ಗುರುವಾರ , ಏಪ್ರಿಲ್ 2, 2020
19 °C
ಮಾಧವ ರಾವ್ ಸಿಂಧಿಯಾ ಜನ್ಮದಿನದಂದೇ ಕಾಂಗ್ರೆಸ್ ತೊರೆದ ಜ್ಯೋತಿರಾದಿತ್ಯ: ಸಚಿನ್ ಪೈಲಟ್, ಮಿಲಿಂದ್ ಕೂಡ ಅಸಮಾಧಾನದಲ್ಲಿ

ವಿಶ್ಲೇಷಣೆ| ಸಿಂಧಿಯಾ ನಿರ್ಗಮನ: ಕಾಂಗ್ರೆಸ್ ನಾಯಕರಿಂದ ಪಕ್ಷ ತ್ಯಾಗ, ಬಿಜೆಪಿಗೆ ವರ

ಆನಂದ್ ಮಿಶ್ರಾ Updated:

ಅಕ್ಷರ ಗಾತ್ರ : | |

Jyotiraditya Scindia

ಕಾಂಗ್ರೆಸ್ ಪಕ್ಷಕ್ಕೆ ಮೇಲ್ಮಟ್ಟದಲ್ಲಿ ನಾಯಕರ ಗೊಂದಲವಿದೆ. ಇದರ ಮಧ್ಯೆ ಬಹುತೇಕ ಎಲ್ಲ ರಾಜ್ಯ ಘಟಕಗಳಲ್ಲಿ ಹಿರಿಯರು, ವಲಸಿಗರು, ಕಿರಿಯರು, ಯುವ ನೇತಾರರ ನಡುವೆ ಸಂಘರ್ಷವೂ ಇದೆ. ಇದನ್ನು ನಿಭಾಯಿಸುವಲ್ಲಿ ಪಕ್ಷವು ಎಡವುತ್ತಿದೆಯೇ?

ಕಾಂಗ್ರೆಸ್ ನೇತಾರ ದಿ.ಮಾಧವರಾವ್ ಸಿಂಧಿಯಾ ಅವರ 75ನೇ ಜನ್ಮದಿನದಂದು ಅವರ ಪುತ್ರ, ಪಕ್ಷದಲ್ಲಿ ಅತ್ಯುನ್ನತ ಹುದ್ದೆಗೇರುವ ಸಾಮರ್ಥ್ಯವಿರುವಾತ ಎಂದೇ ಗುರುತಿಸಿಕೊಂಡ ಯುವ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಅವರು ಕಾಂಗ್ರೆಸಿಗೆ ವಿದಾಯ ಹಾಡಿದ್ದಾರೆ. ಪಕ್ಷದ ಜೊತೆಗಿನ ಸುಮಾರು 19 ವರ್ಷಗಳ ಸಂಬಂಧವನ್ನು ಕಳಚಿಕೊಂಡಿದ್ದಾರೆ. ಹಿಂದಿ ಹೃದಯಭೂಮಿಯ ರಾಜಕೀಯ ಇತಿಹಾಸದಲ್ಲಿ ಇದೊಂದು ಅಳಿಸಲಾಗದ ಅಧ್ಯಾಯವಾಗಿ ದಾಖಲಾಗುತ್ತಿದೆ.

ತೀರಾ ಇತ್ತೀಚಿನವರೆಗೂ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಆಪ್ತರೆನಿಸಿಕೊಂಡಿದ್ದ ಜ್ಯೋತಿರಾದಿತ್ಯ ಅವರು ಕಾಂಗ್ರೆಸ್‌ನ ಯುವ ಪೀಳಿಗೆಯ ಅತ್ಯಂತ ಭರವಸೆ ಹುಟ್ಟಿಸಿದ್ದ ನಾಯಕರಲ್ಲೊಬ್ಬರು. ಆದರೆ, ತವರು ರಾಜ್ಯದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡರು ಅವರನ್ನು ಉದ್ದೇಶಪೂರ್ವಕವಾಗಿ ಮೂಲೆಗುಂಪಾಗಿಸಿದರು. ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ಸನ್ನು ದಶಕಗಳಿಂದ ಕಾಡುತ್ತಿರುವ ಈ ಸಮಸ್ಯೆ ಮಧ್ಯಪ್ರದೇಶದಲ್ಲಿ ಕಾಣಿಸಿಕೊಂಡು, ಅಮೂಲ್ಯ ನಾಯಕನನ್ನು ಕಳೆದುಕೊಳ್ಳಲು ಕಾರಣವಾಗಿದೆ.

ಜಮ್ಮು ಮತ್ತು ಕಾಶ್ಮೀರದ ಕಾಂಗ್ರೆಸ್ ಹಿರಿಯ ಮುಖಂಡರ ಪುತ್ರ, ಮಾಜಿ ಎಂಎಲ್‌ಸಿ ವಿಕ್ರಮಾದಿತ್ಯ ಸಿಂಗ್ ಅವರು ಇದೊಂದು ಎಚ್ಚರಿಕೆಯ ಸಂಕೇತ ಎಂದು ಟ್ವೀಟ್ ಮಾಡಿದ್ದಾರೆ. ಅವರ ಪ್ರಕಾರ, "ಕಾಂಗ್ರೆಸ್ ಪಕ್ಷವು ಅತ್ಯುನ್ನತ ಮತ್ತು ಸ್ಫೂರ್ತಿಯುತ ನಾಯಕನೊಬ್ಬನನ್ನು ಕಳೆದುಕೊಂಡಿದೆ. ಅವರಂತಹಾ ಸಮರ್ಪಣಾಭಾವದ, ಪ್ರಭಾವಶಾಲಿ ನಾಯಕರನ್ನು ಪಕ್ಷದ ಏಳಿಗೆಗಾಗಿ ಅವರು ನೀಡಿದ ಅಮೂಲ್ಯವಾದ ಕೊಡುಗೆಗಾಗಿ ಪುರಸ್ಕರಿಸುವ ಬದಲು ಮೂಲೆಗುಂಪು ಮಾಡಿರುವುದು ತೀರಾ ಖೇದಕರ. ಇದಕ್ಕೆ ಪಕ್ಷವು ಭಾರೀ ಬೆಲೆಯನ್ನೇ ತೆರಬೇಕಾಗುತ್ತದೆ."

ಇದನ್ನೂ ಓದಿ:  

ಸಿಂಧಿಯಾ ಪಕ್ಷ ತ್ಯಜಿಸಲು ಆಂತರಿಕ ತಿಕ್ಕಾಟವೇ ಕಾರಣ ಎಂದಿರುವ ಮಾಜಿ ಎಂಎಲ್‌ಸಿ ಸಿಂಗ್, ಇನ್ನೂ ಹೇಳುತ್ತಾರೆ- "ಕಾಂಗ್ರೆಸ್ ಪಕ್ಷಕ್ಕೆ ಹಾನಿಯುಂಟಾಗುತ್ತದೆ ಎಂಬುದು ಗೊತ್ತಿದ್ದರೂ ಕೂಡ, ಸಿಂಧಿಯಾರನ್ನು ಅವರದೇ ನಾಯಕರು ಮೂಲೆಗೆ ತಳ್ಳಿರುವುದು ದುರದೃಷ್ಟಕರ. ಖಂಡಿತವಾಗಿಯೂ ಇದು ಪಕ್ಷದ ಮೇಲೆ ಭಾರಿ ಹೊಡೆತಕ್ಕೆ ಕಾರಣವಾಗುತ್ತದೆ, ವಿಶೇಷವಾಗಿ ತಳಮಟ್ಟದಲ್ಲಿ ಪ್ರಬಲ ಪಶ್ಚಾತ್ ಕಂಪನಗಳನ್ನು ಉಂಟು ಮಾಡಲಿದೆ" ಎಂದಿದ್ದಾರವರು.

ಪಕ್ಷದೊಳಗೆ ಈಗಾಗಲೇ ಗೊಂದಲಕ್ಕೆ ಕಾರಣವಾಗಿರುವ ಹಳಬರು ಮತ್ತು ಹೊಸ ನಾಯಕರ ನಡುವಿನ ಸಂಘರ್ಷವನ್ನು ಸಿಂಧಿಯಾ ನಿರ್ಗಮನವು ಮತ್ತಷ್ಟು ಸಂಕೀರ್ಣವಾಗಿಸಲಿದೆ. ಇದಕ್ಕೆ ಪ್ರಮುಖ ಕಾರಣವೆಂದರೆ, 2019ರ ಲೋಕಸಭಾ ಚುನಾವಣೆಯಲ್ಲಿನ ಹೀನಾಯ ಸೋಲಿಗಾಗಿ, ಹಿರಿಯರು ಕೂಡ ತಮ್ಮನ್ನು ಅನುಸರಿಸಬಲ್ಲರೆಂಬ ದೂರದ ಆಸೆಯೊಂದಿಗೆ, ರಾಹುಲ್ ಗಾಂಧಿಯವರೇ ಪಕ್ಷಾಧ್ಯಕ್ಷ ಹುದ್ದೆಯಿಂದ ನಿರ್ಗಮಿಸಿದರೂ ಕೂಡ, ಹಳೆಯ ಹುಲಿಗಳು ಹಿಂದಕ್ಕೆ ಸರಿದು ಯುವ ಪೀಳಿಗೆಯನ್ನು ಬೆಳೆಯಲು ಬಿಡಲು ಇನ್ನೂ ಮನಸ್ಸು ಮಾಡದಿರುವುದು.

ಇಂಥ ಸನ್ನಿವೇಶದಲ್ಲಿ ಸಿಂಧಿಯಾ ಅವರನ್ನು ಕಳೆದುಕೊಂಡಿರುವುದೆಂದರೆ, 15 ವರ್ಷಗಳ ಅಧಿಕಾರದ ವನವಾಸದ ಬಳಿಕ ಕಳೆದ ವರ್ಷವಷ್ಟೇ ಸರ್ಕಾರ ರಚಿಸಲು ಶಕ್ಯವಾಗಿದ್ದ ಮಧ್ಯಪ್ರದೇಶ ರಾಜ್ಯವನ್ನೇ ಕಳೆದುಕೊಂಡಂತೆ. ಈ ಹಿಂದೆ ಭದ್ರಕೋಟೆಯಾದ ಮಧ್ಯಪ್ರದೇಶವನ್ನು ಕಳೆದುಕೊಂಡಿದ್ದುದು ಕೂಡ ಪಕ್ಷದೊಳಗಿನ ಬಣ ರಾಜಕೀಯದ ಫಲಿತಾಂಶವೇ ಆಗಿದೆ. ಈ ಬಣ ರಾಜಕೀಯವೇ ಈಗ ಮರಳಿ ಮೇಲೆದ್ದುಬಂದಿದೆ ಮತ್ತು ಅಧಿಕಾರಕ್ಕೇರಿದ ಒಂದೂವರೆ ವರ್ಷದೊಳಗೆ ಕಮಲ್‌ನಾಥ್ ಸರ್ಕಾರವನ್ನೇ ಕಬಳಿಸುವ ಸೂಚನೆಗಳನ್ನು ನೀಡಿದೆ.

ಇದನ್ನೂ ಓದಿ: 

ಪಕ್ಕದ ರಾಜಸ್ಥಾನದಲ್ಲಿ, ಮುಖ್ಯಮಂತ್ರಿ ಅಶೋಕ್ ಗೇಹ್ಲೋಟ್ ಹಾಗೂ ಉಪಮುಖ್ಯಮಂತ್ರಿ, ಕಾಂಗ್ರೆಸಿನ ಮತ್ತೊಬ್ಬ ಮಹಾನ್ ನಾಯಕ ರಾಜೇಶ್ ಪೈಲಟ್ ಅವರ ಪುತ್ರ ಸಚಿನ್ ಪೈಲಟ್ ನಡುವೆ ಮೇಲುಗೈಗಾಗಿ ಸಂಘರ್ಷ ಏರ್ಪಟ್ಟಿದೆ. ಸಮೀಪದ ಮಹಾರಾಷ್ಟ್ರದಲ್ಲಿ, ಕಾಂಗ್ರೆಸ್‌ನ ಯುವ ಮುಖ ಮಿಲಿಂದ್ ದೇವೊರಾ ಕೂಡ ಅಸಮಾಧಾನದಿಂದ ಕುದಿಯುತ್ತಿದ್ದಾರೆ.

ಮಧ್ಯಪ್ರದೇಶದ ಬೆಳವಣಿಗೆಯ ವಿಪರ್ಯಾಸವೆಂದರೆ, ಕಳೆದ ಕೆಲವು ವರ್ಷಗಳಿಂದ ಅಥವಾ ದಶಕಗಳ ಹಿಂದೆ ಪಕ್ಷ ತೊರೆದವರನ್ನು ಮರಳಿ ಕರೆತರುವ ಪ್ರಯತ್ನ ಮಾಡುವ ಮೂಲಕ, ರಾಜ್ಯದಲ್ಲಿ ಅವಸಾನದಲ್ಲಿರುವ ಕಾಂಗ್ರೆಸ್ಸಿಗೆ ಪುನಶ್ಚೇತನ ನೀಡಬೇಕೆಂದು ರಾಜ್ಯ ಕಾಂಗ್ರೆಸ್ ರಾಜಕಾರಣದ ನಾಯಕತ್ರಯರಲ್ಲೊಬ್ಬರಾದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಬಲವಾಗಿ ಪ್ರತಿಪಾದಿಸುತ್ತಾಲೇ ಇದ್ದಾರೆ. ಆದರೆ ಅವರದೇ ರಾಜ್ಯದಲ್ಲಿ, ಗುಂಪು ರಾಜಕಾರಣದಿಂದಾಗಿ ಪಕ್ಷಕ್ಕೆ ಈ ದುರ್ಗತಿ ಬಂದೊದಗಿದೆ.

ತೆಲಂಗಾಣ ವಿಭಜನೆ ವಿರೋಧಿಸಿ 2014ರಲ್ಲಿ ಪಕ್ಷ ತೊರೆದಿದ್ದ ತೆಲಂಗಾಣ ನಾಯಕ, ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್.ಕಿರಣ್ ಕುಮಾರ್ ರೆಡ್ಡಿ 2018ರಲ್ಲಿ ಕಾಂಗ್ರೆಸ್‌ಗೆ ಮರಳಿ ಬಂದಿರುವುದನ್ನು ಹೊರತುಪಡಿಸಿದರೆ, ಪಕ್ಷಕ್ಕೆ ಬೇರೆ ಯಾವುದೇ ಪ್ರಮುಖ ನಾಯಕರೂ ಮರಳಿ ಬಂದಿಲ್ಲವೆಂಬುದನ್ನು ಗಮನಿಸಬೇಕು.

ಛತ್ತೀಸಗಢದಲ್ಲಿ, 2016ರಲ್ಲಿ ಪಕ್ಷ ತೊರೆದು ಛತ್ತೀಸಗಢ ಜನತಾ ಕಾಂಗ್ರೆಸ್ ಕಟ್ಟಿದ್ದ ರಾಜ್ಯದ ಮೊದಲ ಮುಖ್ಯಮಂತ್ರಿ ಅಜಿತ್ ಜೋಗಿ ಅವರನ್ನು ಪಕ್ಷದಿಂದ ನಿವಾರಿಸಿಕೊಂಡ ಬಳಿಕವಷ್ಟೇ 2018ರಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರದ ವನವಾಸದಿಂದ ಮುಕ್ತವಾಯಿತು.

2014ರಿಂದೀಚೆಗೆ ಕನಿಷ್ಠ ಐವರು ಮಾಜಿ ಮುಖ್ಯಮಂತ್ರಿಗಳು ಮತ್ತು ಅರ್ಧ ಡಜನ್‌ನಷ್ಟು ಕೇಂದ್ರ ಸಚಿವರು ಕಾಂಗ್ರೆಸ್ ತೊರೆದಿದ್ದಾರೆ. ಇವರಲ್ಲಿ ಹೆಚ್ಚಿನವರಿಗೆ ಜಾತಿ, ಸಮುದಾಯದ ಬಲವಿದೆ ಮತ್ತು ಅವರು ಬಿಜೆಪಿಗೆ ಹೊಸ ಮತದಾರರನ್ನು ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಕಾಂಗ್ರೆಸ್ ಪಕ್ಷವು ತನ್ನ ಹಿಂಡನ್ನು ಗಟ್ಟಿಯಾಗಿ ಹಿಡಿದಿಟ್ಟಿಕೊಳ್ಳುವಲ್ಲಿ ಯಶಸ್ವಿಯಾಗದಿದ್ದರೆ ಪಕ್ಕಾ ಲಾಭ ಆಗುವುದು ಬಿಜೆಪಿಗೆ. ನಾಯಕರ ಪಕ್ಷ ತ್ಯಾಗವಂತೂ ಕಾಂಗ್ರೆಸ್‌ಗೆ ಉತ್ತರದಿಂದ ದಕ್ಷಿಣದವರೆಗೂ, ಪೂರ್ವದಿಂದ ಪಶ್ಚಿಮದವರೆಗೂ ಕಾಡಿದೆ.

ಪಕ್ಷಕ್ಕಾಗಿ 20 ವರ್ಷ ಸೇವೆ ಸಲ್ಲಿಸಿದ ಬಳಿಕ 2019ರಲ್ಲಿ ಅದರ ವಕ್ತಾರ ಮತ್ತು ಅದರ ಪ್ರಸಿದ್ಧ ಮಾಧ್ಯಮ ಮುಖವಾಗಿದ್ದ ಟಾಮ್ ವಡಕ್ಕನ್ ಅವರು ಕಾಂಗ್ರೆಸ್ ತೊರೆದಾಗ, ಕೇರಳದಲ್ಲಿ ಪಕ್ಷಕ್ಕೊಂದು ಕ್ರಿಶ್ಚಿಯನ್ ಸಮುದಾಯದ ಬಲಿಷ್ಠ ನಾಯಕನ ನಂತರ ಯಾರು ಎಂದು ಹೆಚ್ಚಿನವರು ಯೋಚಿಸುತ್ತಿದ್ದರು. ಅವರು ಸೋನಿಯಾ ಗಾಂಧಿಗೆ ಆಪ್ತರೂ ಆಗಿದ್ದರು ಮತ್ತು ಕಾಂಗ್ರೆಸ್‌ನಲ್ಲಿನ ಸಮರ್ಪಣಾಭಾವದ ಬಿಕ್ಕಟ್ಟನ್ನೂ ಇದು ಎತ್ತಿ ತೋರಿಸಿತು.

ಹಿಂದೆಯೂ, ಕರ್ನಾಟಕ ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ವಿದೇಶಾಂಗ ಸಚಿವ, ಪ್ರಬಲ ಒಕ್ಕಲಿಗ ಮುಖಂಡ ಎಸ್.ಎಂ.ಕೃಷ್ಣ, ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಎನ್.ಡಿ.ತಿವಾರಿ, ವಿಜಯ್ ಬಹುಗುಣ ಮತ್ತು ಮಾಜಿ ಕೇಂದ್ರ ಸಚಿವೆ ಜಯಂತಿ ನಟರಾಜನ್ ಅವರು ಪಕ್ಷ ತ್ಯಾಗ ಮಾಡಿದ್ದರು. ಕೃಷ್ಣ ಮತ್ತು ಬಹುಗುಣ ಬಿಜೆಪಿ ಸೇರಿದರು. 2014ರಲ್ಲಿ ಅಂದಿನ ಮುಖ್ಯಮಂತ್ರಿ ಹರೀಶ್ ರಾವತ್ ಅವರೊಂದಿಗಿನ ಭಿನ್ನಾಭಿಪ್ರಾಯದಿಂದಾಗಿ ಕಾಂಗ್ರೆಸ್ ತೊರೆದ ಬಹುಗುಣ ಇತರ ಎಂಟು ಮಂದಿ ಬಂಡಾಯ ಶಾಸಕರೊಂದಿಗೆ ಬಿಜೆಪಿ ಸೇರಿದ್ದರು.

2015ರ ಜನವರಿ ತಿಂಗಳಲ್ಲಿ ಜಯಂತಿ ನಟರಾಜನ್ ಅವರು, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಹಿಂದಿನ ನವೆಂಬರ್ ತಿಂಗಳಲ್ಲೇ ಬರೆದ ಪತ್ರವನ್ನು ಬಹಿರಂಗಪಡಿಸುತ್ತಲೇ ಪಕ್ಷದಿಂದ ನಿರ್ಗಮಿಸಿದರು. ಅದರಲ್ಲಿ ಪಕ್ಷದ ಮುಖಂಡರು ಹೇಗೆ ವರ್ತಿಸುತ್ತಿದ್ದಾರೆ ಎಂಬುದನ್ನು ಮತ್ತು ತನಗಾದ ನೋವನ್ನು ಮತ್ತು ಭ್ರಮನಿರಸನವನ್ನು ತೋಡಿಕೊಂಡಿದ್ದರು.

ಈಶಾನ್ಯದಲ್ಲಿ ಕೂಡ, ಕಾಂಗ್ರೆಸ್‌ಗೆ ತನ್ನ ಹಿಂಡನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳಲಾಗಲೇ ಇಲ್ಲ ಮತ್ತು ತತ್ಪರಿಣಾಮವಾಗಿ ಪಕ್ಷದ ಪ್ರಧಾನ ತಂತ್ರಗಾರ ಹಿಮಂತ ಬಿಸ್ವ ಶರ್ಮಾ ಅವರನ್ನು 2015ರಲ್ಲಿ ಕಳೆದುಕೊಂಡಿತು. ಅವರು ಅಸ್ಸಾಂ ಮುಖ್ಯಮಂತ್ರಿ ತರುಣ್ ಗೊಗೊಯಿ ಜೊತೆಗಿನ ಭಿನ್ನಾಭಿಪ್ರಾಯದಿಂದಾಗಿ ಪಕ್ಷ ತೊರೆದು ಬಿಜೆಪಿ ಸೇರಿದರು. ಆ ಬಳಿಕ 2016ರಲ್ಲಿ ಅಲ್ಲಿ ಬಿಜೆಪಿ ಅಧಿಕಾರಕ್ಕೇರಿತಲ್ಲದೆ, ಈಶಾನ್ಯದಲ್ಲಿ ತನ್ನ ಖಾತೆಯನ್ನೂ ತೆರೆಯಿತು.

ಮೇಘಾಲಯದ ಐದು ಬಾರಿ ಮುಖ್ಯಮಂತ್ರಿಯಾಗಿದ್ದ ಡೋನ್ವಾ ಡೆತೆವೆಲ್ಸನ್ ಲಪಾಂಗ್ 2018ರ ಸೆಪ್ಟೆಂಬರ್‌ನಲ್ಲಿ ಪಕ್ಷ ತೊರೆದರು. ಇದಕ್ಕೆ ಕಾರಣ, ನಾಯಕತ್ವವು ಹಿರಿಯ ನಾಯಕರನ್ನು ನಿಧಾನವಾಗಿ ಮೂಲೆಗುಂಪು ಮಾಡಲು ಆರಂಭಿಸಿದೆ ಎನ್ನುವುದು.

2014ರ ಲೋಕಸಭಾ ಚುನಾವಣೆಗಳ ಬಳಿಕ, ಹರ್ಯಾಣದ ಹಿರಿಯ ಕಾಂಗ್ರೆಸ್ ಮುಖಂಡ, ಪ್ರಮುಖ ಜಾಟ್ ನಾಯಕ ಹಾಗೂ ಮಾಜಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಚೌಧರಿ ಬೀರೇಂದ್ರ ಸಿಂಗ್ ಅವರು ಬಿಜೆಪಿ ಸೇರಿ, ನರೇಂದ್ರ ಮೋದಿ ಸರ್ಕಾರದ ಮೊದಲ ಅವಧಿಯಲ್ಲಿ ಕೇಂದ್ರ ಮಂತ್ರಿಯೂ ಆದರು. ತಮಿಳುನಾಡಿನ ಮಾಜಿ ಕೇಂದ್ರ ಸಚಿವೆ ಡಿ.ಪುರಂದೇಶ್ವರಿ ಕೂಡ ಅದೇ ಅವಧಿಯಲ್ಲಿ ಬಿಜೆಪಿ ಸೇರಿದರು. 2017ರಲ್ಲಿ ತಮಗೆ ಮತ್ತು ಬೆಂಬಲಿಗರಿಗಾದ 'ಅನ್ಯಾಯ'ದ ವಿರುದ್ಧ ಸಿಡಿದೆದ್ದ ಮಹಾರಾಷ್ಟ್ರದ ಹಿರಿಯ ಕಾಂಗ್ರೆಸಿಗ, ಮಾಜಿ ಮುಖ್ಯಮಂತ್ರಿ ನಾರಾಯಣ ರಾಣೆ ಪಕ್ಷ ತೊರೆದು 2019ರಲ್ಲಿ ಬಿಜೆಪಿ ಸೇರಿದರು. ಪಕ್ಷದಲ್ಲಿ ಹಿರಿಯ ಮತ್ತು ಯುವ ನಾಯಕತ್ವದ ತಿಕ್ಕಾಟವನ್ನು ಪಕ್ಷವು ನಿಭಾಯಿಸುವಲ್ಲಿನ ವೈಫಲ್ಯದಿಂದ ಕಾಂಗ್ರೆಸ್‌ನ ಬಲವೀಗ ಕುಂದತೊಡಗಿದೆ. ಲಾಭ ಆಗುವ ಸಾಧ್ಯತೆಗಳು ಗೋಚರಿಸುತ್ತಿರುವುದು ಬಿಜೆಪಿಗೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು