ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಒಳನೋಟ: ‘ಜನ್‌ಮನ್‌’ ಜಾರಿಗೆ ಅಸಡ್ಡೆ

ಹಸನಾಗದ ಆದಿವಾಸಿಗಳ ಬದುಕು: ಕಾರ್ಯಕ್ರಮ ಅನುಷ್ಠಾನಕ್ಕೆ ನಿರ್ಲಕ್ಷ್ಯ
Published 17 ಆಗಸ್ಟ್ 2024, 23:40 IST
Last Updated 17 ಆಗಸ್ಟ್ 2024, 23:40 IST
ಅಕ್ಷರ ಗಾತ್ರ

ಮೈಸೂರು: ‘ನಮ್ಮ ಕಾಲವಂತೂ ಮುಗಿಯುತ್ತಾ ಬಂತು. ನಮ್ಮ ಮಕ್ಕಳಾದರೂ ಅಕ್ಷರ ಕಲಿಯಬೇಕೆಂಬ ಆಸೆ ಇತ್ತು. ಆದರೆ ಅವರು ಮನಸ್ಸು ಮಾಡ್ತಿಲ್ಲ. ಶಾಲೆಗೆ ಕಳಿಸಿದರೂ ಅರ್ಧಕ್ಕೆ ನಿಲ್ಲಿಸಿ ಕೂಲಿಗೆ ಹೋಗ್ತಾರೆ. ಸರ್ಕಾರವೂ ನಮ್ಮ ಕೈ ಹಿಡೀತಿಲ್ಲ..’

– ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ಮಂಚಿಕೇರಿಯ ಮಂಜು ಸಿದ್ದಿ ತೋಡಿಕೊಂಡ ನೋವಿದು.

ಅಪ್ಪಟ ಬುಡಕಟ್ಟು ಸಮುದಾಯವಾಗಿರುವ ಸಿದ್ದಿಗಳು ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಚ್ಚಿದ್ದು, 18 ಸಾವಿರ ಜನಸಂಖ್ಯೆ ಇರಬಹುದೆಂದು ಅಂದಾಜಿಸಲಾಗಿದೆ. ಆ ಪೈಕಿ ಶೇ 90ರಷ್ಟು ಮಂದಿ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಸ್ವಂತ ಭೂಮಿ ಇಲ್ಲದೆ ಕೂಲಿಯನ್ನೇ ನೆಚ್ಚಿಕೊಂಡಿದ್ದಾರೆ. ಯಲ್ಲಾಪುರ, ಹಳಿಯಾಳ, ಅಂಕೋಲಾ ಮತ್ತು ಶಿರಸಿ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ನೆಲೆನಿಂತ ಸಮುದಾಯದ ನೂರಾರು ಕುಟುಂಬಗಳಿಗೆ ಅರಣ್ಯ ಭೂಮಿಯಲ್ಲಿ ಸಾಗುವಳಿಯೇ ಆಧಾರ. ಆದರೆ, ಹಕ್ಕುಪತ್ರಗಳೇ ದೊರೆತಿಲ್ಲ. ‘ಸಾಗುವಳಿ ಜಮೀನಿಗೆ ಹಕ್ಕುಪತ್ರ ಕೊಡಬೇಕೆಂಬುದು ಅವರ ಪ್ರಮುಖ ಬೇಡಿಕೆ. ಆದರೆ, ಇದನ್ನು ಈಡೇರಿಸುವ ಕೆಲಸವನ್ನು ಸರ್ಕಾರಗಳು ಇಂದಿಗೂ ಮಾಡಿಲ್ಲ.

ಇದು ರಾಜ್ಯದಲ್ಲಿರುವ ಸಿದ್ದಿ ಸಮುದಾಯದವರ ಸಮಸ್ಯೆಯಷ್ಟೇ ಅಲ್ಲ. ಇಂತಹ ಹಲವು ಬುಡಕಟ್ಟು ಜನರನ್ನು ಮುಖ್ಯವಾಹಿನಿಗೆ ತರಲು ಜಾರಿಗೊಳಿಸಿರುವ ಯೋಜನೆಗಳು ಸಮರ್ಪಕ ಅನುಷ್ಠಾನ ಕಂಡಿಲ್ಲ. ಅದಕ್ಕೀಗ ಮತ್ತೊಂದು ಸೇರ್ಪಡೆಯಾಗಿರುವುದು ಕೇಂದ್ರ ಸರ್ಕಾರದ ಪಿಎಂ–ಜನ್‌ಮನ್‌ ಯೋಜನೆ. ಬುಡಕಟ್ಟು ಜನರಿಗೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸಲೆಂದೇ ಹೋದ ವರ್ಷ ಕೇಂದ್ರ ಸರ್ಕಾರದಿಂದ ಜಾರಿಗೊಳಿಸಿದ ‘ಪ್ರಧಾನ ಮಂತ್ರಿ ಜನಜಾತಿ ಆದಿವಾಸಿ ನ್ಯಾಯ ಮಹಾಅಭಿಯಾನ’ (ಪಿಎಂ–ಜನ್‌ಮನ್‌) ಅನುಷ್ಠಾನ ಕಾರ್ಯ ರಾಜ್ಯದಲ್ಲಿ ಕುಂಟುತ್ತಾ ಸಾಗಿದೆ. ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯದಿಂದ ಯೋಜನೆಗೆ 2023 ನ.15ರಂದು ಚಾಲನೆ ನೀಡಿತ್ತು. ಯೋಜನೆ ಜಾರಿಗೆ ಚುರುಕು ನೀಡಿದ್ದರೆ ಆದಿವಾಸಿಗಳ ಬದುಕು ಹಸನಾಗುವತ್ತ ಸಾಗುವುದಕ್ಕೆ ಅವಕಾಶವಿತ್ತು.

ಮೈಸೂರು, ಕೊಡಗು, ಚಾಮರಾಜನಗರ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಜೇನುಕುರುಬ ಮತ್ತು ಕೊರಗ ಜನಾಂಗದವರಿಗೆ 57,047 (ಜೇನುಕುರುಬ 44,040 ಮತ್ತು ಕೊರಗ 13,007) ಸೌಲಭ್ಯ ಕಲ್ಪಿಸುವ ಉದ್ದೇಶವನ್ನು ಪಿಎಂ–ಜನ್‌ಮನ್‌ ಯೋಜನೆಯಲ್ಲಿ ಹೊಂದಲಾಗಿದೆ. ಈ ಜಿಲ್ಲೆಗಳಲ್ಲಿ ಬಹು ಉದ್ದೇಶದ ಕೇಂದ್ರಗಳು (ಎಂಪಿಸಿ) ಮತ್ತು ವನ–ಧನ ವಿಕಾಸ ಕೇಂದ್ರ (ವಿಡಿವಿಕೆ) ಆರಂಭಿಸಲು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಯೋಜನೆ ರೂಪಿಸಿದೆ. 

ಈ ಸಮುದಾಯಗಳ ಕಾಲೊನಿಗಳಲ್ಲಿ ಬಹು ಉದ್ದೇಶದ ಕೇಂದ್ರಗಳನ್ನು (ಮಲ್ಟಿ ಪರ್ಪಸ್‌ ಸೆಂಟರ್‌–ಎಂಪಿಸಿ) ತಲಾ ₹ 60 ಲಕ್ಷದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ. ಮೊದಲ ಹಂತದಲ್ಲಿ 16 ಕೇಂದ್ರಗಳ ಸ್ಥಾಪನೆಗೆ ₹ 9.60 ಕೋಟಿ ಮಂಜೂರಾಗಿದ್ದು, ಮೊದಲ ಕಂತಿನಲ್ಲಿ ₹ 3.32 ಕೋಟಿಯಷ್ಟೆ ಬಿಡುಗಡೆಯಾಗಿದೆ. 2ನೇ ಹಂತದಲ್ಲಿ 58 ಕೇಂದ್ರ ಮಂಜೂರಾಗಿದೆ.

‘ಆರ್ಥಿಕ ಏಳಿಗೆಗಾಗಿ ಸಮುದಾಯದವರು ಸಿದ್ಧಪಡಿಸುವ ಉತ್ಪನ್ನಗಳ ಮೌಲ್ಯವರ್ಧನೆಗೆ ಮೈಸೂರು ಜಿಲ್ಲೆಯಲ್ಲಿ 21 ಮತ್ತು ಕೊಡಗಿನಲ್ಲಿ 12 ವಿಡಿವಿಕೆ ಸ್ಥಾಪಿಸಲು ಅನುಮೋದನೆ ನೀಡಲಾಗಿದೆ. ಮೈಸೂರು ಜಿಲ್ಲಾಧಿಕಾರಿ ಮತ್ತು ಯೋಜನಾ ಸಮನ್ವಯ ಅಧಿಕಾರಿಗಳ ಜಂಟಿ ಖಾತೆಗೆ ₹ 29.20 ಲಕ್ಷ ಅನುದಾನ ಬಿಡುಗಡೆಯಾಗಿದೆ. ತರಬೇತಿ ಪೂರ್ಣಗೊಂಡಿದ್ದು ಸರ್ವೇ ಆರಂಭವಾಗಿದೆ. ಈ ಎರಡೂ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ 2024ರ ಜ.2ರಂದು ರಾಜ್ಯ ಸರ್ಕಾರವು ಆದೇಶ ಹೊರಡಿಸಿದೆ.‌ ಮೈಸೂರು, ಕೊಡಗು, ಚಾಮರಾಜನಗರ, ಉಡುಪಿ ಮತ್ತು ದಕ್ಷಿಣ ಕನ್ನಡಕ್ಕೆ ಸಂಬಂಧಿಸಿ ರಾಜ್ಯ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಸಮಿತಿಗಳನ್ನು ರಚಿಸಲಾಗಿದೆ’ ಎನ್ನುತ್ತವೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಮೂಲಗಳು. ಬಹು ಉದ್ದೇಶದ ಕೇಂದ್ರಗಳು (ಎಂಪಿಸಿ) ಇನ್ನೂ ಡಿಪಿಆರ್‌ ಹಂತದಲ್ಲೇ ಇವೆ.

11 ನಿರ್ಣಾಯಕ ಮೂಲ  ಸೌಲಭ್ಯಗಳಿಗೆ:

ಮುಂದಿನ ಮೂರು ವರ್ಷಗಳಲ್ಲಿ ದೇಶದ 18 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿರುವ ಪಿವಿಟಿಜಿ (ನೈಜ ದುರ್ಬಲ ಬುಡಕಟ್ಟು ಸಮುದಾಯಗಳು) ಸಮುದಾಯಗಳ ಜೀವನ ಸುಧಾರಣೆಗಾಗಿ ಹನ್ನೊಂದು ಮೂಲ ಸೌಕರ್ಯಗಳನ್ನು ಒದಗಿಸುವ ಉದ್ದೇಶದಿಂದ, ಯೋಜನೆಯಲ್ಲಿ ₹ 24 ಸಾವಿರ ಕೋಟಿ ಅನುದಾನ ಮೀಸಲಿಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆಯ ವೇಳೆ ಘೋಷಿಸಿದ್ದರು. ಯೋಜನೆಯು ಈಗಲೂ ಪ್ರಾಥಮಿಕ ಸಮೀಕ್ಷೆಯ ಹಂತದಲ್ಲೇ ಇದೆ. ಮೈಸೂರಿನ ಮೂಲ ಆದಿವಾಸಿಗಳ ಅಧ್ಯಯನ ಕೇಂದ್ರದ ಸಂಶೋಧನಾಧಿಕಾರಿ ಕೃಷ್ಣಮೂರ್ತಿ ಕೆ.ವಿ. ನೇತೃತ್ವದಲ್ಲಿ ಪ್ರಕ್ರಿಯೆ ನಡೆಯುತ್ತಿದೆ. ಲೋಕಸಭಾ ಚುನಾವಣೆಯ ವೇಳೆ ಸಮೀಕ್ಷೆ ಸ್ಥಗಿತಗೊಳಿಸಲಾಗಿತ್ತು. ಇದೀಗ, ಪುನರಾರಂಭಿಸಲು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ.

ಬುಡಕಟ್ಟು ಸಮುದಾಯಗಳಲ್ಲಿ ಅತಿ ಕಡಿಮೆ ಅಭಿವೃದ್ಧಿಯಾಗಿರುವವರನ್ನು ಮುಖ್ಯವಾಹಿನಿಗೆ ತರುವುದು. ಸುರಕ್ಷಿತ ವಸತಿ, ಶುದ್ಧ ಕುಡಿಯುವ ನೀರು ಮತ್ತು ಮೂಲ ಸೌಕರ್ಯಗಳ ಜತೆಗೆ ನೈರ್ಮಲ್ಯ, ಶಿಕ್ಷಣ, ಆರೋಗ್ಯ ಮತ್ತು ಪೌಷ್ಟಿಕ ಆಹಾರ ಪೂರೈಕೆ ಮಾಡುವುದು. ವಿದ್ಯುತ್, ರಸ್ತೆ ಮತ್ತು ದೂರಸಂಪರ್ಕ ಸಂಪರ್ಕದ ಮೂಲಕ ಸುಸ್ಥಿರ ಜೀವನೋಪಾಯದ ಅವಕಾಶ ಸೃಷ್ಟಿ. ಅರಣ್ಯ ಉತ್ಪನ್ನಗಳ ಮಾರಾಟಕ್ಕಾಗಿ ‘ವನ್ ಧನ್ ವಿಕಾಸ ಕೇಂದ್ರ’ಗಳ ಸ್ಥಾಪನೆ. ಒಂದು ಲಕ್ಷ  ಮನೆಗಳಿಗೆ ಆಫ್-ಗ್ರಿಡ್ ಸೌರ ವಿದ್ಯುತ್ ವ್ಯವಸ್ಥೆ, ಸೌರ ವಿದ್ಯುತ್‌ ಬೀದಿದೀಪಗಳ ಅಳವಡಿಕೆ. ಆಧಾರ್, ಬಿಪಿಎಲ್‌ ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, ಕಿಸಾನ್‌ ಸಮ್ಮಾನ್‌ ಕಾರ್ಡ್‌ ಮೊದಲಾದ ದಾಖಲೆಗಳನ್ನು ಒದಗಿಸುವುದು. ಅದಕ್ಕಾಗಿ ಹಾಡಿಗಳಲ್ಲೇ ಇಲಾಖೆಗಳಿಂದ ಅಭಿಯಾನ ನಡೆಸುವುದು. ಮನೆ ಇಲ್ಲದವರಿಗೆ ಮನೆಗಳ ನಿರ್ಮಾಣ. ಅಂಗನವಾಡಿ ಕೇಂದ್ರ, ಆಸ್ಪತ್ರೆ ನಿರ್ಮಾಣ, ಶಿಕ್ಷಣ ಮತ್ತು ಆರೋಗ್ಯ ಸೇವೆ ಕಲ್ಪಿಸುವ ಉದ್ದೇಶವನ್ನು ‘ಜನ್‌ಮನ್‌’ ಹೊಂದಿದೆ. ಇದನ್ನು ಅನುಷ್ಠಾನ ಮಾಡಲು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ ಎಂಬ ಆರೋಪ ಆದಿವಾಸಿ ಮುಖಂಡರದ್ದಾಗಿದೆ.

ಕೊರಗ, ಜೇನುಕುರುಬ, ಇರುಳಿಗ, ಸೋಲಿಗ, ಬೆಟ್ಟಕುರುಬ, ಯರವ, ಪಣಿಯ, ಕುಡಿಯ, ಮಲೆಕುಡಿಯ, ಹಸಲರು, ಸಿದ್ದಿ ಹಾಗೂ ಗೌಡಲು ಹೀಗೆ... ರಾಜ್ಯದಲ್ಲಿ 12 ಬಗೆಯ ಆದಿವಾಸಿ ಸಮುದಾಯದವರಿದ್ದಾರೆ. ಮೈಸೂರು, ಚಾಮರಾಜನಗರ, ಕೊಡಗು, ದಕ್ಷಿಣ ಕನ್ನಡ, ಉಡುಪಿ, ರಾಮನಗರ, ಶಿವಮೊಗ್ಗ, ಚಿಕ್ಕಮಗಳೂರು ಸೇರಿ ರಾಜ್ಯದಲ್ಲಿ 6 ಲಕ್ಷಕ್ಕೂ ಹೆಚ್ಚು ಆದಿವಾಸಿಗಳಿದ್ದಾರೆ. ಬಹುತೇಕರಿಗೆ ಆಧಾರ್‌ ಚೀಟಿ, ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ ಮೊದಲಾದ ದಾಖಲೆಗಳು ಸಿಕ್ಕಿಲ್ಲ; ಕೃಷಿ ಮಾಡುತ್ತಿದ್ದರೂ, ಭೂಮಿಯ ಹಕ್ಕುಪತ್ರ ದೊರೆತಿಲ್ಲ.

ಕಾನೂನು ಪಾಲನೆ ನೆಪದಲ್ಲಿ ಅಧಿಕಾರಿಗಳು ಕೊಡುವ ತೊಂದರೆಯ ಜೊತೆಗೆ ಕಾಡು ಪ್ರಾಣಿಗಳೊಂದಿಗೂ ನಿರಂತರ ‘ಸಂಘರ್ಷ’. ಸೊಪ್ಪು, ಗೆಣಸು ತರಲು ಕಾಡಿಗೆ ಹೋದರೆ ‘ಕಳ್ಳ’ನೆಂಬ ಪಟ್ಟ. ಸುಳ್ಳು ಕೇಸುಗಳಲ್ಲಿ ಸಿಲುಕುವ ಆತಂಕ ಸರ್ವೇಸಾಮಾನ್ಯವಾಗಿ ಕಾಡುತ್ತಿದೆ. ಅಪೌಷ್ಟಿಕತೆ, ಗಂಭೀರ ಕಾಯಿಲೆಗಳು, ರಕ್ತಹೀನತೆ, ಕಾಡುಪ್ರಾಣಿಗಳ ದಾಳಿಗೆ ಸಿಲುಕಿ ಅಂಗವೈಕಲ್ಯ ಸಾಮಾನ್ಯವಾಗಿದೆ. ಹೀಗೆ... ರಾಜ್ಯದ ಹಲವೆಡೆ ಕಾಡು ಮತ್ತು ಕಾಡಿನಂಚಿನಲ್ಲಿ ವಾಸಿಸುತ್ತಿರುವ ಆದಿವಾಸಿಗಳ ಕಣ್ಣೀರ ಕಥೆಗಳು ಜಿಲ್ಲೆಯಿಂದ ಜಿಲ್ಲೆಗೆ ವಿಭಿನ್ನವಾಗಿವೆ. ಅವರ ಕಣ್ಣೀರು ಒರೆಸಿ ಮುಖ್ಯವಾಹಿನಿಗೆ ತರುವ ಪ್ರಯತ್ನಗಳು ಹಾಗೂ ಯೋಜನೆಗಳಿಂದ ‌ನಿರೀಕ್ಷಿಸಿದಷ್ಟು ಪ್ರಯೋಜನವಾಗುತ್ತಿಲ್ಲ ಎನ್ನುವ ಆರೋಪ ಸರ್ವೇಸಾಮಾನ್ಯವಾಗಿದೆ.

ಶುದ್ಧ ನೀರು, ವಾಸಕ್ಕೆ ಮನೆ, ದುಡಿಯುವ ಕೈಗಳಿಗೆ ಕೆಲಸ, ರಸ್ತೆ, ಆರೋಗ್ಯ ಸೇವೆ, ವಿದ್ಯುತ್‌ ಸಂಪರ್ಕ, ಶಿಕ್ಷಣ, ಸಾಮಾಜಿಕ  ಭದ್ರತೆ... ಇಂತಹ ಕನಿಷ್ಠ ಮೂಲಸೌಕರ್ಯಗಳಿಲ್ಲದೆ ಯಾರಾದರೂ ಇದ್ದರೆ, ‌ಅವರು ಈ ನೆಲದ ಆದಿವಾಸಿಗಳು ಹಾಗೂ ಅರಣ್ಯಾಧಾರಿತ ಬುಡಕಟ್ಟು ಜನ ಮಾತ್ರ. ಕೇಂದ್ರ- ರಾಜ್ಯ ಸರ್ಕಾರದ ಅನೇಕ ಯೋಜನೆಗಳಿದ್ದರೂ ಅವರ ಬದುಕು ಹಸನಾಗಿಲ್ಲ. ‘ದೊಡ್ಡ ಕೊಡುಗೆ’ಗಳನ್ನೇನೂ ಯೋಜನೆಗಳು ಕೊಟ್ಟಿಲ್ಲ. ಸ್ವಾತಂತ್ರ್ಯ ಬಂದು ಏಳೂವರೆ  ದಶಕಗಳಾದರೂ ಬವಣೆ ತಪ್ಪಿಲ್ಲ. ಯೋಜನೆಯಲ್ಲಿ ಹೇಳಿರುವ ಸೌಲಭ್ಯಗಳೆಲ್ಲಾ ದೊರೆತರೆ ಆದಿವಾಸಿಗಳ ಜೀವನಶೈಲಿಯಲ್ಲಿ ಸಕಾರಾತ್ಮಕ ಬದಲಾವಣೆಯನ್ನು ನಿರೀಕ್ಷಿಸಬಹುದಾಗಿದೆ ಎನ್ನುವುದು ಕೇಂದ್ರ ಸರ್ಕಾರದ ಆಶಯವಾಗಿದೆ.

‘ಆದರೆ, ಆರ್ಥಿಕ ನೆರವನ್ನೂ ಹೊಂದಿರುವ ಸಾಮಾಜಿಕ ಭದ್ರತಾ ಯೋಜನೆಗಳ ಪ್ರಯೋಜನ ಪಡೆಯಲು ಅಗತ್ಯವಾದ ದಾಖಲೆಗಳನ್ನು ಒದಗಿಸುವ ಕೆಲಸವೂ ಈವರೆಗೆ ನಡೆದಿಲ್ಲ. ಪೌಷ್ಟಿಕ ಆಹಾರವನ್ನೂ ನಿಯಮಿತವಾಗಿ ಒದಗಿಸುತ್ತಿಲ್ಲ. ಆಗಾಗ ಕೊಟ್ಟರೂ ಕಳಪೆಯಾಗಿರುತ್ತದೆ’ ಎಂದು ಆರೋಪಿಸುತ್ತಾರೆ ಮಾನವ ಹಕ್ಕುಗಳ ಹೋರಾಟಗಾರ ಮೈಸೂರಿನ ಪ್ರಸನ್ನ.

‘ಕರ್ನಾಟಕದಲ್ಲಿ ಅಳಿವಿನಂಚಿನಲ್ಲಿರುವ ಇರುಳಿಗ ಸಮುದಾಯಕ್ಕೂ ಮೂಲಸೌಕರ್ಯಗಳಿಲ್ಲ. ಪಾರಂಪರಿಕವಾಗಿ ಅಲ್ಪಸ್ವಲ್ಪ ಭೂಮಿ ಹೊಂದಿರುವವರು, ಅದನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. 1964ರವರೆಗೂ ನೈಜ ದುರ್ಬಲ ಬುಡಕಟ್ಟು ಸಮುದಾಯಗಳ (ಪಿವಿಟಿಜಿ) ಪಟ್ಟಿಯಲ್ಲಿದ್ದ ಅವರನ್ನು ಅಲ್ಲಿಂದ ಕೈ ಬಿಡಲಾಗಿದೆ. ರಾಜಧಾನಿ ಬೆಂಗಳೂರಿಗೆ ಹತ್ತಿರದ ರಾಮನಗರ ಜಿಲ್ಲೆಯಲ್ಲಿದ್ದರೂ ನಮಗೆ ಸಿಗಬೇಕಾದ ಸೌಲಭ್ಯಗಳು ದೊರೆತಿಲ್ಲ’ ಎನ್ನುತ್ತಾರೆ ಸಂಶೋಧಕ ಕೃಷ್ಣಮೂರ್ತಿ ಇರುಳಿಗ.

ಆದಿವಾಸಿ ಮಕ್ಕಳಿಗೆಂದೇ ಆಶ್ರಮ ಶಾಲೆಗಳಿದ್ದರೂ ಶೈಕ್ಷಣಿಕ ಸ್ಥಿತಿಗತಿ ಸುಧಾರಣೆಯಾಗಿಲ್ಲ. ಕೃಷಿ ಜಮೀನುಗಳಲ್ಲಿ, ಕಾಫಿ ತೋಟಗಳಲ್ಲಿ ಕೂಲಿ ಕಡಿಮೆಯಿದೆ. ಉಳಿತಾಯ ಮರೀಚಿಕೆ. ಮದುವೆ, ನಾಮಕರಣ, ಅನಾರೋಗ್ಯ ಕಾರಣಗಳಿಗಾಗಿ ತೋಟದ ಮಾಲೀಕರ ಬಳಿ ಸಾಲ ಮಾಡಿ, ತೀರಿಸಲು ದುಡಿಮೆಯಲ್ಲೇ ಜೀವನ ಕಳೆದು ಹೋಗುತ್ತದೆ.

ಮೈಸೂರು, ಕೊಡಗು ಭಾಗದವರು ಕಾಫಿ ತೋಟಗಳಿಗೆ ಕೂಲಿಗೆ ಹೋಗುವುದು ನಿಂತಿಲ್ಲ. ಅವರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನಗಳು ಸೋಲುತ್ತಿವೆ. ಎಚ್‌.ಆಂಜನೇಯ, ಆರ್‌. ಅಶೋಕ್‌, ಬಿ.ನಾಗೇಂದ್ರ ಸಚಿವರಾಗಿದ್ದಾಗ ಹಾಡಿಗಳಲ್ಲಿ ವಾಸ್ತವ್ಯ ಹೂಡಿ ಪ್ರಚಾರ ಪಡೆದರೂ, ಹಾಡಿಗಳಲ್ಲಿ ಗಮನಾರ್ಹ ಬದಲಾವಣೆಯೇನೂ ಆಗಿಲ್ಲ. ಪುನರ್ವಸತಿ ಕೇಂದ್ರಗಳಿಗೆ ಸ್ಥಳಾಂತರಗೊಂಡಿರುವವರ ಬದುಕು ಕೂಡ ಹಸನಾಗಿಲ್ಲ ಎಂದು ಆದಿವಾಸಿ ಮುಖಂಡ ಶಿವಣ್ಣ ಅಸಮಾಧಾನ ವ್ಯಕ್ತ‍ಪಡಿಸಿದರು.

ಸಿದ್ದಿಗಳದ್ದು ಮತ್ತೊಂದು ಕತೆ...

‘ಅನೇಕ ತಲೆಮಾರುಗಳಿಂದ ಅರಣ್ಯದಂಚಿನ ಭೂಮಿಯಲ್ಲಿ ಉಳುಮೆ ಮಾಡುತ್ತಿದ್ದರೂ ಹಕ್ಕುಪತ್ರ ನೀಡಿಲ್ಲ. ರಾಜಕಾರಣಿಗಳು ಭಾಷಣ ಮಾಡೋದಕ್ಕಷ್ಟೇ ಸೀಮಿತವಾಗಿದ್ದಾರೆ. ದಶಕದಿಂದ ಹೋರಾಡುತ್ತಿದ್ದರೂ ಪಟ್ಟಾ ಸಿಕ್ಕಿಲ್ಲ’ ಎನ್ನುತ್ತಾರೆ ಉತ್ತರ ಕರ್ನಾಟಕದ ಹಳಿಯಾಳದ ಜೂಲಿಯಾನಾ ಸಿದ್ದಿ.

‘ಸ್ವಂತ ಜಮೀನಿಲ್ಲವೆಂದು ಬ್ಯಾಂಕ್ ಸಾಲ, ಕೃಷಿ ಚಟುವಟಿಕೆಗೆ ಸಹಾಯಧನ ಸಿಕ್ಕಿಲ್ಲ. ಪೌಷ್ಟಿಕ ಆಹಾರದ ಕಿಟ್ ಬಿಟ್ಟರೆ ಬೇರೆ ಯಾವ ವಿಶೇಷ ಸೌಲಭ್ಯವೂ ಸಿಕ್ಕಿಲ್ಲ’ ಎಂಬುದು ಅವರ ಅಳಲು.

‘ಮಕ್ಕಳನ್ನು ಶಾಲೆಗೆ ಕಳುಹಿಸಿದರೂ ಬೇಸಿಗೆ ರಜೆ ಬಂದ ಕೂಡಲೇ ಮಹಾರಾಷ್ಟ್ರದ ಕೊಲ್ಹಾಪುರ, ಬೆಳಗಾವಿಗೆ ಕೆಲಸಕ್ಕೆ ತೆರಳುತ್ತಾರೆ. ಅಲ್ಲಿ ಸಿಗುವ ಕೂಲಿಯೇ ಅವರನ್ನು ಆಕರ್ಷಿಸುತ್ತದೆ. ಓದು ಬಿಟ್ಟು ಪರ್ಣಾವಧಿ ಕಾರ್ಮಿಕರಾಗುತ್ತಿದ್ದಾರೆ. ಪಾಲಕರೂ ಮಕ್ಕಳ ಓದಿಗೆ ಪ್ರೇರೇಪಿಸುತ್ತಿಲ್ಲ’ ಎನ್ನುತ್ತಾರೆ ಅವರು. ಆದರೆ, ಅಧಿಕಾರಿಗಳು ನೀಡುವ ಮಾಹಿತಿ ಪ್ರಕಾರ, ಹಕ್ಕುಪತ್ರ ಸಂಬಂಧಿಸಿದ ಇವರ ಬೇಡಿಕೆಯನ್ನು ಪಿಎಂ–ಜನ್‌ಮನ್‌ ಯೋಜನೆಯಲ್ಲಿ ಸೇರಿಸಿಯೇ ಇಲ್ಲ!

ಕಾಡೇ ಸ್ವರ್ಗ; ರಸ್ತೆ, ವಿದ್ಯುತ್ ಕೊಟ್ಟರೆ ಸಾಕು ಎನ್ನುವ ಮಲೆಕುಡಿಯರು:

ಮಲೆಕುಡಿಯರ ಪೈಕಿ ಶೇ 75ರಷ್ಟು ಮಂದಿ ಕಾಡಿನ ಒಳಗೇ ಇದ್ದಾರೆ. ಅರಣ್ಯ ಉತ್ಪನ್ನವೇ ಜೀವನಾಧಾರ. ರಸ್ತೆ,   ವಿದ್ಯುತ್ ಇಲ್ಲದಿರುವುದೇ ದೊಡ್ಡ ಸಮಸ್ಯೆ. ಸೌಲಭ್ಯಕ್ಕಾಗಿ ಹೋರಾಡುವ ಚೈತನ್ಯವಿಲ್ಲದ ಸ್ಥಿತಿ. ಎಲ್ಲರದೂ ಪಟ್ಟಾ ಜಾಗವಾಗಿರುವುದರಿಂದ ಸರ್ಕಾರಿ ಜಮೀನು ಅಥವಾ ಅರಣ್ಯ ಹಕ್ಕುಪತ್ರ ಪಡೆದವರು ತೀರಾ ಕಡಿಮೆ. ಪುನರ್ವಸತಿ ಬಯಸುವವರು ಅರಣ್ಯ ಇಲಾಖೆಗೆ ಜಾಗವನ್ನು ನೀಡಿ ಪರಿಹಾರ ಪಡೆದುಕೊಳ್ಳುತ್ತಾರೆ. ಹೀಗೆ ಮಾಡಿ ತಮ್ಮ ಅಸ್ಮಿತೆಯನ್ನು ಬಿಟ್ಟುಕೊಡಲು ಬಯಸದವರೆಲ್ಲ ಅರಣ್ಯದಲ್ಲೇ ಇದ್ದಾರೆ.

ಅವರಿಗೆ ಕಾಡೇ ಸ್ವರ್ಗ. ಶುದ್ಧ ಗಾಳಿ, ನೀರು, ಪರಿಸರ ಬಿಟ್ಟು, ಭಾವನಾತ್ಮಕ ಸಂಬಂಧ ತೊರೆದು, ದೈವಾರಾಧನೆಯನ್ನು ಬಿಟ್ಟು ಹೊರಬರಲು ಬಯಸುವುದಿಲ್ಲ. ಅನೇಕರಿಗೆ ಪಟ್ಟಾ ಜಾಗವನ್ನು ತಮ್ಮ ಹೆಸರಿಗೆ ಮಾಡಿಕೊಳ್ಳಲು ತಾಂತ್ರಿಕ ಸಮಸ್ಯೆಗಳಿವೆ. ಅರಣ್ಯದಂಚಿನಲ್ಲಿರುವ ಕೆಲವರಿಗೆ ಅಕ್ರಮ ಸಕ್ರಮವೂ ನೆರವಾಗುತ್ತಿಲ್ಲ. ‘ಆರ್‌ಟಿಸಿಯಲ್ಲಿ ಅರಣ್ಯ ಎಂದು ಉಲ್ಲೇಖವಾಗಿದೆ. ಆದರೆ, ಅರಣ್ಯ ಇಲಾಖೆ ಅದು ತನ್ನದಲ್ಲ ಎನ್ನುತ್ತದೆ. ಅರಣ್ಯ ಇಲಾಖೆಯ ಜಾಗ ಆಗಿರುವುದರಿಂದ ಪಟ್ಟಾ ಕೊಡಲಾಗದು ಎಂದು ಕಂದಾಯ ಇಲಾಖೆ ಹೇಳುತ್ತದೆ. ಈ ಸಂದಿಗ್ಧ ಪರಿಸ್ಥಿತಿಯಿಂದ ಹೊರಬರಲು ಆಗುತ್ತಿಲ್ಲ’ ಎಂಬುದು ಈ ಬುಡಕಟ್ಟಿನ ಜಯಾನಂದ ಅವರ ಸಂಕಟ.

ಉತ್ತಮ ಬದುಕಿಲ್ಲ....

‘ಶಿಕ್ಷಣ, ಉದ್ಯೋಗ ಮತ್ತು ಆರೋಗ್ಯ ರಕ್ಷಣೆಯಲ್ಲಿ ಹಿಂದುಳಿದಿರುವ ಕೊರಗ ಜನಾಂಗದವರಿಗೆ ಉತ್ತಮ ಬದುಕು ಕಟ್ಟಿಕೊಳ್ಳುವುದು ಸಾಧ್ಯವಾಗಿಲ್ಲ’ ಎಂದು ಹೋರಾಟಗಾರ ಸುಂದರ ಕೊರಗ ಬೇಸರ ವ್ಯಕ್ತಪಡಿಸುತ್ತಾರೆ.

‘ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯೇ ಕೊರಗರ ಮೂಲ ಸ್ಥಾನ. ಮನೆ ನಿರ್ಮಿಸಲು ಪ್ರತಿ ಕುಟುಂಬಕ್ಕೆ ₹ 4.90 ಲಕ್ಷ ನೀಡುವ ‘ಗಿರಿಜನ ಉಪಯೋಜನೆಯ ವಸತಿ ಯೋಜನೆ’ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ. ಈಗ ಕೇಳಿದರೆ, ₹ 3.5 ಲಕ್ಷದ ಮನೆ ನಿರ್ಮಿಸಲು ಅರ್ಜಿ ಸಲ್ಲಿಸಿ ಎನ್ನುತ್ತಾರೆ. ಸುಳ್ಯ ತಾಲ್ಲೂಕಿನಲ್ಲಿ 40 ವರ್ಷಗಳ ಹಿಂದೆ ನಿರ್ಮಿಸಿದ ಹತ್ತು ಮನೆಗಳಿವೆ. ಇನ್ನೂ 7 ಮನೆಗಳು ಬೇಕು. ಎಲ್ಲ ತಾಲ್ಲೂಕುಗಳಲ್ಲಿ ಪ್ರತಿ ವರ್ಷ ತಲಾ 10 ಮನೆ ನಿರ್ಮಿಸಿದರೆ ಐದು ವರ್ಷಗಳಲ್ಲಿ ಸಮಸ್ಯೆ ನಿವಾರಣೆ ಆಗುತ್ತದೆ’ ಎಂಬ ಸಲಹೆ ಅವರದು.

‘ಕೊರಗ, ಮಲೆಕುಡಿಯ ಮತ್ತು ಮರಾಠಿ ನಾಯಕ ಸಮುದಾಯವರು ಬುಡಕಟ್ಟು ಜನಾಂಗಕ್ಕೆ ಸೇರಿದವರು. ಈ ಪೈಕಿ ಕೊರಗ ಜನಾಂಗದವರನ್ನು ನೈಜ ದುರ್ಬಲ ಬುಡಕಟ್ಟು ಸಮುದಾಯ ಎಂದು ಘೋಷಿಸಲಾಗಿದೆ. ಆದರೂ ಸೌಲಭ್ಯಗಳು ಸರಿಯಾಗಿ ತಲುಪಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ 2007ರಲ್ಲಿ ಸ್ವಲ್ಪ ಭೂಮಿ ನೀಡಿದ್ದಾರೆ. ಅದರ ದಾಖಲೆಗಳು ಸಮರ್ಪಕವಾಗಿಲ್ಲದೆ ಸಾಗುವಳಿಗೆ ತೊಂದರೆಯಾಗಿದೆ’ ಎಂಬುದು ಅವರ ಅಸಮಾಧಾನ.

ಆದಿವಾಸಿಗಳ ಸಮಸ್ಯೆಗಳು ಮತ್ತು ಪರಿಹಾರದ ಕುರಿತ ವಸ್ತುನಿಷ್ಠ, ತಳಮಟ್ಟದ ಸಮೀಕ್ಷೆ, ಜೀವನ ಮಟ್ಟ ಸುಧಾರಣೆಗೆ ಅಗತ್ಯವಿರುವ ಸೌಲಭ್ಯಗಳನ್ನು ತ್ವರಿತವಾಗಿ ಒದಗಿಸುವ ನಡೆ, ವಿವಿಧ ಇಲಾಖೆಗಳ ನಡುವಿನ ಸಾಮರಸ್ಯದ ಕೊರತೆಯನ್ನು ತುಂಬುವ ಮಾನವೀಯತೆ ಸೆಲೆಯುಳ್ಳ ಆಡಳಿತವನ್ನು ಈ ಸಮುದಾಯಗಳು ನಿರೀಕ್ಷಿಸುತ್ತಿವೆ. ಜನ್‌–ಮನ್‌ ಯೋಜನೆಯು ಈ ಅಸಹಾಯಕ ಜನರ ಮನದ ಆಳವನ್ನು ಅರಿಯಬೇಕಾದ್ದು ಮೊದಲು ಆಗಬೇಕಾದ ಕೆಲಸ ಎನ್ನುವುದು ಮುಖಂಡರ ಅಭಿಪ್ರಾಯವಾಗಿದೆ.

ಪೂರಕ ಮಾಹಿತಿ: ರಾಜೇಶ್‌ ರೈ ಚಟ್ಲ, ವಿಕ್ರಂ ಕಾಂತಿಕೆರೆ, ಕೆ.ಎಸ್. ಗಿರೀಶ, ಬಾಲಚಂದ್ರ ಎಚ್‌., ಗಣಪತಿ ಹೆಗಡೆ

ಪರಿಕಲ್ಪನೆ: ಯತೀಶ್‌ ಕುಮಾರ್‌ ಜಿ.ಡಿ

ಮೈಸೂರು ಜಿಲ್ಲೆ ಎಚ್‌.ಡಿ. ಕೋಟೆ ತಾಲ್ಲೂಕಿನ ಬಳ್ಳೆ ಹಾಡಿಯಲ್ಲಿರುವ ಆದಿವಾಸಿಗಳ ಮನೆಗಳ ಸ್ಥಿತಿ ಹೀಗಿದೆ
ಮೈಸೂರು ಜಿಲ್ಲೆ ಎಚ್‌.ಡಿ. ಕೋಟೆ ತಾಲ್ಲೂಕಿನ ಬಳ್ಳೆ ಹಾಡಿಯಲ್ಲಿರುವ ಆದಿವಾಸಿಗಳ ಮನೆಗಳ ಸ್ಥಿತಿ ಹೀಗಿದೆ
ಮೈಸೂರು ಜಿಲ್ಲೆಯ ಬಳ್ಳೆ ಹಾಡಿಯಲ್ಲಿ ತೀರಾ ಶಿಥಿಲಗೊಂಡಿರುವ ಮನೆಯ ಎದುರು ಅಲ್ಲಿನ ಮಹಿಳೆ
ಮೈಸೂರು ಜಿಲ್ಲೆಯ ಬಳ್ಳೆ ಹಾಡಿಯಲ್ಲಿ ತೀರಾ ಶಿಥಿಲಗೊಂಡಿರುವ ಮನೆಯ ಎದುರು ಅಲ್ಲಿನ ಮಹಿಳೆ
ಮೈಸೂರು ಜಿಲ್ಲೆಯ ಸೊಳ್ಳೇಪುರ ಹಾಡಿಯಲ್ಲಿ ಬಿದಿರಿನಿಂದ ಆಹಾರ ಪದಾರ್ಥ ತಯಾರಿಸಲು ಸಿದ್ಧತೆ ಮಾಡಿಕೊಳ್ಳುತ್ತಿರುವ ಆದಿವಾಸಿ ಮಹಿಳೆಯರು– ಪ್ರಜಾವಾಣಿ ಚಿತ್ರ: ಸತೀಶ್ ಆರಾಧ್ಯ
ಮೈಸೂರು ಜಿಲ್ಲೆಯ ಸೊಳ್ಳೇಪುರ ಹಾಡಿಯಲ್ಲಿ ಬಿದಿರಿನಿಂದ ಆಹಾರ ಪದಾರ್ಥ ತಯಾರಿಸಲು ಸಿದ್ಧತೆ ಮಾಡಿಕೊಳ್ಳುತ್ತಿರುವ ಆದಿವಾಸಿ ಮಹಿಳೆಯರು– ಪ್ರಜಾವಾಣಿ ಚಿತ್ರ: ಸತೀಶ್ ಆರಾಧ್ಯ
ಮೈಸೂರು ಜಿಲ್ಲೆಯ ಸೊಳ್ಳೇಪುರ ಹಾಡಿಯ ನೋಟ– ಪ್ರಜಾವಾಣಿ ಚಿತ್ರ: ಸತೀಶ್ ಆರಾಧ್ಯ
ಮೈಸೂರು ಜಿಲ್ಲೆಯ ಸೊಳ್ಳೇಪುರ ಹಾಡಿಯ ನೋಟ– ಪ್ರಜಾವಾಣಿ ಚಿತ್ರ: ಸತೀಶ್ ಆರಾಧ್ಯ
ಮೈಸೂರು ಜಿಲ್ಲೆಯ ಸೊಳ್ಳೇಪುರ ಹಾಡಿಯ ನೋಟ– ಪ್ರಜಾವಾಣಿ ಚಿತ್ರ: ಸತೀಶ್ ಆರಾಧ್ಯ
ಮೈಸೂರು ಜಿಲ್ಲೆಯ ಸೊಳ್ಳೇಪುರ ಹಾಡಿಯ ನೋಟ– ಪ್ರಜಾವಾಣಿ ಚಿತ್ರ: ಸತೀಶ್ ಆರಾಧ್ಯ
ಮೈಸೂರು ಜಿಲ್ಲೆಯ ಸೊಳ್ಳೇಪುರ ಹಾಡಿಯ ನೋಟ–ಪ್ರಜಾವಾಣಿ ಚಿತ್ರ: ಸತೀಶ್ ಆರಾಧ್ಯ
ಮೈಸೂರು ಜಿಲ್ಲೆಯ ಸೊಳ್ಳೇಪುರ ಹಾಡಿಯ ನೋಟ–ಪ್ರಜಾವಾಣಿ ಚಿತ್ರ: ಸತೀಶ್ ಆರಾಧ್ಯ
ಮೈಸೂರು ಜಿಲ್ಲೆಯ ಬಳ್ಳೆ ಹಾಡಿಯಲ್ಲಿರುವ ಈ ಮನೆಗೆ ಹಳೆಯ ಸೀರೆಗಳೇ ಗೋಡೆಗಳಾಗಿವೆ
ಮೈಸೂರು ಜಿಲ್ಲೆಯ ಬಳ್ಳೆ ಹಾಡಿಯಲ್ಲಿರುವ ಈ ಮನೆಗೆ ಹಳೆಯ ಸೀರೆಗಳೇ ಗೋಡೆಗಳಾಗಿವೆ
ಮಲೆಕುಡಿಯರು ವಾಸಸ್ಥಳ ತೊರೆಯಲು ಬಯಸುವುದಿಲ್ಲ. ಅವರು ಇರುವಲ್ಲೇ ರಸ್ತೆ ವಿದ್ಯುತ್ ಸೌಕರ್ಯ ಅತ್ಯವಶ್ಯಕ
–ಜಯರಾಮ ದಿಡುಪೆ ಬೆಳ್ತಂಗಡಿ
ಆದಿವಾಸಿಗಳಿಗೆ ತಲಾ 3 ಎಕರೆ ಜಮೀನು ಸಿಗಬೇಕು. ವಿದ್ಯಾರ್ಹತೆ ಆಧಾರಿಸಿ ಸರ್ಕಾರಿ ನೌಕರಿ ಕೊಡಬೇಕು. ಮೂಲ ಬುಡಕಟ್ಟು ಜನರಿಗೆ ಪ್ರತ್ಯೇಕ ಯೋಜನೆ ಆಗಬೇಕು; ಒಳಮೀಸಲಾತಿ ದೊರೆಯಬೇಕು. ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪನೆಯಾಗಬೇಕು
– ಸೋಮಣ್ಣ ಆದಿವಾಸಿಗಳ ಪರ ಹೋರಾಟಗಾರ ಎಚ್‌.ಡಿ. ಕೋಟೆ ಮೈಸೂರು ಜಿಲ್ಲೆ
ನೆಲ ಜಲ ಮತ್ತು ಕಾಡು ನಮ್ಮ ಹಕ್ಕು ಹಾಗೂ ಸ್ವಾಭಿಮಾನದ ಪ್ರಶ್ನೆ. ಅರಣ್ಯ ಹಕ್ಕು ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿ ಕಾಡಿನಲ್ಲಿರುವವರಿಗೆ ಹಕ್ಕುಪತ್ರ ನೀಡಬೇಕು. ಪ್ರೊ. ಮುಜಾಫರ್ ಅಸ್ಸಾದಿ ವರದಿಯ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರಬೇಕು.
– ಶಾಂತರಾಮ ಸಿದ್ದಿ ವಿಧಾನಪರಿಷತ್‌ ಸದಸ್ಯ
ಬುಡಕಟ್ಟು ಜನರ ನೆರವಿಗಾಗಿ ಆಗಾಗ ಲೋಕಾಯುಕ್ತ ಅಧಿಕಾರಿಗಳನ್ನು ಕರೆದೊಯ್ದು ವಿವಿಧ ಇಲಾಖೆಗಳಿಗೆ ನಿರ್ದೇಶನ ಕೊಡಿಸುವ ಪ್ರಯತ್ನ ಮಾಡುತ್ತಿದ್ದೇವೆ. ಕೆಲವರ ಪಡಿತರ ಚೀಟಿಗಳು ಮದ್ಯ ಅಕ್ರಮ ಮಾರಾಟಗಾರರ ಪಾಲಾಗಿವೆ. ಅದನ್ನು ತಡೆಯಬೇಕು.
– ಪ್ರಸನ್ನ ರಾಜ್ಯ ಉಪಾಧ್ಯಕ್ಷ ಜನಸಂಗ್ರಾಮ ಪರಿಷತ್‌
ಚಾಮರಾಜನಗರದಲ್ಲಿ ಸ್ಪಂದನೆ
ಯೋಜನೆಗೆ ಚಾಮರಾಜನಗರ ಜಿಲ್ಲೆಯಲ್ಲಿ ಸ್ಪಂದನೆ ಕಂಡುಬಂದಿದೆ. ‘ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ಮುಖ್ಯವಾಹಿನಿಯಿಂದ ದೂರ ಉಳಿದ ಜೇನು ಕುರುಬರನ್ನು ನೈಜ ಬುಡಕಟ್ಟು ಸಮುದಾಯ ಎಂದು ಗುರುತಿಸಲಾಗಿದೆ. ಗುಡ್ಡೆಕೇರೆ ಆಡಿನಕಣಿವೆ ಅಣಜಿಹುಂಡಿ ಕೆರೆಮಾಳ ನವಿಲುಗುಂಡಿ ಮದ್ದೂರು ಕಾಲೊನಿ ಉಪ್ಕರ  ಕಾಲೊನಿ ಮುಕ್ತಿ ಕಾಲೊನಿ ಮಗುವಿನಹಳ್ಳಿ ಮೆಲಕಮ್ಮನಹಳ್ಳಿ ಕಾಲೊನಿ ದೇಶಿಪುರ ಕಾಲೊನಿ ಹಗ್ಗದಹಳ್ಳದ 439 ಕುಟುಂಬಗಳ 1096 ಮಂದಿಯನ್ನು ಗುರುತಿಸಲಾಗಿದೆ’ ಎಂದು ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಮಂಜುಳಾ ಮಾಹಿತಿ ನೀಡಿದರು. ‘ಆಧಾರ್ ಸೇರಿದಂತೆ ಗುರುತಿನ ಚೀಟಿಗಳನ್ನು ವಿತರಿಸಲಾಗುತ್ತಿದೆ. 27 ಕುಟುಂಬಗಳಿಗೆ ಮನೆ ನಿರ್ಮಿಸಿಕೊಳ್ಳಲು ತಲಾ ₹ 2.39 ಲಕ್ಷ ಜಮೆ ಮಾಡಲಾಗಿದೆ. 23 ಮನೆಗಳ ನಿರ್ಮಾಣ ನಡೆದಿದೆ’ ಎಂದರು.
ವರದಿಯಲ್ಲಿ ಏನಿದೆ?
ಮೈಸೂರು ವಿಶ್ವವಿದ್ಯಾಲಯದ ಸಾಮಾಜಿಕ ಹೊರಗುಳಿಯುವಿಕೆ ಮತ್ತು ಒಳಗೊಳ್ಳುವಿಕೆ ಅಧ್ಯಯನ ಕೇಂದ್ರದ ಸಹ ಪ್ರಾಧ್ಯಾಪಕ ಡಿ.ಸಿ.ನಂಜುಂಡ ಮತ್ತು ಮಂಡ್ಯ ಸ್ನಾತಕೋತ್ತರ ಕೇಂದ್ರದ ಅರ್ಥಶಾಸ್ತ್ರ ಪ್ರಾಧ್ಯಾಪಕ ಪ್ರೇಮಕುಮಾರ್‌ ಜಿ.ಎಸ್. ನೇತೃತ್ವದ ಸಂಶೋಧನಾ ತಂಡವು ಸಮೀಕ್ಷೆ ನಡೆಸಿ ‘ಬುಡಕಟ್ಟು ಮಾನವ ಅಭಿವೃದ್ಧಿ ವರದಿ’ ಸಿದ್ಧಪಡಿಸಿದೆ. ರಾಜ್ಯದ 50 ಬುಡಕಟ್ಟು ಸಮುದಾಯಗಳ 5 ಸಾವಿರಕ್ಕೂ ಹೆಚ್ಚಿನ ಜನರನ್ನು ಭೇಟಿಯಾಗಿ ದತ್ತಾಂಶ ಸಂಗ್ರಹಿಸಲಾಗಿದೆ. ಬುಡಕಟ್ಟು ಸಮುದಾಯದ ಆರೋಗ್ಯ ಶಿಕ್ಷಣ ಮತ್ತು ಉದ್ಯೋಗದ (ಜೀವನೋ‍ಪಾಯ) ಸ್ಥಿತಿಗತಿಗೆ ಆದ್ಯತೆ ನೀಡಿದೆ. ಸಚಿವಾಲಯದ ಕೋರಿಕೆಯಂತೆ ಲಿಂಗ ಭಾಗವಹಿಸುವಿಕೆ ಹೊರಗುಳಿಯವಿಕೆ ಮೊದಲಾದ ಅಂಶಗಳ ಆಧಾರದಲ್ಲೂ ಸಮೀಕ್ಷೆ ನಡೆದಿದೆ. ಈ ವಿಷಯಗಳಲ್ಲಿ ಬುಡಕಟ್ಟು ಜನ ಬಹಳ ಹಿಂದುಳಿದಿರುವುದನ್ನು ಗುರುತಿಸಲಾಗಿದೆ. ಗ್ರಾಮೀಣ ಹಾಗೂ ಅರಣ್ಯದ ಬುಡಕಟ್ಟು ಜನರ ಮಾನವ ಅಭಿವೃದ್ಧಿಯ ಅಂತರ ಹೆಚ್ಚಿರುವುದನ್ನು ಗುರುತಿಸಲಾಗಿದೆ. ಬಹಳಷ್ಟು ಮಂದಿಗೆ ಮತದಾರರ ಗುರುತಿನ ಚೀಟಿ ದೊರೆತಿಲ್ಲ. ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶ ಸಿಕ್ಕಿಲ್ಲ. ಯೋಜನೆಗಳು ಎಲ್ಲರಿಗೂ ತಲುಪಿಲ್ಲ. ಉದ್ಯೋಗ ಸಿಕ್ಕಿಲ್ಲ. ಶಾಲೆಯಿಂದ ಹೊರಗುಳಿದಿರುವ ಮಕ್ಕಳು ಗಣನೀಯವಾಗಿ ಹೆಚ್ಚಿರುವುದನ್ನು ಗುರುತಿಸಲಾಗಿದೆ. ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಪ್ರಾಯೋಜಕತ್ವದಲ್ಲಿ 2021ರಿಂದ 2023ರವರೆಗೆ ನಡೆದ ಈ ಸಮೀಕ್ಷೆಗೆ ಸಚಿವಾಲಯದಿಂದ ₹30 ಲಕ್ಷ ನೆರವು ದೊರೆತಿತ್ತು.
ಬಹು ಉದ್ದೇಶದ ಕೇಂದ್ರಗಳು (ಎಂಪಿಸಿ)
ಜಿಲ್ಲೆ;ಗುರಿ;ಸಾಧನೆ ಮೈಸೂರು;33;0 ಚಾಮರಾಜನಗರ;6;0 ಕೊಡಗು;13;0 ಉಡುಪಿ;18;0 ದಕ್ಷಿಣ ಕನ್ನಡ;4;0 (ಎಲ್ಲ ಜಿಲ್ಲೆಗಳಲ್ಲೂ ಪ್ರಗತಿಯು ಡಿಪಿಆರ್‌ ತಯಾರಿಕೆ ಹಂತದಲ್ಲೇ ಇದೆ) –––––––– ವನ–ಧನ ವಿಕಾಸ ಕೇಂದ್ರ (ವಿಡಿವಿಕೆ) ಜಿಲ್ಲೆ; ಗುರಿ; ಸಾಧನೆ ಮೈಸೂರು;21;ತರಬೇತಿ ಪೂರ್ಣ ಸಮೀಕ್ಷೆ ಪ್ರಗತಿಯಲ್ಲಿದೆ ಕೊಡಗು;12;ತರಬೇತಿ ಆರಂಭವಾಗಬೇಕಿದೆ
ಅಗತ್ಯವಿದ್ದರೆ....
ಬುಡಕಟ್ಟು ಸಂಶೋಧನೆಗೆ ಕೇಂದ್ರ ಮೂಲ ಆದಿವಾಸಿಗಳ ಶ್ರೇಯೋಭಿವೃದ್ಧಿಗೆ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಲೆಂದೇ ಮೈಸೂರಿನಲ್ಲಿ ಬುಡಕಟ್ಟು ಸಂಶೋಧನಾ ಸಂಸ್ಥೆಯಲ್ಲಿ 2016ರಲ್ಲಿ ‘ಮೂಲ ಆದಿವಾಸಿ ಅಧ್ಯಯನ ಕೇಂದ್ರ’ ಸ್ಥಾಪಿಸಲಾಗಿದೆ. ಕೇಂದ್ರವನ್ನು ಎರಡು ವರ್ಷ ನಡೆಸಿ ಮುಚ್ಚಲಾಗಿತ್ತು. ಅದರಿಂದ ಜೇನು ಕುರುಬ ಕೊರಗ ಇರುಳಿಗ ಸೋಲಿಗ ಬೆಟ್ಟ ಕುರುಬ ಗೌಡಲು ಸಿದ್ದಿ ಕುಡಿಯ ಎರವ ಪಣಿಯ ಮಲೆಕುಡಿಯ ಸಿದ್ದಿ ಪಣಿಯ ಹಸಲರು ಮೊದಲಾದ ಅರಣ್ಯ ಆಧಾರಿತ ಬುಡಕಟ್ಟು ಸಮುದಾಯಗಳಿಗೆ ಧ್ವನಿ ಇಲ್ಲದಂತಾಗಿದೆ. ಆದಿವಾಸಿಗಳಿಗೆ ಅನ್ಯಾಯವಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಹೋದ ವರ್ಷವಷ್ಟೆ ಸಂಶೋಧನಾ ಅಧಿಕಾರಿಯನ್ನು ನೇಮಿಸಲಾಗಿದೆ. ರಾಜ್ಯದಲ್ಲಿ 6 ಲಕ್ಷಕ್ಕೂ ಹೆಚ್ಚು ಮೂಲ ಆದಿವಾಸಿಗಳಿದ್ದಾರೆ. ಮೈಸೂರು ಚಾಮರಾಜನಗರ ಕೊಡಗು ದಕ್ಷಿಣ ಕನ್ನಡ ಉಡುಪಿ ರಾಮನಗರ ಶಿವಮೊಗ್ಗ ಚಿಕ್ಕಮಗಳೂರು ಮೊದಲಾದ ಜಿಲ್ಲೆಗಳಲ್ಲಿರುವ 12 ಬುಡಕಟ್ಟು ಸಮುದಾಯಗಳ ಕುರಿತು ವರದಿ ತಯಾರಿಸಿ ಅವರಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸುವ ಉದ್ದೇಶದಿಂದ ಕೇಂದ್ರ ಸ್ಥಾಪಿಸಲಾಗಿದೆ.
ಅಗತ್ಯವಿದ್ದರೆ....
ರಕ್ತಹೀನತೆ ಸಮಸ್ಯೆ ಹಲವು ಕಾಯಿಲೆಗಳ ನಡುವೆ ಸಿಕಲ್‌ಸೆಲ್ ಅನೀಮಿಯಾ (ಕುಡುಗೋಲು ರಕ್ತ ಕಣ ಹೀನತೆ) ದೃಢಪಡುತ್ತಿರುವುದು ಆತಂಕಕ್ಕೆ ಹೆಚ್ಚಾಗಲು ಕಾರಣವಾಗಿದೆ. ಮೈಸೂರು ಕೊಡಗು ಉತ್ತರ ಕನ್ನಡ ಚಿಕ್ಕಮಗಳೂರು ಉಡುಪಿ ಚಾಮರಾಜನಗರ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಆರೋಗ್ಯ ತಪಾಸಣೆಗ ಒಳಗಾದ 55503 ಮಂದಿ ಪೈಕಿ 2018 ಮಂದಿಗೆ ರೋಗ ಲಕ್ಷಣವಿದೆ. ಮೈಸೂರಿನಲ್ಲಿ 86 ಚಾಮರಾಜನಗರದಲ್ಲಿ 75 ಹಾಗೂ ಕೊಡಗು ಜಿಲ್ಲೆಯಲ್ಲಿ 31 ಮಂದಿಯಲ್ಲಿ ಕಾಯಿಲೆ ದೃಢಪಟ್ಟಿದ್ದು ಕಳವಳಕ್ಕೆ ಕಾರಣವಾಗಿದೆ. ಈ ರಕ್ತಹೀನತೆಯು ಅನುವಂಶೀಯವಾಗಿ ಬರುವಂತಹ ಕಾಯಿಲೆಯಾಗಿದೆ. ಈ ರೋಗ ಬಂದವರಲ್ಲಿ ದುಂಡಾಗಿರುವ ಕೆಂಪುರಕ್ತ ಕಣಗಳ ಆಕಾರವು ಕುಡುಗೋಲಿನಂತೆ ಬದಲಾಗಿರುತ್ತದೆ. ದೇಹದ ಎಲ್ಲಾ ಭಾಗಗಳಿಗೆ ಆಮ್ಲಜನಕವನ್ನು ಸಾಗಿಸುವ ಕೆಂಪುರಕ್ತ ಕಣಗಳ ಆಕಾರವೇ ಬದಲಾಗುವುದರಿಂದ ಆಮ್ಲಜನಕದ ಪೂರೈಕೆ ಅಂಗಾಂಗಗಳಿಗೆ ಕಡಿಮೆಯಾಗಲಿದೆ. ಇದರಿಂದ ಅಂಗಾಂಗ ವೈಫಲ್ಯ ಉಂಟಾಗುವ ಸಾಧ್ಯತೆ ಇರುತ್ತದೆ. ಮೂಳೆಗಳಲ್ಲಿ ನೋವು ಆಯಾಸ ರಕ್ತ ಹೀನತೆ ಇದರ ಲಕ್ಷಣಗಳಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT