ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಖ್ಯೆ–ಸುದ್ದಿ: ಬಿಗಿಯಾಗುತ್ತಿದೆ ಯುಎಪಿಎ ಕುಣಿಕೆ

ವರ್ಷದಿಂದ ವರ್ಷಕ್ಕೆ ಪ್ರಕರಣ ಹಾಗೂ ಬಂಧಿತರ ಸಂಖ್ಯೆಯಲ್ಲಿ ಭಾರಿ ಏರಿಕೆ
Last Updated 17 ಡಿಸೆಂಬರ್ 2021, 2:17 IST
ಅಕ್ಷರ ಗಾತ್ರ

ಪ್ರತಿಪಕ್ಷಗಳು ಹಾಗೂ ಸಾಮಾಜಿಕ ಹೋರಾಟಗಾರರಿಂದ ತೀವ್ರ ಟೀಕೆಗೆ ಗುರಿಯಾಗಿರುವ ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆಯ (ಯುಎಪಿಎ) ಅಡಿಯಲ್ಲಿ ದಾಖಲಾಗುವ ಪ್ರಕರಣಗಳ ಸಂಖ್ಯೆಯಲ್ಲಿ ಕಳೆದ ಐದು ವರ್ಷಗಳಿಂದ ಏರಿಕೆ ಕಂಡುಬಂದಿದೆ. ಈ ಕಾಯ್ದೆಯಡಿ ಬಂಧಿತರಾಗುವ ಆರೋಪಿಗಳ ಸಂಖ್ಯೆಯೂ ಗಣನೀಯವಾಗಿ ಏರಿಕೆ ಕಂಡಿದೆ. ಎಲ್ಲ ರಾಜ್ಯಗಳಿಗಿಂತ ಉತ್ತರ ಪ್ರದೇಶದಲ್ಲಿ ಈ ಕಾನೂನಿನ ಬಳಕೆ ಅಧಿಕವಾಗಿದೆ ಎಂದು ಕೇಂದ್ರ ಸರ್ಕಾರ ನೀಡಿದ ಅಂಕಿ–ಅಂಶಗಳು ತಿಳಿಸಿವೆ. ಈ ಕಾನೂನನ್ನು ದುರ್ಬಳಕೆ ಮಾಡಿಕೊಂಡು ಅಮಾಯಕರನ್ನು ಬಂಧಿಸಲಾಗುತ್ತಿದೆ ಎಂಬ ಆರೋಪ ಸರ್ಕಾರದ ಮೇಲಿದೆ.

2015ರಲ್ಲಿ ಇಡೀ ದೇಶದಲ್ಲಿ 897 ಪ್ರಕರಣಗಳು ದಾಖಲಾಗಿದ್ದವು. ಈ ಸಂಖ್ಯೆಯು 2019ರಲ್ಲಿ 1,226ಕ್ಕೆ ಏರಿಕೆಯಾಗಿದೆ. 2015ರಲ್ಲಿ ಈ ಕಾಯ್ದೆಯಡಿ 1,128 ಜನರನ್ನು ಬಂಧಿಸಲಾಗಿತ್ತು. 2019ರಲ್ಲಿ 1,948 ಜನಕಾರಾಗೃಹ ಸೇರಿದ್ದಾರೆ ಎಂದು ಕೇಂದ್ರ ಸರ್ಕಾರವು ಸಂಸತ್ತಿಗೆ ಮಾಹಿತಿ ನೀಡಿದೆ. 2020ರಲ್ಲಿ ಕೋವಿಡ್‌ ಸಾಂಕ್ರಾಮಿಕ ಹಾಗೂ ಈ ಕಾರಣಕ್ಕೆ ವಿಧಿಸಲಾದ ಲಾಕ್‌ಡೌನ್‌ ಕಾರಣಗಳಿಂದ ಜನಸಂಚಾರ ವಿರಳವಾಗಿತ್ತು. ಸಾಂಕ್ರಾಮಿಕದ ವರ್ಷದಲ್ಲಿ ಯುಎಪಿಎ ಕಾಯ್ದೆಯಡಿ ದಾಖಲಾದ ಪ್ರಕರಣಗಳ ಸಂಖ್ಯೆ ಹಾಗೂ ಬಂಧಿತರ ಸಂಖ್ಯೆಯಲ್ಲಿ ಅಲ್ಪ ಇಳಿಕೆ ಕಂಡುಬಂದಿದೆ.

ಉತ್ತರ ಪ್ರದೇಶದಲ್ಲಿ ಹೆಚ್ಚು ಪ್ರಕರಣ
ದೇಶದಲ್ಲಿ ಹೆಚ್ಚು ಯುಎಪಿಎ ಪ್ರಕರಣಗಳು ಕಂಡುಬಂದಿರುವುದು ಉತ್ತರ ಪ್ರದೇಶದಲ್ಲಿ. ಈ ಕಾಯ್ದೆಯಡಿ ಬಂಧಿತರಾದವರ ಸಂಖ್ಯೆಯೂ ಇಲ್ಲೇ ಅಧಿಕ. 2015ರಲ್ಲಿ 23 ಜನರನ್ನು ಬಂಧಿಸಲಾಗಿತ್ತು. 2019ರಲ್ಲಿ ಬಂಧಿತರಾದವರ ಸಂಖ್ಯೆ 498ಕ್ಕೆ ತಲುಪಿತು. 2017ರಲ್ಲಿ ಯೋಗಿ ಆದಿತ್ಯನಾಥ ನೇತೃತ್ವದ ಬಿಜೆಪಿ ಸರ್ಕಾರವು ಅಧಿಕಾರಕ್ಕೆ ಬಂದಿತು. 2016ರಲ್ಲಿ ಕೇವಲ 15 ಜನ ಜೈಲು ಸೇರಿದ್ದರು. ಮರುವರ್ಷವೇ ಇವರ ಸಂಖ್ಯೆ 382ಕ್ಕೆ ಏರಿಕೆಯಾಯಿತು. 2018 ಹಾಗೂ 2019ರಲ್ಲಿ ಬಂಧಿತರ ಸಂಖ್ಯೆ ಐನೂರರ ಸಮೀಪಕ್ಕೆ ಬಂದಿತು. ಕೋವಿಡ್ ಕಾರಣದಿಂದ 2020ರಲ್ಲಿ ಪ್ರಕರಣಗಳ ಸಂಖ್ಯೆ ಹಾಗೂ ಬಂಧಿತರ ಸಂಖ್ಯೆ ಇಳಿಮುಖವಾಗಿದೆ.

ಉತ್ತರ ಪ್ರದೇಶ ಹೊರತುಪಡಿದರೆ, ಜಮ್ಮು ಕಾಶ್ಮೀರದಲ್ಲಿ ಈ ಕಾಯ್ದೆ ಹೆಚ್ಚು ಸದ್ದು ಮಾಡಿದೆ. 2015ರಲ್ಲಿ 59ರಷ್ಟಿದ್ದ ಪ್ರಕರಣಗಳು 2020ರಲ್ಲಿ 287ಕ್ಕೆ ಹೆಚ್ಚಳವಾಗಿವೆ. ಬಂಧಿತರ ಸಂಖ್ಯೆಯೂ 10ರಿಂದ 346ಕ್ಕೆ ಏರಿದೆ. ಮೂರನೇ ಸ್ಥಾನದಲ್ಲಿರುವ ಮಣಿಪುರದಲ್ಲಿ ಇದು ತಿರುವುಮುರುವಾಗಿದೆ. ಆರು ವರ್ಷಗಳ ಹಿಂದೆ 500ಕ್ಕೂ ಹೆಚ್ಚಿದ್ದ ಪ್ರಕರಣಗಳು ಕಳೆದ ವರ್ಷ 169ಕ್ಕೆ ಇಳಿಕೆಯಾಗಿವೆ. ಏಳುನೂರರ ಸನಿಹದಲ್ಲಿದ್ದ ಬಂಧಿತರ ಪ್ರಮಾಣವು 200ರ ಗಡಿಗೆ ಬಂದಿದೆ. ದಾಖಲೆಗಳ ಪ್ರಕಾರ, ಜಾರ್ಖಂಡ್‌ನಲ್ಲೂ ಪ್ರಕರಣ ಹಾಗೂ ಬಂಧಿತರ ಪ್ರಮಾಣದಲ್ಲಿ ಏರುಗತಿ ಇದೆ.

ಶಿಕ್ಷೆ, ಖುಲಾಸೆಗಿಂತ ಮುಗಿಯದ ಪ್ರಕರಣಗಳೇ ಹೆಚ್ಚು
ಯುಎಪಿಎ ಅಡಿ ಬಂಧಿಸಲಾದ ವ್ಯಕ್ತಿಗಳಲ್ಲಿ ಶಿಕ್ಷೆಗೆ ಒಳಗಾದವರ ಪ್ರಮಾಣ ಶೇ 10ಕ್ಕಿಂತಲೂ ಕಡಿಮೆ ಇದೆ. ಆದರೆ ಶಿಕ್ಷೆಗೆ ಒಳಗಾದವರಿಗಿಂತ ಖುಲಾಸೆಯಾದವರ ಸಂಖ್ಯೆ ಹೆಚ್ಚು.

ವಿಚಾರಣೆ ಪೂರ್ಣಗೊಳ್ಳದೆ ಜೈಲಿನಲ್ಲಿರುವ ಆರೋಪಿಗಳ ಪ್ರಮಾಣವು ಶೇ 79ಕ್ಕೂ ಹೆಚ್ಚು. ಈ ಬಗ್ಗೆ ಸಂಸತ್ತಿನ ಸದಸ್ಯರು ಕಳವಳ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣಗಳಲ್ಲಿ ತನಿಖೆಯ ಹಂತದಲ್ಲಿರುವ ಪ್ರಕರಣಗಳು ಎಷ್ಟು ಎಂಬುದರ ಮಾಹಿತಿಯನ್ನು ಸರ್ಕಾರವು ನೀಡಿಲ್ಲ. ಅಲ್ಲದೆ, ತನಿಖೆ ಪೂರ್ಣಗೊಂಡು ವಿಚಾರಣೆ ಹಂತದಲ್ಲಿರುವ ಪ್ರಕರಣಗಳು ಎಷ್ಟು ಎಂಬುದರ ಬಗ್ಗೆಯೂ ಸರ್ಕಾರ ಮಾಹಿತಿ ನೀಡಿಲ್ಲ.

ಸಂಸದ ವಿ.ಶಿವದಾಸನ್ ಅವರುಗೃಹ ಸಚಿವಾಲಯವನ್ನುಲೋಕಸಭೆಯಲ್ಲಿ ಈ ಬಗ್ಗೆ ಪ್ರಶ್ನಿಸಿದ್ದಾರೆ. ‘ಖುಲಾಸೆ ಪ್ರಮಾಣವನ್ನು ಪರಿಗಣಿಸಿದರೆ, ಈ ಕಾಯ್ದೆಯು ದುರ್ಬಳಕೆಯಾಗುತ್ತಿದೆ ಎನಿಸುತ್ತಿದೆ. ಇದನ್ನು ತಡೆಯಲು ಕ್ರಮ ತೆಗೆದುಕೊಳ್ಳುವ ಉದ್ದೇಶ ಸರ್ಕಾರಕ್ಕೆ ಇದೆಯೇ’ ಎಂದು ಅವರು ಪ್ರಶ್ನಿಸಿದ್ದಾರೆ.

‘ಈ ಕಾಯ್ದೆಯನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ತಡೆಗಟ್ಟಲು ಕಾಯ್ದೆಯಲ್ಲಿಯೇ ಹಲವು ನಿಯಮಗಳನ್ನು ಸೇರಿಸಲಾಗಿದೆ. ಹೀಗಾಗಿ ಕಾಯ್ದೆಗೆ ಮತ್ತಷ್ಟು ತಿದ್ದುಪಡಿ ತರುವ ಯಾವ ಚಿಂತನೆಯೂ ಇಲ್ಲ’ ಎಂದು ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್ ಹೇಳಿದ್ದಾರೆ.

ಬಿಜೆಪಿ ಅಧಿಕಾರದ ರಾಜ್ಯಗಳಲ್ಲಿ ಯುಎಪಿಎ ಬಳಕೆ
ಬಿಜೆಪಿ ಮತ್ತು ಬಿಜೆಪಿಯ ಮಿತ್ರಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ, 2020ರಲ್ಲಿ ಯುಎಪಿಎ ಅಡಿ ದಾಖಲಾದ ಪ್ರಕರಣಗಳಲ್ಲಿ ಹೆಚ್ಚು ಜನರನ್ನು ಬಂಧಿಸಲಾಗಿದೆ. ಬೇರೆ ಪಕ್ಷಗಳ ಆಡಳಿತವಿರುವ ರಾಜ್ಯಗಳಲ್ಲಿ ಈ ಪ್ರಕರಣಗಳ ಅಡಿ ಒಬ್ಬರನ್ನೂ ಬಂಧಿಸಿಲ್ಲ. ಬಿಜೆಪಿ ಆಡಳಿತವಿರುವ ಗುಜರಾತ್, ಗೋವಾ ಮತ್ತು ಹಿಮಾಚಲ ಪ್ರದೇಶದಲ್ಲಿ ಒಬ್ಬ ವ್ಯಕ್ತಿಯನ್ನೂ ಯುಎಪಿಎ ಅಡಿ ಬಂಧಿಸಿಲ್ಲ.

* ತಮಿಳುನಾಡಿನಲ್ಲಿ ಈ ಹಿಂದೆ ಬಿಜೆಪಿಯ ಮಿತ್ರಪಕ್ಷ ಎಐಎಡಿಎಂಕೆ ಅಧಿಕಾರದಲ್ಲಿ ಇದ್ದಾಗ 92 ಜನರನ್ನು ಈ ಕಾಯ್ದೆ ಅಡಿ ಬಂಧಿಸಲಾಗಿತ್ತು

* ಪಂಜಾಬ್‌ನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದ 44 ರೈತರನ್ನು ಈ ಕಾಯ್ದೆ ಅಡಿ ಬಂಧಿಸಲಾಗಿತ್ತು

* ಕೇರಳದಲ್ಲಿ 24 ಜನರನ್ನು ರಾಷ್ಟ್ರೀಯ ತನಿಖಾ ದಳವು ಈ ಕಾಯ್ದೆ ಅಡಿ ಬಂಧಿಸಿದೆ

* ಜಾರ್ಖಂಡ್‌ನಲ್ಲಿ 69 ನಕ್ಸಲರು ಮತ್ತು ನಕ್ಸಲರ ಬಗ್ಗೆ ಅನುಕಂಪ ಹೊಂದಿರುವವರನ್ನು ಈ ಕಾಯ್ದೆ ಅಡಿ ಬಂಧಿಸಲಾಗಿದೆ

* ಮಹಾರಾಷ್ಟ್ರದಲ್ಲಿ 7 ನಕ್ಸಲರು ಮತ್ತು ನಕ್ಸಲರ ಬಗ್ಗೆ ಅನುಕಂಪ ಹೊಂದಿರುವವರನ್ನು ಈ ಕಾಯ್ದೆ ಅಡಿ ಬಂಧಿಸಲಾಗಿದೆ

30 ವರ್ಷಕ್ಕಿಂತ ಕಿರಿಯರೇ ಅಧಿಕ
ಈ ಕಾಯ್ದೆ ಅಡಿ ದಾಖಲಾದ ಪ್ರಕರಣಗಳಲ್ಲಿ 2018ರಿಂದ 2020ರ ನಡುವೆ ಬಂಧಿಸಲಾದ ಒಟ್ಟು ಆರೋಪಿಗಳಲ್ಲಿ 30 ವರ್ಷಕ್ಕಿಂತ ಕಡಿಮೆ ವಯಸ್ಸಿನವರ ಪ್ರಮಾಣವು ಶೇ 50ಕ್ಕೂ ಹೆಚ್ಚು. 30 ವರ್ಷಕ್ಕಿಂತ ಕಡಿಮೆ ವಯಸ್ಸಿನವರನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಂಧಿಸಿದ ರಾಜ್ಯಗಳ ಪಟ್ಟಿಯಲ್ಲಿ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದೆ. ಉತ್ತರ ಪ್ರದೇಶದಲ್ಲಿ ಈ ಕಾಯ್ದೆ ಅಡಿ ಬಂಧಿಸಲಾದವರಲ್ಲಿ 30 ವರ್ಷಕ್ಕಿಂತ ಕಡಿಮೆ ವಯಸ್ಸಿನವರ ಪ್ರಮಾಣ ಶೇ 69ಕ್ಕಿಂತಲೂ ಹೆಚ್ಚು.

ಆಧಾರ: ಕೇಂದ್ರ ಗೃಹ ಸಚಿವಾಲಯ, ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಂಡಿಸಲಾದ ದತ್ತಾಂಶಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT