ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ | ಜಮ್ಮು ಕಾಶ್ಮೀರ: ಇನ್ನೂ ಮೂಡಿಲ್ಲ ‘ಹೊಸ ಬೆಳಗು’

Last Updated 4 ಆಗಸ್ಟ್ 2020, 1:12 IST
ಅಕ್ಷರ ಗಾತ್ರ
ADVERTISEMENT
""
""
""
""
""
""

ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದಾಗಿ ವರ್ಷ ತುಂಬುತ್ತಿದೆ. ರಾಜ್ಯದ ಭೌಗೋಳಿಕ ಚಿತ್ರಣ ಬದಲಾಗಿದೆ ಆದರೆ ಜನಜೀವನ...?

ಭಾರತದ ಮುಕುಟದಂತಿರುವ ಜಮ್ಮು ಮತ್ತು ಕಾಶ್ಮೀರವು ಸಂವಿಧಾನಬದ್ಧವಾಗಿ ಹೊಂದಿದ್ದ ವಿಶೇಷಾಧಿಕಾರ ರದ್ದತಿಯಾಗಿ ಈ ಆಗಸ್ಟ್‌ 5ಕ್ಕೆ ಒಂದು ವರ್ಷ ತುಂಬುತ್ತದೆ. ಕೇಂದ್ರದ ಆಡಳಿತಾರೂಢ ಬಿಜೆಪಿಯ ಕಾರ್ಯಸೂಚಿಯಲ್ಲಿ ಬಹುಕಾಲದಿಂದ ಇದ್ದ ಒಂದು ಅಂಶವನ್ನು ವಿಶೇಷಾಧಿಕಾರ ರದ್ದತಿ ಮೂಲಕ ಕಾರ್ಯರೂಪಕ್ಕೆ ತರಲಾಗಿದೆ. ‘ಭಾವನಾತ್ಮಕವಾಗಿ ಬ್ಲ್ಯಾಕ್‌ಮೇಲ್‌ ಮಾಡುವುದರಲ್ಲಷ್ಟೇ ಆಸಕ್ತರಾಗಿದ್ದ ಪಟ್ಟಭದ್ರ ಗುಂಪುಗಳು ಜನರ ಸಶಕ್ತೀಕರಣವನ್ನು ಗಣನೆಗೇ ತೆಗೆದುಕೊಂಡಿರಲಿಲ್ಲ. ಈ ಸಂಕೋಲೆಗಳಿಂದ ಜಮ್ಮು–ಕಾಶ್ಮೀರವು ಈಗ ಬಿಡಿಸಿಕೊಂಡಿದೆ. ಹೊಸ ಬೆಳಗು, ಒಳ್ಳೆಯ ನಾಳೆಗಳು ಕಾಯುತ್ತಿವೆ’ ಎಂದು ವಿಶೇಷಾಧಿಕಾರ ರದ್ದತಿ ಬಳಿಕ 2019ರ ಆಗಸ್ಟ್‌ 5ರಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್‌ ಮಾಡಿದ್ದರು.

ಜಮ್ಮು–ಕಾಶ್ಮೀರವು ವಿಶೇಷಾಧಿಕಾರದ ಜತೆಗೆ ರಾಜ್ಯ ಎಂಬ ಸ್ಥಾನವನ್ನೂ ಕಳೆದುಕೊಂಡು ಒಂದು ವರ್ಷವಾಗಿದೆ. ಜಮ್ಮು–ಕಾಶ್ಮೀರ ಮತ್ತು ಲಡಾಖ್‌ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳು ಈಗ ಅಸ್ತಿತ್ವದಲ್ಲಿವೆ. ಆದರೆ, ಜಮ್ಮು–ಕಾಶ್ಮೀರ ಕೇಂದ್ರಾಡಳಿತ ಪ್ರದೇಶವು ಅಸ್ತಿತ್ವಕ್ಕೆ ಬಂದ ನಂತರ, ಈವರೆಗೆ, ಅಲ್ಲಿ ಮುಕ್ತವಾದ ವಾತಾವರಣ ಸೃಷ್ಟಿಯಾಗಿಲ್ಲ. ನಿರ್ಬಂಧಗಳು ಮತ್ತು ಬಂಧನಗಳ ಕಾರಣಕ್ಕೆ ಜನ ಜೀವನ ಸಹಜ ಸ್ಥಿತಿಗೆ ಬಂದಿಲ್ಲ; ರಾಜಕೀಯ ಚಟುವಟಿಕೆಗಳು ಆರಂಭವಾಗಿಲ್ಲ. ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ‌ ಸೇರಿ ಹಲವರು ಈಗಲೂ ಬಂಧನದಲ್ಲಿದ್ದಾರೆ. ಹಿರಿಯ ನಾಯಕರಾದ ಫಾರೂಕ್‌ ಅಬ್ದುಲ್ಲಾ, ಒಮರ್‌ ಅಬ್ದುಲ್ಲಾ ಬಿಡುಗಡೆ ಆಗಿದ್ದರೂ ಮೌನವಾಗಿದ್ದಾರೆ. ಪ್ರತ್ಯೇಕತಾವಾದಿ ರಾಜಕಾರಣ ಬಹುತೇಕ ಸ್ಥಗಿತವಾಗಿದೆ.

ಸಕ್ರಿಯ ರಾಜಕಾರಣದಿಂದ ದೂರವೇ ಉಳಿಯಬೇಕು ಎಂದು ಬಾಂಡ್‌ ಬರೆಸಿಕೊಂಡು ಪ್ರತ್ಯೇಕತಾವಾದಿ ನಾಯಕರಲ್ಲಿ ಕೆಲವರನ್ನು ಬಿಡುಗಡೆ ಮಾಡಲಾಗಿದೆ ಎಂಬ ವದಂತಿಗಳು ಕಾಶ್ಮೀರ ಕಣಿವೆಯಲ್ಲಿ ಹರಿದಾಡಿದ್ದವು. ಆದರೆ, ಪ್ರತ್ಯೇಕತಾವಾದಿ ಸಂಘಟನೆ ಹುರಿಯತ್‌ ಕಾನ್ಫರೆನ್ಸ್‌ನ ಒಂದು ಬಣದ ನಾಯಕ ಮೀರ್‌ವೈಜ್‌ ಉಮರ್‌ ಫಾರೂಕ್‌ ಈ ವದಂತಿಯನ್ನು ಅಲ್ಲಗಳೆದಿದ್ದಾರೆ. ತಮ್ಮನ್ನು ಬಂಧಿಸಿದ್ದಷ್ಟೇ ಅಲ್ಲದೆ, ದೂರವಾಣಿ ಸಂಪರ್ಕವನ್ನು ಕೂಡ ಕಡಿತಗೊಳಿಸಲಾಗಿದೆ. ಹಾಗಾಗಿ, ಯಾವುದೇ ಚಟುವಟಿಕೆ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಮೀರ್‌ವೈಜ್‌ ಹೇಳಿದ್ದಾರೆ. ಸುದೀರ್ಘ ಕಾಲ ಹುರಿಯತ್‌ ಕಾನ್ಫರೆನ್ಸ್‌ನ ಮುಂಚೂಣಿಯಲ್ಲಿದ್ದ ಸಯ್ಯದ್‌ ಅಲಿ ಶಾ ಗಿಲಾನಿ ಅವರು ಸಂಘಟನೆಯಿಂದಲೇ ಈ ಜೂನ್‌ನಲ್ಲಿ ಹೊರಗೆ ಬಂದಿದ್ದಾರೆ. ಸಂಘಟನೆಯಲ್ಲಿ ಅವರನ್ನು ಮೂಲೆಗುಂಪು ಮಾಡಿದ್ದೇ ಅವರ ಈ ನಿರ್ಧಾರಕ್ಕೆ ಕಾರಣ ಎನ್ನಲಾಗುತ್ತಿದೆ.

ಜೆಕೆಎಲ್‌ಎಫ್‌ನ ಮುಹಮ್ಮದ್‌ ಯಾಸೀನ್‌ ಮಲಿಕ್‌ ಮತ್ತು ಈ ಸಂಘಟನೆಯ ಹಲವು ಮುಖಂಡರು ಹಣ ಅಕ್ರಮ ವರ್ಗಾವಣೆ
ಪ್ರಕರಣದಲ್ಲಿ ಜೈಲಿನಲ್ಲಿದ್ದಾರೆ. ಜಮಾತ್‌ ಎ ಇಸ್ಲಾಮಿ ಸಂಘಟನೆಯನ್ನು ಕಾಶ್ಮೀರದಲ್ಲಿ ನಿಷೇಧಿಸಲಾಗಿದೆ. ಅದರ ಎಲ್ಲ ನಾಯಕರೂ ಬಂಧನಲ್ಲಿದ್ದಾರೆ.

ಮುಖ್ಯವಾಹಿನಿಯ ರಾಜಕೀಯ ಪಕ್ಷಗಳ ಸ್ಥಿತಿಯೂ ಹೀಗೆಯೇ ಇದೆ. ತಮ್ಮ ಪಕ್ಷದ 16 ನಾಯಕರು ಕಳೆದ 363 ದಿನಗಳಿಂದ ಗೃಹ ಬಂಧನಲ್ಲಿದ್ದಾರೆ ಎಂದು ನ್ಯಾಷನಲ್‌ ಕಾನ್ಫರೆನ್ಸ್‌ನ ವಕ್ತಾರ ಇಮ್ರಾನ್‌ ನಬಿ ದರ್‌ ಹೇಳಿದ್ದಾರೆ. ಈ ನಾಯಕರ ಬಿಡುಗಡೆಗಾಗಿ ಪಕ್ಷದ ಅಧ್ಯಕ್ಷರಾದ ಫಾರೂಕ್‌ ಅಬ್ದುಲ್ಲಾ ಮತ್ತು ಉಪಾಧ್ಯಕ್ಷ ಒಮರ್‌ ಅಬ್ದುಲ್ಲಾ ಅವರು ನ್ಯಾಯಾಲಯಕ್ಕೆ ಎರಡು ಅರ್ಜಿಗಳನ್ನು ಸಲ್ಲಿಸಿದ್ದಾರೆ ಎಂದು ದರ್‌ ತಿಳಿಸಿದ್ದಾರೆ.

ಪಿಡಿಪಿಯ ಹಲವು ಮುಖಂಡರನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದ್ದರೂ ಗೃಹ ಬಂಧನದಲ್ಲಿ ಇರಿಸಲಾಗಿದೆ ಎಂದು ಆ ಪಕ್ಷದ ವಕ್ತಾರ ಸುಹೈಲ್‌ ಬುಖಾರಿ ಹೇಳಿದ್ದಾರೆ.

ಭಾರತೀಯ ಆಡಳಿತ ಸೇವೆಗೆ (ಐಎಎಸ್‌) ರಾಜೀನಾಮೆ ನೀಡಿ ರಾಜಕೀಯಕ್ಕೆ ಬಂದು ಜಮ್ಮು–ಕಾಶ್ಮೀರ ಪೀಪಲ್ಸ್‌ ಮೂವ್‌ಮೆಂಟ್‌ ಪಕ್ಷ ಸ್ಥಾಪಿಸಿರುವ ಶಾ ಫೈಸಲ್‌, ಸಜ್ಜದ್‌ ಲೋನ್‌ ನಾಯಕತ್ವದ ಪೀಪಲ್ಸ್‌ ಕಾನ್ಫರೆನ್ಸ್‌ನ ಅಬ್ದುಲ್‌ ಘನಿ ಕೂಡ ಗೃಹ ಬಂಧನದಲ್ಲಿ ಇದ್ದಾರೆ.

ಕಳೆದ ಆಗಸ್ಟ್‌ 5ರ ಬಳಿಕ ಪ್ರಾದೇಶಿಕ ರಾಜಕಾರಣ ಮತ್ತು ರಾಜಕೀಯ ನಾಯಕರು ಜಮ್ಮು ಮತ್ತು ಕಾಶ್ಮೀರದ ರಾಜಕೀಯ ಚಿತ್ರಣದಲ್ಲಿಯೇ ಇಲ್ಲದಂತೆ ಮಾಡಲಾಗಿದೆ. ಅದು ಇನ್ನೂ ಮುಂದುವರಿದಿದೆ ಎಂದು ಪಿಡಿಪಿ ನಾಯಕ ಮತ್ತು ಮಾಜಿ ಸಚಿವ ಅಖ್ತರ್‌ ಹೇಳಿದ್ದಾರೆ.

ಕುಸಿದ ಉದ್ಯಮ: ಬದುಕು ದುಸ್ತರ

ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ಶ್ರೀನಗರದ ಐತಿಹಾಸಿಕ ದಾಲ್‌ ಸರೋವರದ ಸುತ್ತಮುತ್ತ‌ ಹೂವು ವ್ಯಾಪಾರ ಮಾಡುತ್ತಿದ್ದ 60 ವರ್ಷದ ಅಬ್ದುಲ್‌ ರಶೀದ್ ಈಗ ನಿರುದ್ಯೋಗಿ. ಜೀವನ ನಿರ್ವಹಣೆಗೆ ಹೂವಿನ ಬದಲು ತರಕಾರಿ ಬೆಳೆದು ಮಾರಾಟ ಮಾಡುತ್ತಿದ್ದಾರೆ. ಇದು ಕೇವಲ ರಶೀದ್‌ ಒಬ್ಬರ ಬದುಕಿನ ಕತೆಯಲ್ಲ. ಕಣಿವೆಯಲ್ಲಿ ಪ್ರವಾಸೋದ್ಯಮ, ಶಾಲು, ರತ್ನಗಂಬಳಿ, ಸೇಬು, ಕೇಸರಿ, ಪುಷ್ಪೋದ್ಯಮ ನಂಬಿಕೊಂಡು ಬದುಕು ಕಟ್ಟಿಕೊಂಡಿದ್ದವರ ಕತೆಯೂ ಇದಕ್ಕಿಂತ ಭಿನ್ನವಾಗಿಲ್ಲ. ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿದ ನಂತರ ಕಾಶ್ಮೀರಿಗಳ ಜೀವನ ವಿಧಾನವೇ ಬದಲಾಗಿ ಹೋಗಿದೆ.

‘ಸಂವಿಧಾನದ 370ನೇ ವಿಧಿಯನ್ನು ರದ್ದು ಮಾಡಿದ ಕೇಂದ್ರ ಸರ್ಕಾರದ ತೀರ್ಮಾನ ಕೇವಲ ರಾಜಕೀಯ ನಿರ್ಧಾರವಲ್ಲ, ಅದು ನಮ್ಮ ಬದುಕನ್ನು ದುಸ್ತರಗೊಳಿಸಿದೆ’ ಎನ್ನುತ್ತಾರೆ ರಶೀದ್‌.

ಕಳೆದ ಆಗಸ್ಟ್‌ 5ರಂದು ವಿಶೇಷ ಸ್ಥಾನಮಾನ ರದ್ದು ಮಾಡಿದ ನಂತರ ಹೇರಲಾದ ನಿರ್ಬಂಧ ಮತ್ತು ಕೋವಿಡ್‌–19 ಲಾಕ್‌ಡೌನ್‌ನಿಂದ ಕಣಿವೆಯ ಆರ್ಥಿಕ ವ್ಯವಸ್ಥೆ ಬುಡಮೇಲಾಗಿದೆ. ಪ್ರವಾಸೋದ್ಯಮ, ವಾಣಿಜ್ಯ ಮತ್ತು ಆರ್ಥಿಕ ಚಟುವಟಿಕೆಗಳಿಲ್ಲದೆ ಪ್ರತಿಯೊಂದು ಕ್ಷೇತ್ರವೂ ತೊಂದರೆಗೆ ಸಿಲುಕಿದೆ. ಕಾಶ್ಮೀರಿಗರು ಕಂಗೆಟ್ಟಿದ್ದಾರೆ.

ಪ್ರವಾಸಿಗರ ಸುಳಿವಿಲ್ಲದೆ ದಾಲ್‌ ಸರೋವರದ ಬೋಟ್‌ ಹೌಸ್‌ಗಳು (ಶಿಕಾರಗಳು) ದಡವನ್ನು ಬಿಟ್ಟು ಕದಲಿಲ್ಲ. ವರ್ಷದಿಂದ ಹೋಟೆಲ್‌ ಕೋಣೆಗಳು ಖಾಲಿ ಬಿದ್ದಿವೆ. ಶಾಲು‌ ಮತ್ತು ಕರಕುಶಲ ವಸ್ತುಗಳನ್ನು ಕೊಳ್ಳುವವರಿಲ್ಲ. ಶೈತ್ಯಾಗಾರದಲ್ಲಿ ಸೇಬು, ಹೂವುಗಳು ಕೊಳೆಯುತ್ತಿವೆ.

ಪ್ರವಾಸಿಗರ ಆಕರ್ಷಣೆಯ ಕೇಂದ್ರವಾದ ಪ್ರಸಿದ್ಧ ದಾಲ್‌ ಸರೋವರದಲ್ಲಿ ಪ್ರವಾಸಿಗರನ್ನು ವಿಹಾರಕ್ಕೆ ಕೊಂಡೊಯ್ಯುತ್ತಿದ್ದ ಮೊಹಮ್ಮದ್‌ ಲತೀಫ್‌ ಈಗ ಸರೋವರದ ದಡದಲ್ಲಿ ಸಿಗರೇಟ್‌ ಮತ್ತು ಸೌತೆಕಾಯಿ ಮಾರಾಟ ಮಾಡುತ್ತಿದ್ದಾರೆ.

‘ಕಳೆದ ಒಂದು ವರ್ಷದಿಂದ ಪ್ರವಾಸಿಗರಿಲ್ಲದೆ ಒಂದು ನಯಾಪೈಸೆ ಆದಾಯವಿಲ್ಲ’ ಎನ್ನುತ್ತಾರೆ ಮೂರು ಬೋಟ್‌ಹೌಸ್ ಮಾಲೀಕ ಗುಲಾಮ್ ಖಾದಿರ್. ತರಕಾರಿ ಮಾರಾಟ ಮಾಡುತ್ತಿರುವ ಖಾದಿರ್‌ ಅವರಿಗೆ ಒದಗಿಬಂದಿರುವ ಪರಿಸ್ಥಿತಿ ಇಡೀ ಕಣಿವೆಯ ಜನಜೀವನದ ಸ್ಥಿತಿಯನ್ನು ಬಿಂಬಿಸುತ್ತದೆ.

ಐದು ಲಕ್ಷ ಉದ್ಯೋಗ ನಷ್ಟ: ಕಳೆದ ಆಗಸ್ಟ್‌ನಿಂದ ಇಲ್ಲಿವರೆಗೆ ಜಮ್ಮು ಮತ್ತು ಕಾಶ್ಮೀರದ ಉದ್ಯಮ 18 ಸಾವಿರ ಕೋಟಿ ರೂಪಾಯಿಗಿಂತ ಹೆಚ್ಚು ನಷ್ಟ ಅನುಭವಿಸಿದ್ದು, 5 ಲಕ್ಷಕ್ಕೂ ಹೆಚ್ಚು ಜನರು ಉದ್ಯೋಗ ಕಳೆದುಕೊಂಡಿದ್ದಾರೆ.

ಕಣಿವೆಯಾದ್ಯಂತ ಅಂತರ್ಜಾಲ ಸೇವೆ ಸ್ಥಗಿತಗೊಳಿಸಿದ ಕಾರಣ ಇ–ಕಾಮರ್ಸ್ ವಹಿವಾಟು ಸಂಪೂರ್ಣವಾಗಿ ನೆಲಕಚ್ಚಿದೆ. ಇದೊಂದೇ ವಲಯ ಮೂರು ಸಾವಿರ ಕೋಟಿ ರೂಪಾಯಿ ನಷ್ಟ ಅನುಭವಿಸಿದೆ.

ಪ್ರವಾಸೋದ್ಯಮಕ್ಕೆ ಭಾರಿ ಹೊಡೆತ ಬಿದ್ದಿದ್ದು, ಇದರ ಮೇಲೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಅವಲಂಬಿಸಿದ್ದ ಗುಡಿಕೈಗಾರಿಕೆ, ಸಾರಿಗೆ, ಹೋಟೆಲ್‌, ಆತಿಥ್ಯ ಸೇರಿದಂತೆ ಹತ್ತಾರು ಉದ್ಯಮಗಳು ಸಂಪೂರ್ಣ ನೆಲಕಚ್ಚಿವೆ.

ಪ್ರವಾಸೋದ್ಯಮ ಒಂದೂವರೆ ಸಾವಿರ ಕೋಟಿ ರೂಪಾಯಿಗಿಂತ ಹೆಚ್ಚು ನಷ್ಟ ಅನುಭವಿಸಿದೆ. ರತ್ನಗಂಬಳಿ ರಫ್ತು ಹಾಗೂ ಮತ್ತಿತರ ಕರಕುಶಲ ವಸ್ತುಗಳ ಮಾರಾಟದಲ್ಲಿ ಶೇ 73ರಷ್ಟು ಕುಸಿತಕಂಡಿದ್ದು, ಸುಮಾರು 2,520 ಕೋಟಿ ರೂಪಾಯಿ ಆದಾಯಕ್ಕೆ ಪೆಟ್ಟು ಬಿದ್ದಿದೆ. ಪುಷ್ಪೋದ್ಯಮ ಮತ್ತು ಸೇಬು ಮಾರಾಟ ಕುಸಿತದಿಂದ ಏಳೆಂಟು ಸಾವಿರ ಕೋಟಿ ರೂಪಾಯಿ ಆದಾಯ ಖೋತಾ ಆಗಿದೆ ಎಂದು ಕಾಶ್ಮೀರದ ವಾಣಿಜ್ಯ ಮತ್ತು ಕೈಗಾರಿಕೋದ್ಯಮ ಸಂಘ (ಕೆಸಿಸಿಐ) ವರದಿ ಹೇಳಿದೆ.

ನೆಲಕಚ್ಚಿದ ಸೇಬು, ಪುಷ್ಪೋದ್ಯಮ

ಪ್ರವಾಸೋದ್ಯಮ ಮತ್ತು ರತ್ನಗಂಬಳಿ ಉದ್ಯಮದಷ್ಟೇ ಸೇಬು ಮತ್ತು ಪುಷ್ಪೋದ್ಯಮ ಕೃಷಿ ಕಾಶ್ಮೀರದ ಆರ್ಥಿಕತೆಯ ಮತ್ತೊಂದು ಆಧಾರಸ್ತಂಭ. ದೇಶದ ಶೇ 75ರಷ್ಟು ಸೇಬು ಬೆಳೆಯುವುದು ಕಣಿವೆಯ ತೋಟಗಳಲ್ಲಿ. ಏಳು ಲಕ್ಷ ಕುಟುಂಬಗಳಿಗೆ ಈ ಎರಡು ವಲಯಗಳು ಅನ್ನ ನೀಡುತ್ತಿವೆ.

ಪ್ರತಿ ವರ್ಷ ಕಣಿವೆಯಲ್ಲಿ 20 ಲಕ್ಷ ಟನ್‌ ಸೇಬು ಬೆಳೆಯಲಾಗುತ್ತದೆ. ಹವಾಮಾನ ವೈಪರೀತ್ಯ ಮತ್ತು ಹಿಮಪಾತದಿಂದ ಸೇಬು ಕೃಷಿ ಕೂಡ ನಷ್ಟದಲ್ಲಿದೆ. ಕಳೆದ ವರ್ಷ ರಾಷ್ಟ್ರೀಯ ಹೆದ್ದಾರಿ ಬಂದ್‌ ಹಾಗೂ ಈ ಬಾರಿ ಸಂವಿಧಾನದ 370ನೇ ವಿಧಿ ರದ್ದು ಮತ್ತು ಕೋವಿಡ್‌ –19 ಲಾಕ್‌ಡೌನ್‌ ಈ ಉದ್ಯಮಕ್ಕೆ ದೊಡ್ಡ ಪೆಟ್ಟು ನೀಡಿವೆ.

ಲಾಕ್‌ಡೌನ್‌ ಅವಧಿಯಲ್ಲಿ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಶೈತ್ಯಾಗಾರಗಳಲ್ಲಿ ಸುಮಾರು 1 ಲಕ್ಷ ಟನ್‌ ಸೇಬು ಹಣ್ಣು ಸಂಗ್ರಹಿಸಿಡಲಾಗಿತ್ತು. ಆ ಪೈಕಿ ಶೇ 30ರಷ್ಟು ಸೇಬು ಮಾತ್ರ ಮಾರಾಟವಾಗಿದ್ದವು. ದೆಹಲಿಯ ಅಜಾದ್‌ಪುರ ಸೇಬು ಮಾರುಕಟ್ಟೆ ಬಂದ್‌ ಆದ ಕಾರಣ ಸೇಬು ವ್ಯಾಪಾರ ನೆಲಕಚ್ಚಿದೆ. ಲಾಕ್‌ಡೌನ್‌ ಅವಧಿಯಲ್ಲಿ ಇನ್ನೂ 80 ಸಾವಿರ ಮೆಟ್ರಿಕ್‌ ಟನ್‌ ಶೈತ್ಯಾಗಾರದಲ್ಲಿ ಕೊಳೆಯುತ್ತಿದ್ದವು.

ಗಿಡದಿಂದ ಕಿತ್ತ ಬಳಿಕ ಏಳು ತಿಂಗಳು ಮಾತ್ರ ಶೈತ್ಯಾಗಾರಗಳಲ್ಲಿ ಸೇಬು ಸಂಗ್ರಹಿಸಿಡಬಹುದು. ಈ ಬಾರಿ ಹಣ್ಣು ಕೆಡದಂತೆ ಕಾಪಾಡಲು ಕೀಟನಾಶಕ ಮತ್ತು ಶಿಲೀಂಧ್ರನಾಶಕ ಸಿಂಪಡಿಸಲಾಗಿದೆ.

ಪ್ರತಿ ಬೇಸಿಗೆಯಲ್ಲಿ ಬಣ್ಣ ಬಣ್ಣದ ಗುಲಾಬಿ,ಟುಲಿಪ್‌,ಡ್ಯಾಫೋಡಿಲ್ಸ್‌ ಮುಂತಾದ ಹೂವಿನ ಗಿಡಗಳಿಂದ ಕಂಗೊಳಿಸುತ್ತಿದ್ದ ಕಾಶ್ಮೀರದ ತೋಟಗಳಲ್ಲಿ ಈಗ ತರಕಾರಿ ಬೆಳೆಯಲಾಗುತ್ತಿದೆ.

ಹೊಸ ಕಾಶ್ಮೀರ: ಸರ್ಕಾರದ ಪ್ರತಿಪಾದನೆ

ಆರೋಗ್ಯ, ಉದ್ಯೋಗ, ವಿಕೇಂದ್ರೀಕರಣ ಮೊದಲಾದ 10 ಅಂಶಗಳಿಗೆ ಒತ್ತು ನೀಡುವುದಾಗಿ ಜಮ್ಮು ಕಾಶ್ಮೀರ ಆಡಳಿತ ಭರವಸೆ ನೀಡಿದೆ. ‘ಹೊಸ ಕಾಶ್ಮೀರ’ ಪರಿಕಲ್ಪನೆ ಹಾಗೂ ಒಂದು ವರ್ಷದ ಸಾಧನೆಗಳ ಬಗ್ಗೆ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.

ಕೇಂದ್ರ ಸರ್ಕಾರದ 170ಕ್ಕೂ ಹೆಚ್ಚು ಕಾನೂನುಗಳು ಈಗ ಕಾಶ್ಮೀರವಾಸಿಗಳಿಗೂ ಅನ್ವಯವಾಗುತ್ತಿವೆ. ಎಸ್‌ಸಿ/ಎಸ್‌ಟಿ ಕಾಯ್ದೆ, ಆಸ್ತಿ ವರ್ಗಾವಣೆ ಕಾಯ್ದೆ, ಬಾಲನ್ಯಾಯ ಕಾಯ್ದೆ ಇದರಲ್ಲಿ ಸೇರಿವೆ. ಭಾರತದ ಯಾವುದೇ ನಾಗರಿಕರ ರೀತಿಯಲ್ಲಿ ಕಾಶ್ಮೀರಿಗಳೂ ಎಲ್ಲ ಹಕ್ಕುಗಳನ್ನು ಅನುಭವಿಸಲು ಅರ್ಹರು ಎಂಬುದು ಅಧಿಕಾರಿಗಳ ವಿವರಣೆ.

‘ಸ್ಥಳೀಯ ನಿವಾಸಿ ಕಾನೂನು’ ಜಾರಿಗೆ ತಂದಿರುವುದರಿಂದ ಈ ಪ್ರಮಾಣಪತ್ರ ಪಡೆದ ಅರ್ಹರೆಲ್ಲರಿಗೂ ಸರ್ಕಾರಿ ಉದ್ಯೋಗದ ಬಾಗಿಲು ತೆರೆದಿದೆ. ಸಾಮಾಜಿಕ ಭದ್ರತೆಗೆ ಆದ್ಯತೆ ನೀಡಲಾಗಿದೆ. 7.42 ಲಕ್ಷ ಜನರಿಗೆ ಪಿಂಚಣಿ, 4.76 ಲಕ್ಷ ಮೆಟ್ರಿಕ್‌ಪೂರ್ವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗಿದೆ. ಶಿಕ್ಷಣಕ್ಕೆ ಗಮನ ನೀಡಲಾಗಿದ್ದು 50 ಹೊಸ ಪದವಿ ಕಾಲೇಜುಗಳನ್ನು ಆರಂಭಿಸಲಾಗಿದೆ. 7 ವೈದ್ಯಕೀಯ ಕಾಲೇಜುಗಳಿಗೆ ಅನುಮತಿ/ಕಾರ್ಯಾರಂಭ ಸಿಕ್ಕಿದೆ.

ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆ ಜಾರಿಗೊಳಿಸಿದ್ದು, ವ್ಯಾಪಾರಿಗಳು, ಟ್ರಕ್ ಚಾಲಕರಿಗೆ ಉಗ್ರರ ಭೀತಿಯಿಂದ ರಕ್ಷಣೆ ನೀಡಲಾಗಿದೆ. ಜಾಗತಿಕ ಬಂಡವಾಳ ಹೂಡಿಕೆ ಸಮ್ಮೇಳನ ನಡೆಸಿ, ₹13 ಸಾವಿರ ಕೋಟಿ ಮೌಲ್ಯದ 168 ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. 37 ಕೈಗಾರಿಕೆಗಳನ್ನು ಸ್ಥಾಪಿಸಲು 6 ಸಾವಿರ ಎಕರೆ ಜಮೀನನ್ನು ಸರ್ಕಾರ ಉದ್ಯಮ ವಲಯಕ್ಕೆ ನೀಡಿದೆ ಎಂದು ಸರ್ಕಾರ ಹೇಳಿಕೊಂಡಿದೆ.

ಸರಿದಾರಿಗೆ ಬಾರದ ಇಂಟರ್ನೆಟ್

ಜಮ್ಮು ಮತ್ತು ಕಾಶ್ಮೀರದಲ್ಲಿ ದೂರವಾಣಿ, ಇಂಟರ್ನೆಟ್ ಸಂಪರ್ಕದ ಮೇಲೆ ಹೇರಿದ್ದ ನಿರ್ಬಂಧವನ್ನು ಕೆಲವು ತಿಂಗಳ ಹಿಂದೆಯಷ್ಟೇ ನಿಬಂಧನೆಗಳೊಂದಿಗೆ ಹಿಂದಕ್ಕೆ ತೆಗೆದುಕೊಳ್ಳಲಾಗಿದೆ. ಸ್ಥಿರ ದೂರವಾಣಿ, ಪ್ರಿಪೇಯ್ಡ್ ಮೊಬೈಲ್‌ಗಳಿಂದ ಕರೆ ಮಾಡುವ ಮತ್ತು ಎಸ್‌ಎಂಎಸ್‌ ಕಳುಹಿಸುವ ಸೌಲಭ್ಯ ಮರುಸ್ಥಾಪಿಸಲಾಗಿದೆ. ಆದರೆ 12 ಜಿಲ್ಲೆಗಳಲ್ಲಿ ಮಾತ್ರ ಪೋಸ್ಟ್‌ಪೇಯ್ಡ್ ಮೊಬೈಲ್‌ಗಳಿಗೆ 2ಜಿ ಇಂಟರ್ನೆಟ್ ಸಂಪರ್ಕ ಕಲ್ಪಿಸಲಾಗಿದೆ. ಇದರಲ್ಲಿ ಜಮ್ಮುವಿನ 10 ಜಿಲ್ಲೆಗಳು ಹಾಗೂ ಕಾಶ್ಮೀರದ ಕುಪ್ವಾರ ಮತ್ತು ಬಂಡಿಪೊರ ಜಿಲ್ಲೆಗಳು ಸೇರಿವೆ. ಸಾಮಾಜಿಕ ಜಾಲತಾಣಗಳ ಮೇಲೆ ನಿರ್ಬಂಧ ಮುಂದುವರಿದಿದೆ. ಶ್ರೀನಗರ, ಶೋಪಿಯಾನ್, ಅನಂತನಾಗ್, ಬಾರಾಮುಲ್ಲಾ ಮೊದಲಾದ ಜಿಲ್ಲೆಗಳಲ್ಲಿ ಇನ್ನೂ ಅಂತರ್ಜಾಲದ ಸಂಪರ್ಕ ಸಿಗುತ್ತಿಲ್ಲ. ಆದರೆ ಜಮ್ಮು ಕಾಶ್ಮೀರದ ಎಲ್ಲ ಬ್ಯಾಂಕ್‌ಗಳಿಗೆ ಬ್ರಾಡ್‌ಬ್ಯಾಂಡ್ ಸಂಪರ್ಕ ಕಲ್ಪಿಸಲಾಗಿದೆ. 2ಜಿ ಸಂಪರ್ಕದಿಂದಾಗಿ ಇಂಟರ್ನೆಟ್ ವೇಗ ತುಂಬ ನಿಧಾನವಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಾರೆ. ಕೋವಿಡ್ ಜಾಗೃತಿ ಮೂಡಿಸಲು, ರೋಗಿಗಳ ಜತೆ ಸಂವಹನ ನಡೆಸಲು, ಮಾರ್ಗಸೂಚಿಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬುದು ವೈದ್ಯರ ಅಳಲು.

ನೆಲಕಚ್ಚಿದ ಸಾರಿಗೆ ವಲಯ

ಕಣಿವೆಯಲ್ಲಿ ಹೇರಲಾದ ಲಾಕ್‌ಡೌನ್ ಹಾಗೂ ಕೋವಿಡ್ ಲಾಕ್‌ಡೌನ್‌ಗಳು ಸಾರಿಗೆ ವಲಯವನ್ನು ನಂಬಿಕೊಂಡಿದ್ದ 1.5 ಲಕ್ಷ ಜನರನ್ನು ಬೀದಿಗೆ ತಳ್ಳಿವೆ. ಪ್ರವಾಸಿಗರು ಕಣಿವೆಗೆ ಭೇಟಿ ನೀಡದ ಕಾರಣ, ಈ ವರ್ಷ ದುಡಿಮೆ ಆಗುತ್ತಿಲ್ಲ. ಲಾಕ್‌ಡೌನ್‌ನಿಂದ ಖಾಸಗಿ ಬಸ್‌ಗಳು ಸೇರಿದಂತೆ ಸಾರ್ವಜನಿಕ ಸಂಚಾರ ಸ್ಥಗಿತಗೊಂಡಿದೆ. ಬಹುಪಾಲು ಮಂದಿಗೆ ತಿಂಗಳ ಬ್ಯಾಂಕ್ ಕಂತುಗಳನ್ನು ಕಟ್ಟಲೂ ಆಗದ ಪರಿಸ್ಥಿತಿ ಇದೆ. 2019ರ ಆಗಸ್ಟ್–ಡಿಸೆಂಬರ್ ಅವಧಿಯಲ್ಲಿ ಸಾರಿಗೆ ಕ್ಷೇತ್ರವು ₹2,267 ಕೋಟಿ ನಷ್ಟ ಅನುಭವಿಸಿದೆ.

* ಇದು ನಿಜಕ್ಕೂ ಹತಾಶೆಯ ಸ್ಥಿತಿ. ತೀವ್ರನಿಗಾ ಘಟಕ ನಿರ್ವಹಣೆ ಕುರಿತ ಮಾರ್ಗಸೂಚಿಯನ್ನು ಡೌನ್‌ಲೋಡ್ ಮಾಡಿಕೊಳ್ಳಲೂ ಆಗುತ್ತಿಲ್ಲ. 24 ಎಂಬಿ ಗಾತ್ರದ ಕಡತವನ್ನು ಡೌನ್‌ಲೋಡ್ ಮಾಡಲು ಬರೋಬ್ಬರಿ 1 ಗಂಟೆ ಸಮಯ ಬೇಕು

– ಶ್ರೀನಗರದ ಸರ್ಕಾರಿ ಆಸ್ಪತ್ರೆಯ ವೈದ್ಯ

ಮಾಧ್ಯಮಗಳು ಮುಕ್ತವಾಗಿಲ್ಲ

ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದಾಗುತ್ತಿದ್ದಂತೆಯೇ ಸಂವಹನ ವ್ಯವಸ್ಥೆ ಸಂಪೂರ್ಣ ಸ್ತಬ್ಧಗೊಂಡಿತ್ತು. ಇದರಿಂದ ಮಾಧ್ಯಮ ಪ್ರತಿನಿಧಿಗಳಿಗೆ ಸುದ್ದಿ ಸಂಗ್ರಹ ಹಾಗೂ ಪತ್ರಿಕೆಗಳನ್ನು ಪ್ರಕಟಿಸುವುದು ಹರಸಾಹಸವಾಯಿತು. ಹೊರಗಿನ ಮಾಧ್ಯಮ ಸಂಸ್ಥೆಗಳಿಗೂ ಕಾಶ್ಮೀರವನ್ನು ಪ್ರವೇಶಿಸುವುದು ಅಸಾಧ್ಯವಾಯಿತು.

ಈ ಮಧ್ಯದಲ್ಲೇ ಜಮ್ಮು ಮತ್ತು ಕಾಶ್ಮೀರ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ನಿರ್ದೇಶನಾಲಯವು ಜೂನ್‌ 2ರಂದು ಹೊಸ ಮಾಧ್ಯಮ ನೀತಿಯನ್ನು ಜಾರಿ ಮಾಡಿದೆ. ಅದರ ಪ್ರಕಾರ ಆಡಳಿತವು ಸುಳ್ಳು ಸುದ್ದಿ ಪ್ರಸರಣ ತಡೆಗೆ ‘ಕಣ್ಗಾವಲು’ ಸಮಿತಿಯನ್ನು ರಚಿಸಲಿದೆ. ಈ ಸಮಿತಿಯ ನಿಯಮಾವಳಿಗಳನ್ನು ಒಪ್ಪುವ ಸಂಸ್ಥೆಗಳಿಗೆ ಮಾತ್ರ ಮಾನ್ಯತೆ ನೀಡಲಾಗುವುದು.

‘ಹೊಸ ನೀತಿಯ ಪ್ರಕಾರ ಪತ್ರಕರ್ತರು ಇನ್ನು ಮುಂದೆ ತಮ್ಮ ಸಂಪಾದಕ ಅಥವಾ ಓದುಗರಿಗೆ ನಿಷ್ಠರಾಗಿರುವುದಿಲ್ಲ. ಬದಲಿಗೆ ಸರ್ಕಾರಿ ಅಧಿಕಾರಿಗಳು ಹಾಗೂ ಭದ್ರತಾ ಪಡೆಯ ಅಧಿಕಾರಿಗಳಿಗೆ ನಿಷ್ಠರಾಗಿರಬೇಕಾಗುತ್ತದೆ. ಯಾವುದು ಸುಳ್ಳು ಸುದ್ದಿ ಮತ್ತು ಯಾವುದು ರಾಷ್ಟ್ರದ್ರೋಹ ಎಂಬುದನ್ನು ಈ ಅಧಿಕಾರಿಗಳು ತೀರ್ಮಾನಿಸುವಂತಾಗಿದೆ’ ಎಂದು ಮಾಧ್ಯಮ ಸಂಸ್ಥೆಗಳು ಆಕ್ಷೇಪಿಸಿವೆ.

‘ಮಾನವ ಹಕ್ಕುಗಳ ದಮನ’

ಜಮ್ಮು–ಕಾಶ್ಮೀರದಲ್ಲಿನ ದಿಗ್ಬಂಧನದ ಅವಧಿಯಲ್ಲಿ ಅಲ್ಲಿನ ನಿವಾಸಿಗಳ ಮಾನವ ಹಕ್ಕುಗಳನ್ನು ಹತ್ತಿಕ್ಕಲಾಗಿದೆ ಎಂದು ರಾಜಕೀಯ ನಾಯಕರು, ಮಾನವ ಹಕ್ಕುಗಳ ಹೋರಾಟಗಾರರು ಆರೋಪಿಸಿದ್ದಾರೆ. ‘ಈ ಅವಧಿಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗಿದೆ. ಇಂಟರ್ನೆಟ್‌ ತೆಗೆಯುವ ಮೂಲಕ ಜನರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಸಾಧ್ಯವಿಲ್ಲದೇ ಇರುವಂತಹ ಸ್ಥಿತಿ ನಿರ್ಮಿಸಲಾಗಿದೆ’ ಎಂದು ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್‌ ಅಬ್ದುಲ್ಲಾ ಹೇಳಿದ್ದಾರೆ.

ರಾಜಕೀಯ ನಾಯಕರನ್ನು ಮತ್ತು ನಾಗರಿಕರನ್ನು ಕಾರಣವಿಲ್ಲದೆ ಬಂಧಿಸಿ ಗೃಹಬಂಧನದಲ್ಲಿ ಇರಿಸಲಾಗಿದೆ. ಗೃಹಬಂಧನದ ಅವಧಿಯನ್ನು ವಿಸ್ತರಿಸಲಾಗುತ್ತಿದೆ. ಈ ಮೂಲಕ ಅವರ ಸ್ವಾತಂತ್ರ್ಯದ ಹಕ್ಕು ಮತ್ತು ಜೀವಿಸುವ ಹಕ್ಕನ್ನು ಕಸಿದುಕೊಳ್ಳಲಾಗಿದೆ ಹಲವು ಸ್ವಯಂ ಸೇವಾ ಸಂಸ್ಥೆಗಳು ತಮ್ಮ ವರದಿಗಳಲ್ಲಿ ಹೇಳಿವೆ.

(ಆಧಾರ: ರಾಯಿಟರ್ಸ್, ಪಿಟಿಐ, ಜಮ್ಮು ಮತ್ತು ಕಾಶ್ಮೀರದಲ್ಲಿ ಲಾಕ್‌ಡೌನ್‌ಗಳ ಪರಿಣಾಮ ಹಾಗೂ ಮಾನವ ಹಕ್ಕುಗಳ ಕುರಿತ ವರದಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT