ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ-ಅಗಲ | ರಾಷ್ಟ್ರಪತಿ: ದೇಶದ ಮುಖ್ಯಸ್ಥರಿಗೆ ಸೀಮಿತ ಅಧಿಕಾರ

Last Updated 25 ಜುಲೈ 2022, 19:30 IST
ಅಕ್ಷರ ಗಾತ್ರ

ಲ್ಯುಟೆನ್ಸ್‌ ದೆಹಲಿಯ ಹೃದಯ ಭಾಗದಲ್ಲಿರುವ 330 ಎಕರೆ ವಿಸ್ತಾರ ಪ್ರದೇಶದಲ್ಲಿ ರಾಷ್ಟ್ರಪತಿ ಭವನವಿದೆ. ರಾಷ್ಟ್ರಪತಿ ಭವನದ ಕಟ್ಟಡದ ವಿಸ್ತಾರವೇ ಐದು ಎಕರೆಗಳಷ್ಟಿದೆ. ಭಾರತ ಗಣರಾಜ್ಯದ ಮುಖ್ಯಸ್ಥರಾದ ರಾಷ್ಟ್ರಪತಿಯ ನಿವಾಸ ಮತ್ತು ಕಚೇರಿಯನ್ನು ಒಳಗೊಂಡ ಈ ಸಂಕೀರ್ಣಕ್ಕೆ ದೀರ್ಘ ಇತಿಹಾಸವಿದೆ. ಈ ಕಟ್ಟಡವು ಅಸ್ತಿತ್ವಕ್ಕೆ ಬಂದಾಗ, ಅದು ಭಾರತದ ಅತ್ಯುನ್ನತ ಅಧಿಕಾರಿಯ ನಿವಾಸವಾಗಿತ್ತು ಮತ್ತು ಅದೇ ದೇಶದ ಸಾರ್ವಭೌಮ ಶಕ್ತಿ ಕೇಂದ್ರವೂ ಆಗಿತ್ತು. ಈಗಲೂ ರಾಷ್ಟ್ರಪತಿ ಭವನವು ದೇಶದ ಅತ್ಯುನ್ನತ ಹುದ್ದೆಯ ಪ್ರತೀಕವಾಗಿದ್ದರೂ, ಅದರ ಅಧಿಕಾರಗಳು ಸೀಮಿತವಾಗಿವೆ.

ರಾಷ್ಟ್ರಪತಿದ್ರೌ‍ಪದಿ ಮುರ್ಮು
ರಾಷ್ಟ್ರಪತಿದ್ರೌ‍ಪದಿ ಮುರ್ಮು

ರಾಷ್ಟ್ರಪತಿ ಭವನದ ಮೂಲ ಹೆಸರು ಹೀಗಿರಲಿಲ್ಲ. ಬ್ರಿಟಿಷರ ಆಳ್ವಿಕೆಯಲ್ಲಿದ್ದ ಭಾರತದ ಸಮಸ್ತ ಆಡಳಿತವನ್ನು ನಿರ್ದೇಶಿಸುತ್ತಿದ್ದ ವೈಸ್‌ರಾಯ್‌ ಹುದ್ದೆಯಲ್ಲಿದ್ದವರ ನಿವಾಸವಾಗಿತ್ತು. ವೈಸ್‌ರಾಯ್‌ ಅವರ ನಿವಾಸ, ಕಚೇರಿ, ಅತಿಥಿಗೃಹ, ಸಭಾಂಗಣಗಳನ್ನು ಒಳಗೊಂಡ ಈ ಕಟ್ಟಡವನ್ನು 1929ರಲ್ಲಿ ಲೋಕಾರ್ಪಣೆ ಮಾಡಲಾಗಿತ್ತು. ಈ ಕಟ್ಟಡ ಮತ್ತು ಅದರ ಸುತ್ತಲಿನ 330 ಎಕರೆಯ ಆವರಣವನ್ನು ಒಳಗೊಂಡ ವಿಶಾಲವಾದ ಎಸ್ಟೇಟ್‌ ಅನ್ನು ‘ವೈಸ್‌ರಾಯ್‌ ಹೌಸ್‌’ ಎಂದು ಕರೆಯಲಾಗುತ್ತಿತ್ತು. ವೈಸ್‌ರಾಯ್‌ ಅವರು ಬ್ರಿಟಿಷ್‌ ಭಾರತದ ಕಾರ್ಯಾಂಗದ ಮುಖ್ಯಸ್ಥರಾಗಿದ್ದರು ಮತ್ತು ಅವರದ್ದು ಪರಮಾಧಿಕಾರವಾಗಿತ್ತು. ಬ್ರಿಟನ್‌ ರಾಣಿಗಷ್ಟೇ ವೈಸ್‌ರಾಯ್ ಉತ್ತರದಾಯಿಯಾಗಿದ್ದರು.

ಸ್ವತಂತ್ರ ಭಾರತದಲ್ಲಿ, ರಾಷ್ಟ್ರಪತಿಯ ನಿವಾಸ–ಕಚೇರಿಗಾಗಿ ‘ವೈಸ್‌ರಾಯ್‌ ಹೌಸ್‌’ ಅನ್ನು ಬಿಟ್ಟುಕೊಡಲಾಯಿತು. ಆಗ ಅದರ ಹೆಸರನ್ನು ‘ಗವರ್ನ್‌ಮೆಂಟ್‌ ಹೌಸ್‌’ ಎಂದು ಬದಲಿಸಲಾಯಿತು. 1950ರಲ್ಲಿ ಬಾಬು ರಾಜೇಂದ್ರ ಪ್ರಸಾದ್‌ ಅವರು ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ‘ಗವರ್ನ್‌ಮೆಂಟ್‌ ಹೌಸ್‌’ಗೆ, ‘ರಾಷ್ಟ್ರಪತಿ ಭವನ’ ಎಂದು ಮರುನಾಮಕರಣ ಮಾಡಲಾಯಿತು.

ಸ್ವತಂತ್ರ ಭಾರತದಲ್ಲಿ ರಾಷ್ಟ್ರಪತಿಯೇ ಸರ್ಕಾರದ ಮುಖ್ಯಸ್ಥರಾಗಿದ್ದರೂ ಬಹುಪಾಲು ಅಧಿಕಾರ ಇರುವುದು ಸಂಸತ್ತಿಗೆ ಹಾಗೂ ಸಚಿವ ಸಂಪುಟಕ್ಕೆ. ರಾಷ್ಟ್ರಪತಿ ಅವರು ತಮಗೆ ಇರುವ ಅಧಿಕಾರವನ್ನೂ, ಸಚಿವ ಸಂಪುಟದ ಶಿಫಾರಸಿನ ಆಧಾರದಲ್ಲೇ ಚಲಾಯಿಸಬೇಕಾಗುತ್ತದೆ. ರಾಷ್ಟ್ರಪತಿಯು ತಮ್ಮ ವಿವೇಚನೆ ಬಳಸಿ ತೀರ್ಮಾನ ತೆಗೆದುಕೊಳ್ಳುವ ಅಥವಾ ಆದೇಶಿಸುವ ಅಧಿಕಾರವಿರುವುದು ಕ್ಷಮಾ ಅರ್ಜಿಗಳ ವಿಲೇವಾರಿಯಲ್ಲಿ ಮಾತ್ರ.

ಅಧಿಕಾರಗಳು

lದೇಶದ ಮೂರೂ ಸೇನಾಪಡೆಗಳ ಮುಖ್ಯಸ್ಥರಾಗಿರುತ್ತಾರೆ

lಸಂಸತ್ತಿನ ಉಭಯ ಸದನಗಳ ಅಧಿವೇಶನ ಇಲ್ಲದೇ ಇರುವಾಗ ಸರ್ಕಾರವು ಹೊರಡಿಸುವ ಸುಗ್ರೀವಾಜ್ಞೆಗಳನ್ನು ಅನುಮೋದಿಸುವ ಅಧಿಕಾರ‌

lಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕಾರವಾದ ಮಸೂದೆಗಳನ್ನು ಅನುಮೋದಿಸುವ ಅಧಿಕಾರ. ರಾಷ್ಟ್ರಪತಿಯ ಸಹಿ ಬಿದ್ದ ನಂತರವಷ್ಟೇ ಯಾವುದೇ ಮಸೂದೆ ಕಾಯ್ದೆಯಾಗುತ್ತದೆ

lಯಾವುದೇ ಮಸೂದೆಗೆ ತಿದ್ದುಪಡಿ ಸೂಚಿಸಿ, ಸಂಸತ್ತಿಗೆ ವಾಪಸ್‌ ಕಳುಹಿಸುವ ಅಧಿಕಾರ ರಾಷ್ಟ್ರಪತಿಗೆ ಇದೆ. ಹೀಗೆ ಕಳುಹಿಸಲಾದ ಮಸೂದೆಗೆ ಅವರು ಸೂಚಿಸಿರುವ ತಿದ್ದುಪಡಿ ಅಥವಾ ಬದಲಾವಣೆಗಳಿಗೆ ಸಂಸತ್ತು ಬದ್ಧವಾಗಿರಬೇಕಿಲ್ಲ. ಯಾವುದೇ ಬದಲಾವಣೆ ಇಲ್ಲದೆ ಅದೇ ಮಸೂದೆ ಮತ್ತೆ ತಮ್ಮ ಬಳಿಗೆ ಬಂದರೆ ಅದನ್ನು ಅವರು ಮತ್ತೆ ತಿರಸ್ಕರಿಸಬಹುದು. ಆದರೆ ಮೂರನೇ ಬಾರಿ ಅದೇ ಮಸೂದೆ ತಮ್ಮ ಬಳಿಗೆ ಬಂದರೆ, ರಾಷ್ಟ್ರಪತಿಯು ಅದನ್ನು ಅನುಮೋದಿಸಲೇಬೇಕಾಗುತ್ತದೆ

lಸಚಿವ ಸಂಪುಟದ ಶಿಫಾರಸಿನ ಆಧಾರದಲ್ಲಿ ಲೋಕಸಭೆಯನ್ನು ವಿಸರ್ಜಿಸುವ ಅಧಿಕಾರ

lಕ್ಷಮಾ ಅರ್ಜಿಗಳನ್ನು ವಿಲೇವಾರಿ ಮಾಡುವ ಅಧಿಕಾರ

lರಾಷ್ಟ್ರಪತಿ ಆಳ್ವಿಕೆಯ ಸಂದರ್ಭದಲ್ಲಿ ರಾಜ್ಯಪಾಲರ ಮೂಲಕ ರಾಜ್ಯಗಳಲ್ಲಿ ಆಡಳಿತ ನಡೆಸುವ ಅಧಿಕಾರ

ವಾಗ್ದಂಡನೆ

ಸಂವಿಧಾನವನ್ನು ಉಲ್ಲಂಘಿಸಿದ ಆರೋಪದಲ್ಲಿ ರಾಷ್ಟ್ರಪತಿಯನ್ನು ಅಧಿಕಾರದಿಂದ ಕೆಳಗಿಳಿಸುವ ಪ್ರಕ್ರಿಯೆಯನ್ನು ‘ವಾಗ್ದಂಡನೆ’ ಎಂದು ಕರೆಯಲಾಗುತ್ತದೆ. ಈ ಪ್ರಕ್ರಿಯೆ ಹೇಗೆ ನಡೆಯಬೇಕು ಎಂಬುದನ್ನು ಸಂವಿಧಾನದ 61ನೇ ವಿಧಿಯಲ್ಲಿ ವಿವರಿಸಲಾಗಿದೆ.

ಸಂವಿಧಾನವನ್ನು ರಾಷ್ಟ್ರಪತಿ ಉಲ್ಲಂಘಿಸಿದ್ದಾರೆ ಎಂದು ಸಂಸತ್ತು ಭಾವಿಸಿದರೆ, ಅದಕ್ಕೆ ಸಂಬಂಧಿಸಿದ ಗೊತ್ತುವಳಿಯನ್ನು ಯಾವುದೇ ಒಂದು ಸದನದಲ್ಲಿ ಮಂಡಿಸಬಹುದು. ಆದರೆ, ಸದನ ಒಟ್ಟು ಸದಸ್ಯರಲ್ಲಿ ನಾಲ್ಕನೇ ಒಂದರಷ್ಟು ಸದಸ್ಯರ ಸಹಿ ಇದ್ದರಷ್ಟೇ ಅಂತಹ ಗೊತ್ತುವಳಿಯನ್ನು ಮಂಡಿಸಬಹುದು. ರಾಷ್ಟ್ರಪತಿಯ ಮೇಲಿರುವ ಆರೋಪವನ್ನು ಪರಿಶೀಲಿಸಿ, ಒಟ್ಟು ಸದಸ್ಯರಲ್ಲಿ ಮೂರನೇ ಎರಡರಷ್ಟು ಸದಸ್ಯರ ಸಹಮತವಿದ್ದರಷ್ಟೇ ಗೊತ್ತುವಳಿ ಅಂಗೀಕಾರವಾಗುತ್ತದೆ.

ಒಂದು ಸದನದಲ್ಲಿ ಆ ಗೊತ್ತುವಳಿಯು ಅಂಗೀಕಾರವಾದ ನಂತರವೂ, ಇನ್ನೊಂದು ಸದನವು ಆರೋಪವನ್ನು ತನಿಖೆಗೆ ಒಳಪಡಿಸಬಹುದು. ಆರೋಪವು ಸಾಬೀತಾದರೆ ಮತ್ತು ಆ ಸದನದ ಒಟ್ಟು ಸದಸ್ಯರ ಮೂರನೇ ಎರಡರಷ್ಟು ಸದಸ್ಯರು ಅನುಮೋದಿಸಿದರೆ ಗೊತ್ತುವಳಿಯು ಅಂಗೀಕಾರವಾಗುತ್ತದೆ. ಆಗ ರಾಷ್ಟ್ರಪತಿ ಅವರನ್ನು ಹುದ್ದೆಯಿಂದ ಕೆಳಗೆ ಇಳಿಸಬಹುದು.

ರಾಷ್ಟ್ರಪತಿ ಭವನದ ಬೆರಗು

ರಾಷ್ಟ್ರಪತಿ ಅವರ ಅಧಿಕೃತ ನಿವಾಸವು ಉದ್ಯಾನವನ, ಮ್ಯೂಸಿಯಂ, ಸಮಾರಂಭ ಸಭಾಂಗಣ, ವಿಶಾಲವಾದ ಹೊರಾಂಗಣ, ಅಂಗರಕ್ಷಕರು ಹಾಗೂ ಸಿಬ್ಬಂದಿ ಗೃಹಗಳನ್ನು ಒಳಗೊಂಡಿದೆ. ಇದು ದೇಶವೊಂದರ ಮುಖ್ಯಸ್ಥರ ಅತಿವಿಶಾಲವಾದ ನಿವಾಸ ಎನಿಸಿದೆ. ಇದರ ಮುಖ್ಯ ಆಕರ್ಷಣೆಯೇ ಬೃಹತ್ ಗುಮ್ಮಟ.ಅಧ್ಯಕ್ಷರ ಅರಮನೆ ಎಂದೂ ಕರೆಯಲಾಗುವ ರಾಷ್ಟ್ರಪತಿ ಭವನವು ಇಟಲಿಯ ರೋಮ್‌ನ ಕ್ವಿರಿನಲ್ ಅರಮನೆಯನ್ನು ಹೊರತುಪಡಿಸಿದರೆ, ಅತಿದೊಡ್ಡ ಭವನವಾಗಿದೆ

l1912ರಲ್ಲಿ ಇದರ ನಿರ್ಮಾಣ ಆರಂಭವಾಯಿತು. ಒಟ್ಟು 17 ವರ್ಷಗಳಲ್ಲಿ ಕಟ್ಟಡ ನಿರ್ಮಾಣ (1929) ಪೂರ್ಣಗೊಂಡಿತು. 29 ಸಾವಿರ ಜನರು ಕಟ್ಟಡ ನಿರ್ಮಾಣಕ್ಕೆ ಕೆಲಸ ಮಾಡಿದ್ದಾರೆ.70 ಕೋಟಿ ಇಟ್ಟಿಗೆ ಹಾಗೂ 30 ಲಕ್ಷ ಘನ ಅಡಿಯಷ್ಟು ಕಲ್ಲುಗಳನ್ನು ಬಳಸಲಾಗಿದೆ,ರಾಷ್ಟ್ರಪತಿ ಕಚೇರಿ, ಅತಿಥಿಗಳ ಕೊಠಡಿ, ಸಿಬ್ಬಂದಿ ಕೋಣೆಗಳು ಸೇರಿದಂತೆ320 ಕೊಠಡಿಗಳು ಇಲ್ಲಿವೆ; 750ಕ್ಕೂ ಹೆಚ್ಚು ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ.ಸರ್ ಎಡ್ವಿನ್ ಲ್ಯಾಂಡ್‌ಸೀರ್ ಲ್ಯುಟೆನ್ಸ್ ಅವರು ಇದರ ವಾಸ್ತುಶಿಲ್ಪಿ

lರೈಸಿನಾ ಹಿಲ್‌ ಪ್ರದೇಶದಲ್ಲಿ ಇದು ನಿರ್ಮಾಣವಾಗಿದೆ. ಸುಮಾರು 300 ಕುಟುಂಬಗಳಿದ್ದ ರೈಸಿನಿ ಮತ್ತು ಮಾಲ್ಚಾ ಎಂಬ ಎರಡು ಹಳ್ಳಿಗಳನ್ನು 1894ರ ಭೂಸ್ವಾಧೀನ ಕಾಯ್ದೆಯಡಿ ವಶಪಡಿಸಿಕೊಂಡು ವೈಸ್‌ರಾಯ್ ಭವನವನ್ನು ನಿರ್ಮಿಸಲಾಗಿತ್ತು. ಸುತ್ತಮುತ್ತಲ ಪ್ರದೇಶಗಳಿಗಿಂತ ಸ್ವಲ್ಪ ಎತ್ತದಲ್ಲಿರುವ ಕಾರಣಕ್ಕೆ ರೈಸಿನಾ ಹಿಲ್ ಎಂಬ ಹೆಸರು ಬಂದಿತು.

lಪ್ರತಿವರ್ಷದ ಫೆಬ್ರುವರಿಯಲ್ಲಿ ರಾಷ್ಟ್ರಪತಿ ಭವನದ ಮೊಘಲ್ ಉದ್ಯಾನವನ್ನು ಸಾರ್ವಜನಿಕರ ಪ್ರವೇಶಕ್ಕೆ ಮುಕ್ತಗೊಳಿಸಲಾಗುತ್ತದೆ. ನೂರಾರು ಜಾತಿಯ ಸಸ್ಯಗಳು, ಹೂಗಳಿಂದ ಉದ್ಯಾನ ಕಂಗೊಳಿಸುತ್ತದೆ. ದರ್ಬಾರ್‌ ಹಾಲ್‌ನಲ್ಲಿ ಇರಿಸಿರುವ ಗುಪ್ತರ ಕಾಲದ ಬುದ್ಧನ ಪ್ರತಿಮೆ ರಾಷ್ಟ್ರಪತಿ ಭವನದ ಆಕರ್ಷಣೆಗಳಲ್ಲೊಂದು.

lಉಡುಗೊರೆಗಳ ಮ್ಯೂಸಿಯಂನಲ್ಲಿ ದೊರೆ ಜಾರ್ಜ್–5 ಅವರು 1911ರಲ್ಲಿ ದೆಹಲಿ ದರ್ಬಾರ್ ನಡೆಸುವಾಗ ಕುಳಿತುಕೊಳ್ಳುತ್ತಿದ್ದ 640 ಕೆ.ಜಿಯ ಬೆಳ್ಳಿ ಕುರ್ಚಿಯಿದೆ. ಮಾರ್ಬಲ್ ಹಾಲ್‌ನಲ್ಲಿ ವೈಸ್‌ರಾಯ್‌ಗಳು, ಬ್ರಿಟನ್ ರಾಜಮನೆತನದವರ ಪುತ್ಥಳಿ ಹಾಗೂ ಚಿತ್ರಗಳಿವೆ.

ದ್ರೌಪದಿಯ ಮೂಲ ಹೆಸರು ಪುತಿ

ದೇಶದ ಮೊದಲ ಆದಿವಾಸಿ ರಾಷ್ಟ್ರಪತಿ ಮುರ್ಮು ಅವರಿಗೆ ‘ದ್ರೌ‍ಪದಿ’ ಎಂಬ ಮಹಾಭಾರತದ ಹೆಸರನ್ನು ಇರಿಸಿದ್ದು ಅವರ ಶಾಲಾ ಶಿಕ್ಷಕಿ. ಮುರ್ಮು ಅವರ ಮೂಲ ಹೆಸರು ‘ಪುತಿ’. ಒರಿಯಾದ ಸುದ್ದಿವಾಹಿನಿಯೊಂದಕ್ಕೆ ಇತ್ತೀಚೆಗೆ ಸಂದರ್ಶನ ನೀಡಿದ್ದ ಮುರ್ಮು ಅವರು ಇದನ್ನು ಬಹಿರಂಗಪಡಿಸಿದ್ದರು. ಆರಂಭದಲ್ಲಿ, ಸಂತಾಲ್ ಬುಡಕಟ್ಟು ಸಮುದಾಯದ ‘ಪುತಿ’ ಎಂಬ ಹೆಸರನ್ನು ಅವರಿಗೆ ಇಡಲಾಗಿತ್ತು. ಮುರ್ಮು ಅವರಿಗೆ ಇದು ಸರಿಹೊಂದುವುದಿಲ್ಲ ಎಂದು ಭಾವಿಸಿದ ಶಿಕ್ಷಕಿಯೊಬ್ಬರು ಹೆಸರು ಬದಲಿಸಿದ್ದರು.

ಖರ್ಗೆಗೆ ಸೂಕ್ತ ಆಸನ ಇಲ್ಲ: ಪ್ರತಿಪಕ್ಷ ಕಿಡಿ

ರಾಷ್ಟ್ರಪತಿ ಪ್ರಮಾಣವಚನ ಸಮಾರಂಭದಲ್ಲಿರಾಜ್ಯಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸೂಕ್ತ ಆಸನದ ವ್ಯವಸ್ಥೆ ಕಲ್ಪಿಸಿಲ್ಲ ಎಂದು ಪ್ರತಿಪಕ್ಷಗಳು ಆರೋಪಿಸಿವೆ. ಆದರೆ ಈ ಆರೋಪವನ್ನು ಸರ್ಕಾರ ತಳ್ಳಿಹಾಕಿದೆ. ಖರ್ಗೆ ಅವರಿಗೆ ಮುಂದಿನ ಸಾಲಿನಲ್ಲೇ ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗಿತ್ತು ಎಂದು ಸ್ಪಷ್ಟಪಡಿಸಿದೆ.

ಸದನದ ಹಿರಿಯ ನಾಯಕರಿಗೆ ಅಗೌರವ ತೋರಲಾಗಿದ್ದು, ಶಿಷ್ಟಾಚಾರ ಪಾಲಿಸಲಾಗಿಲ್ಲ ಎಂದು ಆರೋಪಿಸಿ ರಾಜ್ಯಸಭೆ ಸಭಾಪತಿ ಎಂ. ವೆಂಕಯ್ಯ ನಾಯ್ಡು ಅವರಿಗೆ ಬರೆದ ಪತ್ರವನ್ನು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಅವರು ಟ್ವೀಟ್ ಮಾಡಿದ್ದಾರೆ.

‘ಎಲ್ಲ ಸಂಪುಟ ದರ್ಜೆ ಸಚಿವರ ಆಸನಗಳ ನಂತರ ಪ್ರತಿಪಕ್ಷದ ನಾಯಕರಿಗೆ ಆದ್ಯತೆ ನೀಡಲಾಗುತ್ತದೆ. ಇದರ ಪ್ರಕಾರ, ಖರ್ಗೆ ಅವರ ಆಸನವು ಮೂರನೇ ಸಾಲಿನಲ್ಲಿ ಬರುತ್ತದೆ. ಆದರೆ, ಖರ್ಗೆ ಅವರ ಹಿರಿತನವನ್ನು ಪರಿಗಣಿಸಿ, ಅವರಿಗೆ ಮೊದಲ ಸಾಲಿನಲ್ಲೇ ಆಸನ ವ್ಯವಸ್ಥೆ ಕಲ್ಪಿಸಲಾಗಿತ್ತು. ಮೂಲೆಯಲ್ಲಿ ಆಸನ ಸಿಕ್ಕಿದ್ದಕ್ಕೆ ಖರ್ಗೆ ಆಕ್ಷೇಪಿಸಿದ್ದರಿಂದ ಸಾಲಿನ ಮಧ್ಯದಲ್ಲಿ ಕುಳಿತುಕೊಳ್ಳಲು ಅವರಿಗೆ ಸಿಬ್ಬಂದಿ ಮನವಿ ಮಾಡಿದರೂ, ಅವರು ಅದನ್ನು ಒಪ್ಪಿಕೊಳ್ಳಲಿಲ್ಲ. ಬಹುತೇಕ ಸಂಪುಟ ದರ್ಜೆ ಸಚಿವರು ಎರಡನೇ ಸಾಲಿನಲ್ಲಿ ಕುಳಿತಿದ್ದರು. ಇದು ವಿವಾದ ಮಾಡುವ ವಿಷಯವೇ ಅಲ್ಲ’ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಷಿ ಹೇಳಿದ್ದಾರೆ.

ಪ್ರಮಾಣ: ಜುಲೈ 25ರ ಮಹತ್ವ

ದ್ರೌಪದಿ ಮುರ್ಮು ಅವರು ಜುಲೈ 25ರಂದು ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಜುಲೈ 25ರಂದು ಪ್ರಮಾಣವಚನ ಸ್ವೀಕರಿಸಿದ ರಾಷ್ಟ್ರಪತಿಗಳಲ್ಲಿ ಇವರು 10ನೆಯವರು. 1977ರಿಂದ ಈ ಪರಿಪಾಟ ನಡೆದುಬಂದಿದೆ. ಆದರೆ, ಜುಲೈ 25ರಂದೇ ರಾಷ್ಟ್ರಪತಿ ಅಧಿಕಾರ ಸ್ವೀಕರಿಸಬೇಕು ಎಂಬ ನಿಯಮವಿಲ್ಲ.

ಮೊದಲ ರಾಷ್ಟ್ರಪತಿ ಡಾ. ಬಾಬು ರಾಜೇಂದ್ರ ಪ್ರಸಾದ್ ಅವರು ಜನವರಿಯಲ್ಲಿ, ಸರ್ವಪಲ್ಲಿ ರಾಧಾಕೃಷ್ಣನ್ ಅವರು ಮೇ ತಿಂಗಳಲ್ಲಿ ಅಧಿಕಾರ ವಹಿಸಿಕೊಂಡಿದ್ದರು. ಆದರೆ, ಜಾಕಿರ್ ಹುಸೇನ್ ಮತ್ತು ಫಕ್ರುದ್ದೀನ್ ಅಲಿ ಅಹಮದ್ ಅವರು ಅಧಿಕಾರ ಪೂರ್ಣಗೊಳಿಸದ ಕಾರಣ, ಮಧ್ಯಂತರ ಚುನಾವಣೆ ನಡೆಯಿತು. 1977ರಲ್ಲಿ ಆರನೇ ರಾಷ್ಟ್ರಪತಿಯಾಗಿ ನೀಲಂ ಸಂಜೀವರೆಡ್ಡಿ ಅವರು ಜುಲೈ 25ರಂದು ಅಧಿಕಾರ ವಹಿಸಿಕೊಂಡರು. ಅಂದಿನಿಂದ ಇದು ಸಂಪ್ರದಾಯದಂತೆಯೇ ಆಯಿತು.

ಜನಪಥ್‌ನ ಐಷಾರಾಮಿ ಬಂಗಲೆಗೆ ಕೋವಿಂದ್‌

ಅಧಿಕಾರಾವಧಿ ಮುಗಿದ ಬಳಿಕ ರಾಷ್ಟ್ರಪತಿ ನಿವಾಸ ತೊರೆದ ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ದೆಹಲಿಯ ಲ್ಯುಟೆನ್ಸ್‌ ಪ್ರದೇಶದ 12–ಜನಪಥ್‌ ಐಷಾರಾಮಿ ಬಂಗಲೆಗೆ ಸೋಮವಾರ ಸ್ಥಳಾಂತರವಾದರು. ಮಾಜಿ ಕೇಂದ್ರ ಸಚಿವ ರಾಮ್‌ ವಿಲಾಸ್‌ ಪಾಸ್ವಾನ್ ಅವರು ಈ ನಿವಾಸದಲ್ಲಿ ಸುಮಾರು ಮೂರು ದಶಕಗಳ ಕಾಲ ವಾಸವಿದ್ದರು.

ಕೋವಿಂದ್‌ ಅವರಿಗೆ ಮಾಸಿಕ ₹2.5 ಲಕ್ಷ ಪಿಂಚಣಿ ದೊರಕಲಿದೆ.ಅವರ ಸಹಾಯಕ್ಕೆ ಒಬ್ಬರು ಆಪ್ತ ಕಾರ್ಯದರ್ಶಿ, ಒಬ್ಬರು ಹೆಚ್ಚುವರಿ ಕಾರ್ಯದರ್ಶಿ, ಒಬ್ಬ ಸಹಾಯಕ, ಇಬ್ಬರು ಜವಾನರನ್ನು ಸರ್ಕಾರ ನೀಡಲಿದೆ. ವಾರ್ಷಿಕ ₹1 ಲಕ್ಷದವರೆಗೆ ಕಚೇರಿ ವೆಚ್ಚವನ್ನು ಸರ್ಕಾರ ಭರಿಸುತ್ತದೆ.

ಸಂವಿಧಾನ ರಚನಾ ಸಭೆ ಸಲಹಾ ಸಮಿತಿಯಲ್ಲಿ ಬುಡಕಟ್ಟು ಮಹಿಳೆಗೆ ಪ್ರಾತಿನಿಧ್ಯವಿರಲಿಲ್ಲ

ದೇಶದ 15ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಅವರು ಸಂಸತ್ ಭವನದ ಸೆಂಟ್ರಲ್‌ ಹಾಲ್‌ನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆದರೆ ಸರಿಯಾಗಿ 75 ವರ್ಷ ಮತ್ತು ಆರು ತಿಂಗಳ ಹಿಂದೆ ಇದೇ ಸೆಂಟ್ರಲ್‌ ಹಾಲ್‌ನಲ್ಲಿ ಸಂವಿಧಾನ ರಚನಾ ಸಭೆಯ ಸಲಹಾ ಸಮಿತಿ ಸಭೆ ನಡೆದಿತ್ತು. ‘ಸಲಹಾ ಸಮಿತಿಯಲ್ಲಿ ಬುಡಕಟ್ಟು ಸಮುದಾಯದ ಮಹಿಳೆಗೆ ಏಕೆ ಪ್ರಾತಿನಿಧ್ಯ ಇಲ್ಲ’ ಎಂಬ ಪ್ರಶ್ನೆ ಆ ಸಭೆಯಲ್ಲಿ ಮುನ್ನೆಲೆಗೆ ಬಂದಿತ್ತು.

ಆ ಪ್ರಶ್ನೆ ಕೇಳಿದ 75 ವರ್ಷಗಳ ನಂತರ ಬುಡಕಟ್ಟು ಸಮುದಾಯದ ಮಹಿಳೆಯೊಬ್ಬರು ದೇಶದ ಮುಖ್ಯಸ್ಥರ ಹುದ್ದೆಗೆ ಚುನಾಯಿತರಾಗಿದ್ದಾರೆ.

1947ರ ಜನವರಿ 24ರಂದು ಸಲಹಾ ಸಮಿತಿಯ ಸಭೆ ನಡೆದಿತ್ತು. ಸಮಿತಿಯ 68 ಸದಸ್ಯರಲ್ಲಿ ಒಬ್ಬರಾಗಿದ್ದ ಜೈಪಾಲ್‌ ಸಿಂಗ್ ಮುಂಡಾ ಅವರು ಆ ಪ್ರಶ್ನೆ ಕೇಳಿದ್ದರು.‘ಸಲಹಾ ಸಮಿತಿ ಸದಸ್ಯರ ಪಟ್ಟಿಯಲ್ಲಿ ನನ್ನ ಹೆಸರು ಇದೆ. ಆದರೆ, ಈ ಪಟ್ಟಿಯಲ್ಲಿ ಬುಡಕಟ್ಟು ಸಮುದಾಯದ ಒಬ್ಬ ಮಹಿಳೆಯ ಹೆಸರೂ ಯಾಕಿಲ್ಲ ಎಂದು ನಾನು ಪ್ರಶ್ನಿಸುತ್ತಿದ್ದೇನೆ. ಬುಡಕಟ್ಟು ಮಹಿಳೆಯನ್ನು ಹೇಗೆ ಹೊರಗಿಡಲಾಯಿತು’ ಎಂದು ಅವರು ಪ್ರಶ್ನಿಸಿದ್ದರು.

‘ಭಾಗಶಃ ಬಹಿಷ್ಕೃತ ಪ್ರದೇಶ ಮತ್ತು ಬಹಿಷ್ಕೃತ ಪ್ರದೇಶ ಎನ್ನುವ ಮೂಲಕ ಬ್ರಿಟಿಷರು ನಿಮ್ಮನ್ನು ಪ್ರಾಣಿಗಳಂತೆ ಇಟ್ಟಿದ್ದರು ಎಂದು ಇಲ್ಲಿಯವರೆಗೂ ಸುಲಭವಾಗಿ ಹೇಳಬಹುದಾಗಿತ್ತು. ಆದರೆ, ಈಗ ನಿಮ್ಮ ವರ್ತನೆ ಅವರಿಗಿಂತ ಭಿನ್ನವಾಗಿದೆಯೇ’ ಎಂದು ಸಭೆಯಲ್ಲಿ ಎದ್ದು ನಿಂತು ಜೈಪಾಲ್‌ ಪ್ರಶ್ನಿಸಿದ್ದರು.

ರಾಷ್ಟ್ರಪತಿಯಾಗಿ ಮುರ್ಮು ಅವರ ಅಧಿಕಾರ ಸ್ವೀಕಾರವು ಬಡವರು, ಸಮಾಜದ ಅಂಚಿನಲ್ಲಿರುವ ನಿರ್ಲಕ್ಷಿತ ಸಮುದಾಯಗಳ ಪಾಲಿಗೆ ಮಹತ್ವದ ಕ್ಷಣ. ಈ ಸಮಾರಂಭವನ್ನು ಇಡೀ ದೇಶವು ಹೆಮ್ಮೆಯಿಂದ ನೋಡಿದೆ

- ನರೇಂದ್ರ ಮೋದಿ, ಪ್ರಧಾನಿ

ಮುರ್ಮು ಅವರು ತಮ್ಮ ಭಾಷಣದಲ್ಲಿ ಬುಡಕಟ್ಟು ಜನರು, ಮಹಿಳೆ, ಯುವಕರ ಬಗ್ಗೆ ನೈಜ ಕಳಕಳಿ ವ್ಯಕ್ತಪಡಿಸಿದ್ದಾರೆ. ಆದರೆ ಬಿಜೆಪಿ ಸರ್ಕಾರದ ನೀತಿಗಳು ಹಾಗೂ ಮುರ್ಮು ಅವರ ಕನಸುಗಳು ಜೊತೆಯಾಗಿ ಸಾಗುವುದು ಕಷ್ಟ

- ಬಿನೊಯ್ ವಿಶ್ವಂ, ಸಿಪಿಐ ಸಂಸದ

ಸಿಎಎ, 370 ವಿಧಿ ರದ್ದತಿ ಮೊದಲಾದ ವಿಚಾರಗಳಲ್ಲಿ ಸಂವಿಧಾನವನ್ನು ಹಲವು ಬಾರಿ ದಮನಿಸಿದ ಪರಂಪರೆಯೊಂದನ್ನು ಬಿಟ್ಟುಹೋಗಿರುವರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಬಿಜೆಪಿಯ ರಾಜಕೀಯ ಕಾರ್ಯಸೂಚಿಯನ್ನು ಪೂರ್ಣಗೊಳಿಸಿದ್ದಾರೆ

ಮೆಹಬೂಬಾ ಮುಫ್ತಿ, ಪಿಡಿಪಿ ಮುಖ್ಯಸ್ಥೆ

ಮುರ್ಮು ಅವರು ಸ್ಪರ್ಧಿಸಿದ್ದ ದೇಶದ ಅತ್ಯುನ್ನತ ಚುನಾವಣೆಯು ಭಾರತದ ಪ್ರಜಾಪ್ರಭುತ್ವದ ಸಾಮರ್ಥ್ಯವನ್ನು ಸಾಬೀತುಪಡಿಸಿದೆ. ಅವರು ಅಧಿಕಾರಾವಧಿ ಪೂರ್ಣಗೊಳಿಸಲಿ ಎಂದು ಹಾರೈಸುತ್ತೇನೆ

ಎಂ. ವೆಂಕಯ್ಯ ನಾಯ್ಡು, ಉಪರಾಷ್ಟ್ರಪತಿ

ರಾಷ್ಟ್ರಪತಿ ಮುರ್ಮು ಅವರ ದೃಷ್ಟಿಕೋನ ಉತ್ತಮವಾಗಿದೆ. ಅವರ ಪ್ರತಿಯೊಂದು ಮಾತೂ ಅರ್ಥಗರ್ಭಿತ. ಅವರ ಮಾತುಗಳು ನನ್ನ ಮೇಲೆ ಸಾಕಷ್ಟು ಪ್ರಭಾವ ಬೀರಿವೆ

ಅಶೋಕ್ ಗೆಹಲೋತ್, ರಾಜಸ್ಥಾನ ಮುಖ್ಯಮಂತ್ರಿ

ಆಧಾರ: ರಾಷ್ಟ್ರಪತಿ ಭವನ, ಪಿಟಿಐ, ಸಂವಿಧಾನದ 61ನೇ ವಿಧಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT