ಶನಿವಾರ, ಏಪ್ರಿಲ್ 17, 2021
32 °C

ಆಳ–ಅಗಲ: ಎರಡನೇ ಅಲೆಯೇ ನಿರ್ಲಕ್ಷ್ಯದ ಫಲವೇ?

ಉದಯ ಯು./ಜಯಸಿಂಹ ಆರ್./ಅಮೃತ ಕಿರಣ ಬಿ.ಎಂ. Updated:

ಅಕ್ಷರ ಗಾತ್ರ : | |

ಕೊರೊನಾ ವೈರಸ್‌ ಸೋಂಕಿನಿಂದ ರಕ್ಷಣೆಗಾಗಿ ಮಾಸ್ಕ್ ಧರಿಸುವ ಕುರಿತು ಜಾಗೃತಿ ಮೂಡಿಸುವ ಚಿತ್ರಗಳು

ಕೊರೊನಾ ಪ್ರತಾಪವು ಹಂತಹಂತವಾಗಿ ನಿಯಂತ್ರಣಕ್ಕೆ ಬಂದ ಬಳಿಕ ಜನವರಿ ತಿಂಗಳಲ್ಲಿ ಭಾರತವು ನಿಧಾನಕ್ಕೆ ಸಹಜ ಸ್ಥಿತಿಗೆ ಮರಳಲು ಆರಂಭಿಸಿತ್ತು. ಆದರೆ ಈಗ ಪುನಃ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ದೇಶದಲ್ಲಿ ಎರಡನೇ ಅಲೆ ಆರಂಭವಾಗಿದೆಯೇ ಎಂಬ ಪ್ರಶ್ನೆ ಮೂಡಿಸಿದೆ

ಹಲವು ತಿಂಗಳ ಕಾಲ ಲಾಕ್‌ಡೌನ್‌ ವಿಧಿಸಿ, ಕೋವಿಡ್‌ ಮೇಲೆ ನಿಯಂತ್ರಣ ಸಾಧಿಸಿದ್ದ ಅನೇಕ ದೇಶಗಳಲ್ಲಿ ಜನಜೀವನ ಸಹಜಸ್ಥಿತಿಗೆ ಬರುತ್ತಿದ್ದಂತೆ ಸೋಂಕು ಮತ್ತೆ ಪ್ರತಾಪ ತೋರಿಸಿದೆ. ಅನೇಕ ರಾಷ್ಟ್ರಗಳಲ್ಲಿ ಎರಡನೇ ಅಲೆ ಕಾಣಿಸಿ, ಪುನಃ ಲಾಕ್‌ಡೌನ್‌ ಘೋಷಿಸುವ ಸಂದರ್ಭ ಬಂದಿದೆ. ಕೆಲವು ರಾಷ್ಟ್ರಗಳು ಈಗಾಗಲೇ ಮೂರನೇ ಅಲೆಯನ್ನು ಕಾಣುತ್ತಿವೆ. ಅದರಂತೆ ಭಾರತದಲ್ಲೂ ಈಗ ಎರಡನೇ ಅಲೆ ಬಂದಿದೆಯೇ?

ಈ ಬಗ್ಗೆ ಆರೋಗ್ಯ ತಜ್ಞರಾಗಲಿ, ವಿಜ್ಞಾನಿಗಳಾಗಲಿ ನಿಖರ ಉತ್ತರ ನೀಡುವುದಿಲ್ಲ. ಇದು ಎರಡನೇ ಅಲೆಯೇ ಅಥವಾ ಜನರು ಮುಂಜಾಗ್ರತಾ ಕ್ರಮಗಳನ್ನು ನಿರ್ಲಕ್ಷಿಸಿದ್ದರಿಂದ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆಯೇ ಎಂಬ ಸಂದೇಹ ಅವರಲ್ಲಿದೆ. ‘ಎರಡನೇ ಅಲೆಯನ್ನು ಅಲ್ಲಗಳೆಯುವಂತಿಲ್ಲ. ಆದ್ದರಿಂದ ಎಚ್ಚರಿಕೆಯಿಂದ ಇರುವುದು ಸೂಕ್ತ’ ಎಂಬ ಸಲಹೆಯನ್ನು ಅವರು ನೀಡುತ್ತಾರೆ.

‘ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚಲು ರೂಪಾಂತರಿತ ವೈರಾಣು ಕಾರಣವೇ ಅಥವಾ ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ನಿರ್ಲಕ್ಷಿಸಿದ್ದು ಕಾರಣವೇ ಎಂಬ ಬಗ್ಗೆ ನಮ್ಮ ಸಂಸ್ಥೆಯ ವಿಜ್ಞಾನಿಗಳು ಅಧ್ಯಯನ ನಡೆಸುತ್ತಿದ್ದಾರೆ’ ಎಂದು ಸಿಎಸ್‌ಐಆರ್‌ ಇನ್‌ಸ್ಟಿಟ್ಯೂಟ್‌ ಆಫ್‌ ಜಿನಾಮಿಕ್ಸ್‌ ಆ್ಯಂಡ್‌ ಇಂಟಿಗ್ರೇಟಿವ್‌ ಬಯಾಲಜಿಯ ನಿರ್ದೇಶಕ ಅನುರಾಗ್‌ ಅಗರ್ವಾಲ್‌ ಹೇಳಿದ್ದಾರೆ.

‘ಈಗಿನ ಏರುಗತಿಯೇ ಮುಂದುವರಿದರೆ ಎರಡನೇ ಅಲೆಯನ್ನು ತಳ್ಳಿಹಾಕಲಾಗದು. ಅಷ್ಟೇ ಅಲ್ಲ, ಸ್ಥಳೀಯವಾಗಿಯೇ ರೂಪಾಂತರಿತ ವೈರಾಣು ರೂಪುಗೊಳ್ಳುವ ಸಾಧ್ಯತೆ ಇದೆ. ಮಹಾರಾಷ್ಟ್ರ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಎರಡನೇ ಅಲೆಯ ಸೂಚನೆಗಳು ಕಾಣಿಸುತ್ತಿವೆ. ಕಟ್ಟುನಿಟ್ಟಿನ ಕ್ರಮಗಳಿಂದ ಇದನ್ನು ತಡೆಯಲು ಸಾಧ್ಯ’ ಎಂದು ಸಂಸ್ಥೆಯ ಆಣ್ವಿಕ ಜೀವಶಾಸ್ತ್ರ ವಿಭಾಗದ ನಿರ್ದೇಶಕ ರಾಕೇಶ್‌ ಮಿಶ್ರಾ ಹೇಳುತ್ತಾರೆ.

‘ಇದು ಎರಡನೇ ಅಲೆ ಆಗಿರಬಹುದು ಅಥವಾ ಇಲ್ಲದಿರಬಹುದು, ಆದರೆ ಇದನ್ನು ಸಂಭವನೀಯ ಅಪಾಯ ಎಂದು ಪರಿಗಣಿಸಿ, ಬರಬಹುದಾದ ಕೆಟ್ಟದಿನಗಳಿಗೆ ಸಿದ್ಧತೆ ಮಾಡಿಕೊಳ್ಳುವುದು ಸೂಕ್ತ’ ಎಂದು ಸಿಎಸ್‌ಐಆರ್‌ನ ಇಂಡಿಯನ್‌
ಇನ್‌ಸ್ಟಿಟ್ಯೂಟ್‌ ಆಫ್‌ ಕೆಮಿಕಲ್‌ ಬಯಾಲಜಿಯ ಸೂಕ್ಷ್ಮರೋಗಾಣು ತಜ್ಞೆ ಉಪಾಸನಾ ರೇ ಎಚ್ಚರಿಕೆ ನೀಡಿದ್ದಾರೆ.

ಆದರೆ, ‘ದೇಶದಲ್ಲಿ ಏರುತ್ತಿರುವ ಕೋವಿಡ್‌ ಪ್ರಕರಣಗಳ ಬಗ್ಗೆ ಹೆಚ್ಚು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ’ ಎಂದು ಲವ್ಲಿ ಪ್ರೊಫೆಶನಲ್‌ ಯುನಿವರ್ಸಿಟಿಯ ಆನ್ವಯಿಕ ವೈದ್ಯಕೀಯ ವಿಜ್ಞಾನ ವಿಭಾಗದ ಮುಖ್ಯಸ್ಥೆ ಮೋನಿಕಾ ಗುಲಾಟಿ ಹೇಳುತ್ತಾರೆ. ‘ಇತರ ದೇಶಗಳಲ್ಲಿ ಎರಡನೇ ಅಲೆಯ ಸಂದರ್ಭದಲ್ಲಿ ಹೆಚ್ಚು ವೇಗವಾಗಿ ಹರಡುವ ರೂಪಾಂತರಿತ ವೈರಾಣು ಕಾಣಿಸಿದೆ. ಆದರೆ ನಮ್ಮಲ್ಲಿ ವೈರಾಣು ಅಷ್ಟು ಅಪಾಯಕಾರಿಯಾಗಿ ರೂಪಾಂತರವಾಗಿಲ್ಲ’ ಎಂದು ಅವರು ಹೇಳುತ್ತಾರೆ.

ಲಸಿಕಾ ಕಾರ್ಯಕ್ರಮವನ್ನು ಚುರುಕುಗೊಳಿಸುವ ಮೂಲಕ ಬರಬಹುದಾದ ಅಪಾಯವನ್ನು ತಪ್ಪಿಸಬಹುದು ಎಂದು ಎಲ್ಲಾ ವಿಜ್ಞಾನಿಗಳು ಅಭಿಪ್ರಾಯಪಡುತ್ತಾರೆ.

ಎಚ್ಚರ ಮರೆತೆವೇ?

ಕೋವಿಡ್‌ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದ್ದಂತೆ ಜನರು ಎಚ್ಚರ ತಪ್ಪಿದ್ದೇ ಪ್ರಕರಣ ಪುನಃ ಹೆಚ್ಚಲು ಕಾರಣವಾಯಿತೇ?

ವಿಜ್ಞಾನಿಗಳು ಈ ಸಾಧ್ಯತೆಯನ್ನು ಅಲ್ಲಗಳೆದಿಲ್ಲ. ದೇಶದಲ್ಲಿ ಅನ್‌ಲಾಕ್‌ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಜನರು ಮಾಸ್ಕ್‌ ಧರಿಸುವುದು, ಕೈಗಳನ್ನು ಸ್ವಚ್ಛ ಗೊಳಿಸುವುದು, ಅಂತರ ಕಾಯ್ದುಕೊಳ್ಳುವುದೇ ಮುಂತಾದ ಪ್ರಮುಖ ಮುನ್ನೆಚ್ಚರಿಕೆಗಳನ್ನು ಮರೆತಿ ದ್ದಾರೆ. ಪ್ರಕರಣಗಳ ಏರುಗತಿಗೆ ಇದು ಕಾರಣ ಇರಬಹುದೆಂಬ ಸಂದೇಹವನ್ನು ವಿಜ್ಞಾನಿಗಳು ವ್ಯಕ್ತಪಡಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಫೆಬ್ರುವರಿ ತಿಂಗಳಲ್ಲಿ ಅತಿ ಹೆಚ್ಚು ಪ್ರಕರಣಗಳು ಕಾಣಿಸಿದ ಎರಡು ನಗರಗಳಲ್ಲಿ, ಕಳೆದ ತಿಂಗಳು ಹೆಚ್ಚು ಮದುವೆ ಸಮಾರಂಭಗಳು ನಡೆದಿದ್ದವು. ಎಲ್ಲಾ ಕಾರ್ಯಕ್ರಮಗಳಲ್ಲೂ ನಿಗದಿತ ಮಿತಿಗಿಂತ ಹಲವು ಪಟ್ಟು ಹೆಚ್ಚು ಜನರು ಪಾಲ್ಗೊಂಡಿದ್ದರು ಎಂಬುದನ್ನು ಅಲ್ಲಿನ ಮಾಧ್ಯಮಗಳು ವರದಿ ಮಾಡಿದ್ದವು.

‘ಸಮೂಹ ರೋಗನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳುವುದು ಅಷ್ಟು ಸುಲಭವಲ್ಲ. ಆದ್ದರಿಂದ ಅಂಥ ಒಂದು ಶಕ್ತಿ ನಮ್ಮಲ್ಲಿ ಬೆಳೆದಿದೆ ಎಂಬ ಭರವಸೆಯಲ್ಲಿ ಇರಲಾಗದು. ವೈರಾಣು ರೂಪಾಂತರಗೊಳ್ಳುತ್ತಿರುವುದರಿಂದ ಒಮ್ಮೆ ಕೋವಿಡ್‌ಗೆ ಒಳಗಾದವರು ಪುನಃ ಅದಕ್ಕೆ ಒಳಗಾಗುವ ಸಾಧ್ಯತೆಯೂ ಇದೆ’ ಎಂದು ಏಮ್ಸ್‌ನ ನಿರ್ದೇಶಕರು ಎಚ್ಚರಿಕೆ ನೀಡಿದ್ದಾರೆ. ಈ ಕಾರಣಕ್ಕಾಗಿಯೇ ಕೋವಿಡ್‌ ನಿಯಮಾವಳಿಗಳನ್ನು ಪುನಃ ಕಟ್ಟುನಿಟ್ಟಾಗಿ ಜಾರಿ ಮಾಡಲು ಕೆಲವು ರಾಜ್ಯ ಸರ್ಕಾರಗಳು ಮುಂದಾಗಿವೆ.

ರೂಪಾಂತರ ಕೊರೊನಾ ವೈರಸ್‌ನ ಪಿಡುಗು

ಜಗತ್ತಿನ ಬೇರೆ ದೇಶಗಳಲ್ಲೂ ಕೋವಿಡ್‌-19ರ ಎರಡನೇ ಅಲೆ ಆರಂಭವಾಗಿದೆ. ಕೆಲವು ದೇಶಗಳಲ್ಲಿ ಈಗ ಮೂರನೇ ಅಲೆ ಆರಂಭವಾಗಿದೆ ಎಂದು ತಜ್ಞರು ಹೇಳಿದ್ದಾರೆ. ಕೋವಿಡ್‌-19ರ ಮೊದಲ ಅಲೆಯ ತೀವ್ರತೆ ಕಡಿಮೆಯಾಗುತ್ತಿದ್ದ ಸಂದರ್ಭದಲ್ಲಿ, ಚಳಿಗಾಲದಲ್ಲಿ ಎರಡನೇ ಅಲೆ ಕಾಣಿಸಿಕೊಳ್ಳಬಹುದು ಎಂದು ತಜ್ಞರು ಅಂದಾಜಿಸಿದ್ದರು. ಆದರೆ, ಚಳಿಗಾಲದ ಅಂತ್ಯದ ವೇಳೆಗೂ ಹಲವು ದೇಶಗಳಲ್ಲಿ ಪ್ರತಿದಿನ ಪತ್ತೆಯಾಗುತ್ತಿರುವ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ.

ಬ್ರೆಜಿಲ್, ಬ್ರಿಟನ್‌ ಮತ್ತು ಚೀನಾದಲ್ಲಿ ಈಗ ಕೋವಿಡ್‌-19ರ ಮೂರನೇ ಅಲೆ ಇದೆ ಎಂದು ಹೇಳಲಾಗುತ್ತಿದೆ. ಉಳಿದಂತೆ ಫ್ರಾನ್ಸ್‌, ಜರ್ಮನಿ, ರಷ್ಯಾ ಮತ್ತು ಆಫ್ರಿಕಾದ ಕೆಲವು ದೇಶಗಳಲ್ಲಿ ಎರಡನೇ ಅಲೆ ತೀವ್ರಗೊಳ್ಳುತ್ತಿದೆ. ಕೋವಿಡ್ ನಿಯಂತ್ರಣ ಕ್ರಮಗಳ ಸಡಿಲಿಕೆಯೇ ಸೋಂಕು ಮತ್ತೆ ತೀವ್ರವಾಗಿ ಹರಡಲು ಕಾರಣ. ಇದರ ಜತೆಯಲ್ಲಿಯೇ ರೂಪಾಂತರಗೊಂಡ ಕೊರೊನಾವೈರಸ್‌ನ ಕಾರಣದಿಂದಲೂ, ಕ್ಷಿಪ್ರವಾಗಿ ಹರಡುತ್ತಿದೆ ಎಂದು ತಜ್ಞರು ಹೇಳಿದ್ದಾರೆ.

ಬ್ರೆಜಿಲ್: ಬ್ರೆಜಿಲ್‌ನಲ್ಲಿ ಈವರೆಗೆ ಒಟ್ಟು 1.15 ಕೋಟಿ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಇವುಗಳಲ್ಲಿ ಈಗ 11 ಲಕ್ಷದಷ್ಟು ಪ್ರಕರಣಗಳು ಮಾತ್ರವೇ ಸಕ್ರಿಯವಾಗಿವೆ. 2020ರ ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಪ್ರತಿದಿನ ಪತ್ತೆಯಾಗುತ್ತಿದ್ದ ಹೊಸ ಪ್ರಕರಣಗಳ ಸರಾಸರಿ ಸಂಖ್ಯೆ 15,000ಕ್ಕೆ ಇಳಿಕೆಯಾಗಿತ್ತು. ಜನವರಿಯಲ್ಲಿ ಈ ಸಂಖ್ಯೆ 36,000ಕ್ಕೆ ಏರಿಕೆಯಾಯಿತು. ಫೆಬ್ರುವರಿಯಲ್ಲಿ ಪ್ರತಿದಿನ ಹೊಸ ಪ್ರಕರಣಗಳ ಸರಾಸರಿ ಸಂಖ್ಯೆ 40,000ಕ್ಕೆ ಏರಿಕೆಯಾಯಿತು. ಈಗ ಇದು 60,000ದ ಗಡಿ ದಾಟಿದೆ. ಮಾರ್ಚ್‌ ಎರಡನೇ ವಾರದಲ್ಲಿ, ಒಂದೆರಡು ದಿನ 80,000ಕ್ಕೂ ಹೆಚ್ಚು ಹೊಸ ಪ್ರಕರಣಗಳು ಪತ್ತೆಯಾಗಿವೆ. ಬ್ರೆಜಿಲ್‌ನಲ್ಲಿ ಅತ್ಯಂತ ಕ್ಷಿಪ್ರವಾಗಿ ಹರಡುವ ರೂಪಾಂತರ ಕೊರೊನಾವೈರಸ್ ಪತ್ತೆಯಾಗಿದೆ. ಇದರಿಂದಲೇ ಹೊಸ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ ಎನ್ನಲಾಗಿದೆ.

ಫ್ರಾನ್ಸ್‌: ಕೋವಿಡ್‌ ಎರಡನೇ ಅಲೆಯಲ್ಲಿ ಹೆಚ್ಚು ಪ್ರಕರಣಗಳು ಪತ್ತೆಯಾದ ದೇಶಗಳಲ್ಲಿ ಫ್ರಾನ್ಸ್ ಸಹ ಒಂದು. ಚಳಿಗಾಲದ ಆರಂಭದಲ್ಲಿ ದೇಶದಲ್ಲಿ ಒಟ್ಟು 8 ಲಕ್ಷ ಪ್ರಕರಣಗಳಷ್ಟೇ ಇದ್ದವು. ಡಿಸೆಂಬರ್ ಅಂತ್ಯದ ವೇಳೆಗೆ ಈ ಸಂಖ್ಯೆ 10 ಲಕ್ಷ ಮುಟ್ಟಿತಾದರೂ, ಪ್ರತಿದಿನ ಪತ್ತೆಯಾಗುವ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿತ್ತು. ಆದರೆ, ಜನವರಿ 15ರ ನಂತರ ಪ್ರತಿದಿನ 22,000ದಿಂದ 30,000 ಹೊಸ ಪ್ರಕರಣಗಳು ಪತ್ತೆಯಾಗುತ್ತಿವೆ. ಪ್ರತಿದಿನದ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಬಾರಿ ಏರಿಕೆ ಇಲ್ಲದಿದ್ದರೂ, ಇಳಿಕೆಯಂತೂ ಆಗಿಲ್ಲ. ಹೀಗಾಗಿ ಒಟ್ಟು ಪ್ರಕರಣಗಳ ಸಂಖ್ಯೆ 37 ಲಕ್ಷದ ಗಡಿಯನ್ನು ದಾಟಿದೆ. ದೇಶದ ಹಲವೆಡೆ ಲಾಕ್‌ಡೌನ್‌ನಂತಹ ನಿರ್ಬಂಧಗಳು ಇವೆ. ಬ್ರಿಟನ್‌ಗೆ ವಿಮಾನ ಸಂಚಾರದ ಮೇಲೆ ನಿರ್ಬಂಧವಿದೆ.

ಬ್ರಿಟನ್‌: ಬ್ರಿಟನ್‌ನಲ್ಲಿ 2020ರ ಏಪ್ರಿಲ್‌ನಲ್ಲಿಯೇ ಮೊದಲ ಅಲೆ ನಿಯಂತ್ರಣಕ್ಕೆ ಬಂದಿತ್ತು. ಆದರೆ ಸೆಪ್ಟೆಂಬರ್‌ ವೇಳೆಗೆ ಆರಂಭವಾದ ಎರಡನೇ ಅಲೆ, ನವೆಂಬರ್‌ನಲ್ಲಿ ಗರಿಷ್ಠಮಟ್ಟದಲ್ಲಿ ಇತ್ತು. ಡಿಸೆಂಬರ್‌ ವೇಳೆಗೆ ಅದೂ ನಿಯಂತ್ರಣಕ್ಕೆ ಬಂದಿತು. ಜನವರಿ ಎರಡನೇ ವಾರದ ನಂತರ ದೇಶದಲ್ಲಿ ಪ್ರತಿದಿನ ಪತ್ತೆಯಾಗುವ ಪ್ರಕರಣಗಳಲ್ಲಿ ದಿಢೀರ್ ಏರಿಕೆಯಾಯಿತು. ಇದೇ ಅವಧಿಯಲ್ಲಿ ಕೊರೊನಾವೈರಸ್‌ನ ರೂಪಾಂತರ ವೈರಸ್‌ ಪತ್ತೆಯಾಯಿತು. ಮೂರನೇ ಅಲೆಯಲ್ಲಿ ಕೋವಿಡ್‌ ಕ್ಷಿಪ್ರವಾಗಿ ಹರಡಲು ಈ ರೂಪಾಂತರ ವೈರಸ್‌ ಕಾರಣ ಎನ್ನಲಾಗಿದೆ. ಈಗ ಕೋವಿಡ್ ಹರಡುವಿಕೆ ನಿಯಂತ್ರಣಕ್ಕೆ ಬರುತ್ತಿದೆ. ಆದರೆ ಲಾಕ್‌ಡೌನ್, ವಿಮಾನ-ಹಡಗು ಸಂಚಾರ ನಿರ್ಬಂಧ, ಪಾರ್ಟಿಗಳ ಮೇಲೆ ನಿರ್ಬಂಧದಂತಹ ನಿಯಂತ್ರಣ ಕ್ರಮಗಳು ಜಾರಿಯಲ್ಲಿವೆ.

ಐದು ರಾಜ್ಯಗಳಲ್ಲಿ ಶೇ 78ರಷ್ಟು ಪ್ರಕರಣಗಳು

ದೇಶದ ಐದು ರಾಜ್ಯಗಳಲ್ಲಿ ಶೇ 78ರಷ್ಟು ಪ್ರಕರಣಗಳು ಇವೆ. ಉಳಿದ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೋವಿಡ್ ಹರಡುವಿಕೆ ವೇಗ ನಿಧಾನವಾಗಿದೆ. ರಾಜ್ಯಗಳು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗುತ್ತಿವೆ. ರಾತ್ರಿ ಕರ್ಫ್ಯೂ, ಮಾಸ್ಕ್ ಧರಿಸದಿದ್ದರೆ ದಂಡ, ಅಂಗಡಿ ತೆರೆಯಲು ಸಮಯ ನಿಗದಿಯಂತಹ ಕಟ್ಟುನಿಟ್ಟಿನ ಕ್ರಮಗಳು ಮತ್ತೆ ಜಾರಿಯಾಗುತ್ತಿವೆ. 

ಆಧಾರ: ವರ್ಲ್ಡೋಮೀಟರ್, ಬಿಬಿಸಿ, ರಾಯಿಟರ್ಸ್, ದಿ ಗಾರ್ಡಿಯನ್, ಪಿಟಿಐ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು