ಗುರುವಾರ , ಜನವರಿ 28, 2021
15 °C
ಅಲಿಬಾಬಾ ಸ್ಥಾಪಕ ಜಾಕ್‌ ಮಾ ಎರಡು ತಿಂಗಳಿನಿಂದ ಎಲ್ಲೂ ಕಾಣಿಸಿಕೊಂಡಿಲ್ಲ

ಆಳ–ಅಗಲ: ನಾಪ‍ತ್ತೆ ನಾಡು ಚೀನಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೀನಾದ ಉದ್ಯಮಿ ಜಾಕ್‌ ಮಾ

ಜಗತ್ತಿನಾದ್ಯಂತ ಪರಿಚಿತರಾದ ಚೀನಾದ ಉದ್ಯಮಿ ಜಾಕ್‌ ಮಾ ಅವರು ಕಳೆದ ಎರಡು ತಿಂಗಳಿನಿಂದ ಎಲ್ಲೂ ಕಾಣಿಸಿಕೊಂಡಿಲ್ಲ. ಅಕ್ಟೋಬರ್‌ 10ರ ನಂತರ ಅವರ ಟ್ವಿಟರ್‌ ಖಾತೆಯೂ ಮೌನವಾಗಿದೆ. ಸರ್ಕಾರ ಮತ್ತು ವ್ಯವಸ್ಥೆಯ ವಿರುದ್ಧ ನೀಡಿದ್ದ ಹೇಳಿಕೆಗಳಿಗಾಗಿ ಅವರನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ ಎಂಬ ವರದಿಗಳೂ ಪ್ರಕಟವಾಗಿವೆ. ವಾಕ್‌ ಸ್ವಾತಂತ್ರ್ಯಕ್ಕೆ ನಿರ್ಬಂಧವಿರುವ ಚೀನಾದಲ್ಲಿ ಪ್ರಸಿದ್ಧ ವ್ಯಕ್ತಿಗಳು ಸರ್ಕಾರದ ವಿರುದ್ಧ ಮಾತನಾಡಿದ ಬಳಿಕ ನಾಪತ್ತೆಯಾಗುವುದು ಹೊಸದೇನೂ ಅಲ್ಲ

ಸಾರ್ವಜನಿಕ ಜೀವನದಲ್ಲಿ ಹೆಸರು ಗಳಿಸಿರುವ ವ್ಯಕ್ತಿಯೊಬ್ಬ ಇದ್ದಕ್ಕಿದ್ದಂತೆ ಸುದ್ದಿಯಿಂದ ಮರೆಯಾಗುವುದು, ಕೆಲವು ತಿಂಗಳ ಬಳಿಕ ಆತ ಅಥವಾ ಆಕೆ ನಾಪತ್ತೆಯಾದ ಸುದ್ದಿ ಬರುವುದು ಚೀನಾದಲ್ಲಿ ಸಾಮಾನ್ಯ. ಹೀಗೆ ನಾಪತ್ತೆಯಾದ ವ್ಯಕ್ತಿ ಕೆಲವೊಮ್ಮೆ ಹಲವು ತಿಂಗಳ ನಂತರ ಪತ್ತೆಯಾಗಿ, ತಾವು ಮಾಡಿದ ತಪ್ಪಿಗೆ ಸಾರ್ವಜನಿಕವಾಗಿ ಕ್ಷಮೆ ಯಾಚಿಸುತ್ತಾರೆ. ಕೆಲವರು ಹಲವು ವರ್ಷಗಳ ಜೈಲು ಶಿಕ್ಷಗೆ ಒಳಗಾಗುತ್ತಾರೆ. ಇನ್ನೂ ಕೆಲವರು ಶಾಶ್ವತವಾಗಿ ನಾಪತ್ತೆಯಾಗಿರುವ ಉದಾಹರಣೆಗಳಿವೆ.

ಇಂಥ ಘಟನೆಗಳನ್ನು ಕೆದಕುತ್ತಾ ಹೋದರೆ, ನಾಪತ್ತೆಯಾದ ಖ್ಯಾತನಾಮರು ಸರ್ಕಾರ ಅಥವಾ ಆಡಳಿತಾರೂಢ ಕಮ್ಯುನಿಸ್ಟ್‌ ಪಕ್ಷವನ್ನು ಅಥವಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರನ್ನು ಟೀಕಿಸಿದ್ದು ಕಂಡುಬರುತ್ತದೆ. ಅಲಿಬಾಬಾ ಸಂಸ್ಥೆಯ ಸ್ಥಾಪಕ, ಖ್ಯಾತ ಉದ್ಯಮಿ ಜಾಕ್‌ ಮಾ ನಾಪತ್ತೆಯ ಹಿಂದೆಯೂ ಮೇಲ್ನೋಟಕ್ಕೆ ಇಂಥ ಕತೆ ಕಾಣಿಸುತ್ತಿದೆ ಎನ್ನಲಾಗಿದೆ.

ಯಾವುದೇ ವ್ಯಕ್ತಿಯನ್ನು ಗೌಪ್ಯವಾಗಿ ಬಂಧನದಲ್ಲಿಡುವುದು ಅಂತರರಾಷ್ಟ್ರೀಯ ಕಾನೂನಿನ ಪ್ರಕಾರ ಅಪರಾಧ. ಆದರೆ, 2013ರಲ್ಲಿ ಹೊಸ ಕಾನೂನು ಜಾರಿಮಾಡಿದ ಚೀನಾದ ಅಧ್ಯಕ್ಷ, ರಹಸ್ಯ ಬಂಧನವನ್ನು ಅಲ್ಲಿ ನ್ಯಾಯಬದ್ಧಗೊಳಿಸಿದ್ದಾರೆ.

ಖ್ಯಾತ ನಟಿ, ಗಾಯಕಿ, ನಿರ್ಮಾಪಕಿ ಫನ್‌ ಬಿಂಗ್‌ಬಿಂಗ್‌, ಕೆನಡಾದ ಮೂವರು ನಾಗರಿಕರು, ಜೀನ್‌ ಎಡಿಟಿಂಗ್‌ ವಿಜ್ಞಾನಿ ಹೆ ಜಿಯಾಂಕುಯಿ, ಇಂಟರ್‌ಪೋಲ್‌ ಮುಖ್ಯಸ್ಥ ಮೆಂಗ್‌ ಹಾಂಗ್ವಿ, ಪ್ರಶಸ್ತಿಪುರಸ್ಕೃತ ಛಾಯಾಗ್ರಾಹಕ ಲು ಗುವಾಂಗ್‌, ಚರ್ಚ್‌ ಮುಖ್ಯಸ್ಥ ವಾಂಗ್ ಯಿ... ಇಂಥ ಹಲವು ಪ್ರಮುಖರು ದಿಢೀರ್‌ ನಾಪತ್ತೆಯಾದದ್ದಿದೆ. 

ಉದ್ಯಮ ಕ್ಷೇತ್ರ ದಿಗ್ಗಜರೆನಿಸಿಕೊಂಡ ವು ಷಿಯಾವೊಹುಯಿ, ಗುವೊ ಗುವಾಂಗ್‌ಚಾಂಗ್‌, ಜೊವು ಚೆಂಗ್‌ಜಿಯಾನ್‌, ಷಿಯಾವೊ ಜಿಯಾನಹುವ ಮುಂತಾದವರೂ ಇಂಥ ಅನುಭವ ಹೊಂದಿದ್ದಾರೆ.

‘ನಾಪಯತ್ತೆಯಾಗಿರುವ ಉಯಿಗರ್‌ ಸಮುದಾಯ ನಾಯಕರ ಸಂಖ್ಯೆಯನ್ನು ಊಹಿಸಲೂ ಸಾಧ್ಯವಿಲ್ಲ. ಈ ಬಂಧನ ಪ್ರಕ್ರಿಯೆ ಎಷ್ಟು ರಹಸ್ಯವಾಗಿರುತ್ತದೆ ಎಂದರೆ, ಬಂಧನಕ್ಕೊಳಗಾದವರ ಸಂಖ್ಯೆಯೂ ಸಿಗುವುದಿಲ್ಲ. ಬಂಧಿತರು ವಿಪರೀತವಾದ ದೈಹಿಕ ಮತ್ತು ಮಾನಸಿಕ ಹಿಂಸೆಗೆ ಒಳಗಾಗುತ್ತಾರೆ’ ಎಂದು ಮಾನವಹಕ್ಕುಗಳ ಹೋರಾಟಗಾರರು ಹೇಳುತ್ತಾರೆ.

‘ಉದ್ಯಮ ಕ್ಷೇತ್ರದ ದಿಗ್ಗಜರಿರಲಿ, ಚಿತ್ರ ನಟರಿರಲಿ ಅಥವಾ ಒಬ್ಬ ಪುಸ್ತಕ ವ್ಯಾಪಾರಿಯೇ ಇರಲಿ, ಇಲ್ಲಿ ‘ಒತ್ತಾಯದ ನಾಪತ್ತೆ’ಯಿಂದ ಯಾರೊಬ್ಬರೂ ಮುಕ್ತರಲ್ಲ. ಆರ್ಥಿಕ ಮತ್ತು ರಾಜಕೀಯ ಕಾರಣಗಳಿಂದಾಗಿ ಚೀನಾದ ವಿರುದ್ಧ ಧ್ವನಿ ಎತ್ತಲು ಎಲ್ಲರೂ ಹಿಂಜರಿಯುತ್ತಾರೆ. ಇಂಥ ಬಂಧನಗಳ ವಿರುದ್ಧ ಜಗತ್ತು ಒಟ್ಟಾಗಿ ಧ್ವನಿ ಎತ್ತಬೇಕು’ ಎಂದು ಮಾನವಹಕ್ಕು ಹೋರಾಟಗಾರರು ಹೇಳುತ್ತಾರೆ.

ಜಾಕ್ ಮಾ ಹೇಳಿದ್ದೇನು?

ಜಾಕ್ ಮಾ ಅವರು ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಶಾಂಘೈನಲ್ಲಿ ನಡೆದ ಸಭೆಯಲ್ಲಿ ಮಾಡಿದ ಭಾಷಣ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ಹುಟ್ಟುಹಾಕಿತ್ತು. ಚೀನಾದ ಆಡಳಿತ ವ್ಯವಸ್ಥೆಯನ್ನು ಟೀಕಿಸಿದ್ದ ಅವರು ಚೀನಾದ ಬ್ಯಾಂಕ್‌ಗಳನ್ನು ‘ಪಾನ್‌ಶಾಪ್’ಗಳು ಎಂದು ಜರೆದಿದ್ದರು. ಜಾಕ್ ಮಾ ಅವರ ಹೇಳಿಕೆ ದೇಶದ ಅಧ್ಯಕ್ಷರನ್ನು ಕೆರಳಿಸಿತ್ತು ಎನ್ನಲಾಗಿದೆ.

‘ದೇಶದ ಸಾಂಪ್ರದಾಯಿಕ ಬ್ಯಾಂಕುಗಳು ಪಾನ್‌ಶಾಪ್‌ ಮನಸ್ಥಿತಿಯೊಂದಿಗೆ ಕಾರ್ಯನಿರ್ವಹಿಸುತ್ತಿವೆ. ಭವಿಷ್ಯದ ಪ್ರಪಂಚದ ಆರ್ಥಿಕ ಅಗತ್ಯಗಳನ್ನು ಬೆಂಬಲಿಸಲು ಈ ಬ್ಯಾಂಕ್‌ಗಳಿಗೆ ಸಾಧ್ಯವಾಗುವುದಿಲ್ಲ. ‘ರಿಸ್ಕ್’ ತೆಗೆದುಕೊಳ್ಳಲು ಅವು ಸಿದ್ಧವಿಲ್ಲ’ ಎಂದು ಹೇಳಿದ್ದರು.

‘ನೀವು ಬ್ಯಾಂಕಿನಿಂದ 1 ಲಕ್ಷ ಯುವಾನ್ ಸಾಲ ಪಡೆದರೆ, ನೀವು ಸ್ವಲ್ಪ ಹೆದರುತ್ತೀರಿ; ನೀವು 10 ಲಕ್ಷ ಯುವಾನ್ ಎರವಲು ಪಡೆದರೆ, ನೀವು ಮತ್ತು ಬ್ಯಾಂಕ್ ಇಬ್ಬರೂ ಸ್ವಲ್ಪ ಹೆದರುತ್ತೀರಿ; ಆದರೆ ನೀವು 100 ಕೋಟಿ ಯುವಾನ್ ಸಾಲವನ್ನು ತೆಗೆದುಕೊಂಡರೆ, ನೀವು ಹೆದರುವುದಿಲ್ಲ, ಬದಲಾಗಿ ಬ್ಯಾಂಕ್ ಹೆದರುತ್ತದೆ. ಇದು ಚೀನಾ ಬ್ಯಾಂಕ್‌ಗಳ ಸ್ಥಿತಿ’ ಎಂದು ಮಾ ವಿವರಿಸಿದ್ದರು.

ಜಾಗತಿಕ ಬ್ಯಾಂಕಿಂಗ್‌ನ ಬಾಸೆಲ್ ಒಪ್ಪಂದವನ್ನು ‘ವೃದ್ಧರ ಕ್ಲಬ್’ ಎಂದು ಕರೆದಿದ್ದ ಮಾ, ಚೀನಾದಲ್ಲಿ ಆರ್ಥಿಕ ವ್ಯವಸ್ಥೆ ಸರಿಯಿಲ್ಲ ಎಂದು ಟೀಕಿಸಿದ್ದರು. ಖಾತರಿ ಇಲ್ಲದೆ ಸಾಲ ಸಿಗುವುದೇ ಇಲ್ಲ ಎಂಬ ಕಾರಣಕ್ಕೆ ಎಷ್ಟೋ ಯುವ ಉದ್ಯಮಿಗಳು ತಮ್ಮ ಕನಸುಗಳನ್ನು ಈಡೇರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬುದು ಅವರ ಮಾತಿನ ತಾತ್ಪರ್ಯ. ಮುಂದಿನ ಪೀಳಿಗೆ ಮತ್ತು ಯುವಜನರಿಗಾಗಿ ಹೊಸದನ್ನು ಕೊಡಬೇಕಾದರೆ ಪ್ರಸ್ತುತ ವ್ಯವಸ್ಥೆಯನ್ನು ಸುಧಾರಿಸಬೇಕು ಎಂದಿದ್ದರು.

ಕೋಟಿ ಕೋಟಿ ಗಳಿಸಿದ ಇಂಗ್ಲಿಷ್‌ ಶಿಕ್ಷಕ

ಜಾಕ್ ಮಾ, ಇಂಗ್ಲಿಷ್ ಶಿಕ್ಷಕ ಹುದ್ದೆಯಿಂದ ಭಾರಿ ಉದ್ಯಮ ಸಾಮ್ರಾಜ್ಯದ ಒಡೆಯ ಆದ ಕತೆ ರೋಚಕವಾದುದು.

ಹ್ಯಾಂಗ್‌ಝೌನಲ್ಲಿ 1964ರಲ್ಲಿ ಜನಿಸಿದ ಜಾಕ್‌‌ ಮಾ, ವಿದೇಶಿ ಪ್ರವಾಸಿಗರಿಗೆ ಗೈಡ್ ಆಗಿದ್ದರು. ಬೆಳಿಗ್ಗೆ 5 ಗಂಟೆಗೆ ಎದ್ದು, ಹೋಟೆಲ್‌ಗೆ ಸೈಕಲ್‌ನಲ್ಲಿ ತೆರಳಿ ಪ್ರವಾಸಿಗರನ್ನು ಭೇಟಿ ಮಾಡುತ್ತಿದ್ದರು. 1988ರಲ್ಲಿ ಇಂಗ್ಲಿಷ್‌ನಲ್ಲಿ ಪದವಿ ಪಡೆದ ಅವರು, 30ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದರೂ ಪ್ರತಿ ಬಾರಿ ಅವು ತಿರಸ್ಕೃತವಾಗುತ್ತಿದ್ದವು. ಸ್ಥಳೀಯ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಶಿಕ್ಷಕರಾಗಿ, ತಿಂಗಳಿಗೆ ಸುಮಾರು ₹1200 ಗಳಿಸುತ್ತಿದ್ದರು. ತರ್ಜುಮೆ ಕೆಲಸವನ್ನೂ ಮಾಡುತ್ತಿದ್ದರು.

1995ರಲ್ಲಿ ಅಮೆರಿಕಕ್ಕೆ ಹೋಗಿ ಬಂದ ಬಳಿಕ ಚೀನಾದಲ್ಲಿ ಇಂಟರ್ನೆಟ್ ಸಾಧ್ಯತೆಗಳನ್ನು ತೆರೆದರು. ಸರ್ಕಾರಕ್ಕೆ ಒಂದು ವೆಬ್‌ಸೈಟ್ ಮಾಡಿಕೊಟ್ಟರು. ಸುಮಾರು ಎರಡು ದಶಕ ಸರ್ಕಾರದ ಜತೆ ಒಳ್ಳೆಯ ಸಂಬಂಧ ಹೊಂದಿದ್ದರು. 1999ರಲ್ಲಿ ಅಲಿಬಾಬಾ ಕಂಪನಿ ಶುರುಮಾಡಿದರು. 2000ನೇ ಇಸವಿಯಲ್ಲಿ ₹2.5 ಕೋಟಿಯಷ್ಟು ಬಂಡವಾಳ ಸಂಗ್ರಹಿಸಿದರು. ಚೀನಾದಲ್ಲಿ ಈ ಕಂಪನಿ ಪಾರಮ್ಯ ಸಾಧಿಸಿದ ಬಳಿಕ ವ್ಯವಹಾರ ವಿಸ್ತರಣೆಯ ಭಾಗವಾಗಿ, ಕ್ಲೌಡ್ ಕಂಪ್ಯೂಟಿಂಗ್, ವಿಡಿಯೊ ಸ್ಟ್ರೀಮಿಂಗ್, ಸಿನಿಮಾ ನಿರ್ಮಾಣ, ಆರೋಗ್ಯ, ಕ್ರೀಡೆ, ಚಿಲ್ಲರೆ ವ್ಯಾಪಾರ, ಸುದ್ದಿ ಸಂಸ್ಥೆಗಳನ್ನು ಶುರು ಮಾಡಿ ಅಪಾರ ಹಣ ಗಳಿಸಿದರು.

ಇವರ ಆಸ್ತಿ ಮೌಲ್ಯ ಸುಮಾರು ₹3.37 ಲಕ್ಷ ಕೋಟಿ ಎಂದು ಹೇಳಲಾಗುತ್ತದೆ. ಅಲಿಬಾಬಾ ಸಮೂಹದಲ್ಲಿ ಶೇ 7.8ರಷ್ಟು, ಅಲಿಪೇನಲ್ಲಿ ಶೇ 50ರಷ್ಟು ಪಾಲು ಹೊಂದಿದ್ದಾರೆ. ಉದ್ಯಮಶೀಲತೆ ಮತ್ತು ಪರಿಸರ ಕ್ಷೇತ್ರಗಳ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಆರೋಪಗಳ ಸುರಿಮಳೆ

1 ‘ಜಾಕ್‌ ಮಾ ಅವರು ವಿಚಾರಣೆಯನ್ನು ಎದುರಿಸುತ್ತಿದ್ದಾರೆ ಎಂದು ತಿಳಿದುಬಂದಿದೆ’ ಎಂದು ಹಾಂಗ್‌ಕಾಂಗ್‌ನ ದಿ ಏಷ್ಯಾ ಟೈಮ್ಸ್ ಪತ್ರಿಕೆ ವರದಿ ಮಾಡಿದೆ. ‘ಜಾಕ್‌ ಮಾ ಅವರನ್ನು ರಹಸ್ಯವಾಗಿ ಬಂಧಿಸಿರಬಹುದು’ ಎಂಬ ತೀರ್ಮಾನಕ್ಕೆ ಹಲವರು ಈ ವರದಿಯ ಆಧಾರದಲ್ಲಿ ಬಂದಿದ್ದಾರೆ.

2 ಮಾ ಅವರು ನಾಪತ್ತೆಯಾಗಿರುವ ಸುದ್ದಿ ಜಾಗತಿಕ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದಂತೆಯೇ ಚೀನಾದ ಸರ್ಕಾರಿ ಸ್ವಾಮ್ಯದ ಮಾಧ್ಯಮಗಳು ಅವರ ವಿರುದ್ಧ ಆರೋಪಗಳ ಸುರಿಮಳೆ ಮಾಡಲಾರಂಭಿಸಿವೆ. ‘ಅವರೊಬ್ಬ ಬಡವರನ್ನು ಶೋಷಿಸುವ ರಕ್ತಪಿಶಾಚಿ’ ಎಂದು ಕೆಲವು ಮಾಧ್ಯಮಗಳು ಬಣ್ಣಿಸಿವೆ.

3 ಜಾಕ್‌ ಮಾ ಅವರನ್ನು ಬಂಧಿಸಿರುವ ಅಥವಾ ಗೃಹಬಂಧನದಲ್ಲಿಟ್ಟಿರುವ ಸಾಧ್ಯತೆ ಇದೆ ಎಂದು ಕೆಲವು ಮಾಧ್ಯಮಗಳು ಹೇಳಿವೆ.

ಇತ್ತೀಚಿನ ಘಟನೆಗಳು

*ವುಹಾನ್‌ನಲ್ಲಿ ಕೊರೊನಾ ಸ್ಥಿತಿಗತಿಯ ಬಗ್ಗೆ ಯು ಟ್ಯೂಬ್‌ನಲ್ಲಿ ವರದಿ ಮಾಡಿದ ‘ನಾಗರಿಕ ಪತ್ರಕರ್ತ’ರೊಬ್ಬರು (ಸಿಟಿಜನ್‌ ಜರ್ನಲಿಸ್ಟ್‌) ಸುಮಾರು ಎರಡು ತಿಂಗಳು ನಾಪತ್ತೆಯಾಗಿದ್ದರು. ಕೊರೊನಾದಿಂದ ಸಾವನ್ನಪ್ಪಿದ್ದಾರೆ ಎನ್ನಲಾದ ನೂರಾರು ಜನರನ್ನು ವಾಹನದಲ್ಲಿ ಸಾಗಿಸುತ್ತಿದ್ದುದನ್ನು ಅವರು ವರದಿ ಮಾಡಿದ್ದರು. ಆ ವಿಡಿಯೊವನ್ನು 8.50 ಲಕ್ಷ ಮಂದಿ ವೀಕ್ಷಿಸಿದ್ದರು. ಇದೇ ರೀತಿ ಇನ್ನೂ ಹಲವು ಪತ್ರಕರ್ತರು ನಾಪತ್ತೆಯಾಗಿದ್ದರು. ಕೆಲವರಿಗೆ ನ್ಯಾಯಾಲಯವು ಜೈಲು ಶಿಕ್ಷೆ ವಿಧಿಸಿದೆ.

*ಚೀನಾದ ಅಧ್ಯಕ್ಷರ ಕಾರ್ಯವೈಖರಿಯನ್ನು ಟೀಕಿಸಿದ, ದೇಶದ ಪ್ರಮುಖ ಉದ್ಯಮಿಗಳಲ್ಲಿ ಒಬ್ಬರೆನಿಸಿದ್ದ ಮತ್ತು ಕಮ್ಯುನಿಸ್ಟ್‌ ಪಕ್ಷದ ಮುಖಂಡರೂ ಆಗಿದ್ದ ರೆನ್‌ ಜಿಗಿಯಾಂಗ್‌ ಅವರು ಕೆಲವು ದಿನಗಳ ಕಾಲ ನಾಪತ್ತೆಯಾಗಿದ್ದರು. ಆ ನಂತರ ಸಾರ್ವಜನಿಕವಾಗಿ ಕಾಣಿಸಿಕೊಂಡರಾದರೂ ನ್ಯಾಯಾಂಗದ ವಿಚಾರಣೆ ಎದುರಿಸಬೇಕಾಯಿತು. ಇತ್ತೀಚೆಗೆ ಅವರಿಗೆ 18 ವರ್ಷಗಳ ಜೈಲು ಶಿಕ್ಷೆ ಹಾಗೂ ಭಾರಿ ಪ್ರಮಾಣದಲ್ಲಿ ದಂಡ ವಿಧಿಸಲಾಗಿದೆ.

*ಬಾವಲಿಗಳಿಂದ ಹರಡುವ ವೈರಸ್‌ಗಳ ಬಗ್ಗೆ ಸಂಶೋಧನೆ ನಡೆಸಿದ್ದ, ‘ಬ್ಯಾಟ್‌ ವುಮನ್‌’ ಎಂದೇ ಖ್ಯಾತರಾಗಿದ್ದ ಚೀನಾದ ವೈದ್ಯೆ, ಷಿ ಜೆಂಗ್ಲಿ ಅವರು, ಕೊರೊನಾ ವೈರಸ್‌ ಬಗೆಗಿನ ತಮ್ಮ ಅಧ್ಯಯನದ ಕೆಲವು ಮಾಹಿತಿಗಳನ್ನು ಬಹಿರಂಗಗೊಳಿಸಿದ ನಂತರ ನಾಪತ್ತೆಯಾಗಿದ್ದರು. ಕೆಲವು ದಿನಗಳ ನಂತರ ಅವರು ಸರ್ಕಾರಿ ಸುದ್ದಿ ವಾಹಿನಿಯಲ್ಲಿ ಕಾಣಿಸಿಕೊಂಡರು.

*ಕೊರೊನಾ ವೈರಸ್‌ ಬಗ್ಗೆ ಆರಂಭದ ದಿನಗಳಲ್ಲೇ ಎಚ್ಚರಿಕೆ ನೀಡಿದ್ದ ಚೀನಾದ ವೈದ್ಯ ಡಾ. ಲಿ ಬೆನ್ಲಿಯಾಂಗ್‌ ಅವರಿಗೆ ಚೀನಾದ ಪೊಲೀಸರು ಎಚ್ಚರಿಕೆ, ಹಿಂಸೆ ನೀಡಿದ್ದು ವರದಿಯಾಗಿತ್ತು. ಕೆಲವು ದಿನಗಳ ಬಳಿಕ ಅವರು ಕೋವಿಡ್‌ನಿಂದ ನಿಧನ ಹೊಂದಿದರು ಎಂದು ವರದಿಯಾಗಿತ್ತು.

ಐಪಿಒಗೆ ನಿರ್ಬಂಧ

ಚೀನಾದ ಸರ್ವಾಧಿಕಾರಿ ಆಡಳಿತವು ಜಾಕ್ ಮಾ ಅವರ ಮಾತುಗಳಿಗೆ ವ್ಯಾವಹಾರಿಕ ನಿರ್ಬಂಧದ ಮೂಲಕ ಉತ್ತರ ನೀಡಲು ಮುಂದಾಯಿತು. ಮಾ ಅವರ ಕಂಪನಿಗಳು ನವೆಂಬರ್‌ನಿಂದ ಒಂದೊಂದಾಗಿ ಸಂಕಷ್ಟಕ್ಕೆ ಸಿಲುಕಲು ಆರಂಭಿಸಿದವು. ಜಾಕ್ ಮಾ ಒಡೆತನದ ಅಲಿಬಾಬಾ ಸಂಸ್ಥೆಯ ಹಣಕಾಸು ಅಂಗಸಂಸ್ಥೆ ಆಂಟ್ ಫೈನಾನ್ಷಿಯಲ್ ಐಪಿಒ ಬಿಡುಗಡೆಗೆ ಸಜ್ಜಾಗಿತ್ತು. ಹಾಂಗ್‌ಕಾಂಗ್ ಮತ್ತು ಶಾಂಘೈ ಷೇರು ವಿನಿಮಯ ಕೇಂದ್ರಗಳಲ್ಲಿ ಅವರ ಆಂಟ್ ಸಮೂಹದ ಐಪಿಒ ಬಿಡುಗಡೆ ಆಗಬೇಕಿತ್ತು. ಇದು ಜಗತ್ತಿನ ಅತಿದೊಡ್ಡ ಐಪಿಒ ಎಂದೂ ಕರೆಸಿಕೊಂಡಿತ್ತು. ಆದರೆ ಚೀನಾದ ಅಧ್ಯಕ್ಷರ ಆದೇಶದ ಮೇರೆಗೆ ಐಪಿಒಗೆ ತಡೆ ಒಡ್ಡಲಾಯಿತು. ಷೇರು ಮಾರುಕಟ್ಟೆಯಲ್ಲಿ ಸುಮಾರು ₹2.55 ಲಕ್ಷ ಕೋಟಿ ಸಂಗ್ರಹಿಸುವ ಗುರಿ ಹೊಂದಿದ್ದ ಆಂಟ್ ಸಂಸ್ಥೆಗೆ ಈ ನಿರ್ಧಾರ ದೊಡ್ಡ ಹೊಡೆತ ನೀಡಿತು.

ಅಲಿಬಾಬಾಗೆ ಹೊಡೆತ

ಡಿಸೆಂಬರ್ ಅಂತ್ಯದ ಹೊತ್ತಿಗೆ ಚೀನಾದ ಆಡಳಿತ ನಿಯಂತ್ರಕರು ಅಲಿಬಾಬಾ ಸಂಸ್ಥೆಯ ಇ-ಕಾಮರ್ಸ್ ವ್ಯವಹಾರದ ಬಗ್ಗೆ ತನಿಖೆ ಪ್ರಾರಂಭಿಸುವುದಾಗಿ ಘೋಷಿಸಿದರು. ಜೊತೆಗೆ ಆಂಟ್ ಹಣಕಾಸು ಸಂಸ್ಥೆಯ ವ್ಯಾವಹಾರಿಕ ಚಟುವಟಿಕೆಗಳನ್ನು ತಡೆಯಲು ಹೊಸ ನಿಯಮಗಳನ್ನು ಜಾರಿಗೊಳಿಸಿದರು. ಈ ಕಾರಣದಿಂದ ಅಲಿಬಾಬಾ ಸಂಸ್ಥೆಯ ಷೇರುಗಳು ಮತ್ತು ಜಾಕ್‌ ಮಾ ಅವರ ವೈಯಕ್ತಿಕ ಸಂಪತ್ತಿನ ಮೌಲ್ಯ ಕುಸಿಯಲು ಆರಂಭಿಸಿತು.

ಅಲಿಬಾಬಾ ಮತ್ತು ಟೆನ್‌ಸೆಂಟ್‌ನಂತಹ ದೊಡ್ಡ ಟೆಕ್ ಕಂಪನಿಗಳ ಪ್ರಭಾವವನ್ನು ನಿಗ್ರಹಿಸುವ ಪ್ರಯತ್ನಗಳನ್ನು ಚೀನಾ ಚುರುಕುಗೊಳಿಸಿತು. ಈ ಸಂಸ್ಥೆಗಳು ಗ್ರಾಹಕರ ದತ್ತಾಂಶ ಹಂಚಿಕೊಳ್ಳುವಿಕೆಯನ್ನು ತಡೆಯುವ ಉದ್ದೇಶದಿಂದ ಕಳೆದ ನವೆಂಬರ್‌ನಲ್ಲಿ ಚೀನಾ ಕರಡು ನಿಯಮಗಳನ್ನು ಬಿಡುಗಡೆ ಮಾಡಿತು. ಡಿಸೆಂಬರ್‌ನಲ್ಲಿ ಸಭೆ ಸೇರಿದ ಚೀನಾದ ಕಮ್ಯುನಿಸ್ಟ್ ಪಕ್ಷದ ಪಾಲಿಟ್‌ಬ್ಯೂರೊ, ಕಂಪನಿಗಳ ಏಕಸ್ವಾಮ್ಯ ನಿಗ್ರಹಕ್ಕೆ ಆದೇಶ ಹೊರಡಿಸಿತು.

ಈ ಹೊಸ ನೀತಿಗಳ ಪ್ರಮುಖ ಗುರಿ ಜಾಕ್‌ ಮಾ ಎಂದು ಹೇಳಲಾಗುತ್ತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು