ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Explainer| ಏನಿದು ಪೀರನವಾಡಿ ರಾಯಣ್ಣ ಪ್ರತಿಮೆ ವಿವಾದ? ಇಲ್ಲಿದೆ ಸಂಪೂರ್ಣ ಮಾಹಿತಿ

Last Updated 29 ಆಗಸ್ಟ್ 2020, 2:47 IST
ಅಕ್ಷರ ಗಾತ್ರ

ಬೆಳಗಾವಿ: ತಾಲ್ಲೂಕಿನ ಪೀರನವಾಡಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ ಮಾಡಬೇಕು ಹಾಗೂ ಅದನ್ನು ವೃತ್ತವಾಗಿ ಅಭಿವೃದ್ಧಿಪಡಿಸಬೇಕು ಎನ್ನುವ ಬೇಡಿಕೆ ಅಲ್ಲಿನ ಅಭಿಮಾನಿಗಳಿಂದ ಹಿಂದಿನಿಂದಲೂ ಇದೆ.

* 2018ರಲ್ಲಿ ಗ್ರಾಮ ಪಂಚಾಯಿತಿಯಲ್ಲೂ ಚರ್ಚೆಯಾಗಿ ನಿರ್ಣಯ ಕೈಗೊಳ್ಳಲಾಗಿತ್ತು.

* ಕೆಲವೇ ದಿನಗಳಲ್ಲಿ ಮರಾಠಿ ಭಾಷಿಕರಿಂದ ಅದಕ್ಕೆ ವಿರೋಧ ವ್ಯಕ್ತವಾಗಿತ್ತು. ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗಿಂತ ರಾಯಣ್ಣ ಪ್ರತಿಮೆಗೆ ಪ್ರಮುಖವಾದ ಸ್ಥಳದಲ್ಲಿ ಪ್ರತಿಷ್ಠಾಪನೆ ಆಗುವುದಕ್ಕೆ ಒಂದಿಷ್ಟು ಮರಾಠಿಗರು ವಿರೋಧ ವ್ಯಕ್ತಪಡಿಸಿದ್ದರು.

* ಈ ನಡುವೆ ರಾಯಣ್ಣನ ಅಭಿಮಾನಿಗಳು ಹಾಗೂ ಕನ್ನಡಪರ ಸಂಘಟನೆಗಳವರು ಪ್ರತಿಮೆ ಸ್ಥಾಪನೆಗೆ ಹೋರಾಟ ಮುಂದುವರಿಸಿದ್ದರು. ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸುತ್ತಾ ಬಂದಿದ್ದರು.

* ಕಾಂಗ್ರೆಸ್ ಸರ್ಕಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಂದರ್ಭದಲ್ಲಿ ರಮೇಶ ಜಾರಕಿಹೊಳಿ ಅವರೂ ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದರು.

* ಈ ನಡುವೆ ಅಲ್ಲಿ ರಸ್ತೆ ವಿಸ್ತರಣೆ ಮಾಡಿದ ನಂತರ ಪ್ರತಿಮೆ ಸ್ಥಾಪನೆ ಮಾಡಬೇಕು ಎಂದು ಅಭಿಮಾನಿಗಳು ಬಯಸಿದ್ದ ಜಾಗ ರಸ್ತೆಯ ಮಧ್ಯದಲ್ಲಿ ಸೇರಿಕೊಂಡಿತು. ಮರಾಠಿ ಭಾಷಿಕರ ವಿರೋಧ ಇದ್ದಿದ್ದರಿಂದ ಹಾಗೂ ಭಾಷಾ ಸೂಕ್ಷ್ಮ ಇದ್ದಿದ್ದರಿಂದ ಜಿಲ್ಲಾಡಳಿತದಿಂದ ಸೂಕ್ತ ಅನುಮತಿ ನೀಡಿರಲಿಲ್ಲ.

* ಸರ್ಕಾರದಿಂದ ಸ್ಪಂದನೆ ದೊರೆಯದೇ ಇದ್ದಿದ್ದರಿಂದ ರಾಯಣ್ಣನ ಅಭಿಮಾನಿಗಳು ಹಾಗೂ ಸ್ಥಳೀಯ ಕನ್ನಡ ಪರ ಹೋರಾಟಗಾರರು ರಾಯಣ್ಣನ ಜಯಂತಿಯ ದಿನವಾದ ಆ. 15ರಂದು ನಸುಕಿನಲ್ಲಿ ಪ್ರತಿಮೆಯನ್ನು ಪ್ರತಿಷ್ಠಾಪನೆ ಮಾಡಿಬಿಟ್ಟಿದ್ದರು. ಆ ಸ್ಥಳದಲ್ಲಿ ರಾಷ್ಟ್ರ ಧ್ವಜವನ್ನೂ ಕಟ್ಟಿದ್ದರು. ಕೆಲವೇ ಹೊತ್ತಿನಲ್ಲಿ ಪೊಲೀಸರು ಪ್ರತಿಮೆಯನ್ನು ತೆರವುಗೊಳಿಸಿ ತಮ್ಮ ವಶಕ್ಕೆ ಪಡೆದಿದ್ದರು. ಈ ವಿಷಯ ಎಲ್ಲೆಡೆ ಪಸರಿಸಿದ್ದರಿಂದ ರಾಯಣ್ಣನ ಅಭಿಮಾನಿಗಳು, ಕನ್ನಡ ಪರ ಹೋರಾಟಗಾರರು ಹಾಗೂ ಹಾಲುಮತ ಸಮಾಜದವರು ರಾಜ್ಯದಾದ್ಯಂತ ಹೋರಾಟ ಆರಂಭಿಸಿದ್ದರು. ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಪ್ರತಿಮೆಯನ್ನು ಗೌರವಪೂರ್ವಕವಾಗಿ ಮರು ಪ್ರತಿಷ್ಠಾಪನೆ ಮಾಡಬೇಕು ಎಂದು ಹಕ್ಕೊತ್ತಾಯ ಮಂಡಿಸಿದ್ದರು. ಈ ರೀತಿಯ ಒತ್ತಡದ ಪೋಸ್ಟ್‌ಗಳು ಸಾಮಾಜಿಕ ಮಾಧ್ಯಮದಲ್ಲೂ ವೈರಲ್ ಆಗಿದ್ದವು. ಹೋರಾಟ ವ್ಯಾಪವಾಗಿ ನಡೆದಿತ್ತು.

* ವಿವಾದದ ಗಂಭೀರತೆಯನ್ನು ಅರಿತ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದರು. ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಬೇಕು ಎಂದು ಬೆಳಗಾವಿ ಪೊಲೀಸರಿಗೆ ಸೂಚಿಸಿದ್ದರು. ಇದಾದ ನಂತರ ಪೊಲೀಸರು ಮುಖಂಡರ ಸಭೆ ನಡೆಸಿದ್ದರು. ರಾಜಿ ಮಾಡಲು ಮುಂದಾಗಿದ್ದರು. ಬೇರೆ ಜಾಗವನ್ನು ಒದಗಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದ್ದರು. ಇದಕ್ಕೆ ಮುಖಂಡರು ಒಪ್ಪಿರಲಿಲ್ಲ.

* ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಗೋಕಾಕದಲ್ಲಿ ಹಾಲುಮತ ಸಮಾಜದವರ ಸಭೆ ನಡೆಸಿ ವಿವಾದ ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಅದೇ ಜಾಗ ಬೇಕು, ಇದೇ ಜಾಗ ಬೇಕು ಎನ್ನಬಾರದು. ಕಾನೂನಿನ ಚೌಕಟ್ಟಿನಲ್ಲಿ ವಿವಾದಕ್ಕೆ ತೆರೆ ಎಳೆಯಲಾಗುವುದು ಎಂದಿದ್ದರು.

* ಬಳಿಕ ಮೈಸೂರು ಕೊಡಗು ಸಂಸದ ಪ್ರತಾಪ ಸಿಂಹ ಕೂಡ ಹೋರಾಟಗಾರರನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದರು.

* ಕನ್ನಡ ಪರ ಹೋರಾಟಗಾರರು ಬೆಳಗಾವಿಯಲ್ಲಿ ಹಾಗೂ ಹಾಲುಮತ ಸಮಾಜದ ಸ್ವಾಮೀಜಿಗಳು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದರು.

* ಆ. 27ರಂದು ರಾಜ್ಯದ ವಿವಿಧೆಡೆಯಿಂದ ಬಂದ ಕನ್ನಡ ಪರ ಹೋರಾಟಗಾರರು ಹಾಗೂ ಹಾಲುಮತ ಸಮಾಜದವರು ಇಲ್ಲಿನ ಸುವರ್ಣ ವಿಧಾನಸೌಧದಿಂದ ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ್ದರು. ಇನ್ನೊಂದೆಡೆ ಮತ್ತೊಮ್ಮೆ ಮುಖಂಡರ ಸಭೆ ನಡೆಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಆ.29ರಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಬರಲಿದ್ದು, ಅವರೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಪ್ರಕಟಿಸಲಾಗುವುದು ಎಂದು ಭರವಸೆ ನೀಡಿದ್ದರು.

* ಆ.27ರ ಮಧ್ಯರಾತ್ರಿಯೇ ಕರವೇ ಮುಖಂಡರು, ಸ್ಥಳೀಯ ರಾಯಣ್ಣನ ಅಭಿಮಾನಿಗಳು ರಾಯಣ್ಣನ ಪ್ರತಿಮೆ ಪ್ರತಿಷ್ಠಾಪನೆ ಮಾಡಿ ವಿಜಯೋತ್ಸವ ಆಚರಿಸಿದ್ದಾರೆ.

* ಇದಕ್ಕೆ ಮರಾಠಿ ಭಾಷಿಕರು ಹಾಗೂ ಎಂಇಎಸ್ (ಮಹಾರಾಷ್ಟ್ರ ಏಕೀಕರಣ ಸಮಿತಿಯವರು) ನವರು ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲಿ ಛತ್ರಪತಿ ಶಿವಾಜಿ ಪ್ರತಿಮೆ ಪ್ರತಿಷ್ಠಾಪನೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಇದರಿಂದಾಗಿ ಇದು ವಿವಾದವಾಗಿದೆ. ಅಲ್ಲೇ ನೂರು ಮೀಟರ್ ದೂರದಲ್ಲಿ ಶಿವಾಜಿ ಪ್ರತಿಮೆ ಇದೆ. ಅದಕ್ಕೆ ನಾವು ವಿರೋಧ ಮಾಡಿಲ್ಲ. ಎಂಇಎಸ್ ನವರು ರಾಯಣ್ಣನ ಪ್ರತಿಮೆ ವಿಷಯದಲ್ಲಿ ವಿವಾದ ಮಾಡಿ ರಾಜಕೀಯಕ್ಕೆ ಬಳಸಿಕೊಳ್ಳಲು ಮುಂದಾಗಿದ್ದಾರೆ ಕನ್ನಡ ಪರ ಹೋರಾಟಗಾರರ ದೂರಾಗಿದೆ. ವಿವಾದ ಮುಂದಿನ ದಿನಗಳಲ್ಲಿ ಯಾವ ರೀತಿಯ ಸ್ವರೂಪ ಪಡೆದುಕೊಳ್ಳುವುದೋ ನೋಡಬೇಕಾಗಿದೆ.

ವೃತ್ತದಲ್ಲಿ ರಾಯಣ್ಣ ಪ್ರತಿಮೆ; ಶಿವಾಜಿ ಮಹಾರಾಜ್‌ ಹೆಸರು

ಬೆಳಗಾವಿ: ಪೀರನವಾಡಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಮರುಪ್ರತಿಷ್ಠಾಪನೆ ಯಿಂದಾಗಿ ಉಲ್ಬಣಗೊಂಡಿರುವ ವಿವಾದಕ್ಕೆ ಸಂಬಂಧಿಸಿದಂತೆಎಡಿಜಿಪಿ ಅಮರ್‌ಕುಮಾರ್‌ ಪಾಂಡೆ ಮತ್ತು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ನೇತೃತ್ವದಲ್ಲಿ ಶುಕ್ರವಾರ ರಾತ್ರಿವರೆಗೆ ನಡೆದ ಸಭೆ ಯಶಸ್ವಿಯಾಗಿದೆ.

‘ರಾಯಣ್ಣ ಪ್ರತಿಮೆಯನ್ನು ಈಗ ಪ್ರತಿ ಷ್ಠಾಪಿಸಿರುವ ಸ್ಥಳದಲ್ಲಿಯೇ ಉಳಿಸುವುದು ಹಾಗೂ ಆ ವೃತ್ತಕ್ಕೆ ಛತ್ರಪತಿ ಶಿವಾಜಿ ಮಹಾರಾಜರ ಹೆಸರು ಇರಿಸಬೇಕು’ ಎನ್ನುವ ತೀರ್ಮಾನಕ್ಕೆ ಬರಲಾಯಿತು. ಇದಕ್ಕೆ ‍ಕನ್ನಡಪರ ಸಂಘಟನೆಯವರು, ಎಂಇಎಸ್ ಹಾಗೂ ಶಿವಸೇನೆಯವರು ಮತ್ತು ಸ್ಥಳೀಯ ಮುಖಂಡರು ಸಮ್ಮತಿ ಸೂಚಿಸಿದರು.

‘ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ, ಅಧಿಸೂಚನೆ ಹೊರಡಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್, ನಗರ ಪೊಲೀಸ್ ಆಯುಕ್ತ ಕೆ. ತ್ಯಾಗರಾಜನ್, ಡಿಸಿಪಿ ಸೀಮಾ ಲಾಟ್ಕರ್, ಪಾಲಿಕೆ ಆಯುಕ್ತ ಕೆ.ಎಚ್. ಜಗದೀಶ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT