ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: 2024ರ ಲೋಕಸಭೆ ಚುನಾವಣೆಗೆ 2023ರಲ್ಲೇ ತಾಲೀಮು

ಈ ವರ್ಷ 10 ರಾಜ್ಯಗಳ ವಿಧಾನಸಭೆಗಳಿಗೆ ಚುನಾವಣೆ
Last Updated 3 ಜನವರಿ 2023, 22:42 IST
ಅಕ್ಷರ ಗಾತ್ರ

2024ರ ಲೋಕಸಭಾ ಚುನಾವಣೆಗೂ ಮುನ್ನ ಒಂಬತ್ತು ಅಥವಾ 10 ರಾಜ್ಯ/ಕೇಂದ್ರಾಡಳಿತ ಪ್ರದೇಶ ವಿಧಾನಸಭೆಗಳಿಗೆ ಚುನಾವಣೆ ನಡೆಯಲಿದೆ. ಹೀಗಾಗಿ, 2024ರ ಲೋಕಸಭಾ ಚುನಾವಣೆಗೆ 2023ರಲ್ಲಿಯೇ ತಾಲೀಮು ನಡೆಯಲಿದೆ. 2024ರ ಚುನಾವಣೆಗೆ 2023ರಲ್ಲಿ ಭೂಮಿಕೆ ಸಿದ್ಧವಾಗಲಿದೆ. ಕರ್ನಾಟಕ, ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ, ಛತ್ತೀಸಗಢ, ತ್ರಿಪುರಾ, ಮೇಘಾಲಯ, ನಾಗಾಲ್ಯಾಂಡ್, ಮಿಜೋರಾಂ ರಾಜ್ಯಗಳಲ್ಲಿ ಚುನಾವಣಾ ಕಾವು ಇದೆ. ಇವುಗಳ ಜೊತೆಗೆ ಜಮ್ಮು–ಕಾಶ್ಮೀರ ವಿಧಾನಸಭೆಗೆ ಚುನಾವಣೆ ನಡೆಯುವ ಸಾಧ್ಯತೆಯಿದೆ. 370ನೇ ವಿಧಿ ರದ್ದತಿ ಬಳಿಕ ಇಲ್ಲಿ ಚುನಾವಣೆ ನಡೆದಿಲ್ಲ. ರಾಜಸ್ಥಾನ ಮತ್ತು ಛತ್ತೀಸಗಢದಲ್ಲಿ ಮಾತ್ರ ಕಾಂಗ್ರೆಸ್ ಆಡಳಿತ ಇದೆ. ಹಿಮಾಚಲ ಪ್ರದೇಶ ಚುನಾವಣೆಯ ಗೆಲುವು ಹಾಗೂ ‘ಭಾರತ್ ಜೋಡೊ’ ಯಾತ್ರೆಯು ಪಕ್ಷಕ್ಕೆ ಹೊಸ ಚೈತನ್ಯ ತುಂಬಲಿದೆ ಎಂದು ಕಾಂಗ್ರೆಸ್ ನಿರೀಕ್ಷೆ ಇಟ್ಟುಕೊಂಡಿದೆ. ಬಿಜೆಪಿ ಈಗಾಗಲೇ ಚುನಾವಣಾ ರಣತಂತ್ರದಲ್ಲಿ ತೊಡಗಿದೆ.

ಮಧ್ಯ ‍ಪ್ರದೇಶ

ಶಿವರಾಜ್ ಸಿಂಗ್
ಶಿವರಾಜ್ ಸಿಂಗ್

ಕ್ಷೇತ್ರಗಳು: 230

ಚುನಾವಣೆ: ಅಕ್ಟೋಬರ್‌–ನವೆಂಬರ್‌

ಆಡಳಿತ ಪಕ್ಷ: ಬಿಜೆಪಿ

ರಾಜಕಾರಣದಲ್ಲಿ ಆಸಕ್ತಿ ಇರುವ ಎಲ್ಲರೂ ಅತ್ಯಂತ ಕುತೂಹಲದಿಂದ ನಿಗಾ ಇರಿಸಿರುವ ರಾಜ್ಯಗಳಲ್ಲಿ ಮಧ್ಯಪ್ರದೇಶವೂ ಒಂದು. ಸತತ 14 ವರ್ಷ ಬಿಜೆಪಿ ಆಳ್ವಿಕೆಯ ಬಳಿಕ 2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಬರಲಿಲ್ಲ. 114 ಕ್ಷೇತ್ರಗಳಲ್ಲಿ ಗೆದ್ದು ಅತಿ ದೊಡ್ಡ ಪಕ್ಷವಾಗಿ ಕಾಂಗ್ರೆಸ್‌ ಹೊರಹೊಮ್ಮಿತ್ತು. ಎಸ್‌ಪಿಯ ಒಬ್ಬ, ಬಿಎಸ್‌ಪಿಯ ಇಬ್ಬರು ಮತ್ತು ನಾಲ್ವರು ಪಕ್ಷೇತರ ಶಾಸಕರ ಬೆಂಬಲದಲ್ಲಿ ಕಾಂಗ್ರೆಸ್‌ ಪಕ್ಷವು ಸರ್ಕಾರ ರಚಿಸಿತು. ಆದರೆ, ಈ ಸರ್ಕಾರ ಬಹುಕಾಲ ಬಾಳಲಿಲ್ಲ. ಕಾಂಗ್ರೆಸ್‌ನಲ್ಲಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ನಿಷ್ಠರಾಗಿದ್ದ 22 ಶಾಸಕರು ಶಾಸಕ ಸ್ಥಾನಕ್ಕೆ ಮತ್ತು ಪಕ್ಷಕ್ಕೆ ರಾಜೀನಾಮೆ ನೀಡಿ ಸರ್ಕಾರವು ಅಲ್ಪಮತಕ್ಕೆ ಕುಸಿಯುವಂತೆ ಮಾಡಿದರು. 2020ರ ಮಾರ್ಚ್‌ನಲ್ಲಿ ಕಮಲನಾಥ್ ನೇತೃತ್ವದ ಸರ್ಕಾರ ಪತನವಾಯಿತು. ಬಿಜೆಪಿಯ ಶಿವರಾಜ್‌ ಸಿಂಗ್ ಚೌಹಾಣ್‌ ಹೊಸ ಸರ್ಕಾರ ರಚಿಸಿದರು.

ಈ ಎಲ್ಲ ಪ್ರಹಸನಗಳಿಂದಾಗಿಯೇ, ಮುಂದಿನ ವರ್ಷ ನಡೆಯಲಿರುವ ಚುನಾವಣೆಯು ಕುತೂಹಲ ಕೆರಳಿಸಿದೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ಸ್ಥಿತಿಯಲ್ಲಿರುವ ಕಾಂಗ್ರೆಸ್‌, ಗೆಲುವಿಗಾಗಿ ಎಲ್ಲ ಪ್ರಯತ್ನ ನಡೆಸಲಿದೆ. ಆದರೆ, ಈ ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಇದ್ದ ಸಿಂಧಿಯಾ ಬಲ ಈ ಬಾರಿ ಬಿಜೆಪಿಗೆ ನೆರವಾಗಲಿದೆ. ಸಿಂಧಿಯಾ ಅವರಿಂದಾಗಿ ಸಿಕ್ಕ ಮುನ್ನಡೆಯನ್ನು ಉಳಿಸಿಕೊಳ್ಳಲು ಬಿಜೆಪಿ ಯತ್ನಿಸಲಿದೆ. ಯಾವುದೇ ಪಕ್ಷವು ಭರ್ಜರಿ ಗೆಲುವು ದಾಖಲಿಸುವುದು ಕಷ್ಟ ಎಂಬ ಪರಿಸ್ಥಿತಿ ಇದೆ. ಜಿದ್ದಾಜಿದ್ದಿಯ ಹೋರಾಟ ಮಾತ್ರ ಖಚಿತ.

ಕರ್ನಾಟಕ (ಕ್ಷೇತ್ರಗಳು: 224)

ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ

ಆಡಳಿತ ಪಕ್ಷ: ಬಿಜೆಪಿ; ಚುನಾವಣೆ: ಏಪ್ರಿಲ್‌–ಮೇ

ವಿಧಾನಸಭೆಗೆ 2018ರಲ್ಲಿ ನಡೆದ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಸರಳ ಬಹುಮತ ದೊರಕಲಿಲ್ಲ. ಅತಿ ದೊಡ್ಡ ಪಕ್ಷವಾಗಿ ಬಿಜೆಪಿ ಮೂಡಿ ಬಂದಿತ್ತು. ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಆದರೆ, ಬಹುಮತ ಸಾಬೀತು ಮಾಡಲು ಸಾಧ್ಯವಾಗದೇ ಅವರು ರಾಜೀನಾಮೆ ಕೊಡಬೇಕಾಯಿತು.

ಬಳಿಕ, ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿಕೂಟದ ಸರ್ಕಾರವು ಅಧಿಕಾರಕ್ಕೆ ಬಂತು. ಜೆಡಿಎಸ್‌ನ ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. ಆದರೆ, 14 ತಿಂಗಳ ಬಳಿಕ, ಕಾಂಗ್ರೆಸ್‌ ಮತ್ತು ಜೆಡಿಎಸ್‌ನ 17 ಶಾಸಕರು ಶಾಸಕ ಸ್ಥಾನಕ್ಕೆ ಮತ್ತು ಪಕ್ಷಕ್ಕೆ ರಾಜೀನಾಮೆ ಕೊಟ್ಟರು. ಸರ್ಕಾರಕ್ಕೆ ಬೆಂಬಲ ಕೊಟ್ಟಿದ್ದ ಇಬ್ಬರು ಪಕ್ಷೇತರರು ಬಿಜೆಪಿ ತೆಕ್ಕೆ ಸೇರಿಕೊಂಡರು. ಸರ್ಕಾರವು ಅಲ್ಪಮತಕ್ಕೆ ಕುಸಿಯಿತು. ಕುಮಾರಸ್ವಾಮಿ ಅವರು ಅನಿವಾರ್ಯವಾಗಿ ರಾಜೀನಾಮೆ ಕೊಡಬೇಕಾಯಿತು. 17 ಶಾಸಕರ ರಾಜೀನಾಮೆಯಿಂದಾಗಿ ವಿಧಾನಸಭೆಯ ಸದಸ್ಯ ಬಲವೇ ಕುಸಿಯಿತು. ಹೀಗಾಗಿ, ಬಿಜೆಪಿಗೆ ಸರಳ ಬಹುಮತ ದೊರಕಿತು. ಯಡಿಯೂರಪ್ಪ ಅವರು 2019ರ ಜುಲೈ 26ರಂದು ಮುಖ್ಯಮಂತ್ರಿಯಾಗಿ ಮತ್ತೆ ಅಧಿಕಾರಕ್ಕೆ ಏರಿದರು. ರಾಜ್ಯದಲ್ಲಿ ಯಡಿಯೂರಪ್ಪ ಅವರೇ ಬಿಜೆಪಿಯ ಅತ್ಯಂತ ಪ್ರಭಾವಿ ಮತ್ತು ಜನಪ್ರಿಯ ನಾಯಕ ಆಗಿದ್ದರೂ ಅವರನ್ನು ಮುಖ್ಯಮಂತ್ರಿಯಾಗಿ ಮುಂದುವರಿಸಲು ವರಿಷ್ಠರಿಗೆ ಒಲವು ಇರಲಿಲ್ಲ. ಯಡಿಯೂರಪ್ಪ ಮತ್ತು ವರಿಷ್ಠರ ನಡುವೆ ಸುದೀರ್ಘವಾದ ಹಗ್ಗಜಗ್ಗಾಟ ನಡೆದು 2021ರ ಜುಲೈ 27ರಂದು ಅವರು ಸ್ಥಾನ ತ್ಯಜಿಸಿದರು. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದರು.

ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರದಲ್ಲಿರುವ ಮತ್ತು ತಳಮಟ್ಟದಲ್ಲಿ ಗಟ್ಟಿ ಸಂಘಟನೆ ಹೊಂದಿರುವ ಏಕೈಕ ರಾಜ್ಯ ಕರ್ನಾಟಕ. ಹೀಗಾಗಿ, ಇಲ್ಲಿನ ಅಧಿಕಾರವನ್ನು ಕಳೆದುಕೊಳ್ಳಲು ಬಿಜೆಪಿ ಸಿದ್ಧವಿಲ್ಲ. ಕಾಂಗ್ರೆಸ್‌ಗೆ ಗೆಲುವಿನ ಸಾಧ್ಯತೆ ಇರುವ ಕೆಲವೇ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಸಿದ್ದರಾಮಯ್ಯ ಹುಟ್ಟುಹಬ್ಬದ ಕಾರಣಕ್ಕೆ ದಾವಣಗೆರೆಯಲ್ಲಿ ನಡೆದ ಸಮಾರಂಭಕ್ಕೆ ಹರಿದು ಬಂದ ಜನಸಾಗರ, ‘ಭಾರತ್‌ ಜೋಡೊ’ ಯಾತ್ರೆಗೆ ಸಿಕ್ಕ ಬೆಂಬಲದಿಂದಾಗಿ ಆ ಪಕ್ಷದ ಹುಮ್ಮಸ್ಸು ಹೆಚ್ಚಿದೆ. ಗೆದ್ದೇ ತೀರುತ್ತೇವೆ ಎಂಬ ಉತ್ಸಾಹದಲ್ಲಿ ಕಾಂಗ್ರೆಸ್‌ ನಾಯಕರು ಇದ್ದಾರೆ.

ಜಮ್ಮು–ಕಾಶ್ಮೀರ (ಕ್ಷೇತ್ರಗಳು: 114)

ಚುನಾವಣೆ: ಮೇ?

ಜಮ್ಮು–ಕಾಶ್ಮೀರ ರಾಜ್ಯವನ್ನು 2019ರಲ್ಲಿ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಲಾಯಿತು. ಅವೆಂದರೆ, ಜಮ್ಮು–ಕಾಶ್ಮೀರ ಮತ್ತು ಲಡಾಖ್‌. ಜಮ್ಮು–ಕಾಶ್ಮೀರವು ವಿಧಾನಸಭೆಯನ್ನು ಹೊಂದಿರುವ ಕೇಂದ್ರಾಡಳಿತ ಪ್ರದೇಶ ಎಂದು ನಿರ್ಧರಿಸಲಾಗಿದೆ. ಹಾಗಾಗಿ, ಇಲ್ಲಿನ ವಿಧಾನಸಭೆಗೆ ಚುನಾವಣೆ ನಡೆಯಬೇಕಿದೆ. ಕ್ಷೇತ್ರ ಪುನರ್‌ವಿಂಗಡಣೆ, ಭದ್ರತಾ ಸ್ಥಿತಿ, ಮತದಾರರ ಪಟ್ಟಿ ಪರಿಷ್ಕರಣೆ ಮುಂತಾದ ವಿಚಾರಗಳಿಂದಾಗಿ ಈವರೆಗೆ ಚುನಾವಣೆ ನಡೆದಿಲ್ಲ.

ಮತದಾರರ ಪಟ್ಟಿಯನ್ನು ಕಳೆದ ನವೆಂಬರ್‌ನಲ್ಲಿ ಪ್ರಕಟಿಸಲಾಗಿದೆ. ಕ್ಷೇತ್ರ ವಿಂಗಡಣೆ ಕಾರ್ಯವೂ ಪೂರ್ಣಗೊಂಡಿದೆ. 114 ಕ್ಷೇತ್ರಗಳ ಪೈಕಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ 24, ಕಾಶ್ಮೀರದಲ್ಲಿ 47 ಮತ್ತು ಜಮ್ಮುವಿನಲ್ಲಿ 43 ಕ್ಷೇತ್ರಗಳು ಹಂಚಿಕೆಯಾಗಿವೆ.

2023ರ ಮೇಯಲ್ಲಿ ವಿಧಾನಸಭೆಗೆ ಚುನಾವಣೆ ನಡೆಯಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್‌ ಚುಗ್‌ ಅವರು ಕಳೆದ ಡಿಸೆಂಬರ್‌ನಲ್ಲಿ ಹೇಳಿದ್ದರು. ಆದರೆ, ಸರ್ಕಾರವು ಚುನಾವಣೆ ನಡೆಸಲು ಹಿಂದೇಟು ಹಾಕಬಹುದು. ಇದರ ಹಿಂದೆ ರಾಜಕೀಯ ಕಾರಣ ಇದೆ ಎಂದು ಬಿಜೆಪಿಯೇತರ ಪಕ್ಷಗಳ ಮುಖಂಡರು ಹೇಳಿದ್ದಾರೆ.

ನ್ಯಾಷನಲ್‌ ಕಾನ್ಫರೆನ್ಸ್‌, ಪಿಡಿ‍ಪಿ, ಕಾಂಗ್ರೆಸ್ ಮತ್ತು ಬಿಜೆಪಿ ಇಲ್ಲಿನ ಪ್ರಮುಖ ಪ್ರತಿಸ್ಪರ್ಧಿಗಳು. ರಾಜ್ಯದ ವಿಶೇಷ ಸ್ಥಾನಮಾನ ರದ್ದಾಗುವ ಮೊದಲು ಅಲ್ಲಿ ಪಿಡಿಪಿ ಮತ್ತು ಬಿಜೆಪಿ ಮೈತ್ರಿಕೂಟದ ಸರ್ಕಾರ ಇತ್ತು. ಆದರೆ, ವಿಶೇಷ ಸ್ಥಾನಮಾನ ರದ್ದತಿ ಬಳಿಕ ಬಿಜೆಪಿಯೇತರ ಪಕ್ಷಗಳೆಲ್ಲ ಸೇರಿಕೊಂಡು ‘ಗು‍ಪ‍್ಕಾರ್‌’ ಮೈತ್ರಿಕೂಟ ರಚಿಸಿಕೊಂಡಿವೆ.

ಕಾಂಗ್ರೆಸ್‌ನಿಂದ ಹೊರ ಹೋಗಿರುವ ಗುಲಾಂ ನಬಿ ಆಜಾದ್ ಅವರು ಹೊಸ ಪಕ್ಷ ಕಟ್ಟಿದ್ದಾರೆ. ಗುಪ್ಕಾರ್‌ ಮೈತ್ರಿಕೂಟವು ಚುನಾವಣೆಯನ್ನು ಒಟ್ಟಾಗಿ ಎದುರಿಸುವ ಸಾಧ್ಯತೆ ಕಡಿಮೆ. ಸ್ಥಳೀಯ ಮುಖಂಡರನ್ನು ಪಕ್ಷಕ್ಕೆ ಸೇರಿಸಿಕೊಂಡಿರುವ ಬಿಜೆಪಿಯ ಬಲ ಹೆಚ್ಚಿದೆ. ಹಾಗಾಗಿ, ಈ ಬಾರಿ ಅಲ್ಲಿ ಬಹುಕೋನ ಸ್ಪರ್ಧೆ ನಿರೀಕ್ಷಿಸಬಹುದು. ಯಾವ ಪಕ್ಷಕ್ಕೂ ಸರಳ ಬಹುಮತ ಸಿಗದಿರುವ ಸಾಧ್ಯತೆಯೇ ಹೆಚ್ಚು.

ನಾಗಾಲ್ಯಾಂಡ್‌ (ಕ್ಷೇತ್ರಗಳು: 60)

ಆಡಳಿತ ಪಕ್ಷ: ಪೀಪಲ್ಸ್‌ ಡೆಮಾಕ್ರಟಿಕ್‌ ಅಲಯನ್ಸ್‌

ಚುನಾವಣೆ : ಫೆಬ್ರುವರಿ

ಅತ್ಯಂತ ಪ್ರಕ್ಷುಬ್ಧವಾಗಿರುವ ರಾಜ್ಯಗಳಲ್ಲಿ ನಾಗಾಲ್ಯಾಂಡ್‌ ಕೂಡ ಒಂದು. ನಾಗಾ ಜನರ ಒಗ್ಗಟ್ಟು, ಪ್ರತ್ಯೇಕ ಧ್ವಜ, ಪ್ರತ್ಯೇಕ ಸಂವಿಧಾನ ಬೇಕು ಎಂಬ ಇಲ್ಲಿನ ಹೋರಾಟ ಹಿಂಸಾತ್ಮಕ ರೂಪ ತಾಳಿತ್ತು. ಹಲವು ಬಂಡುಕೋರ ಗುಂಪುಗಳು ವಿವಿಧ ಬೇಡಿಕೆಗಳಿಗಾಗಿ ಹೋರಾಟ ನಡೆಸುತ್ತಿವೆ. ನಾಗಾ ಹೋರಾಟದ ಪ್ರಮುಖ ಗುಂಪಾಗಿರುವ ಎನ್‌ಎಸ್‌ಸಿಎನ್‌–ಐಎಂ ತನ್ನ ಬೇಡಿಕೆಗಳ ಪರ ದೃಢವಾಗಿ ನಿಂತಿದೆ. 2018ರ ಚುನಾವಣೆಗೂ ಮುನ್ನ, ಚುನಾವಣೆ ಬಹಿಷ್ಕರಿಸಲು ಹಲವು ಗುಂಪುಗಳು ಕರೆ ಕೊಟ್ಟಿದ್ದವು. ‘ಪರಿಹಾರ ಇಲ್ಲದಿದ್ದರೆ ಚುನಾವಣೆ ಇಲ್ಲ’ ಎಂಬುದು ಈ ಗುಂಪುಗಳು ಘೋಷಣೆಯಾಗಿತ್ತು. ‘ಪರಿಹಾರಕ್ಕಾಗಿ ಚುನಾವಣೆ’ ಎಂಬುದು ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳ ಘೋಷಣೆಯಾಗಿತ್ತು. ಆ ಚುನಾವಣೆಯಲ್ಲಿ ನಾಗಾ ಪೀಪಲ್ಸ್ ಫ್ರಂಟ್‌ 26, ನ್ಯಾಷನಲ್‌ ಡೆಮಾಕ್ರಟಿಕ್‌ ಪ್ರೋಗ್ರೆಸ್ಸಿವ್‌ ಪಾರ್ಟಿ (ಎನ್‌ಡಿಪಿಪಿ) 18, ಬಿಜೆಪಿ 12 ಮತ್ತು ಇತರರು ನಾಲ್ಕು ಕ್ಷೇತ್ರಗಳಲ್ಲಿ ಗೆದ್ದಿದ್ದರು. ಎನ್‌ಡಿಪಿಪಿ ಮತ್ತು ಬಿಜೆಪಿಯು ಪೀಪಲ್ಸ್ ಡೆಮಾಕ್ರಟಿಕ್‌ ಅಲಯನ್ಸ್‌ ಎಂಬ ಮೈತ್ರಿಕೂಟ ರಚಿಸಿಕೊಂಡಿದ್ದು, ಈ ಮೈತ್ರಿಕೂಟದ ಸರ್ಕಾರ ಅಸ್ತಿತ್ವದಲ್ಲಿದೆ.

ನಾಗಾ ಜನರ ಬೇಡಿಕೆಗಳು ಕಳೆದ ಐದು ವರ್ಷಗಳಲ್ಲಿ ಈಡೇರಿಲ್ಲ. ಹಾಗಾಗಿ, ಈ ಬಾರಿಯ ಚುನಾವಣೆಗೂ ಮುನ್ನ ಬಹಿಷ್ಕಾರ, ಪ್ರತಿಭಟನೆಗಳನ್ನು ನಿರೀಕ್ಷಿಸಬಹುದು.

ಛತ್ತೀಸಗಡ (ಕ್ಷೇತ್ರಗಳು: 90)

ಭೂಪೇಶ್ ಬಘೆಲ್
ಭೂಪೇಶ್ ಬಘೆಲ್

ಆಡಳಿತ ಪಕ್ಷ: ಕಾಂಗ್ರೆಸ್

ಚುನಾವಣೆ: ಡಿಸೆಂಬರ್‌–ಜನವರಿ

2000ನೇ ಇಸ್ವಿಯಲ್ಲಿ ಛತ್ತೀಸಗಢ ರಾಜ್ಯ ಉದಯವಾದಾಗ ಅಂದಿನ ಕಾಂಗ್ರೆಸ್ ಅಧ್ಯಕ್ಷ ಸೋನಿಯಾ ಗಾಂಧಿ ಅವರು ಅಜಿತ್ ಜೋಗಿ ಅವರನ್ನು ಮೊದಲ ಮುಖ್ಯಮಂತ್ರಿಯಾಗಿ ನೇಮಿಸಿದ್ದರು. ಅದಾದ ಬಳಿಕ ಕಾಂಗ್ರೆಸ್‌ಗೆ ರಾಜ್ಯದಲ್ಲಿ ಅಧಿಕಾರ ಸಿಕ್ಕಿದ್ದು 2018ರ ಚುನಾವಣೆಯಲ್ಲಿ ಮಾತ್ರ. 2003ರಲ್ಲಿ ನಡೆದ ರಾಜ್ಯದ ಎರಡನೇ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾದ ಬಿಜೆಪಿ, 2018ರವರೆಗೂ ಸತತವಾಗಿ ಗೆಲುವು ದಾಖಲಿಸಿತ್ತು. ರಮಣ್ ಸಿಂಗ್ ಅವರು ರಾಜ್ಯದಲ್ಲಿ 15 ವರ್ಷ ಚುಕ್ಕಾಣಿ ಹಿಡಿದಿದ್ದರು. 90 ಸದಸ್ಯಬಲದ ವಿಧಾನಸಭೆಯಲ್ಲಿ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ 68 ಸ್ಥಾನಗಳಲ್ಲಿ ಗೆದ್ದು ಬೀಗಿತ್ತು. ಬಿಜೆಪಿ ಕ್ಷೇತ್ರಗಳು ಕೇವಲ 15ಕ್ಕೆ ಸೀಮಿತಗೊಂಡಿದ್ದವು. ರಾಜ್ಯದಲ್ಲಿ ಕಾಂಗ್ರೆಸ್‌ ನೆಲೆ ಬಲಪಡಿಸಿರುವ ಮುಖ್ಯಮಂತ್ರಿ ಭೂಪೇಶ್ ಬಘೆಲ್ ಅವರು ಎರಡನೇ ಅವಧಿಗೆ ಅಧಿಕಾರ ಹಿಡಿಯುವ ಸಿದ್ಧತೆಯಲ್ಲಿದ್ದಾರೆ. ‘ಭಾರತ್ ಜೋಡೊ ಯಾತ್ರೆ’ಯೂ ಅವರ ಆಕಾಂಕ್ಷೆಗೆ ಬಲ ತುಂಬುವ ಸಾಧ್ಯತೆಯಿದೆ. ಕಳೆದುಕೊಂಡ ರಾಜ್ಯವನ್ನು ಮರಳಿ ಪಡೆಯುವ ಉತ್ಸಾಹದಲ್ಲಿ ಬಿಜೆಪಿ ಇದೆ.

ರಾಜಸ್ಥಾನ (ಕ್ಷೇತ್ರ: 200)

ಅಶೋಕ್ ಗೆಹಲೋತ್
ಅಶೋಕ್ ಗೆಹಲೋತ್

ಆಡಳಿತ ಪಕ್ಷ: ಕಾಂಗ್ರೆಸ್

ಚುನಾವಣೆ: ಡಿಸೆಂಬರ್

2018ರ ಚುನಾವಣೆಯಲ್ಲಿ ಬಿಜೆಪಿಯ ವಸುಂಧರ ರಾಜೇ ಅವರಿಂದ ಅಧಿಕಾರ ಕಸಿದುಕೊಂಡ ಕಾಂಗ್ರೆಸ್, 200 ಸದಸ್ಯ ಬಲದ ವಿಧಾನಸಭೆಯಲ್ಲಿ 100 ಕ್ಷೇತ್ರಗಳಲ್ಲಿ ಗೆದ್ದು ಅಧಿಕಾರಕ್ಕೆ ಬಂದಿತ್ತು. 2013ರಲ್ಲಿ 163 ಕಡೆಗಳಲ್ಲಿ ಭರ್ಜರಿ ಗೆಲುವು ಕಂಡಿದ್ದ ಬಿಜೆಪಿ ಸಾಧನೆಯು 73 ಕ್ಷೇತ್ರಗಳಿಗೆ ಸೀಮಿತಗೊಂಡಿತ್ತು. ಈಗ ರಾಜೇ ಅವರು ಪಕ್ಷದ ಮುಂಚೂಣಿಯಲ್ಲಿ ಕಾಣಿಸುತ್ತಿಲ್ಲ. ಅವರ ನಾಯಕತ್ವದ ಬಗ್ಗೆ ಬಿಜೆಪಿ ವರಿಷ್ಠರಿಗೆ ಅಷ್ಟಾಗಿ ಒಲವು ಇದ್ದಂತಿಲ್ಲ. ಯಾರ ನೇತೃತ್ವದಲ್ಲಿ ಚುನಾವಣೆ ನಡೆಯುತ್ತದೆ ಎಂಬುದರ ಮೇಲೆ ಪಕ್ಷದ ಗೆಲುವು ನಿರ್ಧಾರವಾಗಲಿದೆ. ಆದರೆ, ರಾಜ್ಯ ಕಾಂಗ್ರೆಸ್‌ನ ಒಳಜಗಳ ಆ ಪಕ್ಷಕ್ಕೆ ಮುಳುವಾಗುವ ಎಲ್ಲ ಸಾಧ್ಯತೆಗಳಿವೆ. ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಹಾಗೂ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಅವರ ಬಣ ಜಗಳವು ಕಳೆದ ಚುನಾವಣಾ ಫಲಿತಾಂಶದ ದಿನದಿಂದಲೇ ಶುರುವಾಗಿತ್ತು. ಅದು ತಣ್ಣಗಾಗುವ ಬದಲು ದಿನೇ ದಿನೇ ಕಾವು ಪಡೆದು ಆಗಾಗ್ಗೆ ಭುಗಿಲೇಳುತ್ತಲೇ ಇದೆ. ರಾಜ್ಯದ ಚುಕ್ಕಾಣಿ ಬಿಡಲೊಪ್ಪದ ಗೆಹಲೋತ್, ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶವನ್ನೇ ಕೈಬಿಟ್ಟರು. ರಾಜ್ಯದಲ್ಲಿ ಪೈಲಟ್ ಮೇಲುಗೈ ಸಾಧಿಸುವುದು ಅವರಿಗೆ ಇಷ್ಟವಿಲ್ಲ ಎಂಬುದು ಬಹಿರಂಗ ಸತ್ಯ. ಪೈಲಟ್ ತಮ್ಮ ಬೆಂಬಲಿಗ ಶಾಸಕರ ಜೊತೆ ಬಂಡಾಯ ಸಾರಿದ ಪ್ರಹಸನವೂ ನಡೆಯಿತು. ಒಗ್ಗಟ್ಟೇ ಇಲ್ಲದ ರಾಜ್ಯ ಕಾಂಗ್ರೆಸ್‌ನ ಸ್ಥಿತಿಯನ್ನು ಅವಕಾಶವಾಗಿ ಬಳಸಿಕೊಂಡರೆ ಬಿಜೆಪಿಗೆ ಲಾಭ.

ತೆಲಂಗಾಣ (ಕ್ಷೇತ್ರಗಳು: 119)

ಕೆಸಿಆರ್
ಕೆಸಿಆರ್

ಆಡಳಿತ ಪಕ್ಷ: ಟಿಆರ್‌ಎಸ್ (ಬಿಆರ್‌ಎಸ್)

ಚುನಾವಣೆ: ಡಿಸೆಂಬರ್– ಜನವರಿ

ರಾಜ್ಯ ರಚನೆಯಾದ ಬಳಿಕ ಮೂರನೇ ವಿಧಾನಸಭಾ ಚುನಾವಣೆಗೆ ತೆಲಂಗಾಣ ಸಜ್ಜಾಗಿದೆ. 2014ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಕೆ. ಚಂದ್ರಶೇಖರ ರಾವ್ (ಕೆಸಿಆರ್) ನೇತೃತ್ವದ ತೆಲಂಗಾಣ ರಾಷ್ಟ್ರ ಸಮಿತಿ (ಈಗ ಭಾರತ ರಾಷ್ಟ್ರ ಸಮಿತಿ–ಬಿಆರ್‌ಎಸ್‌) ಪಕ್ಷ ಅಧಿಕಾರಕ್ಕೆ ಬಂದಿತ್ತು. ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಗಾಗಿ ಹೋರಾಟ ನಡೆಸಿದ್ದ ಕೆಸಿಆರ್ ಅವರ ಗೆಲುವು ಖಚಿತವಾಗಿತ್ತು. ಅವಧಿಗಿಂತ ಮೊದಲೇ ವಿಧಾನಸಭೆ ವಿಸರ್ಜಿಸಿದ ಅವರಿಗೆ, 2018ರಲ್ಲಿ ಎರಡನೇ ಅವಧಿಗೂ ಸರಾಗವಾಗಿ ಅಧಿಕಾರ ಸಿಕ್ಕಿತು. 2014ರಲ್ಲಿ 63 ಕಡೆ ಗೆದ್ದಿದ್ದ ಪಕ್ಷವು 2018ರಲ್ಲಿ ತನ್ನ ನೆಲೆಯನ್ನು 89 ಕ್ಷೇತ್ರಗಳಿಗೆ ವಿಸ್ತರಿಸಿತು. ರಾಜ್ಯದಲ್ಲಿ ಕಾಂಗ್ರೆಸ್‌ ಸ್ಥಿತಿ ಅಷ್ಟೇನೂ ಉತ್ತಮವಾಗಿಲ್ಲ. ಮೊದಲ ಚುನಾವಣೆಯಲ್ಲಿ 21 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿತ್ತು. ಅದು 2018ರಲ್ಲಿ ಚುನಾವಣೆಯಲ್ಲಿ 19ಕ್ಕೆ ಕುಸಿಯಿತು. ಆದರೆ, ಪಕ್ಷದ ಮತ ಪ್ರಮಾಣ ಶೇ 28.7ರಷ್ಟಿದೆ ಎಂಬುದು ಗಮನಾರ್ಹ. ಮೊದಲ ಚುನಾವಣೆಯಲ್ಲಿ ಶೇ 7ರಷ್ಟು ಮತಗಳೊಂದಿಗೆ 5 ಕ್ಷೇತ್ರಗಳನ್ನು ಗೆದ್ದಿದ್ದ ಬಿಜೆಪಿ ಶಾಸಕರ ಸಂಖ್ಯೆ 2018ರಲ್ಲಿ 1ಕ್ಕೆ ಕುಸಿಯಿತು. ತೆಲಂಗಾಣದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಮಹತ್ವಾಕಾಂಕ್ಷೆಯನ್ನು ಬಿಜೆಪಿ ಇಟ್ಟುಕೊಂಡಿದೆ. ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆಯಿದ್ದು, ಕೆಸಿಆರ್‌ ಅವರು ತಮ್ಮ ಪಕ್ಷವನ್ನು ರಾಷ್ಟ್ರ ಮಟ್ಟಕ್ಕೆ ವಿಸ್ತರಿಸುವ ಆಲೋಚನೆಯೂ ಇಲ್ಲಿ ಪರೀಕ್ಷೆಗೆ ಒಳಪಡಲಿದೆ.

ತ್ರಿಪುರಾ (ಕ್ಷೇತ್ರಗಳು: 60)

ಮಾಣಿಕ್ ಸಾಹ
ಮಾಣಿಕ್ ಸಾಹ

ಆಡಳಿತ ಮೈತ್ರಿಕೂಟ: ಎನ್‌ಡಿಎ

ಚುನಾವಣೆ: ಫೆಬ್ರುವರಿ‌– ಮಾರ್ಚ್

ಈಶಾನ್ಯ ರಾಜ್ಯ ತ್ರಿಪುರಾದಲ್ಲಿ ಸತತ 25 ವರ್ಷಗಳಿಂದ ಅಧಿಕಾರದಲ್ಲಿದ್ದ ಎಡಪಕ್ಷಗಳನ್ನು ಹೊರಗಟ್ಟುವಲ್ಲಿ 2018ರ ಚುನಾವಣೆಯಲ್ಲಿ ಬಿಜೆಪಿ ಸಫಲವಾಗಿತ್ತು. 60 ಕ್ಷೇತ್ರಗಳ ಪೈಕಿ ಬಿಜೆಪಿ 35 ಕಡೆ ಗೆಲುವು ಸಾಧಿಸಿತ್ತು. ಬಿಜೆಪಿಯ ಪ್ರಾದೇಶಿಕ ಮಿತ್ರಪಕ್ಷ ಹಾಗೂ ಬುಡಕಟ್ಟು ಪ್ರದೇಶಗಳ ಮೇಲೆ ಹಿಡಿತ ಹೊಂದಿರುವ ‘ಇಂಡಿಜಿನಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರಾ’ (ಐಪಿಎಫ್‌ಟಿ) 8 ಕಡೆ ಗೆದ್ದು ಸರ್ಕಾರ ರಚನೆಗೆ ನೆರವಾಗಿತ್ತು. ಕಾಂಗ್ರೆಸ್‌ಗೆ ಒಂದೂ ಸ್ಥಾನ ಗೆಲ್ಲಲು ಸಾಧ್ಯವಾಗಿರಲಿಲ್ಲ. ಈ ಐದು ವರ್ಷಗಳಲ್ಲಿ ರಾಜ್ಯದಲ್ಲಿ ಹಲವು ಬದಲಾವಣೆಗಳಾಗಿವೆ. ಈ ಬಾರಿಯ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷ (ಟಿಎಂಸಿ) ಪ್ರವರ್ಧಮಾನಕ್ಕೆ ಬಂದಿದೆ. ರಾಜ್ಯ ಸರ್ಕಾರದ ವಿರುದ್ಧ ಹೆಚ್ಚಿನ ಪ್ರತಿಭಟನೆಗಳನ್ನು ಸಂಘಟಿಸಿದ್ದು ಟಿಎಂಸಿ ಎಂಬುದು ವಿಶೇಷ. ಕಾಂಗ್ರೆಸ್ ಪಕ್ಷದ ಆರು ಮುಖಂಡರು ಇತ್ತೀಚೆಗೆ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಇದು ರಾಜ್ಯದಲ್ಲಿ ಟಿಎಂಸಿ ನೆಲೆಯನ್ನು ಬಲಗೊಳಿಸಲಿದೆ ಎಂದು ನಿರೀಕ್ಷಿಸಲಾಗಿದೆ. ಆಡಳಿತ ಪಕ್ಷದಲ್ಲೂ ದೊಡ್ಡ ಬದಲಾವಣೆಗಳಾಗಿವೆ. ಬಿಜೆಪಿ ವರಿಷ್ಠರ ಒಲವು ಕಳೆದುಕೊಂಡ ವಿಪ್ಲವ್ ದೇವ್ ಅವರು ಕಳೆದ ವರ್ಷ ರಾಜೀನಾಮೆ ನೀಡಿದ್ದರು. ಅವರ ಸ್ಥಾನಕ್ಕೆ ಮಾಣಿಕ್ ಸಹಾ ಬಂದಿದ್ದಾರೆ. ಐಪಿಎಫ್‌ಟಿ ಮೈತ್ರಿ ಈ ಬಾರಿಯೂ ಮುಂದುವರಿಯಲಿದೆ. ಐಪಿಎಫ್‌ಟಿಗೆ ಪ್ರತಿಸ್ಪರ್ಧಿಯಾಗಿ ‘ಇಂಡಿಜಿನಸ್ ಪ್ರೋಗ್ರೆಸ್ಸಿವ್‌ ರೀಜನಲ್ ಅಲಯನ್ಸ್’ ಅಥವಾ ತಿಪ್ರ ಮೊಥಾ ಎಂಬ ಪಕ್ಷ 2019ರಲ್ಲಿ ಹುಟ್ಟಿಕೊಂಡಿದೆ. ಐಪಿಎಫ್‌ಟಿ ಪಕ್ಷದ ಇಬ್ಬರು ಶಾಸಕರು ಬುಡಕಟ್ಟು ಪ್ರದೇಶಗಳ ಮೇಲೆ ಹಿಡಿತವಿರುವ ತಿಪ್ರ ಮೊಥಾ ಪಕ್ಷಕ್ಕೆ ಸೇರಿದ್ದಾರೆ. ಬಿಜೆಪಿಯನ್ನು ಕೆಳಗಿಳಿಸಲು ಜಂಟಿ ಹೋರಾಟಕ್ಕೆ ಮುಂದಾಗಿರುವ ಸಿಪಿಎಂ ಹಾಗೂ ಕಾಂಗ್ರೆಸ್ ಭಾರಿ ಸಿದ್ಧತೆ ನಡೆಸಿವೆ ಎನ್ನಲಾಗಿದೆ. ಹೀಗಾಗಿ ತ್ರಿಪುರಾದ ರಣಕಣ ರಂಗೇರಿದೆ.

ಮೇಘಾಲಯ (ಕ್ಷೇತ್ರಗಳು: 60)

ಕಾನ್ರಾಡ್ ಸಂಗ್ಮಾ
ಕಾನ್ರಾಡ್ ಸಂಗ್ಮಾ

ಆಡಳಿತ ಮೈತ್ರಿಕೂಟ: ಎನ್‌ಪಿಪಿ ಮೈತ್ರಿಕೂಟ

ಚುನಾವಣೆ : ಫೆಬ್ರುವರಿ– ಮಾರ್ಚ್

2003ರಿಂದ ಮೇಘಾಲಯದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷವನ್ನು 2018ರ ಚುನಾವಣೆಯಲ್ಲಿ ಕೆಳಗಿಳಿಸಿದ್ದು ನ್ಯಾಷನಲ್ ಪೀಪಲ್ಸ್ ಪಕ್ಷದ (ಎನ್‌ಪಿಪಿ) ಮುಖ್ಯಸ್ಥ ಕಾನ್ರಾಡ್ ಸಂಗ್ಮಾ. 21 ಕ್ಷೇತ್ರಗಳಲ್ಲಿ ಗೆದ್ದಿದ್ದ ಎನ್‌ಪಿಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಸರ್ಕಾರ ರಚನೆಗಾಗಿ ಅವರು, ಐದು ಪಕ್ಷಗಳ ಮೈತ್ರಿಕೂಟ ಕಟ್ಟಿದರು. ಈಶಾನ್ಯ ರಾಜ್ಯಗಳಲ್ಲಿ ಪಕ್ಷದ ನೆಲೆಯನ್ನು ವಿಸ್ತರಿಸುವ ಮಹತ್ವಾಕಾಂಕ್ಷೆ ಹೊಂದಿದ್ದ ಸಂಗ್ಮಾ ಅವರು ಐದು ವರ್ಷಗಳ ಅವಧಿಯಲ್ಲಿ ಏಳುಬೀಳು ಕಂಡಿದ್ದಾರೆ. ಗಡಿಯಲ್ಲಿ ಸಂಘರ್ಷ, ಹಿಂಸಾಚಾರ, ಭ್ರಷ್ಟಾಚಾರ ಹಾಗೂ ಮಿತ್ರಪಕ್ಷಗಳ ಜೊತೆಗಿನ ಸಂಘರ್ಷದ ಸಮಯದಲ್ಲೇ ಮತ್ತೊಂದು ಚುನಾವಣೆ ಎದುರಾಗಿದೆ. ಆದರೆ ಈ ಬಾರಿ ಏಕಾಂಗಿಯಾಗಿ ಸ್ಪರ್ಧಿಸುವ ಹಾಗೂ ಅಧಿಕಾರ ಹಿಡಿಯುವ ಘೋಷಣೆ ಮಾಡಿದ್ದಾರೆ. 60 ಕ್ಷೇತ್ರಗಳಲ್ಲೂ ಪಕ್ಷ ಅಭ್ಯರ್ಥಿಗಳನ್ನು ಹಾಕಲು ಮುಂದಾಗಿದೆ. ಚುನಾವಣೆಗೆ ಕೆಲವೇ ವಾರಗಳು ಬಾಕಿಯಿದ್ದಾಗ ಪಕ್ಷಾಂತರಗಳು ನಡೆದಿವೆ. ಎನ್‌ಪಿಪಿಯ ಇಬ್ಬರು ಶಾಸಕರು ಬಿಜೆಪಿಗೆ ಜಿಗಿದಿರುವುದು ಸಂಗ್ಮಾ ಅವರ ಬಲವನ್ನು ಕುಗ್ಗಿಸಿದೆ. ಆದರೆ, ಕಾಂಗ್ರೆಸ್‌ನ ಇಬ್ಬರು ಶಾಸಕರು ಇತ್ತೀಚೆಗೆ ಎನ್‌ಪಿಪಿ ಸೇರ್ಪಡೆಯಾಗಿದ್ದಾರೆ. ಮೈತ್ರಿಕೂಟದ ಕಿರಿಯ ಪಾಲುದಾರ ಪಕ್ಷ ಬಿಜೆಪಿ, ಈ ಬಾರಿ ಅಧಿಕಾರ ಹಿಡಿಯುವ ಮಾತಾಡುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಬಲ ಕುಗ್ಗಿದ್ದು, ಸಂಗ್ಮಾ ಅವರು ಮೈತ್ರಿಕೂಟದ ಪಕ್ಷಗಳ ವಿರುದ್ಧವೇ ಈ ಬಾರಿ ಸೆಣಸಬೇಕಿದೆ. ಇನ್ನರ್‌ಲೈನ್ ಪರ್ಮಿಟ್, ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರಗಳು ಈ ಬಾರಿಯೂ ಚುನಾವಣೆಯಲ್ಲಿ ಮಹತ್ವ ಪಡೆಯಲಿವೆ.

ಮಿಜೋರಾಂ (ಕ್ಷೇತ್ರಗಳು: 40)

ಜೊರಾಮ್‌ಥಾಂಗ್
ಜೊರಾಮ್‌ಥಾಂಗ್

ಆಡಳಿತ ಪಕ್ಷ: ಎಂಎನ್‌ಎಫ್‌

ಚುನಾವಣೆ: ಡಿಸೆಂಬರ್

ಮಾಜಿ ಬಂಡುಕೋರ ಹಾಗೂ ಮಿಜೊ ನ್ಯಾಷನಲ್ ಫ್ರಂಟ್‌ (ಎಂಎನ್‌ಎಫ್) ಮುಖ್ಯಸ್ಥ ಜೊರಾಮ್‌ಥಾಂಗ್ ಅವರು 2018ರ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಗಳಿಸಿ ಅಧಿಕಾರಕ್ಕೆ ಬಂದಿದ್ದರು. ಅವರು ಮುಖ್ಯಮಂತ್ರಿ ಹುದ್ದೆಗೆ ಏರಿದ್ದು ಅದು ಮೂರನೇ ಬಾರಿ. ರಾಜ್ಯದ ಮೂರು ಸ್ವಾಯತ್ತ ಜಿಲ್ಲಾ ಮಂಡಳಿಗಳ ಪೈಕಿ ಮಾರಾ ಸ್ವಾಯತ್ತ ಜಿಲ್ಲಾ ಮಂಡಳಿಗೆ ನಡೆದ ಚುನಾವಣೆಯಲ್ಲಿ 25ರ ಪೈಕಿ ಬಿಜೆಪಿ 12 ಸ್ಥಾನಗಳನ್ನು ಗೆದ್ದು, ಅತಿದೊಡ್ಡ ಪಕ್ಷ ಎನಿಸಿಕೊಂಡಿತ್ತು. ಆದರೆ ಬಿಜೆಪಿಗೆ ಅಧಿಕಾರ ನೀಡದ ಎಂಎನ್‌ಎಫ್, ರಾಜ್ಯದ ಪ್ರತಿಪಕ್ಷ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಅಲ್ಲಿ ಅಧಿಕಾರ ಹಿಡಿಯಿತು. ಈವರೆಗೆ ಮಿಜೋರಾಂನಲ್ಲಿ ಆಡಳಿತ ನಡೆಸಲು ಬಿಜೆಪಿಗೆ ಸಾಧ್ಯವಾಗಿಲ್ಲ. ಆದರೆ ಸ್ವಾಯತ್ತ ಮಂಡಳಿ ಚುನಾವಣೆಯಲ್ಲಿ ಬಿಜೆಪಿ ಗೆಲುವು, ವಿಧಾನಸಭೆಯಲ್ಲಿ ಅಧಿಕಾರ ಹಿಡಿಯುವ ಆಸೆ ಮೂಡಿಸಿದೆ. ಬಿಜೆಪಿ ಹೊರತುಪಡಿಸಿ ಸರ್ಕಾರ ರಚನೆ ಸಾಧ್ಯವಿಲ್ಲ ಎಂದು ಮುಖಂಡರು ಹೇಳುತ್ತಾರೆ. ಕ್ರೈಸ್ತ ಸಮುದಾಯದ ಪ್ರಾಬಲ್ಯವಿರುವ ರಾಜ್ಯದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಗೆ ಭಾರಿ ವಿರೋಧವಿದೆ. 25 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ನಿರ್ಧರಿಸಿರುವ ಎಎಪಿ, ರಾಜ್ಯದಲ್ಲಿ ನೆಲೆ ಕಾಣಲು ಹವಣಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT