ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ಒಳನೋಟ | ಅರಣ್ಯ ಸಂಪನ್ಮೂಲಕ್ಕೆ ಬ್ರ್ಯಾಂಡ್ ಭಾಗ್ಯ: ಹುಲಿ ನಾಡಿನಲ್ಲಿ ವಿಶ್ವಾಸ
ಒಳನೋಟ | ಅರಣ್ಯ ಸಂಪನ್ಮೂಲಕ್ಕೆ ಬ್ರ್ಯಾಂಡ್ ಭಾಗ್ಯ: ಹುಲಿ ನಾಡಿನಲ್ಲಿ ವಿಶ್ವಾಸ
Published 3 ಜೂನ್ 2023, 20:31 IST
Last Updated 3 ಜೂನ್ 2023, 20:31 IST
ಅಕ್ಷರ ಗಾತ್ರ


ಕಾರವಾರ: ‘ಕಾಡು ಹೊರಜಗತ್ತಿಗೆ ಸುಂದರವಷ್ಟೆ. ಇಲ್ಲಿ ಜೀವನ ಕಟ್ಟಿಕೊಂಡವರ ಬವಣೆ ನಮಗಷ್ಟೆ ಗೊತ್ತು. ಸೀಮಿತ ಚೌಕಟ್ಟಿನೊಳಗೆ ದಿನದೂಡುವ ನಮ್ಮ ಆಸೆಗಳೆಲ್ಲವೂ ಬರಿ ಕನಸಷ್ಟೆ ಎಂದು ಭಾವಿಸಿದ್ದೆವು. ಅದಕ್ಕೀಗ ರೆಕ್ಕೆ ಮೂಡುತ್ತಿದೆ...’

ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲ್ಲೂಕಿನ ಕುಂಬಾರವಾಡಾದ ಯುವಕ ಮಹಾಬಳೇಶ್ವರ ಮುಖದಲ್ಲಿ ಮಂದಹಾಸ ಬೀರುತ್ತ ಹೀಗೆ ಮಾತು ಆರಂಭಿಸಿದರು. ಕಾಳಿ ಹುಲಿ ಸಂರಕ್ಷಿತಾರಣ್ಯ ವ್ಯಾಪ್ತಿಗೆ ಒಳಪಡುವ ಕಾತೇಲಿ ಗ್ರಾಮ ಪಂಚಾಯ್ತಿಯ ಹಿಂದಿನ ಚಿತ್ರಣ, ಭವಿಷ್ಯದಲ್ಲಿ ಎದುರಾಗಲಿರುವ ಬದಲಾವಣೆಯ ಬಗ್ಗೆ ಅವರ ಮಾತುಗಳಲ್ಲಿ ಭರವಸೆಯ ಪದಗಳೇ ತುಂಬಿಕೊಂಡಿದ್ದವು.

‘ಹಿಂದೆಲ್ಲ ಅರಣ್ಯ ಇಲಾಖೆಯ ಅಧಿಕಾರಿಗಳು ಊರಿಗೆ ಬರುತ್ತಿದ್ದಂತೆ ನಮಗೆ ಭಯ ಉಂಟಾಗುತ್ತಿತ್ತು. ಯಾವುದೋ ಕಟ್ಟುಪಾಡಿನ ಆದೇಶ ಹಿಡಿದುಬಂದಿದ್ದಾರೆ ಎಂದು ಆತಂಕಗೊಳ್ಳುತ್ತಿದ್ದೆವು. ಸೌದೆ ತರಲು, ಮನೆ ದುರಸ್ತಿ ಮಾಡಿಕೊಳ್ಳಲು ಅವರು ವಿಧಿಸುತ್ತಿದ್ದ ಕಟ್ಟುಪಾಡು, ಜೀವನ ನಿರ್ವಹಣೆಗೆ ಕಾಡಿನಿಂದ ಸಂಗ್ರಹಿಸಿ ತರುತ್ತಿದ್ದ ಜೇನು ಸಂಗ್ರಹಣೆಗೂ ಉಂಟಾಗುತ್ತಿದ್ದ ಅಡ್ಡಿ... ಇವೆಲ್ಲದರಿಂದ ಅರಣ್ಯ ಇಲಾಖೆ ಅಧಿಕಾರಿಗಳನ್ನು ಕಂಡಾಗಲೆಲ್ಲ ಊರು ತೊರೆದು ಹೋಗಬೇಕೆನ್ನಿಸುತ್ತಿತ್ತು...ಆದರೆ ಈಗ ಅಂತಹ ಸ್ಥಿತಿ ಇಲ್ಲ....’ ಎನ್ನುತ್ತ ಕೆಲ ಹೊತ್ತು ಮೌನಕ್ಕೆ ಜಾರಿದರು.

ಮತ್ತೆ ಮಾತು ಆರಂಭಿಸಿದ ಅವರು ಹೇಳಿದ ಪ್ರತಿ ಶಬ್ದಗಳಲ್ಲಿ ‘ಹುಲಿ ಓಡಾಡುವ ಕಾಡಿನ ನಡುವೆ ನೆಲೆ ನಿಂತ ಜನರಲ್ಲಿ ಹೊಸ ‘ವಿಶ್ವಾಸ’ ಮೂಡುತ್ತಿದೆ ಎಂದೆನ್ನಿಸತೊಡಗಿತು. ಆದರೂ ನಂಬಿಕೆ ಬಾರದೇ  ಗ್ರಾಮದ ಇನ್ನೂ ಐದಾರು ಜನರನ್ನು ಮಾತನಾಡಿಸಿದಾಗ
ಅವರು ಹೇಳಿದ್ದೂ ಕಾತೇಲಿ (ಕುಂಬಾರವಾಡಾ) ಗ್ರಾಮ ಪಂಚಾಯ್ತಿಯಲ್ಲಿ ನಡೆಯುತ್ತಿರುವ ಬದಲಾವಣೆಗಳ ಬಗ್ಗೆಯೇ.

‘ಕಾಡಿನಿಂದ ಜೇನು ಕಿತ್ತು ತರುವ ಬದಲು ಜೇನು ಕೃಷಿ ಪಾಠವನ್ನು ಜನರಿಗೆ ಹೇಳಿಕೊಡಲಾಗುತ್ತಿದೆ. ತೆಂಗಿನ ನಾರು ಬಳಸಿ ಸಿದ್ಧ ಉತ್ಪನ್ನ ತಯಾರಿಸುವ ತರಬೇತಿ, ಮಣ್ಣಿನ ಮಡಿಕೆ ತಯಾರಿಕೆಯ ತರಬೇತಿಗೆ ಜನರನ್ನು ಅಣಿಗೊಳಿಸಲಾಗುತ್ತಿದೆ. ಇವೆಲ್ಲದರ ಬಗ್ಗೆ ಪ್ರತಿ ವಾರಕ್ಕೊಮ್ಮೆ ಅರಣ್ಯ ಇಲಾಖೆ ಅಧಿಕಾರಿಗಳು ಊರಿಗೆ ಭೇಟಿ ನೀಡಿ ಮಾಹಿತಿ ಒದಗಿಸುತ್ತಿದ್ದಾರೆ. ಇದರ ಜೊತೆಯಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯ ವಿಲೇವಾರಿ ಘಟಕ ಈಗಾಗಲೇ ತಲೆಯೆತ್ತಿದೆ’ ಎಂಬ ಭರವಸೆಯ ಮಾತುಗಳನ್ನು ಆಡಿದ್ದು ಗ್ರಾಮಸ್ಥ ನಿತಿನ್ ಶೆಟ್ಟಿ.

ಕಾಳಿ ಹುಲಿ ಸಂರಕ್ಷಿತಾರಣ್ಯ ವಿಭಾಗದ ಅರಣ್ಯ ಇಲಾಖೆಯ ಅಧಿಕಾರಿಗಳು ಕಾತೇಲಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಪರಿಸರ ಅಭಿವೃದ್ಧಿ ಸಮಿತಿ (ಇ.ಡಿ.ಸಿ.) ಬಲಪಡಿಸಲು ಮುಂದಾಗಿದ್ದಾರೆ. ಸಮಿತಿಯ ಕಾರ್ಯಚಟುವಟಿಕೆಯ ಮೂಲಕ ಜನರ ಜೀವನ ಮಟ್ಟ ಸುಧಾರಿಸಲು ಹಲವು ಯೋಜನೆ ಹಾಕಿಕೊಂಡಿದ್ದಾರೆ. ಅವುಗಳನ್ನು ಕಾರ್ಯರೂಪಕ್ಕೆ ತರುವ ಮೊದಲ ಹೆಜ್ಜೆಯಾಗಿ ಜನರ ವಿಶ್ವಾಸ ಗಳಿಸಲು ಮುಂದಡಿ ಇಡಲಾಗಿದೆ.

ಮಹತ್ವಾಕಾಂಕ್ಷಿ ಮನಸ್ಸಿನ ಯುವಕರ ಸಹಭಾಗಿತ್ವದಲ್ಲಿ ವನ್ಯಜೀವಿ ಸಂರಕ್ಷಣೆ (SWAYAM) ಎಂಬ ಪರಿಕಲ್ಪನೆಯನ್ನು ರೂಪಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು ಈ ಮೂಲಕ ಸ್ಥಳೀಯರನ್ನು ವಿಶ್ವಾಸಕ್ಕೆ ಪಡೆದುಕೊಂಡು ಅವರ ಜೀವನ ಸುಧಾರಣೆಯ ಕೆಲಸಕ್ಕೆ ಕೈ ಹಾಕಿದ್ದಾರೆ.

ಆರ್ಥಿಕವಾಗಿ, ಸಾಮಾಜಿಕವಾಗಿ ತೀರಾ ಹಿಂದುಳಿದಿರುವ ಕುಣಬಿ ಸಮುದಾಯದ ಜನರೇ ಹೆಚ್ಚಿರುವ ಕಾತೇಲಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 4,500 ರಷ್ಟು ಜನಸಂಖ್ಯೆ ಇದೆ. ಈ ಪೈಕಿ ಯುವ ತಲೆಮಾರಿನ ಬಹುತೇಕ ಮಂದಿ ಉದ್ಯೋಗದ ಸಲುವಾಗಿ ನೆರೆಯ ಗೋವಾ ರಾಜ್ಯ ಅಥವಾ ರಾಜ್ಯದ ದೊಡ್ಡ ನಗರಗಳಿಗೆ ವಲಸೆ ಹೋಗುವ ಅನಿವಾರ್ಯತೆಯಲ್ಲಿದ್ದಾರೆ.

‘ಹುಲಿ ಸಂರಕ್ಷಿತಾರಣ್ಯ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯ ಭಾಗವಾಗಿಯೇ ಹುಲಿ ಸಂರಕ್ಷಣೆ ಫೌಂಡೇಶನ್ ಕೂಡ ಕಾರ್ಯನಿರ್ವಹಿಸುತ್ತದೆ. ಕಾಳಿ ಹುಲಿ ಸಂರಕ್ಷಿತಾರಣ್ಯ ವ್ಯಾಪ್ತಿಯಲ್ಲಿ ದಾಂಡೇಲಿ ಅಣಸಿ ಟೈಗರ್ ಕನ್ಸರ್ವೇಶನ್ ಫೌಂಡೇಶನ್ (ಡಿಎಟಿಸಿಎಫ್) ಕಾರ್ಯನಿರ್ವಹಿಸುತ್ತಿದ್ದು, ಅದರಡಿಯಲ್ಲಿ ಪರಿಸರ ಅಭಿವೃದ್ಧಿ ಸಮಿತಿಗಳನ್ನು ಬಲಪಡಿಸುವ ಕೆಲಸ ಮಾಡುತ್ತಿದ್ದೇವೆ’ ಎನ್ನುತ್ತಾರೆ ಕುಂಬಾರವಾಡಾ ಎಸಿಎಫ್ ಅಮರಾಕ್ಷರ ವಿ.ಎಂ.

‘ಪರಿಸರ ಅಭಿವೃದ್ಧಿ ಸಮಿತಿಗಳ ಮೂಲಕವೇ ಕಾತೇಲಿ ಭಾಗದಲ್ಲಿ ಜನರ ಜೀವನಮಟ್ಟ ಸುಧಾರಣೆಯ ಯೋಜನೆಗಳು ಜಾರಿಗೊಳ್ಳಲಿವೆ. ಸ್ವಉದ್ಯೋಗದ ಮೂಲಕ ಜನರು ತಯಾರಿಸುವ ಸಿದ್ಧ ಉತ್ಪನ್ನಗಳನ್ನು ಸ್ಥಳೀಯವಾಗಿ ಮತ್ತು ಪ್ರವಾಸಿ ತಾಣಗಳಲ್ಲಿ ಮಾರಾಟ ಮಾಡಲಾಗುವುದು. ಜೇನುತುಪ್ಪ, ನಾರಿನ ಉತ್ಪನ್ನಗಳು ಕೆ.ಟಿ.ಆರ್. (ಕಾಳಿ ಟೈಗರ್‌ ರಿಸರ್ವ್‌) ಬ್ರ್ಯಾಂಡ್ ಅಡಿಯಲ್ಲಿ ಮಾರುಕಟ್ಟೆಗೆ ಪರಿಚಯಗೊಳ್ಳಲಿವೆ’ ಎಂದರು.

ವನ್ಯಜೀವಿಗಳ ಸಂರಕ್ಷಣೆಗಾಗಿ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಜಾರಿಯಲ್ಲಿರುವ ಕಠಿಣ ನಿಯಮಾವಳಿ ಜನ ಮತ್ತು ಅರಣ್ಯ ಇಲಾಖೆಯ ನಡುವೆ ಕಂದಕವನ್ನೇ ಸೃಷ್ಟಿಸಿದೆ. ಸಾರ್ವಜನಿಕ ಸಹಭಾಗಿತ್ವದಲ್ಲಿ ಅಭಿವೃದ್ಧಿ ಎಂಬುದು ಘೋಷಣೆಗೆ ಸೀಮಿತ ಎಂಬ ಆರೋಪ ಇತ್ತು. ಇಂತಹ ಅಪವಾದಗಳಿಂದ ಮುಕ್ತವಾಗಲು ಕುಂಬಾರವಾಡಾದಲ್ಲಿ ಅರಣ್ಯ ಇಲಾಖೆ ಹಲವಾರು ಪ್ರಯೋಗಗಳನ್ನು ಕೈಗೊಂಡಿದೆ.

‘ಹುಲಿ ಸಂರಕ್ಷಿತಾರಣ್ಯದ ಹೃದಯ ಭಾಗದಂತಿರುವ ಕಾತೇಲಿಯಲ್ಲಿ ಅಭಿವೃದ್ಧಿ ಯೋಜನೆಯೊಂದನ್ನು ಜಾರಿಗೆ ತರಬೇಕಾದರೆ ಹಲವು ಬಾರಿ ಯೋಚಿಸಬೇಕಾಗುತ್ತದೆ. ಜನರ ‘ವಿಶ್ವಾಸ’ ಗಳಿಸಿದರೆ ಯೋಜನೆ ಯಶಸ್ಸಿನ ಮೊದಲ ಮೆಟ್ಟಿಲು ಹತ್ತಿದಂತೆ’ ಎನ್ನುವರು ಕೆ.ಟಿ.ಆರ್.ನ ಡಿಸಿಎಫ್ ಮರಿಯಾ ಕ್ರಿಸ್ತರಾಜು.

‘ಕೆ.ಟಿ.ಆರ್. ವ್ಯಾಪ್ತಿಯ ಪಣಸೋಲಿಯಲ್ಲಿ ಜಂಗಲ್ ಸಫಾರಿ ಯೋಜನೆಯನ್ನು ಸ್ಥಳೀಯ ಪರಿಸರ ಅಭಿವೃದ್ಧಿ ಸಮಿತಿ ಜತೆ ಕೈಜೋಡಿಸಿ ನಡೆಸಲಾಗುತ್ತಿದೆ. ಇದರಿಂದ ಸ್ಥಳೀಯರಿಗೆ ಉದ್ಯೋಗ ಒದಗಿದೆ. ಆದರೆ ಕಾತೇಲಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಪ್ರವಾಸೋದ್ಯಮ ಚಟುವಟಿಕೆ ಇಲ್ಲ. ಆದರೆ ಈ ಭಾಗದ ಮೂಲಕ ಪ್ರವಾಸಿಗರು ದೊಡ್ಡ ಸಂಖ್ಯೆಯಲ್ಲಿ ಹಾದುಹೋಗುತ್ತಾರೆ. ಇದಕ್ಕಾಗಿಯೇ ಪ್ರವಾಸೋದ್ಯಮಕ್ಕೆ ಪೂರಕ ಚಟುವಟಿಕೆ ನಡೆಸಲು ಮುಂದಾಗಿದ್ದೇವೆ’ ಎಂದು ಯೋಜನೆ ಆರಂಭಿಸಲು ಪೂರಕವಾದ ಅಂಶಗಳನ್ನು ಎಸಿಎಫ್ ಅಮರಾಕ್ಷರ ಅವರು ವಿವರಿಸಿದರು.

‘ನೈಸರ್ಗಿಕವಾದ ಜೇನುತುಪ್ಪ ಹೇರಳ ಪ್ರಮಾಣದಲ್ಲಿ ಈ ಭಾಗದಲ್ಲಿ ದೊರೆಯುತ್ತವೆ. ಕಾಡಿನ ಮರಗಳಲ್ಲಿ ಕಟ್ಟಿಕೊಂಡ ಜೇನುಗೂಡುಗಳಿಂದ ಜೇನುತುಪ್ಪ ಸಂಗ್ರಹಣೆ ಬದಲು ‘ಅಡವಿ ಝೇಂಕಾರ’ ಎಂಬ ಕಾರ್ಯಕ್ರಮ ರೂಪಿಸಿ ಅದರಡಿ ಜೇನು ಸಾಕಣೆ ತರಬೇತಿ ನೀಡಿದ್ದೇವೆ. ಪ್ರತಿ ಕುಟುಂಬ ವರ್ಷಕ್ಕೆ ಕನಿಷ್ಠ 1 ಕ್ವಿಂಟಲ್‍ನಷ್ಟು ಜೇನುತುಪ್ಪ ಉತ್ಪಾದಿಸಿದರೂ ಈ ಭಾಗದಿಂದ 2 ಟನ್‍ಗೂ ಹೆಚ್ಚು ಶುದ್ಧ ಜೇನುತುಪ್ಪ ಸಂಗ್ರಹಿಸುವ ಗುರಿ ಇದೆ. ಅವುಗಳನ್ನು ಕೆ.ಟಿ.ಆರ್. ಬ್ರ್ಯಾಂಡ್ ಅಡಿಯಲ್ಲಿ ಮಾರುಕಟ್ಟೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಮೊದಲ ಹಂತವಾಗಿ ಈ ಭಾಗದ 80 ಕುಟುಂಬಗಳಿಗೆ ನೂರು ಜೇನುಪೆಟ್ಟಿಗೆಗಳನ್ನೂ ಉಚಿತವಾಗಿ ಕೊಡಲಾಗಿದೆ’ ಎಂದರು.

‘ಕೇರಳದ ಪೆರಿಯಾರ್ ಹುಲಿ ಸಂರಕ್ಷಿತಾರಣ್ಯ ವ್ಯಾಪ್ತಿಯಲ್ಲಿ ಸಿಗುವ ಜೇನುತುಪ್ಪವನ್ನು ‘ಪೆರಿಯಾರ್ ಟೈಗರ್ ರಿಸರ್ವ್ ಬ್ರ್ಯಾಂಡ್’ ಮೂಲಕ ಮಾರಾಟ ನಡೆಸಿ ಯಶಸ್ಸು ಕಾಣಲಾಗಿದೆ. ಇದೇ ನಮಗೆ ಮಾದರಿಯಾಗಿದೆ’ ಎಂದು ಹೇಳುವುದನ್ನು ಅವರು ಮರೆಯಲಿಲ್ಲ.

‘ಇಲ್ಲಿನ ಅರಣ್ಯ ಪ್ರದೇಶದಲ್ಲಿ ಅಂಟವಾಳ, ನೇರಳೆ ಸೇರಿದಂತೆ ಮಕರಂದ ಹೀರಲು ಪೂರಕವಾಗಿರುವ ಸಸ್ಯ ಸಂಪತ್ತು ಹೆಚ್ಚಿದೆ. ಇವುಗಳಿಂದ ಉತ್ಪಾದನೆಯಾಗುವ ಜೇನುತುಪ್ಪವೂ ಗುಣಮಟ್ಟ ಮತ್ತು ಔಷಧೀಯ ಗುಣಗಳಿಂದ ಕೂಡಿರುತ್ತದೆ. ಕಲಬೆರಕೆ ಇಲ್ಲದ ಈ ರೀತಿಯ ಜೇನುತುಪ್ಪಕ್ಕೆ ಒಳ್ಳೆಯ ದರವೂ ಇದೆ. ಇದು ಸ್ಥಳೀಯ ಜನರಿಗೆ ಉತ್ತಮ ಆದಾಯ ತಂದುಕೊಡಬಲ್ಲದು’ ಎಂದು ರವಿ ಡೇರೆಕರ್ ಹೇಳುತ್ತಾರೆ.

ಕುಂಬಾರವಾಡಾ ಗ್ರಾಮ ಪಂಚಾಯ್ತಿಯಲ್ಲಿ 25ರಷ್ಟು ಮಜಿರೆಗಳಿದ್ದು (ಹಳ್ಳಿಗಳಿಗಿಂತ ಚಿಕ್ಕದಾಗಿರುವ ಮನೆಗಳ ಸಮೂಹಕ್ಕೆ ಕಂದಾಯ ಇಲಾಖೆಯ ಪ್ರಕಾರ ಮಜಿರೆ ಎಂದು ಕರೆಯಲಾಗುತ್ತದೆ) ಅಲ್ಲಿನ ಯುವಕ, ಯುವತಿಯರು ಓದು ಮೊಟಕುಗೊಳಿಸಿ ಕೆಲಸಕ್ಕಾಗಿ ಗೋವಾ ರಾಜ್ಯಕ್ಕೆ ವಲಸೆ ಹೋಗುತ್ತಾರೆ. ಅಲ್ಲಿ ಕಡಿಮೆ ಸಂಬಳಕ್ಕೆ ದುಡಿಯುತ್ತಿದ್ದಾರೆ. ಇಂತಹ ವಲಸೆ ತಡೆದು ಸ್ಥಳೀಯವಾಗಿಯೇ ಉದ್ಯೋಗ ಸೃಷ್ಟಿಸಲು ಅರಣ್ಯ ಇಲಾಖೆ ಬೆಂಗಳೂರಿನ ನಾರು ಅಭಿವೃದ್ಧಿ ಮಂಡಳಿ ಜತೆ ಮಾತುಕತೆ ನಡೆಸಿದೆ. ನಾರಿನ ಕಚ್ಚಾವಸ್ತುಗಳನ್ನು ಪೂರೈಸಿ ಸ್ಥಳೀಯರಿಂದ ಸಿದ್ಧವಸ್ತು ತಯಾರಿಸಿ ಅವುಗಳನ್ನು ಮಾರುಕಟ್ಟೆ ಮಾಡುವ ಪ್ರಕ್ರಿಯೆಗಳು ನಡೆದಿವೆ.

ಇದಕ್ಕೆ ಪೂರಕವಾಗಿ ಕುಂಬಾರವಾಡಾದಲ್ಲಿ ತರಬೇತಿ ನೀಡಲು ಕಟ್ಟಡವೊಂದನ್ನು ನಿರ್ಮಿಸಲಾಗುತ್ತಿದೆ. ಬಳಿಕ ನಾರಿನ ಉತ್ಪನ್ನ ಸಿದ್ಧಪಡಿಸುವ ಘಟಕವನ್ನು ಆರಂಭಿಸುವ ಯೋಜನೆ ಇದಾಗಿದೆ. ಈ ಉತ್ಪನ್ನವನ್ನೂ ಕೆ.ಟಿ.ಆರ್. ಬ್ರ್ಯಾಂಡ್ ಅಡಿ ಮಾರುಕಟ್ಟೆಗೆ ಪರಿಚಯಿಸುತ್ತೇವೆ ಎನ್ನುವುದು ಅರಣ್ಯ ಇಲಾಖೆ ಅಧಿಕಾರಿಗಳ ಭರವಸೆ.

‘ಈ ಭಾಗದ 200ಕ್ಕೂ ಹೆಚ್ಚು ಜನರು ಗೋವಾ ರಾಜ್ಯಕ್ಕೆ ಕೆಲಸಕ್ಕೆ ತೆರಳುತ್ತಿದ್ದಾರೆ. ಅಲ್ಲಿ ಸಿಗುವ ಅಲ್ಪ ವೇತನದಲ್ಲಿ ಜೀವನ ನಿರ್ವಹಿಸುತ್ತಾರೆ. ವಲಸೆ ತಡೆದು ಸ್ಥಳೀಯವಾಗಿಯೇ ಆದಾಯ ಗಳಿಕೆಗೆ ದಾರಿಮಾಡಿಕೊಡಲು ಈ ನಾರಿನ ಉತ್ಪನ್ನ ಸಿದ್ಧಪಡಿಸುವ ಪ್ರಯತ್ನ ನಡೆಯುತ್ತಿದೆ. ಜೇನು, ನಾರಿನ ಉತ್ಪನ್ನಗಳಿಂದ ಇಲ್ಲಿನ ಕುಟುಂಬವೊಂದು ತಿಂಗಳಿಗೆ ಕನಿಷ್ಠ ₹6 ರಿಂದ 10 ಸಾವಿರಕ್ಕಿಂತ ಹೆಚ್ಚು ಆದಾಯ ಗಳಿಸುವಂತೆ ಮಾಡುವುದು ಯೋಜನೆಯ ಉದ್ದೇಶ’ ಎಂದು ಎಸಿಎಫ್ ಅಮರಾಕ್ಷರ ವಿವರಿಸುತ್ತಾರೆ.

‘ಕುಂಬಾರವಾಡಾದಲ್ಲಿ ಪ್ರವಾಸೋದ್ಯಮ ಚಟುವಟಿಕೆ ಅಷ್ಟಾಗಿ ಇಲ್ಲದಿದ್ದರೂ ಪ್ರವಾಸಿಗರ ಓಡಾಟ ಈ ಭಾಗದಲ್ಲಿ ಹೆಚ್ಚಿದೆ. ಸಮೀಪದ ನಾಗೋಡದಲ್ಲಿ ದೋಣಿ ವಿಹಾರ ಚಟುವಟಿಕೆ ಇದೆ. ಸ್ಥಳೀಯವಾಗಿ ತಯಾರಾಗುವ ಜೇನುತುಪ್ಪ, ನಾರಿನ ಉತ್ಪನ್ನ ಸೇರಿದಂತೆ ನೈಸರ್ಗಿಕ ಉತ್ಪನ್ನಗಳ ಮಾರುಕಟ್ಟೆಯ ಮೂಲಕವೇ ಕುಂಬಾರವಾಡಾಕ್ಕೆ ಪ್ರವಾಸಿಗರನ್ನು ಸೆಳೆಯುವುದು ಸಾಧ್ಯವಿದೆ’ ಎನ್ನುತ್ತಾರೆ ಕಾಳಿ ರೈತ ಉತ್ಪಾದಕ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಕಾತೇಲಿ ಗ್ರಾಮ ಪಂಚಾಯ್ತಿ ಸದಸ್ಯ ಸುಭೇಂದ್ರ ಕಾಮತ್.

‘ಮಧ್ಯಪ್ರದೇಶದ ಭೋಪಾಲ್‍ನ ಐಐಎಫ್ಎಂ (ಭಾರತೀಯ ಅರಣ್ಯ ನಿರ್ವಹಣಾ ಸಂಸ್ಥೆ)ನಿಂದ ಇಬ್ಬರು ಸಂಶೋಧನಾರ್ಥಿಗಳು ಕಾತೇಲಿ ಭಾಗದ ಜನರ ಸಾಮಾಜಿಕ, ಆರ್ಥಿಕ ಸ್ಥಿತಿಗತಿ ಅಧ್ಯಯನ ನಡೆಸಿದ್ದರು. ಅವರು ನಡೆಸಿದ ಅಧ್ಯಯನದ ವರದಿಯನ್ನು ಕೆ.ಟಿ.ಆರ್.ಗೆ ಸಲ್ಲಿಸಿದ್ದಾರೆ. ಇದನ್ನು ಆಧರಿಸಿ ಜನರ ಜೀವನ ಮಟ್ಟ ಸುಧಾರಿಸಲು ಕೈಗೊಳ್ಳಬಹುದಾದ ಮತ್ತಷ್ಟು ಸುಧಾರಣೆಗಳನ್ನು ಹಂತ ಹಂತವಾಗಿ ತರುತ್ತೇವೆ’ ಎಂದು ವಾಗ್ದಾನ ನೀಡಿದರು.

‘ಕಾಳಿ ಹುಲಿ ಸಂರಕ್ಷಿತಾರಣ್ಯ ರಚನೆಗೂ ಮುನ್ನ ಅರಣ್ಯ ಇಲಾಖೆ ಸ್ಥಳೀಯರಿಗೆ ಬಿದಿರು ಪೂರೈಸಿ ಅದರಿಂದ ಸಿದ್ಧಪಡಿಸಲಾದ ಉತ್ಪನ್ನ ಖರೀದಿಸಿ ಉಳವಿ ಭಾಗದಲ್ಲಿ ಮಾರಾಟ ನಡೆಸುವ ಚಟುವಟಿಕೆ ನಡೆಸುತ್ತಿತ್ತು. ಇದರಿಂದ ಸ್ಥಳೀಯರಿಗೆ ಸ್ವಲ್ಪಮಟ್ಟಿಗಿನ ಆದಾಯವೂ ಸಿಗುತ್ತಿತ್ತು. ಆದರೆ ಕೆ.ಟಿ.ಆರ್. ರಚನೆ ನಂತರ ಅಂತಹ ಪ್ರಕ್ರಿಯೆ ಸ್ಥಗಿತಗೊಂಡಿದೆ. ಈಗ ಅವರು ರೂಪಿಸುತ್ತಿರುವ ಯೋಜನೆಗಳು ಇದೇ ಸಾಲಿಗೆ ಸೇರಬಾರದು’ ಎಂದು ಕುಂಬಾರವಾಡಾ ಗ್ರಾಮಸ್ಥರು ಹೇಳುತ್ತಾರೆ.

ಕಾಡಿನ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ

ಕುಂಬಾರಾವಾಡದಲ್ಲಿರುವ ಬ್ರಿಟಿಷ್ ಕಾಲದ ಕಟ್ಟಡವನ್ನು ನವೀಕರಣಗೊಳಿಸುತ್ತಿರುವ ಅರಣ್ಯ ಇಲಾಖೆ ಇಲ್ಲಿ ಡಿಜಿಟಲ್ ಗ್ರಂಥಾಲಯ, ಕಂಪ್ಯೂಟರ್ ತರಬೇತಿ ಕೇಂದ್ರ ಆರಂಭಿಸಲು ಮುಂದಾಗಿದೆ. ಪ್ರೌಢಶಿಕ್ಷಣ, ಕಾಲೇಜು ಶಿಕ್ಷಣ ಪೂರೈಸಿದ ಸ್ಥಳೀಯರಿಗೆ ಕಂಪ್ಯೂಟರ್ ಶಿಕ್ಷಣ ಒದಗಿಸಲು ತಯಾರಿ ನಡೆದಿದೆ.

ಅರಣ್ಯದ ಕುರಿತು ಇಲ್ಲಿನ ಮಕ್ಕಳಲ್ಲಿಯೂ ಉತ್ತಮ ಜ್ಞಾನವಿದೆ. ಆದರೆ ಸ್ಪರ್ಧಾತ್ಮಕ ಪರೀಕ್ಷೆಗಳು ಮತ್ತು ಅದಕ್ಕೆ ಸಿದ್ಧತೆ ಮಾಡಿಕೊಳ್ಳುವ ಬಗ್ಗೆ ಅಷ್ಟಾಗಿ ಆಸಕ್ತಿ ತೋರುತ್ತಿಲ್ಲ. ಅರಣ್ಯ ಇಲಾಖೆಯ ಹುದ್ದೆಯೂ ಸೇರಿದಂತೆ ವಿವಿಧ ನೇಮಕಾತಿಗೆ ನಡೆಯುವ ಪರೀಕ್ಷೆಗೆ ಕುಣಬಿ, ಇನ್ನಿತರ ಸಮುದಾಯಗಳ ಮಕ್ಕಳನ್ನು ಅಣಿಗೊಳಿಸಬೇಕು ಎಂಬುದೇ ಈ ಕೇಂದ್ರ ಸ್ಥಾಪನೆಯ ಉದ್ದೇಶ ಎಂಬುದು ಅರಣ್ಯ ಇಲಾಖೆ ಅಧಿಕಾರಿಗಳ ಹೇಳಿಕೆ. ಈ ಕೇಂದ್ರವೂ ದಾಂಡೇಲಿ ಅಣಸಿ ಟೈಗರ್ ಕನ್ಸರ್ವೇಶನ್ ಫೌಂಡೇಶನ್‍ನ ಆರ್ಥಿಕ ನೆರವಿನಿಂದಲೇ ಸ್ಥಾಪನೆಗೊಳ್ಳುತ್ತಿದೆ.

‘ಕೆ.ಟಿ.ಆರ್. ವ್ಯಾಪ್ತಿಯಲ್ಲಿ ಬಿದಿರು, ಬೆತ್ತ ಬೆಳೆಸಲು ಅವಕಾಶ ಇಲ್ಲ. ಹೀಗಾಗಿ ಬಿದಿರಿನ ಉತ್ಪನ್ನಕ್ಕೆ ಪ್ರೋತ್ಸಾಹಿಸುವ ಯೋಜನೆ ಕೈಬಿಡಲಾಗಿತ್ತು. ಈಗ ಕೈಗೊಂಡಿರುವ ಯೋಜನೆಗಳು ಪರಿಸರ ಉಳಿವಿನ ಜತೆಗೆ ಸ್ವಯಂ ಉದ್ಯೋಗ ಸೃಷ್ಟಿಗೆ ಪೂರಕವಾಗಿರುವ ಕಾರಣ ಅವುಗಳನ್ನು ಕೈಬಿಡುವ ಪ್ರಶ್ನೆ ಇಲ್ಲ’ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದರು.

ಒಟ್ಟಾರೆ ಕೆ.ಟಿ.ಆರ್‌ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ ಮೂಲಕ ನಡೆಯುತ್ತಿರುವ ಸ್ಥಳೀಯರ ಆರ್ಥಿಕ ಸ್ಥಿತಿ ಸುಧಾರಿಸುವ ಪ್ರಗತಿಪರ ಪ್ರಯತ್ನ ಗ್ರಾಮಸ್ಥರಲ್ಲಿ ಆಶಾಭಾವನೆ ಮೂಡಿಸಿದ್ದು, ಇಲಾಖೆಯ ಬಗ್ಗೆ ಅರಣ್ಯದಲ್ಲಿರುವ ನಿವಾಸಿಗಳಲ್ಲಿ ನಕಾರಾತ್ಮಕ ಧೋರಣೆ ಕಡಿಮೆ ಮಾಡಲು ಸಹಕಾರಿಯಾಗುತ್ತಿದೆ.

ಜೊಯಿಡಾ ತಾಲ್ಲೂಕಿನ ಕುಂಬಾರವಾಡಾ ವ್ಯಾಪ್ತಿಯ ಗ್ರಾಮಸ್ಥರಿಗೆ ತಜ್ಞರು ಜೇನು ಕೃಷಿ ತರಬೇತಿ ನೀಡುತ್ತಿರುವುದು.
ಜೊಯಿಡಾ ತಾಲ್ಲೂಕಿನ ಕುಂಬಾರವಾಡಾ ವ್ಯಾಪ್ತಿಯ ಗ್ರಾಮಸ್ಥರಿಗೆ ತಜ್ಞರು ಜೇನು ಕೃಷಿ ತರಬೇತಿ ನೀಡುತ್ತಿರುವುದು.
ಕುಂಬಾರವಾಡಾ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರ ಜತೆಗೆ ಅರಣ್ಯ ಇಲಾಖೆ ರೂಪಿಸಿರುವ ಯೋಜನೆಗಳ ಬಗ್ಗೆ ಎ.ಸಿ.ಎಫ್. ಅಮರಾಕ್ಷರ ವಿ.ಎಂ. ವಿವರಿಸಿದರು.
ಕುಂಬಾರವಾಡಾ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರ ಜತೆಗೆ ಅರಣ್ಯ ಇಲಾಖೆ ರೂಪಿಸಿರುವ ಯೋಜನೆಗಳ ಬಗ್ಗೆ ಎ.ಸಿ.ಎಫ್. ಅಮರಾಕ್ಷರ ವಿ.ಎಂ. ವಿವರಿಸಿದರು.
ಸುಭೇಂದ್ರ ಕಾಮತ್
ಸುಭೇಂದ್ರ ಕಾಮತ್
ಜಯಾನಂದ ಡೇರೆಕರ
ಜಯಾನಂದ ಡೇರೆಕರ
ಶಾಂತಾ ಮಿರಾಶಿ
ಶಾಂತಾ ಮಿರಾಶಿ
ಅರಣ್ಯ ಸಂರಕ್ಷಣೆಯಲ್ಲಿ ಸ್ಥಳೀಯರ ಸಹಭಾಗಿತ್ವವೂ ಮುಖ್ಯ. ಜನರ ವಿಶ್ವಾಸ ಗಳಿಸುವ ಜತೆಗೆ ಜೀವನಮಟ್ಟ ಸುಧಾರಿಸುವ ಅಲುವಾಗಿ ‘ಸ್ವಯಂ’ ಎಂಬ ಕಾರ್ಯಕ್ರಮ ರೂಪಿಸಲಾಗಿದೆ.
ಅಮರಾಕ್ಷರ ವಿ.ಎಂ. ಎ.ಸಿ.ಎಫ್. ಕುಂಬಾರವಾಡಾ
ಕೆ.ಟಿ.ಆರ್. ವ್ಯಾಪ್ತಿಯಲ್ಲಿ ತೀರಾ ಹಿಂದುಳಿದ ಗ್ರಾಮಗಳನ್ನು ಒಳಗೊಂಡಿರುವ ಕಾತೇಲಿ ಭಾಗದಲ್ಲಿ ಅರಣ್ಯ ಇಲಾಖೆಯ ಸುಧಾರಿತ ಯೋಜನೆಗಳು ಜನರ ಜೀವನಮಟ್ಟ ಸುಧಾರಿಸುವ ವಿಶ್ವಾಸ ಮೂಡಿದೆ. ಜನರಿಗೆ ಯೋಜನೆ ವಿವರಿಸಿ ವಿಶ್ವಾಸಕ್ಕೆ ಪಡೆಯುತ್ತಿದ್ದೇವೆ.
ಸುಭೇಂದ್ರ ಕಾಮತ್ ಕಾತೇಲಿ ಗ್ರಾಮ ಪಂಚಾಯ್ತಿ ಸದಸ್ಯ
ಕಾಳಿ ಹುಲಿ ಸಂರಕ್ಷಿತಾರಣ್ಯದಲ್ಲಿ ಗುಣಮಟ್ಟದ ಜೇನುತುಪ್ಪ ನೈಸರ್ಗಿಕವಾಗಿ ದೊರೆಯುತ್ತಿದೆ. ವೃತ್ತಿಪರವಾಗಿ ಜೇನು ಸಾಕಾಣಿಕೆ ಆರಂಭಿಸುವುದು ಸ್ಥಳೀಯರಿಗೆ ಅನುಕೂಲವಾಲಿದೆ.
ಜಯಾನಂದ ಡೇರೆಕರ ಕುಂಬಾರವಾಡಾ ಗ್ರಾಮಸ್ಥ
ಅರಣ್ಯ ಇಲಾಖೆಯಿಂದ ಜೇನು ಕೃಷಿ ತರಬೇತಿ ನೀಡಲಾಗಿದೆ. ನಾರಿನ ಉತ್ಪನ್ನದ ತರಬೇತಿಯನ್ನೂ ಶೀಘ್ರ ನೀಡುವುದಾಗಿ ತಿಳಿಸಿದ್ದಾರೆ. ಜೀವನೋಪಾಯಕ್ಕೆ ಒಂದಷ್ಟು ಆದಾಯ ದೊರೆಯುವ ನಂಬಿಕೆ ಇದೆ.
ಶಾಂತಾ ಮಿರಾಶಿ ಮೈನೋಳ ಗ್ರಾಮಸ್ಥ
ಮಣ್ಣಿನ ಕಲಾಕೃತಿಗೂ ಬ್ರ್ಯಾಂಡ್
ಕುಂಬಾರವಾಡಾದಲ್ಲಿ ಪಾರಂಪರಿಕ ಕುಂಬಾರಿಕೆ ವೃತ್ತಿ ನಡೆಸಿಕೊಂಡು ಬಂದಿದ್ದ ಕೆಲವು ಕುಂಬಾರರ ಕುಟುಂಬಗಳಿವೆ. ಒಂದು ಕಾಲದಲ್ಲಿ ಕುಂಬಾರವಾಡಾದಲ್ಲಿ ಮಣ್ಣಿನ ಕಲಾಕೃತಿ ಪಾತ್ರೆಗಳ ತಯಾರಿಕೆ ಉತ್ತುಂಗದಲ್ಲಿತ್ತು. ಕುಂಬಾರಿಕೆ ವೃತ್ತಿ ಅವಲಂಭಿಸಿದ್ದ ಹಲವು ಕುಟುಂಬಗಳಿದ್ದವು. ಹೀಗಾಗಿಯೆ ‘ಕುಂಬಾರವಾಡಾ’ ಎಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ. ಈಗಲೂ ಗ್ರಾಮಕ್ಕೆ ಹಳೆಯ ಮೆರಗು ತಂದುಕೊಡಬೇಕು ಎಂಬುದು ಅರಣ್ಯ ಇಲಾಖೆಯ ಯೋಜನೆ. ‘ಕುಂಬಾರಿಕೆ ವೃತ್ತಿ ಅವಲಂಭಿಸಿರುವ ಕುಟುಂಬಗಳಿಗೆ ಮಣ್ಣಿನ ಪಾತ್ರೆ ಕರಕುಶಲ ಸಾಮಗ್ರಿ ತಯಾರಿಸಲು ವೇದಿಕೆ ಸೃಷ್ಟಿಸಿಕೊಡಲಾಗುತ್ತದೆ. ಪಾರಂಪರಿಕ ಕಲಾಕಾರರಿಂದ ಉಳಿದ ಸಮುದಾಯಗಳ ಆಸಕ್ತರಿಗೂ ಮಣ್ಣಿನ ಕಲಾಕೃತಿ ಪಾತ್ರೆ ತಯಾರಿಕೆ ತರಬೇತಿ ಒದಗಿಸುತ್ತೇವೆ. ಈಗಾಗಲೇ ಸಮುದಾಯದ ಪ್ರಮುಖರನ್ನು ಕರೆದು ಸಭೆಯನ್ನೂ ನಡೆಸಿದ್ದೇವೆ. ಮಣ್ಣಿನಿಂದ ತಯಾರಾಗುವ ಪರಿಸರ ಪೂರಕ ಸಾಮಗ್ರಿಗಳನ್ನು ಮಾರುಕಟ್ಟೆ ತಂದು ಪ್ರವಾಸಿಗರನ್ನು ಸೆಳೆಯುವದು ಭವಿಷ್ಯದ ಯೋಜನೆಯ ಸ್ವರೂಪ’ ಎನ್ನುತ್ತಾರೆ ಎಸಿಎಫ್ ಅಮರಾಕ್ಷರ ವಿ.ಎಂ.
ಪ್ಲಾಸ್ಟಿಕ್ ಕಸ ನಿಯಂತ್ರಣಕ್ಕೆ ವಿಲೇವಾರಿ ಘಟಕ
ಸದಾಶಿವಗಡ–ಔರಾದ್ ರಾಜ್ಯ ಹೆದ್ದಾರಿ ಕಾತೇಲಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಹಾದುಹೋಗುತ್ತದೆ. ಇದೇ ಮಾರ್ಗದಲ್ಲಿ ದಾಂಡೇಲಿ ಉಳವಿ ಜೊಯಿಡಾಕ್ಕೆ ತೆರಳುವ ಪ್ರವಾಸಿಗರ ಓಡಾಟ ಹೆಚ್ಚಿದೆ. ಪ್ರವಾಸಿಗರು ಸ್ಥಳೀಯರು ಎಸೆಯುವ ಕಸಗಳು ಅದರಲ್ಲೂ ಚಿಪ್ಸ್ ಇನ್ನಿತರ ತಿನಿಸುಗಳ ಪೊಟ್ಟಣಗಳು ರಸ್ತೆಯ ಬದಿಗಳಲ್ಲಿ ರಾಶಿ ರಾಶಿ ಬೀಳುತ್ತಿವೆ. ಒಂದು ಅಂದಾಜಿನ ಪ್ರಕಾರ ಇಲ್ಲಿನ ಪ್ರತಿ ಒಂದು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಸರಾಸರಿ 2 ಕೆ.ಜಿ.ಯಷ್ಟು ಪ್ಲಾಸ್ಟಿಕ್ ಕಸ ಸಿಗುತ್ತಿವೆ. ‘ಮಸಾಲೆ ಉಪ್ಪಿನ ಅಂಶಯುಕ್ತ ತಿನಿಸುಗಳನ್ನು ತಿಂದು ಜನರು ಬಿಸಾಡುವ ಪ್ಲಾಸ್ಟಿಕ್ ಪೊಟ್ಟಣಗಳ ವಾಸನೆಗೆ ಇಲ್ಲಿನ ಸಾಂಬಾರ ಕಡವೆ ಜಿಂಕೆಗಳು ಆಕರ್ಷಣೆಗೊಳಗಾಗುತ್ತವೆ. ಅವುಗಳನ್ನು ತಿನ್ನುತ್ತವೆ. ಇದರಿಂದ ಅವುಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಹೆಚ್ಚುತ್ತಿದೆ. ಹುಲಿಗಳಿಗೆ ಮುಖ್ಯ ಆಹಾರವಾಗಿರುವ ಕಡವೆ ಜಿಂಕೆಗಳ ಪ್ರಮಾಣ ಕುಸಿತಗೊಳ್ಳುತ್ತಿವೆ. ಹೀಗಾಗಿ ಪ್ಲಾಸ್ಟಿಕ್ ಕಸ ಸಂಗ್ರಹಣೆ ಮತ್ತು ವಿಲೇವಾರಿಗೆ ಆದ್ಯತೆ ನೀಡಲಾಗುತ್ತಿದೆ’ ಎಂಬುದು ಅಮರಾಕ್ಷರ ಹೇಳುವ ಮಾತು. ‘ಗ್ರಾಮ ಪಂಚಾಯ್ತಿಗೆ ಘನ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಿಕೊಳ್ಳಲು ಜಾಗದ ಕೊರತೆ ಇತ್ತು. ಅರಣ್ಯ ಇಲಾಖೆಗೆ ಸೇರಿದ ಜಾಗವನ್ನು ಘಟಕ ನಿರ್ಮಾಣಕ್ಕೆ ನೀಡಲಾಗಿದೆ. ಅರಣ್ಯದಲ್ಲಿ ಬಿದ್ದ ಕಸಗಳನ್ನು ಸಂಗ್ರಹಿಸಲು ಇಲಾಖೆಯ ಸಿಬ್ಬಂದಿಯೂ ನೆರವಾಗಲಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT