ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ಒಳನೋಟ: 'ಬೀಡಿ'ಯಿಂದ ಕಮರಿದ ಕನಸು
ಒಳನೋಟ: 'ಬೀಡಿ'ಯಿಂದ ಕಮರಿದ ಕನಸು
ಬೀಡಿ ಕಟ್ಟುವವರ ಬದುಕು ಅತಂತ್ರ; ಪುನರ್ವಸತಿ ನಿರೀಕ್ಷೆಯಲ್ಲಿ ಹಿರಿಯ ಜೀವಗಳು
Published 7 ಅಕ್ಟೋಬರ್ 2023, 23:30 IST
Last Updated 7 ಅಕ್ಟೋಬರ್ 2023, 23:30 IST
ಅಕ್ಷರ ಗಾತ್ರ

ಬೀಡಿ ಕಟ್ಟುವಲ್ಲಿ ನಿರತರಾಗಿರುವ ಮಂಗಳೂರು ಮುಳಿಹಿತ್ಲಿನ ಲೋಣಾ ಮೊಂತೆರೊಮಂಗಳೂರು: ‘ಇದ್ದ ಒಬ್ಬ ಮಗ ಬೇಡದ ಚಟಕ್ಕೆ ಸಿಕ್ಕಿಕೊಂಡು ಕೆಲಸ ಮಾಡ್ತಿಲ್ಲ. ಗಂಡನನ್ನು ಕಳೆದುಕೊಂಡ ಮೇಲೆ ಬೀಡಿಯೇ ಬದುಕಿನ ಸಂಗಾತಿ. ಮನೆಯಿಂದ ಹೊರ ಹೋಗಿ ದುಡಿಯುವಷ್ಟು ಮೈಯಲ್ಲಿ ಕಸುವಿಲ್ಲ. ಹೊಟ್ಟೆಪಾಡಿಗೆ ಏನಾದರೂ ಮಾಡಬೇಕಲ್ಲ’ ಎನ್ನುತ್ತ ಜಾರುವ ಕಣ್ಣೀರನ್ನು ಸೆರಗಿನಲ್ಲಿ ಒತ್ತಿದರು ಇಳಿ ವಯಸ್ಸಿನ ಸುನಂದಮ್ಮ.

‘ಗಂಡ ಕಾಯಿಲೆಗೆ ತುತ್ತಾಗಿ ಎಂಟು ತಿಂಗಳು ಹಾಸಿಗೆ ಹಿಡಿದಾಗ ಕೈತುಂಬ ಸಾಲ ಮಾಡಿಕೊಂಡೆ. ಗಂಡನನ್ನು ಉಳಿಸಿಕೊಳ್ಳಲಾಗಲಿಲ್ಲ. ಆಪತ್ತಿನ ಕಾಲಕ್ಕೆ ಸಾಲದ ಭಾರ ಕಳಚಿಕೊಳ್ಳಲು ನೆರವಾದದ್ದು ಬೀಡಿ. ಬೀಡಿ ಕಟ್ಟಿ ಮಕ್ಕಳನ್ನು ಬೆಳೆಸಿದೆ. ಮಗ ಈಗ ಅಷ್ಟಿಷ್ಟು ದುಡಿದು ತರುತ್ತಾನೆ. ಮಗನ ಆದಾಯ, ನನಗೆ ಬೀಡಿಯಿಂದ ಬರುವ ಕಾಸು ಸೇರಿದರೂ ಕುಟುಂಬ ನಿರ್ವಹಣೆ ಕಷ್ಟ. ಇಪ್ಪತ್ತು ವರ್ಷಗಳ ಹಿಂದೆ ಹೇಗೆ ಇದನ್ನೆಲ್ಲ ನಿಭಾಯಿಸಿದೆ ಎಂದು ಯೋಚಿಸಿದರೆ ಅಚ್ಚರಿಯಾಗುತ್ತದೆ’ ಎಂದರು ಮಂಗಳೂರು ಮುಳಿಹಿತ್ಲಿನ ಜೆಸಿಂತಾ.

ಇದು ಸುನಂದಮ್ಮ ಮತ್ತು ಜೆಸಿಂತಾ ಇಬ್ಬರ ಕಥೆಯಲ್ಲ, ಕಡಲ ನಾಡಿನ ಬೀಡಿ ಕಟ್ಟುವ ಸಹಸ್ರಾರು ಮಹಿಳೆಯರ ಒಡಲ ಬೇಗುದಿ. ಬೀಡಿಯಿಂದ ಸಿಗುವ ಬಿಡಿಗಾಸು ಜೀವನ ನಿರ್ವಹಣೆಗೆ ಸಾಲುತ್ತಿಲ್ಲ, ಪರ್ಯಾಯ ಕೆಲಸಕ್ಕೆ ಹೊರಳಲು ಮೈ–ಕೈಯಲ್ಲಿ ತ್ರಾಣವಿಲ್ಲ.

ಹುಬ್ಬಳ್ಳಿಯಲ್ಲೂ ಬೀಡಿ ಕಟ್ಟುವ ಕೆಲ ಕುಟುಂಬಗಳಿವೆ. ಬೀಡಿ ಉದ್ಯಮವನ್ನೇ ಆಶ್ರಯಿಸಿರುವ ಅವರ ಅನುಭವವೂ ಇದಕ್ಕಿಂತ ಭಿನ್ನವಾಗಿಲ್ಲ. ಬೀಡಿ ಕಟ್ಟುವವರು ರಾಜ್ಯದ ದಕ್ಷಿಣ ಕನ್ನಡ, ಉಡುಪಿ, ಧಾರವಾಡ, ಬೆಳಗಾವಿ, ದಾವಣಗೆರೆ, ತುಮಕೂರು, ಮೈಸೂರು ಜಿಲ್ಲೆಗಳಲ್ಲಿ ಅಧಿಕ ಸಂಖ್ಯೆಯಲ್ಲಿದ್ದರೆ, ಉಳಿದ ಜಿಲ್ಲೆಗಳಲ್ಲಿ ಚದುರಿದಂತೆ ಇದ್ದಾರೆ. ಇವರಲ್ಲಿ ಶೇ 95ರಷ್ಟು ಮಹಿಳೆಯರು. ಅವರಲ್ಲೂ ಏಕಾಂಗಿಯಾಗಿ ಜೀವನ ನಡೆಸುವ ಹಿರಿಯ ಜೀವಗಳು ನಿಸ್ತೇಜ ಕಂಗಳಲ್ಲಿ ನಾಳೆಯ ನಿರೀಕ್ಷೆಯೊಂದಿಗೆ ಬೀಡಿ ಕಟ್ಟುತ್ತಾರೆ. ಯಾಕೆಂದರೆ ಬೀಡಿ ಅವರಿಗೆ ನಿತ್ಯದ ತುತ್ತಿನ ಭದ್ರ ಭರವಸೆ.

ಟೆಂಡು ಎಲೆಗಳನ್ನು ಆಯತಾಕಾರದಲ್ಲಿ ಕತ್ತರಿಸಿ ಹದಗೊಳಿಸಿ, ಅದರೊಳಗೆ ಹೊಗೆಸೊಪ್ಪು ಸೇರಿಸಿ, ಸುರುಳಿ ಮಾಡಿ ದಾರ ಕಟ್ಟಬೇಕು. ಇದೇ ಕ್ರಮದಲ್ಲಿ ಒಂದು ಸಾವಿರ ಬೀಡಿ ಕಟ್ಟಲು ಕನಿಷ್ಠ 6–7 ತಾಸು ಬೇಕು. ತಂಬಾಕಿನ ದೂಳು, ನಿರಂತರ ಗಂಟೆಗಟ್ಟಲೆ ಕುಳಿತು ಸೊಂಟನೋವು, ಕಾಲಿಗೆ ಸೆಳೆತ, ಎಲೆ ಕತ್ತರಿಸಿ ಜಿಡ್ಡುಗಟ್ಟುವ ಕೈ ಇಂತಹ ದೈಹಿಕ ತೊಂದರೆಗಳಾಚೆಯೂ ಹಲವು ವರ್ಷಗಳಿಂದ ರೂಢಿಸಿಕೊಂಡು ಬಂದ ಕೆಲಸ ಬಿಡಲಾಗದ ಸಂದಿಗ್ಧ ಇವರದ್ದು. ಲೆಕ್ಕಕ್ಕೆ ಒಂದು ಸಾವಿರ ಬೀಡಿಯಾದರೂ, ಗುತ್ತಿಗೆದಾರರಿಗೆ ಕೊಡುವಾಗ 1,100 ಬೀಡಿ ಇರಬೇಕು. ಒಂದು ಟಿನ್‌ (50 ಗ್ರಾಂ ತಂಬಾಕು)ನಲ್ಲಿ 275 ಬೀಡಿಯಂತೆ ನಾಲ್ಕು ಟಿನ್ ಸೇರಿದರೆ ಒಂದು ಸಾವಿರ ಬೀಡಿ ಎಂದು ಲೆಕ್ಕ.

ಒಂದು ಟಿನ್‌ ತಂಬಾಕು ಮತ್ತು ಎಲೆಯನ್ನು ಮನೆಗೆ ತಂದರೆ ಅದಕ್ಕೆ ಪ್ರತಿಯಾಗಿ 275 ಬೀಡಿಯನ್ನು ಗುತ್ತಿಗೆದಾರರಿಗೆ ಕೊಡಬೇಕು. ಸಮಸ್ಯೆ ಇರುವುದು ಎಲೆಯಲ್ಲಿ. ಎಲೆಗಳು ಒಣಗಿರುವುದರಿಂದ ಒಡೆದು ಹೋಗುತ್ತವೆ. ಹೆಚ್ಚುವರಿ ಎಲೆಯನ್ನು ಖರೀದಿಸುವುದು ಅನಿವಾರ್ಯ. ಸಾವಿರ ಬೀಡಿಗೆ ಹೆಚ್ಚುವರಿ ಎಲೆ, ಹೆಚ್ಚುವರಿ ತಂಬಾಕು ಖರೀದಿಸುವ ವೆಚ್ಚ ನಮ್ಮ ಮೇಲೆಯೇ ಎನ್ನುವ ಈ ಮಹಿಳೆಯರಿಗೆ ನಿರ್ಭಿಡೆಯಿಂದ ಹೇಳಿಕೊಳ್ಳಲೂ ಆಗದ ಅಸಹಾಯಕತೆ. ಎಲೆಯ ಸುರಳಿಯಲ್ಲಿ ಹೊಗೆಸೊಪ್ಪುನೊಂದಿಗೆ ಹೆಪ್ಪುಗಟ್ಟಿದ ಸಂಕಟವನ್ನೂ ಅದುಮಿ ಮೌನಿಯಾಗುತ್ತಾರೆ.

‘ನನ್ನ ಅಮ್ಮನೂ ಬೀಡಿ ಕಟ್ಟಿ ನಮ್ಮನ್ನು ಸಾಕಿದರು. ನಾನೂ ಸಹ ಬೀಡಿ ಕಟ್ಟಿಯೇ ಮೂವರು ಮಕ್ಕಳನ್ನು ಬೆಳೆಸಿದೆ. ಗಂಡನಿಗೆ ಅನಾರೋಗ್ಯ, ಕೈಯಲ್ಲಿ ಕೆಲಸವಿಲ್ಲ. ಆದರೂ, ಆಗ ವಾರಕ್ಕೆ ಆರು ದಿನ ಕೆಲಸ, ಕಡಿಮೆ ಮಜೂರಿ ಇದ್ದರೂ ಕುಟುಂಬ ನಿರ್ವಹಣೆ ಆಗುತ್ತಿತ್ತು. ಈಗ ವಾರಕ್ಕೆ ಮೂರು ದಿನಗಳ ಕೆಲಸ ಸಿಕ್ಕರೆ ಹೆಚ್ಚು. ಬೆಲೆ ಏರಿಕೆಯ ಬಿಸಿಯಲ್ಲಿ ಈ ಪುಡಿಗಾಸು ಎಂತದಕ್ಕೂ ಸಾಲದು. ಒಂದು ಸಾವಿರ ಬೀಡಿಗೆ ಕರಾವಳಿಯಲ್ಲಿ ಈಗ ಸಿಗುವ ಮಜೂರಿ ₹252. ಅದರಲ್ಲಿ ಪಿಎಫ್‌ ಕಡಿತವಾಗಿ ₹227 ಕೈಗೆ ಸಿಗುವ ಹಣ. ಇದು ದಕ್ಕಿದ್ದಾದರೂ ಹೋರಾಟದ ಫಲವಾಗಿ. ಎಲ್ಲ ಕಂಪನಿಗಳ ಬೀಡಿ ಕಾರ್ಮಿಕರಿಗೆ ಸಮಾನ ವೇತನ ಇಲ್ಲ. ದಣಿಗಳು ನಿರ್ಧರಿಸಿದಂತೆ ಮಜೂರಿ. ಕೆಲವೆಡೆಗಳಲ್ಲಿ ಸಾವಿರ ಬೀಡಿಗೆ ₹150 ಕೂಲಿ ಪಡೆಯುವವರೂ ಇದ್ದಾರೆ. ಈಗ ರಾಜ್ಯ ಸರ್ಕಾರ ಒದಗಿಸಿರುವ ಗೃಹಲಕ್ಷ್ಮಿ ಯೋಜನೆಯ ಮಾಸಿಕ ₹2,000 ಹಾಗೂ ಗೃಹಜ್ಯೋತಿ ಯೋಜನೆಯ ಉಚಿತ ವಿದ್ಯುತ್ ಸೌಲಭ್ಯಗಳು ಕೊಂಚ ನಿಟ್ಟುಸಿರು ಬಿಡುವಂತೆ ಮಾಡಿವೆ’ ಎನ್ನುತ್ತಾರೆ ಹೋರಾಟಗಾರ್ತಿ ಮಂಗಳೂರಿನ ಭಾರತಿ ಬೋಳಾರ.

ಬೆಲೆ ಏರಿಕೆಯ ಬಿಸಿ

ರಾಣೆಬೆನ್ನೂರಿನ ಇಸ್ಲಾಂಪುರ ಓಣಿಯಲ್ಲಿ ಓಡಾಡಿದರೆ ಮಡಲಲ್ಲಿ ಮೊರ (ಬೀಡಿ ಸೂಪು), ಗೋಡೆಗೆ ಬೆನ್ನೊರಗಿಸಿ ಕುಳಿತು ಮಹಿಳೆಯರು ಬೀಡಿ ಕಟ್ಟುವ ದೃಶ್ಯ ಕಾಣುತ್ತದೆ. ‘ದಿನಕ್ಕೆ ಸಾವಿರ ಬೀಡಿ ಕಟ್ಟಿದರೆ ₹200 ಕೂಲಿ ಸಿಗುತ್ತದೆ. ಇದೇ ಉದ್ಯೋಗ ಅವಲಂಬಿಸಿರುವ ನಮಗೆ ಮನೆ ಬಾಡಿಗೆ, ನೀರಿನ ಬಿಲ್‌ ಕಟ್ಟಲೂ ಕಷ್ಟ. ಕೊಳೆಗೇರಿ ವಾಸಿಗಳಾದ ನಮಗೆ ಬೆಲೆ ಏರಿಕೆಯ ಬಿಸಿಯೂ ತಟ್ಟಿದೆ. ಬೀಡಿ ಕಟ್ಟುವ ಕೆಲಸ ಬಿಟ್ಟರೆ ಬೇರೆ ಕೆಲಸ ಗೊತ್ತಿಲ್ಲ’ ಎನ್ನುತ್ತಾರೆ ಈ ಮಹಿಳೆಯರು.

‘ತಂಬಾಕಿಗೆ ಒಡ್ಡಿಕೊಳ್ಳುವ ಬೀಡಿ ಕಾರ್ಮಿಕರಲ್ಲಿ ಶೇ 85ಕ್ಕೂ ಹೆಚ್ಚು ಮಹಿಳೆಯರು ಶ್ವಾಸಕೋಶ, ಗರ್ಭಕೋಶ, ಗಂಟಲಿನ ಸಮಸ್ಯೆ, ಕ್ಯಾನ್ಸರ್‌, ಬೆನ್ನುನೋವು, ಮಂಡಿನೋವು ಅನುಭವಿಸುತ್ತಿದ್ದಾರೆ. ಅವರ ದುಡಿಮೆಯ ಅರ್ಧದಷ್ಟು ಹಣ ಆಸ್ಪತೆಗೆ ಸುರಿಯುವಂತಾಗಿದೆ. ಬೀಡಿ ಕಾರ್ಮಿಕರ ಆರೋಗ್ಯ ರಕ್ಷಣೆಗೆ ಸರ್ಕಾರ ಮತ್ತಷ್ಟು ಕ್ರಮ ಕೈಗೊಳ್ಳಬೇಕು’ ಎನ್ನುತ್ತಾರೆ ರಾಣೆಬೆನ್ನೂರಿನ ವನಸಿರಿ ಸ್ವಯಂಸೇವಾ ಸಂಸ್ಥೆಯ ತನರುಮ್‌ ಖತೀಬ್‌.

ಬೆಳಗಾವಿ ಜಿಲ್ಲೆ ನಿಪ್ಪಾಣಿ ಮಹಿಳೆಯರದು ಇನ್ನೊಂದು ಗೋಳಿನ ವ್ಯಥೆ. ‘ಬೀಡಿ ಕಾರ್ಖಾನೆಯಲ್ಲಿ ಮೂರು ವರ್ಷ ಕೆಲಸ ಮಾಡಿದೆ. ಏಕಾಏಕಿ ಅದನ್ನು ಮುಚ್ಚಿದ ಮಾಲೀಕರು ಯಾವ ಸೌಲಭ್ಯವನ್ನೂ ಕೊಡದೆ ಓಡಿಹೋದರು‌. ಈ ಬಗ್ಗೆ ನ್ಯಾಯಾಲಯದಲ್ಲಿ ದಾವೆ ಹೂಡಿದ್ದೇವೆ. 19 ವರ್ಷಗಳಾದರೂ ನ್ಯಾಯ ಸಿಕ್ಕಿಲ್ಲ’ ಎಂದು ಬೇಸರಿಸುತ್ತಾರೆ ಕಾರ್ಮಿಕ‌ ಮಹಿಳೆ ಪರ್ವೀನ್ ನಾಯ್ಕವಾಡೆ.

'ಬೀಡಿ ಕಾರ್ಖಾನೆಯವರು ಕಾರ್ಮಿಕರಿಗೆ ವಂಚಿಸಿದ್ದಾರೆ. ಸದ್ಯ ಇರುವ ಕಾರ್ಖಾನೆಯವರು ಕಾರ್ಮಿಕರಿಗೆ ಅತ್ಯಲ್ಪ ವೇತನ ನೀಡಿ ದುಡಿಸಿಕೊಳ್ಳುತ್ತಾರೆ’ ಎನ್ನುವ ಬೆಳಗಾವಿ ಜಿಲ್ಲಾ ಬೀಡಿ ಕಾರ್ಮಿಕರ ಸಂಘದ ಅಧ್ಯಕ್ಷ ಚಂದ್ರಕಾಂತ ಕರಾಡೆ, ನ್ಯಾಯಕ್ಕಾಗಿ ಕಾರ್ಖಾನೆಯವರ ವಿರುದ್ಧ ಹೋರಾಟ ಮುಂದುವರಿಸಿದ್ದಾಗಿ ಹೇಳುತ್ತಾರೆ.

‘ಮದುವೆಗೂ ಮುಂಚಿನಿಂದ ಬೀಡಿ ಕಟ್ಟಲು ಆರಂಭಿಸಿರುವ ನಾನು ಈಗಲೂ ಮುಂದುವರಿಸಿರುವೆ. ಒಂದು ಸಾವಿರ ಸಿದ್ಧ ಬೀಡಿಗೆ ₹150 ಕೂಲಿ ಕೊಡುತ್ತಾರೆ‌’ ಎನ್ನುವಾಗ 70ರ ಆಸುಪಾಸಿನ ಅಂಜನಾ ಕುಂಬರ ಅವರ ಕಣ್ಣಲ್ಲಿ ಹತಾಶೆಯ ಭಾವವಿತ್ತು.

ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ನಿಪ್ಪಾಣಿಯಲ್ಲಿ ಈಗ ನಾಲ್ಕು ಕಾರ್ಖಾನೆಗಳಿವೆ. ಕೆಲವರಷ್ಟೇ ಅಲ್ಲಿ ಕೆಲಸ ಮಾಡುತ್ತಾರೆ. ಉಳಿದವರು ಕಾರ್ಖಾನೆಯಿಂದ ಕಚ್ಚಾ ಸಾಮಗ್ರಿ ತಂದು, ಮನೆಗಳಲ್ಲಿ ಬೀಡಿ ಕಟ್ಟುತ್ತಾರೆ.

ಕಾರ್ಮಿಕ ಇಲಾಖೆಯ ಮಾಹಿತಿ ಪ್ರಕಾರ ದಾವಣಗೆರೆ ಜಿಲ್ಲೆಯಲ್ಲಿ ಅಂದಾಜು 4,200 ಬೀಡಿ ಕಾರ್ಮಿಕರು, 85 ಗುತ್ತಿಗೆದಾರರು ಇದ್ದಾರೆ. ಆದರೆ, ವಾಸ್ತವದಲ್ಲಿ ದಾವಣಗೆರೆ ನಗರ, ಹರಿಹರ, ಹೊನ್ನಾಳಿ, ಚನ್ನಗಿರಿ, ಜಗಳೂರು ಸೇರಿ 25,000ಕ್ಕೂ ಹೆಚ್ಚು ಕಾರ್ಮಿಕರು ಕಾಣ ಸಿಗುತ್ತಾರೆ.

ಬ್ರ್ಯಾಂಡೇತರ ಮತ್ತು ನೋಂದಾಯಿಸದ ಕಂಪನಿಗಳು ಹಾಗೂ ನೂರಾರು ಗುತ್ತಿಗೆದಾರರ ಬಳಿ ಕೆಲಸ ಪಡೆದು ಮಹಿಳೆಯರು ತಮ್ಮ ಮನೆಗಳಲ್ಲಿಯೇ ಬೀಡಿ ಕಟ್ಟುತ್ತಾರೆ. ಗುತ್ತಿಗೆದಾರರು ಮನೆಗಳಿಗೇ ಎಲೆ, ತಂಬಾಕು ತಂದು ಕೊಡುತ್ತಾರೆ. ಆದರೆ ಕಾರ್ಮಿಕ ಇಲಾಖೆಯಲ್ಲಿ ಬೀಡಿ ಕಾರ್ಮಿಕರ ಲೆಕ್ಕವೇ ಇಲ್ಲ. ಹೀಗಾಗಿ ಅವರಿಂದ ಯಾವುದೇ ಸೌಲಭ್ಯ ಸಿಗುತ್ತಿಲ್ಲ ಎನ್ನುತ್ತಾರೆ ನೆರಳು ಬೀಡಿ ಕಾರ್ಮಿಕರ ಸಂಘಟನೆ ಅಧ್ಯಕ್ಷೆ ಜಬೀನಾ ಖಾನಂ.

ನಿಷೇಧಿತ ಪದಾರ್ಥಕ್ಕೆ ಬೇಡಿಕೆ: ‘ಧೂಮಪಾನ ಕ್ಯಾನ್ಸರ್‌ಗೆ ಕಾರಣ’ ಎಂಬ ವೈಜ್ಞಾನಿಕ ಅಧ್ಯಯನ ವರದಿ, ಅದರ ಹಿನ್ನೆಲೆಯಲ್ಲಿ ತಂಬಾಕು ನಿಷೇಧ, ಕೋಟ್ಪಾ ಕಾಯ್ದೆ–2003 (ಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳ ಕಾಯ್ದೆ) ಜಾರಿ, ತಂಬಾಕುಮುಕ್ತ ಭಾರತ ಒಡಂಬಡಿಕೆ ಎಲ್ಲವನ್ನೂ ಒಪ್ಪಿಕೊಳ್ಳುತ್ತೇವೆ. ಆದರೆ, ಯಾವುದೆಲ್ಲ ನಿಷೇಧಿತಕ್ಕೆ ಒಳಗಾಗಿವೆಯೋ ಅವುಗಳೇ ಹೆಚ್ಚು ಮಾರಾಟವಾಗುತ್ತವೆ. ತಂಬಾಕು ಉತ್ಪನ್ನದ ಮೇಲೆ ಸರ್ಕಾರ ವಿಧಿಸಿದ ಗರಿಷ್ಠ ಜಿಎಸ್‌ಟಿಯ ನೆಪವೊಡ್ಡಿ, ಬೀಡಿ ಕಂಪನಿಗಳ ಮಾಲೀಕರು, ಕಾರ್ಮಿಕರನ್ನು ಕಡಿಮೆ ಕೂಲಿಗೆ ದುಡಿಸಿಕೊಳ್ಳುತ್ತಾರೆ. ಸಿಗರೇಟ್ ಧೂಮದಿಂದ ಬೀಡಿ ಉದ್ಯಮ ಕೊಂಚ ಸೊರಗಿರಬಹುದು. ಆದರೆ, ದಕ್ಷಿಣ ಭಾರತದ ಬೀಡಿಗೆ ಈಗಲೂ ಉತ್ತರ ಭಾರತದ ರಾಜ್ಯಗಳಲ್ಲಿ ಬೇಡಿಕೆ ಇದೆ’ ಎನ್ನುವುದು ಕರ್ನಾಟಕ ರಾಜ್ಯ ಬೀಡಿ ಕಾರ್ಮಿಕರ ಫೆಡರೇಷನ್ ಪ್ರಧಾನ ಕಾರ್ಯದರ್ಶಿ ತುಮಕೂರಿನ ಸೈಯ್ಯದ್ ಮುಜೀಬ್ ಅಭಿಪ್ರಾಯ. 

‘ತಂಬಾಕು ಬೆಳೆಗಾರರಿಗೆ ಪುನರ್ವಸತಿ ಯೋಜನೆಗಳನ್ನು ಸರ್ಕಾರ ಜಾರಿಗೊಳಿಸಿದೆ. ಆದರೆ, ತಂಬಾಕು ಅವಲಂಬಿಸಿರುವ ಕಾರ್ಮಿಕರಿಗೆ ಪರ್ಯಾಯ ಏನು? ತಲೆತಲಾಂತರಗಳಿಂದ ಬೀಡಿ ಕಟ್ಟುವ ಕಾರ್ಮಿಕರ ಕುಟುಂಬದವರು, ಎಲೆ ಕೊಯ್ಯುವವರು, ಹೊರುವವರು, ಸಾಗಣೆ ಮಾಡುವ ವಾಹನಗಳ ಚಾಲಕರು ಇವರೆಲ್ಲ ದೀರ್ಘಕಾಲೀನ ಬಡತನದಲ್ಲಿ ಬೆಂದವರು. ಇವರಿಗೆ ಪರ್ಯಾಯ ಕಲ್ಪಿಸಲು ಯಾಕೆ ಸರ್ಕಾರ ಯೋಚಿಸುತ್ತಿಲ್ಲ‘ ಎಂದು ಖಾರವಾಗಿ ಪ್ರಶ್ನಿಸುತ್ತಾರೆ ಅವರು. 

ದೈನಂದಿನ ಬದುಕಿಗೆ ಸಾಲದು:‘ಹಿಂದೆ ಇದ್ದ ಕಾರ್ಖಾನೆಗಳು ಬಂದಾಗಿವೆ. ಪ್ರಸ್ತುತ ಮಂಗಳೂರಿನ ಕೆಲವು ಕಾರ್ಖಾನೆಯವರು ಇಲ್ಲಿನ ಏಜೆನ್ಸಿಗಳ ಮೂಲಕ ಬೀಡಿ ಕಟ್ಟಿಸುತ್ತಾರೆ. ಅವರು ನೀಡುವ ಕೂಲಿ ದೈನಂದಿನ ಬದುಕಿಗೆ ಸಾಲದು’ ಎಂದು ಧಾರವಾಡ ಜಿಲ್ಲಾ ಬೀಡಿ ಕಾರ್ಮಿಕರ ಸಂಘದ ಅಧ್ಯಕ್ಷ ಬಿ.ಎ.ಮುಧೋಳ ಹೇಳುತ್ತಾರೆ.

‘ಕಡಿಮೆ ಕೂಲಿ ಕೊಡುತ್ತಾರೆ ಎಂದು ಯಾರಾದರೂ ಕಾರ್ಮಿಕ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿದರೆ, ಇದು ಸಂಬಂಧಿಸಿದ ಏಜೆನ್ಸಿಯವರ ಗಮನಕ್ಕೆ ಹೋಗುತ್ತದೆ. ಏಜೆನ್ಸಿಯವರು ಬೀಡಿ ಕಟ್ಟುವ ಕೆಲಸ ಕೊಡಲ್ಲ. ಆ ಕಾರ್ಮಿಕರು ಕೆಲಸ ಇಲ್ಲದೆ ತೊಂದರೆ ಅನುಭವಿಸುತ್ತಾರೆ’ ಎಂದು ಅವರು ತಿಳಿಸಿದರು.

ಬೀಡಿ ಬೇಡಿಕೆ ಕುಸಿತ: ಗ್ರಾಮೀಣ ಭಾಗದಲ್ಲೂ ಸಿಗರೇಟ್‌ ಬಳಕೆ ಜಾಸ್ತಿಯಾಗಿದೆ. ಇದರಿಂದ ಬೀಡಿ ಕೇಳುವವರು ಕಡಿಮೆಯಾಗಿದ್ದಾರೆ. ಬೀಡಿ ಮೇಲೆ ಸರ್ಕಾರ ಹೆಚ್ಚಿನ ತೆರಿಗೆ ವಿಧಿಸಿರುವುದರಿಂದ ಬೀಡಿ ತಯಾರಿಕೆ ಕುಸಿತವಾಗುತ್ತಿದೆ. ಸೂಕ್ತ ಮಾರುಕಟ್ಟೆ ಇಲ್ಲದ ಕಾರಣಕ್ಕೆ ಕೂಲಿ ಕಾರ್ಮಿಕರಿಗೆ ವಾರದ ಪೂರ್ತಿ ಕೆಲಸ ನೀಡಲು ಆಗುತ್ತಿಲ್ಲ. ಹೀಗಾಗಿ ಕಾರ್ಮಿಕರ ಜತೆಗೆ ಮಾಲೀಕರಿಗೂ ಕಷ್ಟವಾಗುತ್ತಿದೆ. ಒಂದು ಸಾವಿರ ಬೀಡಿ ಕಟ್ಟಿದರೆ ₹260 ಕೂಲಿ, ಶೇ 8.3ರಷ್ಟು ಬೋನಸ್‌ ನೀಡಲಾಗುತ್ತಿದೆ ಎನ್ನುತ್ತಾರೆ ತುಮಕೂರಿನ ಅಶೋಕ ಬೀಡಿ ಮಾಲೀಕ ರಿಯಾಜ್‌ ಅಹ್ಮದ್‌.

ಬೀಡಿ ಕಾರ್ಮಿಕರ ಕ್ಷೇಮನಿಧಿ ದುರ್ಬಲ: ಬೀಡಿ ಉತ್ಪಾದನೆಯ ಮೇಲೆ ಸೆಸ್‌ ವಿಧಿಸಿ ಆ ಹಣವನ್ನು ಬೀಡಿ ಕಾರ್ಮಿಕರ ಕ್ಷೇಮನಿಧಿ ಮೂಲಕ ಕಾರ್ಮಿಕರ ಮಕ್ಕಳಿಗೆ ಸ್ಕಾಲರ್‌ಷಿಪ್, ಕಾಯಿಲೆಗೆ ತುತ್ತಾದವರ ಚಿಕಿತ್ಸೆಗೆ ನೆರವು ಮೊದಲಾದ 15ಕ್ಕೂ ಹೆಚ್ಚು ಕಲ್ಯಾಣ ಕಾರ್ಯಕ್ರಮಗಳಿಗೆ ಬಳಕೆ ಮಾಡಲಾಗುತ್ತಿತ್ತು. ಈಗ ಜಿಎಸ್‌ಟಿ ಬಂದ ಮೇಲೆ ಸೆಸ್‌ ಅನ್ನು ನಿಲ್ಲಿಸಿರುವ ಕೇಂದ್ರ ಸರ್ಕಾರ, ಕ್ಷೇಮನಿಧಿಯನ್ನು ದುರ್ಬಲಗೊಳಿಸಿದೆ. ರಾಜ್ಯದಲ್ಲಿ 28 ಕಡೆಗಳಲ್ಲಿ ಬೀಡಿ ಕಾರ್ಮಿಕರ ಚಿಕಿತ್ಸಾ ಕೇಂದ್ರಗಳು, ಯಾದಗಿರಿ ಮತ್ತು ಮೈಸೂರಿನಲ್ಲಿ ತಲಾ ಒಂದು ಆಸ್ಪತ್ರೆ ಇವೆ. ಇವನ್ನು ಇಎಸ್‌ಐಗೆ ಹಸ್ತಾಂತರಿಸುವ ವಿಚಾರ ಪ್ರಸ್ತಾಪದಲ್ಲಿದೆ. ಕಾರ್ಮಿಕರ ಆರೋಗ್ಯ ತಪಾಸಣೆಗೆ ಹಳ್ಳಿಗಳಿಗೆ ಹೋಗುತ್ತಿದ್ದ ಮೊಬೈಲ್‌ ವಾಹನಗಳು ಬಹುತೇಕ ಮೂಲೆ ಸೇರಿವೆ. ಅನುದಾನದ ಕೊರತೆಯಿಂದ ಇವೆಲ್ಲ ಮಂಕಾಗಿವೆ ಎಂಬುದು ಕಾರ್ಮಿಕರಪರ ಹೋರಾಟಗಾರರ ಆರೋಪ.

‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೀಡಿ ಕಾರ್ಮಿಕರ 10 ಚಿಕಿತ್ಸಾಲಯಗಳಿದ್ದು, ಔಷಧ ಸಂಗ್ರಹ ಸಾಕಷ್ಟಿದೆ. ಹೃದಯ ಕಾಯಿಲೆ ₹1.5 ಲಕ್ಷ, ಕ್ಯಾನ್ಸರ್ ಮತ್ತು ಮೂತ್ರಪಿಂಡ ವಿಫಲವಾದರೆ ₹2 ಲಕ್ಷದವರೆಗೆ ಬೀಡಿ ಕಾರ್ಮಿಕರಿಗೆ ಆರ್ಥಿಕ ನೆರವು ಸಿಗುತ್ತದೆ. ಹೆರಿಗೆ ಭತ್ಯೆ, ಕನ್ನಡಕ ವಿತರಣೆ ಇನ್ನಿತರ ಕೆಲವು ಯೋಜನೆಗಳು ಬಂದ್ ಆಗಿವೆ. ಬೀಡಿ ಕಾರ್ಮಿಕ ಮಹಿಳೆಯರಲ್ಲಿ ಬೆನ್ನುನೋವು, ಗಂಟು ನೋವು, ತಲೆನೋವು ಸಮಸ್ಯೆಯಿಂದ ಬಳಲುವವರು ಹೆಚ್ಚಿದ್ದಾರೆ’ ಎನ್ನುತ್ತಾರೆ ಗುರುಪುರ ಕೈಕಂಬ ಬೀಡಿ ಕಾರ್ಮಿಕರ ಆಸ್ಪತ್ರೆಯ ಮುಖ್ಯ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ಭಟ್. 

‘ಹೊಸಬರು ಬೀಡಿ ಕಟ್ಟಲು ಬರುತ್ತಿಲ್ಲ. ಹಳಬರಿಗೆ ಹೆಚ್ಚು ಕೆಲಸ ಸಿಗುತ್ತಿಲ್ಲ. ಇದನ್ನೇ ನಂಬಿದರೆ ಬದುಕಿನ ಬಂಡಿ ಓಡುವುದಿಲ್ಲ. ಯಾರು ಮಾಡ್ತಾರೆ ಈ ಕೆಲಸ ಹೇಳಿ? ಕೆಲ ವಯಸ್ಸಾದವರು ಸಮಯ ಕಳೆಯಲು ಮಕ್ಕಳ ಹೆಸರಿನಲ್ಲಿ ಬೀಡಿ ಕಟ್ಟುತ್ತಾರೆ. ಆರೆಂಟು ವರ್ಷಗಳ ಹಿಂದಿನವರೆಗೂ ದಿನಕ್ಕೆ ಗರಿಷ್ಠ 1 ಲಕ್ಷ ಬೀಡಿ ಸಂಗ್ರಹಿಸಿದ್ದಿದೆ. ಈಗ ಹೆಚ್ಚೆಂದರೆ ದಿನಕ್ಕೆ 5,000 ಬೀಡಿ ಸಂಗ್ರಹವಾಗುತ್ತದೆ. ಈ ಉದ್ಯಮಕ್ಕೆ ಇನ್ನು ನಾಲ್ಕಾರು ವರ್ಷ ಆಯಸ್ಸು ಅಷ್ಟೇ’ ಎನ್ನುತ್ತ ಸುಕ್ಕುಗಟ್ಟಿದ ಕೈಯಲ್ಲಿ ಲೆಕ್ಕಪುಸ್ತಕದಲ್ಲಿ ದಾಖಲಿಸಿಕೊಳ್ಳುತ್ತ, ಬೀಡಿ ಕಟ್ಟು ತಂದ ಮಹಿಳೆಯರಿಗೆ ಹಣ ಎಣಿಸಿ ಕೊಡುತ್ತಿದ್ದರು ಮಂಗಳೂರು ಅಡ್ಯಾರ್‌ನ ಬಿ.ಎ. ಖಾದರ್. 57 ವರ್ಷಗಳಿಂದ ಅವರು ಬೀಡಿ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದಾರೆ. 

ಕೃಷಿಯೇತರ ಉದ್ಯೋಗವಾಗಿ ತಲೆಮಾರುಗಳ ಜೀವನೋಪಾಯಕ್ಕೆ ದಾರಿಯಾಗಿದ್ದ ಬೀಡಿ ಉದ್ಯಮ ಸೂರ್ಯಾಸ್ತಮಾನದಲ್ಲಿದೆ. ಇದೇ ವೃತ್ತಿಯನ್ನು ದಶಕಗಳಿಂದ ಆಶ್ರಯಿಸಿರುವ ಮಹಿಳೆಯರು ಈಗ ಇಳಿವಯಸ್ಸಿಗೆ ಜಾರಿದ್ದಾರೆ. ಬದುಕಿನ ಸಂಜೆಯಲ್ಲಿರುವ ಸಹಸ್ರಾರು ಜೀವಗಳ ಒಡಲ ನೋವಿಗೆ ಸರ್ಕಾರ ಕಿವಿಯಾಗಬೇಕಾಗಿದೆ.

ಹುಬ್ಭಳ್ಳಿಯಲ್ಲಿ ಕೆಲ ಏಜೆನ್ಸಿಯವರು ಹೆಚ್ಚು ಕೂಲಿ ನೀಡುವ ಬದಲು ಕಾರ್ಮಿಕರನ್ನು ಸಮಾಧಾನ ಪಡಿಸಲು ಹಬ್ಬದ ಸಂದರ್ಭದಲ್ಲಿ ಒಂದಿಷ್ಟು ಹಣ ನೀಡಿ ಖುಷಿ ಪಡಿಸುತ್ತಾರೆ.
–ಬಿ.ಎ.ಮುಧೋಳ ಅಧ್ಯಕ್ಷ ಧಾರವಾಡ ಜಿಲ್ಲಾ ಬೀಡಿ ಕಾರ್ಮಿಕರ ಸಂಘ
ಬೆಳಿಗ್ಗೆಯಿಂದ ಸಂಜೆಯವರೆಗೆ ಒಂದು ಸಾವಿರ ಬೀಡಿ ಕಟ್ಟುತ್ತೇನೆ. ಇದಕ್ಕೆ ₹200 ಮಾತ್ರ ಕೂಲಿ ಕೊಡುತ್ತಾರೆ. ನಮಗೆ ಕನಿಷ್ಟ ₹400ಕೂಲಿ ಕೊಡಬೇಕು.
–ಅಲ್ಲಬೂ ಹುಕ್ಕೇರಿ ಬೀಡಿ ಕಟ್ಟುವ ಕಾರ್ಮಿಕ ಮಹಿಳೆ. ಹುಬ್ಬಳ್ಳಿ.
ಕಾರ್ಮಿಕ ಇಲಾಖೆ ಬೀಡಿ ಕಾರ್ಮಿಕರನ್ನು ಗುರುತಿsಬೇಕು. ಕಟ್ಟಡ ಕಾರ್ಮಿಕರಿಗೆ ನೀಡಿದಂತೆ ಸಾಮಾಜಿಕ ಭದ್ರತೆ ಒದಗಿಸಬೇಕು
ಜಬೀನಾ ಖಾನಂ ನೆರಳು ಬೀಡಿ ಕಾರ್ಮಿಕರ ಯೂನಿಯನ್‌ ಅಧ್ಯಕ್ಷೆ

‘ಪರ್ಯಾಯ ಯೋಜನೆ ಪ್ರಕಟಿಸಲಿ’

ರಾಜ್ಯದಲ್ಲಿ 10 ಲಕ್ಷದಷ್ಟಿದ್ದ ಬೀಡಿ ಕಾರ್ಮಿಕರ ಸಂಖ್ಯೆ ಈಗ ಸುಮಾರು ನಾಲ್ಕು ಲಕ್ಷಕ್ಕೆ ಇಳಿದಿದೆ. ಬೀಡಿ ಕಂಪನಿಗಳು ಕಾರ್ಮಿಕ ಇಲಾಖೆ ಚಿಕಿತ್ಸಾಲಯಗಳಲ್ಲಿ ನೋಂದಣಿಯಾದವರ ಸಂಖ್ಯೆ ಒಂದಕ್ಕೊಂದು ತಾಳೆಯಾಗುತ್ತಿಲ್ಲ. ಕಾರ್ಮಿಕರ ಸಂಖ್ಯೆ ಇಳಿಕೆಯಾಗುತ್ತಿದೆ. ಸರ್ಕಾರ ಕಠಿಣ ಕ್ರಮಗಳ ನಡುವೆಯೂ ನೂರಾರು ಬ್ರ್ಯಾಂಡ್‌ಗಳ ಬೀಡಿ ಉತ್ಪನ್ನಗಳು ತಯಾರಾಗುತ್ತಿವೆ. ಆದರೆ ಸಂದರ್ಭದ ಲಾಭ ಪಡೆಯುವ ಕಂಪನಿಗಳು ಕಾನೂನುಬದ್ಧವಾಗಿ 2–3 ದಿನ ಮಾತ್ರ ಕೆಲಸ ನೀಡುತ್ತಿವೆ. ದಾಖಲೆರಹಿತ ಕೆಲಸಕ್ಕೆ ಒಪ್ಪಿದರೆ ವಾರವಿಡೀ ಬರವಿಲ್ಲ ಎಂದು ಆರೋಪಿಸುತ್ತಾರೆ ಕರ್ನಾಟಕ ರಾಜ್ಯ ಬೀಡಿ ಕಾರ್ಮಿಕರ ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಸೈಯದ್ ಮುಜೀಬ್. 1990ರ ದಶಕದ ಪೂರ್ವ ಬೀಡಿ ಉದ್ಯಮದ ಪ್ರವರ್ಧಮಾನ ಕಾಲ. ಆಗ ಕಂಪನಿಯವರು ಸೂಪರ್ ತೆರಿಗೆದಾರರಾಗಿದ್ದರು. ಈಗಲೂ ಅವರಿಗೆ ಆದಾಯ ಕಡಿಮೆಯೇನಿಲ್ಲ. ದೊಡ್ಡ ಬಂಡವಾಳ ಹೂಡಿಕೆ ಇಲ್ಲದ ಈ ಉದ್ಯಮದಲ್ಲಿ ದಣಿಗಳು ಇನ್ನಷ್ಟು ಶ್ರೀಮಂತರಾಗುತ್ತಿದ್ದಾರೆ. ಕಾರ್ಮಿಕರೂ ಅಂದು–ಇಂದೂ ‘ಅಂತ್ಯೋದಯ’ ಕಾರ್ಡ್‌ನಲ್ಲೇ ಇದ್ದಾರೆ. ಆಗ ಕಾರ್ಖಾನೆಯಲ್ಲಿ ದುಡಿಯುತ್ತಿದ್ದವರಿಗೆ ಈಗ ಮನೆಯೇ ಕಾರ್ಖಾನೆಯಾಗಿದೆ. ಬೀಡಿ ಕಾರ್ಮಿಕರಿಗೆ ಆರ್ಥಿಕ ನೆರವು ಪರ್ಯಾಯ ಉದ್ಯೋಗದ ಯೋಜನೆ ಪ್ರಕಟಿಸುವುದು ಸರ್ಕಾರದ ಕರ್ತವ್ಯ. ಜತೆಗೆ ಬೀಡಿ ಕಾರ್ಮಿಕರ ಆರೋಗ್ಯ ಸ್ಥಿತಿಯ ಬಗ್ಗೆ ಗಮನಹರಿಸಿ ಸಮಗ್ರ ಅಧ್ಯಯನಕ್ಕೆ ಮುಂದಾಗಬೇಕು ಎಂದು ಅವರು ಆಗ್ರಹಿಸಿದರು.

ಬಾಲಕೃಷ್ಣ ಶೆಟ್ಟಿ

ಬಾಲಕೃಷ್ಣ ಶೆಟ್ಟಿ

‘ತುಟ್ಟಿಭತ್ಯೆ ಪಾವತಿ ಬಾಕಿ’

ಬೀಡಿ ಕಾರ್ಮಿಕರಿಗೆ ರಾಷ್ಟ್ರೀಯ ಕನಿಷ್ಠ ಕೂಲಿ ನಿಯಮ ಜಾರಿಯಾಗಿಲ್ಲ. ಮಧ್ಯಪ್ರದೇಶ ಆಂಧ್ರ ಪ್ರದೇಶ ಪಶ್ಚಿಮ ಬಂಗಾಳ ಒಡಿಶಾ ಇನ್ನಿತರ ಕೆಲವು ರಾಜ್ಯಗಳಲ್ಲಿ ಅತಿ ಕಡಿಮೆ ಕೂಲಿಗೆ ಬೀಡಿ ಕಟ್ಟಿಸಿಕೊಂಡು ಕಾರ್ಮಿಕರ ಶೋಷಣೆ ಮಾಡಲಾಗುತ್ತಿದೆ. ಇಲ್ಲಿನ ಬ್ರ್ಯಾಂಡ್‌ ಬೀಡಿಗಳು ಅಲ್ಲಿಂದಲೂ ಸಿದ್ಧವಾಗಿ ಬರುತ್ತವೆ. 1000 ಬೀಡಿಗೆ ಕನಿಷ್ಠ ಕೂಲಿ ₹210 ನೀಡಬೇಕು ಒಂದು ಬೀಡಿಗೆ ನಾಲ್ಕು ಪೈಸೆ ತುಟ್ಟಿಭತ್ಯೆ ನೀಡಬೇಕು ಎಂದು 2018ರಲ್ಲಿ ಸರ್ಕಾರದ ತ್ರಿಪಕ್ಷೀಯ ಸಮಿತಿಯಲ್ಲಿ ನಿರ್ಣಯವಾಗಿತ್ತು. ಈ ವಿಚಾರದ ಸಂಬಂಧ ಬೀಡಿ ಕಂಪನಿಗಳ ಮಾಲೀಕರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಅದೇ ಮಾನದಂಡ ಜಾರಿಯಾಗಿದ್ದರೆ ಈಗ ಸಾವಿರ ಬೀಡಿಗೆ ಸುಮಾರು ₹300ರಷ್ಟು ಮಜೂರಿ ಸಿಗುತ್ತಿತ್ತು. 2015ರಿಂದ ಮೂರು ವರ್ಷಗಳ ತುಟ್ಟಿಭತ್ಯೆ ಕಾರ್ಮಿಕರಿಗೆ ಪಾವತಿಸಲು ಬಾಕಿ ಇದೆ ಎಂದು ತಿಳಿಸಿದರು ಕರ್ನಾಟಕ ರಾಜ್ಯ ಬೀಡಿ ಕಾರ್ಮಿಕರ ಫೆಡರೇಷನ್ ಅಧ್ಯಕ್ಷ ಜೆ. ಬಾಲಕೃಷ್ಣ ಶೆಟ್ಟಿ.

ಎಚ್.ಎನ್. ಗೋಪಾಲಕೃಷ್ಣ

ಎಚ್.ಎನ್. ಗೋಪಾಲಕೃಷ್ಣ

‘ಹೃದ್ರೋಗ ಶ್ವಾಸಕೋಶ ಸಂಬಂಧಿ ಕಾಯಿಲೆ’

ಬೀಡಿ ಸುತ್ತುವ ಕಾಯಕ ನೆಚ್ಚಿಕೊಂಡಿರುವ ಮಹಿಳೆಯರಿಗೆ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಕಂಡುಬರುವ ಸಾಧ್ಯತೆ ಹೆಚ್ಚಿರುತ್ತದೆ. ತಂಬಾಕಿನ ಕಣ ದೂಳಿನಿಂದ ಆರೋಗ್ಯದ ಮೇಲೆ ಖಂಡಿತ ದುಷ್ಪರಿಣಾಮ ಬೀರುತ್ತದೆ. ಬೀಡಿ ಕಟ್ಟುವವರು ಮೂಗು ಮುಚ್ಚುವ ರೀತಿಯಲ್ಲಿ ಗುಣಮಟ್ಟದ ಮಾಸ್ಕ್‌ ಧರಿಸಬೇಕು. ಕೈಗವಸು ಹಾಕಿಕೊಳ್ಳಬೇಕು. ಕೆಲಸ ಮುಗಿದ ಮೇಲೆ ಕೈ ತೊಳೆದುಕೊಳ್ಳುವುದು ಮೊದಲಾದ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲದಿದ್ದರೆ ಅಪಾಯ ಖಚಿತ. ಶ್ವಾಸಕೋಶದ ಕ್ಯಾನ್ಸರ್ ಹೃದಯ ಸಂಬಂಧಿ ಕಾಯಿಲೆಗಳು ರಕ್ತದೊತ್ತಡ ಹೆಚ್ಚಾಗುವ ಸಾಧ್ಯತೆ ಜಾಸ್ತಿ ಇರುತ್ತದೆ. ತಂಬಾಕಿನಲ್ಲಿ ‘ನಿಕೊಟಿನ್‌’ ಅಂಶ ಇರುವುದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

–ಎಚ್.ಎನ್. ಗೋಪಾಲಕೃಷ್ಣ ಮೈಸೂರು ಜಯದೇವ ಹೃದ್ರೋಗ ವಿಜ್ಞಾನ ಸಂಸ್ಥೆಯ ವೈದ್ಯಕೀಯ ಸೂಪರಿಂಟೆಂಡೆಂಟ್‌

ಎಚ್.ಎನ್. ಗೋಪಾಲಕೃಷ್ಣ

ಎಚ್.ಎನ್. ಗೋಪಾಲಕೃಷ್ಣ

‘ಕನಿಷ್ಠ ಕೂಲಿ: ಸಮಿತಿ ರಚನೆಗೆ ಪ್ರಸ್ತಾವ’

ಬೀಡಿ ಕಾರ್ಮಿಕರ ಕನಿಷ್ಠ ಕೂಲಿ ಐದು ವರ್ಷಕ್ಕೊಮ್ಮೆ ಪರಿಷ್ಕರಣೆಯಾಗುತ್ತದೆ. 2018ರಲ್ಲಿ ನಿಗದಿಪಡಿಸಿದಂತೆ ಪ್ರಸ್ತುತ 1000 ಬೀಡಿಗೆ ₹304.98 ಕನಿಷ್ಠ ಕೂಲಿ ಇದೆ. ಈಗ ಪುನರ್ ಪರಿಷ್ಕರಣೆಗೆ ಕಾರ್ಮಿಕರು ಕಂಪನಿ ಪ್ರತಿನಿಧಿಗಳು ಅಧಿಕಾರಿಗನ್ನೊಳಗೊಂಡ ತ್ರಿಪಕ್ಷೀಯ ಸಮಿತಿ ರಚನೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ಸಮಿತಿ ಸಲ್ಲಿಸುವ ವರದಿ ಆಧಾರದಲ್ಲಿ ಕನಿಷ್ಠ ಕೂಲಿ ಪರಿಷ್ಕೃತಗೊಳ್ಳುತ್ತದೆ. ಕಂಪನಿಗಳು ಕಡಿಮೆ ಕೂಲಿ ನೀಡಿದರೆ ಸಂಘಟನೆ ಮೂಲಕ ವೈಯಕ್ತಿಕವಾಗಿ ಕಾರ್ಮಿಕ ಇನ್‌ಸ್ಪೆಕ್ಟರ್‌ಗಳ ಮೂಲಕ ಸಹ ಕಾರ್ಮಿಕ ಇಲಾಖೆಯಲ್ಲಿ ಪ್ರಕರಣ ದಾಖಲಿಸಲು ಅವಕಾಶ ಇದೆ. ಬೀಡಿ ಕಾರ್ಮಿಕರ ಪುನರ್ವಸತಿಗೆ ಸಂಬಂಧಿಸಿ ಸದ್ಯ ಯಾವುದೇ ಹೊಸ ಯೋಜನೆ ಇಲಾಖೆಯ ಮುಂದೆ ಇಲ್ಲ. ಕಾರ್ಮಿಕರನ್ನು ಬೀಡಿ ಕಂಪನಿಗಳು ನೇಮಕ ಮಾಡಿಕೊಂಡು ನೀಡುವ ಮಾಹಿತಿ ಇಲಾಖೆಯಲ್ಲಿ ದಾಖಲಾಗಿರುತ್ತದೆ. ಇದು ಗೃಹ ಆಧಾರಿತ ಉದ್ಯಮ ಆಗಿರುವ ಕಾರಣಕ್ಕೆ ಕಾರ್ಮಿಕರ ಸಂಖ್ಯೆ ನಿರ್ದಿಷ್ಟವಾಗಿ ಲೆಕ್ಕಕ್ಕೆ ಸಿಗುವುದು ಕಷ್ಟ. ಅಸಂಘಟಿತ ಕಾರ್ಮಿಕರನ್ನು ಗುರುತಿಸಲು ಕೇಂದ್ರ ಸರ್ಕಾರ ಇ–ಶ್ರಮ್ ಪೋರ್ಟಲ್ ಜಾರಿಗೆ ತಂದಿದ್ದು ಒಟ್ಟು 379 ವಿಭಾಗಗಳಿದ್ದು ರಾಜ್ಯದಲ್ಲಿ 1.89 ಕೋಟಿ ಕಾರ್ಮಿಕರು ಇದ್ದಾರೆಂದು ಅಂದಾಜಿಸಲಾಗಿದೆ. ಈವರೆಗೆ 77 ಲಕ್ಷ ನೋಂದಣಿಯಾಗಿದೆ. ತಂಬಾಕು ಕೈಗಾರಿಕೆಯಡಿ ಈವರೆಗೆ 98695 ಜನರ ನೋಂದಣಿಯಾಗಿದೆ.

–ಎಚ್.ಎನ್. ಗೋಪಾಲಕೃಷ್ಣ ಕಾರ್ಮಿಕ ಇಲಾಖೆ ಆಯುಕ್ತ 

ರಾಜ್ಯದಲ್ಲಿರುವ ಬೀಡಿ ಸಂಸ್ಥೆಗಳು

ನೋಂದಾಯಿತ ಸಂಸ್ಥೆಗಳು–408

ಮಹಿಳಾ ಕಾರ್ಮಿಕರು–199802

ಪುರುಷ ಕಾರ್ಮಿಕರು–31458

ಒಟ್ಟು–231260

(ಆಧಾರ: ಕಾರ್ಮಿಕ ಇಲಾಖೆ)

(ಪೂರಕ ಮಾಹಿತಿ: ಎಲ್. ಮಂಜುನಾಥ, ಸಿದ್ದು ಆರ್‌.ಜಿ.ಹಳ್ಳಿ, ಇಮಾಮ್ ಹುಸೇನ್ ಗೂಡುನವರ, ಎಂ. ಮಹೇಶ್, ಅನಿತಾ ಎಚ್, ಮೈಲಾರಿ ಲಿಂಗಪ್ಪ, ಆದಿತ್ಯ ಕೆ.ಎ.)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT