಗೆ ಸಂಬಂಧಿಸಿದ ‘ಎಂಪರರ್ಸ್‌ ಮೆಮರಿ’ ಎಂಬ ಇಂಗ್ಲಿಷ್‌ ಭಾಷೆಯ ಕಥನದಲ್ಲಿ ಉಲ್ಲೇಖಿಸಲಾಗಿದೆ. ಯುದ್ಧವೊಂದರಲ್ಲಿ ಗೆಲುವು ಸಾಧಿಸಿದ ನಂತರ ಅದನ್ನು ಬಾಬರ್ ವಶಕ್ಕೆ ಪಡೆದಿದ್ದ ಎಂದು ಅದರಲ್ಲಿ ಉಲ್ಲೇಖಿಸಲಾಗಿದೆ.

ಈ ಉಲ್ಲೇಖಕ್ಕೆ ವ್ಯತಿರಿಕ್ತವಾದ ವಾದವೂ ಇದೆ. ಬಾಬರ್‌ನ ಕಥನದಲ್ಲಿ ವಿವರಿಸಿರುವುದು ಬೇರೊಂದು ವಜ್ರದ ಬಗ್ಗೆ, ಅದು ಕೊಹಿನೂರ್‌ ಅಲ್ಲ ಎಂದು ಒಂದು ಗುಂಪಿನ ಇತಿಹಾಸ ತಜ್ಞರು ವಾದಿಸುತ್ತಾರೆ.ಮೊಘಲರು ಮತ್ತು ಗ್ವಾಲಿಯರ್‌ ಸಾಮ್ರಾಟರ ಮಧ್ಯೆ ನಡೆದ ಪಾಣಿಪತ್ ಕದನದಲ್ಲಿ ಗ್ವಾಲಿಯರ್‌ ದೊರೆ 1526ರಲ್ಲಿ ಕೊಹಿನೂರ್ ವಜ್ರವನ್ನು ಬಾಬರನ ಮಗನಿಗೆ ನೀಡಿದ ಎಂದು ಈ ಗುಂಪು ವಾದಿಸುತ್ತದೆ. ಮೊಘಲರ ಬಳಿಯಲ್ಲಿಯೂ ಕೊಹಿನೂರ್ ಹೆಚ್ಚು ಕಾಲ ಉಳಿಯಲಿಲ್ಲ.

17ನೇ ಶತಮಾನದ ಆರಂಭದಲ್ಲಿ ಪರ್ಷಿಯನ್‌ ದೊರೆ ನಾದಿರ್ ಶಾ ದೆಹಲಿ ಮೇಲೆ ದಂಡೆತ್ತಿ ಬಂದ. ದೆಹಲಿಯ ಸುಲ್ತಾನರನ್ನು ಕೊಳ್ಳೆ ಹೊಡೆದಾಗ ಈ ವಜ್ರ ಅವನ ವಶಕ್ಕೆ ಬಂದಿತು ಎಂಬುದು ಇತಿಹಾಸದಲ್ಲಿ ದಾಖಲಾಗಿದೆ. 1747ರಲ್ಲಿ ನಾದಿರ್ ಶಾ ಮೃತಪಟ್ಟಾಗ ಅವನ ಸಾಮ್ರಾಜ್ಯವನ್ನು, ಆತನ ಸೇನಾಧಿಪತಿಯಾಗಿದ್ದ ಅಹಮದ್ ಶಾ ವಶಕ್ಕೆ ಪಡೆದುಕೊಂಡ. ಆಗ ಕೊಹಿನೂರ್ ಸಹ ಅಹಮದ್‌ ಶಾನ ತೆಕ್ಕೆಗೆ ಬಂದಿತು.

ನಂತರದ ದಿನಗಳಲ್ಲಿ ಅಹಮದ್ ಶಾ ಅಫ್ಗಾನಿಸ್ತಾನದಲ್ಲಿ ದುರಾನಿ ಸಾಮ್ರಾಜ್ಯವನ್ನು ಕಟ್ಟಿದ. ಅದೂ ಹೆಚ್ಚು ಕಾಲ ಉಳಿಯಲಿಲ್ಲ. 19ನೇ ಶತಮಾನದ ಆರಂಭದ ವೇಳೆಗೆ ಈ ಸಾಮ್ರಾಜ್ಯ ಪತನವಾಯಿತು. ಅಹಮದ್‌ ಶಾನ ವಾರಸುದಾರನಾಗಿದ್ದ ಶಾ ಶುಜಾನ್‌ ಎದುರಾಳಿಗಳಿಂದ ತಪ್ಪಿಸಿಕೊಳ್ಳಲು ಪಂಜಾಬ್‌ನ ದೊರೆ ಮಹಾರಾಜ ರಂಜಿತ್ ಸಿಂಗ್‌ನ ರಕ್ಷಣೆ ಬಯಸಿದ. ರಕ್ಷಣೆಗೆ ಬದಲಾಗಿ ಕೊಹಿನೂರ್ ಅನ್ನು ರಂಜಿತ್ ಸಿಂಗ್‌ನಿಗೆ ಉಡುಗೊರೆಯಾಗಿ ನೀಡಿದ. 1839ರಲ್ಲಿ ರಂಜಿತ್‌ ಸಿಂಗ್‌ನ ಐದು ವರ್ಷದ ಮಗ ದುಲೀಪ್‌ ಸಿಂಗ್‌ ಕೊಹಿನೂರ್ ಅನ್ನು ಧರಿಸಿದ.

1849ರಲ್ಲಿ ಪಂಜಾಬ್‌ ಸಾಮ್ರಾಜ್ಯ ಮತ್ತು ಈಸ್ಟ್‌ ಇಂಡಿಯಾ ಕಂಪನಿಯ ಮಧ್ಯೆ ನಡೆದ ಒಪ್ಪಂದದಲ್ಲಿ ಕೊಹಿನೂರ್ ವಜ್ರವನ್ನು ಈಸ್ಟ್‌ ಇಂಡಿಯಾ ಕಂಪನಿಗೆ ನೀಡಲಾಯಿತು. ಕಂಪನಿಯು ಅದನ್ನು ಬ್ರಿಟನ್‌ ರಾಣಿ ವಿಕ್ಟೋರಿಯಾಗೆ ಉಡುಗೊರೆಯಾಗಿ ನೀಡಿತು. ಅಂದಿನಿಂದ, ಬ್ರಿಟನ್‌ ರಾಣಿಯರಾದ ವಿಕ್ಟೋರಿಯಾ, ಅಲೆಕ್ಸಾಂಡ್ರಾ, ಮೇರಿ, ಎಲಿಜಬೆತ್ ಮತ್ತು ಎರಡನೇ ಎಲಿಜಬೆತ್ ಅವರು ಈ ವಜ್ರವನ್ನು ಬಳಸಿದ್ದಾರೆ.

ಕರ್ನಾಟಕದಲ್ಲಿ ಸಿಕ್ಕಿತ್ತಾ ವಜ್ರ?

12ರಿಂದ 14ನೇ ಶತಮಾನದಲ್ಲಿ ಆಳ್ವಿಕೆ ನಡೆಸಿದ್ದ ಕಾಕತೀಯ ವಂಶದ ಅರಸರ ಕಾಲದಲ್ಲಿ ಕೊಹಿನೂರ್ ವಜ್ರವನ್ನು ಗಣಿಯಿಂದ ತೆಗೆಯಲಾಯಿತು ಎನ್ನಲಾಗುತ್ತದೆ. ಆದರೆ ಇದು ದೊರೆತ ಖಚಿತ ಜಾಗ ಎಲ್ಲಿ ಎಂಬ ಗೊಂದಲ ಹಾಗೆಯೇ ಇದೆ. ಅವಿಭಜಿತ ಆಂಧ್ರಪ್ರದೇಶ ಹಾಗೂ ಕರ್ನಾಟಕದಲ್ಲಿ ಹರಿಯುವ ಕೃಷ್ಣಾ ನದಿ ವ್ಯಾಪ್ತಿಯ ಗೋಲ್ಕೊಂಡ ಪ್ರದೇಶದ ಗಣಿಯಲ್ಲಿ ಸಿಕ್ಕಿತ್ತು ಎನ್ನಲಾಗುತ್ತದೆ. ಕೊಳ್ಳುರು ಎಂಬುದು ವಜ್ರ ಸಿಕ್ಕ ಜಾಗ. ಈ ಕೊಳ್ಳುರು ಎಂಬ ಜಾಗವು ಈಗಿನ ಯಾದಗಿರಿ ಜಿಲ್ಲೆಯಲ್ಲಿದ್ದು,ವಜ್ರ ಸಿಕ್ಕಿದ ಜಾಗ ಎಂಬುದಾಗಿ ಅಲ್ಲಿ ಫಲಕವನ್ನೂ ಹಾಕಲಾಗಿದೆ.ಆದರೆ, ಆಂಧ್ರದಲ್ಲಿರುವ ಕೊಳ್ಳುರು ಎಂಬ ಜಾಗವೇ ವಜ್ರ ಸಿಕ್ಕಿದ್ದ ಸ್ಥಳ ಎಂಬ ವಾದವಿವೆ. ಯಾವ ಕೊಳ್ಳುರಿನಲ್ಲಿ ವಜ್ರ ಸಿಕ್ಕಿದೆ ಎಂಬುದಕ್ಕೆ ಸ್ಪಷ್ಟ ಪುರಾವೆಗಳಿಲ್ಲ.

ಕೊಹಿನೂರ್ ಎಂದರೇನು...

1739ರವರೆಗೂ ಈ ವಜ್ರಕ್ಕೆ ಹೆಸರು ಇರಲಿಲ್ಲ. ದೆಹಲಿ ಸಾಮ್ರಾಜ್ಯವನ್ನು ಪರ್ಷಿಯನ್‌ ರಾಜ ನಾದಿರ್ ಶಾ ವಶಕ್ಕೆ ಪಡೆದಾಗ ಆತ ಈ ವಜ್ರವನ್ನು ಮೊದಲ ಬಾರಿಗೆ ನೋಡಿದ. ಅದರ ಪ್ರಖರತೆಗೆ ಮೆಚ್ಚಿ, ‘ಕೊಹ್‌ ಇ ನೂರ್‌’ ಎಂದು ಉಲ್ಲೇಖಿಸಿದ ಎಂದು ಇತಿಹಾಸದಲ್ಲಿ ದಾಖಲಾಗಿದೆ. ಕೊಹ್‌ ಇ ನೂರ್‌ ಎಂದರೆ ‘ಬೆಳಕಿನ ಪರ್ವತ’ ಎಂದು ಅರ್ಥ. ಅಂದಿನಿಂದ ಈ ವಜ್ರಕ್ಕೆ ಕೊಹ್‌ ಇ ನೂರ್ ಎಂಬ ಹೆಸರೇ ಉಳಿಯಿತು. ಕಾಲಾಂತರದಲ್ಲಿ ಅದು ಕೊಹಿನೂರ್ ಆಗಿ ಬದಲಾಯಿತು ಎಂದು ಇತಿಹಾಸ ತಜ್ಞರು ವಿವರಿಸಿದ್ದಾರೆ.

ಈ ವಜ್ರವು ಬ್ರಿಟನ್‌ ರಾಜಮನೆತನ ಕೈಸೇರಿದ ನಂತರ 1950ರಲ್ಲಿ ಅದನ್ನು ಮೊದಲು ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗಿತ್ತು. ಅತ್ಯಂತ ದೊಡ್ಡ ಗಾತ್ರದ ಈ ವಜ್ರವು ಸಾರ್ವಜನಿಕರ ಗಮನ ಸೆಳೆದಿತ್ತು. ಆದರೆ ಅದು ಈಗ ಇರುವ ಸ್ಥಿತಿಯಲ್ಲಿ ಇರಲಿಲ್ಲ, ಈಗಿನಷ್ಟು ಹೊಳಪೂ ಅದಕ್ಕೆ ಇರಲಿಲ್ಲ. ಈ ಬಗ್ಗೆ ರಾಣಿ ವಿಕ್ಟೋರಿಯಾ ಅಸಮಾಧಾನ ವ್ಯಕ್ತಪಡಿಸಿದ್ದರಂತೆ. ಆಗ ರಾಜಮನೆತನದ ಅಕ್ಕಸಾಲಿಗನ ಮಾರ್ಗದರ್ಶನದಲ್ಲಿ ಕೊಹಿನೂರ್ ವಜ್ರವನ್ನು ಕತ್ತರಿಸಿ, ಅದಕ್ಕೆ ಈಗಿನ ಆಕಾರ ಮತ್ತು ಹೊಳಪು ನೀಡಲಾಯಿತು. ತೆಗೆದು ಇರಿಸಬಹುದಾದ ಸ್ವರೂಪದಲ್ಲಿ ಈ ವಜ್ರವನ್ನು ಕಿರೀಟದಲ್ಲಿ ಕೂರಿಸಲಾಗಿದೆ. ರಾಣಿ ಮೇರಿಯ ಕಿರೀಟದಲ್ಲಿ ಮೊದಲು ಇದನ್ನು ಕೂರಿಸಲಾಗಿತ್ತು. ನಂತರ ರಾಣಿ ಮೊದಲನೇ ಎಲಿಜಬೆತ್‌ ಅವರ ಕಿರೀಟದಲ್ಲಿ ಈ ವಜ್ರವನ್ನು ಕೂರಿಸಲಾಯಿತು. ಈ ಕಿರೀಟವನ್ನು ‘ಕ್ವೀನ್‌ ಎಲಿಜಬೆತ್ ದಿ ಕ್ವೀನ್ ಮದರ್ಸ್‌ ಕ್ರೌನ್‌’ ಎಂದು ಕರೆಯಲಾಗುತ್ತದೆ.

ಬಲಗೊಂಡ ಕೂಗು

ಕೊಹಿನೂರ್ ವಜ್ರವನ್ನು ಭಾರತಕ್ಕೆ ಮರಳಿ ತರಬೇಕು ಎಂಬ ಅಭಿಯಾನವನ್ನು ವೆಂಕಟೇಶ್ ಶುಕ್ಲಾ ಎಂಬುವರುಲಿಂಕ್ಡ್‌ಇನ್ ಸಾಮಾಜಿಕ ಜಾಲತಾಣದಲ್ಲಿ ಶುರು ಮಾಡಿದ್ದಾರೆ. ಲಕ್ಷಾಂತರ ಜನರ ಸಹಿಯೊಂದಿಗೆ ಬ್ರಿಟನ್ ಮೇಲೆ ಒತ್ತಡ ಹಾಕುವುದು ಈ ಅಭಿಯಾನದ ಉದ್ದೇಶ. ‘ಲೂಟಿ’ ಮಾಡಿರುವ ವಜ್ರವನ್ನು ಗೌರವಪೂರ್ವಕವಾಗಿ ಹಿಂದಿರುಗಿಸಬೇಕು ಎಂಬುದು ಶುಕ್ಲಾ ಅವರ ಒತ್ತಾಯ.ಹಲವು ಸಾಮಾಜಿಕ ಜಾಲತಾಣಗಳಲ್ಲೂ ಈ ಬಗ್ಗೆ ಚರ್ಚೆಯಾಗುತ್ತಿದೆ. ವಜ್ರವನ್ನು ಇಂಗ್ಲೆಂಡ್‌ನಿಂದ ವಾಪಸ್ ತರಬೇಕು ಎಂದು ಸರ್ಕಾರದ ಮೇಲೆ ಒತ್ತಡ ಹಾಕಲಾಗುತ್ತಿದೆ.

ಕೊಹಿನೂರ್ ವಜ್ರವನ್ನು ಭಾರತಕ್ಕೆ ಮರಳಿ ತರಬೇಕು ಎಂಬ ಕೂಗು ಹೊಸದೇನಲ್ಲ. 1947ರಲ್ಲಿ ಬ್ರಿಟಿಷ್ ಸರ್ಕಾರಕ್ಕೆ ಭಾರತ ಮನವಿ ಮಾಡಿತ್ತು. ನಂತರ 1953ರಲ್ಲಿ ಮತ್ತೊಮ್ಮೆ ಮನವಿ ಸಲ್ಲಿಕೆಯಾಯಿತು. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ 50ನೇ ವರ್ಷಾಚರಣೆಗಾಗಿ 1997ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಬ್ರಿಟನ್ ರಾಣಿಗೆ ಮನವಿ ಸಲ್ಲಿಸಲಾಗಿತ್ತು. 2000ನೇ ಇಸವಿಯಲ್ಲಿ ಇದೇ ಆಗ್ರಹದೊಂದಿಗೆ ಹಲವು ಸಂಸತ್ ಸದಸ್ಯರು ಒತ್ತಡ ಹೇರಿದ್ದರು. 2010ರಲ್ಲಿ ಭಾರತೀಯ ಪುರಾತತ್ವ ಇಲಾಖೆಯು ಯತ್ನ ಮುಂದುವರಿಸಿತ್ತು. ಆದರೆ, ಎಲ್ಲ ಬಾರಿಯೂ ಬ್ರಿಟನ್ ಸರ್ಕಾರವು ಭಾರತದ ಮನವಿಯನ್ನು ತಿರಸ್ಕರಿಸುತ್ತಲೇ ಬಂದಿದೆ. ಕಳೆದ 150 ವರ್ಷಗಳಿಂದ ಕೊಹಿನೂರ್ ವಜ್ರವು ಬ್ರಿಟನ್ ಪರಂಪರೆಯ ಭಾಗವಾಗಿದೆ ಎಂದು ಅದು ಹೇಳುತ್ತಾ ಬಂದಿದೆ. ಹೀಗಾಗಿ ವಜ್ರವನ್ನು ದೇಶಕ್ಕೆ ಮರಳಿ ತರಲು ಇರುವ ಅವಕಾಶಗಳು ಕ್ಷೀಣ ಎನ್ನುತ್ತಾರೆ ತಜ್ಞರು.

lಪಾಕಿಸ್ತಾನವು ಸಹ ಕೊಹಿನೂರ್ ವಜ್ರ ತನಗೆ ಸೇರಿದ್ದು ಎಂದು ದಶಕಗಳಿಂದ ವಾದ ಮಂಡಿಸುತ್ತಿದೆ. ಇತ್ತೀಚೆಗೆ 2019ರಲ್ಲಿ, ವಸಾಹತುಶಾಹಿಗಳು ಪಾಕಿಸ್ತಾನದಿಂದ ವಜ್ರವನ್ನು ಕೊಳ್ಳೆ ಹೊಡೆದಿದ್ದು, ತಾನು ಅದರ ನಿಜವಾದ ವಾರಸುದಾರ ಎಂದು ಪ್ರತಿಪಾದಿಸಿತ್ತು

lಕೊಹಿನೂರ್ ವಜ್ರವು ಒರಿಸ್ಸಾದ ಪುರಿಯಲ್ಲಿರುವ ಜಗನ್ನಾಥ ದೇವರಿಗೆ ಸೇರಿದ್ದು ಎಂಬುದಾಗಿ ಶ್ರೀ ಜಗನ್ನಾಥ ಸೇನಾ ಎಂಬ ಸಂಘಟನೆ ಪ್ರತಿಪಾದಿಸಿದೆ. ವಜ್ರ ಮರಳಿಸುವ ವಿಚಾರದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಧ್ಯಪ್ರವೇಶಿಸಬೇಕು ಎಂದು ಕೋರಿದೆ

l‘ಕಲಿನನ್ 1’ ಎಂಬ ಹೆಸರಿನ ಗ್ರೇಟ್ ಸ್ಟಾರ್ ಆಫ್ ಆಫ್ರಿಕಾ ವಜ್ರವನ್ನು ಮರಳಿಸುವಂತೆ ಬ್ರಿಟನ್‌ಗೆ ದಕ್ಷಿಣ ಆಫ್ರಿಕಾ ಮನವಿ ಮಾಡಿದೆ

ಕೇಂದ್ರದ ನಿಲುವು

1849ರಲ್ಲಿ ಪಂಜಾಬ್‌ ಆಡಳಿತಗಾರರು ಈಸ್ಟ್ ಇಂಡಿಯಾ ಕಂಪನಿಗೆ ಕೊಹಿನೂರ್ ವಜ್ರವನ್ನು ‘ಉಡುಗೊರೆ’ಯಾಗಿ ನೀಡಿದ್ದರು ಎಂದು 2016ರಲ್ಲಿ ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ ತಿಳಿಸಿತ್ತು. ಅದನ್ನು ಲೂಟಿ ಮಾಡಿಲ್ಲ, ಬದಲಾಗಿ ಒಪ್ಪಂದದ ಬಳಿಕ ಹಸ್ತಾಂತರಿಸಲಾಗಿದೆ ಎಂದು ಅಂದಿನ ಸಾಲಿಸಿಟರ್ ಜನರಲ್ ರಂಜಿತ್‌ ಸಿನ್ಹಾ ಅವರು ತಿಳಿಸಿದ್ದರು.ಕೋರ್ಟ್‌ಗೆ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಅವರು ಕೇಂದ್ರದ ಪರವಾಗಿ ಉತ್ತರಿಸಿದ್ದರು. ಆದಾಗ್ಯೂ, ವಜ್ರವನ್ನು ಮರಳಿ ತರುವ ಬಗ್ಗೆ ಸೌಹಾರ್ದಯುತ ಮಾರ್ಗದಲ್ಲಿ ಯತ್ನಿಸಲಾಗುವುದು ಎಂದು ಸರ್ಕಾರ ಭರವಸೆ ನೀಡಿತ್ತು.

ಇಂಗ್ಲೆಂಡ್‌ ನಿಲುವು ಅಚಲ

ಬ್ರಿಟನ್‌ ಪ್ರಧಾನಿಯಾಗಿದ್ದ ಡೇವಿಡ್ ಕ್ಯಾಮರೂನ್ ಅವರು 2013ರಲ್ಲಿ ಭಾರತಕ್ಕೆ ಬಂದಿದ್ದಾಗ, ಕೊಹಿನೂರ್ ವಜ್ರವನ್ನು ಮರಳಿಸುವಂತೆ ಅವರಿಗೆ ಮನವಿ ಮಾಡಲಾಗಿತ್ತು. ಆದರೆ, ಈ ಬೇಡಿಕೆ ಅರ್ಥಪೂರ್ಣವಲ್ಲ ಎಂದು ಅವರು ಹೇಳಿದ್ದರು.2016ರಲ್ಲಿ ಬ್ರಿಟನ್‌ನ ಏಷ್ಯಾ ವಿಭಾಗದ ಸಚಿವರಾಗಿದ್ದ ಅಲೋಕ್ ಶರ್ಮಾ ಅವರು ವಜ್ರವನ್ನು ಮರಳಿಸುವ ಯಾವುದೇ ಸಾಧ್ಯತೆಯಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ಆಧಾರ: ಬ್ರಿಟನ್‌ ರಾಜಮನೆತನದ ರಾಯಲ್‌ ಕಲೆಕ್ಷನ್ಸ್‌ ಟ್ರಸ್ಟ್‌, ಬ್ರಿಟಾನಿಕಾ, ವರ್ಲ್ಡ್‌ಹಿಸ್ಟರಿ.ಒಆರ್‌ಜಿ, ಪಿಟಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT