ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ಒಳನೋಟ | ಬೊಂಬೆಯಾಡಿಸಿ ದಣಿದೋರು...
ಒಳನೋಟ | ಬೊಂಬೆಯಾಡಿಸಿ ದಣಿದೋರು...
ಉತ್ಸವದ ಬೊಂಬೆಗಳಿಗಿಲ್ಲ ಕಿಮ್ಮತ್ತು, ನೆಲೆಯಿಲ್ಲದ ಹಗಲುವೇಷಗಾರರು
Published 3 ಡಿಸೆಂಬರ್ 2023, 0:14 IST
Last Updated 3 ಡಿಸೆಂಬರ್ 2023, 0:14 IST
ಅಕ್ಷರ ಗಾತ್ರ

ಬೆಂಗಳೂರು: ’ಏನು ಕೇಳ್ತೀರಿ ನಮ್ಕತಿ, ಜಾತ್ರಿ, ಮೆರವಣಿಗಿಯೊಳಗ ನಕ್ಕೊಂತ ಕುಣೀತೀವಿ. ಕುಣಿಗೆ ಹೋಗೂತನಾನೂ ನಮ್ಮ ಸಂಘರ್ಷ ನಡದೇ ಇರ್ತದ, ಇರಾಕ ಮನಿಯಿಲ್ಲ. ಓದಸಾಕ ಸಾಲಿ ಇಲ್ಲ. ಒಂದು ಆದಾಯದ ಮೂಲ ಅಂತನೇ ಇಲ್ಲ‘ ಹಿಂಗೆ ತಮ್ಮ ಬದುಕಿನ ಎಳೆಯನ್ನು ಅಲೆಮಾರಿಗಳು ಬಿಚ್ಚಿಡುತ್ತಾರೆ.

ಆಂಧ್ರಪ್ರದೇಶ ಮೂಲದ ಬುಡ್ಗಜಂಗಮ ಈ ಅಲೆಮಾರಿ ಕಲಾವಿದರು ಪರಿಶಿಷ್ಟ ಜಾತಿಗೆ ಸೇರಿದವರು. ಕಲಬುರಗಿ, ಕೊಪ್ಪಳ, ಬಳ್ಳಾರಿ, ಹುಬ್ಬಳ್ಳಿ, ಬೆಳಗಾವಿ ಜಿಲ್ಲೆಗಳಲ್ಲಿಯೂ ಹರಡಿದ್ದಾರೆ. ಜಾಗ ಬದಲಿಸುವ ಈ ಕಲಾವಿದರು ದೊಡ್ಡ ದೊಡ್ಡ ಗಾರುಡಿ ಗೊಂಬೆಗಳನ್ನು ಧರಿಸಿ, ಮೆರವಣಿಗೆಯ ಮುಂಚೂಣಿಯಲ್ಲಿರುತ್ತಾರೆ.

ತೆಲುಗು ಧಾಟಿಯ ಕನ್ನಡದಲ್ಲಿ ಮಾತನಾಡುವ ಇವರೆಲ್ಲರೂ ಜನಪದ ಹಾಡುಗಳ, ಕತೆಗಳ ಕಣಜವಾಗಿದ್ದಾರೆ. ಸಮಕಾಲೀನ ಘಟನೆಗಳನ್ನೂ ತಮ್ಮ ಕತೆಗಳಲ್ಲಿ ಸೇರ್ಪಡೆ ಮಾಡಬಲ್ಲ ಇವರನ್ನು . ಹುಬ್ಬಳ್ಳಿಯಲ್ಲಿ ದಲ್‌ಪಟಾ ಕಲಾವಿದರು ಎಂದು ಕರೆಯುತ್ತಾರೆ. ಆದರೆ ಆಂಧ್ರ ಮೂಲದಿಂದ ಬಂದವರೆಲ್ಲ ಬುಡ್ಗ ಜಂಗಮರು ಎಂದು ಅಧ್ಯಯನಗಳು ತಿಳಿಸುತ್ತವೆ.

ನರಸಿಂಹ, ನಂದಿ, ರಾಜ, ರಾಣಿ, ಕುದುರೆ, ಗೂಳಿ, ಗೊರಿಲ್ಲಾ, ಜೋಡಿ ಕುದುರೆಯ ಮುಖವಾಡಗಳನ್ನು ಧರಿಸಿ, ಲಾಸ್ಯದಿಂದ ಬಳಕುತ್ತ ನಡೆಯುವ ಇವರಲ್ಲಿ ಕತ್ತಿವರಸೆ ಮಾಡುವವರು, ಚಕ್ರ ಸುತ್ತುವವರೂ ಇದ್ದಾರೆ. ತಮ್ಮ ಪರಂಪರೆಯನ್ನು ಬಿಡಲಾಗದೆ, ತಲೆ ಮಾರುಗಳಿಂದ ಇದೇ ವೃತ್ತಿಯಲ್ಲಿದ್ದಾರೆ.

ಈ ವೃತ್ತಿ ಕೈ ಹಿಡಿದಿದೆಯೇ ಎಂಬ ಪ್ರಶ್ನೆಗೆ ಉತ್ತರ ಹೀಗಿದೆ. ‘ಸರ್ಕಾರದಿಂದ ಕೆಲವರಿಗೆ ಮಾತ್ರ ಮಾಸಾಶನ ನೀಡುತ್ತಾರೆ. ವರ್ಷಕ್ಕೆ ಮೂರು ನಾಲ್ಕು ಕಾರ್ಯಕ್ರಮಗಳು ಸಿಗುತ್ತವೆ. ಎಂಟು ಮಂದಿ ಇರುವ ತಂಡಕ್ಕೆ ಗರಿಷ್ಠ ₹ 30,000 ಸಂಭಾವನೆ ನೀಡಲಾಗುತ್ತದೆ. ಹೊರಜಿಲ್ಲೆಯವರಿಗೆ ಹೋಗಿಬರುವ ಖರ್ಚು ಎಂದು ಐದು ಸಾವಿರ ಹೆಚ್ಚುವರಿಯಾಗಿ ಸೇರಿಸಿ ನೀಡಲಾಗುತ್ತದೆ. ಇದರಲ್ಲೇ ಇಡೀ ತಂಡ ಊಟ, ವಸತಿಯನ್ನೂ ನೋಡಿಕೊಳ್ಳಬೇಕು‘.

ಹಗಲುವೇಷ ಕಲಾವಿದರು
ಹಗಲುವೇಷ ಕಲಾವಿದರು
ಬೊಂಬೆ ಕುಣಿತ ಕಲೆ ಹೊಸ ತಲೆಮಾರಿನ ಜನರನ್ನು ಆಕರ್ಷಿಸುವ ರೀತಿಯಲ್ಲಿ ಹೊಸ ಆಯಾಮದಿಂದ ಮರುಸ್ಥಾಪಿಸಬೇಕಾದ ಅಗತ್ಯವಿದೆ. ಕಲಾವಿದರ ಬದುಕು ಕೂಡ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕಾರಣ ಹೊಸಬರು ಈ ಕಲೆ ನೆಚ್ಚಿಕೊಂಡು ಬರುವುದು ಕಷ್ಟ. ಇರುವವರೇ ಈ ಕಲೆಯನ್ನು ಉಳಿಸಿಕೊಂಡು ಹೋಗಬೇಕಾದ ಅಗತ್ಯವಿದೆ. ಸರ್ಕಾರ ನಮ್ಮಂಥ ಅನುಭವಿಗಳಿಗೆ ಆರ್ಥಿಕ ನೆರವು ಒದಗಿಸಿದರೆ ಹೊಸಬರನ್ನು ಈ ಕ್ಷೇತ್ರಕ್ಕೆ ಕರೆತರುವ ಪ್ರಯತ್ನ ಮಾಡಬಹುದು.
–ಹನುಮಂತಪ್ಪ ಬಬ್ಬಲ್‌, ಬೊಂಬೆ ಕುಣಿತ ಕಲಾವಿದ, ಚಿಲಕಮುಕಿ, ಕೊಪ್ಪಳ ಜಿಲ್ಲೆ

ಮೈಸೂರು ದಸರಾ ಮೆರವಣಿಗೆಯಲ್ಲೂ ಕುಣಿಯುವ ಇವರೆಲ್ಲ ಒಂದು ತಿಂಗಳು ಊರ ಹೊರಗೆ ಬಿಡಾರ ಹಾಕಿ, ಒಲೆ ಹೂಡಿ ತಮ್ಮ ಹೊಟ್ಟೆಪಾಡು ನೋಡಿಕೊಳ್ಳುತ್ತಾರೆ. ಸುತ್ತಲಿನ ಗ್ರಾಮಗಳಲ್ಲಿ ವೇಷಧರಿಸಿ ಹೋಗಿ, ಕಾಳು ಕಡಿ ಸಂಗ್ರಹಿಸಿಕೊಂಡು ಬರುತ್ತಾರೆ. ಈಗ ಜನರು ಕಾಳು ಕಡಿ, ದವಸ ಧಾನ್ಯಗಳನ್ನೆಲ್ಲ ಕೊಡುವುದಿಲ್ಲ. ಒಂದೆರಡು ರೂಪಾಯಿ ನಾಣ್ಯವೊ, ಐದೋ ಹತ್ತೋ ರೂಪಾಯಿಗಳನ್ನೋ ನೀಡುತ್ತಾರೆ. ಇದರಿಂದ ದಿನ ಕಳೆಯುವುದು ಕಷ್ಟವಾಗುತ್ತದೆ‘ ಎನ್ನುತ್ತಲೇ ಲೆಕ್ಕಾಚಾರದಲ್ಲಿ ತೊಡಗುತ್ತಾರೆ.

ಯಾವ ಕಾರ್ಯಕ್ರಮಗಳೂ ಇರದಿದ್ದಾಗ ಪುರುಷರು ಬಟ್ಟೆ ವ್ಯಾಪಾರ ಮಾಡುತ್ತಾರೆ. ಮೊದಲೆಲ್ಲಾ ಹಳ್ಳಿಗಳಲ್ಲಿ ಬಟ್ಟೆ ಅಂಗಡಿಗಳಿರುತ್ತಿರಲಿಲ್ಲ. ಇವರು ಹೀಗೆ ಮಾರುವುದನ್ನು ಗಂಟಿನ ಬಟ್ಟೆ ಎಂದೇ ಕರೆಯುತ್ತಿದ್ದರು. ದಿನದ ಅಗತ್ಯಗಳಾದ ಒಳ ಉಡುಪು, ಕೈವಸ್ತ್ರ, ಅಂಗವಸ್ತ್ರಗಳೆಲ್ಲ ಇವರೇ ಮಾರಾಟ ಮಾಡುತ್ತಿದ್ದರು. ಇದೀಗ ‍ಹೋಬಳಿಗೆ ಹಲವು ಬಟ್ಟೆ ಅಂಗಡಿಗಳಾಗಿರುವುದರಿಂದ ಇವರನ್ನೇ ಅವಲಂಬಿಸುವವರು ಕಡಿಮೆಯಾಗಿದ್ದಾರೆ. ನಗರೀಕರಣದ ಪರಿಣಾಮವೆಂದರೆ ಇಂಥ ತಳಸಮುದಾಯಗಳ ದಿನದ ರೊಟ್ಟಿಯನ್ನು ಕಸಿದಿರುವುದು.

ತಾವು ಬಿಡಾರ ಬಿಟ್ಟಿರುವ ಅಥವಾ ಸದ್ಯಕ್ಕೆ ನೆಲೆಯೂರಿರುವ (ಹುಬ್ಬಳ್ಳಿಯಲ್ಲಿ ಮೂರು ದಶಕಗಳಿಂದಲೂ ಅಲೆಮಾರಿಗಳು ಗೋಪನಕೊಪ್ಪದ ಮಹಾಲಕ್ಷ್ಮಿ ಬಡಾವಣೆಯಲ್ಲಿ ಖಾಸಗಿ ಜಮೀನೊಂದರಲ್ಲಿ ಒಂದಷ್ಟು ಗುಡಿಸಲುಗಳನ್ನು ಹಾಕಿಕೊಂಡು ನೆಲೆಸಿದ್ದಾರೆ.) ಸುತ್ತಮುತ್ತಲಿನ ಹಳ್ಳಿಗಳನ್ನು ಹಂಚಿಕೊಳ್ಳುತ್ತಾರೆ. ಆ ಹಳ್ಳಿಗಳಲ್ಲಿ ಹಗಲುವೇಷ ಧರಿಸಿ, ರಾಮಾಯಣದ ಕತೆಗಳನ್ನು ಹಾಡಿ, ಆಡಿ ಬರುತ್ತಾರೆ. ಊರವರು ನೀಡುವ ಹಣವೇ ಇವರಿಗೆ ಆಧಾರ.

ನೆಲೆಯೂರುವುದು ಎಂದರೆ ಶಿಸ್ತಿನ ಮನೆಗಳಿವೆ ಅಂತಲ್ಲ, ಇಲ್ಲಿ ನೆಲಹಾಸು ಇರುವುದಿಲ್ಲ. ಮಣ್ಣಿನ ಗೋಡೆಗಳಿಗೆ ಹುಲ್ಲಿನ ಚಾವಣಿ ಹಾಕಿರುತ್ತಾರೆ.  ಬಿಸಿಲಿನ ಝಳ ತಡೆಯಬಹುದು. ಮಳೆ ಬಂದರೆ ಬದುಕಲಾಗದು. ಹತ್ತಿರದ ಗುಡಿಗಳಲ್ಲಿ ಆಶ್ರಯ ಪಡೆಯುತ್ತಾರೆ. ಸೋರುವ ಈ ಸೂರುಗಳಲ್ಲಿ ಮಲಗುವುದು ಸಾಧ್ಯವೇ ಇಲ್ಲ. ಕೂಡಿಟ್ಟ ಸೌದೆಯೂ ತೊಯ್ದು ಅಡುಗೆ ಮಾಡುವುದೇ ಹರಸಾಹಸವಾಗುತ್ತದೆ. ಊರೆಲ್ಲ ಓಡಾಡಿ, ಪಾತ್ರೆ ಮಾರಾಟ ಮಾಡುವ ಇವರ ಸಂಸಾರ ಮಾತ್ರ ನಾಲ್ಕಾರು ಪಾತ್ರೆಗಳಲ್ಲಿಯೇ ಮುಗಿದುಹೋಗುತ್ತದೆ.

ಹುಬ್ಬಳ್ಳಿಯ ಗೋಪನಕೊಪ್ಪದ ಮಹಾಲಕ್ಷ್ಮಿ ಬಡಾವಣೆಯಲ್ಲಿ ಗೊಂಬೆ ಕುಣಿತ ಕಲಾವಿದರು ಗೊಂಬೆಗಳನ್ನು ಸ್ವಚ್ಛಗೊಳಿಸಿದರು
–ಪ್ರಜಾವಾಣಿ ಚಿತ್ರ/ಗುರು ಹಬೀಬ
ಹುಬ್ಬಳ್ಳಿಯ ಗೋಪನಕೊಪ್ಪದ ಮಹಾಲಕ್ಷ್ಮಿ ಬಡಾವಣೆಯಲ್ಲಿ ಗೊಂಬೆ ಕುಣಿತ ಕಲಾವಿದರು ಗೊಂಬೆಗಳನ್ನು ಸ್ವಚ್ಛಗೊಳಿಸಿದರು –ಪ್ರಜಾವಾಣಿ ಚಿತ್ರ/ಗುರು ಹಬೀಬ

ವೃತ್ತಿ ಅರಸಿ, ಅತ್ತಿತ್ತ ಓಡಾಡುವುದರಿಂದಲೇ ವಾಸಕ್ಕೆ ಮನೆಯ ವ್ಯವಸ್ಥೆ ಮಾಡಿಕೊಳ್ಳಲು ಆಗುವುದಿಲ್ಲ. ಪಡಿತರ ಚೀಟಿ ಇಲ್ಲದೇ ಇರುವುದು, ಕಾಯಂ ವಿಳಾಸದ ಕೊರತೆ, ಓದು ಬರೆಹದ ಕೊರತೆಯಿಂದಾಗಿ ಸರ್ಕಾರದ ಯಾವ ಯೋಜನೆಗಳೂ ಇವರ ಬಳಿ ತಲುಪುವುದಿಲ್ಲ. ಇವರ ಬಳಿ ಆಧಾರ್‌ ಕಾರ್ಡ್‌ಗಳಿವೆ. ವೋಟರ್‌ ಐಡಿಗಳಿವೆ. ಮತಕೇಳಲು ಬರುವ ನಾಯಕರು ಇವರನ್ನು ಭೇಟಿಯಾಗುವುದು ತಪ್ಪಿಸುವುದೇ ಇಲ್ಲ. ಮೆರವಣಿಗೆಗಳಿಗೆ ಕರೆದು ಅಂಗೈನಲ್ಲಿ ಒಂದಷ್ಟು ಸಾವಿರದಷ್ಟು ನೋಟುಗಳನ್ನು ಮುಚ್ಚಿಡುತ್ತಾರೆ. ಅದನ್ನು ಇಡೀ ತಂಡ ಹಂಚಿಕೊಳ್ಳಬೇಕು.

ಮತ ಪಡೆದ ನಾಯಕರು ಮತ್ತೆ ಮತ ಕೇಳಲು ಬಂದಾಗಲೇ ಮುಖಾಮುಖಿ ಮಾತುಗಳಾಗುತ್ತವೆ. ಕಲಾವಿದರನ್ನು ಗುರುತಿಸಿ ಪ್ರದರ್ಶನಕ್ಕೆ ಅವಕಾಶ ನೀಡುವುದು, ಇತರ ಅನುಕೂಲಗಳನ್ನು ಮಾಡಿಕೊಡುವುದಾಗಿಯೂ ಭಾಷೆ ನೀಡುತ್ತಾರೆ. ಹೇಳಿದ ಎಲ್ಲವನ್ನೂ ಸ್ಥಳೀಯ ನಾಯಕರು ಮಾಡುವುದಿಲ್ಲ. ಕೆಲವೊಮ್ಮೆ ಸಾಲ ಮಾಡಿಕೊಂಡು ಉತ್ಸವಗಳಿಗೆ ಹೋಗುತ್ತಾರೆ. ಗಾಡಿಖರ್ಚು, ಊಟ ಇತ್ಯಾದಿಗಳನ್ನು ಕಳೆದು, ಹೋಗಿ ಬರುವ ಖರ್ಚಿಗೆ ಮಾಡಿದ ಸಾಲ ತೀರಿಸುವುದರಲ್ಲಿಯೇ ಕೈಖಾಲಿಯಾಗಿರುತ್ತದೆ. 

ಶಾಸಕರು, ಸಂಸದರು ಇವರಿಗೆಲ್ಲ ಮನೆ ನೀಡುವ ಭರವಸೆ ನೀಡುತ್ತಾರೆಯೇ ಹೊರತು ಯಾವುದೂ ಕಾರ್ಯಗತವಾಗಿಲ್ಲ. ಹೀಗಾಗಿ ಎಲ್ಲೂ ಇವರಿಗೆ ಪಕ್ಕಾಮನೆಯಿಲ್ಲ. ತಾತ್ಕಾಲಿಕ ಮನೆಯೇ ಇವರಿಗೆ ‘ಕಾಯಂ‘ ಆಗಿದೆ.

ಯಾರಿವರು, ಎಲ್ಲಿಂದ ಬಂದರು? ಸಾಹಿತ್ಯದ ಮೂಲವೇನು? ಎಂಬ ಪ್ರಶ್ನೆಗಳನ್ನಿರಿಸಿಕೊಂಡು ಸಾಕಷ್ಟು ಅಧ್ಯಯನಗಳು ಹಂಪಿ ವಿಶ್ವವಿದ್ಯಾಲಯದಲ್ಲಿ ನಡೆದಿವೆ. 

ತೆಲುಗುಮಿಶ್ರಿತ ಕನ್ನಡ ಭಾಷೆಯಲ್ಲಿ ಮಾತನಾಡುವ ಇವರು ತೆಲುಗು ಮೂಲದ ಮಹಾಕಾವ್ಯಗಳನ್ನು ಕನ್ನಡಕ್ಕೆ ಅನುವಾದಿಸಿ ಹಾಡುತ್ತಾರೆ. ಪಾತ್ರವಾಡುತ್ತಾರೆ. ಬೊಂಬೆಯನ್ನು ಹೊತ್ತುಕೊಂಡೂ ಮೆರವಣಿಗೆಯಲ್ಲಿ ನಡೆಯುತ್ತಾರೆ. ಮಹಾಕಾವ್ಯವನ್ನು ಹಾಡುವವರು, ನಟಿಸುವವರು ಹಗಲುವೇಷಗಾರರು ಎಂದೆನಿಸಿಕೊಳ್ಳುತ್ತಾರೆ. ಬೊಂಬೆ ಹೊರುವವರು ಗಾರುಡಿಗರು ಎಂದೂ, ಬೇಟೆಯಾಡುವವರು, ಕತ್ತಿವರಸೆ ಮಾಡುವವರು ವೇಷಗಾರರು ಎಂದೂ ಕರೆಯಿಸಿಕೊಳ್ಳುತ್ತಾರೆ. ಒಟ್ಟಾರೆಯಾಗಿ ಈ ಅಲೆಮಾರಿ ಬುಡಕಟ್ಟನ್ನು ಬುಡ್ಗ ಜಂಗಮ ಎಂದೂ ಕರೆಯಲಾಗುತ್ತದೆ.

ಟೆಂಟ್‌ಗಳಲ್ಲಿ ವಾಸಮಾಡುತ್ತಿರುವ ವೇಷಗಾರರು
ಟೆಂಟ್‌ಗಳಲ್ಲಿ ವಾಸಮಾಡುತ್ತಿರುವ ವೇಷಗಾರರು

‘ಬುಡ್ಗ ಜಂಗಮ ದರ್ಶಿನಿ’ ಎಂಬ ಕೃತಿ ರಚಿಸಿರುವ ಬುಡಕಟ್ಟು ಅಧ್ಯಯನ ವಿಭಾಗದ ಪ್ರೊ.ಕೆ.ಎಂ.ಮೇತ್ರಿ ಅವರು ಕನ್ನಡ ವಿಶ್ವವಿದ್ಯಾಲಯದಲ್ಲಿ ಹಗಲುವೇಷಗಾರರ ಕುರಿತಂತೆ ಸಾಕಷ್ಟು ಕೆಲಸ ಮಾಡಿದ್ದಾರೆ ಹಾಗೂ ಈ ಸಮುದಾಯದಲ್ಲೇ ಹುಟ್ಟಿ, ಬೆಳೆದ ಪ್ರೊ.ಅಶ್ವರಾಮು ಅವರಂತಹ ಯುವ ಉತ್ಸಾಹಿಗಳಿಗೆ ಉನ್ನತ ಅಧ್ಯಯನಕ್ಕೆ ಮಾರ್ಗದರ್ಶನ ನೀಡಿದ್ದಾರೆ. ಹಗಲುವೇಷಗಾರರ ಕುರಿತಂತೆ ವಿಶ್ವವಿದ್ಯಾಲಯದಿಂದ ಪರಿಚಯ, ನಿಘಂಟಿನ ಕೆಲಸ ನಡೆಯದಿದ್ದರೂ, ಹಲವು ಅಧ್ಯಯನ ಗ್ರಂಥಗಳು ಪ್ರಕಟಗೊಂಡಿವೆ.

ಎಳನಾಡು ಅಂಜನಪ್ಪ ಅವರ ‘ಹಗಲುವೇಷಧಾರಿಗಳ ಸಾಂಸ್ಕೃತಿಕ ಅಧ್ಯಯನ’, ಬಿ.ಎಂ.ಹೊಸಮನಿ ಅವರ ‘ಕರ್ನಾಟಕದಲ್ಲಿ ವೇಷಗಾರರು–ಒಂದು ಸಾಂಸ್ಕೃತಿಕ ಅಧ್ಯಯನ’,  ಹಿ.ಚಿ.ಬೋರಲಿಂಗಯ್ಯ ಅವರ ‘ಕರ್ನಾಟಕ ಜನಪದ ಕಲೆಗಳ ಕೋಶ‘, ವೆಂಕನಗೌಡ ಅವರ ‘ಬಳ್ಳಾರಿ ಮತ್ತು ಆಂಧ್ರ ಗಡಿ ಭಾಗದ ಹಗಲುವೇಷಧಾರಿಗಳು–ಒಂದು ಅಧ್ಯಯನ’, ಪ್ರೊ.ಅಶ್ವರಾಮು ಅವರ ‘ಬುಡ್ಗ ಜಂಗಮರು–ಒಂದು ಅಧ್ಯಯನ’, ಪ್ರತಾಪ ಬಹುರೂಪಿ ಮತ್ತು ಬಾಲಗುರುಮೂರ್ತಿ ಅವರ ‘ಬುಡ್ಗ ಜಂಗಮರು’ ಕೃತಿಗಳನ್ನು ಓದಿದರೆ ಹಗಲುವೇಷಗಾರರ ಬದುಕು, ಸಂಸ್ಕೃತಿಯ ಆಳ ಅಗಲವನ್ನು ತಿಳಿದುಕೊಳ್ಳಬಹುದು.

1982ರಲ್ಲಿ ಎಚ್‌.ಎಲ್‌.ನಾಗೇಗೌಡರು ಜಾನಪದ ಅಕಾಡೆಮಿ ಅಧ್ಯಕ್ಷರಾಗಿದ್ದ ವೇಳೆ ಹಗಲುವೇಷಗಾರ ರಾಮಣ್ಣ ಅವರಿಗೆ ಅಕಾಡೆಮಿ ಪ್ರಶಸ್ತಿ ಲಭಿಸಿತ್ತು. ಈ ಸಮುದಾಯವನ್ನು ಗುರುತಿಸುವ ಪ್ರಥಮ ಪ್ರಯತ್ನ ಇದು. ಹಂಪಿ ವಿರೂಪಾಕ್ಷ ಬುಡ್ಗ ಜಂಗಮ ಸಾಂಸ್ಕೃತಿಕ ಹಗಲುವೇಷ ಕಲಾವಿದರ ಸಂಘವನ್ನು ಕಟ್ಟಿ, ಮುನ್ನಡೆಸುತ್ತಿರುವ ಕೆ.ರಾಮು ಕಡ್ಡಿರಾಂಪುರ ಅವರು 2014ರಿಂದ ಮೂರು ವರ್ಷಗಳ  ಕಾಲ ಜಾನಪದ ಅಕಾಡೆಮಿಯ ಸದಸ್ಯರಾಗಿದ್ದರು. ಈ ಸಮುದಾಯಕ್ಕೆ ದೊರೆತ ಮೊದಲ ದೊಡ್ಡ ಪ್ರಾತಿನಿಧ್ಯ ಅದಾಗಿತ್ತು. ಪ್ರೊ.ಕೆ.ಎಂ.ಮೇತ್ರಿ ಅವರು ದರೋಜಿ  ಬುರ್ರಕಥಾ ಈರಮ್ಮ ಹೆಸರಲ್ಲಿ ದತ್ತಿನಿಧಿ ಸ್ಥಾಪಿಸಿದ್ದಾರೆ. ಅಲೆಮಾರಿ ಸಮುದಾಯಗಳಿಗಾಗಿಯೇ ಪ್ರತ್ಯೇಕ ಅಕಾಡೆಮಿ ಸ್ಥಾಪಿಸಿದರೆ ಮಾತ್ರ ಅವರ ಸಂಸ್ಕೃತಿ ಉಳಿಸುವ ಕೆಲಸ ನಡೆಯುತ್ತದೆ ಎನ್ನುವುದು ಈ ಸಮುದಾಯವನ್ನು ಅಧ್ಯಯನ ಮಾಡಿದವರ ಅಭಿಪ್ರಾಯವಾಗಿದೆ.

ಅಧ್ಯಯನ, ಸಂಶೋಧನೆಗಳಿಂದ ಸಮುದಾಯಗಳ ಬದುಕು ಬದಲಾಯಿತೆ? ಇಲ್ಲವೇ ಇಲ್ಲ. ಈಗಲೂ ಈ ಸಮುದಾಯದ ಮಹಿಳೆಯರು ಊರಲ್ಲಿ ಓಡಾಡಿ, ಕೂದಲು ಸಂಗ್ರಹಿಸಿ, ಪಿನ್ನು ಟಿಕಳಿ, ಪ್ಲಾಸ್ಟಿಕ್‌ ವಸ್ತುಗಳ ಮಾರಾಟ ಮಾಡುತ್ತಾರೆ. ಮನೆಗೆಲಸವನ್ನೆಲ್ಲ ಪೂರೈಸಿ, ಈ ತಿರುಗಾಟ ಶುರುವಾದರೆ ಬಿಸಿಲು ನೆತ್ತಿಗೇರುವಾಗ ಮನೆಗೆ ಮರಳುತ್ತಾರೆ. 

ಹದಿನೈದರಿಂದ ಇಪ್ಪತ್ತೈದು ಕೇಜಿ ಭಾರ ಇರುವ ಗಾರುಡಿ ಗೊಂಬೆ ಹೊತ್ತು ನಡೆಯುವುದು, ಮೈ ತುಂಬ ಬಣ್ಣ ಬಳಿದುಕೊಂಡು, ಪಾತ್ರಕ್ಕೆ ತಕ್ಕ ವೇಷ ಧರಿಸಿ, ಕತೆ ಹೇಳುವುದು; ಇದೆಲ್ಲವೂ ನೋಡಿದಷ್ಟು ಸಲೀಸಲ್ಲ.

ನಮಗೆ ಭೂಮಿ ಇಲ್ಲ. ಅಲೆಮಾರಿ ಜೀವನ. ಕಲೆ ಬಿಟ್ಟು ಬೇರೆ ಜಗತ್ತು ಗೊತ್ತಿಲ್ಲ. ಮಾಸಾಶನ, ಗೌರವಧನ ಸರಿಯಾಗಿ ತಲುಪುತ್ತಿಲ್ಲ. ಶಾಲಾ– ಕಾಲೇಜು, ಊರುಗಳಲ್ಲಿ ಪ್ರದರ್ಶನ ನೀಡುವ ವಿಶೇಷ ಅವಕಾಶ ನೀಡಬೇಕು. ಬೆರಳೆಣಿಕೆಯಷ್ಟಿರುವ ಸಮುದಾಯವನ್ನು ರಕ್ಷಿಸಬೇಕು. ಅಲೆಮಾರಿಗಳಲ್ಲಿ 115 ಜಾತಿಗಳಿವೆ. ಪರಿಶಿಷ್ಟ ಜಾತಿಯಲ್ಲಿ ಬರುವ ಬುಡ್ಗ ಜಂಗಮ ಸಮುದಾಯವೂ ಸೇರಿದಂತೆ ಕಲೆಯನ್ನು ನಂಬಿರುವವರಿಗೆ ಸರ್ಕಾರ ನೆರವಾಗಬೇಕು.
–ಅಮರೇಶ ಹಸಮಕಲ್‌, ಮಸ್ಕಿ, ರಾಯಚೂರು

ಅತಿ ಭಾರದ ಮುಖವಾಡ, ಪಾತ್ರಕ್ಕೆ ತಕ್ಕುದಾದ ವೇಷ ಧರಿಸಿದಾಗ ಒಳಗಿದ್ದವರಿಗೆ ಬೆವರು ಮಳೆಯ ಹನಿಗಳಂತೆ ತೊಟ್ಟಿಕ್ಕುತ್ತದೆ. ನೀರು ಕುಡಿಯಲೂ ಕಷ್ಟ ಪಡಬೇಕು. ಕೆಲವೊಮ್ಮೆ ರಾಜಕಾರಣಿಗಳು ನಿಗದಿತ ಸಮಯಕ್ಕಿಂತ ತಡವಾಗಿ ಬಂದು, ಕಾರ್ಯಕ್ರಮ ಅಥವಾ ಮೆರವಣಿಗೆ ತಡವಾದರೆ ಇವರ ಜೀವ ಬಾಯಿಗೆ ಬಂದಿರುತ್ತದೆ ಎಂದು ಹುಬ್ಬಳ್ಳಿಯ ಹನುಮಂತಪ್ಪ ಲದ್ದಲ್‌ ಹೇಳುವರು. 

 ಈ ಬೊಂಬೆಗಳನ್ನು ಕೇರಳದಿಂದ ಮಾಡಿಸಿ ತರಿಸುತ್ತಾರೆ. ಒಂದು ಗೊಂಬೆ ಮಾಡಿಸಿದರೆ ಒಂದೊಂದು ತಲೆಮಾರೂ ತಮ್ಮ ಜೀವನ ನಿಭಾಯಿಸುತ್ತವೆ. ಸದ್ಯ 20 ಸಾವಿರ ಮೌಲ್ಯದ ಈ ಗೊಂಬೆಗಳನ್ನು ಕೊಳ್ಳಲು ಅವರು ಎಲ್ಲರೂ ಸೇರಿ ಹಣ ಹೂಡಿ ತರುತ್ತಾರೆ. ಕೆಲವೊಮ್ಮೆ ಅಗತ್ಯ ಇರುವಷ್ಟು ಹಣ ಕೂಡದಿದ್ದಾಗ ಎಲ್ಲಾದರೂ ಕೈಸಾಲ ಪಡೆಯುತ್ತಾರೆ. ಬಡ್ಡಿಗೆ ಸಾಲ ಪಡೆಯುವುದರಿಂದ ಬಂದ ಗೌರವಧನವನ್ನೆಲ್ಲ ಮೊದಲು ಸಾಲ ತೀರಿಸಲು ನೀಡಲಾರಂಭಿಸುತ್ತಾರೆ. 

ದಿನಗೂಲಿಗೆ ಹೋದವರು ಬಹಳಷ್ಟು ಜನ ತಮ್ಮ ಕಲೆಯಿಂದ ವಿಮುಖರಾಗುತ್ತಿದ್ದಾರೆ. ಆದರೆ  ಹೂವಿನ ಹಡಗಲಿಯ ಮೈಲಾರಪ್ಪ ಮತ್ತು ಅವರ ಕುಟುಂಬ, ಈ ಬಗ್ಗೆ ಸ್ಪಷ್ಟವಾಗಿ ಹೇಳುವುದು ಇಷ್ಟು, ‘ಹಲವಾರು ತಲೆಮಾರುಗಳಿಂದ ಅನ್ನ ನೀಡಿದ ಕಲೆ ಇದು. ಗಾರುಡಿ ಗೊಂಬೆಗಳಾದರೆ ನಮ್ಮನ್ನು ಕಾಯುತ್ತವೆ ಎನ್ನುವ ನಂಬಿಕೆಯೊಂದಿಗೆ ಬದುಕುತ್ತೇವೆ. ರಾಮಾಯಣದ ಪಾತ್ರಗಳನ್ನು ಆಡುವಾಗ, ಆ ಪಾತ್ರಗಳೇ ನಾವಾದಂತೆ ಇರ್ತೀವಿ. ಇದನ್ನು ಕೈಬಿಟ್ಟರೆ ನಮ್ಮ ಇರುವಿಕೆಗೆ ಏನು ಅರ್ಥವಿದೆ? ನಮ್ಮ ಗುರುತೇ ಈ ಕಲೆ. ಕಲೆ ಬಿಟ್ಟರೆ ಬೇರೆ ಯಾವುದೂ ನಮ್ಮ ಕೈ ಹಿಡಿಯುವುದಿಲ್ಲ. ಕೊನೆಯುಸಿರು ಇರುವವರೆಗೂ ನಮ್ಮ ಮನೆತನದ ಮಕ್ಕಳಿಗೆ ಕಲಿಸುತ್ತಲೇ ಇರುತ್ತೇವೆ. ಜೀವನಕ್ಕೆ ಆಗದಿದ್ದರೂ, ಸೇವೆಗೆ, ಆರಾಧನೆಗಂತೂ ಇದು ಗೊತ್ತಿರಲೇಬೇಕು‘ ಇದು ಮೈಲಾರಪ್ಪನವರ ಮಾತು ಆದರೂ ಪ್ರತಿ ಕಲಾವಿದ ಇದನ್ನೇ ಹೇಳುತ್ತಾರೆ.

ಹುಬ್ಬಳ್ಳಿಯ ಗೋಪನಕೊಪ್ಪದ ಮಹಾಲಕ್ಷ್ಮಿಬಡಾವಣೆಯಲ್ಲಿ ಗೊಂಬೆ ಕುಣಿತ ಕಲಾವಿದರು ವಾಸವಾಗಿರುವ ಜೋಪಡಿಗಳು
ಹುಬ್ಬಳ್ಳಿಯ ಗೋಪನಕೊಪ್ಪದ ಮಹಾಲಕ್ಷ್ಮಿಬಡಾವಣೆಯಲ್ಲಿ ಗೊಂಬೆ ಕುಣಿತ ಕಲಾವಿದರು ವಾಸವಾಗಿರುವ ಜೋಪಡಿಗಳು

ಸರ್ಕಾರ ಏನು ಕ್ರಮಕೈಗೊಂಡಿದೆ?: ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಈ 2022–23ನೇ ಸಾಲಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ‘ಮೂಲ ಸಂಸ್ಕೃತಿ–ಕನ್ನಡ ಸಂಸ್ಕೃತಿ’ ಶೀರ್ಷಿಕೆಯಡಿ ತಳ ಸಮುದಾಯದ ವಿಶಿಷ್ಟ ಕಲೆಗಳ ಕುರಿತು ಯುವಕರಿಗೆ 20 ದಿನಗಳ ತರಬೇತಿ ನೀಡಲಾಗಿತ್ತು. ಅದಕ್ಕಾಗಿ ಪ್ರತಿ ಜಿಲ್ಲೆಯಲ್ಲಿ ಐದು ಕಲಾ ಪ್ರಕಾರ ಗುರುತಿಸಲಾಗಿತ್ತು. ಈ ಭಾಗದಲ್ಲಿ ಹಗಲುವೇಷ ಕಲೆ ಸಮೃದ್ಧವಾಗಿದೆ. ಆದರೆ, ಹಗಲುವೇಷ ಕಲಾವಿದರಿಗೆ ತರಬೇತಿ ದಕ್ಕಿದ್ದು ಬಳ್ಳಾರಿ ಜಿಲ್ಲೆಯಲ್ಲಷ್ಟೇ. ಇದಿಷ್ಟು ಬಿಟ್ಟರೆ, ಸರ್ಕಾರದಿಂದ ಯಾವ ಬೆಂಬಲವೂ ಸಿಕ್ಕಿಲ್ಲ.

‘ಬೆಂಗಳೂರು–ತುಮಕೂರು ಹಾಗೂ ಹಾವೇರಿ ಭಾಗದಿಂದ ಗಾರುಡಿ ಗೊಂಬೆಗಳನ್ನು ತಂದು ಕಲೆ ಪ್ರದರ್ಶಿಸುತ್ತಿದ್ದೇವೆ. ಸಿಗುತ್ತಿರುವ ಆದಾಯ ಅಷ್ಟಕ್ಕಷ್ಟೇ. ಈಗ ಬೇರೆ ಉದ್ಯೋಗ ಅನಿವಾರ್ಯ’ ಎನ್ನುತ್ತಾರೆ ಗಾರುಡಿಗೊಂಬೆ ಕಲಾವಿದರಾದ ಕಲಬುರಗಿಯ ತಿಪ್ಪಣ್ಣ ವಾಲೀಕಾರ ಹಾಗೂ ವಡಗೇರಾದ ರೆಡ್ಡಿ ಪೂಜಾರಿ. ‘ಬೀದರ್‌ ಜಿಲ್ಲೆಯಲ್ಲಿ ಹಿಂದೆ ಬೊಂಬೆ ಕುಣಿತ ನಡೆಯುತ್ತಿತ್ತು. ಈಗ ಇಲ್ಲಿ ಆ ಕಲೆ ಸಂಪೂರ್ಣ ನಶಿಸಿ ಹೋಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ಅದನ್ನು ಬೆಳೆಸಲು ಕ್ರಮ ಕೈಗೊಳ್ಳಬೇಕಿದೆ’ ಎನ್ನುತ್ತಾರೆ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ವಿಜಯಕುಮಾರ ಸೋನಾರೆ.

‘ಬೊಂಬೆ ಹಬ್ಬ ಅಂತ ದಕ್ಷಿಣದೊಳಗ ಮನಿಮನಿಯಾಗ ಗೊಂಬಿ ಕುಂದರ್ಸಿ ಪೂಜಾ ಮಾಡ್ತಾರಂತ್ರಿ. ಪ್ರತಿ ಪೂಜಾದಾಗೂ ನಾವೇ ಗೊಂಬಿಯಾಗಿ ಕುಣೀತೀವಿ. ದೇವರಂತೂ ಕಲ್ಲದಾನ. ಅಂವಾ ಇಟ್ಟಂಗ ಇರ್ತೀವಿ. ಕೊನೀತನಾನೂ ಕುಣೀತೀವಿ. ಆದ್ರ ವ್ಯವಸ್ಥೆಯೊಳಗಂತೂ ಮನಷಾರೆ ಅದಾರಲ್ರಿ. ನಮಗೂ ಮನಷಾರಹಂಗ ನೋಡಿದ್ರ, ನಾವೂ ಉಳೀತೀವಿ, ನಮ್ಮ ಕಲೆನೂ ಉಳೀತದ್ರಿ. ಇಲ್ಲಾಂದ್ರ ನಮ್ಮಜೊತಿಗೆ ಮಣ್ಣಾಗ್ತದ್ರಿ. ಮಂದಿ ನಮಗ ಕಣ್ಣರಳಿಸಿ ನೋಡ್ತಾರ. ಸರ್ಕಾರ, ಅಧಿಕಾರಿಗಳು ಕಣ್ತೆರೆದು ನೋಡಿದ್ರ, ನಮ್ಮ ಬಾಳೂ ಹಸನಾದೀತು ಅಂತನಿಸ್ತದ್ರಿ‘ ಮೈಲಾರಪ್ಪನವರ ಈ ಮಾತು ವ್ಯವಸ್ಥೆಯ ಕಣ್ತೆರೆಸಬೇಕಿದೆ.

ಸಂಘರ್ಷದ ಬದುಕನ್ನೂ ತನ್ನ ಪಾಡು ತನಗಿರಲಿ, ಹಾಡಷ್ಟೇ ನಿಮಗೆ ಸಮರ್ಪಿಸುವೆ ಎಂಬಂತೆ ಈ ಸಮುದಾಯ ಬದುಕುತ್ತಿದೆ. ಮನರಂಜನೆಗೆ, ಮೆರವಣಿಗೆಗೆ ಮೆರುಗು ತರುವ ಈ ಗಾರುಡಿ ಗೊಂಬೆ, ಹಗಲುವೇಷಗಾರರು, ದಲಪಟಾ ಕಲಾವಿದರು, ಬುಡ್ಗ ಜಂಗಮರು ಹೀಗೆ ವಿವಿಧ ಹೆಸರುಗಳಿಂದ ಕರೆಯಲಾಗುವ ಈ ಕಲಾವಿದರ ಬದುಕು ಹಸನಾಗಬೇಕು. ಆ ಕಲೆಯನ್ನೂ ಶಾಶ್ವತವಾಗಿ ಉಳಿಯುವಂತೆ ವಿಶ್ವವಿದ್ಯಾಲಯಗಳಲ್ಲಿ ಪಾಠ ಹೇಳುವಂತಾಗಬೇಕು. ಬೊಂಬೆ ತಯಾರಿ, ರಿಪೇರಿಗಳ ತರಬೇತಿಯೂ ಆಗಬೇಕು ಎನ್ನುವುದು ಸಂಶೋಧಕರ ಅಭಿಪ್ರಾಯ.

ಪೂರ್ವಜರು ಆಂಧ್ರದಿಂದ ಬಂದರು ಎಂದು ಹೇಳುವ ಈ ಅಲೆಮಾರಿಗಳು ಕನ್ನಡದ ಕತೆಗಳಿಗೆ ಧ್ವನಿಯಾಗಿದ್ದಾರೆ. ಕನ್ನಡ ಜನಪದ ಲೋಕದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಅಲಕ್ಷ್ಯದಿಂದ, ನಿರ್ಲಕ್ಷ್ಯದಿಂದ ಇವರೆಲ್ಲ ಇತಿಹಾಸದ ಪುಟ ಸೇರುವಮುನ್ನ ಜನಪದವನ್ನು ಉಳಿಸಬೇಕಿದೆ.

ಹುಬ್ಬಳ್ಳಿಯ ಗೋಪನಕೊಪ್ಪದ ಮಹಾಲಕ್ಷ್ಮಿ ಬಡಾವಣೆಯಲ್ಲಿ ಗೊಂಬೆ ಕುಣಿತ ಕಲಾವಿದರು ವಾಸವಾಗಿರುವ ಜೋಪಡಿಗಳು
ಹುಬ್ಬಳ್ಳಿಯ ಗೋಪನಕೊಪ್ಪದ ಮಹಾಲಕ್ಷ್ಮಿ ಬಡಾವಣೆಯಲ್ಲಿ ಗೊಂಬೆ ಕುಣಿತ ಕಲಾವಿದರು ವಾಸವಾಗಿರುವ ಜೋಪಡಿಗಳು

ಬೀದಿಕಲೆಯಲ್ಲ, ಮೌಲ್ಯಗಳ ಗುಚ್ಛ

‘ಹಗಲುವೇಷ ಉತ್ತರ ಕರ್ನಾಟಕದೆಲ್ಲಡೆ ಕಾಣಬಹುದು. ಈ ಆಧುನಿಕ ಕಾಲದಲ್ಲೂ ಈ ಕಲೆಗಳ ಬಗ್ಗೆ ಗ್ರಾಮೀಣ ಭಾಗದಲ್ಲಿ ಆಸಕ್ತಿಯಿದೆ. ಆದರೆ, ಪ್ರೋತ್ಸಾಹ ಕಡಿಮೆಯಾಗಿದೆ. ಶಿಷ್ಟ ಕಲಾಪ್ರಕಾರಗಳ ಕಲಾವಿದರಿಗೆ ಸಿಗುವ ಗೌರವ–ಸಮ್ಮಾನ, ಸಂಭಾವನೆ ಇವರಿಗೆ ಸಿಗುವುದಿಲ್ಲ. ಇವೆಲ್ಲ ಬೀದಿ ಕಲೆ ಎಂಬ ಅಸಡ್ಡೆ ಇದಕ್ಕೆಲ್ಲ ಕಾರಣ. ಹೀಗಾಗಿ ಸಮೃದ್ಧ ಕಲೆಗಳೀಗ ಅಳಿವಿನಂಚಿನಲ್ಲಿವೆ’ ಎನ್ನುತ್ತಾರೆ ಅಲೆಮಾರಿ ಬುಡಕಟ್ಟು ಜನಪದ ಕಲೆಗಳ ಸಂಶೋಧಕರಾದ ‌ವಿಜಯನಗರದ ದರೋಜಿ ಗ್ರಾಮದ ಪ್ರೊ.ಅಶ್ವರಾಮು.

‘ಹಗಲುವೇಷದಲ್ಲಿ ಕಲಾವಿದರು ಬರೀ ಬಣ್ಣಹಾಕಿ ನಟಿಸಲ್ಲ, ಅವರೆಲ್ಲ ಬಹುಮುಖಿ ಕಲಾವಿದರು. ಅವರಲ್ಲಿ ಸಂಗೀತ, ಸಾಹಿತ್ಯ, ಸಂಸ್ಕೃತಿ ಎಲ್ಲವೂ ಮಿಳಿತವಾಗಿದೆ. ಅವರೇ ತಬಲಾ, ಹಾರ್ಮೊನಿಯಂ ನುಡಿಸುತ್ತಾರೆ, ತಮಟೆ ಬಾರಿಸುತ್ತಾರೆ. ಸ್ವಯಂ ಸಂಭಾಷಣೆಯನ್ನೂ ಹೇಳುತ್ತಾರೆ. ಖುದ್ದು ಮೇಕಪ್‌ ಮಾಡಿಕೊಳ್ಳುತ್ತಾರೆ’ ಎನ್ನುತ್ತಾರೆ ಅವರು.

‘ಯಾರು ಕಲೆಯನ್ನು ಪ್ರಧಾನ ವೃತ್ತಿಯಾಗಿಸಿಕೊಂಡಿದ್ದಾರೋ ಅಂಥ ಕಲಾವಿದರನ್ನು ಸರ್ಕಾರ ಗುರುತಿಸಿ, ಅವರಿಗೆ ಪ್ರತ್ಯೇಕ ಯೋಜನೆ ರೂಪಿಸಬೇಕು. ಪ್ರಾಥಮಿಕ ಶಾಲೆ–ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ರಂಗ ಶಿಕ್ಷಕರನ್ನಾಗಿ ನೇಮಿಸಬೇಕು. ಅದರಿಂದ ಕಲಾವಿದರಿಗೆ ಜೀವನೋಪಾಯ ಸಿಗುತ್ತದೆ. ವಿದ್ಯಾರ್ಥಿಗಳಿಗೂ ರಾಮ–ಲಕ್ಷ್ಮಣರ ರೂಪ, ಭಾವ, ಗುಣ, ಮೌಲ್ಯಗಳ ಪರಿಚಯವಾಗುತ್ತದೆ’ ಎಂಬುದು ಅವರ ಪ್ರತಿಪಾದನೆ.

ನಮ್ಮ ಮಾತೃಭಾಷೆ ತೆಲುಗು. ಭೀಮಾಂಜನೇಯ ಯುದ್ಧ, ಮೋಹಿನಿ– ಭಸ್ಮಾಸುರ, ಸುಂದ– ಉಪಸುಂದರ ವಧೆ, ಜಟಾಸುರ ವಧೆ, ರಾಮಾಯಣ, ಶೂರ್ಪನಖಿ ಗರ್ವಭಂಗ ಸೇರಿದಂತೆ ಎಲ್ಲ ಪ್ರಸಂಗಗಳನ್ನು ಕನ್ನಡಕ್ಕೆ ಭಾಷಾಂತರ ಮಾಡಿ ಆಡುತ್ತೇವೆ. ಮಹಿಳೆಯರು ಬುರ‍್ರಾಕಥಾ, ಗಂಗೆ–ಗೌರಿ ಗಾಯನ ಮಾಡಿ ಜೀವನ ಮಾಡುತ್ತಾರೆ.  ವೇದಿಕೆಗಳಲ್ಲಿ 25 ನಿಮಿಷಗಳ ಕಲಾ ಪ್ರದರ್ಶನ ನೀಡುವ ಕಲಾವಿದರಿಗೆ ಸಿಗುವ ದೊಡ್ಡ ಮಟ್ಟದ ಸಂಭಾವನೆ, ದಸರಾ ಜಂಬೂಸವಾರಿ ವೇಳೆ ಬಿಸಿಲಿನಲ್ಲಿ ಸಾಗುವ ಕಲಾವಿದರಿಗೆ ಸಿಗುವುದೇ ಇಲ್ಲ. ಜಿಲ್ಲಾ ಕೇಂದ್ರಕ್ಕೆ ಮಾತ್ರ ಪ್ರಯಾಣ ಭತ್ಯೆ ನೀಡಲಾಗುತ್ತದೆ. ಅಲ್ಲಿಂದ ಮತ್ತೆ ತಮ್ಮ ಹಳ್ಳಿಗಳಿಗೆ ತೆರಳಬೇಕೆಂದರೆ ತಮ್ಮ ಹಣವನ್ನೇ ಬಳಸಬೇಕು.

ಪೂರಕ ಮಾಹಿತಿ: ಎಂ.ಜಿ. ಬಾಲಕೃಷ್ಣ, ಸತೀಶ ಬಿ, ಬಸೀರ್‌ ಅಹ್ಮದ್ ನಗಾರಿ, ಮೋಹನ್‌ ಕುಮಾರ ಸಿ. ಚಿತ್ರಗಳು: ಗುರು ಹಬೀಬ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT