ಬುಧವಾರ, ಆಗಸ್ಟ್ 10, 2022
24 °C

ಆಳ-ಅಗಲ: ಮುಗಿಯದ ರಫೇಲ್‌ ರಗಳೆ, 'ಸುಪ್ರೀಂ'ನಲ್ಲಿ ಮುಂದಿನ ವಾರ ಅರ್ಜಿ ವಿಚಾರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಫ್ರಾನ್ಸ್‌ನಿಂದ ರಫೇಲ್ ಯುದ್ಧವಿಮಾನ ಖರೀದಿ ಒಪ್ಪಂದದಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಮತ್ತೆ ಕೇಳಿಬಂದಿದೆ. ಫ್ರಾನ್ಸ್‌ನ ಭ್ರಷ್ಟಾಚಾರ ನಿಗ್ರಹ ಸಂಸ್ಥೆಯು ಈ ಅಕ್ರಮದ ಬಗ್ಗೆ ವರದಿ ಸಿದ್ಧಪಡಿಸಿದೆ. ಈ ಸಂಬಂಧ ಸುಪ್ರೀಂ ಕೋರ್ಟ್‌ನಲ್ಲಿ ಈಗ ಒಂದು ಅರ್ಜಿಯನ್ನೂ ಸಲ್ಲಿಸಲಾಗಿದೆ. ಈ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಮುಂದಿನ ವಾರ ಕೈಗೆತ್ತಿಕೊಳ್ಳಲಿದೆ

‘ಮಧ್ಯವರ್ತಿಗೆ ಲಂಚ’

‘ಫ್ರಾನ್ಸ್‌ ಮತ್ತು ಭಾರತದ ನಡುವಣ ರಫೇಲ್ ಯುದ್ಧವಿಮಾನ ಖರೀದಿ ಒಪ್ಪಂದದಲ್ಲಿ ಮಧ್ಯವರ್ತಿಗೆ 11 ಲಕ್ಷ ಯೂರೊ (ಅಂದಾಜು ₹ 10 ಕೋಟಿ) ಸಂದಾಯವಾಗಿದೆ ಎಂದು ಫ್ರಾನ್ಸ್‌ನ ಭ್ರಷ್ಟಾಚಾರ ನಿಗ್ರಹ ಸಂಸ್ಥೆಯು (ಎಎಫ್‌ಎ) ತನ್ನ ಲೆಕ್ಕಪರಿಶೋಧನಾ ವರದಿಯಲ್ಲಿ ಹೇಳಿದೆ’ ಎಂದು ಫ್ರಾನ್ಸ್‌ನ ಮೀಡಿಯಾಪಾರ್ಟ್‌ ಎಂಬ ಆನ್‌ಲೈನ್ ಪೋರ್ಟಲ್‌ ಏಪ್ರಿಲ್ 6ರಂದು ವರದಿ ಪ್ರಕಟಿಸಿತ್ತು. ಈ ಒಪ್ಪಂದದಲ್ಲಿ ಮಧ್ಯವರ್ತಿಗೆ ಲಂಚ ನೀಡಲಾಗಿದೆ ಎಂದು ಮೀಡಿಯಾಪಾರ್ಟ್‌ ನೇರವಾಗಿ ಆರೋಪಿಸಿತ್ತು.

ರಫೇಲ್‌ ಯುದ್ಧ ವಿಮಾನ ತಯಾರಿಕಾ ಕಂಪನಿ ಡಾಸೊ ಏವಿಯೇಷನ್‌ನ 2017ನೇ ಸಾಲಿನ ಲೆಕ್ಕಪರಿಶೋಧನೆಯ ವರದಿಯಲ್ಲಿನ ಉಲ್ಲೇಖಗಳ ಅಧಾರದಲ್ಲಿ ಎಎಫ್‌ಎ ತನಿಖೆ ನಡೆಸಿದೆ. ಈ ತನಿಖೆಯಲ್ಲಿ ಮಧ್ಯವರ್ತಿಗೆ ಲಂಚ ನೀಡಿರುವುದು ಪತ್ತೆಯಾಗಿದೆ. ಈ ಬಗ್ಗೆ ಡಾಸೊ ಏವಿಯೇಷನ್‌ ಅನ್ನು ಎಎಫ್‌ಎ ಪ್ರಶ್ನಿಸಿದೆ ಕೂಡ. ಇದಕ್ಕೆ ಡಾಸೊ ಉತ್ತರವನ್ನೂ ನೀಡಿದೆ ಎಂದು ಮೀಡಿಯಾಪಾರ್ಟ್‌ ತನ್ನ ವರದಿಯಲ್ಲಿ ವಿವರಿಸಿತ್ತು.

ಮಧ್ಯವರ್ತಿಗೆ ನೀಡಲಾಗಿರುವ ಲಂಚವನ್ನು ‘ಗಿಫ್ಟ್‌ ಟು ಕ್ಲೈಂಟ್‌’ (ಗ್ರಾಹಕರಿಗೆ ಉಡುಗೊರೆ) ಎಂದು ಲೆಕ್ಕಪತ್ರದಲ್ಲಿ ಉಲ್ಲೇಖಿಸಲಾಗಿದೆ. 11 ಲಕ್ಷ ಯೂರೊವನ್ನು ಉಡುಗೊರೆ ರೂಪದಲ್ಲಿ ನೀಡಲಾಗಿದೆ ಎಂಬುದೇ ಅಕ್ಷೇಪಾರ್ಹ ಎಂದು ಎಎಫ್‌ಎ ಹೇಳಿದೆ. ಆದರೆ ಉಡುಗೊರೆ ನೀಡಲು ಫ್ರಾನ್ಸ್‌ನ ಕಾನೂನಿನಲ್ಲಿ ಅವಕಾಶವಿದೆ. ಹೀಗಾಗಿ ಕಂಪನಿ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಎಎಫ್‌ಎ ತನ್ನ ವರದಿಯಲ್ಲಿ ಹೇಳಿದೆ ಎಂದು ಮೀಡಿಯಾಪಾರ್ಟ್‌ ವಿವರಿಸಿದೆ.

‘ಅಗಸ್ಟಾವೆಸ್ಟ್‌ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್‌ ಖರೀದಿ ಹಗರಣದಲ್ಲಿ ಸಿಲುಕಿಕೊಂಡಿರುವ ಭಾರತದ ಸುಶೇನ್ ಗುಪ್ತಾ ಒಡೆತನದ ‘ಡಿಫ್‌ಸಿಸ್ ಸೊಲ್ಯೂಷನ್ಸ್’ ಕಂಪನಿಗೆ ಈ ಉಡುಗೊರೆ ಹಣವನ್ನು ವರ್ಗಾವಣೆ ಮಾಡಲಾಗಿದೆ. ಭಾರತದಲ್ಲಿ ಈ ಕಂಪನಿ ವಿರುದ್ಧ ತನಿಖೆ ಪ್ರಗತಿಯಲ್ಲಿದೆ. ಅಂತಹ ಕಂಪನಿಗೇ ಉಡುಗೊರೆಯ ಹಣ ವರ್ಗಾವಣೆ ಮಾಡಲಾಗಿದೆ’ ಎಂದು ಮೀಡಿಯಾಪಾರ್ಟ್‌ ವಿವರಿಸಿದೆ.

ಆದರೆ, ಸರ್ಕಾರಗಳ ನಡುವಣ ಈ ಒಪ್ಪಂದದಲ್ಲಿ ಮಧ್ಯವರ್ತಿ ಸಂಸ್ಥೆ ಎಲ್ಲಿಂದ ಬಂತು ಎಂದು ಮೀಡಿಯಾಪಾರ್ಟ್‌ ಪ್ರಶ್ನಿಸಿದೆ. ‘ಭಾರತ ಸರ್ಕಾರವು ಹಲವು ಹಂತದ ಪರೀಕ್ಷೆಗಳು, ಪ್ರಾತ್ಯಕ್ಷಿಕೆ ಮತ್ತು ಮುಚ್ಚಿದ ಲಕೋಟೆಯ ಟೆಂಡರ್‌ನ ನಂತರ ರಫೇಲ್‌ ಯುದ್ಧವಿಮಾನ ಖರೀದಿಗೆ ಸಮ್ಮತಿ ಸೂಚಿಸಿತ್ತು. ಈ ಎಲ್ಲಾ ಪ್ರಕ್ರಿಯೆಗಳು ಭಾರತದ ರಕ್ಷಣಾ ಸಚಿವಾಲಯದ ಮಟ್ಟದಲ್ಲಿಯೇ ನಡೆದಿತ್ತು. ಬೇರೆ ಯಾವುದೇ ಖಾಸಗಿ ಸಂಸ್ಥೆ ಇದರಲ್ಲಿ ಭಾಗಿಯಾಗಿಯೇ ಇರಲಿಲ್ಲ. ಯಾವ ಮಧ್ಯವರ್ತಿಯೂ ಇರಲಿಲ್ಲ. ಹೀಗಿದ್ದೂ ಮಧ್ಯವರ್ತಿಗೆ ಲಂಚ ನೀಡಿದ್ದು ಏಕೆ’ ಎಂದು ಮೀಡಿಯಾಪಾರ್ಟ್ ಪ್ರಶ್ನಿಸಿದೆ.

‘ಒಪ್ಪಂದದಲ್ಲಿ ಇಲ್ಲದ ಕಂಪನಿಗೆ ಹಣ’

‘ಭಾರತದ ಡಿಫ್‌ಸಿಸ್ ಸೊಲ್ಯೂಷನ್ಸ್ ಎಂಬ ಕಂಪನಿಗೆ, ರಫೇಲ್ ಒಪ್ಪಂದದಲ್ಲಿ ಡಾಸೊ ಕಂಪನಿಯು 11 ಲಕ್ಷ ಯೂರೊ ಪಾವತಿ ಮಾಡಿದೆ. 2017ರಲ್ಲಿ ಎರಡು ಕಂತುಗಳಲ್ಲಿ ಈ ಹಣವನ್ನು ಪಾವತಿ ಮಾಡಲಾಗಿದೆ. ಒಪ್ಪಂದದಲ್ಲಿ ಎಲ್ಲಿಯೂ ಈ ಕಂಪನಿಯ ಉಲ್ಲೇಖವಿಲ್ಲ. ಒಪ್ಪಂದದ ಸಾಗರೋತ್ತರ ಹೂಡಿಕೆಯಲ್ಲಿಯೂ ಈ ಕಂಪನಿಯ ಉಲ್ಲೇಖ ಇಲ್ಲ. ಹೀಗಿದ್ದೂ ಈ ಕಂಪನಿಗೆ ಭಾರಿ ಪ್ರಮಾಣದ ಹಣವನ್ನು ಪಾವತಿ ಮಾಡಲಾಗಿದೆ’ ಎಂದು ಎಎಫ್‌ಎ ತನ್ನ ವರದಿಯಲ್ಲಿ ವಿವರಿಸಿದೆ.

‘100 ಯೂರೊ ಮೊತ್ತದ ಒಂದು ಔತಣವನ್ನು ಕೊಡಿಸುವುದರಲ್ಲೇ ಸಾಕಷ್ಟು ಭ್ರಷ್ಟಾಚಾರ ನಡೆಯುತ್ತದೆ. ಹೀಗಿದ್ದಾಗ 11 ಲಕ್ಷ ಯೂರೊ ಮೊತ್ತದ ಉಡುಗೊರೆ ನೀಡಲಾಗಿದೆ. ಇದು ಒಂದು ಉಡುಗೊರೆಗಿಂತಲೂ ಅತ್ಯಂತ ದೊಡ್ಡ ಮೊತ್ತ’ ಎಂದು ಎಎಫ್‌ಎ ವಿಶ್ಲೇಷಿಸಿದೆ.

‘ಈ ಬಗ್ಗೆ ಡಾಸೊ ಏವಿಯೇಷನ್‌ ಅನ್ನು ಪ್ರಶ್ನಿಸಲಾಯಿತು. ಇದು ವಿಮಾನ ಖರೀದಿದಾರರಿಗೆ ನೀಡಿದ ಉಡುಗೊರೆ (ಗಿಫ್ಟ್‌ ಟು ಕ್ಲೈಂಟ್‌) ಎಂದು ಕಂಪನಿ ಹೇಳಿದೆ. ರಫೇಲ್‌ ಯುದ್ಧವಿಮಾನದ, ನೈಜ ಗಾತ್ರದ 50 ಪ್ರತಿಕೃತಿಗಳನ್ನು ತಯಾರಿಸುವ ಉದ್ದೇಶದಿಂದ ಈ ಹಣ ಪಾವತಿ ಮಾಡಲಾಗಿದೆ ಎಂದು ಕಂಪನಿ ತನ್ನ ಉತ್ತರದಲ್ಲಿ ಉಲ್ಲೀಖಿಸಿದೆ. ಪ್ರತಿ ಪ್ರತಿಕೃತಿಯನ್ನು 20,357 ಯೂರೊ (ಅಂದಾಜು ₹ 18.2 ಲಕ್ಷ) ದರದಲ್ಲಿ ತಯಾರಿಸಲು 2017ರ ಮಾರ್ಚ್‌ 30ರಂದು ಶೇ 50ರಷ್ಟು ಹಣವನ್ನು ಪಾವತಿ ಮಾಡಲಾಗಿದೆ. ನಂತರದ ದಿನಗಳಲ್ಲಿ ಉಳಿದ ಶೇ 50ರಷ್ಟು ಮೊತ್ತವನ್ನು ಪಾವತಿ ಮಾಡಲಾಗಿದೆ’ ಎಂದು ಎಎಫ್‌ಎ ಹೇಳಿದೆ.

‘ಡಾಸೊ ಏವಿಯೇಷನ್‌ ಕಂಪನಿಯು ಸ್ವತಃ ರಫೇಲ್ ಯುದ್ಧ ವಿಮಾನಗಳನ್ನು ತಯಾರು ಮಾಡುತ್ತದೆ. ಹೀಗಿದ್ದೂ, ರಫೇಲ್‌ ಯುದ್ಧವಿಮಾನಗಳ ಪ್ರತಿಕೃತಿಗಳನ್ನು ತಯಾರಿಸಲು ಭಾರತದ ಕಂಪನಿಯನ್ನು ಆಯ್ಕೆ ಮಾಡಿಕೊಂಡಿದ್ದು ಏಕೆ? ತನ್ನದೇ ವಿಮಾನದ ಪ್ರತಿಕೃತಿಯನ್ನು ತಲಾ 20,357 ಯೂರೊ ದರದಲ್ಲಿ ತಯಾರಿಸಲು ಒಪ್ಪಿಗೆ ನೀಡಿದ್ದು ಏಕೆ? ಸಣ್ಣ ಕಾರಿನ ಗಾತ್ರದಲ್ಲಿರಬಹುದಾದ ಈ ಪ್ರತಿಕೃತಿಗಳ ತಯಾರಿಕೆಗೆ ಇಷ್ಟು ದೊಡ್ಡ ಮೊತ್ತ ನೀಡಿದ್ದು ಏಕೆ? ಈ ವೆಚ್ಚವನ್ನು, ‘ಗಿಫ್ಟ್‌ ಟು ಕ್ಲೈಂಟ್‌’ ಎಂದು ಲೆಕ್ಕಪತ್ರದಲ್ಲಿ ಉಲ್ಲೇಖಿಸಿದ್ದು ಏಕೆ’ ಎಂದು ಎಎಫ್‌ಎ, ಡಾಸೊ ಏವಿಯೇಷನ್‌ ಅನ್ನು ಪ್ರಶ್ನಿಸಿದೆ.

‘ಈ ಪ್ರತಿಕೃತಿಗಳನ್ನು ನಿಜಕ್ಕೂ ತಯಾರಿಸಲಾಗಿದೆಯೇ? ತಯಾರಿಸಲಾಗಿದ್ದರೆ ಅವು ಎಲ್ಲಿವೆ ಎಂದು ಡಾಸೊ ಏವಿಯೇಷನ್‌ ಅನ್ನು ಪ್ರಶ್ನಿಸಲಾಗಿತ್ತು. ಆದರೆ, ಈ ಪ್ರತಿಕೃತಿಗಳು ಎಲ್ಲಿವೆ? ಅವುಗಳನ್ನು ಯಾವಾಗ ಹಸ್ತಾಂತರ ಮಾಡಲಾಯಿತು ಎಂಬುದರ ವಿವರವನ್ನು ಕಂಪನಿ ನೀಡಿಲ್ಲ. ಈ ಪ್ರತಿಕೃತಿಗಳ ಒಂದು ಚಿತ್ರವೂ ಡಾಸೊ ಬಳಿ ಇಲ್ಲ. ಹೀಗಾಗಿ ಇಲ್ಲಿ ಅಕ್ರಮ ನಡೆದಿರುವ ಸಾಧ್ಯತೆ ಇದೆ. ವಿಮಾನದ ಪ್ರತಿಕೃತಿ ಮತ್ತು ಉಡುಗೊರೆ ಹೆಸರಿನಲ್ಲಿ ಅಕ್ರಮವಾಗಿ ಹಣ ವರ್ಗಾವಣೆ ಮಾಡಿರುವ ಸಾಧ್ಯತೆ ಇದೆ’ ಎಂದು ಎಎಫ್‌ಎ ತನ್ನ ವರದಿಯಲ್ಲಿ ಹೇಳಿದೆ.

ಮಧ್ಯವರ್ತಿಯ ವೃತ್ತಾಂತ

‘ಮೀಡಿಯಾಪಾರ್ಟ್‌’ನ ಮೂರನೇ ಹಾಗೂ ಕೊನೆಯ ತನಿಖಾ ವರದಿಯಲ್ಲಿ 36 ರಫೇಲ್ ಯುದ್ಧವಿಮಾನ ಖರೀದಿಯ ಮಧ್ಯವರ್ತಿಯ ಪ್ರಸ್ತಾಪ ಮಾಡಲಾಗಿದೆ. ರಕ್ಷಣಾ ಉದ್ಯಮಿ ಡಾಸೊ ಕಂಪನಿಯ ‘ಪಿರ್‍ರೆ’ ಎಂಬ ವ್ಯಕ್ತಿಯು ಮಾರಿಷಸ್‌ನಲ್ಲಿ ನೋಂದಣಿಯಾಗಿರುವ ಕಂಪನಿಗಳಿಗೆ ಕಮಿಷನ್ ಹಣವನ್ನು ಪಾವತಿ ಮಾಡಿದ್ದ ಎಂದು ವರದಿ ಹೇಳಿದೆ.

ವಿವಿಐಪಿ ಅಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಒಪ್ಪಂದದ ಸಮಯದಲ್ಲಿಯೂ ಇದೇ ರೀತಿಯ ಕಂಪನಿಗಳ ಜಾಲವನ್ನು ಬಳಸಲಾಗಿತ್ತು. ಈ ಪ್ರಕರಣದಲ್ಲಿ ಸುಶೇನ್ ಗುಪ್ತಾ ಅವರನ್ನು ಬಂಧಿಸಿ, ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.

ಮೀಡಿಯಾಪಾರ್ಟ್‌ ದಾಖಲೆಗಳ ಪ್ರಕಾರ, ಸುಶೇನ್ ಗುಪ್ತಾ ಅವರು 2000ರ ದಶಕದ ಆರಂಭದಿಂದಲೂ ಡಾಸೊ ಏವಿಯೇಷನ್ ಮತ್ತು ಅದರ ಕೈಗಾರಿಕಾ ಪಾಲುದಾರ ‘ಥೇಲ್ಸ್‌’ಗೆ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಥೇಲ್ಸ್ ಎಂಬುದು ಪ್ಯಾರಿಸ್ ಮೂಲದ ಡಿಫೆನ್ಸ್-ಎಲೆಕ್ಟ್ರಾನಿಕ್ಸ್ ಕಂಪನಿಯಾಗಿದೆ.

ವರದಿ ಪ್ರಕಾರ, ಥೇಲ್ಸ್ ಕಂಪನಿಯು ಮಧ್ಯವರ್ತಿ ಸುಶೇನ್ ಗುಪ್ತಾ ಅವರ ವಿದೇಶಿ ಬ್ಯಾಂಕ್ ಖಾತೆಗಳಿಗೆ ಮತ್ತು ನಕಲಿ ಕಂಪನಿಗಳಿಗೆ ಲಕ್ಷಗಟ್ಟಲೆ ಹಣವನ್ನು ಪಾವತಿಸಿದೆ. ‘ಸಾಫ್ಟ್‌ವೇರ್ ಕನ್ಸಲ್ಟಿಂಗ್’ಗೆ ಪ್ರತಿಯಾಗಿ ಹಣ ಪಾವತಿ ಮಾಡಲಾಗಿದೆ ಎಂದು ಇನ್‌ವಾಯ್ಸ್‌ಗಳನ್ನು ಸೃಷ್ಟಿಸಲಾಗಿದೆ.

ರಕ್ಷಣಾ ಗುತ್ತಿಗೆದಾರರ ಕುಟುಂಬಕ್ಕೆ ಸೇರಿರುವ ಸುಶೇನ್ ಗುಪ್ತಾ ಅವರು 2000ನೇ ಇಸ್ವಿಯಿಂದಲೇ ಫ್ರಾನ್ಸ್‌ ಜೊತೆ ಒಡನಾಟದಲ್ಲಿದ್ದಾರೆ. ಅವರು ಭಾರತದಲ್ಲಿ ಐಡಿಎಸ್, ಮಾರಿಷಸ್‌ನಲ್ಲಿ ಇಂಟರ್‌ಸ್ಟೆಲ್ಲಾರ್ ಎಂಬ ಕಂಪನಿಗಳನ್ನು ಹೊಂದಿದ್ದಾರೆ. ಸಿಂಗಪುರ, ಯುನೈಟೆಡ್ ಅರಬ್ ಎಮಿರೇಟ್ಸ್, ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಹಲವಾರು ಖಾತೆಗಳನ್ನು ಬಳಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಗುಪ್ತಾ ಸದ್ಯ ದಕ್ಷಿಣ ಆಫ್ರಿಕಾದಲ್ಲಿ ಇದ್ದಾರೆ.

ಡಾಸೊ ಕಂಪನಿಯನ್ನು ‘ಡಿ’ ಎಂಬ ಗುಪ್ತನಾಮದಲ್ಲಿ ಉಲ್ಲೇಖಿಸಲಾಗಿದೆ. 2004ರಿಂದ 2013ರ ಅವಧಿಯಲ್ಲಿ ಸಿಂಗಾಪುರದ ಇಂಟರ್‌ಡೆವ್ ಕಂಪನಿಗೆ ‘ಡಿ’ ಕಂಪನಿಯು 1.46 ಕೋಟಿ ಯೂರೊ (₹131 ಕೋಟಿ) ಪಾವತಿಸಿದೆ. ಈ ಪೈಕಿ 26 ಲಕ್ಷ ಯುರೊವನ್ನು (₹23 ಕೋಟಿ) ಇಂಟರ್‌ಡೆವ್ ಕಂಪನಿಯು ಐಡಿಎಸ್‌ಗೆ ವರ್ಗಾಯಿಸಿದೆ.

ಡಾಸೊ ಕಂಪನಿಯಿಂದ ಗುಪ್ತಾ ಅವರ ನಕಲಿ ಕಂಪನಿ ಇಂಟರ್‌ಡೆವ್‌ 40 ಲಕ್ಷ ಯೂರೊ (₹36 ಕೋಟಿ) ಮೊತ್ತದ ಮೂರು ಗುತ್ತಿಗೆ ಪಡೆದಿತ್ತು. ಭಾರತದ ರಕ್ಷಣಾ ಮಾರುಕಟ್ಟೆ ಕುರಿತ ಸಂಶೋಧನಾ ವರದಿ ಒದಗಿಸುವುದು ಮತ್ತು ಸಂಭಾವ್ಯ ಕೈಗಾರಿಕಾ ಪಾಲುದಾರರನ್ನು ಗುರುತಿಸುವುದು ಇದರಲ್ಲಿ ಸೇರಿದ್ದವು. ಭಾರತದಲ್ಲಿ ರಕ್ಷಣಾ ಪಾಲುದಾರರನ್ನು ಆಯ್ಕೆ ಮಾಡಿಕೊಡುವ ಕೆಲಸವನ್ನೂ ಗುಪ್ತಾ ನಿರ್ವಹಿಸುತ್ತಿದ್ದರು ಎಂದು ಮೀಡಿಯಾಪಾರ್ಟ್‌ನ ಫಿಲಿಪ್ಪಿಯನ್ ಹೇಳಿದ್ದಾರೆ.

ಹೊಸದಾಗಿ ವಿಚಾರಣೆ

ರಫೇಲ್ ಯುದ್ಧವಿಮಾನ ಖರೀದಿಯಲ್ಲಿ ಮಧ್ಯವರ್ತಿ ಪ್ರಕರಣದ ಕುರಿತು ಹೊಸದಾಗಿ ವಿಚಾರಣೆ ಆರಂಭಿಸಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಅರ್ಜಿಯನ್ನು ಪುರಸ್ಕರಿಸಿರುವ ಕೋರ್ಟ್, ಎರಡು ವಾರಗಳಲ್ಲಿ ವಿಚಾರಣೆ ಕೈಗೆತ್ತಿಕೊಳ್ಳಲಿದೆ.

ಕೋರ್ಟ್‌ನ ಮೇಲ್ವಿಚಾರಣೆಯಲ್ಲಿ ತನಿಖೆಗೆ ಆದೇಶಿಸುವಂತೆ ಕೋರಿ ಮನೋಹರಲಾಲ್‌ ಶರ್ಮಾ ಎಂಬುವವರು ಅರ್ಜಿ ಸಲ್ಲಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಸುಶೇನ್‌ ಗುಪ್ತಾ, ಡಾಸೊ ರಿಲಯನ್ಸ್‌ ಏರೋಸ್ಪೇಸ್‌ ಲಿ. (ಡಿಆರ್‌ಎಎಲ್‌) ಅನ್ನು ಅವರು ಪ್ರತಿವಾದಿಗಳನ್ನಾಗಿ ಮಾಡಿದ್ದಾರೆ.

ರಫೇಲ್‌ ಯುದ್ಧವಿಮಾನಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದ್ದು, ತನಿಖೆಗೆ ಆದೇಶಿಸುವಂತೆ ಕೋರಿ ಈ ಹಿಂದೆ ವಕೀಲ ಶರ್ಮಾ ಸೇರಿದಂತೆ ಹಲವರು ಅರ್ಜಿಗಳನ್ನು ಸಲ್ಲಿಸಿದ್ದರು. ಈ ಅರ್ಜಿಗಳನ್ನು ವಜಾಗೊಳಿಸಿದ್ದ ಸುಪ್ರೀಂ ಕೋರ್ಟ್‌, 2018ರ ಡಿಸೆಂಬರ್‌ 14ರಂದು ತೀರ್ಪು ನೀಡಿತ್ತು.

ಈ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಕೆಲವರು ಪುನಃ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗಳನ್ನೂ ತಿರಸ್ಕರಿಸಿದ್ದ ಸುಪ್ರೀಂ ಕೋರ್ಟ್,‌ 2019ರ ನವೆಂಬರ್‌ 14ರಂದು ತೀರ್ಪು ನೀಡಿತ್ತು.

ವಿವಾದ ಇದೇ ಮೊದಲಲ್ಲ

ರಫೇಲ್‌ ಖರೀದಿ ವಿಚಾರದ ವಿವಾದ ಆರಂಭವಾದದ್ದು 2018ರಲ್ಲಿ. ಫ್ರಾನ್ಸ್‌ನ ಮಾಜಿ ಅಧ್ಯಕ್ಷರು, ‘ರಿಲಯನ್ಸ್ ಸಂಸ್ಥೆಯನ್ನೇ ವಿದೇಶಿ ಪಾಲುದಾರ ಸಂಸ್ಥೆಯಾಗಿ ಆಯ್ಕೆ
ಮಾಡಲು ಭಾರತ ಸರ್ಕಾರ ಒತ್ತಡ ಹೇರಿತ್ತು. ಫ್ರಾನ್ಸ್‌ ಸರ್ಕಾರದ ಮುಂದೆ ಬೇರೆ ಆಯ್ಕೆಯೇ ಇರಲಿಲ್ಲ’ ಎಂದು ಹೇಳಿರು
ವುದಾಗಿ ಕೆಲವು ಮಾಧ್ಯಮಗಳು ವರದಿ ಮಾಡಿದವು. ಈ ಕ್ಷೇತ್ರದಲ್ಲಿ ಯಾವುದೇ ಅನುಭವ ಇಲ್ಲದ ಸಂಸ್ಥೆಯೊಂದನ್ನು ಹೇಗೆ ವಿದೇಶಿ ಪಾಲುದಾರ ಸಂಸ್ಥೆಯನ್ನಾಗಿ ಆಯ್ಕೆ ಮಾಡಲಾಯಿತು ಎಂಬ ಪ್ರಶ್ನೆಗಳೆದ್ದವು.

ಮೂಲ ಒಪ್ಪಂದಕ್ಕೆ ಹೋಲಿಸಿದರೆ, ಹೊಸ ಒಪ್ಪಂದದಲ್ಲಿ ವಿಮಾನದ ದರದಲ್ಲಿ ಮೂರು ಪಟ್ಟು ಹೆಚ್ಚಳವಾಗಿರುವುದರ ಬಗ್ಗೆ ಕಾಂಗ್ರೆಸ್‌ ಆಕ್ಷೇಪ ಎತ್ತಿತು. ‘ಖರೀದಿಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ’ ಎಂದು ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಸೇರಿ ಹಲವರು ಆರೋಪಿಸಿದ್ದರು.

ರಫೇಲ್‌ ಖರೀದಿ ಪ್ರಕ್ರಿಯೆಯನ್ನು ತಡೆಯುವಂತೆ ಕೋರಿ ಮನೋಹರಲಾಲ್‌ ಶರ್ಮಾ ಎಂಬುವರು ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಇದಾದ ನಂತರ ಇನ್ನೂ ಎರಡು ಅರ್ಜಿಗಳು ಸಲ್ಲಿಕೆಯಾದವು. ಇವುಗಳಲ್ಲದೆ, ಬಿಜೆಪಿಯ ಮಾಜಿ ಮುಖಂಡರಾದ ಯಶವಂತ ಸಿನ್ಹಾ, ಅರುಣ್‌ ಶೌರಿ ಹಾಗೂ ಹೋರಾಟಗಾರ ಪ್ರಶಾಂತ್‌ ಭೂಷಣ್‌ ಸೇರಿ ಇನ್ನೊಂದು ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಾಲಯವು, ‘ವಿದೇಶಿ ಪಾಲುದಾರ ಸಂಸ್ಥೆಯನ್ನು ಆಯ್ಕೆ ಮಾಡುವಲ್ಲಿ ಸರ್ಕಾರದ ಯಾವುದೇ ಜವಾಬ್ದಾರಿ ಇಲ್ಲ. ಆದ್ದರಿಂದ ಇಲ್ಲಿ ಪಕ್ಷಪಾತ ನಡೆದಿದೆ ಎನ್ನಲು ಸಾಕ್ಷ್ಯಗಳಿಲ್ಲ. ಯುದ್ಧ ಸಾಮಗ್ರಿ ಖರೀದಿ ವಿಚಾರವು ಅತ್ಯಂತ ಸೂಕ್ಷ್ಮವಾದುದು. ಕೆಲವು ವಿಚಾರಗಳಲ್ಲಿ ಗೌಪ್ಯತೆ ಕಾಯ್ದುಕೊಳ್ಳುವುದು ಅಗತ್ಯ. ಸರಿಯಾದ ಸಾಕ್ಷ್ಯಾಧಾರಗಳಿಲ್ಲದೆ, ಕೆಲವು ವ್ಯಕ್ತಿಗಳ ಗ್ರಹಿಕೆಯ ಆಧಾರದಲ್ಲಿ ತೀರ್ಮಾನಗಳನ್ನು ಕೈಗೊಳ್ಳಲಾಗದು’ ಎಂದು ಎಲ್ಲಾ ಅರ್ಜಿಗಳನ್ನು ವಜಾ ಮಾಡಿತ್ತು.

ಆದರೆ, ಯಶವಂತ ಸಿನ್ಹಾ, ಅರುಣ್‌ ಶೌರಿ ಹಾಗೂ ಪ್ರಶಾಂತ್ ಭೂಷಣ್‌ ಅವರು ಈ ಆದೇಶದ ಮರುಪರಿಶೀಲನೆ ಕೋರಿ ಅರ್ಜಿ ಸಲ್ಲಿಸಿದರು. ‘ಈ ವಿಚಾರದಲ್ಲಿ ಸರ್ಕಾರ ಕೆಲವು ಅಂಶಗಳನ್ನು ಮುಚ್ಚಿಟ್ಟಿದೆ. ಆದ್ದರಿಂದ ಎಫ್‌ಐಆರ್‌ ದಾಖಲಿಸಿ ಸಿಬಿಐ ವಿಚಾರಣೆಗೆ ಆದೇಶ ನೀಡಬೇಕು’ ಎಂದು ಅವರು ಮನವಿ ಮಾಡಿದ್ದರು.

ಈ ಅರ್ಜಿಯನ್ನು ಸ್ವೀಕರಿಸಿದ ಕೋರ್ಟ್‌, ‘ಮಾಜಿ ಸಚಿವರು ಮಾಡಿದ್ದ ಆರೋಪಗಳಲ್ಲಿ ಹುರುಳಿರುವುದು ನಿಜವಾದರೆ, ಪೂರ್ವಾನುಮತಿ ಪಡೆದು ಸಿಬಿಐ ದೂರು ದಾಖಲಿಸಬಹುದು’ ಎಂದಿತು. ಕೋರ್ಟ್‌ನ ಈ ಸೂಚನೆಯನ್ನು ಸರ್ಕಾರದ ವಿರುದ್ಧದ ಆರೋಪಕ್ಕೆ ಬಳಸಿಕೊಂಡ ಕಾಂಗ್ರೆಸ್‌, ‘ಖರೀದಿಯಲ್ಲಿ ಅವ್ಯವಹಾರ ನಡೆದಿರುವುದನ್ನು ಕೋರ್ಟ್ ಒಪ್ಪಿದೆ’ ಎಂದು ಹೇಳಿತು. 2019ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ‘ಚೌಕಿದಾರ್‌ ಚೋರ್‌ ಹೈ’ (ಕಾವಲುಗಾರ ಕಳ್ಳ) ಎಂದು ಘೋಷಣೆ ಕೂಗಿದ್ದು, ವಿವಾದಕ್ಕೂ ಕಾರಣವಾಯಿತು. ಈ ವಿಚಾರದಲ್ಲಿ ರಾಹುಲ್‌ ಗಾಂಧಿ ಅವರು ಕ್ಷಮೆ ಯಾಚಿಸಬೇಕಾಗಿಯೂ ಬಂದಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು