ಸೋಮವಾರ, ಮಾರ್ಚ್ 27, 2023
32 °C

ಆಳ–ಅಗಲ | ರಾಷ್ಟ್ರಪತಿ ಚುನಾವಣೆ: ಒಗ್ಗಟ್ಟು ತೋರಲು ವಿಪಕ್ಷಗಳು ವಿಫಲ

ಶೆಮಿನ್‌ ಜಾಯ್‌ Updated:

ಅಕ್ಷರ ಗಾತ್ರ : | |

ರಾಷ್ಟ್ರಪತಿ ಚುನಾವಣೆಯ ಫಲಿತಾಂಶ ಏನು ಎಂಬುದು ಮತದಾನಕ್ಕೆ ಮುನ್ನವೇ ಎಲ್ಲರಿಗೂ ತಿಳಿದಿದೆ. ಸೋಮವಾರದ ಚುನಾವಣೆಯ ಮತ ಎಣಿಕೆ ಮೂರು ದಿನಗಳ ಬಳಿಕ ಅಂದರೆ, ಗುರುವಾರ ನಡೆಯಲಿದೆ. ಆದಿವಾಸಿ ಸಮುದಾಯದ ಮಹಿಳೆ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿಯಾಗಿ ಆಯ್ಕೆಯಾಗಲು ಇನ್ನೇನು ಬೆರಳೆಣಿಕೆಯ ದಿನಗಳಷ್ಟೇ ಇವೆ. ಭಾರತದ ರಾಷ್ಟ್ರಪತಿ ಚುನಾವಣೆಯು ಅಚ್ಚರಿಯ ಫಲಿತಾಂಶಕ್ಕೆ ಕಾರಣವಾಗಿದ್ದು ಇತಿಹಾಸದಲ್ಲಿ ಒಂದು ಬಾರಿ ಮಾತ್ರ. 1969ರಲ್ಲಿ ಇಂದಿರಾ ಗಾಂಧಿ ಅವರು ತಮ್ಮದೇ ಪಕ್ಷದ ಅಧಿಕೃತ ಅಭ್ಯರ್ಥಿಯನ್ನು ಸೋಲಿಸಿದ್ದರು. ತಮ್ಮ ಪಕ್ಷದ ನಾಯಕರನ್ನು ಮೂಲೆಗುಂಪು ಮಾಡುವುದಕ್ಕಾಗಿ ಇಂದಿರಾ ಅವರು ‘ಆತ್ಮಸಾಕ್ಷಿ ಮತ’ ಹಾಕಿ ಎಂದು ಪಕ್ಷದ ಶಾಸಕರು, ಸಂಸದರಿಗೆ ಕರೆ ನೀಡಿದ್ದರು. ಕಾಂಗ್ರೆಸ್‌ ಪಕ್ಷವು ನೀಲಂ ಸಂಜೀವ ರೆಡ್ಡಿ ಅವರನ್ನು ಕಣಕ್ಕೆ ಇಳಿಸಿತ್ತು. ಜನಪ್ರಿಯ ಕಾರ್ಮಿಕ ನಾಯಕರಾಗಿದ್ದ ವಿ.ವಿ. ಗಿರಿ ಅವರು ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಇಂದಿರಾ ಅವರ ಬೆಂಬಲದಿಂದಾಗಿ ವಿ.ವಿ.ಗಿರಿ ಅವರು ಗೆದ್ದರು.

ಆರಂಭದಲ್ಲಿಯೇ, ಮತದಾರರ ಸಂಖ್ಯೆಯು ಬಿಜೆಪಿ ನೇತೃತ್ವದ ಎನ್‌ಡಿಎ ಪರವಾಗಿಯೇ ಇತ್ತು. ಎನ್‌ಡಿಎ ಮತ್ತು ಬಿಜೆಡಿ–ವೈಎಸ್‌ಆರ್‌ ಕಾಂಗ್ರೆಸ್‌ನಂತಹ ಮಿತ್ರ ಪಕ್ಷಗಳ ನೆರವಿನಿಂದಾಗಿ ತಕ್ಕಡಿ ಮುರ್ಮು ಅವರ ಕಡೆಗೇ ವಾಲಿಕೊಂಡಿತ್ತು. ಅವರಿಗೆ 9,000 ಮತಗಳ (ಮತ ಮೌಲ್ಯ) ಕೊರತೆಯಷ್ಟೇ ಇತ್ತು. ವಿರೋಧ ಪಕ್ಷಗಳ ಸಹಮತದ ಅಭ್ಯರ್ಥಿಯಾಗಿ ಜೂನ್‌ 21ರಂದು ಯಶವಂತ ಸಿನ್ಹಾ ಅವರನ್ನು ಆಯ್ಕೆ ಮಾಡಿದ ಆರು ತಾಸುಗಳ ಬಳಿಕ ಮುರ್ಮು ಅವರ ಹೆಸರನ್ನು ಬಿಜೆಪಿ ಪ್ರಕಟಿಸಿತ್ತು.

ಬಿಜೆಪಿಯ ಅಭ್ಯರ್ಥಿ ಯಾರಾಗಬಹುದು ಎಂಬುದನ್ನು ಈ ಬಾರಿ ಮಾಧ್ಯಮಗಳು ಹಾಗೂ ರಾಜಕೀಯ ಪಂಡಿತರು ಸರಿಯಾಗಿಯೇ ಊಹಿಸಿದ್ದರು. ಮಾಧ್ಯಮಗಳಲ್ಲಿ ಪ್ರಕಟವಾದ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಮುರ್ಮು ಅವರ ಹೆಸರೇ ಮುಂಚೂಣಿಯಲ್ಲಿತ್ತು. ಕಳೆದ ಬಾರಿ ಹೀಗೆ ಆಗಿರಲಿಲ್ಲ. ರಾಮನಾಥ ಕೋವಿಂದ್‌ ಅವರ ಹೆಸರನ್ನು ಬಿಜೆಪಿ ಪ್ರಕಟಿಸಿದಾಗ ಅದು ದೇಶಕ್ಕೇ ಅಚ್ಚರಿ ಉಂಟು ಮಾಡಿತ್ತು. ಸಾಂಕೇತಿಕತೆಯ ಬಗ್ಗೆ ನರೇಂದ್ರ ಮೋದಿ ಅವರಿಗೆ ಇರುವ ಮೋಹವು ಮಾಧ್ಯಮ ಮತ್ತು ರಾಜಕೀಯ ಪಂಡಿತರಿಗೆ ಈಗ ಸ್ಪಷ್ಟವಾಗಿ ಅರ್ಥವಾಗಿದೆ.

ಕಳೆದ ಬಾರಿ ಬಿಜೆಪಿಯು ಕೋವಿಂದ್‌ ಅವರನ್ನು ಕಣಕ್ಕೆ ಇಳಿಸಿದಾಗ, ದಲಿತ ನಾಯಕಿ ಮೀರಾ ಕುಮಾರ್ ಅವರನ್ನು ವಿರೋಧ ಪಕ್ಷಗಳು ಸ್ಪರ್ಧೆಗೆ ಇಳಿಸಿದ್ದವು. ಮಹಿಳೆ, ಆದಿವಾಸಿ, ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು ಹೀಗೆ ಆಡಳಿತ ಪಕ್ಷವು ಯಾರನ್ನೇ ಕಣಕ್ಕೆ ಇಳಿಸಿದರೂ ಅವರು ಬಿಜೆಪಿಯವರೇ ಆಗಿರುತ್ತಾರೆ ಎಂಬುದು ಪ್ರತಿಪಕ್ಷಗಳಿಗೆ ಸ್ಪಷ್ಟವಿತ್ತು. ಹಾಗಾಗಿಯೇ, ಬಿಜೆಪಿಯಲ್ಲಿಯೇ ಇದ್ದ, ವಿರೋಧ ಪಕ್ಷಗಳಿಗೆ ಸರ್ವ ಸಮ್ಮತಿಯೂ ಇದ್ದ ಸಿನ್ಹಾ ಅವರನ್ನು ಕಣಕ್ಕೆ ಇಳಿಸುವ ಮೂಲಕ ಬಿಜೆಪಿಗಿಂತ ಒಂದು ಮುಂದೆ ಹೆಜ್ಜೆ ಇರಿಸುವುದು ವಿರೋಧ ಪಕ್ಷಗಳ ಕಾರ್ಯತಂತ್ರವಾಗಿತ್ತು. ಆದರೆ, ಈ ಕಾರ್ಯತಂತ್ರವನ್ನು ಬಿರುಸಿನಿಂದ ಮುಂದಕ್ಕೆ ಒಯ್ಯಲು ಮಾತ್ರ ವಿರೋಧ ಪಕ್ಷಗಳಿಗೆ ಸಾಧ್ಯವಾಗಲಿಲ್ಲ.

ಎನ್‌ಡಿಎಯ ಹೊರಗೆ ಇದ್ದ ಹಲವು ಪಕ್ಷಗಳು ಸಿನ್ಹಾ ಅವರಿಗೆ ಬೆಂಬಲ ಘೋಷಿಸಿದ್ದವು. ಆದರೆ, ಮುರ್ಮು ಅವರ ಹೆಸರು ಘೋಷಣೆಯಾದ ಬಳಿಕ ಕೆಲವು ಪಕ್ಷಗಳು ಮನಸ್ಸು ಬದಲಾಯಿಸಿದವು. ಉದ್ಧವ್‌ ಠಾಕ್ರೆ ನೇತೃತ್ವದ ಶಿವಸೇನಾದಲ್ಲಿ ಉಂಟಾದ ಬಂಡಾಯದಿಂದಾಗಿ ಆ ಪಕ್ಷವು ಈಗ ಅನಿವಾರ್ಯವಾಗಿ ಮುರ್ಮು ಅವರನ್ನು ಬೆಂಬಲಿಸಬೇಕಾದ ಸ್ಥಿತಿ ಸೃಷ್ಟಿಯಾಗಿದೆ. ಎನ್‌ಡಿಎ ತೆಕ್ಕೆಗೆ ಮರಳುವ ಉತ್ಸಾಹದಲ್ಲಿರುವ ಅಕಾಲಿದಳ ಕೂಡ ಆಡಳಿತ ಪಕ್ಷದ ಅಭ್ಯರ್ಥಿಯ ಬೆನ್ನಿಗೆ ನಿಂತಿದೆ. ಕಾಂಗ್ರೆಸ್‌ನ ಮಿತ್ರ ಪಕ್ಷ ಜೆಎಂಎಂ ಕೂಡ ಮುರ್ಮು ಅವರನ್ನು ಬೆಂಬಲಿಸುವುದಾಗಿ ಹೇಳಿದೆ. ಆದಿವಾಸಿ ಜನಸಂಖ್ಯೆಯೂ ಗಣನೀಯವಾಗಿರುವ ಜಾರ್ಖಂಡ್‌ನ ಈ ಪಕ್ಷದ ನಿರ್ಧಾರದ ಹಿಂದೆ ಅಚ್ಚರಿಯೇನೂ ಇಲ್ಲ.

ಸಿನ್ಹಾ ಅವರ ಹೆಸರು ಸೂಚಿಸಿದ್ದ ತೃಣಮೂಲ ಕಾಂಗ್ರೆಸ್‌ನ ಈಗಿನ ನಿಲುವಿನಲ್ಲಿ ದ್ವಂದ್ವ ಕಾಣಿಸುತ್ತಿದೆ. ಮುರ್ಮು ಅವರನ್ನು ಅಭ್ಯರ್ಥಿ ಮಾಡಲಾಗುವುದು, ಅವರನ್ನು ಬೆಂಬಲಿಸಿ ಎಂದು ಬಿಜೆಪಿ ಮೊದಲೇ ಹೇಳಿದ್ದರೆ ಅದನ್ನು ಒಪ್ಪಿಕೊಳ್ಳಬಹುದಿತ್ತು ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಹಾಗಿದ್ದರೂ ತೃಣಮೂಲ ಕಾಂಗ್ರೆಸ್‌, ಸಿನ್ಹಾ ಅವರ ಕೈಬಿಟ್ಟಿಲ್ಲ. ಪಶ್ಚಿಮ ಬಂಗಾಳದಲ್ಲಿಯೂ ಆದಿವಾಸಿ ಜನಸಂಖ್ಯೆ ಗಣನೀಯವಾಗಿಯೇ ಇದೆ. ಕಾಶ್ಮೀರದಲ್ಲಿ ಈಗ ಇರುವುದು ನ್ಯಾಷನಲ್‌ ಕಾನ್ಫರೆನ್ಸ್‌ನ ಮೂವರು ಸಂಸದರ ಮತಗಳು ಮಾತ್ರ. ಈ ಮತಗಳ ಮೌಲ್ಯ 2,100. ಹಾಗಿದ್ದರೂ ಕಾಶ್ಮೀರದ ಜನರೊಂದಿಗೆ ತಾವು ಇದ್ದೇವೆ ಎಂಬುದನ್ನು ತೋರಿಸಿಕೊಳ್ಳುವುದಕ್ಕಾಗಿ ಸಿನ್ಹಾ ಅವರು ಶ್ರೀನಗರಕ್ಕೂ ಭೇಟಿ ಕೊಟ್ಟಿದ್ದಾರೆ. ಇದು ಸಾಂಕೇತಿಕವಾದ ಭೇಟಿಯಾದರೂ ರಾಜಕೀಯವಾಗಿ ಮಹತ್ವದ್ದು ಎಂದು ಸಿನ್ಹಾ ಹೇಳಿದ್ದಾರೆ. ಸಿನ್ಹಾ ಅವರು ತಮ್ಮ ತವರು ರಾಜ್ಯ ಜಾರ್ಖಂಡ್‌ನಿಂದ ಪ್ರಚಾರ ಆರಂಭಿಸಲಿಲ್ಲ. ಅವರು ಜಾರ್ಖಂಡ್‌ನಿಂದ ಪ‍್ರಚಾರ ಆರಂಭಿಸಬೇಕು ಎಂದೇ ನಿರ್ಧಾರವಾಗಿತ್ತು. ಆದರೆ, ಜೆಎಂಎಂ ಬೆಂಬಲ ಬದಲಾಯಿಸಿದ್ದರಿಂದಾಗಿ ಸಿನ್ಹಾ ಅವರು ಜಾರ್ಖಂಡ್‌ನಿಂದ ಪ್ರಚಾರ ಆರಂಭಿಸಲಿಲ್ಲ. ಅವರು ಕೋಲ್ಕತ್ತಕ್ಕೂ ಭೇಟಿ ಕೊಡಲಿಲ್ಲ. ಈ ಭೇಟಿಯು ಮಮತಾ ಅವರ ಮತಬ್ಯಾಂಕ್‌ಗೆ ಹಾನಿ ಮಾಡಬಹುದು ಎಂಬುದೇ ಇದಕ್ಕೆ ಕಾರಣ.

ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್‌ ಅವರು ಸ್ಪರ್ಧಿಸಬೇಕು ಎಂಬುದು ವಿರೋಧ ಪಕ್ಷಗಳ ಇಚ್ಛೆ ಆಗಿತ್ತು. ಪವಾರ್ ಸ್ಪರ್ಧಿಸಿದ್ದರೆ, ಮೋದಿ ಇಕ್ಕಟ್ಟಿಗೆ ಸಿಲುಕುತ್ತಿದ್ದರು. ಆದರೆ, ಪವಾರ್‌ ಸ್ಪರ್ಧೆಗೆ ಒಪ್ಪಲಿಲ್ಲ. ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್‌ ಅಬ್ದುಲ್ಲಾ ಅವರು ಹಿಂದೇಟು ಹಾಕಿದರು. ಮಹಾತ್ಮ ಗಾಂಧಿ ಅವರ ಮೊಮ್ಮಗ, ಮಾಜಿ ರಾಜ್ಯಪಾಲ ಗೋಪಾಲಕೃಷ್ಣ ಗಾಂಧಿ ಅವರೂ ಕಣಕ್ಕೆ ಇಳಿಯಲು ತಯಾರಾಗಲಿಲ್ಲ.

ಚುನಾವಣೆಯನ್ನು ‘ಗಾಂಧಿ ವಿರುದ್ಧ ಗೋಡ್ಸೆ’ ಎಂಬಂತೆ ಬಿಂಬಿಸಲು ವಿರೋಧ ಪಕ್ಷಗಳು ಯೋಚಿಸಿದ್ದವು. ಅದು ಸಾಧ್ಯವಾಗಲಿಲ್ಲ. ಬಿಜೆಪಿ ಸರ್ಕಾರದಲ್ಲಿ ಈ ಹಿಂದೆ ಸಚಿವರಾಗಿದ್ದ ಸಿನ್ಹಾ ಅವರನ್ನು ಆಯ್ಕೆ ಮಾಡಬೇಕಾಯಿತು. ಮೋದಿ ಅವರು ಪ್ರಧಾನಿ ಆಗಬೇಕು ಎಂಬುದನ್ನು ಸಿನ್ಹಾ 2014ರಲ್ಲಿ ಬೆಂಬಲಿಸಿದ್ದರು. ಬಳಿಕ, ಅವರಿಗೆ ಲೋಕಸಭೆಗೆ ಸ್ಪರ್ಧಿಸಲು ಟಿಕೆಟ್‌ ನಿರಾಕರಿಸಲಾಯಿತು. ಅವರು ಮೋದಿ ಟೀಕಾಕಾರರಾಗಿ ಬದಲಾದರು. ಹಲವು ನಾಯಕರು ಸ್ಪರ್ಧಿಸಲು ಹಿಂದೇಟು ಹಾಕಿದ್ದೇ ವಿರೋಧ ಪಕ್ಷಗಳಿಗೆ ದೊಡ್ಡ ಹಿನ್ನಡೆ ಆಯಿತು. ವಿರೋಧ ಪಕ್ಷಗಳಲ್ಲಿ ಅಭ್ಯರ್ಥಿಗಳೇ ಇಲ್ಲ ಎಂಬುದು ಬಯಲಾಯಿತು. ಸಿನ್ಹಾ ಅವರು 2018ರಿಂದಲೇ ಮೋದಿಯ ಟೀಕಾಕಾರ ಎಂಬುದನ್ನು ದೊಡ್ಡದಾಗಿ ಬಿಂಬಿಸಿ, ಅವರ ಅಭ್ಯರ್ಥಿತನಕ್ಕೆ ಹೆಚ್ಚಿನ ಘನತೆ ತರಲು ವಿರೋಧ ಪಕ್ಷಗಳು ಯತ್ನಿಸಿವೆ. ಪ್ರಚಾರದ ಸಂದರ್ಭದಲ್ಲಿ, ಸಿನ್ಹಾ ಅವರು ಮೋದಿ ನೇತೃತ್ವದ ಸರ್ಕಾರದ ಆಳ್ವಿಕೆಯ ‘ದೋಷಗಳನ್ನು’ ಎತ್ತಿ ತೋರಿಸಿದ್ದಾರೆ.

ಸೋಲು ಖಚಿತವಾಗಿದ್ದರೂ ವಿರೋಧ ಪಕ್ಷಗಳ ಹೋರಾಟಕ್ಕೆ ದೊಡ್ಡ ಮಟ್ಟದ ವಿಶ್ವಾಸಾರ್ಹತೆಯೂ ಉಳಿಯಲಿಲ್ಲ. ವಿರೋಧ ಪಕ್ಷಗಳ ನಡುವೆ ಇರುವ ಒಡಕು ಮತ್ತು ವಿರೋಧಾಭಾಸಗಳು ಇದಕ್ಕೆ ಕಾರಣ. ಕಾಂಗ್ರೆಸ್‌ನ ಸ್ಥಾನ ಏನು ಎಂಬುದನ್ನು ತೋರಿಸಬೇಕು ಎಂಬುದು ಮಮತಾ ಬ್ಯಾನರ್ಜಿ ಅವರ ಬಯಕೆಯಾಗಿತ್ತು. ಕಾಂಗ್ರೆಸ್‌ ಜತೆಗೆ ವೇದಿಕೆ ಹಂಚಿಕೊಳ್ಳಲು ಟಿಆರ್‌ಎಸ್‌ಗೆ ಮನಸ್ಸಿಲ್ಲ. ಎಎಪಿ, ಅಳೆದೂ ಸುರಿದೂ ಕೊನೆ ಕ್ಷಣದಲ್ಲಿ ಬೆಂಬಲ ಘೋಷಿಸಿತು.

-----

ರಾಷ್ಟ್ರಪತಿ ಭವನಕ್ಕೆ ಪಯಣ

ರಾಷ್ಟ್ರಪತಿ ಚುನಾವಣೆ

ಚುನಾವಣೆ ದಿನಾಂಕ;ಜುಲೈ 18

ಮತ ಎಣಿಕೆ ದಿನಾಂಕ;ಜುಲೈ 21

ನಾಮಪತ್ರ ಸಲ್ಲಿಸಿದವರು;94

ನಾಮಪತ್ರ ತಿರಸ್ಕೃತಗೊಂಡವರು;92

2022: ಮತದಾರರು ಯಾರು?

543;ಲೋಕಸಭಾ ಸದಸ್ಯರು

233;ರಾಜ್ಯಸಭಾ ಸದಸ್ಯರು

4,033;ರಾಜ್ಯ ವಿಧಾನಸಭೆಗಳ ಶಾಸಕರು

4,809;ಮತ ಚಲಾಯಿಸಲಿರುವ ಒಟ್ಟು ಜನಪ್ರತಿನಿಧಿಗಳ ಸಂಖ್ಯೆ

87 ಮತಗಳು ಕಡಿಮೆ

2017;4,896

2022;4,809

*ಜಮ್ಮು ಕಾಶ್ಮೀರ ವಿಧಾನಸಭೆ ಅಸ್ತಿತ್ವದಲ್ಲಿಲ್ಲದ ಕಾರಣ, 2022ರ ರಾಷ್ಟ್ರಪತಿ ಚುನಾವಣೆಯಲ್ಲಿ 87 ಸದಸ್ಯರ ಮತಗಳು ಕಡಿಮೆ ಆಗಲಿವೆ

ಜನಪ್ರತಿನಿಧಿಗಳ ಮತಮೌಲ್ಯ 

5,43,200;ಸಂಸದರ ಮತಮೌಲ್ಯ

543,231;ಶಾಸಕರ ಮತಮೌಲ್ಯ

10,86,431;ಒಟ್ಟು ಸದಸ್ಯರ ಮತಮೌಲ್ಯ

ಒಟ್ಟು ಮತಮೌಲ್ಯ ಇಳಿಕೆ

2017;10.98 ಲಕ್ಷ

2022;10.86 ಲಕ್ಷ

*ಜಮ್ಮು ಕಾಶ್ಮೀರ ವಿಧಾನಸಭೆ ಅಮಾನತಿನಲ್ಲಿರುವ ಕಾರಣ, ಈ ಬಾರಿಯ ರಾಷ್ಟ್ರಪತಿ ಚುನಾವಣೆಯಲ್ಲಿ ಅಲ್ಲಿನ ಚುನಾಯಿತ ಶಾಸಕರ ಮತಗಳು ಕಡಿಮೆ ಆಗಲಿವೆ 

–––––

ನಿಮಗಿದು ಗೊತ್ತೇ...

1967;17 ಅಭ್ಯರ್ಥಿಗಳು ಕಣದಲ್ಲಿದ್ದರು. ಇದು ಈವರೆಗಿನ ಅತಿಹೆಚ್ಚು ಅಭ್ಯರ್ಥಿಗಳ ಸಂಖ್ಯೆ. ರಾಷ್ಟ್ರಪತಿಯಾಗಿ ಆಯ್ಕೆಯಾದ ಜಾಕಿರ್ ಹುಸೇನ್ ಅವರ ಎದುರಾಳಿಗಳಲ್ಲಿ 9 ಅಭ್ಯರ್ಥಿಗಳು ಶೂನ್ಯ ಮತ ಸಂಪಾದಿಸಿದ್ದರು

1969;15 ಅಭ್ಯರ್ಥಿಗಳು ಕಣದಲ್ಲಿದ್ದರು. ಇದು ಎರಡನೇ ಅತಿಹೆಚ್ಚು ಅಭ್ಯರ್ಥಿಗಳ ಸಂಖ್ಯೆ. ವಿ.ವಿ. ಗಿರಿ ಅವರು ಚುನಾಯಿತರಾದರು. ಇವರ ಎದುರು ಸ್ಪರ್ಧಿಸಿದ್ದ ಐವರು ಶೂನ್ಯ ಸಂಪಾದಿಸಿದರು. ಖುಬಿ ರಾಮ್ ಎಂಬ ಅಭ್ಯರ್ಥಿ 94 ಮತಗಳನ್ನು ಗಳಿಸಿದ್ದರು. ಸೊನ್ನೆ ಗಳಿಸಿದವರನ್ನು ಹೊರತುಪಡಿಸಿದರೆ, ಇದು ಈವರೆಗಿನ ಅತಿಕಡಿಮೆ ಮತಗಳಿಕೆ ಎಂಬುದಾಗಿ ದಾಖಲಾಗಿದೆ

1977;ಅವಿರೋಧವಾಗಿ ಆಯ್ಕೆಯಾದ ಏಕೈಕ ರಾಷ್ಟ್ರಪತಿ ನೀಲಂ ಸಂಜೀವರೆಡ್ಡಿ

1997;ಆರ್‌.ಕೆ. ನಾರಾಯಣನ್ ಅವರು ರಾಷ್ಟ್ರಪತಿ ಚುನಾವಣೆಯಲ್ಲಿ ಅತಿಹೆಚ್ಚು ಮತಗಳನ್ನು (9,56,290) ಪಡೆದ ಶ್ರೇಯ ಹೊಂದಿದ್ದಾರೆ

2007;ಮೊದಲ ಮಹಿಳಾ ರಾಷ್ಟ್ರಪತಿಯಾಗಿ ಪ್ರತಿಭಾ ಪಾಟೀಲ್ ಆಯ್ಕೆ

2017;ಮೀರಾ ಕುಮಾರ್ ಅವರು 3,67,314 ಮತಗಳನ್ನು ಪಡೆದಿದ್ದರು. 1952ರಿಂದ ಪರಿಗಣಿಸಿದರೆ, ಸೋತ ಅಭ್ಯರ್ಥಿಯೊಬ್ಬರು ಗಳಿಸಿದ ಅತ್ಯಧಿಕ ಮತಗಳಿವು

*1952ರಿಂದ ಇಲ್ಲಿಯವರೆಗೆ 67 ಅಭ್ಯರ್ಥಿಗಳು ರಾಷ್ಟ್ರಪತಿ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇವರಲ್ಲಿ ಮಹಿಳೆಯರ ಸಂಖ್ಯೆ 7 ಮಾತ್ರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು