ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ಐಪಿಒ ಲಾಭ ನಷ್ಟದ ಲೆಕ್ಕಾಚಾರ

Last Updated 13 ಜೂನ್ 2021, 19:31 IST
ಅಕ್ಷರ ಗಾತ್ರ

2020ರಲ್ಲಿ ಜಾರಿಗೆ ಬಂದ ಮೊದಲ ಸುತ್ತಿನ ಲಾಕ್‌ಡೌನ್‌ ನಿರ್ಬಂಧಗಳು ಹಂತ ಹಂತವಾಗಿ ಸಡಿಲಿಕೆ ಆಗುತ್ತಿದ್ದವು. ಬೆಂಗಳೂರಿನ ಖಾಸಗಿ ಕಂಪನಿಯೊಂದರ ಉದ್ಯೋಗಿ ಶ್ರೇಯಸ್ ಅವರು ಮನೆಯಿಂದಲೇ ಕೆಲಸ ಮಾಡುತ್ತಿದ್ದರು. ಮೊಬೈಲ್‌ ಆ್ಯಪ್‌ ಹಾಗೂ ವೆಬ್‌ಸೈಟ್‌ ಮೂಲಕ ಡಿಸ್ಕೌಂಟ್‌ ಬ್ರೋಕರೇಜ್ ಸೇವೆ ನೀಡುವ ಹೆಸರಾಂತ ಕಂಪನಿಯೊಂದರ ಜಾಹೀರಾತು ಅವರ ಕಣ್ಣಿಗೆ ಬಿತ್ತು. ‘ಮನೆಯಿಂದಲೇ ಡಿ–ಮ್ಯಾಟ್ ಖಾತೆ ತೆರೆಯಿರಿ’ ಎಂಬುದು ಆ ಜಾಹೀರಾತಿನ ಒಕ್ಕಣೆ.

ಬ್ಯಾಂಕ್‌ ಖಾತೆಯ ವಿವರಗಳು, ಆಧಾರ್, ಪ್ಯಾನ್‌ ವಿವರಗಳನ್ನು ಸಲ್ಲಿಸಿ ಡಿ–ಮ್ಯಾಟ್ ಖಾತೆ ತೆರೆದ ಶ್ರೇಯಸ್‌ ಅವರು ಈಗ ಹೂಡಿಕೆಯನ್ನು ಒಂದು ಹವ್ಯಾಸವನ್ನಾಗಿ ಬೆಳೆಸಿಕೊಂಡಿದ್ದಾರೆ. ಸಾಫ್ಟ್‌ವೇರ್‌ ಜಗತ್ತಿನಲ್ಲಿ ಕಂಪ್ಯೂಟರ್‌ಗೆ ಅರ್ಥವಾಗುವ ಭಾಷೆಯಲ್ಲಿ ಮಾತನಾಡಿಕೊಂಡು ಇದ್ದ ಅವರು ಈಗ ಹೂಡಿಕೆ ಜಗತ್ತಿನ ಪರಿಭಾಷೆಯನ್ನು ಅರ್ಥ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಅವರಿಗೆ ತಂತ್ರಜ್ಞಾನ ನೆರವಿಗೆ ಬಂದಿದೆ.

ಷೇರುಪೇಟೆಯಲ್ಲಿ ನೋಂದಾಯಿತ ಆಗಿರುವ ಕಂಪನಿಗಳು ಆರ್ಥಿಕವಾಗಿ ಎಷ್ಟು ಸದೃಢವಾಗಿವೆ, ಅವುಗಳಲ್ಲಿನ ಕಾರ್ಪೊರೇಟ್ ಆಡಳಿತ ಎಷ್ಟು ಉತ್ತಮವಾಗಿದೆ ಎಂಬುದನ್ನೆಲ್ಲ ತಂತ್ರಜ್ಞಾನದ ನೆರವಿನಿಂದಾಗಿ ಈಗ ಕುಳಿತ ಜಾಗದಿಂದಲೇ ನೋಡಬಹುದು. ಅಷ್ಟೇ ಅಲ್ಲ, ಐಪಿಒಗಳಲ್ಲಿ (ಕಂಪನಿಯ ಷೇರುಗಳನ್ನು ಆರಂಭಿಕ ಹಂತದಲ್ಲಿ ಸಾರ್ವಜನಿಕರು ಖರೀದಿಸುವುದು) ಹಣ ಹೂಡಿಕೆ ಮಾಡುವುದನ್ನು ಕೂಡ ತಂತ್ರಜ್ಞಾನವು ಈಗ ಬಹಳ ಸುಲಭಗೊಳಿಸಿದೆ.

ಈ ವಾರ ನಾಲ್ಕು ಐಪಿಒ: ಜೂನ್‌ 14ರಿಂದ 18ರ ನಡುವಿನ ಅವಧಿಯಲ್ಲಿ ಕನಿಷ್ಠ ನಾಲ್ಕು ಕಂಪನಿಗಳು ತಮ್ಮ ಷೇರುಗಳನ್ನು ಸಾರ್ವಜನಿಕರಿಗೆ ಖರೀದಿಗೆ ಮುಕ್ತಗೊಳಿಸಲಿವೆ (ಇದನ್ನೇ ಷೇರುಪೇಟೆಯ ಪರಿಭಾಷೆಯಲ್ಲಿ ಐಪಿಒ ಎನ್ನಲಾಗುತ್ತದೆ). ತಂತ್ರಜ್ಞಾನವು ಐಪಿಒಗೆ ಅರ್ಜಿ ಸಲ್ಲಿಸುವುದನ್ನು ಕೂಡ ಸರಳಗೊಳಿಸಿ ಬಹಳ ಕಾಲ ಸಂದಿದೆ.

‘ಡಿ–ಮ್ಯಾಟ್ ಖಾತೆ ತೆರೆಯುವವರ ಸಂಖ್ಯೆ, ಈಕ್ವಿಟಿಗಳಲ್ಲಿ ಹೂಡಿಕೆ ಮಾಡುವವರ ಸಂಖ್ಯೆ ಈಚಿನ ದಿನಗಳಲ್ಲಿ ಜಾಸ್ತಿ ಆಗಿದೆ. ಅದೇ ರೀತಿಯಲ್ಲಿ, ಈಚಿನ ದಿನಗಳಲ್ಲಿ ಐಪಿಒ ಮೂಲಕ ಹೂಡಿಕೆ ಮಾಡಲು ಮುಂದಾಗುವ ಸಣ್ಣ ಹೂಡಿಕೆದಾರರ ಸಂಖ್ಯೆ ಕೂಡ ಜಾಸ್ತಿ ಆಗಿದೆ. ಸ್ಮಾರ್ಟ್‌ಫೋನ್‌ ಮೂಲಕವೇ ಐಪಿಒಗೆ ಅರ್ಜಿ ಸಲ್ಲಿಸುವುದು ಸಾಧ್ಯವಾಗಿರುವುದು, ಅರ್ಜಿ ಸಲ್ಲಿಸುವುದರಿಂದ ಆರಂಭಿಸಿ ಷೇರು ತಮ್ಮ ಡಿ–ಮ್ಯಾಟ್ ಖಾತೆಗೆ ಬರುವವರೆಗಿನ ಎಲ್ಲ ಪ್ರಕ್ರಿಯೆಗಳೂ ಸುರಕ್ಷಿತ ಎಂದು ಸಣ್ಣ ಹೂಡಿಕೆದಾರರಿಗೆ ಅನಿಸಿರುವುದು ಅವರು ಹೆಚ್ಚಿನ ಸಂಖ್ಯೆಯಲ್ಲಿ ಹೂಡಿಕೆಗೆ ಮುಂದಾಗುತ್ತಿರುವುದಕ್ಕೆ ಒಂದು ಕಾರಣ’ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಷೇರು ಬ್ರೋಕರೇಜ್ ಸೇವೆ ಒದಗಿಸುತ್ತಿರುವವರೊಬ್ಬರು ತಿಳಿಸಿದರು.

‘ಹಿಂದೆ ಐಪಿಒ ಅರ್ಜಿ ಪಡೆದು, ಅದನ್ನು ಭರ್ತಿ ಮಾಡಿ, ಐಪಿಒಗೆ ಮುಂದಾಗಿರುವ ಕಂಪನಿಯ ಹೆಸರಿನಲ್ಲಿ ಡಿ.ಡಿ. ಪಡೆದು, ಅದನ್ನು ಕಂಪನಿಗೆ ಕಳುಹಿಸಬೇಕಿತ್ತು. ಇದು ಬಹುದೊಡ್ಡ ಪ್ರಕ್ರಿಯೆ ಆಗಿರುತ್ತಿತ್ತು. ಮನೆಯಿಂದಲೇ ಇವಿಷ್ಟನ್ನೂ ನಿಭಾಯಿಸಲು ಸಾಧ್ಯವೇ ಇರಲಿಲ್ಲ’ ಎಂದು ಷೇರು ಬ್ರೋಕರೇಜ್ ಸೇವೆ ನೀಡುವ ರವಿ ಎಡಪತ್ಯ ನೆನಪಿಕೊಳ್ಳುತ್ತಾರೆ. ಆದರೆ ಈಗ, ಒಂದು ಸಾದಾಸೀದಾ ಸ್ಮಾರ್ಟ್‌ಫೋನ್‌, ಸುಮಾರಾಗಿರುವ ಇಂಟರ್ನೆಟ್ ಸಂಪರ್ಕ ಇದ್ದರೆ ಸಾಕು. ಎಲ್ಲಿಂದ ಬೇಕಿದ್ದರೂ ಐಪಿಒಗೆ ಅರ್ಜಿ ಸಲ್ಲಿಸಬಹುದು. ಐಪಿಒಗೆ ಅರ್ಜಿ ಸಲ್ಲಿಸುವುದನ್ನುತಂತ್ರಜ್ಞಾನವು ಅತ್ಯಂತ ಸರಳಗೊಳಿಸಿದ್ದರೂ, ಹೂಡಿಕೆದಾರನಿಗೆ ಇರಬೇಕಾದ ಎಚ್ಚರಿಕೆಯ ವಿಚಾರದಲ್ಲಿ ಬದಲಾವಣೆ ಆಗಿಲ್ಲ ಎಂದು ವೈಯಕ್ತಿಕ ಹಣಕಾಸು ಸಲಹೆಗಾರರು ಹೇಳುತ್ತಾರೆ.

‘ಐಪಿಒ ಮೂಲಕ ಹೂಡಿಕೆ ಮಾಡುವ ಸಂದರ್ಭದಲ್ಲಿ ಭಾರತದಲ್ಲಿನ ಐಪಿಒ ಇತಿಹಾಸವನ್ನು ಕೂಡ ಒಮ್ಮೆ ಅವಲೋಕಿಸಬಹುದು. ಆಗ ಒಂದಿಷ್ಟು ಹೊಳಹುಗಳು ಸಿಗುತ್ತವೆ. ಷೇರುಪೇಟೆಗೆ ಸೇರ್ಪಡೆಗೊಳ್ಳವ ದಿನ (*isting day) ಪ್ರತಿ ಮೂರು ಕಂಪನಿಗಳ ಪೈಕಿ ಎರಡು ಕಂಪನಿಗಳು ಹೂಡಿಕೆದಾರರಿಗೆ ಲಾಭ ತಂದುಕೊಟ್ಟಿವೆ. 2017ನೆಯ ಇಸವಿಯ ಸುಮಾರಿನಲ್ಲಿ ದೇಶದ ಷೇರು ಮಾರುಕಟ್ಟೆಯಲ್ಲಿ ನೋಂದಾಯಿತ ಆದ 266 ಕಂಪನಿಗಳ ಪೈಕಿ 37 ಕಂಪನಿಗಳು ಮಾತ್ರ ಸೇರ್ಪಡೆಗೊಳ್ಳುವ ದಿನ (*isting Day) ಶೇಕಡ 20ಕ್ಕಿಂತ ಹೆಚ್ಚಿನ ಪ್ರಮಾಣದ ಲಾಭವನ್ನು ಹೂಡಿಕೆದಾರರಿಗೆ ತಂದುಕೊಟ್ಟಿವೆ. ಐಪಿಒ ಮೂಲಕ ಮಾಡುವ ಹೂಡಿಕೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಲಾಭ ಆಗುವ ಸಾಧ್ಯತೆಯೂ ಇದೆ, ಹೆಚ್ಚು ರಿಸ್ಕ್ ಕೂಡ ಇದೆ ಎಂಬುದನ್ನು ಹೂಡಿಕೆದಾರರು ಅರ್ಥ ಮಾಡಿಕೊಳ್ಳಬೇಕು’ ಎಂದು ಹೇಳುತ್ತಾರೆ ಸುವಿಷನ್ ಹೋಲ್ಡಿಂಗ್ಸ್ ಪ್ರೈವೇಟ್ ಲಿಮಿಟೆಡ್‌ನ ಸಂಶೋಧನಾ ವಿಭಾಗದ ಮುಖ್ಯಸ್ಥ ಬಿ.ಪಿ. ಪ್ರಮೋದ್.‌

ಐಪಿಒಹೂಡಿಕೆಗೆ ಮುನ್ನ...

*ನೀವು ಹೂಡಿಕೆ ಮಾಡಲು ಇಚ್ಛಿಸಿರುವ ಕಂಪನಿ ಬಗ್ಗೆ ಅಧ್ಯಯನ ಮಾಡಿ. ಕಂಪನಿಯ ಆಡಳಿತ ಮಂಡಳಿಯಲ್ಲಿ ಯಾರಿದ್ದಾರೆ, ಅವರ ಹಿನ್ನೆಲೆ ಏನು ಎಂಬುದನ್ನು ಗಮನಿಸಿಕೊಳ್ಳಿ. ಕಂಪನಿಯ ಶಕ್ತಿ, ದೌರ್ಬಲ್ಯಗಳು ಏನೇನು ಎಂಬುದನ್ನು ಗೊತ್ತು ಮಾಡಿಕೊಳ್ಳಿ. ಅಧ್ಯಯನ ಇಲ್ಲದೆ ಹಣ ಹೂಡಿಕೆ ಒಳ್ಳೆಯದಲ್ಲ

*ಕಂಪನಿಯ ಮೌಲ್ಯವನ್ನು ಸರಿಯಾಗಿ ಅಂದಾಜು ಮಾಡಿ. ಕಂಪನಿಯು ಪ್ರತಿ ಒಂದು ರೂಪಾಯಿ ಗಳಿಸಲು ಮಾಡುತ್ತಿರುವ ವೆಚ್ಚ ಎಷ್ಟು (PE Ration) ಎಷ್ಟು ಎಂಬುದನ್ನು ತಿಳಿದುಕೊಳ್ಳಿ

*ಬ್ರೋಕರೇಜ್ ಕಂಪನಿಗಳು ಐಪಿಒಗೆ ಹೋಗುತ್ತಿರುವ ಕಂಪನಿಯ ಬಗ್ಗೆ ಸಣ್ಣ ಟಿಪ್ಪಣಿಯನ್ನು ಹೂಡಿಕೆದಾರರಿಗೆ ಒದಗಿಸುವ ಕ್ರಮ ಇದೆ. ಆ ಟಿಪ್ಪಣಿಯನ್ನು ಸರಿಯಾಗಿ ಓದಿದರೆ ಕಂಪನಿಯ ಆರೋಗ್ಯದ ಬಗ್ಗೆ ಪ್ರಾಥಮಿಕ ಮಾಹಿತಿ ಸಿಗುತ್ತದೆ. ಆ ಮಾಹಿತಿಯು, ಆ ಕಂಪನಿಯಲ್ಲಿ ಹೂಡಿಕೆ ಮಾಡುವುದು ಎಷ್ಟರಮಟ್ಟಿಗೆ ಪ್ರಯೋಜನಕಾರಿ ಎಂಬುದನ್ನು ತಿಳಿಹೇಳುತ್ತದೆ

ಐಪಿಒಗೆ ಸಜ್ಜಾಗಿರುವ ಕೆಲವು ಕಂಪನಿಗಳು

ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ), ಜೊಮ್ಯಾಟೊ, ಆದಿತ್ಯ ಬಿರ್ಲಾ ಸನ್‌ಲೈಫ್‌ ಆಸ್ತಿ ನಿರ್ವಹಣಾ ಕಂಪನಿ, ಗ್ಲೆನ್‌ಮಾರ್ಕ್‌ ಲೈಫ್‌ ಸೈನ್ಸನ್, ಮಾಂಟೆಕಾರ್ಲೊ ಲಿಮಿಟೆಡ್, ಆಧಾರ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್, ಪುರಾಣಿಕ್ ಬಿಲ್ಡರ್ಸ್‌, ಆರೋಹಣ್ ಫೈನಾನ್ಶಿಯಲ್ ಸರ್ವಿಸಸ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT