ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಪಟಾಕಿ– ಅಕ್ರಮದ್ದೇ ಕಾರುಬಾರು

Published 14 ಅಕ್ಟೋಬರ್ 2023, 20:40 IST
Last Updated 14 ಅಕ್ಟೋಬರ್ 2023, 20:40 IST
ಅಕ್ಷರ ಗಾತ್ರ

ಬೆಂಗಳೂರು: ವಿದ್ಯಾಭ್ಯಾಸದಲ್ಲಿ ಮುಂದಿದ್ದ ಅವರೆಲ್ಲರೂ ಜೀವನದಲ್ಲಿ ಸಾಧನೆಯ ಕನಸು ಕಂಡಿದ್ದವರು. ಮನೆಯಲ್ಲಿದ್ದ ಬಡತನಕ್ಕೆ ಮರುಗಿ ತಂದೆ– ತಾಯಿಗೆ ಆಸರೆಯಾಗಲು ಕೂಲಿ ಕೆಲಸಕ್ಕೆ ಬಂದಿದ್ದವರು. ನಿಯಮಗಳನ್ನು ಗಾಳಿಗೆ ತೋರಿ ‘ಅಕ್ರಮ’ದಿಂದ ನಿರ್ಮಿಸಿದ್ದ ಪಟಾಕಿ ಗೋದಾಮಿನ ದುರಂತದಲ್ಲಿ ಅವರೆಲ್ಲರೂ ಜೀವ ಕಳೆದುಕೊಂಡಿದ್ದಾರೆ.

ಇದು, ಬೆಂಗಳೂರು ಹೊರವಲಯದ ಅತ್ತಿಬೆಲೆಯಲ್ಲಿ ಇತ್ತೀಚೆಗೆ ಸಂಭವಿಸಿದ್ದ ಪಟಾಕಿ ದುರಂತದಲ್ಲಿ ಮೃತಪಟ್ಟವರ ದಾರುಣ ಕಥೆ. ದುರಂತದಲ್ಲಿ 16 ಮಂದಿ ಸಾವಿಗೀಡಾಗಿದ್ದು, ಪಟಾಕಿ ಅಕ್ರಮ ದಾಸ್ತಾನು– ವಹಿವಾಟಿಗೆ ಈ ಸಾವುಗಳೇ ನಿದರ್ಶನವಾಗಿವೆ.

ತಮಿಳುನಾಡು ಗಡಿಗೆ ಹೊಂದಿ ಕೊಂಡಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅತ್ತಿಬೆಲೆಯಿಂದ ಶುರುವಾಗುವ ಪಟಾಕಿ ‘ಅಕ್ರಮ’ ವಹಿವಾಟು, ಇಡೀ ರಾಜ್ಯ ಹಾಗೂ ಹೊರ ರಾಜ್ಯದವರೆಗೆ ವ್ಯಾಪಿಸಿದೆ. ಬೇಡಿಕೆ ಇಲ್ಲದ ದಿನಗಳಂದು ಹೆಚ್ಚು ಪಟಾಕಿ ಖರೀದಿಸಿ ದಾಸ್ತಾನು ಮಾಡುತ್ತಿರುವ ವ್ಯಾಪಾರಿಗಳು, ಬೇಡಿಕೆ ದಿನಗಳಂದು (ದೀಪಾವಳಿ ಹಾಗೂ ಇತರೆ ಸಂದರ್ಭ) ಮಾರಾಟ ಮಾಡಿ ಲಾಭ ಗಳಿಸುತ್ತಿದ್ದಾರೆ. ಇಂಥವರ ಲಾಭದ ಲೆಕ್ಕಾಚಾರದಲ್ಲಿ ಅಮಾಯಕರ ಕುಟುಂಬಗಳು, ‘ದುಡಿಯುವ ಮನೆಮಕ್ಕಳ’ನ್ನು ಕಳೆದು ಕೊಂಡು ಬೀದಿ ಪಾಲಾಗುತ್ತಿವೆ.

ಬಡತನ, ನಿರುದ್ಯೋಗ, ಸಾಲ ಹಾಗೂ ಇತರೆ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವ ಹಲವು ಪುರುಷ–ಮಹಿಳೆಯರು, ಪಟಾಕಿ ಮಳಿಗೆ– ಗೋದಾಮಿ
ನಲ್ಲಿ ಕೆಲಸ ಮಾಡುತ್ತಿದ್ದಾರೆ. ಪಟಾಕಿ ಬಾಕ್ಸ್‌ಗಳ ಸಾಗಣೆ, ಪಟಾಕಿಗಳ ಮರು ಪ್ಯಾಕಿಂಗ್ ಹಾಗೂ ಮಾರಾಟ ಪ್ರಕ್ರಿಯೆಯಲ್ಲಿ ದುಡಿಯುತ್ತಿದ್ದಾರೆ. ಆದರೆ, ನಿಯಮ ಮೀರಿ ನಿರ್ಮಿಸುತ್ತಿ
ರುವ ಪಟಾಕಿ ಮಳಿಗೆ ಹಾಗೂ ಗೋದಾಮುಗಳಲ್ಲಿ ಅಗ್ನಿ ಅವಘಡ ಸಂಭವಿಸಿದಾಗ ಅಮಾಯಕರು ಜೀವ ಕಳೆದುಕೊಳ್ಳುತ್ತಿದ್ದಾರೆ.

ಸ್ಫೋಟಕಗಳ ಸಾಲಿಗೆ ಸೇರುವ ಪಟಾಕಿಯ ಉತ್ಪಾದನೆ, ದಾಸ್ತಾನು, ಸಾಗಣೆ ಹಾಗೂ ಮಾರಾಟ ರೂಪುರೇಷೆ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ನಿಯಮಗಳನ್ನು ರೂಪಿಸಿವೆ.

ಆದರೆ, ನಿಯಮಗಳನ್ನು ಮೀರಿ ಪಟಾಕಿ ವ್ಯವಹಾರ ನಡೆಯುತ್ತಿದೆ. ಪಟಾಕಿ ತಯಾರಕರು ಹಾಗೂ ಮಾರಾಟಗಾರರು, ಹಲವು ಇಲಾಖೆಯ ಕೆಲ ಅಧಿಕಾರಿಗಳ ಕೈ ಬಿಸಿ ಮಾಡಿ ರಾಜಾರೋಷವಾಗಿ ಪಟಾಕಿ ಅಕ್ರಮ ವಹಿವಾಟು ನಡೆಸುತ್ತಿರುವ ಆರೋಪವಿದೆ.

‘ಹಲವು ವರ್ಷಗಳಿಂದ ಈ ಅಕ್ರಮ ವಹಿವಾಟು ನಡೆಯುತ್ತಿದೆ. ಕಾನೂನು ಜಾರಿಮಾಡಬೇಕಾದ ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಪುರಸಭೆ, ಅಗ್ನಿಶಾಮಕ ದಳ, ವಿದ್ಯುತ್ ಸರಬರಾಜು ಕಂಪನಿಗಳ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಇವರೆಲ್ಲರ ನಿರ್ಲಕ್ಷ್ಯದಿಂದಲೇ ಮೇಲಿಂದ ಮೇಲೆ ಅವಘಡಗಳು ಸಂಭವಿಸುತ್ತಿವೆ’ ಎಂದು ಅತ್ತಿಬೆಲೆಯ ನಿವಾಸಿಗಳು ದೂರಿದರು.

ಹಬ್ಬಕ್ಕೆ ತಾತ್ಕಾಲಿಕ ಪರವಾನಗಿ: ದೀಪಾವಳಿ, ಗಣೇಶ ಹಬ್ಬದಂದು ಪಟಾಕಿಗಳಿಗೆ ಬೇಡಿಕೆ ಹೆಚ್ಚು. ಇಂಥ ಸಂದರ್ಭದಲ್ಲಿ ಪಟಾಕಿಗಳ ಮಾರಾಟಕ್ಕೆ ತಾತ್ಕಾಲಿಕ ಅನುಮತಿ ನೀಡಲಾಗುತ್ತದೆ. ಕಮಿಷನರೇಟ್ ವ್ಯಾಪ್ತಿಯಲ್ಲಿ ಪೊಲೀಸ್ ಕಮಿಷನರ್ ಹಾಗೂ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳು, ಸಂಬಂಧಪಟ್ಟ ಇಲಾಖೆಗಳಿಂದ ಎನ್‌ಒಸಿ ಪಡೆದುಕೊಂಡು ಅನುಮತಿ ಮಂಜೂರು ಮಾಡುತ್ತಾರೆ.

‘ಹಬ್ಬದ ದಿನಗಳಂದು ಕನಿಷ್ಠ 3 ದಿನ ಹಾಗೂ ಗರಿಷ್ಠ 5 ದಿನ ಪಟಾಕಿ ಮಾರಾಟಕ್ಕೆ ಅನುಮತಿ ನೀಡಲು ಅವಕಾಶವಿದೆ. ತೆರೆದ ಸ್ಥಳ ಅಥವಾ ಮೈದಾನದಲ್ಲಿ ಮಳಿಗೆಗಳನ್ನು ತೆರೆದು ಪಟಾಕಿ ಮಾರಬಹುದಾಗಿದೆ. ಆದರೆ, ಪಟಾಕಿ ಸಂಗ್ರಹ ಸಾಮರ್ಥ್ಯ ಗರಿಷ್ಠ 100 ಕೆ.ಜಿ ಮಾತ್ರ’ ಎಂದು ಅಗ್ನಿಶಾಮಕ ದಳ ಮತ್ತು ತುರ್ತು ಸೇವೆಗಳ ಇಲಾಖೆಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಹೇಳಿದರು.

ಸ್ಥಳೀಯ ನಿವಾಸಿ ಲಕ್ಷ್ಮಿಪತಿ, ’ತಾತ್ಕಾಲಿಕ ಪರವಾನಗಿ ಪಡೆದಿರುವ ವ್ಯಾಪಾರಿಗಳು, ದೊಡ್ಡ ಪ್ರಮಾಣದಲ್ಲಿ ಪಟಾಕಿ ಸಂಗ್ರಹಿಸಿ ಮಾರುತ್ತಿದ್ದಾರೆ. ಮಳಿಗೆಯಲ್ಲೂ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ. ಇಂಥ ಮಳಿಗೆಗಳು ಕಂಡರೂ ಕಾಣದಂತೆ ಅಧಿಕಾರಿಗಳು ವರ್ತಿಸುತ್ತಾರೆ. ಅಕ್ರಮ ಮಳಿಗೆಗಳ ಬಗ್ಗೆ ದೂರು ನೀಡಿದರೂ ಕ್ರಮ ಕೈಗೊಳ್ಳುವುದಿಲ್ಲ’ ಎಂದು ದೂರಿದರು.

1,200 ಕೆ.ಜಿ ಮಾರಾಟಕ್ಕೆ ಎಲ್‌ಇ–6 ಪರವಾನಗಿ: ತಯಾರಿಕಾ ಘಟಕಗಳಿಂದ ಪಟಾಕಿಗಳನ್ನು ಖರೀದಿಸಿ ತಂದು ಸಂಗ್ರಹವಿಟ್ಟಕೊಂಡು ಮಾರುವ ಮಳಿಗೆಗಳಿಗೆ ‘ಸ್ಫೋಟಕ ಪರವಾನಗಿ (ಎಲ್‌ಇ) – 6’ ಪರವಾನಗಿ ನೀಡಲು ಅವಕಾಶವಿದೆ. ಈ ಪರವಾನಗಿ ಪಡೆದಿರುವ ವ್ಯಾಪಾರಿಗಳು ನಿಯಮಗಳನ್ನು ಉಲ್ಲಂಘಿಸಿ ವ್ಯಾಪಾರ ಮಾಡುತ್ತಿದ್ದು, ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ.

‘ಗರಿಷ್ಠ 1,200 ಕೆ.ಜಿ ಪಟಾಕಿ ಸಂಗ್ರಹಿಸಿಕೊಂಡು ಮಾರಲು ‘ಎಲ್‌ಇ–6’ ಅಡಿ ಜಿಲ್ಲಾಧಿಕಾರಿಗಳು ಪರವಾನಗಿ ನೀಡುತ್ತಾರೆ. ಅತ್ತಿಬೆಲೆ, ಆನೇಕಲ್, ಚಂದಾಪುರ ಹಾಗೂ ಸುತ್ತಮುತ್ತ ಇರುವ ಬಹುತೇಕ ಮಳಿಗೆಗಳು ಎಲ್‌ಇ–6 ಪರವಾನಗಿ ಹೊಂದಿವೆ. ಆದರೆ, ಪರವಾನಗಿ ಸಾಮರ್ಥ್ಯ ಮೀರಿ ಹೆಚ್ಚಿನ ಪ್ರಮಾಣದಲ್ಲಿ ಅಕ್ರಮವಾಗಿ ಪಟಾಕಿ ಸಂಗ್ರಹಿಸಿ ಮಾರುತ್ತಿದ್ದಾರೆ. ಇದುವೇ ಅವಘಡಕ್ಕೆ ಕಾರಣವಾಗುತ್ತಿದೆ’ ಎಂದು ಅಧಿಕಾರಿ ಸಂಶಯ ವ್ಯಕ್ತಪಡಿಸಿದರು.

‘ಪರವಾನಗಿ ಕೋರಿ ವ್ಯಾಪಾರಿಗಳು ಅರ್ಜಿ ಸಲ್ಲಿಸಿದ ನಂತರ, ಜಿಲ್ಲಾಧಿಕಾರಿ ಪರಿಶೀಲನೆ ನಡೆಸುತ್ತಾರೆ. ನಂತರ, ಅಗ್ನಿಶಾಮಕ ದಳ, ಪೊಲೀಸ್ ಇಲಾಖೆ, ಕಂದಾಯ ಇಲಾಖೆ ಹಾಗೂ ವಿದ್ಯುತ್ ಸರಬರಾಜು ಕಂಪನಿಗೆ ಪತ್ರ ಬರೆದು ನಿರಾಕ್ಷೇಪಣಾ ಪತ್ರ ನೀಡುವಂತೆ ಸೂಚಿಸುತ್ತಾರೆ. ಬಳಿಕ, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ವರದಿ ಸಿದ್ಧಪಡಿಸಬೇಕಾಗುತ್ತದೆ’.

‘ಪಟಾಕಿ ಮಾರಾಟದ ಶೆಡ್ ಸುತ್ತಲು 3 ಮೀಟರ್ ಸೆಟ್‌ಬ್ಯಾಕ್ ಬಿಡಬೇಕು. ಸುತ್ತಲಿನ ಕಾಂಪೌಡ್ ಎತ್ತರ 1.8 ಮೀಟರ್ ಇರಬೇಕು. ಶೆಡ್‌ನ ಮುಂದೆ ಹಾಗೂ ಹಿಂಭಾಗದಲ್ಲಿ ದೊಡ್ಡ ಬಾಗಿಲುಗಳು ಇರಬೇಕು. ಎಲ್ಲ ಅಂಶಗಳನ್ನು ಪರಿಗಣಿಸಿ ಸಂಬಂಧಪಟ್ಟ ಇಲಾಖೆಯವರು ನಿರಾಕ್ಷೇಪಣಾ ಪತ್ರ ನೀಡುತ್ತಾರೆ. ಬಳಿಕವೇ ಜಿಲ್ಲಾಧಿಕಾರಿ ಪರವಾನಗಿ ಮಂಜೂರು ಮಾಡುತ್ತಾರೆ’ ಎಂದು ಅಗ್ನಿಶಾಮಕ ದಳದ ಅಧಿಕಾರಿ ಹೇಳಿದರು. ಆದರೆ ಬಹುತೇಕ ಲೈಸೆನ್ಸ್‌ಗಳು ನಿಯಮ ಉಲ್ಲಂಘಿಸಿದ್ದರೂ ಅಧಿಕಾರಿಗಳು ಮೌನವಾಗಿರುವುದು ಸಂಶಯಕ್ಕೆ ಕಾರಣವಾಗುತ್ತದೆ.

ಮರು ಪ್ಯಾಕಿಂಗ್ ಅಪಾಯಕಾರಿ: ‘ಅತ್ತಿಬೆಲೆ ಹಾಗೂ ಸುತ್ತಮುತ್ತ ಹಲವು ಮಳಿಗೆಗಳು ತಮ್ಮದೇ ಅಕ್ರಮ ಗೋದಾಮು ಹೊಂದಿವೆ. ಅದೇ ಗೋದಾಮಿನಲ್ಲಿ ಮರು ಪ್ಯಾಂಕಿಗ್ ಸಹ ನಡೆಯುತ್ತಿದ್ದು, ಇದು ಅಪಾಯಕಾರಿ’ ಎಂದು ಅತ್ತಿಬೆಲೆ ಗಡಿಯಲ್ಲಿ ಸ್ಥಳೀಯ ನಿವಾಸಿ ಅಮ್ಜದ್ ಹೇಳಿದರು.

‘ದೊಡ್ಡ ಬಾಕ್ಸ್‌ಗಳಲ್ಲಿರುವ ಪಟಾಕಿಗಳನ್ನು ಗೋದಾಮಿನಲ್ಲಿ ಬಿಚ್ಚಿಡಲಾಗುತ್ತದೆ. ನಂತರ, ಸಣ್ಣ ಪೊಟ್ಟಣಗಳಲ್ಲಿ ಪಟಾಕಿಗಳನ್ನು ತುಂಬಿ ರೀ ಪ್ಯಾಕಿಂಗ್ ಮಾಡಲಾಗುತ್ತದೆ. ಇದೇ ಸಣ್ಣ ಪೊಟ್ಟಣಗಳನ್ನು ರಾಜ್ಯದ ಹಲವು ಜಿಲ್ಲೆಗಳು, ತಾಲ್ಲೂಕುಗಳು ಹಾಗೂ ನಗರಗರ ಬಿಡಿ ವ್ಯಾಪಾರಿಗಳಿಗೆ ಕಳುಹಿಸಲಾಗುತ್ತದೆ. ಕೆಲವರು, ಗಡಿ ಭಾಗದ ಗೋದಾಮುಗಳಿಗೆ ಬಂದು ಪಟಾಕಿ ಕೊಂಡೊಯ್ಯುತ್ತಾರೆ. ಪಟಾಕಿ ಸಾಗಣೆ ವೇಳೆಯಲ್ಲೂ ಸುರಕ್ಷತೆ ಇಲ್ಲ’ ಎಂದು ತಿಳಿಸಿದರು.

ಗೋದಾಮು ನಿರ್ವಹಣೆಗೆ ಪ್ರತ್ಯೇಕ ಪರವಾನಗಿ: ‘ಪಟಾಕಿ ಸಂಗ್ರಹಿಸಿಡಲು ಗೋದಾಮು ನಿರ್ಮಾಣಕ್ಕೆ ಪ್ರತ್ಯೇಕ ಪರವಾನಗಿ ಪಡೆಯಬೇಕು. ಆದರೆ, ಜನವಸತಿ ಹಾಗೂ ವಾಣಿಜ್ಯ ಚಟುವಟಿಕೆ ಸ್ಥಳಗಳಲ್ಲಿ ಗೋದಾಮು ತೆರೆಯಲು ಅನುಮತಿ ಇಲ್ಲ’ ಎಂದು ಅಧಿಕಾರಿ ತಿಳಿಸಿದರು.

‘ಗೋದಾಮು ಸುತ್ತಮುತ್ತ 40 ಮೀಟರ್ ಒಳಗೆ ಯಾವುದೇ ಮನೆಗಳು ಇರಬಾರದು. ರೈಲ್ವೆ ಹಳಿಯಿಂದಲೂ ದೂರ ಇರಬೇಕು. ಜೊತೆಗೆ, ಗೋದಾಮಿಗೆ ವಿದ್ಯುತ್ ಸಂಪರ್ಕ ಇರಬಾರದು. ಈ ಎಲ್ಲ ಅಂಶಗಳನ್ನು ಪರಿಗಣಿಸಿ ಪರವಾನಗಿ ನೀಡಲಾಗುತ್ತದೆ’ ಎಂದರು.

‘ಅತ್ತಿಬೆಲೆ ಬಳಿ ಗೋದಾಮು ನಿರ್ವಹಣೆಗೆ ಯಾರೊಬ್ಬರೂ ಈ ರೀತಿಯ ಪರವಾನಗಿ ಪಡೆದಿಲ್ಲ’ ಎಂದು ಆರೋಪಿಸುವ ಸ್ಥಳೀಯರು, ‘150ಕ್ಕೂ ಹೆಚ್ಚು ಮಳಿಗೆಗಳು ಅಕ್ರಮವಾಗಿ ನಡೆಯುತ್ತಿದ್ದರೂ ಅಧಿಕಾರಿಗಳು ಪ್ರಶ್ನೆ ಮಾಡಿರಲಿಲ್ಲ. ಗೋದಾಮುಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸಿರಲಿಲ್ಲ. ಈಗ ದುರಂತ ಸಂಭವಿಸುತ್ತಿದ್ದಂತೆ, ಒಂದೊಂದೇ ಮಳಿಗೆಗಳಿಗೆ ಅಧಿಕಾರಿಗಳು ದಾಳಿ ಮಾಡುತ್ತಿದ್ದಾರೆ. ಬಹುತೇಕ ವ್ಯಾಪಾರಿಗಳು, ಮಳಿಗೆಗಳಿಗೆ ಬೀಗ ಹಾಕಿ ನಾಪತ್ತೆಯಾಗಿದ್ದಾರೆ’ ಎಂದರು. 

ಪಟಾಕಿ ತಯಾರಿಕೆಗೆ ಪಿಇಎಸ್‌ಒ ಪರವಾನಗಿ: ಕಚ್ಚಾ ಸಾಮಗ್ರಿ ಮೂಲಕ ಪಟಾಕಿಗಳನ್ನು ತಯಾರಿಸಲು ಹಾಗೂ ತಯಾರಿಸಿದ ಪಟಾಕಿಗಳನ್ನು ದೊಡ್ಡ ಪ್ರಮಾಣದಲ್ಲಿ ಸಂಗ್ರಹಿಸಿಡಲು ಕೇಂದ್ರದ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಯ (ಡಿಪಿಐಐಟಿ) ಪೆಟ್ರೋಲಿಯಂ ಮತ್ತು ಸ್ಫೋಟಕಗಳ ಸುರಕ್ಷತಾ ಸಂಸ್ಥೆ (ಪಿಇಎಸ್‌ಒ) ಕಡೆಯಿಂದ ಪರವಾನಗಿ ಪಡೆಯುವುದು ಕಡ್ಡಾಯ.

‘ಪಿಇಎಸ್‌ಒ ಪ್ರಧಾನ ಕಚೇರಿ ಮಹಾರಾಷ್ಟ್ರದ ನಾಗಪುರದಲ್ಲಿದೆ. ಚೆನ್ನೈನಲ್ಲಿ ದಕ್ಷಿಣ ವೃತ್ತದ ಮುಖ್ಯ ಕಚೇರಿ ಇದ್ದು, ಇದರ ವ್ಯಾಪ್ತಿಗೆ ತಮಿಳುನಾಡು, ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಪುದುಚೇರಿ ಹಾಗೂ ಲಕ್ಷದ್ವೀಪ ಬರುತ್ತವೆ. ಕರ್ನಾಟಕದ ಮಂಗಳೂರಿನಲ್ಲಿ ಉಪ ವೃತ್ತದ ಕಚೇರಿ ಇದೆ. ಪಟಾಕಿ ತಯಾರಿಕೆ ಮಾಡುವವರು ಆಯಾ ಕಚೇರಿಗಳಿಗೆ ಅರ್ಜಿ ಸಲ್ಲಿಸಿ ಪರವಾನಗಿ ಪಡೆಯುತ್ತಾರೆ. ಆನ್‌ಲೈನ್‌ ವ್ಯವಸ್ಥೆಯೂ ಇದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ದೇಶದಲ್ಲಿ ಅತೀ ಹೆಚ್ಚು ಪಟಾಕಿ ತಯಾರಾಗುವ ತಮಿಳುನಾಡಿನ ಶಿವಕಾಶಿಯಲ್ಲಿ ಪಟಾಕಿ ತಯಾರಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ (ಎಫ್‌ಆರ್‌ಡಿಸಿ) ತೆರೆಯಲಾಗಿದೆ. ಇದರು ಪಿಇಎಸ್‌ಒ ಅಡಿ ಕಾರ್ಯನಿರ್ವಹಿಸುತ್ತಿದೆ. ಹೊಸ ಪಟಾಕಿಗಳ ಪರೀಕ್ಷೆ ಹಾಗೂ ಅನುಮತಿಗೆ ಎನ್‌ಒಸಿ ನೀಡುವುದು ಕೇಂದ್ರದ ಕೆಲಸ. ಜನವಸತಿ ಹಾಗೂ ವಾಣಿಜ್ಯ ಚಟುವಟಿಕೆ ಇಲ್ಲದ ಸ್ಥಳಗಳಲ್ಲಿ ಮಾತ್ರ ಪಟಾಕಿ ತಯಾರಿಕೆಗೆ ಅವಕಾಶವಿದೆ’ ಎಂದು ತಿಳಿಸಿದರು.

ನಿಯಮ ಪಾಲಿಸದ ವ್ಯಾಪಾರಿಗಳು: ‘ಪಟಾಕಿ ತಯಾರಿಕೆ, ಸಂಗ್ರಹ ಹಾಗೂ ಮಾರಾಟಕ್ಕೆ ಸಾಕಷ್ಟು ನಿಯಮಗಳು ಇವೆ. ಆದರೆ, ವ್ಯಾಪಾರಿಗಳು ಬಹುತೇಕ ನಿಯಮಗಳನ್ನು ಪಾಲಿಸುವುದಿಲ್ಲ. ಇಲಾಖೆಗಳ ಅಧಿಕಾರಿಗಳಿಗೂ ಈ ಸಂಗತಿ ಗೊತ್ತಿದೆ. ಅವರೆಲ್ಲರೂ ವ್ಯಾಪಾರಿಗಳಿಂದ ಹಣ ಪಡೆದು ಎನ್‌ಒಸಿ ನೀಡುತ್ತಾರೆ. ಅವಘಡ ಸಂಭವಿಸಿದಾಗ ಮಾತ್ರ, ನಿಯಮಗಳ ಮಾತು ಬರುತ್ತಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ಪಟಾಕಿ ಅವಘಡ ತಡೆಗೆ ಕೇವಲ ನಿಯಮ ರೂಪಿಸಿದರೆ ಸಾಲದು. ಅದನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ನೋಡಿಕೊಳ್ಳಬೇಕು. ಎನ್‌ಒಸಿ ನೀಡುವ ಅಧಿಕಾರಿಗಳು, ಆರಂಭದಲ್ಲಿಯೇ ಅಕ್ರಮ ಪತ್ತೆ ಮಾಡಿದರೆ ಅನಾಹುತಗಳನ್ನು ತಪ್ಪಿಸಬಹುದು ಎಂಬುದು ಸಾರ್ವಜನಿಕರ ಅಭಿಪ್ರಾಯ.

ಲಂಚಕ್ಕೂ ದರ ಪಟ್ಟಿ: ‘ಪಟಾಕಿ ಸಾಗಣೆ, ಸಂಗ್ರಹ ಹಾಗೂ ಮಾರಾಟ ಮಳಿಗೆಯಿಂದ ಪಡೆಯುವ ಲಂಚಕ್ಕೂ ಕೆಲ ಅಧಿಕಾರಿಗಳು ದರ ಪಟ್ಟಿ ನಿಗದಿಪಡಿಸಿದ್ದಾರೆ. ಪೊಲೀಸ್ ಠಾಣೆಯ ಕೆಲ ಸಿಬ್ಬಂದಿ ಹಾಗೂ ಸ್ಥಳೀಯ ಸಂಸ್ಥೆಗಳ ಕೆಲ ಸಿಬ್ಬಂದಿ, ಪಟಾಕಿ ವ್ಯಾಪಾರಿಗಳಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಈ ಹಣದಲ್ಲಿ ಹಿರಿಯ ಅಧಿಕಾರಿಗಳಿಗೂ ಪಾಲ ನೀಡುವುದಾಗಿ ಸಿಬ್ಬಂದಿ ಹೇಳಿಕೊಳ್ಳುತ್ತಿದ್ದಾರೆ. ಹೀಗಾಗಿಯೇ, ಗಡಿಯಲ್ಲಿ ಪಟಾಕಿ ಅಕ್ರಮ ವಹಿವಾಟು ರಾಜಾರೋಷವಾಗಿ ನಡೆಯುತ್ತಿದೆ’ ಎಂದು ಸ್ಥಳೀಯರು ದೂರಿದರು.

ಬಾಲ ಕಾರ್ಮಿಕರ ನೇಮಕ: ‘ವ್ಯಾಪಾರಿಗಳು, ಕಡಿಮೆ ಸಂಬಳಕ್ಕೆ ಬರುವ ಕಾರ್ಮಿಕರನ್ನೇ ಹುಡುಕಿ ಕರೆತರುತ್ತಾರೆ. ಅದರಲ್ಲೂ ಬಾಲಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕೆಲಸಕ್ಕೆ ನಿಯೋಜಿಸಿಕೊಳ್ಳುತ್ತಾರೆ. ಅವರಿಂದ ಪಟಾಕಿ ರೀ ಪ್ಯಾಕಿಂಗ್, ಬಾಕ್ಸ್‌ಗಳ ಸಾಗಣೆ ಮಾಡಿಸುತ್ತಾರೆ’ ಎಂದು ಅತ್ತಿಬೆಲೆ ನಿವಾಸಿಗಳು ದೂರಿದರು.

‘ಇತ್ತೀಚೆಗೆ ಸಂಭವಿಸಿದ್ದ ದುರಂತದಲ್ಲಿ ಮೃತಪಟ್ಟವರ ಪೈಕಿ, ಬಾಲಕರೂ ಇದ್ದಾರೆ. ಬಾಲ ನ್ಯಾಯ ಕಾಯ್ದೆ ಜಾರಿಯ ಜವಾಬ್ದಾರಿ ಹೊತ್ತಿರುವ ಅಧಿಕಾರಿಗಳು, ಪಟಾಕಿ ಮಳಿಗೆ ಹಾಗೂ ಗೋದಾಮಿಗೆ ಹೆಚ್ಚು ಭೇಟಿ ನೀಡುವುದಿಲ್ಲ. ಇಂಥ ಅಧಿಕಾರಿಗಳ ಕರ್ತವ್ಯಲೋಪವೇ ಬಾಲಕಾರ್ಮಿಕರ ನೇಮಕಕ್ಕೆ ಪ್ರಮುಖ ಕಾರಣ’ ಎಂದು ಆರೋಪಿಸಿದರು.

ಗಡಿಯಲ್ಲಿ ಅಕ್ರಮ ಸಾಗಣೆ: ಕಣ್ಮುಚ್ಚಿ ಕುಳಿತ ಅಧಿಕಾರಿಗಳು

ತಮಿಳುನಾಡಿನಿಂದ ಕರ್ನಾಟಕಕ್ಕೆ ರಾಷ್ಟ್ರೀಯ ಹೆದ್ದಾರಿ ಮೂಲಕವೇ ಅಕ್ರಮವಾಗಿ ಪಟಾಕಿ ಸಾಗಣೆ ಆಗುತ್ತಿದ್ದು, ಭದ್ರತಾ ವೈಫಲ್ಯ ಎದ್ದು ಕಾಣುತ್ತಿದೆ.

ತಮಿಳುನಾಡಿನ ವಿರುಧನಗರ ಜಿಲ್ಲೆಯ ಶಿವಕಾಶಿಯಲ್ಲಿ ಅತೀ ಹೆಚ್ಚು ತರಹೇವಾರಿ ಪಟಾಕಿಗಳನ್ನು ದೊಡ್ಡ ಗಾತ್ರದ ಬಾಕ್ಸ್‌ಗಳಲ್ಲಿ ತುಂಬಿ, ಕಂಟೇನರ್ ಮೂಲಕ ಕರ್ನಾಟಕಕ್ಕೆ ರವಾನಿಸಲಾಗುತ್ತದೆ. ಈ ಲಾರಿಗಳು ರಾಜಾರೋಷವಾಗಿ ಕರ್ನಾಟಕ ಪ್ರವೇಶಿಸುತ್ತಿದ್ದು, ಗಡಿಯ ಭದ್ರತೆ ಜವಾಬ್ದಾರಿ ವಹಿಸಿಕೊಂಡಿರುವ ಪೊಲೀಸರು ಹಾಗೂ ಇತರೆ ಇಲಾಖೆಯ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಅಧಿಕಾರಿಗಳ ಕರ್ತವ್ಯಲೋಪ ಹಾಗೂ ಕೆಲವರ ‘ಲಂಚ’ದ ಆಸೆಯಿಂದ, ಅನಧಿಕೃತವಾಗಿ ಪಟಾಕಿಗಳು ರಾಜ್ಯಕ್ಕೆ ಸರಬರಾಜು ಆಗುತ್ತಿದೆ. ಅತ್ತಿಬೆಲೆಯ ಶ್ರೀ ಬಾಲಾಜಿ ಟ್ರೇಡರ್ಸ್ ಮಳಿಗೆಯಲ್ಲಿ ಸಂಭವಿಸಿದ್ದ ದುರಂತವೇ ಇದಕ್ಕೆ ಸಾಕ್ಷಿ ಎಂದು ಅತ್ತಿಬೆಲೆಯ ನಿವಾಸಿ ಎಂ. ರಘುವೀರ್ ಬೇಸರ ವ್ಯಕ್ತಪಡಿಸಿದರು

‘ತಮಿಳುನಾಡಿನಿಂದ ಹೊಸೂರು ಮಾರ್ಗವಾಗಿ ನಿತ್ಯವೂ ಸಾವಿರಾರು ವಾಹನಗಳು ರಾಜ್ಯಕ್ಕೆ ಬರುತ್ತದೆ. ತಪಾಸಣೆಗೆಂದು ಗಡಿಯಲ್ಲಿ ಸೂಕ್ತ ವ್ಯವಸ್ಥೆ ಇಲ್ಲ. ಸ್ಥಳೀಯ ಪೊಲೀಸರು ಅಥವಾ ಆರ್‌ಟಿಒ ಅಧಿಕಾರಿಗಳು ಮಾತ್ರ ಆಗಾಗ ವಾಹನಗಳನ್ನು ತಡೆದು ತಪಾಸಣೆ ಮಾಡುತ್ತಾರೆ. ಅದು ಸಹ ನೆಪಕ್ಕಷ್ಟೇ. ಅಧಿಕಾರಿಗಳ ಕರ್ತವ್ಯಲೋಪ ಹಾಗೂ ಕೆಲ ಅಧಿಕಾರಿಗಳ ‘ಲಂಚಾವತಾರ’ದಿಂದ ಗಡಿಯಲ್ಲಿ ಸೂಕ್ತ ರೀತಿಯಲ್ಲಿ ತಪಾಸಣೆ ಆಗುತ್ತಿಲ್ಲ’ ಎಂದರು.

ಗಡಿಯಲ್ಲೇ ಅಕ್ರಮ ದಾಸ್ತಾನು: ತಮಿಳುನಾಡು ಗಡಿರೇಖೆಯಿಂದ (ಚೆನ್ನೈ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ) ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ 4 ಕಿ.ಮೀ ದೂರದಲ್ಲಿ ಕರ್ನಾಟಕ ಆರ್‌ಟಿಒ ಚೆಕ್‌ಪೋಸ್ಟ್ ಇದೆ. 3 ಕಿ.ಮೀ ದೂರದಲ್ಲಿ ಅತ್ತಿಬೆಲೆ ಪೊಲೀಸ್ ಠಾಣೆಯಿದೆ. ಆದರೆ, ಗಡಿ ರೇಖೆ ಬಳಿ ಯಾವುದೇ ಚೆಕ್‌ಪೋಸ್ಟ್ ಇಲ್ಲ.

ಗಡಿರೇಖೆ ಬಳಿ ಚೆಕ್‌ಪೋಸ್ಟ್‌ ಇಲ್ಲದಿರುವುದನ್ನೇ ಬಂಡವಾಳ ಮಾಡಿಕೊಂಡಿರುವ ಪಟಾಕಿ ವ್ಯಾಪಾರಿಗಳು, ಆರ್‌ಟಿಒ ಚೆಕ್‌ಪೋಸ್ಟ್ ಹಾಗೂ ಅತ್ತಿಬೆಲೆ ಪೊಲೀಸ್ ಠಾಣೆಯಿಂದ ದೂರವಿರುವ ಗಡಿಭಾಗದಲ್ಲಿ ಮಳಿಗೆ ಹಾಗೂ ಗೋದಾಮುಗಳನ್ನು ನಿರ್ಮಿಸಿಕೊಂಡು ವ್ಯಾಪಾರ ಮಾಡುತ್ತಿದ್ದಾರೆ.

‘ಯಾವ ಕಂಟೇನರ್‌ನಲ್ಲಿ ಪಟಾಕಿ ಬಂತು? ಎಷ್ಟು ಬಂತು? ಎಲ್ಲಿಂದ ಎಲ್ಲಿಗೆ ಸಾಗಿಸಲಾಗುತ್ತಿದೆ ? ಎಂಬಿತ್ಯಾದಿ ಮಾಹಿತಿಯನ್ನು ಯಾರೊಬ್ಬರೂ ಕೇಳುವುದಿಲ್ಲ. ಕೆಲ ಆರ್‌ಟಿಒ ಹಾಗೂ ಪೊಲೀಸ್ ಸಿಬ್ಬಂದಿ, ಪಟಾಕಿ ವ್ಯಾಪಾರಿಗಳ ಮಾಹಿತಿದಾರರಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಕೈಬಿಸಿ ಮಾಡಿದರೆ, ಅಕ್ರಮ ಸಾಗಣೆ ನಿತ್ಯವೂ ಸುಲಭ’ ಎಂದು ಸ್ಥಳೀಯ ನಿವಾಸಿ ರಮೇಶ್‌ ಆರೋಪಿಸಿದರು. ‘ತಮಿಳುನಾಡಿ ಗಡಿರೇಖೆಯಲ್ಲಿ ಚೆಕ್‌ಪೋಸ್ಟ್‌ ನಿರ್ಮಿಸಬೇಕು. ಪಟಾಕಿ ಸೇರಿದಂತೆ ಎಲ್ಲ ಬಗೆಯ ವಸ್ತುಗಳ ತಪಾಸಣೆಗೆ ಕ್ರಮ ಕೈಗೊಳ್ಳಬೇಕು. ಗಡಿಭಾಗದಲ್ಲಿ ತಲೆಎತ್ತಿರುವ ಪಟಾಕಿ ಅಕ್ರಮ ಮಳಿಗೆಗಳನ್ನು ತೆರವು ಮಾಡಬೇಕು. ಇಲ್ಲದಿದ್ದರೆ, ಪುನಃ ಅವಘಡಗಳು ತಪ್ಪಿದ್ದಲ್ಲ’ ಎಂದು ಅವರು ಅಭಿಪ್ರಾಯಪಟ್ಟರು.

ಪೂರಕ ಮಾಹಿತಿ: ಆನೇಕಲ್‌ ಶಿವಣ್ಣ

ಕಾನೂನು ಏನು ಹೇಳುತ್ತದೆ

* ತಾತ್ಕಾಲಿಕ ಪರವಾನಗಿ: ತೆರೆದ ಮತ್ತು ಮೈದಾನ ಸ್ಥಳದಲ್ಲಿ ಪಟಾಕಿ ಮಳಿಗೆ ನಿರ್ಮಿಸಬೇಕು. ಅಗ್ನಿ ಸುರಕ್ಷತಾ ಕ್ರಮಗಳಿರಬೇಕು. ಅಗ್ನಿ ನಂದಿಸುವ ಬಗ್ಗೆ ಸಿಬ್ಬಂದಿ ತರಬೇತಿ ಪಡೆದಿರಬೇಕು. ಅವಘಡ ಸಂದರ್ಭದಲ್ಲಿ ಜನರು ಪಾರಾಗಲೂ ತುರ್ತು ನಿರ್ಗಮನ ಬಾಗಿಲುಗಳು ಇರಬೇಕು

* ಎಲ್‌ಇ–6 ಪರವಾನಗಿ: ಪಟಾಕಿ ಸಂಗ್ರಹದ ಶೆಡ್ ಸುತ್ತಲು 3 ಮೀಟರ್ ಸೆಟ್‌ಬ್ಯಾಕ್ ಬಿಡಬೇಕು. ಕಾಂಪೌಡ್ ಎತ್ತರ 1.8 ಮೀಟರ್ ಇರಬೇಕು. ಶೆಡ್‌ನ ಮುಂದೆ ಹಾಗೂ ಹಿಂಭಾಗದಲ್ಲಿ ಬಾಗಿಲು ಇರಬೇಕು ಜನವಸತಿ ಹಾಗೂ ವಾಣಿಜ್ಯ ಪ್ರದೇಶಗಳಿಂದ ದೂರವಿರಬೇಕು.

* ಗೋದಾಮು: ಮನೆಗಳು ಇರುವ ಜಾಗದಿಂದ 40 ಮೀಟರ್ ದೂರವಿರಬೇಕು. ರೈಲ್ವೆ ಹಳಿ ಪಕ್ಕದಲ್ಲಿ ಇರಬಾರದು. ವಿದ್ಯುತ್ ಸಂಪರ್ಕ ರಹಿತವಾಗಿರಬೇಕು. ನುರಿತ ಸಿಬ್ಬಂದಿ ನೇಮಿಸಿಕೊಳ್ಳಬೇಕು. ಅಗ್ನಿ ಸುರಕ್ಷತಾ ಕ್ರಮಗಳು ಕಡ್ಡಾಯ. ಸಂಬಂಧಪಟ್ಟ ಇಲಾಖೆಗಳ ಎನ್‌ಒಸಿ ಇರಬೇಕು

* ಪಟಾಕಿ ತಯಾರಿಕೆ–ದೊಡ್ಡ ಪ್ರಮಾಣದ ದಾಸ್ತಾನು: ಜನವಸತಿ ಪ್ರದೇಶದಿಂದ ದೂರವಿರಬೇಕು. ಅಗ್ನಿ ಸುರಕ್ಷತಾ ಕ್ರಮಗಳು ಇರಬೇಕು. ನುರಿತ ಸಿಬ್ಬಂದಿ ಇರಬೇಕು. ಸಿಬ್ಬಂದಿ ಸುರಕ್ಷತೆಗೆ ಸಲಕರಣೆಗಳನ್ನು ಬಳಸಿಕೊಳ್ಳಬೇಕು. ಮೈದಾನ ಹಾಗೂ ತೆರೆದ ಸ್ಥಳದಲ್ಲಿ ತಯಾರಿಕೆ ಮಾಡಬೇಕು. ಇದಕ್ಕೆಲ್ಲ ಪೆಟ್ರೋಲಿಯಂ ಮತ್ತು ಸ್ಫೋಟಕಗಳ ಸುರಕ್ಷತಾ ಸಂಸ್ಥೆ (ಪಿಇಎಸ್‌ಒ) ಪರವಾನಗಿ ಕಡ್ಡಾಯ.

ರಾಜ್ಯವ್ಯಾಪಿ ಪಟಾಕಿ ಅಕ್ರಮ ಮಾರಾಟ

ಹೊರ ರಾಜ್ಯಗಳಿಂದ ಕರ್ನಾಟಕಕ್ಕೆ ಪಟಾಕಿ ಪೂರೈಕೆ ಆಗುತ್ತದೆ. ಬಹುಪಾಲು ಪಟಾಕಿ ತಮಿಳುನಾಡಿನದ್ದು. ಇಂಥ ಪಟಾಕಿಯನ್ನು ಸ್ಪೋಟಕ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿ ರಾಜ್ಯದೆಲ್ಲೆಡೆ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ. ಅಕ್ರಮ ತಡೆಯಬೇಕಾದ ಜಿಲ್ಲಾಡಳಿತದ ಅಧಿಕಾರಿಗಳು, ಅವಘಡ ನಡೆದಾಗಲ್ಲಷ್ಟೇ ಎಚ್ಚರಗೊಳ್ಳುತ್ತಿದ್ದಾರೆ. ಇದುವೇ ಮೇಲಿಂದ ಮೇಲೆ ಅವಘಡಗಳು ಸಂಭವಿಸಲು ಕಾರಣವಾಗುತ್ತಿದೆ.

‘ಬೆಂಗಳೂರು, ತುಮಕೂರು, ಮೈಸೂರು, ಶಿವಮೊಗ್ಗ, ಧಾರವಾಡ, ಕೊಪ್ಪಳ, ಹಾವೇರಿ, ಬಳ್ಳಾರಿ, ಹಾಸನ, ಬೆಳಗಾವಿ, ವಿಜಯಪುರ, ಕಲಬುರ್ಗಿ, ದಾವಣಗೆರೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪಟಾಕಿಯ ಅಕ್ರಮ ಮಳಿಗೆಗಳಿವೆ. ಜೊತೆಗೆ, ಅಕ್ರಮವಾಗಿ ಪಟಾಕಿ ದಾಸ್ತಾನು ಮಾಡಿರುವ ಸ್ಥಳಗಳೂ ಇವೆ. ಇವುಗಳ ಪತ್ತೆಗೆ ವಿಶೇಷ ಕಾರ್ಯಾಚರಣೆ ಅಗತ್ಯವಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಬೇಡಿಕೆ ಇಲ್ಲದ ಸಂದರ್ಭದಲ್ಲಿ ಕಡಿಮೆ ಬೆಲೆಗೆ ಪಟಾಕಿಗಳು ಲಭ್ಯವಾಗುತ್ತವೆ. ಅಂಥ ಪಟಾಕಿಗಳನ್ನು ಖರೀದಿಸುವ ವ್ಯಾಪಾರಿಗಳು, ಯಾವುದೇ ಸುರಕ್ಷತಾ ಕ್ರಮವಿಲ್ಲದೇ ಗೋದಾಮುಗಳಲ್ಲಿ ಸಂಗ್ರಹಿಸಿಡುತ್ತಾರೆ. ಜನವಸತಿ ಪ್ರದೇಶಗಳಲ್ಲಿಯೂ ಇಂಥ ಗೋದಾಮುಗಳಿವೆ. ಹಬ್ಬದ ದಿನಗಳಂದೂ ಇದೇ ಗೋದಾಮಿನಿಂದ ಪಟಾಕಿಗಳನ್ನು, ಬಿಡಿ ವ್ಯಾಪಾರಿಗಳಿಗೆ ಸರಬರಾಜು ಮಾಡಲಾಗುತ್ತದೆ. ಆಕಸ್ಮಾತ್, ಅವಘಡಗಳು ಸಂಭವಿಸಿದರೆ ಗೋದಾಮು ಜೊತೆಯಲ್ಲಿ ಅಕ್ಕ–ಪಕ್ಕದ ಮನೆಗಳಿಗೂ ಹಾನಿಯಾಗುವ ಸಾಧ್ಯತೆ ಹೆಚ್ಚು’ ಎಂದು ತಿಳಿಸಿದರು.

ರಾಜ್ಯದಲ್ಲಿ ಪಟಾಕಿ ಅಕ್ರಮ ವಹಿವಾಟಿನ ಬಗ್ಗೆ ಕಮಿಷನರ್ ಹಾಗೂ ಎಸ್ಪಿಗಳ ಸಭೆ ನಡೆಸಿ ಮಾಹಿತಿ ಪಡೆಯಲಾಗುವುದು. ಪರಿಶೀಲನೆ ನಡೆಸಿ, ಲೋಪಗಳು ಹಾಗೂ ಬಿಗಿ ನಿಯಮಗಳ ಜಾರಿ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು
ಅಲೋಕ್ ಮೋಹನ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕ(ಡಿಜಿ–ಐಜಿಪಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT