ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ನರೇಂದ್ರ ಮೋದಿ ಓಡಾಟಕ್ಕೆ ಅತಿ ಸುರಕ್ಷತೆಯ ಹೊಸ ಕಾರು

Last Updated 30 ಡಿಸೆಂಬರ್ 2021, 3:25 IST
ಅಕ್ಷರ ಗಾತ್ರ

ದೇಶದ ಪ್ರಧಾನಿಯ ರಕ್ಷಣೆಯ ಹೊಣೆ ಹೊತ್ತಿರುವ ವಿಶೇಷ ರಕ್ಷಣಾ ಗುಂಪು (ಎಸ್‌ಪಿಜಿ), ಪ್ರಧಾನಿ ನರೇಂದ್ರ ಮೋದಿ ಅವರ ಓಡಾಟಕ್ಕೆ ಬಳಸುವ ಕಾರ್ ಅನ್ನು ಬದಲಿಸಿದೆ. ಪ್ರಧಾನಿ ಮೋದಿ ಅವರ ಓಡಾಟಕ್ಕೆ ಬಳಸುತ್ತಿದ್ದ ಸೆಡಾನ್‌ ಬಿಎಂಡಬ್ಲ್ಯು 7ಸೀರಿಸ್‌ ಬದಲಿಗೆ, ಈಗ ಮರ್ಸಿಡೆಸ್ ಬೆಂಜ್‌ ಮೆಬ್ಯಾಕ್‌ 650 ಗಾರ್ಡ್‌ ಸೆಡಾನ್‌ ಅನ್ನು ಎಸ್‌‍ಪಿಜಿ ಖರೀದಿಸಿದೆ. ಇದು ಸದ್ಯಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯಂತ ಸುರಕ್ಷಿತ ಸೆಡಾನ್‌ ಎನಿಸಿದೆ. ಗುಂಡು ಮತ್ತು ಬಾಂಬ್‌ ದಾಳಿಯನ್ನೂ ತಡೆದುಕೊಳ್ಳುವ ಸಾಮರ್ಥ್ಯವಿರುವ ಈ ಕಾರ್‌ ಅನ್ನು ವಿಪಿಎಎಂ–ವಿಆರ್‌–10 ಮಾನದಂಡಗಳಿಗೆ ಅನುಗುಣವಾಗಿ ವಿನ್ಯಾಸ ಮಾಡಲಾಗಿದೆ

ವೈಶಿಷ್ಟ್ಯಗಳು
* ಈ ಕಾರಿನ ಕಿಟಕಿ ಗಾಜುಗಳು, ಮುಂಬದಿ ಮತ್ತು ಹಿಂಬದಿಯ ವಿಂಡ್‌ಶೀಲ್ಡ್‌ಗಳಿಗೆ ಪಾಲಿಕಾರ್ಬೊನೇಟ್‌ ಲೇಪನವನ್ನು ಮಾಡಲಾಗಿದೆ. ಎಕೆ–47 ರೈಫಲ್‌ನಿಂದ ಹಾರಿಸಿದ ಗುಂಡು ಒಳಹೋಗದಂತೆ ತಡೆಯುವ ಸಾಮರ್ಥ್ಯ ಈ ಗಾಜಿಗೆ ಇದೆ

* ಕಾರಿನ ಪ್ಲಾಟ್‌ಫಾರಂ ಮತ್ತು ದೇಹದ ನಿರ್ಮಾಣದಲ್ಲಿ ದಪ್ಪನೆಯ ಸ್ಟೀಲ್‌ ಅನ್ನು ಬಳಸಲಾಗಿದೆ. ವಿಶೇಷ ಕವಚಗಳನ್ನು ಅಳವಡಿಸಲಾಗಿದೆ. ಇವು ಎಕೆ–47 ರೈಫಲ್‌, ಅತ್ಯಾಧುನಿಕ ಮತ್ತು ಪ್ರಬಲ ಸ್ನೈಪರ್‌ನಿಂದ ಹಾರಿಸಿದ ಗುಂಡು ಒಳಹೋಗುವುದನ್ನು ತಡೆಯುವ ಸಾಮರ್ಥ್ಯ ಈ ಕಾರಿನ ಕ್ಯಾಬಿನ್‌ಗೆ ಇದೆ

* ಕಾರಿನಿಂದ ಕೇವಲ 2 ಮೀಟರ್‌ ಅಂತರದಲ್ಲಿ 15 ಕೆ.ಜಿ.ಯಷ್ಟು ಟಿಎಂಟಿಯನ್ನು ಸ್ಫೋಟಿಸಿದರೂ, ಕಾರಿನ ಒಳಗೆ ಇರುವವರಿಗೆ ಯಾವುದೇ ಗಾಯಗಳಾಗುವುದಿಲ್ಲ

* ಕಾರಿನ ಒಳಭಾಗದಲ್ಲಿ ತುರ್ತು ಬಳಕೆಗೆ ಆಮ್ಲಜನಕ ಪೂರೈಕೆ ವ್ಯವಸ್ಥೆ ಮಾಡಲಾಗಿದೆ. ರಸಾಯನಿಕ ಮತ್ತು ಅನಿಲ ದಾಳಿಗಳಂತಹ ಸಂದರ್ಭದಲ್ಲಿ ಒಳಗಿರುವವರು ವಿಷಗಾಳಿ ಸೇವಿಸುವುದನ್ನು ಈ ವ್ಯವಸ್ಥೆ ತಡೆಯುತ್ತದೆ

* ಕಾರಿನ ಇಂಧನ ಟ್ಯಾಂಕ್‌ಗೆ ವಿಶೇಷ ಕವಚ ಅಳವಡಿಸಲಾಗಿದೆ. ಇದು ಗುಂಡು ಮತ್ತು ಸ್ಫೋಟದ ದಾಳಿಗಳನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ. ಅಪಘಾತ ಅಥವಾ ದಾಳಿಗಳ ಸಂದರ್ಭದಲ್ಲಿ ಇಂಧನ ಟ್ಯಾಂಕ್‌ಗೆ ರಂಧ್ರವಾದರೂ, ಅದು ಸ್ವಯಂಚಾಲಿತವಾಗಿ ಮುಚ್ಚಿಕೊಳ್ಳುವ ಸಾಮರ್ಥ್ಯ ಹೊಂದಿದೆ

* ರನ್‌ಫ್ಲ್ಯಾಟ್‌ ಟೈರ್‌ಗಳು: ಈ ಕಾರಿನಲ್ಲಿ ರನ್‌ಫ್ಲ್ಯಾಟ್‌ ಟೈರ್‌ಗಳನ್ನು ಅಳವಡಿಸಲಾಗಿದೆ. ಪಂಕ್ಚರ್ ಮತ್ತು ಟೈರ್‌ ಸಿಡಿದು ಹೋದರೂ, ಕನಿಷ್ಠ 50 ಕಿ.ಮೀ. ದೂರದವರೆಗೆ ಕಾರನ್ನು ಚಲಾಯಿಸಿಕೊಂಡು ಹೋಗಲು ಈ ಟೈರ್‌ಗಳು ಅನುವು ಮಾಡಿಕೊಡುತ್ತವೆ

*4 ಟನ್ ತೂಕ

*6,000 ಸಿ.ಸಿ. ಸಾಮರ್ಥ್ಯದ ವಿ–12 ವಿನ್ಯಾಸದ ಎಂಜಿನ್‌

* ಗರಿಷ್ಠ ವೇಗ: 160 ಕಿ.ಮೀ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT